ಸೋಮನಹಳ್ಳಿಯಿಂದ ದಿಲ್ಲಿಯವರೆಗೆ ಎಸ್.ಎಂ.ಕೃಷ್ಣ ಮಾದರಿ ನಡೆ

Update: 2024-12-14 12:13 GMT

 ಎಸ್.ಎಂ.ಕೃಷ್ಣ

✍️ಚಿಕ್ಕೋನಹಳ್ಳಿ ಕರೀಗೌಡ, ಐ.ಎ.ಎಸ್.

ಮದ್ದೂರಿನ ಸೋಮನಹಳ್ಳಿ ನಮ್ಮ ತಾಲ್ಲೂಕಿನ ಜನರಿಗೆ ಚಿರಪರಿಚಿತ ಹೆಸರು. ಮಲ್ಲಯ್ಯ ಅವರಿಂದ ಮೊದಲುಗೊಂಡು ಎಸ್.ಎಂ.ಕೃಷ್ಣ ಅವರ ವರೆಗೆ ತಾಲ್ಲೂಕಿಗೂ ಮತ್ತು ಸೋಮನಹಳ್ಳಿಗೂ ಅಪಾರ ನಂಟು.

ಎಸ್.ಎಂ.ಕೃಷ್ಣರ ಅಂತ್ಯ ಸಂಸ್ಕಾರ ಅವರ ಬಗೆಗಿನ ನನ್ನ ಅನೇಕ ನೆನಪುಗಳನ್ನು ನೆನಪಿಸಿತು. ನಾನು ಹುಟ್ಟುವ ಒಂದು ದಶಕದ ಮೊದಲೇ ಎಸ್.ಎಂ.ಕೃಷ್ಣ ಶಾಸನ ಸಭೆಯ ಸದಸ್ಯರಾಗಿದ್ದರು. ಮಂಡ್ಯ ಜಿಲ್ಲೆಯ ಜನತೆ ವರ್ತನೆಯಲ್ಲಿ ಒರಟರಂತೆ ಕಂಡರೂ ಕಬ್ಬಿನ ರಸದಂತೆ ಸಿಹಿ ಮನಸ್ಸು ಉಳ್ಳವರು, ರಾಜಕೀಯ ಪ್ರಜ್ಞೆ ಹೊಂದಿದವರು. ಸ್ವಾತಂತ್ರ್ಯದ ನಂತರ 90 ದಶಕದವರೆಗೆ ಮಂಡ್ಯ ರಾಜಕಾರಣದಲ್ಲಿ ಹೋರಾಟ, ಸಾಮಾಜಿಕ ಮೌಲ್ಯದ ಕಳಕಳಿಯ ಮತ್ತು ಸೇವಾ ಮನೋಭಾವದ ಹಿನ್ನೆಲೆಯ ಧುರೀರಣರು ಮುಂಚೂಣಿಯಲ್ಲಿ ಇದ್ದರು.

ಶಂಕರೇಗೌಡ, ಮಾದೇಗೌಡ, ಚೌಡಯ್ಯ, ಎಚ್.ಟಿ.ಕೃಷ್ಣಪ್ಪ, ಕೆ.ಆರ್.ಪೇಟೆ ಕೃಷ್ಣ, ರೈತ ಸಂಘದ ಪುಟ್ಟಣ್ಣಯ್ಯ ಅವರಂತಹ ಮುತ್ಸದ್ದಿಗಳು ಆರಿಸಿ ಬರುತ್ತಿದ್ದರು. ಕುಂವೆಂಪು ಅವರ ವಿಶ್ವ ಮಾನವ ಸಂದೇಶದ ಪ್ರಭಾವಳಿಯಲ್ಲಿ ಮಿಂದಿದ್ದ ಮಂಡ್ಯ ಜತ್ಯಾತೀತವಾಗಿ ರಾಜ್ಯ ರೈತ ಸಂಘದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ವಿಚಾರವಾದಿ ಪಿ.ಲಂಕೇಶರನ್ನು ಬೆಂಬಲಿಸಿದ್ದು ಅತಿಶಯೋಕ್ತಿ ಅಲ್ಲ.

