15 ದಿನಗಳ ನಂತರ ಬಿಕ್ಕಳಿಸಿ ಅತ್ತಿದ್ದ ನನ್ನ ಗೆಳೆಯ: ಪ್ರಸಾದ್ ಕೋಲ್ಚಾರ್
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ನನ್ನ ಆತ್ಮೀಯ ಗೆಳೆಯ ಗದಗ ಜಿಲ್ಲೆಯ ಮಹೇಶ್.
► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?
ಮೈಸೂರಿನ ಕ.ರಾ.ಮು.ವಿನಲ್ಲಿ ಪತ್ರಿಕಾ ಪದವಿ ಓದುತ್ತಿರುವಾಗ ಹಾಗೇ ಪರಿಚಯವಾದ ಸ್ನೇಹ ಗಾಢವಾಗಿ ಬೆಳೆದಿತ್ತು. ಎಷ್ಟರ ಮಟ್ಟಿಗೆ ಎಂದರೆ ವಾರಕ್ಕೊಮ್ಮೆಯಾದರೂ ನಾವಿಬ್ಬರು ಪೋನ್ ಸಂಭಾಷಣೆ ಮಾಡದಿದ್ದರೆ ಅದೇನೋ ತಳಮಳ. ಎರಡು ವರ್ಷಗಳ ಪದವಿಯಲ್ಲಿ ಕಾಂಟ್ಯಾಕ್ಟ್ ತರಗತಿಯಲ್ಲಿ 12 ದಿನಗಳಷ್ಟೇ ಒಟ್ಟಿಗೆ ಇದ್ದರೂ ಆ ದಿನಗಳಲ್ಲಿ ನಾವಿಬ್ಬರೂ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದೆವು.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
ಆತ ನನಗೆ ಇಷ್ಟವಾಗಲು ಕಾರಣ ಆತನ ಮುಗ್ದತೆ ಮತ್ತು ಮುಕ್ತ ಮನಸ್ಸು. ತನ್ನೊಳಗೆ ಯಾವುದನ್ನೂ ಅಡಗಿಸದೆ ಎಲ್ಲವನ್ನು ಹೇಳಿಕೊಳ್ಳುವ ಆ ಗುಣ ನನ್ನನ್ನು ಆಕರ್ಷಿಸಿತ್ತು. ಆದರೆ ಕೆಲವೊಮ್ಮೆ ಇರೋ ವಿಚಾರವನ್ನು ಮುಖಕ್ಕೆ ಹೊಡೆದಂತೆ ಹೇಳುವ ಗುಣ ನನ್ನ ಸಿಟ್ಟಿಗೂ ಕಾರಣವಾಗಿಲ್ಲದೇ ಇರಲಿಲ್ಲ.
► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?
ನಮ್ಮಿಬ್ಬರ ನಡುವೆ ಸಾಮ್ಯತೆಗಳು ಅಷ್ಟೇನೂ ಇಲ್ಲ. ಆದರೆ ಆತನೂರಿನ ಜೋಳದ ರೊಟ್ಟಿ, ನಮ್ಮೂರಿನ ಅಕ್ಕಿರೊಟ್ಟಿ ನಮಗಿಬ್ಬರಿಗೂ ಫೇವರಿಟ್. ಶಂಕರ್ ನಾಗ್ ನಮ್ಮಿಬ್ಬರ ಮೆಚ್ಚಿನ ನಟ.
► ಮೊದಲು ರಾಜಿ ಆದದ್ಯಾರು ?
ಒಮ್ಮೆ ಆತನ ತಂಗಿಯ ಮದುವೆಗೆ ನನ್ನ ಕರೆದಿದ್ದ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ನನಗೆ ಹೋಗಲಾಗಿಲ್ಲ. ಅದಕ್ಕಾಗಿ ಆತನನ್ನು ಒಪ್ಪಿಸಲು ಹರಸಾಹಸ ಪಟ್ಟು ಸೋತು ಹೋದೆ. ಮದುವೆ ಮುಗಿದು 15 ದಿನಗಳಾದರೂ ನಾವಿಬ್ಬರೂ ಮಾತನಾಡಿರಲಿಲ್ಲ. ಮತ್ತೆ ನಾನೇ ಫೋನ್ ಮಾಡಿದಾಗ ಆತ ಬಿಕ್ಕಳಿಸಿ ಅತ್ತದ್ದು ನನಗಿನ್ನೂ ಮರೆಯಲಾಗುತ್ತಿಲ್ಲ.
► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?
ಫ್ರೆಂಡ್ ಶಿಪ್ ಅಂದರೆ, ಜೀವಮಾನವಿಡೀ ಇರಬೇಕು. ಕೆಲವರು ಕಾಲೇಜಿಗೆ ಬಂದಾಗ ಹೈಸ್ಕೂಲು ಫ್ರೆಂಡ್ಸ್ ನ ಮರೀತಾರೆ. ಕಾಲೇಜು ಮುಗಿದ ಮೇಲೆ ಯಾರ ನೆನಪೂ ಇರೋದಿಲ್ಲ. ಮತ್ತೆ ತಾವು ಮತ್ತು ತಮ್ಮ ಕೆಲಸಗಳ ಮಧ್ಯೆ ಫ್ರೆಂಡ್ ಶಿಪ್ ಕೇವಲ ನಾಮಕಾವಸ್ತೆ ಮಾತ್ರ..!.
► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ?
ನಾನು ನನ್ನ ಫ್ರೆಂಡ್ ಜೊತೆ ಯಾವತ್ತೂ ಹೊಟ್ಟೆಕಿಚ್ಚು ಪಟ್ಟಿಲ್ಲ, ಅದರ ಅಗತ್ಯವೂ ಇಲ್ಲ. ಯಾಕಂದ್ರೆ ಆತ ನನ್ನ ಬೆಸ್ಟ್ ಪ್ರೆಂಡ್.
► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?
ಕೇವಲ ಮಹೇಶ ಮಾತ್ರ ನನ್ನ ಬೆಸ್ಟ್ ಫ್ರೆಂಡ್ ಅಲ್ಲ. ಆತನ ಜೊತೆಗೆ ಅನಿಲ್, ಅರುಣ್, ಶಿವರಾಜ್, ಅಝೀಝ್, ಬಸು, ಶಾಂತಿ ಹೀಗೆ ಹಲವು ಜನರ ಫ್ರೆಂಡ್ ಲಿಸ್ಟ್ ನನ್ನ ಬಳಿ ಇದೆ. ಇವರನ್ನೆಲ್ಲಾ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಒನ್ಸ್ ಅಗೈನ್ ಹ್ಯಾಪಿ ಫ್ರೆಂಡ್ ಶಿಪ್ ಡೇ.
- ಪ್ರಸಾದ್ ಕೋಲ್ಚಾರ್, ಸುಳ್ಯ