ಮೈಸೂರು ದಸರಾ: ಚಿತ್ರಮಂದಿರದಲ್ಲಿ “ರಾಜಕುಮಾರ” ಚಿತ್ರ ವೀಕ್ಷಿಸಿದ ಮಾವುತ, ಕಾವಡಿಗರ ಕುಟುಂಬಸ್ಥರು

Update: 2017-09-24 17:41 GMT

ಮೈಸೂರು,ಸೆ.24: ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಮಾವುತರು ಹಾಗೂ ಕಾವಾಡಿಗರ ಕುಟುಂಬದವರಿಗೆ  ಇದೇ ಮೊದಲ ಬಾರಿಗೆ ಡಿ.ಆರ್.ಸಿ. ಚಿತ್ರಮಂದಿರದಲ್ಲಿ ಚಲನಚಿತ್ರವನ್ನು ವೀಕ್ಷಿಸಲು ಆಯೋಜನೆ ಮಾಡಲಾಗಿತ್ತು.

ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಇದೇ ಮೋದಲ ಬಾರಿಗೆ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಮಾವುತರು ಮತ್ತು ಕಾವಾಡಿಗಳ ಕುಟುಂಬಸ್ಥರಿಗೆ ಡಿಆರ್ ಸಿ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ್ ಚಲನಚಿತ್ರವನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಿದ್ದರು. 

ಡಿಆರ್ ಸಿ ಚಿತ್ರಮಂದಿರದಲ್ಲಿ ಚಲನಚಿತ್ರ ವೀಕ್ಷಿಸಿದ ಅಭಿಮನ್ಯು ಆನೆಯ ಮಾವುತ ವಸಂತ ವ್ಯಕ್ತಪಡಿಸಿ ಮಾತನಾಡಿ, ನಾವು ಹಾಡಿಗಳ ಜನ. ಟೆಂಟ್ ಗಳಲ್ಲಿ  ಚಿತ್ರ ನೋಡುತ್ತಿದ್ದೆವು. ಇದೇ ಮೊದಲಬಾರಿಗೆ ಇಷ್ಟು ದೊಡ್ಡ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುತ್ತಿದ್ದೇವೆ. ಖುಷಿಯಾಗುತ್ತಿದೆ. ಅದರಲ್ಲೂ  ರಾಜಕುಮಾರ ಮತ್ತವರ ಮಕ್ಕಳು ನಟಿಸಿದ ಚಿತ್ರಗಳೆಂದರೆ ಇಷ್ಟ  ಈ ಅವಕಾಶವನ್ನು ಕಲ್ಪಿಸಿದ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.

ರವಿವಾರ ಮಧ್ಯಾಹ್ನ 4ಕ್ಕೆ ಆಪರೇಷನ್ ಅಲಮೇಲಮ್ಮ ಚಿತ್ರವನ್ನೂ ಅವರಿಗೆ ತೋರಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು, ವಾರ್ತಾಧಿಕಾರಿ ನಿರ್ಮಲ, ಅರಣ್ಯ ಇಲಾಖೆ ನಿರೀಕ್ಷಕ ಆಚಿಟನಿ, ಚಲನ ಚಿತ್ರೋತ್ಸವ ಸಮಿತಿ ಉಪಾಧ್ಯಕ್ಷ ರಾಮಚಂದ್ರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News