ಈ ರೀತಿಯ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆಯ ಮದ್ದೂರಿನ ಜನತೆ ವಿದೇಶದಿಂದ ಹಿಂದಿರುಗಿ ಬಂದ ಎಸ್.ಎಂ.ಕೃಷ್ಣ ಅವರು ಅಂದಿನ ಪ್ರಭಾವಿ ಸಚಿವ ಎಚ್.ಕೆ.ವೀರಣ್ಣಗೌಡರನ್ನು ಸೋಲಿಸಿ ವಿಧಾನ ಸಭೆ ಪ್ರವೇಶಿಸಿದ್ದು ಆ ದಿನಮಾನಗಳಲ್ಲಿ ಬಹುದೊಡ್ಡ ಚರ್ಚಿತ ವಿಷಯವಾಗಿತ್ತು. ಗೆಲುವನ್ನು ಅಧಿಕಾರವೆಂದು ಭಾವಿಸದೆ, ಜವಾಬ್ದಾರಿ ಎಂದು ವಿನಮ್ರತೆಯಿಂದ ಸ್ವೀಕರಿಸಿ ಕೊನೆವರೆಗೂ ವಿನಿತ ಭಾವನೆಯನ್ನು ಜತನದಿಂದ ಕಾಪಿಟ್ಟಿಕೊಂಡಿದ್ದು ಕೃಷ್ಣರ ಬಹುದೊಡ್ಡ ಹೆಗ್ಗಳಿಕೆ.

ರೇಡಿಯೋ, ಟಿ.ವಿ, ಸಾಮಾಜಿಕ ಮಾಧ್ಯಮಗಳ ಪ್ರಭಾವ ಇಲ್ಲದ ಆ ಕಾಲದ ನಮ್ಮೂರುಗಳಲ್ಲಿ ಚುನಾವಣೆ ಒಂದೇ ಸಾರ್ವಜನಿಕ ಚರ್ಚಿತ ವಿಷಯವಾಗಿರುತಿತ್ತು. ಎಸ್.ಎಂ.ಕೃಷ್ಣರ ವಿದೇಶಿ ಶಿಕ್ಷಣ, ಸೌಮ್ಯ ಸ್ವಾಭಾವ ಮತ್ತು ಸ್ಪುರದ್ರೂಪಿ ದೈಹಿಕ ರೂಪ, ಮಿತ ಭಾಷಿ, ಕನ್ನಡ ಮತ್ತುಇಂಗ್ಲೀಷ್ ಭಾಷೆಯ ಮೇಲಿನ ಪ್ರಭುದ್ದತೆಯ ಹಿಡಿತ, ವಿಶ್ವ ಪರ್ಯಟನೆಯ ಅನುಭವ, ಸ್ಥಿತ ಪ್ರಜ್ಞಾ ಭಾವನೆಯು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದೆವು. ಕೃಷ್ಣರ ಗುಣಗಳು ಸಾಮಾನ್ಯ ಜನರ ಮಾತಿನಲ್ಲಿ ಮೇಳೈಸಿದ್ದವು.

ಎಸ್.ಎಂ.ಕೃಷ್ಣ ಅವರು ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡುತ್ತಿದ್ದುದ್ದು. ನಂತರದ ದಿನಗಳಲ್ಲಿ ರಾಜಕೀಯ ನೆನೆಗುದಿಗೆ ಬೀಳುತ್ತಿತ್ತು. ನಾಡಿನ ಮತ್ತು ಕ್ಷೇತ್ರದ ಅಭಿವೃದ್ಧಿ ಮತ್ತು ಸಾಮಾಜಿಕ ಕಳಕಳಿ ಮುಂಚೂಣಿಗೆ ಬರುತ್ತಿದ್ದವು. 60 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಒಮ್ಮೆಯೂ ಪೋಲೀಸ್ ಠಾಣೆಗೆ ಕರೆಮಾಡಿ ಪ್ರಭಾವ ಬೀರಿಲ್ಲವೆಂಬುದು ಸತ್ಯವಾದರೂ ಇಂದಿನ ಜನಾಂಗದ ರಾಜಕಾರಣಿಗಳಿಗೆ ಮತ್ತು ಸಾರ್ವಜನಿಕರಿಗೆ ಆಶ್ಚರ್ಯವಾಗಬಹುದು.

