ಸಂವಿಧಾನದ ಹೆಸರಲ್ಲೇ ಸಂವಿಧಾನವನ್ನು ಮುಗಿಸುವವರ ಬಗ್ಗೆ ಒಂದಿಷ್ಟು...
ದೇಶದ ಅಭಿವೃದ್ಧಿ, ಜನರ ಬದುಕನ್ನು ಭದ್ರಪಡಿಸಲು ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಇರುವ ಸಂವಿಧಾನದ ಕೊಡುಗೆಯನ್ನು ನೆನಪಿಸಿಕೊಳ್ಳಬೇಕಾದ ಅವಕಾಶವನ್ನು ಬದಿಗಿಟ್ಟು ಮತ್ತೆ ಮತ್ತೆ ರಾಜಕೀಯ ಭಾಷಣವನ್ನು ಮಾಡುತ್ತಿರುವ ಪ್ರಧಾನಿಗಳು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ತನಗೆ ಸೂಕ್ತ ಅರಿವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಪ್ರಧಾನಿಯವರಷ್ಟೇ ಅಲ್ಲದೆ ಅವರ ಸಚಿವ ಸಂಪುಟದ ಸದಸ್ಯರು ಕೂಡಾ ತಮ್ಮ ಪ್ರಧಾನಿಗಳ ಹಾದಿಯನ್ನೇ ಹಿಡಿದಿದ್ದು, ಸಂವಿಧಾನದ ಕುರಿತಂತೆ ಆಗಬೇಕಿದ್ದ ರಚನಾತ್ಮಕ ಚರ್ಚೆಯನ್ನು ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯನ್ನಾಗಿಸಿಕೊಂಡಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.
ದೇಶದ ಸಂವಿಧಾನಕ್ಕೆ 75 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಸಂವಿಧಾನದ ಕುರಿತಂತೆ ಚರ್ಚೆಗೆ ಅವಕಾಶವನ್ನು ಕಲ್ಪಿಸಿದ್ದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಸಂವಿಧಾನದ ಕುರಿತ ಚರ್ಚೆಯನ್ನು ಸಂಪೂರ್ಣ ರಾಜಕೀಯಗೊಳಿಸಿದ್ದು ಪ್ರಜಾಪ್ರಭುತ್ವದ ಬಲವರ್ಧನೆ ಮತ್ತು ದೇಶದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಸಂವಿಧಾನವು ಎಷ್ಟರ ಮಟ್ಟಿಗೆ ಪ್ರಾಮುಖ್ಯತೆ ವಹಿಸಿದೆ ಎಂಬ ಸಂಗತಿಯನ್ನು ಸಂಪೂರ್ಣವಾಗಿ ಬದಿಗೆ ಸರಿಸಿದ್ದಾರೆ.
ನೈಜ ಕಾರ್ಯಾಂಗದ ಮುಖ್ಯಸ್ಥರಾಗಿರುವಂತಹ ಪ್ರಧಾನಿಗಳೇ ಸಂವಿಧಾನದ ಕುರಿತ ಚರ್ಚೆಯನ್ನು ರಾಜಕೀಯಗೊಳಿಸುವ ಪ್ರಯತ್ನ ಮಾಡಿದ್ದು, 2014 ರನಂತರದಲ್ಲಿ ಸಂವಿಧಾನವನ್ನು ಬಲಪಡಿಸಲು ನಾವು ಶ್ರಮಿಸಿದ್ದು ದೇಶದ ಏಕತೆಯ ದೃಷ್ಟಿಯಿಂದ ಸಂವಿಧಾನದಲ್ಲಿ ತಿದ್ದುಪಡಿ ಮಾಡಿದ್ದೇವೆ ಹಾಗೂ ಪರಿವಾರ ರಾಜಕಾರಣದಿಂದ ಪ್ರಜಾಪ್ರಭುತ್ವಕ್ಕೆ ಹಾನಿಯಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಎಂದಿನಂತೆ ನೆಹರೂ ಅವರನ್ನು ನೆನಪಿಸಿಕೊಂಡಿರುವ ಪ್ರಧಾನಿಗಳು ನೆಹರೂ ಅವರು ತಮ್ಮ ಇಚ್ಛೆಗೆ ಅನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಿದರು ಎಂದೂ ಹೇಳಿದ್ದಾರೆ.
