ಪ್ರವಾದಿ ಪತ್ನಿ ಆಯಿಷಾ ಪ್ರಬುದ್ಧ ವಧುವಾಗಿದ್ದರು - ಬಾಲಿಕಾ ವಧುವಾಗಿರಲಿಲ್ಲ.

Update: 2024-05-27 07:38 GMT

ಅಬೂಬಕರ್ (ರ)ರ ಮಗಳು ಹಜ್ರತ್ ಆಯಿಷಾ ಸಿದ್ದೀಖಾ  (ರ) ಮುಸ್ಲಿಂ ಸಮಾಜದಲ್ಲಿ  ಅಪಾರ ಗೌರವಕ್ಕೆ ಪಾತ್ರರಾಗಿರುವ ಓರ್ವ ಮಹಾನ್ ಮಹಿಳೆ. ಅವರು ಪ್ರವಾದಿ ಮುಹಮ್ಮದ್ (ಸ) ರ ಪತ್ನಿಯಾಗಿದ್ದರು ಮತ್ತು ಪ್ರವಾದಿಯ ಅತ್ಯಂತ ಆಪ್ತ ಸಂಗಾತಿಯಾಗಿದ್ದ ಹಜ್ರತ್ ಅಬೂಬಕರ್ (ರ) ರ ಪುತ್ರಿಯಾಗಿದ್ದರು. ಮುಸ್ಲಿಮರು ಅವರನ್ನು ಆದರಪೂರ್ವಕವಾಗಿ   'ಉಮ್ಮುಲ್ ಮೂಮಿನೀನ್' (ಧರ್ಮ ವಿಶ್ವಾಸಿಗಳ ಮಾತೆ) ಎಂದೂ 'ಸಯ್ಯಿದಾ' (ನಾಯಕಿ) ಅಥವಾ ಸಿದ್ದೀಖಾ ಎಂದೂ ಕರೆಯುತ್ತಾರೆ. ಅವರ ಪ್ರಸ್ತಾಪ ಬಂದಾಗಲೆಲ್ಲ 'ರಝಿ ಯಲ್ಲಾಹು ಅನ್ಹಾ' (ಅಲ್ಲಾಹನು ಅವರನ್ನು ಮೆಚ್ಚಿಕೊಂಡನು ಅಥವಾ ಅವರು ಅಲ್ಲಾಹನ ಮೆಚ್ಚುಗೆಗೆ ಪಾತ್ರರಾದರು) ಎನ್ನುತ್ತಾರೆ. ಅವರ ಹೆಸರನ್ನು ಬರೆಯುವಾಗಲೂ ಇದರ ಸಂಕ್ಷೇಪವಾಗಿ 'ರ' ಎಂಬಕ್ಷರವನ್ನು ಹೆಸರಿನ ಬೆನ್ನಿಗೆ ಕಂಸಗಳೊಳಗೆ ಬರೆಯುತ್ತಾರೆ. ಇದು ಮುಸ್ಲಿಮ್  ಸಮಾಜದಲ್ಲಿ ಹಿಂದಿನಿಂದಲೂ ಜಾರಿಯಲ್ಲಿರುವ ಒಂದು ಶಿಷ್ಟಾಚಾರ. ಹಾಗೆಯೇ ಇದು ಆಯಿಷಾ (ರ) ರ ಕುರಿತು ಮುಸ್ಲಿಂ ಸಮಾಜದಲ್ಲಿರುವ ಗೌರವದ ಸೂಚನೆಯಾಗಿದೆ.    