1989ರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನಮ್ಮೂರಿನ ಪಕ್ಕದ ಗ್ರಾಮವೊಂದರಲ್ಲಿ ಎರಡು ಗುಂಪುಗಳ ನಡುವೆ ಮಾರಾ ಮಾರಿಯಾಗಿ ಜನ ಎಸ್. ಎಂ.ಕೃಷ್ಣ ಅವರನ್ನು ಎಳೆದಾಡಿದರು. ಬಟ್ಟೆ ಹರಿಯಿತು, ಕತ್ತಿನ ಭಾಗದಲ್ಲಿ ಬೆರಳಿನ ಉಗುರಿನಿಂದ ಪರಚಿದ ಗಾಯಗಳಾದವು. ಆಗಲೂ ಕೂಡ ಕೃಷ್ಣ ದ್ವೇಷ ಸಾಧಿಸಲಿಲ್ಲ. ಪೋಲೀಸರಿಗೆ ಕರೆ ಮಾಡಲಿಲ್ಲ. ವೇಷ ಭೂಷಣಗಳಲ್ಲಿ ಫ್ಯಾಷನ್ ಐಕಾನ್ ಆಗಿದ್ದ ಎಸ್. ಎಂ.ಕೃಷ್ಣ ಏನೂ ನಡೆದೇ ಇಲ್ಲವೆಂಬಂತೆ ಕತ್ತಿನ ಭಾಗ ಮುಚ್ಚುವಂತೆ ಸ್ಪೆಟರ್ ಧರಿಸಿ ವ್ಯಕ್ತಿತ್ವ ಹೆಚ್ಚಿಸಿಕೊಂಡಿದ್ದು ನಮಗೆಲ್ಲ ಮರೆಯಲಾಗದ ಘಟನೆ. ಮತ ಬಿಕ್ಷೆ ನೆಪದಲ್ಲಿ ಎಂದೂ ಜಾತಿಗಳನ್ನು ಒಡೆಯಲಿಲ್ಲ, ಧರ್ಮಗಳ ನಡುವೆ ಬಿರುಕು ಮೂಡಿಸಲ್ಲಿಲ್ಲ ಎಸ್.ಎಂ.ಕೃಷ್ಣ.

ಸಾರ್ವಜನಿಕ ಜೀವನದ ಚುನಾವಣ ರಾಜಕೀಯದಲ್ಲಿ ಏಳು ಬೀಳುಗಳನ್ನು ಸಮಚಿತ್ತದಿಂದ ಸ್ವೀಕರಿಸಿದರು. ಅಧಿಕಾರ ಸಿಕ್ಕಾಗ ಸಮರ್ಥವಾಗಿ ಜವಾಬ್ದಾರಿಯನ್ನು ನಿರ್ವಹಿಸಿದರು. ಸಂವಿಧಾನದಡಿ ಇರುವ ನಾಲ್ಕು ಸದನಗಳಾದ ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯ ಸಭೆ ಸದಸ್ಯರಾಗಿ ಅಪಾರ ಅನುಭವ ಹೊಂದಿದ್ದ ಎಸ್.ಎಂ.ಕೃಷ್ಣ ಅವರಿಗೆ ಮುಖ್ಯ ಮಂತ್ರಿ ಅವಧಿಯಲ್ಲಿ ಎದುರಿಸಿದ ಸವಾಲುಗಳು ಬೆಟ್ಟದಷ್ಟು.

