ಹಾಸ್ಯ ಚಟಾಕಿ ಮೂಲಕವೇ ಕವಿಗಳ ಪರಿಸ್ಥಿತಿ ವಿಶ್ಲೇಸಿದ ಡಾ.ಸಿದ್ದಲಿಂಗಯ್ಯ
ಮೈಸೂರು, ಸೆ.24: ಒಬ್ಬನ ಹಿಂದೆ ಇನ್ನೊಬ್ಬ ಓಡುತ್ತಿದ್ದನು. ಹಿಂದಿದ್ದವನನ್ನು ತಡೆದ ಮತ್ತೊಬ್ಬ, ಹೀಗ್ಯಾಕೆ ಓಡುತ್ತಿದ್ದೀರಿ ಎಂದನಂತೆ. ಆದಕ್ಕೆ ಆತ, ಮುಂದೆ ಓಡುತ್ತಿದ್ದಾನಲ್ಲ ಅವನು ಮತ್ತು ನಾನು ಇಬ್ಬರೂ ಕವಿಗಳು. ಆ ಮೊದಲಿನವನು ತನ್ನ ಕವಿತೆಯನ್ನು ನನ್ನ ಎದುರು ವಾಚನ ಮಾಡಿದ್ದಾನೆ. ಈಗ ನಾನು ಕಾವ್ಯ ಓದುತ್ತೇನೆ ಎಂದರೆ ಕೇಳಿಸಿಕೊಳ್ಳದೆ ಓಡುತ್ತಿದ್ದಾನೆ. ಅವನನ್ನು ಹಿಡಿದು ನನ್ನ ಕವಿತೆ ಓದುವುದಕ್ಕಾಗಿ ಅವನ ಹಿಂದೆ ಬಿದ್ದಿದ್ದೇನೆ ಎಂದನು ಎಂದು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ವಿಶ್ಲೇಸಿದರು.
ಕಾವ್ಯಗೋಷ್ಠಿ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಹಲವು ಹಾಸ್ಯ ಚಟಾಕಿಗಳ ಮೂಲಕವೇ ಕಾವ್ಯಗಳು, ಕವಿಗಳ ಪರಿಸ್ಥಿತಿಯನ್ನು ವಿಶ್ಲೇಷಿಸಿ ಮಾತನಾಡಿದ ಅವರು, ಕೇಳುಗರಿಲ್ಲದೆ ಕವಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಫಿ, ತಿಂಡಿ ಕೊಟ್ಟು ಕವಿತೆ ಕೇಳಿಸುವಂತಾಗಿದೆ. ಆದರೆ, ಈ ಕವಿಗೋಷ್ಠಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶ್ರೋತೃಗಳು ಸೇರಿದ್ದು, ಆಯೋಜಕರು ಅಭಿನಂದನೀಯರು ಎಂದರು.
ಕನ್ನಡ ಕೈ ಬಿಟ್ಟ ದೇವರು! ನಾನು ಸಂಶೋಧನೆ ಮಾಡುತ್ತಿದ್ದಾಗ, ಹಳ್ಳಿಗಳಲ್ಲಿ ದೇವರು ಮೈಮೇಲೆ ಬರುವ ವಿಷಯ ಆಯ್ಕೆ ಮಾಡಿಕೊಂಡಿದ್ದೆ. ಗ್ರಾಮವೊಂದರಲ್ಲಿ ಒಬ್ಬರಿಗೆ ದೇವರು ಮೈ ತುಂಬಿತ್ತು. ಆಗ ದೇವರು ಇಂಗ್ಲಿಷ್ ಪದಗಳನ್ನು ಹೆಚ್ಚು ಬಳಸುತ್ತಿದ್ದುದು ನನಗೆ ಆಶ್ಚರ್ಯ ತಂದಿತ್ತು. ಏನ್ ನಿನ್ ಪ್ರಾಬ್ಲಮ್, ಡಿಫಿಕಲ್ಟೀಸ್, ರ್ಯಾಸ್ಕಲ್ ಇಂತಹ ಪದಗಳನ್ನು ಉಚ್ಛರಿಸುತ್ತಿತ್ತು. ಅದನ್ನು ನನ್ನ ಮಾರ್ಗದರ್ಶಕರಾಗಿದ್ದ ರಾಷ್ಟ್ರಕವಿ ಜಿ.ಎಸ್.ಸಿದ್ದಲಿಂಗಯ್ಯ ಅವರ ಗಮನಕ್ಕೆ ತಂದೆ. ಅದಕ್ಕೆ ಅವರು ಅಯ್ಯೋ ಕನ್ನಡವನ್ನು ದೇವರು ಕೈಬಿಟ್ಟಿತೆ ಎಂಬುದಾಗಿ ನೊಂದುಕೊಂಡರು ಎಂದು ಸಿದ್ದಲಿಂಗಯ್ಯ ಸ್ಮರಿಸಿದರು.