ಕಾವೇರಿ ತೀರದ ಕನಸುಗಾರ, ಅಭಿವೃದ್ಧಿಯ ಹರಿಕಾರ, ಸೊಗಸುಗಾರ ಎಸ್.ಎಂ. ಕೃಷ್ಣ
ರಾಜಕೀಯದಲ್ಲಿ ನಾವಿನ್ನು ಪೈರುಗಳಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಅಗಾಧ ಮರವಾಗಿ ಬೆಳೆದು ನಿಂತಿದ್ದವರು ಎಸ್.ಎಂ. ಕೃಷ್ಣ. 1989ರಲ್ಲಿ ನಾನು ಸಾತನೂರಿನಿಂದ ಗೆದ್ದು ಶಾಸಕನಾಗಿದ್ದೆ.
ಆಗ ವಿಧಾನಸಭೆಯ ಸ್ಪೀಕರ್ ಹುದ್ದೆಯಲ್ಲಿ ಮಿಂಚಿ, ನಮಗೆಲ್ಲ ರಾಜಕೀಯದ ಪಾಠ ಮಾಡಿದವರು. ಅಚ್ಚುಕಟ್ಟುತನ, ಸಂಯಮ, ಜಾಣ್ಮೆ, ನಯ ನಾಜೂಕು, ಆಡಳಿತ-ವಿರೋಧ ಪಕ್ಷ ಎನ್ನದೆ ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಸ್ಪೀಕರ್ ಹುದ್ದೆಗೆ ಘನತೆ ತಂದವರು. ವ್ಯಂಗ್ಯಭರಿತ ಮೊನಚು ಮಾತುಗಳಿಂದ ಇಬ್ಬರಿಗೂ ಅವರು ಹೂಡುತ್ತಿದ್ದ ಬಾಣ ಗುರಿ ತಪ್ಪುತ್ತಿರಲಿಲ್ಲ . ಅವರ ವಾಕ್ಚಾತುರ್ಯಕ್ಕೆ ತಲೆದೂಗದವರೇ ಇಲ್ಲ!
ಕಾವೇರಿ ತೀರದ ಕನಸುಗಾರ, ಸೊಗಸುಗಾರ, ಅಭಿವೃದ್ಧಿಯ ಹರಿಕಾರ. ಮೂವತ್ತನೇ ವಯಸ್ಸಿಗೆ ವಿಧಾನಸಭೆ ಪ್ರವೇಶ ಮಾಡಿದ ಸೈಲೆಂಟ್ ಲೀಡರ್ ಎಸ್.ಎಂ. ಕೃಷ್ಣ ಅವರು. ಎಂಥದೇ ಪರಿಸ್ಥಿತಿಯಲ್ಲೂ ಧೃತಿಗೆಡದ ಸ್ಥಿತಪ್ರಜ್ಞ. ಕರ್ನಾಟಕದ ರಾಜಕೀಯ ಕಂಡ ವಿಭಿನ್ನ, ವಿಶಿಷ್ಟ ವ್ಯಕ್ತಿ. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ - ಹೀಗೆ ನಾನಾ ವಿದ್ವತ್ತುಗಳು ಮೇಳೈಸಿದ ವ್ಯಕ್ತಿತ್ವ. ರಾಜಪ್ರಭುತ್ವ ಹಾಗೂ ಪ್ರಜಾಪ್ರಭುತ್ವವನ್ನು ಕಂಡಿದ್ದ ಮನೆತನದ ಕೊಂಡಿ. ವಿದೇಶಾಂಗ ಸಚಿವರಾಗಿದ್ದಾಗ ಭಾರತದ ಸಾರ್ವಭೌಮತ್ವ ಎತ್ತಿ ಹಿಡಿದ ’ಸಂವಿಧಾನ ಪ್ರೇಮಿ’!
ಸರಕಾರಿ ಶಾಲಾ ಮಕ್ಕಳ ಹಸಿವು ಕಣ್ಣಾರೆ ಕಂಡು ಮರುಗಿದ ‘ಮಾತೃ ಹೃದಯಿ’. ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಆರ್ಥಿಕ ಕಷ್ಟ ದೂರ ಮಾಡಬೇಕು ಎಂದು ಆಲೋಚಿಸಿದವರು. ‘ಕರ್ನಾಟಕ ಕಂಗೊಳಿಸುತ್ತಿದೆ’ ಎನ್ನುವ ಘೋಷವಾಕ್ಯದ ಮೂಲಕ ಕರ್ನಾಟಕಕ್ಕೆ ಬ್ರಾಂಡ್ ಮೌಲ್ಯ ತಂದುಕೊಟ್ಟ ವ್ಯವಹಾರ ಚತುರ.
