‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಸಾಧಕ, ಬಾಧಕಗಳೇನು?

Update: 2024-12-20 10:11 GMT

ಭಾರತ ಬೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವೈವಿಧ್ಯಪೂರ್ಣವಾದ ದೇಶ. ಮಾತ್ರವಲ್ಲ ಸಂವಿಧಾನಾತ್ಮವಾಗಿ ಸಂಸದೀಯ ವ್ಯವಸ್ಥೆಯನ್ನು ಕೇಂದ್ರ ಮತ್ತು ರಾಜ್ಯಗಳಲ್ಲಿ ಒಪ್ಪಿಕೊಂಡು ಸುಸೂತ್ರವಾಗಿ ಎಪ್ಪತ್ತೈದು ಸಂವತ್ಸರಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಈಗ ಇದ್ದಕ್ಕಿದ್ದ ಹಾಗೆ ಈ ಎಲ್ಲವನ್ನೂ ಏಕತೆಯ ಹೆಸರಿನಲ್ಲಿ ಕಟ್ಟಿ ಹಾಕಲು ಮುಂದಾಗುತ್ತಿದ್ದೇವೆ.ಇದರಲ್ಲಿ ಬಹುಮುಖ್ಯವಾಗಿ ಚರ್ಚೆಗೆ ಗ್ರಾಸವಾಗಿರುವುದು ಏಕ ರಾಷ್ಟ್ರ ಏಕ ಚುನಾವಣೆ. ಇದು ಸಾಧುವೇ ಅಥವಾ ಸಾಧ್ಯವೇ? ಈ ಕುರಿತಾಗಿ ಇದರ ಸಾಧಕ ಬಾಧಕಗಳನ್ನು ಪಕ್ಷ ಮೀರಿ ಚರ್ಚಿಸ ಬೇಕಾದ ಅನಿವಾರ್ಯತೆ ಇದೆ.

1952ರಿಂದ ಮೊದಲ್ಗೊಂಡು ಸುಮಾರು 70ರ ದಶಕದ ತನಕವೂ ಕೇಂದ್ರ ಮತ್ತು ರಾಜ್ಯಗಳ ಚುನಾವಣೆಗಳು ಏಕ ಕಾಲದಲ್ಲಿ ಸ್ವಾಭಾವಿಕವಾಗಿ ನಡೆದುಕೊಂಡು ಬಂದಿದೆ. ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಕೂಡ ಕೇಂದ್ರ ಮತ್ತು ರಾಜ್ಯಗಳ ಚುನಾವಣೆಗಳನ್ನು ಏಕ ಕಾಲದಲ್ಲಿ ನಡೆಸಿಕೊಂಡು ಬರಬೇಕು ಅನ್ನುವ ಕುರಿತಾಗಿ ಉಲ್ಲೇಖ ಮಾಡಿಲ್ಲ. ಆದರೆ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡು ಬಂತು. ಆದರೆ ಆನಂತರದ ಕಾಲಘಟ್ಟದಲ್ಲಿ ತಾಳಮೇಳ ತಪ್ಪಿದ ಕಾರಣದಿಂದಾಗಿ ಕೇಂದ್ರ-ರಾಜ್ಯಗಳ ಚುನಾವಣಾ ಟ್ರ್ಯಾಕ್ ತಪ್ಪಿತು. ಆದರೆ ಇಂದು ಅದನ್ನು ಸರಿಯಾದ ಟ್ರ್ಯಾಕ್‌ಗೆ ತರುವ ನಿಟ್ಟಿನಲ್ಲಿ ಸಂವಿಧಾನಕ್ಕೆ ಮೂಲಭೂತವಾದ ತಿದ್ದುಪಡಿ ತರುತ್ತೇವೆ ಅನ್ನುವ ನಿಟ್ಟಿನಲ್ಲಿ ಆಡಳಿತ ರೂಢ ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟಿದೆ. ಇದು ಖಂಡಿತವಾಗಿಯೂ ಸುಲಭದ ಹೆಜ್ಜೆ ಅಲ್ಲ. ಈ ಹಿಂದೆ ನಾವು ಯಾಕೆ ಹಲವು ಸಂದರ್ಭದಲ್ಲಿ ಟ್ರ್ಯಾಕ್ ತಪ್ಪಿದ್ದೇವೆ ಅನ್ನುವುದನ್ನು ಆಡಳಿತರೂಢ ಪಕ್ಷ ಆತ್ಮ ವಿಮರ್ಶೆ ಮಾಡಿಕೊಂಡು ಹೆಜ್ಜೆ ಮುಂದಿಡಬೇಕಾಗಿತ್ತು.

