ಮೀಸಲಾತಿಯ ಒಳವರ್ಗೀಕರಣ ಮತ್ತು ಅಲೆಮಾರಿ ಸಮುದಾಯಗಳು

Update: 2024-12-12 06:44 GMT

ಒಳಮೀಸಲಾತಿಯ ಕುರಿತು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನಿಂದಾಗಿ ಆಯಾ ರಾಜ್ಯ ಸರಕಾರಗಳು ತಕ್ಷಣವೇ ಮೀಸಲಾತಿಯ ಒಳವರ್ಗೀಕರಣವನ್ನು ಮಾಡ ಲೇಬೇಕಾದ ಒತ್ತಡದಲ್ಲಿವೆ. ಒಳಮೀಸಲಾತಿ ಜಾರಿಯಾಗಬೇಕು ಮತ್ತು ಮೀಸಲಾತಿ ಸೌಲಭ್ಯಗಳು ಸಮನಾಗಿ ಹಂಚಿಕೆಯಾಗಬೇಕು ಎಂಬದರಲ್ಲಿ ಯಾರಿಗೂ ತಕರಾರುಗಳಿರಬೇಕಿಲ್ಲ. ಕರ್ನಾಟಕ ಸರಕಾರ ಮೀಸಲಾತಿ ಒಳವರ್ಗೀಕರಣ ಮಾಡುವ ಸಲುವಾಗಿ ನೆರವಾಗಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ, ಈ ಆಯೋಗಕ್ಕೆ ಮೂರು ತಿಂಗಳ ಅವಧಿಯನ್ನು ನಿಗದಿ ಮಾಡಿದೆ. ಈ ಮೂರು ತಿಂಗಳ ಅವಧಿಯಲ್ಲಿ ಏಕಸದಸ್ಯ ಆಯೋಗವು ಕರ್ನಾಟಕದಲ್ಲಿರುವ 101 ಪರಿಶಿಷ್ಟ ಜಾತಿಗಳ ದತ್ತಾಂಶಗಳನ್ನು ಸಂಗ್ರಹಿಸಿ ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕಿದೆ. ಈ ಸಂದರ್ಭದಲ್ಲಿ ಮೂರು ಮುಖ್ಯ ವಿಷಯಗಳು ಚರ್ಚೆಯ ಮುಂಚೂಣಿಯಲ್ಲಿವೆ. 1. ನಾಗಮೋಹನ್ ದಾಸ್ ನೇತೃತ್ವದ ಏಕವ್ಯಕ್ತಿ ಆಯೋಗಕ್ಕೆ 101 ಪರಿಶಿಷ್ಟ ಜಾತಿಗಳ ದತ್ತಾಂಶಗಳನ್ನು ನಿಗದಿ ಮಾಡಿರುವ ಮೂರು ತಿಂಗಳ ಅವಧಿಯಲ್ಲಿ ಸಂಗ್ರಹಿಸಲು ಸಾಧ್ಯವೇ?, 2. ಪರಿಶಿಷ್ಟ ಜಾತಿಯಲ್ಲಿನ ವಿವಿಧ ಸಮುದಾಯಗಳ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಬೇಕು. 3. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸರಕಾರ ಪರಿಶಿಷ್ಟ ಜಾತಿಗಳಲ್ಲಿನ ಉಪಜಾತಿಗಳಿಗೆ ನಿಗದಿ ಮಾಡಿದ ಪ್ರಮಾಣವನ್ನೇ ಮೀಸಲಾತಿಯ ಒಳವರ್ಗೀಕರಣದ ಸಂದರ್ಭದಲ್ಲಿ ಪರಿಗಣಿಸಬೇಕು -ಎಂಬ ಮಾತುಗಳು ತೀವ್ರವಾಗಿ ಕೇಳಿಬರುತ್ತಿವೆ. ಆದರೆ ಈ ಕುರಿತು ಇರುವ ಕೆಲವು ಸಂದಿಗ್ಧಗಳನ್ನು ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳುವ ಅಗತ್ಯವಿದೆ. ಇಲ್ಲದಿದ್ದಲ್ಲಿ ನಾವು ಮತ್ತೊಮ್ಮೆ ಚಾರಿತ್ರಿಕ ಪ್ರಮಾದಗಳಿಗೆ ಸಾಕ್ಷಿಗಳಾಗಬೇಕಾಗುತ್ತದೆ.