ಗಾಂಧಿವಾದಿಯಾಗಿದ್ದ ತಂದೆ ಮಲ್ಲಯ್ಯ ಅವರಿಂದ ಬಳುವಳಿಯಾಗಿ ಬಂದಿದ್ದ ಸಜ್ಜನಿಕೆ ಅವರನ್ನು ದೂರದೃಷ್ಟಿಯ ನಾಯಕನನ್ನಾಗಿ ಮಾಡಿತು. ವಿದೇಶ ಶಿಕ್ಷಣ ವರ್ಣರಂಜಿತ ವ್ಯಕ್ತಿತ್ವವನ್ನು ರೂಪಿಸಿತು. ಆದರೆ, ಹಳ್ಳಿ ಮತ್ತು ನಗರವಾಸಿಗಳ ಬಗ್ಗೆ ಅವರಿಗಿದ್ದ ಸಮಾನ ಭಾವ, ಅವರ ಅನೇಕ ತೀರ್ಮಾನಗಳು, ನಿಲುವುಗಳು ನನಗೆ ಅವರಲ್ಲೊಬ್ಬ ‘ರಾಜಕೀಯ ಸಂತ’ನ ದರ್ಶನ ಮಾಡಿಸಿದೆ.
ಅಜಾತಶತ್ರುವಾಗಿ ರಾಜಕೀಯದ ಒಂದೊಂದೇ ಮೆಟ್ಟಿಲುಗಳನ್ನು ಸಾವಧಾನವಾಗಿ ಏರಿದ ಕೃಷ್ಣ ಅವರು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಇಡೀ ಜಗತ್ತೇ ತಿರುಗಿನೋಡುವಂತೆ ಪರಿವರ್ತಿಸಿದರು. ಐಟಿಬಿಟಿ ಮೂಲಕ ಬೆಂಗಳೂರನ್ನು ಸಿಲಿಕಾನ್ ಸಿಟಿಯಾಗಿಸಿ ದೇಶದ ಆರ್ಥಿಕತೆಗೆ ಅತಿದೊಡ್ಡ್ದ ಕೊಡುಗೆ ಸಿಗುವಂತೆ ಮಾಡಿದವರು ಎಸ್.ಎಂ. ಕೃಷ್ಣ ಅವರು.
ದ್ವಾಪರಯುಗದ ಕೃಷ್ಣನ ಬಗ್ಗೆ ಕಥೆಗಳಲ್ಲಿ ಕೇಳಿದ್ದೇವೆ, ಓದಿದ್ದೇವೆ. ರಾಜಕೀಯ ಚಾಣಾಕ್ಷತೆ, ಸತ್ಯನಿಷ್ಠೆ ವಿಚಾರದಲ್ಲಿ ಆ ಕೃಷ್ಣನ ಪ್ರತಿರೂಪವೇ ನಮ್ಮ ಈ ಕೃಷ್ಣ.
ರಾಜ್ಯದ ವಿಚಾರ ಬಂದಾಗ ಎಲ್ಲಾ ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸರ್ವರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು. ಸದಾ ಅಭಿವೃದ್ಧಿ, ರಾಷ್ಟ್ರ ಹಾಗೂ ರಾಜ್ಯದ ಪರ ಯೋಚನೆ ಮಾಡುತ್ತಿದ್ದ ಕಾಯಕ ಜೀವಿ. ಕಾವೇರಿ ವಿಚಾರದಲ್ಲಿ ಅಧಿಕಾರ ಹೋದರೂ ಚಿಂತೆಯಿಲ್ಲ ಎಂದು ನಾಡಿನ ಹಿತಕ್ಕಾಗಿ ಹೋರಾಡಿದರು.
