ನನ್ನ ಫೇವರಿಟ್ ಕ್ರಿಕೆಟಿಗ ಇರ್ಫಾನ್ ಪಠಾಣ್, ಆತನದ್ದು ಯೂಸುಫ್ ಪಠಾಣ್: ಕ-ಶಿಖ ಬಜ್ಪೆ

Update: 2018-08-05 10:17 GMT

► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು? 

ಕಮಾಲ್ ಕೈಕಂಬ

► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ? 

ನನ್ನ ಪತ್ನಿಯ ಊರಾದ ಕೈಕಂಬದ ಮಸೀದಿಗೆ ಬರುವಾಗ ಹೀಗೆ ಅಲ್ಪಸ್ವಲ್ಪ ಪರಿಚಯವಾಗಿತ್ತು. ವಯಸ್ಸಿನಲ್ಲಿ ಕಿರಿಯವನಾದ ಆತ ನನ್ನನ್ನು ಬಹುವಚನದಿಂದ ಕರೆಯುತ್ತಿದ್ದ. ಅದು ಈಗಲೂ ಮುಂದುವರೆದಿದೆ.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? 

ಸಂಸಾರದ ಹೊರೆ ಹೊತ್ತು ಕೆಲಸದ ನಿಮಿತ್ತ ಬೆಂಗಳೂರಿಗೆ ಹೊರಡಲು ಬಿ.ಸಿ.ರೋಡ್ ಹೈವೆಯಲ್ಲಿ ಬಸ್ ಕಾಯುತ್ತಿದ್ದೆ. ಬಸ್‌ ಗಳಲ್ಲಿ ಸೀಟು ಇರಲಿಲ್ಲ. ರಾತ್ರಿ ಹನ್ನೆರಡು ಆಗಿರಬಹುದು. ಆತ್ಮೀಯ ಸ್ನೇಹಿತರಿಗೆ ಕರೆ ಮಾಡಿ ನನ್ನ ಸಂಕಷ್ಟ ಹೇಳಿದೆ. ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ಹಾಗೇ ಅಷ್ಟೇನೂ ಪರಿಚಯ ಇಲ್ಲದ ಗೆಳೆಯ ಕಮಾಲ್‌ನಿಗೆ ಕರೆ ಮಾಡಿ ನನ್ನ ಪರಿಸ್ಥಿತಿ ಹೇಳಿದೆ. ಒಂದರ್ಧ ಗಂಟೆಯಲ್ಲಿ ಸ್ಥಳಕ್ಕೆ ಬರುವುದಾಗಿ ಹೇಳಿದ ಕಮಾಲ್, ಬರುವುದರ ಒಳಗಾಗಿ ಹಲವು ಬಾರಿ ಕರೆ ಮಾಡಿ ವಿಚಾರಿಸಿ ಧೈರ್ಯ ತುಂಬುತ್ತಿದ್ದ. ಅಲ್ಲದೆ, ನನ್ನ ತುರ್ತು ಪರಿಸ್ಥಿತಿಯನ್ನು ಅರಿತ ಆತ ತನ್ನ ಬೈಕ್ ನಲ್ಲೇ ಬೆಂಗಳೂರು ತಲುಪಿಸಿದ. ಆತನಲ್ಲಿರುವ  ಈ ಗುಣ ಆತನೊಂದಿಗೆ ಆತ್ಮೀಯತೆಯನ್ನು ಬಿತ್ತಿತು.

► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ? 

ಆಪತ್ಕಾಲಕ್ಕೆ ಜಾತಿ ಭೇದವಿಲ್ಲದೆ ಪ್ರತಿಯೊಬ್ಬರಿಗೂ ನೆರವಾಗುವುದು ಆತನಲ್ಲಿರುವ ಬಹುದೊಡ್ಡ ಗುಣ. ಕೈಕಂಬ ಪರಿಸದಲ್ಲಿ ಸಮಾಜ ಸೇವನಾಗಿ ಗುರುತಿಸಿಕೊಂಡವ. ಎಲ್ಲಕ್ಕಿಂತ ಮಿಗಿಲಾಗಿ ತನ್ನ ಸಣ್ಣ ಪ್ರಾಯದಲ್ಲಿಯೇ ಇಬ್ಬರು ತಂಗಿಯರ ಮದುವೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವನು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ? 

ನನಗೆ ಕೋಪ ಬರುವುದೂ ಕೂಡಾ ಅಪರೂಪವೇ. ಆದರೂ ಒಮ್ಮೆ ಮನೆಯಲ್ಲಿ ಚಿಕ್ಕದೊಂದು ಪಾರ್ಟಿ ಇತ್ತು. ಆತನಿಗೆ ಆಹ್ವಾನ ನೀಡಿದ್ದೆ. ಮಧ್ಯಾಹ್ನದವರೆಗೂ ಕಾಯಿಸಿ, ರಾತ್ರಿ ಬರುತ್ತೇನೆ ಎಂದಿದ್ದ. ಅಂದು ನನಗೆ ಆತನ ಮೇಲೆ ತುಸು ಕೋಪ ಬಂದಿತ್ತು.

► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?