ಪ್ರವಾದಿ ಮುಹಮ್ಮದ್ (ಸ) ರನ್ನು ವಿವಾಹವಾಗುವಾಗ ಆಯಿಷಾ(ರ) ಕೇವಲ ಆರು ವರ್ಷದ ಮಗುವಾಗಿದ್ದರು ಎಂಬೊಂದು ಸುಳ್ಳು ಕಳೆದ ಕೆಲವು ದಶಕಗಳಿಂದ ವಿವಾದದ ವಸ್ತುವಾಗಿ ಚರ್ಚೆಯಲ್ಲಿದೆ. ಇದನ್ನು ಚರ್ಚೆಗೆ ತಂದವರು,ತಾವು ಪೌರ್ವಾತ್ಯ ಧರ್ಮ, ಸಂಸ್ಕೃತಿ, ಇತಿಹಾಸ, ಕಲೆ ಸಾಹಿತ್ಯ ಇತ್ಯಾದಿಗಳ ಕುರಿತಂತೆ ಅಧ್ಯಯನ ಹಾಗೂ ಸಂಶೋಧನೆ ನಡೆಸಿರುವ ತಜ್ಞರೆಂದು ತಮ್ಮನ್ನು ಪರಿಚಯಿಸಿಕೊಂಡ ಕೆಲವು ಪಾಶ್ಚಿಮಾತ್ಯ ಓರಿಯೆಂಟಲಿಸ್ಟ್ ಗಳು. 'ಬುಖಾರಿ'ಯಂತಹ ಕೆಲವು ಪ್ರಸಿದ್ಧ ಹದೀಸ್ ಗ್ರಂಥಗಳಲ್ಲಿ ಹಾಗೆ ಪ್ರಸ್ತಾಪಿಸಲಾಗಿದೆ ಎಂಬ ಒಂದೇ ಆಧಾರದಲ್ಲಿ ಅವರು, ಆರನೇ ವಯಸ್ಸಿನಲ್ಲಿ ಆಯಿಷಾ, ಪ್ರವಾದಿ ಮುಹಮ್ಮದ್ (ಸ) ರನ್ನು ಔಪಚಾರಿಕವಾಗಿ ವಿವಾಹವಾದರು ಮತ್ತು ಒಂಭತ್ತನೇ ವಯಸ್ಸಿನಲ್ಲಿ ಪ್ರವಾದಿಯ ಕುಟುಂಬವನ್ನು ಸೇರಿಕೊಂಡರು ಎಂಬ ಸುಳ್ಳನ್ನು ಧಾರಾಳ ಪ್ರಚಾರ ಮಾಡಿದರು. ಜೊತೆಗೆ ಈ ಸುಳ್ಳಿನ ಆಧಾರದಲ್ಲಿ, ಪ್ರವಾದಿ ಮುಹಮ್ಮದ್ (ಸ)  ಒಂಭತ್ತು ವರ್ಷದ ಒಬ್ಬ ಬಾಲಕಿಯನ್ನು ತಮ್ಮಪತ್ನಿಯಾಗಿಸಿ ಆಕೆಯ ಜೊತೆ ಸಂಸಾರ ನಡೆಸಿದರು ಎನ್ನುತ್ತಾ ಪ್ರವಾದಿವರ್ಯರ ಚಾರಿತ್ರ್ಯದ ಮೇಲೆ ಕೆಸರೆರಚಲು ಶ್ರಮಿಸಿದರು. ಕೆಲವು ಕತೆಗಾರರು ಮತ್ತು ಕಾದಂಬರಿಕಾರರು ತಮ್ಮ ಕತೆಗಳಿಗೆ ರಂಗು ಸೇರಿಸಲು ಇವರ ವಿಕೃತಸಂಶೋಧನೆಯನ್ನು ಅವಲಂಬಿಸಿದರು. ಆ ಮೂಲಕ ಸುಳ್ಳಿಗೆ ಮತ್ತಷ್ಟು ಪ್ರಚಾರ ಕೊಟ್ಟರು. ಕೆಸರನ್ನೇ ತಿನ್ನುತ್ತಾ ತಿನ್ನಿಸುತ್ತಾ ಬದುಕುವುದನ್ನು ತಮ್ಮ ಕಾಯಕವಾಗಿಸಿಕೊಂಡಿರುವ ಕೆಲವರು ಪ್ರವಾದಿಯ ವಿರುದ್ಧ ಹರಿ ಹಾಯ್ದು ತಮ್ಮ ತೀಟೆತೀರಿಸಿಕೊಳ್ಳಲು ಈ ಸುಳ್ಳನ್ನು ಕೈಗೆತ್ತಿಕೊಂಡು ಕೆಸರಲ್ಲಿ ಹೊರಳಾಡುವ ಮತ್ತು ಜನರನ್ನೂ ಹೊರಳಾಡಿಸುವ ಕಸರತ್ತಿನಲ್ಲಿ ತೊಡಗಿಕೊಂಡರು. ನಿಜವಾಗಿ ಈ ವಿಷಯವನ್ನು ಚರ್ಚಿಸುವವರು ಸತ್ಯದ ಕುರಿತು  ಸ್ವಲ್ಪವಾದರೂ ಪ್ರಾಮಾಣಿಕ ಆಸಕ್ತಿ ಉಳ್ಳವರಾಗಿದ್ದರೆ ಆಯಿಷಾ (ರ) ಅವರ ವಯಸ್ಸಿನ ಕುರಿತಾದ ಪ್ರಸ್ತುತ ಮಾಹಿತಿ ತಪ್ಪು ಎಂಬುದನ್ನು ನಿಚ್ಚಳವಾಗಿ ಸಾಬೀತು ಪಡಿಸುವ ಆಧಾರಗಳ ಕಡೆಗೊಮ್ಮೆ ಗಮನ ಹರಿಸಬೇಕು. ಆ ರೀತಿ ಗಮನಹರಿಸಿದವರಿಗೆಲ್ಲಾ, ಪ್ರಸ್ತುತ ಮಾಹಿತಿ ತಪ್ಪು ಎಂಬುದು ಸ್ಪಷ್ಟವಾಗಿ ಮನವರಿಕೆಯಾಗುತ್ತದೆ. ಮನವರಿಕೆಯಾಗಿದೆ. 

ಇಲ್ಲಿ ನಾವೀಗ ಈ ಕುರಿತಾಗಿ ಲಭ್ಯವಿರುವ ನೇರ ಹಾಗೂ ಪರೋಕ್ಷವಾದ ಕೆಲವು ವಿಭಿನ್ನ ಪುರಾವೆಗಳನ್ನು ಒಂದೊಂದರಂತೆ ಕ್ರಮವಾಗಿ ನೋಡೋಣ:

1.  ಪ್ರವಾದಿ ಮುಹಮ್ಮದ್(ಸ) ರ ಬದುಕಿನ ಕುರಿತು ವಿವರಗಳನ್ನು ಅರಿಯಲು ಹಲವು ನಂಬಲರ್ಹ ಮೂಲಗಳಿವೆ. ಉದಾ: 1. ಪವಿತ್ರ ಕುರ್ ಆನ್, 2. ಹಲವಾರು ಹದೀಸ್ ಸಂಗ್ರಹ ಗ್ರಂಥಗಳು (ಅವು ಪ್ರವಾದಿವರ್ಯರ ಮಾತು ಮತ್ತು ಕೃತಿಗಳ, ಹಾಗೂ ಅವರ ಕುರಿತಾಗಿ ಅವರ ಸಮಕಾಲೀನರು ನೀಡಿದ ಹೇಳಿಕೆಗಳ ದಾಖಲೆಗಳು), 3. ಪ್ರವಾದಿ ಜೀವನ ಚರಿತ್ರೆಗೆಂದೇ ಮೀಸಲಾಗಿರುವ ಹಲವಾರು 'ಸೀರತ್' ಗ್ರಂಥಗಳು ಮತ್ತು 4. 'ತಾರೀಕ್' ಅಥವಾ ಆ ಕಾಲದ ಸಾಮಾನ್ಯ ಇತಿಹಾಸವನ್ನು ದಾಖಲಿಸಿರುವ ಹಲವು ಇತಿಹಾಸ ಗ್ರಂಥಗಳು. ಈ ಪೈಕಿ ಕುರ್ ಆನ್ ನಲ್ಲಿ ಎಲ್ಲೂ ಆಯಿಷಾ (ರ) ರ ವಯಸ್ಸಿನ ಪ್ರಸ್ತಾಪವಿಲ್ಲ. ಉಳಿದಂತೆ ವಿವಿಧ ಹದೀಸ್ ಗ್ರಂಥಗಳಲ್ಲಿ, ಸೀರತ್ ಗ್ರಂಥಗಳಲ್ಲಿ ಮತ್ತು ತಾರೀಖ್ ನ ಗ್ರಂಥಗಳಲ್ಲಿ ಈ ಕುರಿತು  ನೇರ ಹಾಗೂ ಪರೋಕ್ಷವಾಗಿ ಬಹಳ ಭಿನ್ನವಾದ ಮಾಹಿತಿಗಳು ಮತ್ತು ಸೂಚನೆಗಳು ಸಿಗುತ್ತವೆ. ವಿವಾಹದ ವೇಳೆ ಆಯಿಷರ ವಯಸ್ಸು 17 ವರ್ಷಕ್ಕಿಂತ ಅಧಿಕವಿತ್ತು ಎನ್ನುವ ವರದಿಗಳೂ ಅಲ್ಲಿಸಿಗುತ್ತವೆ. ನಾವು ಕುರುಡಾಗಿ ದೂಷಣೆ ಮಾತ್ರ ಮಾಡುತ್ತೇವೆ, ಸತ್ಯಾನ್ವೇಷಣೆ ಮಾಡುವುದೇ ಇಲ್ಲ ಎಂದು ತೀರ್ಮಾನಿಸಿ ಕೊಂಡವರು ಅವುಗಳನ್ನೆಲ್ಲ ಕಡೆಗಣಿಸಿ ಅಥವಾ ಅಡಗಿಸಿಟ್ಟು ಆರು ಮತ್ತು ಒಂಭತ್ತು ವರ್ಷಗಳ ಪ್ರಸ್ತಾಪವಿರುವ ವರದಿಗಳನ್ನು ಮಾತ್ರ ಚರ್ಚೆಗೆ ತರುತ್ತಾರೆ.

2. ಪ್ರವಾದಿ ಮುಹಮ್ಮದ್ (ಸ) ಹುಟ್ಟಿ ಬೆಳೆದ ಸಮಾಜದಲ್ಲಿ ಅನೇಕ ಮೌಢ್ಯಗಳು, ಕಂದಾಚಾರಗಳು, ಕ್ರೂರ ಸಂಪ್ರದಾಯ ಗಳೆಲ್ಲಾ ಇದ್ದುವು. ಆದರೆ ಐದಾರು ವರ್ಷದ ಮಕ್ಕಳನ್ನು ವಿವಾಹವಾಗುವ ಸಂಪ್ರದಾಯ ಆ ಸಮಾಜದಲ್ಲಿ ಜನಪ್ರಿಯವಾಗಿರಲಿಲ್ಲ. ಆಗಿನ ಮಕ್ಕದಲ್ಲಿ ಆಯಿಷಾ ಎಂಬೊಬ್ಬ ಹೆಣ್ಣು ಮಗು ಮಾತ್ರ ಏಕಾಂಗಿಯಾಗಿ ಇದ್ದುದಲ್ಲ. ಅಲ್ಲಿ ಬೇರೆ ಸಾವಿರಾರು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಇದ್ದರು. ಅವರಲ್ಲಿ ಯಾರಿಗಾದರೂ ಆರನೇ ವಯಸ್ಸಿನಲ್ಲಿ ವಿವಾಹವಾಗಿತ್ತು ಎಂದು ಸೂಚಿಸುವ ಯಾವುದೇ ಹೇಳಿಕೆ ಹದೀಸ್ ಗ್ರಂಥಗಳಲ್ಲಾಗಲಿ ಇತಿಹಾಸದ ಗ್ರಂಥಗಳಲ್ಲಾಗಲಿ ಕಾಣ ಸಿಗುವುದಿಲ್ಲ. ಪ್ರವಾದಿ ಪುತ್ರಿ ಫಾತಿಮಾ ರ ವಿವಾಹವನ್ನೇ ಉದಾಹರಿಸುವುದಾದರೆ, ಆಕೆ ಪ್ರವಾದಿತ್ವದ ಘೋಷಣೆಯ ಐದು ವರ್ಷ ಮುಂಚೆ, ಅಂದರೆ, ಕಾಬಾದ ಪುನರ್ ನಿರ್ಮಾಣ ನಡೆದ ವರ್ಷದಲ್ಲಿ ಜನಿಸಿದ್ದರು ಮತ್ತು ಹಿಜ್ರತ್ ನ ಬಳಿಕ ಎರಡನೇ ವರ್ಷ ಅವರ ವಿವಾಹವಾಯಿತು. ಹಿಜ್ರತ್ ಅಥವಾ ವಲಸೆ ನಡೆದದ್ದು ಪ್ರವಾದಿತ್ವ ಘೋಷಣೆಯ 13 ವರ್ಷಗಳ ಬಳಿಕ. ಈ ದೃಷ್ಟಿಯಿಂದ ಫಾತಿಮಾರಿಗೆ ವಿವಾಹವಾಗುವಾಗ ಅವರಿಗೆ ಕನಿಷ್ಠ 20 ವರ್ಷ ವಯಸ್ಸಾಗಿರಬೇಕು. ಇನ್ನು ಸ್ವತಃ ಪ್ರವಾದಿವರ್ಯರ ವಿವಾಹಗಳನ್ನು ನೋಡಿದರೆ ಅಲ್ಲಿ ಬಾಲಿಕಾ ವಧುಗಳು ಅನ್ನಬಹುದಾದ ಯಾರೂ ಇಲ್ಲ. ಪ್ರವಾದಿಯ ಪ್ರಥಮ ವಿವಾಹ ನಡೆದಾಗ ಅವರಿಗೆ 25 ವರ್ಷ ವಯಸ್ಸಾಗಿತ್ತು. ಅವರ ಪ್ರಥಮ ಪತ್ನಿ ಖದೀಜಾರಿಗೆ ಆಗ 40 ವರ್ಷವಾಗಿತ್ತು. ಅವರ ಪತ್ನಿಯರಲ್ಲಿ ಹೆಚ್ಚಿನವರು ಒಂದೋ ವಿಧವೆಯರು ಅಥವಾ ವಿಚ್ಛೇದಿತೆಯರಾಗಿದ್ದರು.

3.  ಪ್ರವಾದಿ ಮುಹಮ್ಮದ್ (ಸ)ರ ಸಮಕಾಲೀನ ವಿರೋಧಿಗಳು ಅವರ ಮೇಲೆ ಎಂತೆಂತಹದೋ ಘನಘೋರ ಆರೋಪಗಳನ್ನು ಹೊರಿಸಿದ್ದರು. ಆದರೆ ಆರು ವರ್ಷದ ಶಿಶುವನ್ನು ಮದುವೆಯಾದವರು ಅಥವಾ ಒಂಭತ್ತು ವರ್ಷದ ಮಗುವಿನ ಜೊತೆ ಸಂಸಾರ ನಡೆಸಿದವರು ಎಂಬ ಆರೋಪವನ್ನು ಅವರಲ್ಲಿ ಯಾರೊಬ್ಬರೂ ಹೊರಿಸಿರಲಿಲ್ಲ.

4. ಪ್ರವಾದಿ ಚರಿತ್ರೆಗೆ ಸಂಬಂಧಿಸಿದ ಘಟನೆಗಳ ಕಾಲ ನಿರ್ಣಯ ಮಾಡುವಾಗ ಅಥವಾ  ಆ ಕುರಿತು ಚರ್ಚಿಸುವಾಗ ಆ ಕಾಲ ಮತ್ತು ಆ ಸಮಾಜದಲ್ಲಿ   ಯಾವುದಾದರೂ ನಿರ್ದಿಷ್ಟ ಪಂಚಾಂಗವಾಗಲಿ ಕ್ಯಾಲೆಂಡರ್ ಆಗಲಿ ಚಲಾವಣೆಯಲ್ಲಿರಲಿಲ್ಲ ಎಂಬುದು ಗಮನದಲ್ಲಿರಬೇಕು. ಅಲ್ಲಿ ಸಾಮಾನ್ಯವಾಗಿ ಜನರು ನಿರ್ದಿಷ್ಟ ಕಾಲವನ್ನು ಸೂಚಿಸುವುದಕ್ಕೆ ಯಾವುದಾದರೂ ದೊಡ್ಡ ಘಟನೆ ನಡೆದ ವರ್ಷವನ್ನು ಹೆಸರಿಸಿ, ಆ ಘಟನೆ ನಡೆದು ಇಂತಿಷ್ಟು ವರ್ಷಗಳ ಬಳಿಕ ಅಥವಾ ಅದಕ್ಕಿಂತ ಇಂತಿಷ್ಟು ವರ್ಷ ಮುನ್ನ ಎಂದು ಹೇಳುತ್ತಿದ್ದರು. ಉದಾ: ಪ್ರವಾದಿ ಮುಹಮ್ಮದ್ (ಸ) ಯಾವ ವರ್ಷ ಜನಿಸಿದರೆಂಬ ಪ್ರಶ್ನೆಗೆ ಆ ಕಾಲದವರ ಉತ್ತರ - 'ಆಮುಲ್ ಫೀಲ್' ನಲ್ಲಿ ಜನಿಸಿದರು ಎಂದಿರುತ್ತಿತ್ತು. ಆಮುಲ್ಫೀಲ್ ಅಂದರೆ ಆನೆಯ ವರ್ಷ. ಆ ವರ್ಷ ಯಮನ್ ದೇಶದ ಅಬ್ರಹಾ ಎಂಬ ದೊರೆ ತನ್ನ ಆನೆಗಳ ಸೇನೆಯೊಂದನ್ನು ತಂದು ಮಕ್ಕ ಪಟ್ಟಣದಲ್ಲಿದ್ದ ಪವಿತ್ರ ಕಾಬಾ ಆರಾಧನಾಲಯದ ಮೇಲೆ ದಾಳಿ ನಡೆಸಿದ್ದ. ಅದೊಂದು ನಿರ್ಣಾಯಕ ಘಟನೆಯಾದರೆ ಮುಹಮ್ಮದ್ (ಸ) ತಾವು ದೇವದೂತರೆಂದು ಘೋಷಿಸಿದ ವರ್ಷವು ಇನ್ನೊಂದು ನಿರ್ಣಾಯಕ ಘಟನೆ. ಮುಂದೆ ಪ್ರವಾದಿ ಮುಹಮ್ಮದ್ (ಸ) ಮಕ್ಕದಿಂದ ಮದೀನಾ ಗೆ ಹಿಜ್ರತ್ ಅಥವಾ ವಲಸೆ ಹೋದ ಘಟನೆ ಇನ್ನೊಂದು ಮೈಲುಗಲ್ಲು.  ಹಿಜ್ರತ್ ಗೆ ಮುಂಚೆ ಜನರು ಯಾವುದಾದರೂ ಘಟನೆಯ ಕಾಲವನ್ನು ಸೂಚಿಸುವುದಕ್ಕೆ ಪ್ರವಾದಿತ್ವ ಘೋಷಣೆಯ ವರ್ಷಕ್ಕಿಂತ ಇಂತಿಷ್ಟು ವರ್ಷಗಳ ಬಳಿಕ ಅಥವಾ ಮುನ್ನ ಎಂದು ಸೂಚಿಸುತ್ತಿದ್ದರು. ಹಿಜ್ರತ್ ನ ನಂತರ ಹೆಚ್ಚಿನವರು  ಕಾಲವನ್ನು ಸೂಚಿಸುವಾಗ ಹಿಜ್ರತ್ ನಡೆದ ವರ್ಷಕ್ಕೆ ಜೋಡಿಸಿ ಸೂಚಿಸುತ್ತಿದ್ದರು.

5. ಮೊದಲು ನಾವು, ಈ ವಿಷಯದಲ್ಲಿ ವಿವಾದಾತೀತವಾಗಿ ಎಲ್ಲರೂ ಅಂಗೀಕರಿಸುವ ಕೆಲವು ಅಂಶಗಳನ್ನು ಪ್ರಸ್ತಾಪಿಸಿ ಆ ಬಳಿಕ ವಿವಾದವಿರುವ ವಿಷಯಗಳೆಡೆಗೆ ಬಂದರೆ ಸಮಸ್ಯೆಯ ಇತ್ಯರ್ಥ ಸುಲಭವಾದೀತು. ಆಯಿಷಾರ ಜೊತೆ ಪ್ರವಾದಿವರ್ಯರ ವಿವಾಹ ನಡೆದದ್ದು, ಪ್ರವಾದಿತ್ವ ಘೋಷಣೆಯ ನಂತರದ 10ನೇ ವರ್ಷದಲ್ಲಿ, ಶವ್ವಾಲ್ ತಿಂಗಳಲ್ಲಿ ಎಂಬ ಬಗ್ಗೆ ಯಾವುದೇ ವಿವಾದವಿಲ್ಲ. ಹಾಗೆಯೇ ವಿವಾಹವಾದ ಬಳಿಕವೂ ಆಯಿಷಾ ಬಹುಕಾಲ ತಮ್ಮ ತವರು ಮನೆಯಲ್ಲೇ ಉಳಿದಿದ್ದು, ಪ್ರವಾದಿವರ್ಯರು ಮಕ್ಕಾದಿಂದ ಮದೀನಾಗೆ ವಲಸೆ ಹೋದ ಬಳಿಕದ ಎರಡನೇ ವರ್ಷ ಶವ್ವಾಲ್ ತಿಂಗಳಲ್ಲಿ ಅಂದರೆ ಔಪಚಾರಿಕ ವಿವಾಹವಾಗಿ ಐದು ವರ್ಷಗಳ ಬಳಿಕ ಅವರು ಪ್ರವಾದಿಯ ಮನೆಯನ್ನುಸೇರಿದರು ಎಂಬ ಬಗ್ಗೆಯೂ ಯಾವುದೇ ವಿವಾದವಿಲ್ಲ. ಆದ್ದರಿಂದ ಆಯಿಷಾ ಜನಿಸಿದ ವರ್ಷ ಯಾವುದು ಎಂಬ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿದರೆ ಯಾವ ಹಂತದಲ್ಲಿ ಅವರು ಯಾವ ವಯಸ್ಸಿನವರಾಗಿದ್ದರೆಂದು ಕರಾರುವಾಕ್ಕಾಗಿ ಹೇಳಲು ಸಾಧ್ಯವಾಗುತ್ತದೆ.

6. ವಿವಾಹದ ವೇಳೆ ಆಯಿಷಾರಿಗೆ ಆರು ವರ್ಷ ವಯಸ್ಸು ಎನ್ನುವವರು, ಆಯಿಷಾ ಜನಿಸಿದ್ದು ಪ್ರವಾದಿತ್ವದ ಘೋಷಣೆಯಾದ ಬಳಿಕ ನಾಲ್ಕು ಅಥವಾ ಐದು ವರ್ಷಗಳ ನಂತರ ಎಂದು ನಂಬಿರುತ್ತಾರೆ. ನಿಜವಾಗಿ, ಆಯಿಷಾ ಪ್ರವಾದಿತ್ವದ ಘೋಷಣೆಗಿಂತ ನಾಲ್ಕೈದು ವರ್ಷ ಮೊದಲು ಜನಿಸಿದ್ದರೆಂದು ಸೂಚಿಸುವ ಹಲವಾರು ಐತಿಹಾಸಿಕ ಪುರಾವೆಗಳಿದ್ದು, ಅವುಗಳನ್ನು ಗಣನೆಗೆ ತೆಗೆದುಕೊಂಡರೆ, ವಿವಾಹದ ವೇಳೆ ಆಯಿಷಾರಿಗೆ ಕನಿಷ್ಠ  15 ವರ್ಷ ವಯಸ್ಸಾಗಿತ್ತು ಮತ್ತು ಅವರು ಪ್ರವಾದಿವರ್ಯರ ಮನೆಸೇರುವಾಗ ಅವರಿಗೆ ಕನಿಷ್ಠ 20 ವರ್ಷ ವಯಸ್ಸಾಗಿತ್ತು  ಎಂಬ ಬಗ್ಗೆ ಯಾವುದೇ ಸಂಶಯ ಉಳಿಯುವುದಿಲ್ಲ.

7. ಇತಿಹಾಸಕಾರ ಇಬ್ನು ಸಅದ್ ತಮ್ಮ 'ತಬಖಾತ್'  ಗ್ರಂಥದಲ್ಲಿ ನಿರೂಪಿಸಿರುವಂತೆ, ಆಯಿಷಾ (ರ) ರನ್ನು ವಿವಾಹವಾಗುವ ಅಪೇಕ್ಷೆ ಪ್ರಕಟಿಸುವ ಪ್ರವಾದಿ ಮುಹಮ್ಮದ್ (ಸ) ರ ವಿವಾಹ ಪ್ರಸ್ತಾವವು  ಆಯಿಷಾ (ರ) ರ ತಂದೆ ಅಬೂಬಕರ್ ಬಳಿಗೆ ತಲುಪಿದಾಗ ಇದ್ದ ಸನ್ನಿವೇಶ  ಮತ್ತು ಅವರು ಪ್ರಕಟಿಸಿದ ಪ್ರತಿಕ್ರಿಯೆ ಬಹಳ ಗಮನಾರ್ಹವಾಗಿದೆ. ಈಗಾಗಲೇ  ಜುಬೈರ್ ಬಿನ್ ಮುತ್ ಯಿಮ್ ಎಂಬ ವ್ಯಕ್ತಿಯ ಜೊತೆ ಆಯಿಷಾ ರ ವಿವಾಹ ನಿಶ್ಚಯವಾಗಿದೆ. ಆ ವಿಷಯವನ್ನು ಇತ್ಯರ್ಥಗೊಳಿಸಿದ ಬಳಿಕವಷ್ಟೇ ಪ್ರವಾದಿವರ್ಯರ ಪ್ರಸ್ತಾವವನ್ನು ಪರಿಗಣಿಸಲು ಸಾಧ್ಯ ಎಂಬುದು ಅಬೂಬಕರ್ ರ ಪ್ರತಿಕ್ರಿಯೆಯಾಗಿತ್ತು. ಇಲ್ಲಿ ಅಬೂಬಕರ್ ಅವರು ಪ್ರಸ್ತಾಪಿಸುತ್ತಿರುವ ಜುಬೈರ್ ಮತ್ತು ಆಯಿಷಾರ ನಡುವಣ ವಿವಾಹ ನಿಶ್ಚಿತಾರ್ಥವು ಕೇವಲ ಒಂದೆರಡು ವಾರ ಅಥವಾ ಒಂದೆರಡು ತಿಂಗಳ ಮುನ್ನ ನಡೆದ ಘಟನೆಯಾಗಿರಲಿಲ್ಲ ಎಂಬುದು ವ್ಯಕ್ತ. ನಿಜವಾಗಿ ಪ್ರವಾದಿಯ ಪ್ರಸ್ತಾವ ಹೋದಾಗ, ಅವರು ತಮ್ಮ ಪ್ರವಾದಿತ್ವವನ್ನು ಘೋಷಿಸಿ ಕನಿಷ್ಠ 10 ವರ್ಷಗಳು ಕಳೆದಿದ್ದವು. ಅವರು ಪ್ರವಾದಿತ್ವವನ್ನು ಘೋಷಿಸಿದ ವರ್ಷವೇ ಅವರ ಆಪ್ತ ಅಬೂಬಕರ್ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದರು. ಪ್ರವಾದಿತ್ವ ಘೋಷಣೆ ನಡೆದು ಕೆಲವು ವರ್ಷಗಳ ತನಕ ಸಮಾಜದಲ್ಲಿ ಪ್ರವಾದಿ,ಅವರ ಸಂದೇಶ ಮತ್ತು ಅವರ ಅನುಯಾಯಿಗಳ ವಿರುದ್ಧ ಪ್ರತಿರೋಧವು ಶೀತಲ ಸಮರದ ರೂಪದಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು. ಕ್ರಮೇಣ ಪ್ರವಾದಿ ಮತ್ತವರ ಅನುಯಾಯಿಗಳ ವಿರುದ್ಧ ಪ್ರತಿರೋಧವು  ಬಹಿರಂಗ ವಿರೋಧದ, ಬಹಿಷ್ಕಾರದ  ಹಾಗೂ ಹಿಂಸೆಯ ರೂಪ ತಾಳಿತ್ತು. ಜುಬೈರ್ ಜೊತೆ ಆಯಿಷಾ ರ ವಿವಾಹ ನಿಶ್ಚಯವಾದ ದಿನಗಳು ಶೀತಲ ಸಮರದ ದಿನಗಳಾಗಿದ್ದವು. ಮುಂದೆ ಬಹಿರಂಗ ಸಂಘರ್ಷದ ಪರ್ವ ಆರಂಭವಾದಾಗ, ಜುಬೈರ್ ನ ಕುಟುಂಬದವರು ಪ್ರವಾದಿಯ ವಿರುದ್ಧದ ಪಕ್ಷದಲ್ಲಿದ್ದರು. ಆದ್ದರಿಂದ ಪ್ರವಾದಿಯ ಆಪ್ತರಾಗಿದ್ದ ಮತ್ತು ಸಂಪ್ರದಾಯ ಮುರಿದು ಮುಸ್ಲಿಮರಾಗಿದ್ದ ಅಬೂಬಕರ್ ರ ಪುತ್ರಿಯ ಜೊತೆ ನಿಶ್ಚಯವಾಗಿದ್ದ ತಮ್ಮ ಹುಡುಗನ ವಿವಾಹ ನಡೆಯುವುದು ಜುಬೈರ್ ನ ಕುಟುಂಬದವರಿಗೆ ಇಷ್ಟವಿರಲಿಲ್ಲ. ಅಬೂಬಕರ್ ಕೂಡಾ ಆ ಸಂಬಂಧವನ್ನು ಮುಂದುವರಿಸುವುದರಲ್ಲಿ ಆಸಕ್ತರಾಗಿರಲಿಲ್ಲ. ಆದರೆ ಅಧಿಕೃತವಾಗಿ, ನಿಶ್ಚಿತ ವಿವಾಹವನ್ನು ಆಗಿನ್ನೂ ರದ್ದುಗೊಳಿಸಲಾಗಿರಲಿಲ್ಲ. ಈ ಸನ್ನಿವೇಶ ಏನನ್ನು ಸೂಚಿಸುತ್ತದೆ? ನಿಶ್ಚಿತ ವಿವಾಹವನ್ನು ರದ್ದುಗೊಳಿಸುವ ಔಪಚಾರಿಕತೆ ಚರ್ಚೆಗೆ ಬರುವ  ಕೆಲವು ವರ್ಷ ಮುನ್ನವಾದರೂ ವಿವಾಹ ನಿಶ್ಚಯ ವಾಗಿರಬೇಕಲ್ಲವೇ? ಆಯಿಷಾ ಆರು ವರ್ಷದವರಾಗಿದ್ದಾಗ ಪ್ರವಾದಿಯ ಜೊತೆ ಅವರ ವಿವಾಹವಾಗಿತ್ತು ಎನ್ನುವವರು, ಈ ಸನ್ನಿವೇಶದ ಬಗ್ಗೆ ಏನನ್ನುತ್ತಾರೆ? ಆಯಿಷಾ ಹುಟ್ಟುವ ಮುನ್ನವೇ ಜುಬೈರ್ ಜೊತೆ ಅವರ ವಿವಾಹ ನಿಶ್ಚಯವಾಗಿತ್ತೆಂದು ಹೇಳುವುದಿಲ್ಲ ತಾನೇ?  ನಿಜವಾಗಿ ಪ್ರವಾದಿಯ ಜೊತೆ ಆಯಿಷಾರ ವಿವಾಹ ನಡೆದಾಗ ಅವರು ಸಾಮಾನ್ಯ ವಿವಾಹದ ವಯಸ್ಸಿನವರಾಗಿದ್ದರು ಮತ್ತು ಕೇವಲ ಆರು ವರ್ಷದ ಬಾಲಕಿಯಂತೂ ಖಂಡಿತ ಆಗಿರಲಿಲ್ಲ ಎಂಬುದಕ್ಕೆ ಇದೊಂದು ಸ್ಪಷ್ಟ ಪುರಾವೆಯಾಗಿದೆ.   

8. ಪ್ರಖ್ಯಾತ ಇತಿಹಾಸಕಾರ ಮತ್ತು ಕುರ್ ಆನ್ ವ್ಯಾಖ್ಯಾನಕಾರ ಅಲ್ಲಾಮಾ ಇಬ್ನು ಕಸೀರ್ ಅವರ ಪ್ರಕಾರ ಆಯಿಷಾರಿಗಿಂತ 10 ವರ್ಷ ಹಿರಿಯರಾಗಿದ್ದ ಅವರ ಅಕ್ಕ ಅಸ್ಮಾ ಬಿಂತಿ ಅಬೂಬಕರ್ ಹಿಜರಿ ಶಕ  73 ರಲ್ಲಿ ನಿಧನರಾದರು. ಆಗ ಅವರಿಗೆ ನೂರು ವರ್ಷವಯಸ್ಸಾಗಿತ್ತು.  ಈ ಪ್ರಕಾರ ಹಿಜ್ರತ್ ಅಥವಾ ವಲಸೆಯ ವೇಳೆ ಅವರಿಗೆ ಸುಮಾರು 27 ವರ್ಷ ವಯಸ್ಸಿರಬೇಕು ಮತ್ತು ಆಯಿಷಾರಿಗೆ ಕನಿಷ್ಠ  17 ವರ್ಷ ವಯಸ್ಸಿರಬೇಕು. ಔಪಚಾರಿಕ ವಿವಾಹವು ಹಿಜ್ರತ್ ಗಿಂತ ಮೂರು ವರ್ಷ ಮುನ್ನ ನಡೆದಿದ್ದರೆ ಆವೇಳೆ ಆಯಿಷಾರಿಗೆ ಕನಿಷ್ಠ 14 ವರ್ಷ ವಯಸ್ಸಾಗಿರಬೇಕು ಮತ್ತು ಐದು ವರ್ಷಗಳ ಬಳಿಕ ಅವರು ಪ್ರವಾದಿಯ ಕುಟುಂಬವನ್ನು ಸೇರುವಾಗ ಅವರಿಗೆ 19 ವರ್ಷ ವಯಸ್ಸಾಗಿರಬೇಕು.ಜಗದ್ವಿಖ್ಯಾತ ಹದೀಸ್ ಸಂಗ್ರಹ ಗ್ರಂಥ ಮಿಶ್ಕಾತ್ ಅಲ್ ಮಸಾಬೀಹ್ ನ ಕರ್ತೃ ಇಮಾಮ್ ವಲಿಯುದ್ದೀನ್ ಮುಹಮ್ಮದ್ ಇಬ್ನು ಅಬ್ದುಲ್ಲಾಹ್ ಅಲ್  ಖತೀಬ್ ಅವರು ಕೂಡಾ ಇದೇ ತರ್ಕವನ್ನು ಮಂಡಿಸಿದ್ದಾರೆ.

9. ಪ್ರಸಿದ್ಧ ಇತಿಹಾಸಕಾರ ಇಬ್ನು ಜರೀರ್ ಅಲ್ ತಬರಿ ಅವರ ಪ್ರಕಾರ ಅಬೂಬಕರ್ ಅವರು ಇಸ್ಲಾಮ್ ಧರ್ಮ ಸ್ವೀಕರಿಸುವ ಮುನ್ನವೇ  ಅವರ ಮನೆಯಲ್ಲಿ ಆಯಿಷಾ ಮತ್ತು ಅಬ್ದುರ್ರಹ್ಮಾನ್ ಜನಿಸಿದ್ದರು. ಈ ಹೇಳಿಕೆಯನ್ನು ಸಮರ್ಥಿಸುವುದಕ್ಕೆ ಬೇರೆ ಮೂಲಗಳಿಂದಲೂ ಆಧಾರಗಳು ಸಿಗುತ್ತವೆ. ಹೀಗಿರುವಾಗ, ವಿವಾಹವಾಗುವಾಗ ಆಯಿಷಾರಿಗೆ ಆರು ವರ್ಷ ವಯಸ್ಸು ಎಂಬ ಒಂದು ತಪ್ಪು ಹೇಳಿಕೆಯನ್ನು ಸಮರ್ಥಿಸುವುದಕ್ಕಾಗಿ, ಪ್ರವಾದಿತ್ವದ ಘೋಷಣೆಯಾಗಿ ಸುಮಾರು ಐದು ವರ್ಷ ಬಳಿಕ ಆಯಿಷಾ ಜನಿಸಿದರೆಂಬ ಇನ್ನೊಂದು ತಪ್ಪು ಹೇಳಿಕೆಯನ್ನು ಸೃಷ್ಟಿಸಿಕೊಂಡವರು ಪ್ರಾಮಾಣಿಕರಾಗಿದ್ದರೆ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಈ ಪುರಾವೆ ಪರ್ಯಾಪ್ತವಾಗಿದೆ.

10. ಉಹುದ್ ಯುದ್ಧ ನಡೆದಾಗ, ಆಯಿಷಾ ಪ್ರವಾದಿಯ ಕುಟುಂಬವನ್ನು ಸೇರಿ ಸುಮಾರು ಒಂದು ವರ್ಷವಾಗಿತ್ತಷ್ಟೆ. ಆ ಯುದ್ಧದಲ್ಲಿ ಆಯಿಷಾ ಪ್ರವಾದಿವರ್ಯರ ಸೈನ್ಯದಲ್ಲಿ ಸಕ್ರಿಯ ಸಹಾಯಕಿಯ ಪಾತ್ರ ವಹಿಸಿದ್ದರು. ಅವರು ತಮ್ಮಕೆಲವು ಮಹಿಳಾ ಸಂಗಾತಿಗಳ ಜೊತೆ, ಬೆನ್ನ ಮೇಲೆ ನೀರಿನ ಚೀಲಗಳನ್ನು ಹೊತ್ತುಕೊಂಡು ಯುದ್ಧದಲ್ಲಿ ಗಾಯಾಳುಗಳಾದವರಿಗೆ ನೀರು ಕುಡಿಸುವ ಸೇವೆಯಲ್ಲಿ ತೊಡಗಿದ್ದರೆಂಬುದನ್ನು  ಅನೇಕ ಇತಿಹಾಸಕಾರರು ದಾಖಲಿಸಿದ್ದಾರೆ.ಆಯಿಷಾ ಪ್ರವಾದಿಯ ಮನೆ ಸೇರಿದಾಗ ಹದಿಹರೆಯದವರಾಗಿರಲಿಲ್ಲ ಎಂಬುದಕ್ಕೆ ಇದೊಂದು ಪರೋಕ್ಷ ಪುರಾವೆಯಾಗಿದೆ, ಏಕೆಂದರೆ ಪ್ರವಾದಿವರ್ಯರು ಕಿರಿಯ ವಯಸ್ಸಿನ ಯಾರನ್ನೂ ಯುದ್ಧ ರಂಗದ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ. ಹದಿಹರೆಯದ ಕೆಲವು ಯುವಕರು ಯುದ್ಧದ ಸಂದರ್ಭದಲ್ಲಿ ಪ್ರವಾದಿಯ ಸೇನೆಯನ್ನು ಸೇರಲು ಅಪೇಕ್ಷಿಸಿದಾಗ ಪ್ರವಾದಿವರ್ಯರು ಅವರನ್ನು ತಮ್ಮ ಸೇನೆಗೆ ಸೇರಿಸುವ ಬದಲು ಹಾಗೆಯೇ ಮರಳಿಸಿ ಬಿಟ್ಟಿದ್ದರು. ಈ ರೀತಿ ತಮ್ಮ ಕಟ್ಟುನಿಟ್ಟಿನ ಯುದ್ಧ ಸಂಹಿತೆಯನುಸಾರ ಹದಿಹರೆಯದ ತರುಣರನ್ನು ಯುದ್ಧರಂಗದಿಂದ ದೂರವಿಟ್ಟ ಪ್ರವಾದಿ ಆಯಿಷಾರಂತಹ ಮಹಿಳೆಯನ್ನು ಯುದ್ಧರಂಗದಲ್ಲಿ ಯೋಧರ ನೆರವಿಗೆ ನಿಯೋಜಿಸಿದ್ದರೆ, ಆಗ ಆಕೆ 20  ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಲು ಸಾಧ್ಯವಿಲ್ಲ ಎಂಬ ತರ್ಕ ಸಹಜವಲ್ಲವೇ? 

ಪ್ರವಾದಿ ಮುಹಮ್ಮದ್ (ಸ) ಅವರ ಕಾಲದಲ್ಲಿ ಅಂದರೆ ಕ್ರಿ.ಶ. ಏಳನೇ ಶತಮಾನದಲ್ಲಿ ಬಾಲ್ಯವಿವಾಹವಿತ್ತೆಂದು ಸಾಬೀತು ಪಡಿಸಲು ಹೆಣಗಾಡುತ್ತಿರುವವರು ಇಪ್ಪತ್ತೊಂದನೇ ಶತಮಾನದಲ್ಲಿ ಸ್ವತಃ ನಮ್ಮ ಭಾರತ ದೇಶದಲ್ಲಿ  ಎಂತಹ ಪರಿಸ್ಥಿತಿ  ಇದೆ  ಎಂಬುದನ್ನೊಮ್ಮೆ ನೋಡಿಕೊಳ್ಳುವುದು ಲೇಸು.

ವಿಶ್ವ ಸಂಸ್ಥೆಯ ಅಂಗವಾಗಿರುವ UNICEF ನವರ ಇತ್ತೀಚಿನ ವರದಿ ಪ್ರಕಾರ  ಜಗತ್ತಿನಲ್ಲಿ ಅತ್ಯಧಿಕಬಾಲ್ಯ ವಿವಾಹಗಳು ನಡೆಯುವ ದೇಶಗಳ  ಸಾಲಲ್ಲಿ ನಮ್ಮ ಭಾರತ  ಮುಂಚೂಣಿಯಲ್ಲಿದೆ.  ಇಲ್ಲಿ ವಿವಾಹವಾಗುವ ಹೆಣ್ಣು ಮಕ್ಕಳಲ್ಲಿ 27% ಮಂದಿ 18 ವರ್ಷ ಮುನ್ನವೇ ಹಸೆ ಮಣೆ ಹತ್ತುತ್ತಾರೆ. ಬಿಹಾರ ಮತ್ತು ರಾಜಸ್ತಾನಗಳಂತಹ ರಾಜ್ಯಗಳಲ್ಲಿ ಇಂತಹ ಬಾಲಿಕಾ ವಧುಗಳ ಸಂಖ್ಯೆ 65% ದಿಂದ 69% ದಷ್ಟಿದೆ. ಇಂತಹ ಸಮಾಜದಲ್ಲಿ ಗೌರವಾನ್ವಿತ ಧಾರ್ಮಿಕವ್ಯಕ್ತಿಗಳನ್ನು ಹೆಸರಿಸಿ ಅವರು ಆರು ವರ್ಷದ ಹೆಣ್ಣನ್ನು ವಿವಾಹವಾದರು ಎಂಬ ಸುಳ್ಳನ್ನು ಪ್ರಚಾರ ಮಾಡುತ್ತಿರುವವರ ಉದ್ದೇಶ ಒಳ್ಳೆಯದಿರಲು ಸಾಧ್ಯವೇ

Writer - ಅಬ್ದುಸ್ಸಲಾಮ್ ಪುತ್ತಿಗೆ

contributor

Editor - ಅಬ್ದುಸ್ಸಲಾಮ್ ಪುತ್ತಿಗೆ

contributor

Byline - ಎ.ಎಸ್. ಪುತ್ತಿಗೆ

contributor

Similar News