ಹಿಂದೆ ಎಸ್.ಎಂ. ಕೃಷ್ಣ ಅವರ ಜನ್ಮದಿನದಂದು ಅವರ ಜೊತೆ ಪುಟ್ಟಪರ್ತಿಗೆ ತೆರಳಿದ್ದೆ. ನನ್ನನ್ನು ಕಂಡ ಸಾಯಿಬಾಬಾ ಅವರು ಎಸ್.ಎಂ. ಕೃಷ್ಣ ಅವರನ್ನು ಉದ್ದೇಶಿಸಿ, ‘‘ನೀನು ಈ ಹುಡುಗನನ್ನು ಬಿಡುವುದಿಲ್ಲ, ಕೊನೆಯವರೆಗೂ ಜತೆಯಲ್ಲೇ ಉಳಿಸಿಕೊಳ್ಳುವೆ’’
ಎಂದರು. ಅವರು ಯಾವ ಅರ್ಥದಲ್ಲಿ ಇದನ್ನು ಹೇಳಿದ್ದರೋ ಗೊತ್ತಿಲ್ಲ, ಅವರ ಮಾತಂತೂ ನಿಜವಾಯಿತು. ರಾಜಕೀಯ ಮೀರಿಯೂ ಕೊನೆಗಾಲದವರೆಗೂ ಅವರ ಜತೆಯಲ್ಲೇ ಇದ್ದೆ ಎಂಬುದೇ ನನ್ನ ಸೌಭಾಗ್ಯ.
ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದಿರುವ ಡಿ.ಕೆ. ಶಿವಕುಮಾರ್ ಎಸ್.ಎಂ. ಕೃಷ್ಣ ಅವರ ನೀಲಿ ಕಣ್ಣಿನ ಹುಡುಗನಾಗಿದ್ದಾರೆ ಎಂದು ಮಾಧ್ಯಮಗಳು, ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡಿದ್ದರು. ಆದರೆ ನಾನು ಕೃಷ್ಣ ಅವರ ಕಣ್ಣುಗಳಲ್ಲಿ ಅಭಿವೃದ್ಧಿ, ದೂರದೃಷ್ಟಿ, ಮುನ್ನೋಟ, ದೃಢತೆ, ರಾಜ್ಯ, ದೇಶದ ಅಭಿವೃದ್ಧಿ ಕುರಿತ ಆಲೋಚನೆ, ಕನಸುಗಳನ್ನು ನೋಡುತ್ತಿದ್ದೆ. ಇದಕ್ಕೆ ಪೂರಕವಾಗಿ ಈ ಘಟನೆ ನನಗೆ ಈಗಲೂ ನೆನಪಿದೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಮಾಜಿ ಸಿಎಂ ಜೆ.ಹೆಚ್. ಪಟೇಲರು ಮೊನೊ ರೈಲು ತರಲು ಮುಂದಾಗಿದ್ದರು. ಕೃಷ್ಣ ಅವರು ಸಹ ಮೊನೊ ರೈಲು ಪರವಾಗಿದ್ದರು. ಆಗ ನಾನು ಅದು ಬೇಡ, ಮೆಟ್ರೊ ರೈಲು ಬೇಕು ಎಂದು ಪಟ್ಟು ಹಿಡಿದೆ. ನಂತರ ವಿದೇಶಗಳಲ್ಲಿ ಮೆಟ್ರೋ ಬಗ್ಗೆ ಅಧ್ಯಯನ ಮಾಡಿ ವರದಿ ಕೊಟ್ಟೆ. ಅದರ ಆಧಾರದ ಮೇಲೆ ಮೆಟ್ರೊ ಬಗ್ಗೆ ಯೋಚನೆ ಮಾಡಿದರು. ಅಷ್ಟೇ ಅಲ್ಲದೇ ಅಂದಿನ ಕೇಂದ್ರ ಸಚಿವ ಅನಂತ ಕುಮಾರ್ ಅವರ ಜೊತೆ ದಿಲ್ಲಿಗೆ ಹೋಗಿ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ ಮೆಟ್ರೊ ರೈಲು ಯೋಜನೆ ತಂದರು. ಆಗ ನಾನೂ ಅವರ ಜತೆಗಿದ್ದೆ. ಯಾರು ಏನೇ ಹೇಳಿದರೂ ‘ನಮ್ಮ ಮೆಟ್ರೊ’ ಎಸ್.ಎಂ ಕೃಷ್ಣ ಅವರ ಕೊಡುಗೆ. ಅದೀಗ 10 ವರ್ಷಗಳನ್ನು ಪೂರೈಸಿದೆ.