ಮೂರು ವರ್ಷಗಳ ತೀವ್ರ ಬರ, ರಾಜಕುಮಾರ್ ಅಪಹರಣ, ಕಾವೇರಿ ಬಿಕ್ಕಟ್ಟು, ಅವರ ಸಾಮಥ್ಯಗಳನ್ನು ಪರೀಕ್ಷೆಗೆ ಒಡ್ಡಿದ್ದವು. 108 ದಿನಗಳ ಕಾಲ ವೀರಪ್ಪನ್ ಅಪಹರಣದಿಂದ ಕಾಡಿನಲ್ಲಿ ವಾಸವಿದ್ದು, ರಾಜ್‌ಕುಮಾರ್ ನಾಡಿಗೆ ಹಿಂತಿರುಗುವ ವರೆಗೆ ಎಸ್.ಎಂ.ಕೃಷ್ಣ ನೆಮ್ಮದಿಯಾಗಿ ನಿದ್ದೆ ಮಾಡಲಿಲ್ಲ. ಅನೇಕ ಸವಾಲುಗಳ ನಡುವೆಯು ಯಶಸ್ವಿನಿ, ಮಹಿಳೆಯರ ಸ್ವ-ಸಹಾಯ ಸಂಘ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿ.

ಕ್ಷೇತ್ರದ ರೈತರ ಹಿತಾಸಕ್ತಿಯ ಕಾಪಾಡುವ ನಿಟ್ಟಿನಲ್ಲಿ ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದರು. ರಾಜ್ಯದ ಯುವ ಜನಾಂಗದ ಪ್ರತಿಭಾ ಪಲಾಯನ ತಪ್ಪಿಸಲು ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ದೃಷ್ಟಿಯಿಂದ ಐ.ಟಿ, ಬಿ.ಟಿ ಕ್ಷೇತ್ರಕ್ಕೆ ಒತ್ತು ಕೊಟ್ಟರು. ಇಡೀ ವಿಶ್ವವೇ ಬೆಂಗಳೂರಿನತ್ತ ತಿರುಗುವಂತೆ ಮಾಡಿದ್ದು ಎಸ್.ಎಂ.ಕೃಷ್ಣ.

