ದಸರಾ ಮಹೋತ್ಸವ: ರೈತರು, ಮಹಿಳೆಯರಿಗೆ ಸ್ಪರ್ಧೆ
Update: 2017-09-23 17:11 GMT
ಮೈಸೂರು, ಸೆ.23: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಶನಿವಾರ ರೈತ ದಸರಾದಲ್ಲಿ ರೈತರಿಗೆ ವಿವಿಧ ಸ್ಪರ್ಧೆಗಳನ್ನ ಏರ್ಪಡಿಸಲಾಗಿತ್ತು.
ನಗರದ ಜೆ.ಕೆ ಮೈದಾನದಲ್ಲಿ ರೈತರಿಗೆ 50 ಕೆ.ಜಿ.ತೂಕದ ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ, ತುಂಬಿದ ಗೋಣಿಚೀಲ ಎತ್ತುವುದು ಹಾಗೂ ಮಹಿಳೆಯರಿಗೆ ತಲೆಯ ಮೇಲೆ ನೀರು ತುಂಬಿದ ಬಿಂದಿಗೆ ಹೊತ್ತು ಓಡುವು, ಲೆಮನ್ ಅಂಡ್ ಸ್ಪೂನ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಈ ಎಲ್ಲಾ ಸ್ಪರ್ಧೆಗಳಲ್ಲಿ ರೈತರು ಭಾಗವಹಿಸಿದ್ದು, 50 ಕೆ.ಜಿ ತೂಕದ ಗೊಬ್ಬರದ ಮೂಟ್ಟೆಯನ್ನ ಹೊತ್ತು ಓಡಲು ಸಾಕಷ್ಟು ಕಸರತ್ತುಗಳನ್ನ ನಡೆಸಿದರು. ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆಯಲ್ಲಿ ಟಿ.ನರಸೀಪುರ ತಾಲೂಕು ಡಣಯಾನಪುರದ ಮನೋಜ್ ಕುಮಾರ್ ಪ್ರಥಮ ಸ್ಥಾನ ಪಡೆದರು.
ಮಹಿಳೆಯರು ತಲೆಯ ಮೇಲೆ ನೀರಿನ ಬಿಂದಿಗೆ ಹೊತ್ತು ಓಡಿದರೆ, ಇನ್ನೂ ಕೆಲವು ಮಹಿಳೆಯರು ಲೆಮನ್ ಅಂಡ್ ಸ್ಪೂನ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.