ಮೋಹನ್ ಭಾಗವತರ ಮಾತು ಮತ್ತು ಕೃತಿ
ಹಿಂದುತ್ವ ಎಲ್ಲರನ್ನೂ ಒಳಗೊಳ್ಳಬೇಕೆಂದು ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಇಂತಹ ಮಾತು ಸಂಘದ ನಾಯಕರಿಂದ ಇದೇ ಮೊದಲ ಬಾರಿ ಕೇಳಿ ಬರುತ್ತಿಲ್ಲ. ಗೋಳ್ವಾಲ್ಕರ್ ನಂತರ ಬಂದ ಸರಸಂಘಚಾಲಕರೆಲ್ಲ ಒಂದಿಲ್ಲೊಂದು ಬಾರಿ ಇಂತಹ ಮಾತನ್ನು ಹೇಳುತ್ತಲೇ ಬಂದಿದ್ದಾರೆ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಹೆಸರಿಟ್ಟುಕೊಂಡು ಆರೆಸ್ಸೆಸ್ ಎಂದು ಕರೆಯಲ್ಪಡುವ ಸಂಘಟನೆಗೆ ಒಂದೇ ಮುಖ, ಒಂದೇ ನಾಲಗೆ, ಒಂದೇ ಆಕಾರ ಇಲ್ಲ. ಬೇರೆ ಬೇರೆ ರೂಪಗಳಲ್ಲಿ ಪ್ರತ್ಯಕ್ಷವಾಗಿ ಆಗಾಗ ಮಾಯವಾಗುವ ಈ ವಿಚಿತ್ರ ಸಂಘಟನೆ ಬಗ್ಗೆ ತಿಳಿದವರಿಗೆ ವಿವರಿಸುವ ಅಗತ್ಯವಿಲ್ಲ. ಆದರೆ ನೂರಮೂವತ್ತು ಕೋಟಿ ಭಾರತೀಯರಲ್ಲಿ ಇದರ ನಿಜ ಸ್ವರೂಪವನ್ನು ತಿಳಿಯದವರ ಸಂಖ್ಯೆ ಹೆಚ್ಚಿದೆ. ಆದ್ದರಿಂದಲೇ ಇದರ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕಾಗಿದೆ. ಏಕಕಾಲದಲ್ಲೇ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ನಾಥೂರಾಮ್ ಗೋಡ್ಸೆ, ಯಡಿಯೂರಪ್ಪ, ಅನಂತಕುಮಾರ್ ಹೆಗಡೆ, ಮೋಹನ್ ಭಾಗವತ್, ಪರಶು ರಾಮ್ ವಾಗ್ಮೋರೆ ಹೀಗೆ ತರಾತುರಿ ವ್ಯಕ್ತಿಗಳನ್ನು ಸೃಷ್ಟಿಸುವ ಪ್ರಚಂಡ ಸಾಮರ್ಥ್ಯ ಈ ಸಂಘಟನೆಗಿದೆ. ಜೊತೆಗೆ ಗಾಂಧೀಜಿ, ಅಂಬೇಡ್ಕರ್ ಹಿಂದೆ ಯಾವುದೋ ಶಾಖೆಗೆ ಭೇಟಿ ನೀಡಿದ್ದರು, 1962ರ ಗಣರಾಜ್ಯೋತ್ಸವದ ರ್ಯಾಲಿಯಲ್ಲಿ ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು ಎಂದು ಸುಳ್ಳಿನ ಕಥೆಗಳನ್ನು ಸೃಷ್ಟಿಸುತ್ತದೆ. ಯಾವುದಕ್ಕೂ ದಾಖಲೆಗಳಿಲ್ಲ.
