ಟೋಲ್ : ಕೇಳಲೇಬೇಕಾದ ಕೆಲವು ಪ್ರಶ್ನೆಗಳು...
ಮಂಗಳೂರು ತಾಲೂಕಿನ ತಲಪಾಡಿಯಲ್ಲಿ ಟೋಲ್ ಸಂಗ್ರಹಿಸುವುದರ ವಿರುದ್ಧ ಪ್ರತಿರೋಧದ ಧ್ವನಿ ಜೋರಾಗಿಯೇ ಕೇಳಿಬರುತ್ತಿವೆ. ಈ ಪ್ರತಿರೋಧದಲ್ಲಿ ಎರಡು ಗುಂಪುಗಳಿವೆ. ಒಂದು ನಿಜಕ್ಕೂ ಹೋರಾಟದಲ್ಲಿ ತೊಡಗಿದವರಾಗಿದ್ದರೆ, ಇನ್ನೊಂದು ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲರ ವೈಫಲ್ಯವನ್ನು ಮುಚ್ಚಲು ಹೋರಾಟದ ನಾಟಕವಾಡುತ್ತಿರುವ ಬಿಜೆಪಿಯ ಗುಂಪು.
ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿ ಪ್ರಾರಂಭವಾಗಿ ಒಂಬತ್ತು ವರ್ಷಗಳಾದವು. ಇಂದಿಗೂ ಅರ್ಧದಷ್ಟು ಕೆಲಸವೂ ಮುಗಿದಿಲ್ಲ. ಅದಾಗ್ಯೂ ಅದೆಷ್ಟೋ ವರ್ಷಗಳ ಹಿಂದೆಯೇ ಟೋಲ್ ಗುತ್ತಿಗೆಯನ್ನು ನೀಡಲಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಸದರನ್ನು ಗೇಲಿ ಮಾಡುವ ಹಲವಾರು ಪೋಸ್ಟ್ ಗಳು ವೈರಲ್ ಆಗಿವೆ. ಪತ್ರಿಕೆಗಳು, ಸ್ಥಳೀಯ ಟಿವಿ ವಾಹಿನಿಗಳು ಅಕ್ರಮ ಟೋಲ್ ಸಂಗ್ರಹ, ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯಲ್ಲಿ ವಿಳಂಬ ಇತ್ಯಾದಿಯ ವಿರುದ್ಧ ವರದಿಗಳನ್ನು ಪ್ರಕಟಿಸುತ್ತಿವೆ ಮತ್ತು ಪ್ರಸಾರ ಮಾಡುತ್ತಿವೆ. ಇನ್ನೇನು ಚುನಾವಣೆ ಸಮೀಪಿಸುತ್ತಿರುವಾಗ ಅದು ತನಗೆ ತಿರುಗುಬಾಣವಾಗಬಹುದೆಂದು ಹೆದರಿದ ಸಂಸದ ನಳಿನ್ ಏಕಾಏಕಿ ಎಚ್ಚೆತ್ತು ಟೋಲ್ ಸಂಗ್ರಹದ ವಿರುದ್ಧ ಮಾತನಾಡತೊಡಗಿದ್ದಾರೆ. ನಂಬರ್ ಒನ್ ಸಂಸದನೆಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದ್ದ ಸಂಸದರ ಸಾಧನೆಯ ಹಿರಿಮೆಗೆ ಗರಿ ಮೂಡಿಸಲು ಈ ರಸ್ತೆ ಕಾಮಗಾರಿಯೊಂದೇ ಸಾಕು. ತನ್ನ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಬೆಂಕಿ ಹಚ್ಚುವ ಮಾತನ್ನೇ ಆಡಿದ ಸಂಸದರ ಸಾಧನೆಗೆ ಈ ಕಾಮಗಾರಿ ಕೈಗನ್ನಡಿ ಹಿಡಿಯುವಂತಿದೆ.
ಇತ್ತೀಚೆಗೆ ಸಂಸದರು ಇಂಜಿನಿಯರ್‌ಗಳಿಗೆ ಬೈಯ್ಯುವುದನ್ನು ರೆಕಾರ್ಡ್ ಮಾಡಿಸಿ ಅದನ್ನು ಅವರೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿಸುತ್ತಿದ್ದಾರೆ. ಮೊನ್ನೆ ಸ್ವತಃ ಅವರೇ ಮುಂದೆ ನಿಂತು ಟೋಲ್ ಸಂಗ್ರಹಿಸಲು ಬಿಡಲಾರೆ ಎಂದು ಬೊಬ್ಬೆ ಹೊಡೆದರು. ಆದಾಗ್ಯೂ ಟೋಲ್ ಸಂಗ್ರಹವೇನೂ ನಿಂತಿಲ್ಲ. ಅದು ಸಂಸದರು ಬೊಬ್ಬೆ ಹೊಡೆದ ದಿನವೂ ನಿರಾತಂಕವಾಗಿ ನಡೆದಿತ್ತು. ಸಂಸದರು ಯಾರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗದ ಪ್ರಶ್ನೆ...