ದೇಶದ ಅಭಿವೃದ್ಧಿ, ಜನರ ಬದುಕನ್ನು ಭದ್ರಪಡಿಸಲು ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಇರುವ ಸಂವಿಧಾನದ ಕೊಡುಗೆಯನ್ನು ನೆನಪಿಸಿಕೊಳ್ಳಬೇಕಾದ ಅವಕಾಶವನ್ನು ಬದಿಗಿಟ್ಟು ಮತ್ತೆ ಮತ್ತೆ ರಾಜಕೀಯ ಭಾಷಣವನ್ನು ಮಾಡುತ್ತಿರುವ ಪ್ರಧಾನಿಗಳು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ತನಗೆ ಸೂಕ್ತ ಅರಿವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಪ್ರಧಾನಿಯವರಷ್ಟೇ ಅಲ್ಲದೆ ಅವರ ಸಚಿವ ಸಂಪುಟದ ಸದಸ್ಯರು ಕೂಡಾ ತಮ್ಮ ಪ್ರಧಾನಿಗಳ ಹಾದಿಯನ್ನೇ ಹಿಡಿದಿದ್ದು, ಸಂವಿಧಾನದ ಕುರಿತಂತೆ ಆಗಬೇಕಿದ್ದ ರಚನಾತ್ಮಕ ಚರ್ಚೆಯನ್ನು ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯನ್ನಾಗಿಸಿಕೊಂಡಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.
ಅದರಲ್ಲೂ ಸದಾ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿಯೇ ಕೆಲಸ ಮಾಡಿದ ಇತಿಹಾಸ ಹೊಂದಿರುವ ಬಿಜೆಪಿಗರೇ, ಹುಂಬತನದಿಂದ ಮತ್ತೆ ಮತ್ತೆ ಸಂವಿಧಾನದ ವಿಷಯದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದೇ ದೊಡ್ಡ ಸುದ್ಧಿಯಾಗುತ್ತಿರುವ ಸಂದರ್ಭದಲ್ಲಿ ಯುವ ಪೀಳಿಗೆಗೆ ತಪ್ಪು ಮಾಹಿತಿ ಹೋಗಬಾರದು ಎಂಬ ಕಾರಣಕ್ಕೆ ಬಿಜೆಪಿಗರ ಸಂವಿಧಾನ ವಿರೋಧಿ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳುವುದು ಈ ಹೊತ್ತಿನ ಜರೂರು ಆಗಿದೆ.
ಮೊದಲಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಬಂದಂತಹ ಮಂಡಲ್ ಕಮಿಷನ್ ವಿರುದ್ಧ ಕಮಂಡಲ ಹಿಡಿದಿದ್ದ ಬಿಜೆಪಿಗರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರೆಯಬಾರದು ಎಂಬ ಕಾರಣಕ್ಕೆ ಅಡ್ವಾಣಿಯವರ ನೇತೃತ್ವದಲ್ಲಿ ರಥಯಾತ್ರೆಯನ್ನು ಮಾಡಿದರು.