ಒಂದೆಡೆ ಗಾಂಧಿ ಹತ್ಯೆಯನ್ನು ಸಂಭ್ರಮಿಸುತ್ತದೆ. ಇನ್ನೊಂದೆಡೆ ಗೋಡ್ಸೆ ಮಹತ್ಮಾ ಗಾಂಧಿಯನ್ನು ಹತ್ಯೆ ಮಾಡುವಾಗ ಸಂಘವನ್ನು ತೊರೆದಿದ್ದ ಎಂದು ಕತೆಕಟ್ಟುತ್ತದೆ. ಅಡ್ವಾಣಿಯಿಂದ ರಥಯಾತ್ರೆ ಮಾಡಿಸಿ ದೇಶವ್ಯಾಪಿ ರಕ್ತಪಾತಕ್ಕೆ ಕಾರಣವಾಗುತ್ತದೆ. ಇನ್ನೊಂದೆಡೆ ಮುಸ್ಲಿಮರನ್ನು ಒಪ್ಪಿಕೊಳ್ಳದಿದ್ದರೆ ಹಿಂದುತ್ವ ಅಪೂರ್ಣ ಎಂದು ಮೋಹನ್ ಭಾಗವತರಿಂದ ಹೇಳಿಸುತ್ತದೆ. ಹಿಂದುತ್ವವನ್ನು ಕೇಂದ್ರ ವಿಷಯವನ್ನಾಗಿಟ್ಟುಕೊಂಡು ದಿಲ್ಲಿಯಲ್ಲಿ ನಡೆದ ಮೂರು ದಿನಗಳ ಉಪನ್ಯಾಸ ಮಾಲಿಕೆಯಿಂದ ಆರೆಸ್ಸೆಸ್ ಬದಲಾಗಿದೆ ಎಂದು ಕೆಲವರು ಭ್ರಮೆ ಯಲ್ಲಿದ್ದಾರೆ. ಆದರೆ ಆರೆಸ್ಸೆಸ್ ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ ಅತ್ಯಂತ ಜಾಣತನದಿಂದ ಇಂತಹ ದಾಳಗಳನ್ನು ಉರುಳಿಸುತ್ತದೆ ಸಂಘಕ್ಕೆ ಯಾರೂ ವಿರೋಧಿಗಳಿಲ್ಲ ಎಂಬ ಸಂಪನ್ನರ ಮುಖವಾಡ ಹಾಕುತ್ತದೆ.
ಈ ಬಾರಿ ಮೋಹನ್ ಭಾಗವತರು ಉಪನ್ಯಾಸ ಮಾಡುತ್ತ ಸ್ವಾತಂತ್ರ ಹೋರಾಟ ದಲ್ಲಿ ಕಾಂಗ್ರೆಸ್ ಪಾತ್ರವನ್ನು ಹಾಡಿ ಹೊಗಳಿದರು. ಇನ್ನೊಂದೆಡೆ ಅವರ ಸಂಘದ ಶಾಖೆಯಲ್ಲಿತಯಾರಾದ ಸಾವಿರಾರು ಸ್ವಯಂ ಸೇವಕರು ಹಾಗೂ ಅವರ ಐಡಿಯಾಲಜಿ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ ಅವರನ್ನು ನಿಂದಿಸುತ್ತ ಫೋಟೊಶಾಪಿಂಗ್ ಮಾಡಿ ಅವರ ಚಾರಿತ್ರವಧೆ ಮಾಡುತ್ತ ವಿಷ ಕಾರುತ್ತಿದ್ದರು. ಆರೆಸ್ಸೆಸ್ ಅಂದರೆ ಇದಲ್ಲದೆ ಇನ್ನೇನೂ ಅಲ್ಲ.
ದಿಲ್ಲಿಯಲ್ಲಿ ಉಪನ್ಯಾಸ ಮಾಡುತ್ತಿದ್ದ ಭಾಗವತರು ‘‘ಮುಸಲ್ಮಾನರಿಲ್ಲದ ಹಿಂದೂ ಸಮಾಜ ನಿರರ್ಥಕ’’ ಅಂದರು. ಆದರೆ ಇದೇ ಭಾಗವತರು ಕೇವಲ ಒಂದು ವಾರದ ಹಿಂದೆ ಚಿಕಾಗೋದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ‘‘ಹಿಂದೂಗಳಲ್ಲಿ ಒಗ್ಗಟ್ಟಿಲ್ಲ. ಅಡವಿಯ ರಾಜ ಸಿಂಹ ಕೂಡ ಒಂಟಿಯಾಗಿ ಸಿಕ್ಕರೆ ಕಾಡುನಾಯಿಗಳು ದಾಳಿ ನಡೆಸಿ ಕೊಂದು ಹಾಕಬಲ್ಲವು’’ ಎಂದು ಹೇಳಿದರು.