ಇಂದು ಲಕ್ಷಾಂತರ ಮಧ್ಯಮ ವರ್ಗದ ಬದಕು ಅಸನಾಗಿದ್ದರೆ ಎಸ್.ಎಂ.ಕೃಷ್ಣರ ದೂರ ದೃಷ್ಟಿಯ ಫಲ. ಸುಧಾರಣೆ ಎಂದರೆ ವ್ಯಕ್ತಿ ಕೇಂದ್ರಿತ ಯೋಜನೆಗಳಲ್ಲ, ಸಾಂಸ್ಥಿಕ ವ್ಯವಸ್ಥೆಯ ಸುಧಾರಣೆ ಎಂದು ಅರಿತ್ತಿದ್ದ ಎಸ್.ಎಂ.ಕೃಷ್ಣ ಸಾರ್ವಜನಿಕ ಖರೀದಿ ಸಂಗ್ರಹಣಾ ವ್ಯವಸ್ಥೆಯಲ್ಲಿ ಕಾಯ್ದೆ ಜಾರಿಗೆ ತಂದರು. ಇದರಿಂದ ಟೆಂಡರ್’ಗಳಲ್ಲಿ ಪಾರದರ್ಶಕತೆ ಬಂತು. ಪಹಣಿ, ಖಾತೆಗಳ ವಿಷಯಗಳಲ್ಲಿ ರೈತರ ಹಣೆ ಬರಹವನ್ನೆ ಬದಲಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಗಳ ಹಸ್ತಕ್ಷೇಪವನ್ನು ತಡೆಗಟ್ಟಲು ಆನ್ ಲೈನ್ ಭೂಮಿ ಯೋಜನೆ ಜಾರಿಗೆ ತಂದರು. ಕೈಬರಹದ ಪಹಣಿ ರದ್ದಾಯಿತು. ತೇಲಗಿಯ ಛಾಪಾಕಾಗದ ಹಗರಣದಿಂದ ಸೋರಿಕೆಯಾಗುತ್ತಿದ್ದ ನೋಂದಣಿ ಮುದ್ರಾಂಕ ಶುಲ್ಕ ತಡೆಗಟ್ಟಲು ಕಾವೇರಿ ಯೋಜನೆ ಜಾರಿಗೆ ತಂದರು. ಇಂದು ಇಡೀ ದೇಶದಲ್ಲೇ ಕಂದಾಯ ಇಲಾಖೆಯ ಭೂಮಿ, ಕಾವೇರಿ ಮತ್ತು ಆನ್ ಲೈನ್ ಟೆಂಡರ್ ವ್ಯವಸ್ಥೆಗಳು ಜಾರಿಯಲ್ಲಿದ್ದರೆ ಅದಕ್ಕೆ ಮೂಲ ಕಾರಣ ಪುರುಷ ಎಸ್.ಎಂ.ಕೃಷ್ಣ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಮೂಲಭೂತ ಸೌಕರ್ಯ ವಿಸ್ತರಣೆ ಮತ್ತು ಫ್ಲೈ ಓವರ್ ನಿರ್ಮಾಣಕ್ಕೆ ಒತ್ತು ಕೊಟ್ಟರು. ದೇವನಹಳ್ಳಿಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಿಸಿದರು. ವಿಶ್ವ ಭೂಪಟದಲ್ಲಿ ಬೆಂಗಳೂರು ಸ್ಥಾನವನ್ನು ಮೇಲ್ದರ್ಜೆಗೆ ಏರಿಸಲು ‘ಬೆಂಗಳೂರನ್ನು ಸಿಂಗಪೂರ ಮಾಡುವೆ’ ಎಂದಾಗ ಅಪಹಾಸ್ಯ ಮಾಡಿದವರೇ ಹೆಚ್ಚು. ಈ ಕನಸು ಪೂರ್ತಿ ಸಾಕಾರ ವಾಗಿಲ್ಲದಿದ್ದರು ಇಂದು ಬೆಂಗಳೂರು ದೆಹಲಿ ನಂತರ ಅತಿ ಹೆಚ್ಚು ತೆರಿಗೆ ಸಂಗ್ರಹ ಮತ್ತು ಹೆಚ್ಚು ನವೋಧ್ಯಮಗಳ ತವರಾಗಿರುವುದು ಎಸ್.ಎಂ.ಕೃಷ್ಣರ ಕನಸಿನ ಫಲ.

ಸಾರ್ವಜನಿಕ ಜೀವನದೂದ್ದಕ್ಕೂ ವೈಯಕ್ತಿಕ ಭಾವನೆಗಳನ್ನು ಎರಡು ಸಂದರ್ಭಗಳನ್ನು ಹೊರತುಪಡಿಸಿದರೆ ಮತ್ಯಾವುದೇ ಸಮಯದಲ್ಲೂ ವ್ಯಕ್ತಪಡಿಸಿದ್ದಿಲ್ಲ. ಒಂದು ದಿನ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡಿಗೆ ಆನಂದ ಬಾಷ್ಪದೊಂದಿಗೆ ಮನದುಂಬಿ ನಕ್ಕಿದ್ದರು. ಮತ್ತೊಮ್ಮೆ ಅಳಿಯ ಸಿದ್ಧಾರ್ಥರ ಅಂತ್ಯ ಸಂಸ್ಕಾರದ ಸಮಯದಲ್ಲಿ ಕಣ್ಣೀರು ಹಾಕಿದ್ದು ಬಿಟ್ಟರೆ ಸಾರ್ವಜನಿಕ ಬದುಕಿನಲ್ಲಿ ಮೇಲ್ಪಂಕ್ತಿಗೆ ಕೃಷ್ಣ ಮಾದರಿ. ಯಾರನ್ನೂ ವೈಯಕ್ತಿಕವಾಗಿ ನಿಂದಿಸದ ಮತ್ತು ತನ್ನನ್ನು ವೈಯಕ್ತಿಕವಾಗಿ ನಿಂದಿಸಿದರೂ ಕೂಡ ತಲೆಕೆಡಿಸಿಕೊಳ್ಳದ ಎಸ್.ಎಂ.ಕೃಷ್ಣ ಸಮಕಾಲಿನ ರಾಜಕಾರಣಕ್ಕೆ ಹಾಗೂ ಸಜ್ಜನಿಕೆಗೆ ಮಾದರಿಯಾಗಿದ್ದಾರೆ.