ನನ್ನ ರಾಜಕೀಯ ಗುರು ಬಂಗಾರಪ್ಪ ಅವರು ತಮ್ಮ ಸಂಪುಟದಲ್ಲಿ ಬಂದೀಖಾನೆ ಸಚಿವನನ್ನಾಗಿ ಮಾಡಿ ಮೊದಲ ಬಾರಿಗೆ ನನಗೆ ಜವಾಬ್ದಾರಿ ಕೊಟ್ಟರು. ನಾನು ಇಲಾಖೆಯನ್ನು ನಿಭಾಯಿಸುತ್ತಿದ್ದ ರೀತಿ, ಪಕ್ಷ ನಿಷ್ಠೆ, ನನ್ನ ದುಡಿಮೆಯನ್ನು ಹತ್ತಿರದಿಂದ ಕಂಡ ಕೃಷ್ಣ ಅವರು ಮುಖ್ಯಮಂತ್ರಿಗಳಾದಾಗ ನನಗೆ ಅನೇಕ ಗುರುತರ ಜವಾಬ್ದಾರಿಗಳನ್ನು ನೀಡಿದರು. ನಗರಾಭಿವೃದ್ಧೀ ಸಚಿವನನ್ನಾಗಿ ಮಾಡಿದ್ದೂ ಈಗ ಇತಿಹಾಸ.
ಅವರು ನಿಭಾಯಿಸಿದ ಹುದ್ದೆಗಳನ್ನು ನಾನು ನಿಭಾಯಿಸಿದ್ದು ಮಾತ್ರ ಕಾಕತಾಳೀಯ
ವೀರಪ್ಪ ಮೊಯ್ಲಿ ಅವರು ಸಿಎಂ ಆಗಿದ್ದಾಗ ಕೃಷ್ಣ ಅವರು ಉಪಮುಖ್ಯಮಂತ್ರಿ. ಜೊತೆಗೆ ವಿದ್ಯುತ್ ಮತ್ತು ನೀರಾವರಿ ಸಚಿವರಾಗಿ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದರು. ಅವರು 25 ವರ್ಷಗಳ ಹಿಂದೆ ಅಡಿಪಾಯ ಹಾಕಿದ್ದ ಯೋಜನೆಗಳು ಮುಂದಿನ 50 ವರ್ಷಗಳ ದೂರದೃಷ್ಟಿಯನ್ನು ಹೊಂದಿವೆ. ಅವರು ನಿಭಾಯಿಸಿದ ಹುದ್ದೆ ಮತ್ತು ಖಾತೆಗಳನ್ನು ನಾನೂ ನಿಭಾಯಿಸಿದ್ದು, ನಿಭಾಯಿಸುತ್ತಿರುವುದು ಕಾಕತಾಳೀಯ.
ನಾನು ಇಂದು ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದೇನೆ. ನೀರಾವರಿ ಇಲಾಖೆಯ ಜವಾಬ್ದಾರಿ ವಹಿಸಿ ಕೊಂಡಿದ್ದೇನೆ. ಈ ಹಿಂದೆ ಇಂಧನ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಇದನ್ನೇ ನಾನು ಕಾಕತಾಳೀಯ ಎಂದು ಹೇಳಿದ್ದು.
ರಾಜಕಾರಣಿ ಆದವನು ಆ ಕ್ಷಣದ ಅಭಿಲಾಷೆಗಳಿಗಿಂತ ಭವಿಷ್ಯದ ಬೆಳವಣಿಗೆಯ ಮೇಲೆ ನಂಬಿಕೆ ಇಟ್ಟಿರಬೇಕು. ಈ ನೆಲದಗುಣವನ್ನು ಅರಿತು ಕೆಲಸ ಮಾಡಬೇಕು. ‘‘ಈ ದೇಶ ಎಂದರೆ ಕೇವಲ ಮಣ್ಣಲ್ಲ, ಜನ’’ ಎಂಬ ಕವಿ ಮಾತೊಂದಿದೆ. ಈ ಮಾತಿಗೆ ಅನ್ವರ್ಥದಂತೆ ಜನಸಾಮಾನ್ಯರ ಬದುಕಿನ ಏಳಿಗೆಗಾಗಿ ದುಡಿದವರು ಎಸ್.ಎಂ ಕೃಷ್ಣ.