ಒಳಮೀಸಲಾತಿಯ ಕುರಿತು ನೀಡಿದ ಮಹತ್ವದ ತೀರ್ಪಿನ ಭಾಗವಾಗಿ ಸುಪ್ರೀಂ ಕೋರ್ಟ್, ‘ಕಳೆದ 75 ವರ್ಷಗಳಲ್ಲಿ ಪರಿಶಿಷ್ಟ ಸಮುದಾಯಗಳಲ್ಲಿ ಯಾವಯಾವ ಸಮುದಾಯಗಳಿಗೆ ಸಾಕಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲವೋ ಅಂತಹ ಸಮುದಾಯಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುವಂತಾಗಬೇಕು. ಒಳಮೀಸಲಾತಿಯನ್ನು ಆಯಾ ಸಮುದಾಯಗಳಿಗೆ ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂದು ನಿರ್ಣಯಿಸುವ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಸಂಗ್ರಹಿಸಿದ ಪ್ರಮಾಣಬದ್ಧ ದತ್ತಾಂಶಗಳನ್ನೇ ಬಳಸಿಕೊಳ್ಳಬೇಕು. ಈ ದತ್ತಾಂಶಗಳ ಆಧಾರದ ಮೇಲೆ ಶೋಷಿತ ಸಮುದಾಯಗಳಿಗೆ ನೀಡುವ ಮೀಸಲಾತಿಯ ಪ್ರಮಾಣವನ್ನು ನಿಗದಿಪಡಿಸಬೇಕು’ ಎಂದು ಸ್ಪಷ್ಟವಾಗಿ ಹೇಳಿದೆ. ಕಳೆದ ಏಳುವರೆ ದಶಕಗಳಲ್ಲಿ ಆಗಿರುವ ಪ್ರಮಾದಗಳನ್ನು ಪ್ರಜ್ಞಾಪೂರ್ವಕವಾಗಿ ಬಗೆಹರಿಸಬೇಕು, ಸಂವಿಧಾನಬದ್ಧ ಮೀಸಲಾತಿಯು ಪರಿಶಿಷ್ಟರಲ್ಲಿನ ದನಿಯಿಲ್ಲದ ಸಮುದಾಯಗಳಿಗೂ ತಲುಪುವಂತಾಗಬೇಕು. ವಸ್ತುನಿಷ್ಠ ದತ್ತಾಂಶಗಳಿಲ್ಲದೆ ಮಾಡಿದ ಮೀಸಲಾತಿಯ ಒಳವರ್ಗೀಕರಣವು ಉದ್ದೇಶಿತ ಗುರಿಯನ್ನು ತಲುಪಲಾರದು ಎಂಬುದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ಅಭಿಪ್ರಾಯವಾಗಿದೆ.

ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸರಕಾರವು ಸಚಿವರೊಬ್ಬರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಒಳಮೀಸಲಾತಿಯ ಪ್ರಮಾಣವನ್ನು ಘೋಷಿಸಿಬಿಟ್ಟಿತು. ಪರಿಶಿಷ್ಟ ಜಾತಿಯ 101 ಜಾತಿಗಳನ್ನು ನಾಲ್ಕು ವಿಭಾಗಗಳನ್ನಾಗಿಸಿ, ಪ್ರತೀ ವಿಭಾಗಕ್ಕೂ ಇಂತಿಷ್ಟು ಪ್ರಮಾಣದಲ್ಲಿ ಮೀಸಲಾತಿಯನ್ನು ಹಂಚಿಕೆ ಮಾಡಿತ್ತು. ಮಾದಿಗ ಮತ್ತು ಈ ಗುಂಪಿಗೆ ಸೇರಬಹುದಾದ ಸಮುದಾಯಗಳಿಗೆ ಶೇ. 6, ಹೊಲೆಯ ಮತ್ತು ಈ ಗುಂಪಿಗೆ ಸೇರಬಹುದಾದ ಸಮುದಾಯಗಳಿಗೆ ಶೇ. 5.5, ಬಂಜಾರ, ಬೋವಿ, ಕೊರಮ ಕೊರಚ ಸಮಯದಾಯಗಳಿಗೆ ಶೇ. 4.5 ಮತ್ತು ಉಳಿದ ಇತರ 89 ಜಾತಿಗಳಿಗೆ ಶೇ. 