ದಸರಾ ಕವಿಗೋಷ್ಠಿ: ತಮ್ಮೊಳಗಿನ ನೋವುಗಳಿಗೆ ಅಕ್ಷರ ರೂಪ ನೀಡಿದ ವಿಶಿಷ್ಟರು

Update: 2017-09-26 14:37 GMT

ಮೈಸೂರು,ಸೆ.26: ಅಲ್ಲಿ ಗಮನಾರ್ಹ ಪದಗಳ ಪ್ರಾಸ, ಲಾಸ್ಯವಿರಲಿಲ್ಲ. ಶಬ್ದಗಳ ಲಾಲಿತ್ಯವಿರಲಿಲ್ಲ. ಆದರೆ, ಭಾವನೆಗಳ ಮಹಾಪೂರ ಹರಿದಿತ್ತು. ತಮ್ಮ ಸಮುದಾಯಗಳನ್ನು ಅಲಕ್ಷಿಸಿದ ಸಮಾಜದ ಎದೆಗೆ ನಾಟುವಂತೆ ಪದಪುಂಜಗಳ ತೀಕ್ಷ್ಣ ಶರಮಾಲೆಯಂತಹ ಕವನಗಳನ್ನು ಒಬ್ಬರಾದ ಮೇಲೊಬ್ಬರು ನಿರಂತರವಾಗಿ ಹರಿಯಬಿಟ್ಟರು. 

ಶ್ರವಣ ದೋಷ ಇರುವ ಬಾಲಕವಿಯೊಬ್ಬ `ಕೋಟಿ ಸೂರ್ಯರು ಉರಿವರು ನ್ನೊಳಗೆ ಯಾರಿಗೂ ಆರಿಸಲಾಗದ ದೀಪ ನಾನು' ಎಂದಿದ್ದು ಅದಕ್ಕೆ ನಿದರ್ಶನ. 

ಅವರು ನೊಂದವರು, ದುರುಳ ಸಮಾಜದ ಅಟ್ಟಹಾಸದಲ್ಲಿ ಬದಕು ಕಳೆದುಕೊಂಡು ನರಳಿದ ಸಮುದಾಯಗಳವರು. ಅವರೆಂದರೆ ದಮನಿತರು, ಅಸಹಾಯಕರು, ವಿಶೇಷ ಚೇತನರು, ಲೈಂಗಿಕ ಶೋಷಿತರು, ತೃತೀಯ ಲಿಂಗಿಗಳು, ನೊಂದು ಇತರೆಡೆ ಆಶ್ರಯ ಪಡೆದಿರುವವರು.

ನಾಡಹಬ್ಬ ದಸರಾ ಮಹೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಮ್ಮೆದೆಯೊಳಗಿನ ನೋವುಗಳಿಗೆ ಅಕ್ಷರ ರೂಪ ನೀಡಿ, ಸಾರ್ವಜನಿಕರೆದುರು ತೆರೆದಿಟ್ಟರು. ಹೌದು. ನಾಡಹಬ್ಬ ದಸರಾ ಕವಿಗೋಷ್ಠಿ ಉಪ ಸಮಿತಿ ವಯಿತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ಕವಿಗೋಷ್ಠಿಯ ಅಂಗವಾಗಿ ಮೂರನೆ ದಿನವಾದ ಮಂಗಳವಾರ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆದ ವಿಶಿಷ್ಟ ಕವಿಗೋಷ್ಠಿಯಲ್ಲಿ ಈ ಮೇಲಿನ ಸಮುದಾಯಗಳ ಎಳೆಯರು, ಹಿರಿಯ ನಾಗರಿಕ ಜೀವಗಳು ಸ್ವರಚಿತ ಕವನಗಳನ್ನು ಓದಿ ಅಚ್ಚರಿ ಮೂಡಿಸುವ ಜೊತೆಗೆ ಕ್ರೂರ ಸಮಾಜಕ್ಕೊಂದು ಎಚ್ಚರಿಕೆಯನ್ನು ರವಾನಿಸಿದರು.

ನಗರದ ಸರ್ಕಾರಿ ಕಿವುಡ ಮಕ್ಕಳ ಶಾಲೆ 9ನೆ ತರಗತಿಯ ಶರಶ್ಚಂದ್ರ 'ಅನಂತ ನಗು' ಕವನವನ್ನು ಸಂಜ್ಞೆ ಮೂಲಕ ವಾಚಿಸಿದ. ಅದನ್ನು ಅವನೊಟ್ಟಿಗೆ ಚನ್ನೇಶ್ ಎಂಬವರು ಕೇಳುಗರಿಗೆ ಅರ್ಥೈಸಿದರು. ಆ ಕವಿಯು, ಕೋಟಿ ಸೂರ್ಯರು ಉರಿವರು ನನ್ನೊಳಗೆ, ಜಾಗವಿಲ್ಲ ಇಲ್ಲಿ ಕತ್ತಲೆಯ ಆಗಮನಕ್ಕೆ ಯಾರಿಗೂ ಆರಿಸಲಾಗದ ದೀಪ ನಾನು ಎಂದಿದ್ದು ಅರ್ಥಗರ್ಭಿತವಾಗಿತ್ತು. 

