ಮೈಸೂರು ದಸರಾ: ಟ್ರಿಣ್-ಟ್ರಿಣ್ ಸೈಕಲ್‍ನಲ್ಲಿ ಪಾರಂಪರಿಕ ಕಟ್ಟಡಗಳ ವೀಕ್ಷಣೆಗೆ ಚಾಲನೆ
ಮೈಸೂರು, ಸೆ.25: ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ರಂಗಾಚಾರ್ಲು ಪುರಭವನ ಆವರಣದಲ್ಲಿ ಟ್ರಿಣ್-ಟ್ರಿಣ್ ಸೈಕಲ್ ಗಳೊಡನೆ, ಪಾರಂಪರಿಕ ಕಟ್ಟಡಗಳ ದರ್ಶನಕ್ಕೆ ಚಾಲನೆ ನೀಡಲಾಯಿತು.
ದಸರಾ ಮಹೋತ್ಸವದ ಪ್ರಯುಕ್ತ ಪುರಾತತ್ವ, ಪರಂಪರೆ ಮತ್ತು ಪರಂಪರೆ ಇಲಾಖೆಯ ಯಶಸ್ವಿ ಕಾರ್ಯಕ್ರಮ ಪಾರಂಪರಿಕ ನಡಿಗೆ ಮೂರನೇ ದಿನ ಸೈಕಲ್ ಮೇಲೆ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು.
ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಡಿ. ರಂದೀಪ್ ಹಾಗೂ ಮಹಾಪೌರ ಎಂ.ಜೆ.ರವಿಕುಮಾರ್ ಅವರು ಸೋಮವಾರ ಬೆಳಗ್ಗೆ ರಂಗಾಚಾರ್ಲು ಪುರಭವನದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಬಳಿಕ ದಸರಾ ವಿಶೇಷಾಧಿಕಾರಿ ಡಿ.ರಂದೀಪ್ ಮಾತನಾಡಿ, ದಸರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ, ಇವತ್ತು ಮಳೆ ಇದ್ದರೂ ಆಸಕ್ತರು ಬಂದಿದ್ದಾರೆ. ಪಾರಂಪರಿಕ ಕಟ್ಟಡಗಳ ಮಾಹಿತಿಯನ್ನು ಸೈಕಲ್‍ನಲ್ಲಿ ಸವಾರಿಮಾಡಿ ನೋಡುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಖುದ್ದು ಸೈಕಲ್‍ನಲ್ಲಿ ಪ್ರಯಾಣಿಸಿ, ತಮ್ಮ ಕಚೇರಿಯ ಮಹತ್ವ ಪಡೆದುಕೊಂಡರು. ಅಲ್ಲಿನ ಕಂಚಿನ ಗೋರ್ಡನ್ ಪ್ರತಿಮೆಯ ಬಳಿಪೋಟೊ ತೆಗೆಸಿಕೊಂಡರು. ಜಿಲ್ಲಾಧಿಕಾರಿಗಳಿಗೆ ಮಹಾಪೌರರಾದ ಎಂ.ಜೆ. ರವಿಕುಮಾರ್ ಅವರು ಸಾತ್ ನೀಡಿದರು.
ನಗರದ ಸುಮಾರು 70ಕ್ಕೂ ಅಧಿಕ ಮಂದಿ ವಯಸ್ಸಿನ ಹಿರಿಯರು ಟ್ರಿಣ್ ಟ್ರಿಣ್ ಸೈಕಲ್ ಸವಾರಿಯಲ್ಲಿ ಭಾಗವಹಿಸಿದ್ದರು. ಸವಾರಿ ದೊಡ್ಡಗಡಿಯಾರ, ಚಾಮರಾಜ ವೃತ್ತ, ಅರಮನೆ, ಕೆ.ಆರ್ ವೃತ್ತ, ಜಗನ್ಮೋಹನ ಅರಮನೆ , ಜೂನಿಯರ್ ಮಹಾರಾಣಿ ಕಾಲೇಜು, ನಿರಂಜನ ಆಶ್ರಮ, ಪದ್ಮಾಲಯ, ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಒರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಕ್ರಾಫರ್ಡ್ ಹಾಲ್, ಜಿಲ್ಲಾಧಿಕಾರಿ ಕಚೇರಿ ಮೂಲಕ ಸಾಗಿ ಬಂತು. ಸೈಕಲ್ ಸವಾರಿಯಲ್ಲಿ 88 ವರ್ಷದ ಎನ್.ಆರ್.ಮೊಹಲ್ಲಾದ ಅಂಚೆ ಇಲಾಖೆಯ ಮಾಜಿ ನೌಕರ ಸೋಸಲೆ ವೀರಯ್ಯ ಅವರು ಹಾಗೂ 11 ವರ್ಷದ 6 ನೆ ತರಗತಿಯ ಜೆಎಸ್ ಎಸ್ ಬಾಲಜಗತ್ ಶಾಲೆಯ ಅನ್ನಪೂರ್ಣೇಶ್ವರಿ ಅವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ತಜ್ಞರಾದ ಎನ್.ಎಸ್. ರಂಗರಾಜು ಹಾಗೂ ಈಚನೂರು ಕುಮಾರ್ ಅವರು ಮಾಹಿತಿ ನೀಡಿದರು. ಇಲಾಖೆಯ ಉಪನಿರ್ದೆಶಕ ಡಾ.ಗವಿಸಿದ್ದಯ್ಯ, ಹಾಗೂ ಪುರಾತತ್ವ ತಜ್ಞ ಎನ್.ಎಲ್. ಗೌಡ ಮತ್ತಿತರರಿದ್ದರು.