ನಂತರ ಎನ್‌ಡಿಎ ಒಕ್ಕೂಟದ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಪ್ರಮೋದ್ ಮಹಾಜನ್ ಅವರಿಗೆ ಸಂವಿಧಾನದ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ರಾಷ್ಟ್ರೀಯ ಆಯೋಗವನ್ನು ರಚಿಸಿ, ಆ ಮೂಲಕ ಸಂವಿಧಾನದಲ್ಲಿ ಅಗತ್ಯ ಬದಲಾವಣೆಗಳು ಕಂಡು ಬಂದರೆ ಅದನ್ನು ತಿದ್ದುಪಡಿ ಮಾಡುತ್ತೇವೆ ಎಂಬುದಾಗಿ ಹೇಳಿ, ಸಂವಿಧಾನದ ಬದಲಾವಣೆಗೆ ಮುಂದಾಗಿದ್ದರು. ಆದರೆ ಸಂವಿಧಾನವು ತನ್ನ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ಶಕ್ತವಾಗಿದೆ ಎಂಬ ಅಭಿಪ್ರಾಯವು ಬಲವಾಗಿ ಕೇಳಿ ಬಂದಿದ್ದರಿಂದ ಆ ಪ್ರತಿರೋಧಕ್ಕೆ ಅಂಜಿ ವಾಜಪೇಯಿ ಸರಕಾರವು ಸಂವಿಧಾನ ಬದಲಾವಣೆಯ ಕೆಟ್ಟ ಪ್ರಯತ್ನವನ್ನು ಅಲ್ಲಿಗೇ ಬಿಟ್ಟಿತು.
ಅತ್ತ ಯುಪಿಎ ಸರಕಾರವು ಬಡವರು ಹಸಿವಿನಿಂದ ತೊಂದರೆ ಅನುಭವಿಸಬಾರದು ಎಂಬ ಕಾರಣಕ್ಕೆ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿ ಬಡ ಕುಟುಂಬಗಳಿಗೆ ಉಚಿತವಾಗಿ ಪಡಿತರವನ್ನು ನೀಡುವ ನಿರ್ಧಾರ ಕೈಗೊಂಡರೆ, ಹೀಗೆ ಪಡಿತರವನ್ನು ನೀಡಿದರೆ ಬಡವರನ್ನು ಸೋಮಾರಿಗಳನ್ನಾಗಿ ಮಾಡಿದ ಹಾಗೆ ಆಗುತ್ತದೆ ಎಂಬ ಅಮಾನವೀಯ ಮತ್ತು ಸಂವಿಧಾನಕ್ಕೆ ವಿರುದ್ಧವಾದ ನೀತಿಯನ್ನು ಬಿಜೆಪಿ ಅನುಸರಿಸಿತು.
ಇನ್ನು ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯದ ಸಾಧನೆಗಾಗಿ, ಐತಿಹಾಸಿಕವಾಗಿ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾದ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದರೆ, ಆ ಮೀಸಲಾತಿಯನ್ನೇ ವಿರೋಧಿಸುವ ಕೆಟ್ಟ ಕೆಲಸವನ್ನು ಬಿಜೆಪಿಯ ಪಾಳಯವು ಮಾಡಿತು. ಆಗ ಅಷ್ಟೇ ಅಲ್ಲದೆ ಈಗಲೂ ಅದೇ ಕೆಲಸವನ್ನು ಇವರು ಮಾಡುತ್ತಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಲಘುವಾಗಿ ಕಾಣುತ್ತಾರೆ.
ಸಮಾಜದ ಎಲ್ಲ ವರ್ಗಗಳಿಗೂ ಶಿಕ್ಷಣವನ್ನು ನೀಡುವ ದೃಷ್ಟಿಯಿಂದ ಸರಕಾರಗಳು ಕಡ್ಡಾಯ ಶಿಕ್ಷಣವನ್ನು ಜಾರಿ ಮಾಡಿದರೆ, ಕೆಳ ವರ್ಗಗಳು ಶಿಕ್ಷಣ ಹೊಂದ ಬಾರದು ಎಂಬ ಕಾರಣಕ್ಕೆ, ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ.