ಅಗಾಧ ಓದು, ಸಂಗೀತ, ತಬಲ ಮತ್ತು ಸಾಂಸ್ಕೃತಿಕ ವಲಯದಲ್ಲಿನ ಆಸಕ್ತಿ ಕೃಷ್ಣ ಅವರ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಅಮೇರಿಕದಲ್ಲಿ ವಿದ್ಯಾರ್ಥಿ ದಿನಗಳಲ್ಲಿ ಜಾನ್ ಎಫ್.ಕೆನಡಿ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕೃಷ್ಣರಿಗೆ ಕನ್ನಡದ ಕುವೆಂಪು, ಕಾರಂತರು, ತೇಜಸ್ವಿ, ರಾಜ್ ಕುಮಾರ್ ಅವರ ಅಭಿಮಾನಿಯಾಗಿ ಕನ್ನಡದ ಅಸ್ಮಿತೆಯನ್ನು ಮೈಗೂಡಿಸಿಕೊಂಡಿದ್ದರು. ಇಂತಹ ಮೇರು ವ್ಯಕ್ತಿತ್ವದ ಎಸ್.ಎಂ.ಕೃಷ್ಣ ಅವರು ಮೃತ ಪಟ್ಟಾಗ ವಿಧಾನ ಮಂಡಲದ ಎರಡೂ ಸದನಗಳು ಸಂತಾಪ ಸೂಚಿಸಿ, ಕಲಾಪ ಮೊಟುಕುಗೊಳಿಸಿ ಒಂದು ದಿನ ಸಾರ್ವತ್ರಿಕ ರಜೆ ಮತ್ತು ಮೂರು ದಿನ ಶೋಕಾಚರಣೆ ಆಚರಿಸಿದ್ದು, ಇಡೀ ರಾಜ್ಯ ಮರುಕಪಟ್ಟಿದ್ದು ಕನ್ನಡಿಗರ ಹೃದಯ ವೈಶಾಲ್ಯತೆಯನ್ನು ತೋರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಮತ್ತು ವಿರೋಧ ಪಕ್ಷಗಳ ನಾಯಕರ ನಡೆ ರಾಜಕೀಯದ ಜಿದ್ದಾಜಿದ್ದಿನ ಆಚೆಗೂ ಒಂದು ಬದುಕಿದೆ ಎಂಬುದನ್ನು ತೋರಿಸುವ ಮೂಲಕ ಕರ್ನಾಟಕದ ರಾಜಕೀಯ ಭವಿಷ್ಯದ ಬಗ್ಗೆ ಭರವಸೆಯ ಬೆಳಕು ಮೂಡಿಸಿದೆ.

ಗುರುವಿನ ಅಂತ್ಯ ಸಂಸ್ಕಾರದಲ್ಲಿ ಎಸ್.ಎಂ.ಕೃಷ್ಣ ಅವರು ತನ್ನ ತಂದೆಯಂತೆ ಎಂದು ಮುಂದೆ ನಿಂತು ಎಲ್ಲಾ ಕಾರ್ಯ ನೆರವೇರಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿದೆ.

ಸಕಲ ಸರಕಾರಿ ಗೌರವಗಳೊಂದಿಗೆ ನಡೆದ ಅಂತ್ಯ ಸಂಸ್ಕಾರದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಾಡಿನ ಮಠಾಧೀಶರು ಹಾಗೂ ಪಕ್ಷಾತೀತವಾಗಿ ರಾಜಕಾರಣಿಗಳು, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿದ್ದು ಕರ್ನಾಟಕದ ದ್ವೇಷ ರಹಿತ ಶಾಂತಿ ಪ್ರಿಯ ಜನರ ನಡವಳಿಕೆಗೆ ಸಾಕ್ಷಿಯಾಗಿದ್ದವು.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News