ಹಕೀಕತ್ತೇನೆಂದರೆ ರಸ್ತೆ ಮತ್ತು ಮೇಲ್ಸೇತುವೆ ಕಾಮಗಾರಿಯ ಗುತ್ತಿಗೆ ಪಡೆದಿರುವ ನವಯುಗ್ ಕಂಪೆನಿಯ ಜೊತೆ ಖುದ್ದು ಸಂಸದರೇ ಶಾಮೀಲಾಗಿದ್ದಾರೆ. ಇದೀಗ ಜನತೆಯ ಆಕ್ರೋಶ ಭುಗಿಲೇಳುತ್ತಿರುವಾಗ ಸಂಸದರು ‘ನಾ ಹೊಡೆದಂತೆ ಮಾಡುವೆ, ನೀ ಅತ್ತಂತೆ ಮಾಡು’ ಎಂಬ ನಾಟಕವನ್ನು ಕಂಪೆನಿ ಜೊತೆ ಸೇರಿ ಆಡುತ್ತಿದ್ದಾರೆ. ಇದು ಸಂಸದರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾದರೆ ಇದರಾಚೆಗೂ ನಾವೆಲ್ಲಾ ಕೇಳಲೇಬೇಕಾದ ಮೂಲಭೂತ ಪ್ರಶ್ನೆಗಳಿವೆ.
ಎಲ್ಲಕ್ಕಿಂತ ಮುಂಚೆ ಈ ಟೋಲ್ ಸಂಗ್ರಹವೇ ಅನ್ಯಾಯದ್ದು. ಏಕೆಂದರೆ ಜನತೆ ತೆರಿಗೆ ಕಟ್ಟುತ್ತಾರೆ, ವಾಹನಗಳನ್ನು ರಸ್ತೆಗೆ ಇಳಿಸುವ ಮುನ್ನವೇ ರಸ್ತೆ ತೆರಿಗೆ ಕಟ್ಟಿಯೇ ವಾಹನ ರಸ್ತೆಗಿಳಿಸಲಾಗುತ್ತದೆ. ಇನ್ನು ಅದರ ಮೇಲೆ ಜಿಎಸ್ಟಿ ಬೇರೆ ವಿಧಿಸಲಾಗುತ್ತಿದೆ. ಇದೆಲ್ಲಾ ಆಗಿಯೂ ಪ್ರತೀ ಬಾರಿ ರಸ್ತೆಯಲ್ಲಿ ಸಂಚರಿಸುವಾಗ ಟೋಲ್ ಕಟ್ಟಬೇಕೆಂದರೆ ಏನರ್ಥ ? ಏನು ನವಯುಗ ಕಂಪೆನಿ ಕಾಮಗಾರಿಯನ್ನು ಧರ್ಮಾರ್ಥ ಮಾಡುತ್ತಿದೆಯೇ...? ಹಾಗಿದ್ದರೆ ಒಂದು ರಸ್ತೆ ನಿರ್ಮಿಸಿಕೊಟ್ಟರೆ ಕಂಪೆನಿಯ ಒಡೆಯನ ಮಕ್ಕಳು ಮೊಮ್ಮಕ್ಕಳ ಕಾಲಕ್ಕೂ ಅದಕ್ಕಾಗಿ ಜನತೆ ಟೋಲ್ ಕಟ್ಟುತ್ತಿರಬೇಕೇ...?
ನಿಯಮಾವಳಿಗಳ ಪ್ರಕಾರ ಅರುವತ್ತು ಕಿಲೋ ಮೀಟರ್ ವ್ಯಾಪ್ತಿಗೆ ಒಂದಕ್ಕಿಂತ ಹೆಚ್ಚು ಕಡೆ ಟೋಲ್‌ಗೇಟ್‌ಗಳು ಇರಬಾರದು. ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 45 ಕಿ.ಮೀ. ವ್ಯಾಪ್ತಿಯಲ್ಲಿ ತಲಪಾಡಿ, ಸುರತ್ಕಲ್ ಎನ್‌ಐಟಿಕೆ, ಹೆಜಮಾಡಿ ಹೀಗೆ 3 ಟೋಲ್ ಬೂತ್‌ಗಳಿವೆ. ಈ ಮೂರು ಬೂತುಗಳು ನಿಯಮಬಾಹಿರವಾಗಿ ಟೋಲ್ ಹೆಸರಲ್ಲಿ ಜನತೆಯನ್ನು ಲೂಟುತ್ತಿದ್ದರೂ ಈವರೆಗೆ ಯಾವ ಕಾನೂನೂ ಇವರನ್ನು ಪ್ರಶ್ನಿಸಿಲ್ಲ. ಅಂದರೆ ನಿಯಮಾವಳಿಗಳು ಕೇವಲ ಕಡತಕ್ಕೆ ಮಾತ್ರ ಸೀಮಿತವೇ...?