ಭಾಗವತರೆ, ನೀವು ಚಿಕಾಗೋದಲ್ಲಿ ಹೇಳಿದ ಸಿಂಹ ರಾಜ, ಅಡವಿ ನಾಯಿ ಕತೆಯಲ್ಲಿ ಸಿಂಹ ಯಾರು? ಅಡವಿ ನಾಯಿ ಯಾರು? ಎಂಬುದನ್ನು ವಿವರಿಸಿ ಹೇಳುವಿರಾ? ದಿಲ್ಲಿಯಲ್ಲಿ ಮುಸಲ್ಮಾನರ ಬಗ್ಗೆ ನೀವು ತೋರಿದ ನಾಟಕೀಯ ಅನುಕಂಪವನ್ನು ಹೇಗೆ ನಂಬಲು ಸಾಧ್ಯ? ನಿಮಗೆ ಎಷ್ಟು ನಾಲಗೆಗಳಿವೆ? ಯಾರ ಕಿವಿಯ ಮೇಲೆ ಹೂವು ಇಡಲು ಹೊರಟಿದ್ದೀರಿ?
ಹಿಂದುತ್ವ ಎಲ್ಲರನ್ನು ಒಳಗೊಳ್ಳಬೇಕೆಂದು ತುಟಿಯಲ್ಲಿ ಹೇಳುತ್ತೀರಿ. ಗೋರಕ್ಷಣೆ ಹೆಸರಿನಲ್ಲಿ ಹಿಂಸೆ ಬೇಡ ಎನ್ನುತ್ತೀರಿ. ಹಾಗಿದ್ದರೆ ಪ್ರತ್ಯೇಕತೆ ಮಾತನ್ನು ಆಡುತ್ತಿರುವವರು ಯಾರು? ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್, ಆರ್‌ಜೆಡಿ ಕಾರ್ಯಕರ್ತರೇ? ವಿಷಕಾರು ತ್ತಿರುವವರೆಲ್ಲ ನಿಮ್ಮ ವಿಶ್ವಹಿಂದೂ ಪರಿಷತ್, ಎಬಿವಿಪಿ, ಬಜರಂಗದಳ ಕಾರ್ಯಕರ್ತ ರಲ್ಲವೇ? ದೇಶದ ಇಂದಿನ ಸ್ಥಿತಿಗೆ ನಿಮ್ಮ ಸಿದ್ಧಾಂತವೇ ಕಾರಣವಲ್ಲವೇ?
ಕರ್ನಾಟಕದ ಕರಾವಳಿಯಲ್ಲಿ ನಿಮ್ಮ ಸ್ವಯಂ ಸೇವಕರೇ ಕಾನೂನನ್ನು ಕೈಗೆತ್ತಿಕೋಂಡು ಗೋರಕ್ಷಣೆ ಹೆಸರಿನಲ್ಲಿ ಅಮಾಯಕರನ್ನು ಚಚ್ಚಿ ಕೊಲ್ಲುತ್ತಾರೆ. ಒಂದೇ ಶಾಲೆಯಲ್ಲಿ ಓದುವ, ಒಂದೇ ಕಚೇರಿಯಲ್ಲಿ ಕೆಲಸ ಮಾಡುವ ಯುವತಿ ತಮ್ಮ ಸಹೋದ್ಯೋಗಿ ಜೊತೆ ಮಾತಾಡಿದರೆ ನಿಮ್ಮವರು ಹಲ್ಲೆ ಮಾಡುತ್ತಾರೆ. ‘ಲವ್ ಜಿಹಾದ್’ ಕತೆ ಕಟ್ಟುತ್ತಾರೆ.
ಕೇಂದ್ರದಲ್ಲಿ ಮಂತ್ರಿಗಳಾಗಿರುವ ನಿಮ್ಮ ಸಂಘದ ಸ್ವಯಂಸೇವಕರೇ ಅಲ್ಪಸಂಖ್ಯಾತರು ಪಾಕಿಸ್ತಾನಕ್ಕೆ ಹೋಗಬೇಕೆಂದು ಅರಚುತ್ತಾರೆ.ದನದ ಮಾಂಸ ತಿನ್ನುವವರನ್ನು ಕೊಲ್ಲ ಬೇಕೆಂದು ಬಹಿರಂಗವಾಗಿ ಕರೆಕೊಡುತ್ತಾರೆ. ಉತ್ತರ ಪ್ರದೇಶದಲ್ಲಿ ಅಖ್ಲಾಕ್ ಎಂಬ ಬಡ ಅಲ್ಪ ಸಂಖ್ಯಾತನ ಮನೆಯಲ್ಲಿ ದನದ ಮಾಂಸ ವಿತ್ತೆಂದು ಬಡಿದು ಕೊಂದವರು ನಿಮ್ಮವರೇ ಅಲ್ಲವೇ?
ಬರೀ ಅಖ್ಲಾಕ್ ಒಬ್ಬನಲ್ಲ, ಗೋರಕ್ಷಣೆ ಹೆಸರಲ್ಲಿ ನಿಮ್ಮ ಸಂಘದ ಕಾರ್ಯಕರ್ತರು ಎಷ್ಟು ಜನರನ್ನು ಕೊಂದಿದ್ದಾರೆ? ಎಷ್ಟು ಜನರ ಮೇಲೆ ಹಲ್ಲೆ ಮಾಡಿದ್ದಾರೆ? ಎಂಬುದರವಿವರ ತರಿಸಿ ನೋಡಿ. ಅಂತಹ ಹಲ್ಲೆಕೋರರನ್ನು ನೀವು ನಾಗಪುರದ ಸಂಘ ಶಿಕ್ಷಾ ವರ್ಗದಲ್ಲಿ ವೀರ ಯೋಧರೆಂದು ಹಾಡಿ ಹೊಗಳಿದ್ದೀರಿ ಅಲ್ಲವೇ?
ಕಳೆದ ನಾಲ್ಕು ವರ್ಷಗಳಲ್ಲಿ ಈ ದೇಶದಲ್ಲಿ ನಾಲ್ವರು ಚಿಂತಕರಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಡಾ. ಎಂ.ಎಂ ಕಲಬುರಗಿ, ಗೌರಿ ಲಂಕೇಶ್ ಹತ್ಯೆ ನಡೆಯಿತು. ಈ ಹತ್ಯೆಯ ಸಂಚಿನ ಮೂಲ ಕರ್ನಾಟಕದ ಎಸ್.ಐ.ಟಿ ತನಿಖೆಯಿಂದ ಬಯಲಾಗುತ್ತಿದೆ. ನಮ್ಮವರೇ, ನಮ್ಮ ದೇಶದವರೇ ನಿಮ್ಮ ದೃಷ್ಟಿಯಲ್ಲಿ ಹಿಂದೂಗಳೇ ಆದ ವಿಚಾರವಾದಿಗಳನ್ನು ಕೊಂದು ಹಾಕಿದೇಕೆ? ಕೊಂದು ಹಾಕಿದವರು ಯಾರು? ಅವರ ಸಾವಿಗೆ ಸಂಭ್ರಮಿಸುತ್ತಿರುವವರು ಯಾರು? ನೀವೇಕೆ ಮೌನವಾಗಿರುವಿರಿ?
ಭಾಗವತರೇ ರಾಜಕಾರಣಕ್ಕೂ ಸಂಘಕ್ಕೂ ಸಂಬಂಧವಿಲ್ಲ. ಸಂಘ ಯಾವುದೇ ಪಕ್ಷದ ಪರವಾಗಿಲ್ಲ ಎಂದು ಯಾಕೆ ಸುಳ್ಳು ಹೇಳುತ್ತೀರಿ? ಬಿಜೆಪಿ ನಿಮ್ಮ ಸಂಘದ ರಾಜಕೀಯ ವೇದಿಕೆಯಲ್ಲವೇ? ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಕೋವಿಂದ್, ಬಿಜೆಪಿ ಅಧ್ಯಕ್ಷ ಅಮಿತ್‌ಶಾ, ರಾಜನಾಥ್ ಸಿಂಗ್ ಎಲ್ಲರೂ ಸಂಘದ ಸ್ವಯಂ ಸೇವಕರಲ್ಲವೇ? ಪ್ರತಿ ವರ್ಷ ನಡೆಯುವ ಸಂಘಪರಿವಾರದ ಪ್ರತಿನಿಧಿಗಳ ಸಭೆಗೆ ಬಿಜೆಪಿ ನಾಯಕರು ಬರುವುದಿಲ್ಲವೇ?
