ದಸರಾ ಆಹಾರ ಮೇಳ: ಹೋಳಿಗೆ ತಯಾರಿಸಿದ ಮಹಿಳೆಯರು, ಕಡ್ಲೆಕಾಯಿ ತಿಂದು ಸಂಭ್ರಮಿಸಿದ ಹಿರಿಯ ನಾಗರಿಕರು
ಮೈಸೂರು,ಸೆ.27: ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ದಸರಾ ಆಹಾರ ಮೇಳದ ಸ್ಪರ್ಧೆಗಳು ಜರಗಿದವು.
ದಸರಾ ಮಹೋತ್ಸವದ ಅಂಗವಾಗಿ ಆಹಾರ ಉಪ ಸಮಿತಿಯಿಂದ ಬುಧವಾರ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಸ್ತ್ರೀಶಕ್ತಿ ಸಂಘಟನೆಗಳು, ವಿವಿಧ ಮಹಿಳಾ ಸಂಘಗಳಿಗಾಗಿ ಆಯೋಜಿಸಿದ್ದ ಹೋಳಿಗೆ ತಯಾರು ಮಾಡುವ ಸ್ಪರ್ಧೆಯಲ್ಲಿ ಮಹಿಳೆಯರು ತಯಾರಿಸಿದ ಹೋಳಿಗೆಯು ಸುರಿಯುವ ಮಳೆಗೆ ಘಮಘಮಿಸಿ ನೆರೆದಿದ್ದವರ ಬಾಯಲ್ಲಿ ನೀರೂರಿಸುವಂತೆ ಮಾಡಿತು.
ವಿವಿಧ ಮಹಿಳಾ ಸಂಘಗಳ ಏಳು ತಂಡಗಳು ಭಾಗವಹಿಸಿದ್ದು, ಪ್ರತೀ ತಂಡದಲ್ಲಿ ತಲಾ ಇಬ್ಬರು ಮಹಿಳೆಯರಿದ್ದರು. ಒಬ್ಬರು ಹೋಳಿಗೆ ತಯಾರು ಮಾಡಸಲು ಸಿದ್ಧತೆ ನಡೆಸಿದರೆ ಮತ್ತೊಬ್ಬರು ತಯಾರು ಮಾಡುವ ಮೂಲಕ ತಮ್ಮ ಟಾಸ್ಕ್ ಪೂರ್ಣಗೊಳಿಸಿದರು.
ರುಚಿ, ಶುಚಿ, ತಯಾರಿಸಿದ ವಿಧಾನ, ಬಳಸಿದ ವಸ್ತುಗಳ ಆಧಾರದ ಮೇಲೆ ತೀರ್ಪುಗಾರರು ಬಿಇಎಂಎಲ್ ಲೇಡಿಸ್ ಕ್ಲಬ್‍ನ ಮಹಿಳೆಯರು ಪ್ರಥಮ ಬಹುಮಾನ 1500 ರೂ. ತಮ್ಮದಾಗಿಸಿಕೊಂಡರು. ಶಾರದಾದೇವಿ ಮಹಿಳಾ ಸಮಾಜದ ಮಹಿಳೆಯರು ಸಾವಿರ ರೂ. ದ್ವಿತೀಯ ಹಾಗೂ ಜೈನ್ ಮಿಲನ್ ತಂಡ ತೃತೀಯ 750 ರೂ. ಪಡೆದುಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ತಂಡಗಳಿಗೂ ಪ್ರಶಂಸಾ ಪತ್ರ ವಿತರಿಸಲಾಯಿತು.
ಕಡ್ಲೆಕಾಯಿ ತಿಂದು ಬೀಗಿದ ಹಿರಿಯರು: ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ್ದ ಕಡ್ಲೆಕಾಯಿ ತಿನ್ನುವ ಸ್ಪರ್ಧೆಯಲ್ಲಿ ಐವರು ಪುರುಷರು, ಐವರು ಮಹಿಳೆಯರು ಸೇರಿ ಒಟ್ಟು ಹತ್ತು ಜನ ಲವಲವಿಕೆಯಿಂದ ಭಾಗವಹಿಸಿ ತಮ್ಮ ಜೀರ್ಣಶಕ್ತಿಯ ಸಾಮರ್ಥ್ಯ ತೋರಿದರು.
ತಮ್ಮ ಮುಂದಿಟ್ಟ ಕಡ್ಲೆಕಾಯಿಯನ್ನು ಬಿಡಿಸಿ ಕಾಳು ತಿಂದು ಸಿಪ್ಪೆಯನ್ನು ಮತ್ತೊಂದು ಪ್ಲೇಟ್‍ನಲ್ಲಿ ಹಾಕುವ ಮೂಲಕ ಕಿರಿಯರಿಗೆ ಕಡ್ಲೆಕಾಯಿ ತಿನ್ನುವುದನ್ನು ಹೇಳಿಕೊಟ್ಟರು. ಎರಡು ಕಪ್‍ಗಳಲ್ಲಿ ಅಳೆದು ಸುರಿದ ಕಡ್ಲೆಕಾಯಿಯನ್ನು 10 ನಿಮಿಷದಲ್ಲಿ ತಿಂದು ಮುಗಿಸಿದ ರಾಮಕೃಷ್ಣನಗರ ಸೋಮಣ್ಣ ಪ್ರಥಮ ಸ್ಥಾನ ಪಡೆದರು.
ಕಡ್ಲೆಕಾಯಿ ಎಂದರೆ ನನಗೆ ಇಷ್ಟ. ಆಹಾರ ಮೇಳ ನೋಡಲು ಬಂದಿದ್ದ ನಾನು, ಚಾಟ್ಸ್ ಅನ್ನು ತಿಂತಿದ್ದೆ. ಆದರೆ ಇಲ್ಲಿ ಕಡ್ಲೆಕಾಯಿ ತಿನ್ನುವ ಸ್ಪರ್ಧೆ ಇದೆ ಎಂದು ತಿಳಿದು ಆಸೆಯಿಂದ ವೇದಿಕೆ ಬಳಿ ಬಂದು ಸ್ಪರ್ಧೆಯಲ್ಲಿ ಭಾಗವಹಿಸಿದೆ. ಇನ್ನು ಎರಡು ಕಪ್ ನೀಡಿದ್ದರೂ ತಿಂದು ಮುಗಿಸುತ್ತಿದ್ದೆ ಎದು ವಿಜೇತ ಸೋಮಣ್ಣ, ತಮ್ಮ ಸಂತಸ ಹಂಚಿಕೊಂಡರು.
ಮಹಿಳೆಯರು ತಿನ್ನುವುದರಲ್ಲಿ ತಾವೇನು ಕಡಿಮೆ ಇಲ್ಲ ಎನ್ನುವಂತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಶೋಭಾರಾಣಿ ದ್ವಿತೀಯ, ಭಾಗೀರಥಿ ತೃತೀಯ ಸ್ಥಾನ ಪಡೆದುಕೊಂಡರು. ಸ್ಪರ್ಧೆಯ ಅಂತಿಮ ಘಟ್ಟ ತಲುಪಲಾಗದ ಮೂವರು ಸ್ಪರ್ಧೆಯಿಂದ ಹಿಂದೆ ಸರಿದರು.