ನಮ್ಮಿಬ್ಬರ ನಡುವೆ ತುಂಬಾ ವ್ಯತ್ಯಾಸಗಳೇನೂ ಇರಲಿಲ್ಲ. ಆತ ಕ್ರಿಕೆಟ್‌ನಲ್ಲಿ ನನ್ನಂತೆಯೇ ಪಾಕಿಸ್ತಾನವನ್ನು ದ್ವೇಷಿಸುತ್ತಾನೆ. ಮೊಬೈಲ್ ಗೇಮ್‌ ನಲ್ಲಿ ಆತ ಲೂಡೋ ಇಷ್ಟಪಟ್ಟರೆ ನಾನು ಚೆಸ್ ಆಟವನ್ನು ಇಷ್ಟಪಡುವೆ. ಆತ ಹೆಚ್ಚಾಗಿ ಹೊರಗಿನ ಆಹಾರ ತಿನ್ನಲು ಇಷ್ಟಪಡುವನು. ಸ್ವಲ್ಪ ತಿಂಡಿ ಪೋತ ಅನ್ನಬಹುದು. ರಾತ್ರಿ ಊಟ ಮಾತ್ರ ಮನೆಯಲ್ಲಿ ಮಾಡುತ್ತಾನೆ. ಆತನ ಫೇವರೇಟ್ ನಟ ಕಮಲ್ ಹಾಸನ್ ಆದರೆ ನನಗೆ ಅಲ್ಲು ಅರ್ಜುನ್ ಇಷ್ಟ. ಕ್ರಿಕೆಟಿಗರಲ್ಲಿ ಆತನಿಗೆ ಯೂಸುಫ್ ಪಠಾಣ್ ಇಷ್ಟವಾದರೆ, ಇರ್ಫಾನ್ ಪಠಾಣ್ ನನಗಿಷ್ಟವಾಗುತ್ತಾರೆ.

► ನಿಮ್ಮ ನಡುವಿನ ವಿರೋಧಾಭಾಸಗಳು ? 

ನಾನು ಹೆಚ್ಚಾಗಿ ಮನೆಯಲ್ಲಿರಲು ಇಷ್ಟಪಡುತ್ತೇನೆ. ಆದರೆ ಆತ ಊರೂರು ತಿರುಗಾಡುತ್ತಿರುತ್ತಾನೆ. ಆತನಿಗೆ ಸುಗಂಧದ್ರವ್ಯ ಎಂದರೆ ಪಂಚಪ್ರಾಣ. ಇಲ್ಲಸಲ್ಲದ ವಿಷಯಗಳಿಗೂ ಕೈ ಹಾಕಿ ಹಲವಾರು ಬಾರಿ ಕೈಸುಟ್ಟುಕೊಂಡಿದ್ದ ಇದಕ್ಕೆ ನನ್ನ ವಿರೋಧವಿತ್ತು.

► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ? 

ಇಲ್ಲ ಎಂದೇ ಹೇಳಬಹುದು. ಕಾರಣ ಆತ ನನನ್ನು ಬಹಳ ಗೌರವದಿಂದ ನೋಡುತ್ತಾನೆ. ಆದ್ದರಿಂದ ಜಗಳದ ಮಾತು ಬಂದಿಲ್ಲ.

► ಮೊದಲು ರಾಜಿ ಆದದ್ಯಾರು ? 

ದೇವರ ದಯೆಯಿಂದ ನಾವು ಇದುವರೆಗೂ ಕೋಪಿಕೊಂಡಿಲ್ಲ.

► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ? 

ನನ್ನ ಪ್ರಕಾರ ಫ್ರೆಂಡ್‌ ಶಿಪ್ ಎಂದರೆ, ನಾವು ಕನ್ನಡಿ ಮುಂದೆ ನಿಂತಾಗ ನಮ್ಮ ಪ್ರತಿಬಿಂಬವನ್ನು ನಾವು ಕೇಳದೆಯೇ ತೋರಿಸುತ್ತದೆ. ಅದೇ ರೀತಿ ಪರಸ್ಪರ ಹೊಂದಾಣಿಕೆಯ ಜತೆಗೆ ಮನದ ಮಾತನ್ನು ಹೇಳದೆ ಅರ್ಥೈಸುವವನು ನಿಜವಾದ ಗೆಳೆಯನಾಗುತ್ತಾನೆ.

► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ? 

ನನ್ನ ಪ್ರಕಾರ ಗೆಳೆಯನೆಂದರೆ ಕಷ್ಟಸುಖಗಳನ್ನು ಪರಸ್ಪರ ಹಂಚಿಕೊಳ್ಳುವವರಾಗಿರಬೇಕು. ಕೇವಲ ಹಣ, ಮನರಂಜನೆಗೋಸ್ಕರ ಗೆಳೆತನ ಇರಬಾರದು.

► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ? 

ಗೆಳೆಯನ ಬಗ್ಗೆ ಹೊಟ್ಟೆಕಿಚ್ಚು ಪಟ್ಟರೆ ಗೆಳೆತನಕ್ಕೆ ಬೆಲೆ ಇದೆಯೇ...? ಅಂತಹ ದುರಾಲೋಚನೆಗಳು ಈವರೆಗೆ ಬಂದಿಲ್ಲ.

► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?

ಹೌದು, ಮೊದಲು ಶರೀಫ್ ಎಂಬ ಬಾಲ್ಯ ಸ್ನೇಹಿತ ಇದ್ದ. ಈಗ ಆತ ಸಂಸಾರ ಸಮೇತ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾನೆ. ನೆನಪಾದಾಗ ಕರೆ ಮಾಡುತ್ತಿರುತ್ತಾನೆ.

- ಕ-ಶಿಖ ಬಜ್ಪೆ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ
ಕಥೆಗಾರ