ದೇಶದ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು, ಆ ಮೂಲಕ ಎಲ್ಲರ ಬದುಕೂ ಹಸನಾಗಬೇಕು ಎಂಬುದು ಸಂವಿಧಾನದ ಪರಮ ಆಶಯವಾಗಿದೆ. ಆದರೆ ಬಿಜೆಪಿಗರು ಅಧಿಕಾರಕ್ಕೆ ಬಂದ ಬಳಿಕ ಕೇವಲ ಒಬ್ಬರೋ ಇಬ್ಬರೋ ಕಾರ್ಪೊರೇಟ್ ಉದ್ಯಮಿಗಳ ಸಂಪತ್ತು ಹೆಚ್ಚಾಗುತ್ತಿದೆ ಬಿಟ್ಟರೆ, ಸಂಪತ್ತಿನ ವಿಕೇಂದ್ರೀಕರಣವು ಯಾವ ಹಂತದಲ್ಲೂ ಸಾಧ್ಯವಾಗಿಲ್ಲ. ಆರ್ಥಿಕತೆ ಕೆಲವರ ಏಕಸ್ವಾಮ್ಯದಡಿ ಇದ್ದು, ಇದು ಸಂವಿಧಾನ ವಿರೋಧಿ ಮಾತ್ರವಲ್ಲದೇ ಸುಸ್ಥಿರ ಅರ್ಥ ವ್ಯವಸ್ಥೆಗೆ ಮಾಡಿದ ಅಪಮಾನವೂ ಆಗಿದೆ.
2014ರ ನಂತರದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕವಂತೂ ದೇಶದ ಒಳಗೆ ಇರಬೇಕಾದ ಸಂವಿಧಾನಾತ್ಮಕ ಸಾಮರಸ್ಯ ಮತ್ತು ಭ್ರಾತೃತ್ವದ ವಾತಾವರಣವೇ ಹಾಳಾಗಿದೆ. ಇವರ ದ್ವೇಷಮಯ ಮನಸ್ಥಿತಿಯನ್ನು ಪುರಸ್ಕರಿಸುವ ನೀತಿಯಿಂದಾಗಿ ಇಂದು ಧಾರ್ಮಿಕತೆಯ ಆಧಾರದಲ್ಲಿ ಕಂದರಗಳು ಸೃಷ್ಟಿಯಾಗಿದ್ದು, ಅಂತರಂಗದ ದ್ವೇಷವು ಬೆಳೆಯುತ್ತಾ ಸಾಗಿದೆ. ಇದು ದೇಶವೊಂದರ ಸಮೃದ್ಧಿ ಮತ್ತು ಏಳಿಗೆಗೆ ಮಾರಕವಾದ ವಿದ್ಯಮಾನ ಆಗಿದೆ.
2014ರ ನಂತರದಲ್ಲಿ ಸಂವಿಧಾನದ ಆಶಯಗಳಿಗೆ, ಬಾಬಾ ಸಾಹೇಬರ ಆಶಯಗಳಿಗೆ ವಿರುದ್ಧವಾದ ಅನೇಕ ಸಂಗತಿಗಳು ನಡೆದಿವೆೆ ಮತ್ತು ನಡೆಯುತ್ತಿವೆ. ಈ ಪೈಕಿ ಬಿಜೆಪಿಗರು ರಾಜಕೀಯ ಕಾರಣಕ್ಕಾಗಿ ಜಾರಿಗೊಳಿಸಲು ಪ್ರಯತ್ನಿಸಿದ ಸಿಎಎ ಮತ್ತು ಎನ್‌ಆರ್‌ಸಿ ಕೂಡಾ ಒಂದು. ಇದು ಕೆಲವು ಸಮುದಾಯಗಳನ್ನು ಧಾರ್ಮಿಕವಾಗಿ ಗುರಿಪಡಿಸುವ ಉದ್ದೇಶ ಹೊಂದಿದ್ದ ಸಂವಿಧಾನ ವಿರೋಧಿ ಕ್ರಮವಾಗಿತ್ತು.
ಇನ್ನು ಬಿಜೆಪಿಗರು ಉಳ್ಳವರನ್ನು ಸಂತೈಸಲು ಜಾರಿಗೊಳಿಸಿದ ಅವೈಜ್ಞಾನಿಕವಾದ ‘ಹೊಸ ಶಿಕ್ಷಣ ನೀತಿ’ ಕೂಡಾ ಸಂವಿಧಾನ ವಿರೋಧಿಯಾಗಿದ್ದು ಇದು ಅಸಮಾನತೆಯನ್ನೇ ಮೂಲದಲ್ಲಿ ಇರಿಸಿಕೊಂಡಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಾರೆ.