1 ಮೀಸಲಾತಿಯನ್ನು ನೀಡಿ ಆದೇಶ ಮಾಡಿತ್ತು. ಈ ಇತರ 89 ಸಮುದಾಯಗಳಲ್ಲಿ ಇರುವ 49 ಅಲೆಮಾರಿ ಸಮುದಾಯಗಳ ಕುರಿತು ಈ ಸಮಿತಿ ವಿಶೇಷ ಗಮನ ಹರಿಸಲಿಲ್ಲ. ಮೀಸಲಾತಿಯ ಈ ಹಂಚಿಕೆಗೆ ಸಚಿವರ ನೇತೃತ್ವದ ಸಮಿತಿ ಯಾವ ದತ್ತಾಂಶಗಳನ್ನು ಆಧಾರವನ್ನಾಗಿಟ್ಟುಕೊಂಡಿತ್ತು? ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿದ್ದ ಅಂದಿನ ಸರಕಾರ ಪ್ರಮಾಣಬದ್ಧ ಆಧಾರಗಳಿಲ್ಲದೆ ಹೀಗೆ ಸಂವಿಧಾನಬದ್ಧ ಸವಲತ್ತನ್ನು ಬೇಕಾಬಿಟ್ಟಿಯಾಗಿ ಹಂಚಬಹುದೇ? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬರಲಿಲ್ಲ. ಚುನಾವಣಾ ರಾಜಕಾರಣದ ಭಾಗವಾಗಿ ಆ ಸರಕಾರಿ ಆದೇಶವನ್ನು ಹೊರಡಿಸಲಾಗಿದ್ದರೂ, ಆ ಆದೇಶದಲ್ಲಿ ಒಂದು ಸಮುದಾಯವಾದಿ ರಾಜಕಾರಣ(Communitarian Politics) ಇತ್ತು. ಪರಿಶಿಷ್ಟರಲ್ಲಿಯೇ ಪ್ರಬಲವಾಗಿರುವ ಸಮುದಾಯಗಳನ್ನು ಓಲೈಸಿ ಅವುಗಳನ್ನು ತಕ್ಷಣದಲ್ಲಿ ಮತಬ್ಯಾಂಕ್ ಆಗಿಸುವ ಹುನ್ನಾರ ಆ ತರಾತುರಿಯಲ್ಲಿತ್ತು. ಹೀಗಾಗಿ 101 ಪರಿಶಿಷ್ಟ ಜಾತಿಗಳ ಪೈಕಿ ಕನಿಷ್ಠ ಜನಸಂಖ್ಯೆಯನ್ನು ಹೊಂದಿರುವ ಮತ್ತು ಮೀಸಲಾತಿಯನ್ನು ಪಡೆಯದೆ ಇರುವ ಅಲೆಮಾರಿ ಸಮುದಾಯಗಳಿಗೆ ಕೇವಲ ಶೇ. 1 ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಈ ತರಾತುರಿಯ ಅವೈಜ್ಞಾನಿಕ ವರ್ಗೀಕರಣವೇ ಈಗ ಎಲ್ಲರಿಗೂ ಅಪ್ಯಾಯಮಾನವಾಗಿಬಿಟ್ಟಿದೆ. ಅದರಲ್ಲೂ ಬಲಾಢ್ಯ ಪರಿಶಿಷ್ಟ ಸಮುದಾಯಗಳು ಈ ವರ್ಗೀಕರಣವನ್ನು ಒಪ್ಪಿಕೊಂಡಂತೆ ಕಾಣುತ್ತಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳು, ಪರಿಶಿಷ್ಟ ಪಂಗಡಗಳಲ್ಲಿನ 50 ಜಾತಿಗಳು ಏಕರೂಪವಾಗಿಲ್ಲ. ಈ ಸಮುದಾಯಗಳು ಭಿನ್ನವಾದ ಸಾಮಾಜಿಕ, ಆರ್ಥಿಕ ಮತ್ತು ಭೌಗೋಳಿಕ ಪರಿಸರಗಳಲ್ಲಿ ಬದುಕುತ್ತಿವೆ. ಇದರಿಂದಾಗಿ ಪರಿಶಿಷ್ಟ ಸಮುದಾಯಗಳನ್ನು ಅಖಂಡವಾಗಿ ನೋಡಲು ಸಾಧ್ಯವಾಗುವುದಿಲ್ಲ. ಈ ಸಮುದಾಯಗಳ ಹಿಂದುಳಿದಿರುವಿಕೆಗೆ ಇರುವ ಕಾರಣಗಳೂ ಸಹ ಒಂದೇ ತೆರನಾಗಿಲ್ಲ. ಈ ಕಾರಣಗಳಿಗಾಗಿ ಮೀಸಲಾತಿಯ ಒಳವರ್ಗೀಕರಣ ಮಾಡಲು ಸರಕಾರ ಯಾವ ಮಾನದಂಡವನ್ನು ಅನುಸರಿಸಬೇಕು? ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಮೀಸಲಾತಿಯನ್ನು ಹೆಚ್ಚು ಪಡೆದ ಸಮುದಾಯಗಳನ್ನು ಹೇಗೆ ಪತ್ತೆ ಹಚ್ಚುವುದು? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬರಬೇಕಿದೆ.

1931ರಲ್ಲಿ ನಡೆದ ಜಾತಿಗಣತಿಯಲ್ಲಿ ಲಭ್ಯವಾದ ದತ್ತಾಂಶಗಳನ್ನು ಅವಲಂಬಿಸಿ ಸ್ವಾತಂತ್ರ್ಯಾನಂತರ ಶೋಷಿತ ಸಮುದಾಯಗಳಿಗೆ ಸಂವಿಧಾನಬದ್ಧವಾಗಿ ಮೀಸಲಾತಿಯನ್ನು ಕಲ್ಪಿಸಲಾಯಿತು. ವಸಾಹತು ಕಾಲಘಟ್ಟದಲ್ಲಿ ನಡೆದ ಈ ಜಾತಿಗಣತಿಗೆ ಅನೇಕ ಮಿತಿಗಳಿದ್ದರೂ ಈ ಗಣತಿಯಿಂದ ಲಭ್ಯವಾದ ದತ್ತಾಂಶಗಳನ್ನು ಅಂದಿನ ಸರಕಾರ ಅಧಿಕೃತವಾಗಿ ಅಂಗೀಕರಿಸಿತ್ತು. ಈ ಜಾತಿ ಗಣತಿಯನ್ನು ಆಧರಿಸಿ ಕಲ್ಪಿಸಲಾಗಿದ್ದ ಮೀಸಲಾತಿಯನ್ನು ಮತ್ತು ಏಳುವರೆ ದಶಕಗಳಲ್ಲಿ ಆದ ಮೀಸಲಾತಿ ಹಂಚಿಕೆಯನ್ನು ಇಲ್ಲಿಯವರೆಗೂ ವಸ್ತುನಿಷ್ಠವಾಗಿ ಪರಾಮರ್ಶೆ ಮಾಡಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಒಳಮೀಸಲಾತಿಯನ್ನು ತುರ್ತಾಗಿ ಜಾರಿ ಮಾಡಬೇಕು ಎಂಬ ಒತ್ತಡಗಳು ತೀವ್ರವಾಗುತ್ತಿವೆ. ಈಗ ಮೀಸಲಾತಿ ಒಳವರ್ಗೀಕರಣ ಮಾಡಲು ಬೇಕಾದ ಅಧಿಕೃತ ದತ್ತಾಂಶಗಳು ಸರಕಾರದ ಬಳಿ ಇವೆ. ಜಸ್ಟಿಸ್ ಸದಾಶಿವ ಆಯೋಗವು ಪರಿಶಿಷ್ಟ ಜಾತಿ ಸಮುದಾಯಗಳ ಸರ್ವೇ ಮಾಡಿ ಸಿದ್ಧಪಡಿಸಿದ ವರದಿಯು ಸರಕಾರದ ಬಳಿ ಇದೆ. ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಮನೆಮನೆ ಸರ್ವೇ ಮಾಡಿ ಸಂಗ್ರಹಿಸಿದ ವಿವರವಾದ ಅಂಕಿಅಂಶಗಳು ಸರಕಾರದ ಸುಪರ್ದಿಯಲ್ಲಿವೆ. ಆದರೆ ಸರಕಾರ ಈ ವರದಿಗಳನ್ನು ಅಧಿಕೃತವಾಗಿ ಅಂಗೀಕರಿಸಿಲ್ಲ. ಈ ಎರಡೂ ವರದಿಗಳನ್ನು ಅಂಗೀಕರಿಸಿ, ಇವುಗಳಲ್ಲಿನ ದತ್ತಾಂಶಗಳನ್ನು ಸರಕಾರ ಮೀಸಲಾತಿ ಒಳವರ್ಗೀಕರಣದ ಸಂದರ್ಭದಲ್ಲಿ ಬಳಸಬೇಕಿದೆ. ಒಟ್ಟಾರೆ, ಪರಿಶಿಷ್ಟ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ವಾಸ್ತವ ಚಿತ್ರಣವನ್ನು ಒದಗಿಸುವ ಈ ಎರಡು ವರದಿಗಳನ್ನು ಸರಕಾರ ಅಧಿಕೃತವಾಗಿ ಅಂಗೀಕರಿಸಬೇಕು.

‘ಮೀಸಲಾತಿಯ ಒಳವರ್ಗೀಕರಣವು ಆಯಾ ಪರಿಶಿಷ್ಟ ಸಮುದಾಯಗಳ ಜನಸಂಖ್ಯೆಯನ್ನು ಆಧರಿಸಿರಬೇಕು’ ಎಂಬ ಇನ್ನೊಂದು ವಾದವಿದೆ. ಸ್ವಾತಂತ್ರ್ಯಾನಂತರ ಮೀಸಲಾತಿ ಮತ್ತು ಸಂವಿಧಾನಬದ್ಧ ಸೌಲಭ್ಯಗಳನ್ನು ಪರಿಶಿಷ್ಟ ಸಮುದಾಯಗಳ ಜನಸಂಖ್ಯೆಯನ್ನು ಆಧರಿಸಿಯೇ ಜಾರಿ ಮಾಡಲಾಯಿತು. ಅಂದಿನ ದಿನಗಳಲ್ಲಿ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿಯನ್ನು ನಿಗದಿಪಡಿಸಿದ ಕ್ರಮವು ವಸ್ತುನಿಷ್ಠವಾಗಿತ್ತು. ಆದರೆ ಈಗ ಮೀಸಲಾತಿಯ ಒಳವರ್ಗೀಕರಣದ ಸಂದರ್ಭದಲ್ಲೂ ಸಮುದಾಯಗಳ ಜನಸಂಖ್ಯೆಯನ್ನೇ ಮಾನದಂಡವಾಗಿಟ್ಟುಕೊಳ್ಳಬೇಕು ಎಂಬ ವಾದವನ್ನು ಎಲ್ಲರೂ ಮುಂದಿಡುತ್ತಿದ್ದಾರೆ. ಈ ನಿಲುವು ಮೇಲ್ನೋಟಕ್ಕೆ ಸರಿ ಎನ್ನಿಸಿದರೂ, ಇದರಿಂದಾಗಿ ಅಲೆಮಾರಿಗಳಂತಹ ಚಿಕ್ಕ ಸಮುದಾಯಗಳು ಮತ್ತೆ ಮೀಸಲಾತಿ ಸೌಲಭ್ಯಗಳಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಕಳೆದ ಏಳುವರೆ ದಶಕಗಳಲ್ಲಿ ಕೆಲ ನಿರ್ದಿಷ್ಟ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯಗಳು ತಲುಪಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಈ ಸಮುದಾಯಗಳ ಜನಸಂಖ್ಯೆಯ ಗಾತ್ರ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ರಾಜಕಾರಣವನ್ನು ಪ್ರಭಾವಿಸುವ ಬಲಾಢ್ಯ ಸಮುದಾಯಗಳು ಮೀಸಲಾತಿಯಡಿ ಗಮನಾರ್ಹ ಪ್ರಾತಿನಿಧ್ಯವನ್ನು ಪಡೆಯುತ್ತಾ ಬಂದಿವೆ. ಅಧಿಕಾರ ಕೇಂದ್ರಗಳನ್ನು ನಿಯಂತ್ರಿಸುವಷ್ಟು ಪ್ರಬಲವಾಗಿರುವ ಈ ಸಮುದಾಯಗಳು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದ ಮೀಸಲಾತಿಯಲ್ಲಿ ಹೆಚ್ಚಿನ ಪಾಲನ್ನು ಪಡೆದಿವೆ. ಮೀಸಲಾತಿ ಎಂಬುದು ಸಮುದಾಯಗಳಿಗೆ ಅಧಿಕಾರ ಕೇಂದ್ರಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುತ್ತದೆ. ಈ ಕಾರಣಕ್ಕಾಗಿ ಯಾವ ಸಮುದಾಯಗಳೂ ಮೀಸಲಾತಿಯನ್ನು ಇತರ ಸಮುದಾಯಗಳೊಂದಿಗೆ ಹಂಚಿಕೊಂಡು ಬದುಕುವ ಆದರ್ಶವನ್ನು ಪಾಲಿಸಿಲ್ಲ. ಇದರಿಂದಾಗಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಮತ್ತು ಚುನಾವಣಾ ರಾಜಕಾರಣವನ್ನು ಪ್ರಭಾವಿಸುವಷ್ಟು ಪ್ರಬಲವಾಗಿಲ್ಲದ ಸಮುದಾಯಗಳಿಗೆ ಮೀಸಲಾತಿಯ ಸೌಲಭ್ಯಗಳು ದಕ್ಕಿಲ್ಲ. ಈ ಕಾರಣಕ್ಕಾಗಿ ಶೋಷಿತ ಸಮುದಾಯಗಳಲ್ಲಿ ಒಳಗುದಿಗಳಿಲ್ಲದಿದ್ದರೂ ಮೀಸಲಾತಿಯ ಅಸಮಾನ ಹಂಚಿಕೆ ಎಂಬುದು ಒಡೆದು ಕಾಣುವಷ್ಟು ಸ್ಪಷ್ಟವಾಗಿದೆ. ಮೀಸಲಾತಿಯನ್ನು ವರ್ಗೀಕರಿಸುವ ಈ ಸಂದರ್ಭದಲ್ಲಿ ಮತ್ತೆ ನಾವು ಜನಸಂಖ್ಯೆಯನ್ನೇ ಪ್ರಧಾನ ಮಾನದಂಡವಾಗಿಟ್ಟುಕೊಂಡರೆ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗುವುದರಲ್ಲಿ ಸಂದೇಹಗಳಿರಬೇಕಿಲ್ಲ. ಈ ಕಾರಣದಿಂದ ಮೀಸಲಾತಿಯ ಒಳವರ್ಗೀಕರಣ ಮಾಡುವಾಗ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯೇ ಮಾನದಂಡವಾಗಬೇಕು. ಯಾವಯಾವ ಸಮುದಾಯಗಳಿಗೆ ಸಾರ್ವಜನಿಕ ವಲಯಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಿಲ್ಲವೋ ಅಂತಹ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಹೆಚ್ಚಿನ ಪ್ರಮಾಣವನ್ನು ನಿಗದಿ ಮಾಡಬೇಕು. ‘ಸಾಕಷ್ಟು ಪ್ರಾತಿನಿಧ್ಯ ಪಡೆಯದ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಹೆಚ್ಚಿನ ಅವಕಾಶಗಳು ಲಭಿಸುವಂತಾಗಬೇಕು’ ಎಂಬುದು ಮೀಸಲಾತಿಯ ಒಳವರ್ಗೀಕರಣದ ಮುಖ್ಯ ಆಶಯವಾಗಿದೆ. ನಾಗಮೋಹನ್ ದಾಸ್ ಆಯೋಗವು ಮೀಸಲಾತಿಯನ್ನು ವರ್ಗೀಕರಿಸುವ ಸಂದರ್ಭದಲ್ಲಿ ಕನಿಷ್ಠ ಪ್ರಾತಿನಿಧ್ಯ ಪಡೆದ ಸಮುದಾಯಗಳಿಗೆ ಹೆಚ್ಚಿನ ಪಾಲನ್ನು ನೀಡುವ ಕುರಿತು ಯೋಚಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎಸ್. ಪ್ರಭಾಕರ

contributor

ಬುಡಕಟ್ಟು ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ

Similar News