ಕೃಷ್ಣ ಅವರ ಅವಧಿಯಲ್ಲಿ ಸಾವಿರಾರು ಸ್ತ್ರೀ ಶಕ್ತಿ ಸಂಘಗಳು ರಚನೆಯಾದವು. ರೈತರ ಜಮೀನಿನ ದಾಖಲೆಗಳು ಭೂಮಿತಂತ್ರಾಂಶದ ಮೂಲಕ ಡಿಜಿಟಲ್ ರೂಪ ಪಡೆದವು. ಲಕ್ಷಾಂತರ ರೈತರ, ಕಾರ್ಮಿಕರ ಮಕ್ಕಳು ಸಾಫ್ಟ್‌ವೇರ್ ಇಂಜಿನಿಯರ್ ಗಳಾದರು. ರೈತರ ಆರೋಗ್ಯ ಕಾಪಾಡಲು ಯಶಸ್ವಿನಿ ಜಾರಿಗೆ ತಂದು ಜನರ ಜೀವ, ಜೀವನ ಕಾಪಾಡಿದರು.
ಹಾಜರಾತಿ ಕುಸಿಯುತ್ತಿದ್ದ ವೇಳೆ ಮಕ್ಕಳನ್ನು ಶಾಲೆಗಳತ್ತ ಮರಳಿ ತರಲು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತಂದರು. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದಂತೆ ಎಸ್.ಎಂ. ಕೃಷ್ಣ ಅವರ ಯೋಜನೆಗಳ ಬಗ್ಗೆ ಹತ್ತಾರು ವ್ಯಾಖ್ಯಾನ ಬಂದವು. ಆದರೆ ಮೊದಲು ಉತ್ತರ ಕರ್ನಾಟಕ ಭಾಗದಲ್ಲಿ ಆರಂಭಿಸಿ, ನಂತರ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಯಿತು. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಯಿತು. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಯಿತು, ಹಸಿವಿನ ಪ್ರಮಾಣ ಕಡಿಮೆಯಾಯಿತು. 25 ವರ್ಷಗಳ ಹಿಂದೆ ಪ್ರಾರಂಭ ಮಾಡಿದ ಯೋಜನೆ ಇಂದಿಗೂ ಜೀವಂತವಾಗಿದೆ. 190 ಕಾಯ್ದೆಗಳನ್ನು ಜಾರಿಗೆ ತಂದ ಕೀರ್ತಿ ಕೃಷ್ಣ ಅವರದು.
ವಿಶ್ವೇಶ್ವರಯ್ಯ ನಾಲೆಯ ಆಧುನೀಕರಣ ಮಾಡಿ ಮದ್ದೂರು ತಾಲೂಕಿನ 30 ಸಾವಿರ ಎಕರೆ ಪ್ರದೇಶಕ್ಕೆ ಶಾಶ್ವತ ನೀರಾವರಿ ಸೌಲಭ್ಯ ನೀಡಿದರು. ಕೃಷ್ಣಜಲಭಾಗ್ಯ ನಿಗಮ ಸ್ಥಾಪನೆ ಮಾಡಿ ಉತ್ತರ ಕರ್ನಾಟಕ ಭಾಗದ ರೈತರ ಬಾಳಿಗೆ ಬೆಳಕಾದರು. ಇದರ ಜೊತೆಗೆ ಇಂಧನ ಇಲಾಖೆಗೆ ಸರ್ಜರಿ ಮಾಡಿ ಕತ್ತಲು ಓಡಿಸಿದರು. 1989 ರಿಂದ 1994ರ ಅವಧಿಯಲ್ಲಿ ಸುಮಾರು 1,100 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಿದರು. ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ನಾಲ್ಕನೇ ಘಟಕ, ಕಾಳಿನದಿ ಜಲವಿದ್ಯುತ್ ಸ್ಥಾವರದ ಮೂರನೇ ಘಟಕ, ಯಲಹಂಕ ಡೀಸೆಲ್ ಜನರೇಟರ್ ಸ್ಥಾವರ, ಕದ್ರಾ ಯೋಜನೆ, ಕೊಡಸಳ್ಳಿ ಯೋಜನೆ, ಗೇರುಸೊಪ್ಪ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿಗೆಂದೇ 1,200 ಕೋಟಿ ರೂ. ವೆಚ್ಚ ಮಾಡಿದ ಪರಿಣಾಮ ಕರ್ನಾಟಕ ರಾಜ್ಯ ಇಂದಿಗೂ ವಿದ್ಯುತ್ ಕೊರತೆ ಕಾಣದಂತೆ ಪ್ರತೀ ಮನೆಯ? ‘ಗೃಹಜ್ಯೋತಿ’? ಬೆಳಗುತ್ತಿದೆ. ಇSಅಔಒ ಸ್ಥಾಪನೆ ಮಾಡಿ ವಿದ್ಯುತ್ ಸುಧಾರಣಾ ಕಾಯ್ದೆ ಜಾರಿಗೆ ತಂದರು. ವಿದ್ಯುತ್ ಕಳ್ಳತನ ತಡೆಗೆ ಕಾನೂನು ರೂಪಿಸಿದರು.
ಪಾಂಚಜನ್ಯ ಯಾತ್ರೆಯ ಸ್ಫೂರ್ತಿ ಈಗಲೂ ನನ್ನಲ್ಲಿದೆ
ಕರ್ನಾಟಕದಲ್ಲಿ ಸೊರಗಿದ್ದ ಕಾಂಗ್ರೆಸ್ ಪಕ್ಷವನ್ನು 1996ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಸಂಘಟಿಸಿದರು, ಬಲ ತುಂಬಿದರು.? ‘ಪಾಂಚಜನ್ಯ’? ಯಾತ್ರೆ ಮೂಲಕ ರಾಜಕೀಯ ಕಹಳೆ ಮೊಳಗಿಸಿದರು. ಪ್ರತೀ ಊರಿಗೆ ಹೋದಾಗಲೂ ಅವರು ಹೇಳುತ್ತಿದ್ದ ಮಾತುಗಳನ್ನು ನಾನಿನ್ನ್ನೂ ಮರೆತಿಲ್ಲ. ‘‘ನಿಮ್ಮ ಊರಿಗೆ ನಾನು ಬಂದಾಗ ನಿಮ್ಮ ಹಾರ, ತುರಾಯಿ, ಶಾಲು ಬೇಡ. ಬದಲಾಗಿ ಪಕ್ಷ ಸಂಘಟನೆಗೆ ನಿಮ್ಮ ಸಹಕಾರ ನೀಡಿ ಸಾಕು’’ ಎನ್ನುತ್ತಿದ್ದರು.
ಕಾವೇರಿಗಾಗಿ ಅಧಿಕಾರ ಕಳೆದುಕೊಳ್ಳಲು ಮುಂದಾಗಿದ್ದರು
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ನೀರು ಹರಿಸಲೇಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಸಮಯ. ಒಂದು ಕ್ಷಣ ಕಣ್ಣು ಮುಚ್ಚಿ ಕುಳಿತವರು ಮರುಕ್ಷಣವೇ, ‘‘ಬನ್ನಿ ಮಂಡ್ಯವರೆಗೂ, ಕಾವೇರಿ ಉಳಿವಿಗಾಗಿ ಪಾದಯಾತ್ರೆ ಮಾಡೋಣ’’ ಎಂದು ಎದ್ದು ಕುಳಿತರು. 72ರ ವಯಸ್ಸಿನಲ್ಲೂ ಬಿಸಿಲನ್ನೂ ಲೆಕ್ಕಿಸದ ಅವರ ಉತ್ಸಾಹ ಕಂಡು ಬೆರಗಾಗಿದ್ದೆ.
ಅಧಿಕಾರ ಅವಧಿ ಮುಗಿಯುವ ಮೊದಲೇ ಚುನಾವಣೆಗೆ ಹೋಗುವ ವಿಚಾರವಾಗಿ ನಾನು ಕೃಷ್ಣ ಅವರಿಗೆ ಬಲವಾದ ಆಕ್ಷೇಪ ಸಲ್ಲಿಸಿದ್ದೆ. ಆದರೂ ಅವರು ನಿಲುವು ಬದಲಿಸಲಿಲ್ಲ. ಆರು ತಿಂಗಳು ಮುಂಚಿತವಾಗಿ ಚುನಾವಣೆಗೆ ಹೋದರು. ಕಾಂಗ್ರೆಸ್‌ಗೆ 65 ಸ್ಥಾನಗಳು ಮಾತ್ರ ಬಂದವು. ಅದಾದ ನಂತರ ಅವರ ಮನೆಗೆ ಹೋದೆ. ನಾನು ಚುನಾವಣೆ ವಿಚಾರದಲ್ಲಿ ನಿನ್ನ ಮಾತು ಕೇಳಬೇಕಿತ್ತು’’ ಎಂದರು. ಆದರೆ ಕಾಲ ಮಿಂಚಿತ್ತು, ಇತಿಹಾಸದ ಪುಟ ಸೇರಿತ್ತು.
ಸತತ ಬರ, ಕಂಬಾಲಪಲ್ಲಿ ದುರಂತ, ಕಾವೇರಿ ಸಮಸ್ಯೆ, ಡಾ. ರಾಜ್‌ಕುಮಾರ್ ಅವರ ಅಪಹರಣ ಮತ್ತಿತರ ಸವಾಲುಗಳ ಮಧ್ಯೆ ಆಡಳಿತ ನಿರ್ವಹಣೆಯಲ್ಲಿ ಯಶಸ್ಸು ಕಂಡು, ಕೃಷ್ಣ ಅವರ ಕಾಲ ಎಂದೇ ಜನ ಈಗಲೂ ಸ್ಮರಿಸುತ್ತಾರೆ. ಯಾವುದೇ ಆರೋಪಗಳಿಗೆ ತಲೆಕೆಡಿಸಿಕೊಳ್ಳದೆ, ಅಷ್ಟೇ ನಯವಾಗಿ ಎದುರಾಳಿಗಳಿಗೆ ಉತ್ತರಿಸುತ್ತಾ ‘‘ನಡೆಮುಂದೆ, ನಡೆಮುಂದೆ ನುಗ್ಗಿ ನಡೆಮುಂದೆ’’ ಎಂದು ಮುನ್ನುಗ್ಗಿದವರು ಎಸ್. ಎಂ. ಕೃಷ್ಣ.
ನಾವಿಂದು ಎಸ್.ಎಂ. ಕೃಷ್ಣ ಅವರ ಕಾರಣಕ್ಕೆ ಮೆಟ್ರೊದಲ್ಲಿ ಓಡಾಡುತ್ತಿದ್ದೇವೆ. ಜಗತ್ತಿನ ಎಲ್ಲಾ ಮೂಲೆಗಳಿಗೂ ಬೆಂಗಳೂರಿನಿಂದ ವಿಮಾನ ಸೌಲಭ್ಯ ಕಲ್ಪಿಸಿರುವ ದೇವನಹಳ್ಳಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲಿಯೇ ಉತ್ಕೃಷ್ಟವಾಗಿದೆ. ಇಡೀ ಐಟಿಬಿಟಿ ಜಗತ್ತು ಬೆಂಗಳೂರಿನಿಂದಲೇ ಉಸಿರಾಡುತ್ತಿದೆ. ಬೆಂಗಳೂರಿನ ಜನ ನಿರಾತಂಕವಾಗಿ ಕಾವೇರಿ ನೀರು ಕುಡಿಯುತ್ತಿದ್ದಾರೆ.
ವೈಟ್ ಕಾಲರ್ ರಾಜಕಾರಣಿ ಎಂದು ತಮ್ಮನ್ನು ಬಣ್ಣಿಸಿದಾಗ ನಸುನಕ್ಕು, ‘‘ನನ್ನಲ್ಲಿ ಮಂಡ್ಯ ಮಣ್ಣಿನ ಗುಣವಿದೆ’’ ಎಂದಿದ್ದರು. ಈ ಮಣ್ಣಿನ ಗುಣದ ರಾಜಕಾರಣಿ ಈಗ ದೈಹಿಕವಾಗಿ ಮಾತ್ರ ನಮ್ಮಿಂದ ದೂರಾಗಿದ್ದಾರೆ. ಆದರೆ ಹೆಮ್ಮರವಾಗಿ ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ದೇಶ, ರಾಜ್ಯದ ಬಗ್ಗೆ ಅವರ ಕನಸು, ಆಶಯಗಳನ್ನು ನೆನೆದು ಮುನ್ನಡೆಯೋಣ, ಅನುಷ್ಠಾನಕ್ಕೆ ತರೋಣ. ಅದುವೇ ನಿಜವಾಗಿಯೂ ನಾವು ಅವರಿಗೆ ಸಲ್ಲಿಸಬಹುದಾದ ನೈಜ ಶ್ರದ್ಧಾಂಜಲಿ.