ನಿಯಮದ ಪ್ರಕಾರ ಶೇ.75 ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುವಂತಿಲ್ಲ. ಆದರೆ ರಾ.ಹೆ.66 ರಲ್ಲಿರುವ ಈ ಮೇಲೆ ಉಲ್ಲೇಖಿಸಲಾದ ಮೂರು ಟೋಲ್‌ಗೇಟ್‌ಗಳೇ ಅಕ್ರಮದ್ದು. ಈ ರಸ್ತೆ ಕಾಮಗಾರಿ ಪ್ರಾರಂಭಿಸಿದ ಕೆಲವೇ ತಿಂಗಳುಗಳಲ್ಲಿ ಟೋಲ್ ಲೂಟುವಿಕೆ ಪ್ರಾರಂಭವಾಗಿತ್ತು. ಅವರು ಅದಕ್ಕೆ ನೀಡುವ ಸಮಜಾಯಿಷಿ ಏನೆಂದರೆ ನಾವು ಕಾಮಗಾರಿ ಮುಗಿಸಿದ ಕಿಲೋ ಮೀಟರ್ ಲೆಕ್ಕದಲ್ಲಿ ಟೋಲ್ ಸಂಗ್ರಹಿಸುತ್ತಿದ್ದೇವೆ ಎಂದು.
ಈ ರೀತಿಯಲ್ಲಿ ಟೋಲ್ ಸಂಗ್ರಹಿಸುವುದೇ ಅಕ್ರಮ. ಇಂತಹದ್ದಕ್ಕೆ ಆಸ್ಪದ ನೀಡುವ ಲೂಪ್‌ಹೋಲ್ಗಳೂ ನಿಯಮಾವಳಿಯಲ್ಲಿಲ್ಲ. ಶೇ.75 ಬಿಡಿ, ಇನ್ನೂ ಪ್ರಮುಖ ಕಾಮಗಾರಿಗಳಾದ ಮೇಲ್ಸೇತುವೆ ಕೆಲಸಗಳೇ ಅರ್ಧದಷ್ಟೂ ಮುಗಿದಿಲ್ಲ. ಆದರೂ ಈ ಎಲ್ಲಾ ಅಕ್ರಮಗಳ ಮಧ್ಯೆ ಯಾವ ಕಾನೂನಿನ ಭಯವೂ ಇಲ್ಲದೇ ಟೋಲ್ ಲೂಟಲಾಗುತ್ತಿದೆ.
ನಿಯಮಾವಳಿಗಳ ಪ್ರಕಾರ ಒಂದು ಟೋಲ್‌ಗೇಟಿನಲ್ಲಿ ವಾಹನವೊಂದನ್ನು ಮೂರು ನಿಮಿಷಗಳಿಗಿಂತ ಹೆಚ್ಚು ಕಾಲ ನಿಲ್ಲಿಸಿದರೆ ಆ ವಾಹನದಿಂದ ಟೋಲ್ ಸಂಗ್ರಹಿಸುವಂತಿಲ್ಲ. ಮೂರು ನಿಮಿಷ ಬಿಡಿ ಕಾಲು ಗಂಟೆ ಕಾದರೂ ಅವರು ಲೂಟುವುದನ್ನು ಲೂಟಿಯೇ ತೀರುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಟೋಲ್ಗೇಟ್‌ಗಳಲ್ಲಿ ಗೂಂಡಾಗಳನ್ನು ನೇಮಕ ಮಾಡಲಾಗಿದೆ. ಯಾರಾದರೂ ಇಂತಹ ಕಾನೂನು ನಿಯಮಾವಳಿಗಳ ಬಗ್ಗೆ ಮಾತನಾಡಿದರೆ ಅವರನ್ನು ಗೂಂಡಾಗಳು ಮ್ಯಾನೇಜ್ ಮಾಡುತ್ತಾರೆ.
ಇವ್ಯಾವುವೂ ಗುಪ್ತವಾಗಿ ನಡೆಯುವಂತಹದ್ದಲ್ಲ. ಅದಾಗ್ಯೂ ಈವರೆಗೆ ಇಂತಹ ಕಾನೂನು ಬಾಹಿರ ಲೂಟುವಿಕೆಯ ವಿರುದ್ಧ ಬಹುತೇಕ ಜನಪ್ರತಿನಿಧಿಗಳು ಜಾಣ ಮೌನ ತಳೆದು ಲೂಟುವಿಕೆಗೆ ಮೌನ ಸಮ್ಮತಿ ನೀಡುತ್ತಾ ಬಂದಿದ್ದಾರೆ. ಈ ಎಲ್ಲಾ ಅಕ್ರಮಗಳ ಕುರಿತಂತೆ ಯಾರು ತನಿಖೆಗೆ ಆಗ್ರಹಿಸಬೇಕಿತ್ತೋ ಅವರೇ ಲೂಟಿಕೋರ ಅಕ್ರಮ ಟೋಲ್ ಕಂಪೆನಿಯ ಜೊತೆ ಕೈಜೋಡಿಸಿ ಜನತೆಯನ್ನು ವಂಚಿಸುತ್ತಲೇ ಬಂದಿದ್ದಾರೆ. ವಂಚಕ ಜನಪ್ರತಿನಿಧಿಗಳಿಗೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲೇಬೇಕಿದೆ.