‘ಸತ್ತಾಗ ಸರಿಯಾಗಿ ಮುಖ ನೋಡಲು ಬಿಡಲಿಲ್ಲ, ಅವರ ಜೊತೆ ನನ್ನ ಜೀವವೂ ಹೋಗಬೇಕಿತ್ತು’
ಬೆಂಗಳೂರು, ಡಿ.18: ನನ್ನ ಪತಿ ಆಸ್ಪತ್ರೆಯಲ್ಲಿದ್ದಾಗ ಪ್ರತಿ ಬಾರಿ ನೋಡಬೇಕೆಂದು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸುತ್ತಿದ್ದೆ. ಆದರೆ ಒಳಗಡೆ ಬಿಡುತ್ತಿರಲಿಲ್ಲ. ಅಲ್ಲಿಂದ ಕೆಳಗೆ ಇಳಿದು ಅರ್ಧ ಗಂಟೆ ಆಯ್ತು ಅಷ್ಟೇ. ‘ನಿಮ್ಮ ಪತಿ ತೀರಿಕೊಂಡರು ಎಂದು ಆಸ್ಪತ್ರೆಯಿಂದ ಫೋನ್ ಮಾಡಿದರು’. ಸುದ್ದಿ ಕೇಳಿದ ತಕ್ಷಣ ನಾನು ನೋವಿನಲ್ಲಿ ಅವರ ಬಳಿ ಹೋದಾಗ ಮೈಮೇಲೆ ಹಾಕಿಕೊಳ್ಳಲು ಒಂದು ಕವರ್ (ಪಿಪಿಇ ಕಿಟ್) ನೀಡಿದರು. ಅದನ್ನು ಹಾಕಿಕೊಂಡು ಅವರ ಬಳಿ ಧಾವಿಸುವಷ್ಟರಲ್ಲಿ ಸರಿಯಾಗಿ ಮುಖ ನೋಡಲು ಬಿಡದೆ ದೇಹವನ್ನು ಸಾಗಿಸಿಬಿಟ್ಟರು ಎಂದು ಕೋವಿಡ್ ಸಂದರ್ಭದಲ್ಲಿ ಲಕ್ಷ್ಮೀದೇವಿ ನಗರ ನಿವಾಸಿ ತನ್ನ ಪತಿ ವಾಸು ಅವರನ್ನು ಕಳೆದುಕೊಂಡ ಪ್ರೇಮಾ ಅವರು ತನ್ನ ನೋವು ತೋಡಿಕೊಂಡಿದ್ದಾರೆ.
ಪತಿಯೇ ನಮ್ಮ ಆಧಾರ ಸ್ತಂಭವಾಗಿದ್ದರು: ನನ್ನ ಪತಿ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಬದುಕಿದ್ದಾಗ ಅವರೇ ನನಗೆ ಎಲ್ಲ ಆಗಿದ್ದರು. ನಾನು ಎಲ್ಲಿ ಹೋದರು ಜೊತೆಗೆ ಇರುತ್ತಿದ್ದರು. ನಮಗೆ ಗಂಡು ಮಕ್ಕಳಿಲ್ಲ, ಇರೋದು ಹೆಣ್ಣುಮಗಳಷ್ಟೇ. ಹೀಗಾಗಿ ಮನೆಯಲ್ಲಿ ಎಲ್ಲ ಕಡೆಯೂ ಅವರೇ ಓಡಾಡುತ್ತಿದ್ದರು. ಈ ಮುಂಚೆ ಅವರಿಗೆ ಯಾವ ಕಾಯಿಲೆಯೂ ಇರಲಿಲ್ಲ. ಒಂದು ದಿನ ಹೀಗೆಯೇ ಆರೋಗ್ಯ ಸರಿ ಇಲ್ಲ ಎಂದು ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಮನೆಗೆ ಬಂದ ನಂತರ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ನಂತರ ವೈದ್ಯರ ತಪಾಸಣೆಯಲ್ಲಿ ನಾಡಿ ಬಡಿತ ತುಂಬಾ ಕಡಿಮೆಯಾಗಿರುವುದು ಗೊತ್ತಾಯಿತು. ವೈದ್ಯರು ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದರು. ನಾವು ತುಂಬಾ ಬೇಡಿಕೊಂಡಾಗ ಚಿಕಿತ್ಸೆಗೆ ಮುಂದಾದರು. ಆದರೆ ಅಲ್ಲಿ ದಾಖಲಾಗಲು ಬೆಡ್ ಸಿಗಲಿಲ್ಲ. ಆಗ ಅವರೇ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದರು. ಅದರಂತೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದೆವು. ಆದರೆ ದಾಖಲಾದ ನಂತರ ಒಳಗಡೆ ರೋಗಿಗಳನ್ನು ನೋಡಲು ಬಿಡುತ್ತಿರಲಿಲ್ಲ. ವೈದ್ಯರಲ್ಲಿ ಮನವಿ ಮಾಡಿಕೊಂಡರೆ ನಿಮಗೆ ಈ ಕಾಯಿಲೆ ಬರುತ್ತೆ ಅಂತ ಹೊರಗಡೆ ನಿಲ್ಲಿಸುತ್ತಿದ್ದರು. ಕಿಮ್ಸ್‌ನಲ್ಲಿ ದಾಖಲಾದ ಹದಿಮೂರು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರಿಸಿಕೊಂಡಿದ್ದರು. ಅಲ್ಲಿಯವರೆಗೂ ಫೋನ್‌ನಲ್ಲಿ ಚೆನ್ನಾಗಿ ಮಾತನಾಡುತ್ತಿದ್ದರು ಎನ್ನುತ್ತಾರೆ ಪ್ರೇಮಾ.
ಹದಿಮೂರು ದಿನವೂ ಆಸ್ಪತ್ರೆಯಲ್ಲೂ ನರಕಯಾತನೆ: ಪತಿ ಅವರು ಹದಿಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರು ಅವರ ಮುಖ ನೋಡಲು ಬಿಡುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ತೀರಿಹೋದರು ಎಂದು ಹೇಳಿದಾಗ ನನಗೆ ದುಃಖ ಸಹಿಸಲಾಗಿಲ್ಲ. ಆಗ ವೈದ್ಯರ ಮೇಲೆ ತುಂಬಾ ಬೇಸರವಾಯಿತು. ಅವರು ವ್ಯಾಕ್ಸಿನೇಷನ್ ಕೂಡ ಪಡೆದಿದ್ದರು. ಆದರೆ ಆಸ್ಪತ್ರೆಗೆ ದಾಖಲಾದ ನಂತರ ಒಳಗಡೆ ಬಿಡದ ಕಾರಣದಿಂದಾಗಿ ಅವರ ಆರೈಕೆ ಮಾಡಲು ಕೂಡ ಸಾಧ್ಯವಾಗಲಿಲ್ಲ ಎಂದು ಪ್ರೇಮಾ ಅಳಲು ವ್ಯಕ್ತಪಡಿಸುತ್ತಾರೆ.
ಸಮುದ್ರದ ದೊಡ್ಡ ಅಲೆ ಸಿಕ್ಕಿದೆಲ್ಲಾವನ್ನು ಎಳೆದುಕೊಂಡು ಹೋಗುವಂತೆ ಜೀವ ತೆಗೆದುಕೊಂಡು ಹೋಗಿಬಿಡ್ತು. ಕೊರೋನ ಕಾಲದಲ್ಲಿ ಉಂಟಾದ ಸಾವು-ನೋವುಗಳು ಅಷ್ಟಿಷ್ಟಲ್ಲ. ಮೊದಲನೇ ಅಲೆಗಿಂತ ಎರಡನೇ ಅಲೆಯು ತುಂಬಾ ಭಯಂಕರವಾಗಿತ್ತು. ಈ ನಿಟ್ಟಿನಲ್ಲಿ ಸರಕಾರ ಹೆಚ್ಚು ಬೆಡ್ ವ್ಯವಸ್ಥೆ, ಚಿಕಿತ್ಸಾಲಯ ನಿರ್ಮಿಸಿದರೂ ಕೂಡ ಬಲಿಯಾಗುವವರ ಪ್ರಮಾಣ ಹೆಚ್ಚಾಗಿಯೇ ಇತ್ತು ಎಂದು ಪ್ರೇಮಾ ಹೇಳುತ್ತಾರೆ.
ಕೇವಲ ಎರಡು ಸಾವಿರ ರೂ. ತಿಂಗಳಿಗೆ ದುಡಿಯುತ್ತಿದ್ದೇನೆ
ನನ್ನ ಪತಿ ವಾಸು ಅವರು ಕೂಲಿ ಕೆಲಸ ಮಾಡುತ್ತಿದ್ದರು. ನಾನು ಕೂಡ ಕೆಲಸ ಮಾಡುತ್ತಾ ಇದ್ದೆ. ಅವರಿಲ್ಲದೆ ನಾನಿಲ್ಲ ಎಂಬ ರೀತಿ ಅನೋನ್ಯವಾಗಿದ್ದೆವು. ಅವರನ್ನು ಮರೆಯೋಕೆ ಆಗಲ್ಲ. ಈಗಲೂ ನೆನೆದುಕೊಂಡು ಅಳುತ್ತೇನೆ. ಅವರು ಹೋದ ನಂತರ ನನಗೂ ಆರೋಗ್ಯ ಸಮಸ್ಯೆ ಎದುರಾಗಿದೆ. ಈಗೀಗ ಒಂದು ಕಡೆ ಕೆಲಸ ಹುಡುಕಿಕೊಂಡಿದ್ದೇನೆ. ‘ತಿಂಗಳಿಗೆ ಎರಡು ಸಾವಿರ ರೂ. ಕೊಡ್ತಾರೆ. ಜೊತೆಗೆ ಸಾಲ ಮಾಡಿ ಜೀವನ ಮಾಡುತ್ತೇನೆ. ಹೆಂಗೋ ಜೀವನ ನಡೆಸಬೇಕಲ್ವಾ? ಹೊಟ್ಟೆಪಾಡು ಎಂದು ಪತಿಯನ್ನು ಕಳೆದುಕೊಂಡ ಪ್ರೇಮಾ ನೋವು ವ್ಯಕ್ತಪಡಿಸುತ್ತಾರೆ.