ದುರ್ಗಾರಾಣಿ ಎಂಬ ನೊಂದ ಮಹಿಳೆ, ಹುಟ್ಟದಿರು ಮಗುವೇ ಈ ಜಗದಲಿ, ಜಾತಿ ಮತ ಎಂಬ ಧೂಳಿನಲಿ, ದೇಶದ ಹಿತ ಬಯಸಿದರೆ ಭಯೋತ್ಪಾದಕನೆಂದು ಬಲಿಕೊಟ್ಟಾರು ಎಂದು ತಮ್ಮ ಕವನದ ಸಾಲುಗಳ ಧರ್ಮಭೀರುಗಳಿಂದ ಉಂಟಾಗಿರಬಹುದಾದ ನೋವನ್ನು ಬಿಚ್ಚಿಟ್ಟರು. 

ಗೌರಮ್ಮ ಅವರು, ನಾನು ರಾತ್ರಿ ಮಲಗಿದಾಗ ಆಗಾಗ ಕದ್ದುಬಂದು ಮುತ್ತುಕೊಡುತ್ತಿದ್ದಳು ನನ್ನ ನಲ್ಲೆ, ಹಿಡಿದು ನೋಡಿದರೆ ಅದು ಸೊಳ್ಳೆ ಎನ್ನುತ್ತಾ ಗಂಭೀರವಾಗಿದ್ದ ವೇದಿಕೆಗೆ ಒಂದಿಷ್ಟು ನಗುವಿನ ಸಿಂಚನ ಮಾಡಿದರು.

ರಾಜ್ಯಶಾಸ್ತ್ರ ಉಪನ್ಯಾಸಕ ಕೃಷ್ಣ ಹೊಂಬಾಳೆ ಅವರು, ಕ್ಷಣಕ್ಷಣವೂ ವಿಕಲತೆಯ ನೋವಿನಲಿ  ನಾವಿರಲು, ಸಕಲತೆಯ ಸೊಕ್ಕಿನಲಿ ನೀವಿದ್ದೀರಿ ಎಂದು ಕಿಡಿಕಾರಿದರು.

ದಸರಾ ಸ್ವಚ್ಛವಾಗಿರಲಿ: ಸಿ.ಲತಾ ಅವರು, ಹಿರಿಯರಲಿ ಗೌರವ ಇರಲಿ, ಕಿರಿಯರಲಿ ಪ್ರೀತಿ ಇರಲಿ, ನಾಡಹಬ್ಬ ದಸರಾದಲ್ಲಿ ಸ್ವಚ್ಛತೆ ಇರಲಿ ಎಂದರು.
ಕಣ್ಣಿನಲಿ ಕಣ್ಣನಿಟ್ಟು ನೋಡಬಾರದೆ? ನಿಮ್ಮ ಹಾಗೆ ನಾವು ಮನುಜರಲ್ಲವೇ ಎಂದು ತೃತೀಯ ಲಿಂಗಿ ಮೈಸೂರಿನ ಪ್ರಣತಿ ಪ್ರಕಾಶ್ ಪ್ರಶ್ನಿಸಿದರೆ, ಅದೇ ಸಮುದಾಯದ ಶಿಲೋಕ್ ಮುಕ್ಕಾಟಿ ಅವರು, ಚಿಕ್ಕವಳಿದ್ದಾಗ ಅತ್ಯಾಚಾರದ ಮಳೆ ಸುರಿಯಿತು, ಆಗ ಮುಚ್ಚಿದ ಬಾಯಿ ಇಂದಿಗೂ ತೆರೆಯಲಿಲ್ಲ. ಹೆಣ್ತನದ ಬೆಂಕಿ ಉರಿಯುತ್ತಿದೆ ಎದೆಯಲ್ಲಿ, ಯಾವ ತಪ್ಪು ಮಾಡದಿದ್ದರೂ ಸಾಯಬೇಕು ನಾವಿಲ್ಲಿ ಎಂದು ಭಾರವಾದ ಧ್ವನಿಯಲ್ಲಿ ಕವನ ವಾಚಿಸಿದರು.

ಸಹನ ಅವರು ತಮ್ಮ ಕವನವೊಂದರ ಸಾಲಿನಲ್ಲಿ ದೇವರು ಹೃದಯ ಕೊಟ್ಟ, ಆದರೆ ತಂದೆ ತಾಯಿ ದೂರ ಇಟ್ಟ ಎಂದು ಹಲುಬಿದರು.

ಇದಕ್ಕೂ ಮುಂಚೆ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 340ನೆ ರ್ಯಾಂಕ್ ಗಳಿಸಿರುವ ಕೆಂಪ ಹೊನ್ನಯ್ಯ ಅವರು ವಿಶಿಷ್ಟ ಕವಿಗೋಷ್ಠಿಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯೆ ಡಾ.ಜಯಮಾಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಿ,ರಂದೀಪ್, ಸಾಹಿತಿ ಕೆ.ನೀಲಾ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ದಸರಾ ಕವಿಗೋಷ್ಠಿ ಉಪ ಸಮಿತಿ ಅಧ್ಯಕ್ಷೆ ಡಾ.ರತ್ನ ಅರಸ್, ಉಪಾಧ್ಯಕ್ಷ ಪಿ.ಪ್ರಸನ್ನ, ಉಪ ವಿಶೇಷಾಧಿಕಾರಿ ಡಾ.ಬಿ.ಕೆ.ಎಸ್.ವರ್ಧನ್, ಕಾರ್ಯಾಧ್ಯಕ್ಷೆ ಡಾ.ಎನ್.ಕೆ.ಲೋಲಾಕ್ಷಿ, ಕಾರ್ಯದರ್ಶಿ ಬಿ.ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News