ಇದಿಷ್ಟೇ ಸಾಲದು ಎಂಬಂತೆ ಪ್ರಜಾಪ್ರಭುತ್ವ ವಿರೋಧಿಯಾಗಿರುವಂತಹ ‘ಒಂದು ದೇಶ, ಒಂದು ಚುನಾವಣೆ’ ನೀತಿಗೆ ಸಂಪುಟದಲ್ಲಿ ಒಪ್ಪಿಗೆ ನೀಡಿರುವ ಇವರು ಯಾವ ರಾಜ್ಯಗಳ ಜೊತೆಗೂ ಚರ್ಚಿಸಿಲ್ಲ ಮತ್ತು ಯಾವುದೇ ದೂರದೃಷ್ಟಿಯನ್ನು ಹೊಂದಿಲ್ಲ ಎಂಬುದು ಅತ್ಯಂತ ಬೇಸರದ ಸಂಗತಿಯಾಗಿದೆ.
ಜಾತಿಗಣತಿಗೆ ವಿರೋಧ ವ್ಯಕ್ತ ಪಡಿಸಿರುವ ಬಿಜೆಪಿಗರು, ರಾಜ್ಯಗಳ ತೆರಿಗೆ ಪಾಲನ್ನು ಬೇಕಾಬಿಟ್ಟಿ ಹಂಚಿಕೆ ಮಾಡುತ್ತಾ ಒಕ್ಕೂಟ ವ್ಯವಸ್ಥೆಯ ಮೌಲ್ಯವನ್ನೇ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಸಾಲದು ಎಂಬಂತೆ ಯಾವುದಾದರೂ ಸರಕಾರಗಳು ಜನಪರ ಯೋಜನೆಗಳನ್ನು ಜಾರಿ ಮಾಡಿದರೆ ಅದರ ಮೇಲೆ ಅಸೂಯೆ ಪಡುವುದು, ಅದನ್ನು ಕಾರಣವೇ ಇಲ್ಲದೆ ವಿರೋಧಿಸುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.
ಇನ್ನು ಅಧಿಕಾರ ಪಡೆಯಲು ಸತತವಾಗಿ ಸಾಂವಿಧಾನಾತ್ಮಕ ಸಂಸ್ಥೆಗಳಾದ ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ತನಿಖಾ ಸಂಸ್ಥೆಗಳಾದ ಈ.ಡಿ., ಸಿಬಿಐ ಮತ್ತು ಐಟಿ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಇವರು ಸಂವಿಧಾನಕ್ಕೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತಾ ಸಾಗಿದ್ದಾರೆ.
ಒಟ್ಟಾರೆಯಾಗಿ ನೋಡಿದರೆ ಜನರ ಆಹಾರ, ವಿಚಾರ ಹಾಗೂ ಅವರ ಸಂಸ್ಕೃತಿಯನ್ನು ಧರ್ಮದ ಚೌಕಟ್ಟಿನಲ್ಲಿ ಮುಚ್ಚಿ ಹಾಕುವ ಕೆಲಸ ಮಾಡುತ್ತಿರುವ ಬಿಜೆಪಿಗರು ರಾಜ್ಯ ಸಭೆಯಲ್ಲಿ ಸಂವಿಧಾನವನ್ನು ರಾಜಕೀಯಗೊಳಿಸುತ್ತಿರುವುದನ್ನು ನೋಡುತ್ತಿರುವ ಈ ಸಂದರ್ಭದಲ್ಲಿ ಅವರಿಂದ ಉಂಟಾಗುತ್ತಿರುವ ಸಾಮಾಜಿಕ, ರಾಜಕೀಯ, ಆಡಳಿತಾತ್ಮಕ ಅರಾಜಕತೆ ಮತ್ತು ಸಾಂವಿಧಾನಾತ್ಮಕ ಆಶಯಗಳ ಮೇಲೆ ಇವರಿಂದ ಆಗುತ್ತಿರುವ ಈ ನಿರಂತರವಾದ ಪ್ರಹಾರಗಳು ದೇಶದ ಎದೆ ಝೆಲ್ಲೆನಿಸುವಂತೆ ಮಾಡುತ್ತದೆ.