ಏಕಕಾಲದ ಚುನಾವಣೆಯಲ್ಲಿ ಕೆಲವೊಂದು ಸಾಧಕಗಳು ಇರ ಬಹುದು. ಉದಾ: ಸಮಯದ ಉಳಿತಾಯ; ಹಣದ ವೆಚ್ಚ ಕಡಿಮೆ ಮಾಡಬಹುದು; ಮತದಾರರಿಗೆ ಚುನಾವಣೆ ಅಂದರೆ ಅಲರ್ಜಿಯಾಗುವ ಪರಿಸ್ಥಿತಿ ಬಂದಿದೆ. ಇದನ್ನೆಲ್ಲಾ ಸುಧಾರಣೆ ಮಾಡುವ ದೃಷ್ಟಿಯಿಂದ ಏಕ ಕಾಲದ ಚುನಾವಣೆ ಪರಿಹಾರ ಕೊಡಬಹುದು. ಆದರೆ ಈ ಕಾಲದ ಚುನಾವಣೆಯಲ್ಲಿ ಮುಂದೆ ಬರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಸಂಪೂರ್ಣವಾಗಿ ಸೋತಿದೆ ಅನ್ನುವುದು ಇನ್ನೊಂದು ಪ್ರಮುಖವಾದ ಅಂಶ. ಇದನ್ನು ಒಂದೊಂದಾಗಿ ಪಟ್ಟಿ ಮಾಡುತ್ತಾ ಹೋಗೋಣ.

1. ಈ ಹಿಂದೆ ಏಕ ಕಾಲದಲ್ಲಿ ನಡೆಯುತ್ತಿದ್ದ ಚುನಾವಣೆ ಟ್ರ್ಯಾಕ್ ತಪ್ಪಲು ಕಾರಣ ಯಾರು? ಆಡಳಿತ ರೂಢ ಪಕ್ಷಗಳನ್ನು ಅವಧಿ ತೀರುವ ಮೊದಲೇ ಸಂವಿಧಾನದ 356ನೇ ಅನುಚ್ಛೇದ ಬಳಸಿ ರಾಷ್ಟ್ರಪತಿಗಳ ಆಡಳಿತ ಹೇರಿದ ಕಾರಣ ಮತ್ತೆ ಮಧ್ಯಾವಧಿ ಚುನಾವಣೆಗೆ ಹೋಗ ಬೇಕಾದ ಸಂದರ್ಭ ಬಂತು. ಹಾಗಾದರೆ ಇನ್ನು ಮುಂದೆ 356 ವಿಧಿ ಬಳಸ ಬಾರದು ಅನ್ನುವುದಕ್ಕೆ ಬಿಜೆಪಿಯವರ ಸಹಮತವಿದೆಯೇ?

2.ಟ್ರ್ಯಾಕ್ ತಪ್ಪಿ ಹೋಗಲು ಇನ್ನೊಂದು ಬಹು ಪ್ರಧಾನ ಕಾರಣ ನಮ್ಮಲ್ಲಿನ ಸಮಿಶ್ರ ಸರಕಾರ ವ್ಯವಸ್ಥೆ. ಈ ಸಮ್ಮಿಶ್ರ ಸರಕಾರ ಯಾವಾಗಲೂ ಅತಂತ್ರ ಸರಕಾರಗಳೇ ಆಗಿರುತ್ತದೆ. ಒಂದು ವೇಳೆ ಈ ಸಮ್ಮಿಶ್ರ ಸರಕಾರ ಮಧ್ಯದಲ್ಲಿ ಬಿದ್ದು ಹೋದರೆ ಉಳಿದ ಸಮಯವನ್ನು ರಾಷ್ಟ್ರಪತಿಗಳ ಆಡಳಿತಕ್ಕೆ ಒಪ್ಪಿಸಲು ಬಿಜೆಪಿಯವರು ಸಿದ್ಧರಿದ್ದಾರೆಯೇ?

3. ಆಡಳಿತ ರೂಢ ಪಕ್ಷಗಳನ್ನು ಕುದುರೆ ವ್ಯಾಪಾರದ ಮೂಲಕ ಅಭದ್ರಗೊಳಿಸುವ ರಾಜಕೀಯ ಮೇಲಾಟಕ್ಕೆ ಏಕರಾಷ್ಟ್ರ ಏಕಚುನಾವಣೆ ಯಲ್ಲಿ ಏನಾದರೂ ಪರಿಹಾರ ಸೂಚಿಸಿದೆಯೇ?

4. ಏಕ ರಾಷ್ಟ್ರ ಏಕ ಚುನಾವಣೆಯಿಂದಾಗಿ ಸಮಯ, ಹಣ, ಉಳಿಯ ಬಹುದು. ಆದರೆ ಮತದಾರರ ಮತಹಾಕುವ ಸಂದರ್ಭದಲ್ಲಿ ಕೇಂದ್ರ, ರಾಜ್ಯ, ಸ್ಥಳೀಯ ಚುನಾವಣಾ ಮತ ಪೆಟ್ಟಿಗೆಯ ಅರ್ಥಾತ್ ಮತ ಯಂತ್ರದ ಎದುರಿನಲ್ಲಿ ನಿಂತಾಗ ‘ಮೇಲೆ’ ನೋಡಿ ಮತ ಹಾಕ ಬಹುದು ಅನ್ನುವ ನಿರ್ಧಾರಕ್ಕೆ ಬಿಜೆಪಿಯವರು ಬಂದಿರಬಹುದು. ಆದರೆ ಕಾಲ, ವ್ಯಕ್ತಿ, ಸಂದರ್ಭಗಳು ನಿಂತ ನೀರಲ್ಲ. ಬದಲಾಗುವ ಸಂದರ್ಭವೂ ಬರ ಬಹುದು ಅನ್ನುವುದನ್ನು ಅವರು ಮರೆಯ ಬಾರದು.

ಸಂವಿಧಾನ ರೂಪಿಸಿದ ನಮ್ಮ ಹಿರಿಯರು ತುಂಬಾ ದೂರದರ್ಶಿತ್ವ ದಿಂದ ಸಂವಿಧಾನದ ವ್ಯವಸ್ಥೆ ರೂಪಿಸಿದ್ದಾರೆ ಹೊರತು ಯಾವುದೇ ವ್ಯಕ್ತಿ, ಪಕ್ಷ, ಕಾಲ, ಸಂದರ್ಭಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ಸಂವಿಧಾನ ರಚನೆಮಾಡಿಲ್ಲ. ಹಾಗಾಗಿಯೇ ನಮ್ಮ ಸಂವಿಧಾನ ಸಾರ್ವಕಾಲಿಕವಾಗಿ ಸ್ಥಿರವಾಗಿ ನಿಂತಿದೆ. ಇಂದು ತಮಗೆ ಪ್ರಯೋೀಜನ ಸಿಗಬಹುದು ಅನ್ನುವ ಕಾರಣಕ್ಕೆ ಬದಲಾವಣೆಗೆ ಕೈ ಹಾಕಿದರೆ ನಾಳೆ ಇನ್ನೊಬ್ಬ ಅಧಿಕಾರಕ್ಕೆ ಬಂದರೆ ಅದನ್ನು ಆತ ದುರುಪಯೋಗ ಪಡಿಸಿಕೊಳ್ಳ ಬಹುದು ಅನ್ನುವ ಎಚ್ಚರಿಕೆ ಇವರಿಗೆ ಬೇಕಲ್ಲವೇ? ವ್ಯವಸ್ಥೆ ಯಾವಾಗಲೂ ಶಾಶ್ವತ; ವ್ಯಕ್ತಿಗಳು ನಶ್ವರ ಹಾಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವಾಗ ತುಂಬಾ ಜಾಗ್ರತೆ ವಹಿಸ ಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆಗೆ ಗ್ರಾಸವಾಗಬೇಕು ಅನ್ನುವುದು ಎಲ್ಲರ ಆಶಯ.

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

contributor

Similar News