ಬಿಜೆಪಿಯಲ್ಲಿ ಒಂದು ಕಡ್ಡಿ ಅಲುಗಾಡಬೇಕಾದರೂ ಸಂಘದ ಅನುಮತಿ ಪಡೆಯ ಬೇಕು. ಕೇಂದ್ರದಲ್ಲಿ ಯಾರು ಮಂತ್ರಿಗಳಾಗಬೇಕೆಂಬುದನ್ನು ಆರೆಸ್ಸೆಸ್ ತೀರ್ಮಾನಿಸುತ್ತದೆ ಅಲ್ಲವೇ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಸಂಘದ ಮಾತೇ ಅಂತಿಮವಲ್ಲವೇ. ಸಂಘದ ಆಶೀರ್ವಾದ ಇರುವುದರಿಂದಲೇ ಅನಂತ ಕುಮಾರ್ ಹೆಗಡೆ ಅಂಥವರು ಸಂವಿಧಾನದ ವಿರುದ್ಧ ಮಾತನಾಡುತ್ತಾರೆ ಅಲ್ಲವೇ. ಆರ್ಯ ಸಮಾಜದ ಸ್ವಾಮಿ ಅಗ್ನಿವೇಶ್‌ರನ್ನು ಜಾರ್ಖಂಡ್‌ನಲ್ಲಿ ನಿಮ್ಮ ಕಾರ್ಯ ಕರ್ತರೇ ಬೀದಿಯಲ್ಲಿ ಉರುಳಾಡಿಸಿ ಹೊಡೆದರು. ಚಪ್ಪಲಿಯಿಂದ ಹೊಡೆದರು. ಈ ಸ್ವಾಮೀಜಿ ನಿಮ್ಮ ಸಿದ್ಧಾಂತವನ್ನು ಒಪ್ಪಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ಹಲ್ಲೆ ನಡೆಯಿತು. ಈ ಹಲ್ಲೆಯನ್ನು ನೀವೇಕೆ ಖಂಡಿಸಲಿಲ್ಲ ಭಾಗವತ್‌ಜಿ, ಯಾಕೆ ಆ ಸುದ್ದಿ ಗೊತ್ತಾಗಲಿಲ್ಲವೇ?!
ಆರೆಸ್ಸೆಸ್‌ಎರಡನೇ ಸದಸ್ಯ ಸಂಘದ ಚಾಲಕ ಮಾಧವ ಸದಾಶಿವ ಗೊಳ್ವಾಲ್ಕರ್ ಅವರು ತಮ್ಮ ‘‘ಬಂಚ್ ಆಫ್ ಥಾಟ್ಸ್’’ ಪುಸ್ತಕದಲ್ಲಿ ಹಿಟ್ಲರ್‌ನನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ನಮ್ಮ ಬದ್ಧ ವೈರಿಗಳು’’ ಎಂದು ಬರೆದಿದ್ದಾರೆ. ಈ ಬಗ್ಗೆ ದಿಲ್ಲಿಯ ಉಪನ್ಯಾಸದಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ ಅದು ಯಾವುದೋ ಸಂದರ್ಭದಲ್ಲಿ ಆಡಿದ ಸಾಂದರ್ಭಿಕ ಮಾತು ಎಂದು ಜಾರಿಕೊಂಡಿದ್ದೀರಿ. ಹಾರಿಕೆಯ ಉತ್ತರ ನೀಡಿದಿರಿ.
ನಮಗೆ ಇಂಥ ಹಾರಿಕೆಯ ಜಾರಿಕೆಯ ಉತ್ತರ ಬೇಡ. ನಿಮ್ಮ ಗುರೂಜಿ ಅವರ ದ್ವೇಷ ಕಾರುವ ‘‘ಬಂಚ್ ಆಫ್ ಥಾಟ್ಸ್’’ ಪುಸ್ತಕದ ವಿಚಾರಗಳು ಸಾಂದರ್ಭಿಕವಾಗಿದ್ದರೆ ಆ ಪುಸ್ತಕ ವನ್ನು ವಾಪಸು ಪಡೆಯಲಿ. ಅದರ ಮಾರಾಟ ನಿಲ್ಲಿಸಿ, ಇದು ನಿಮ್ಮಿಂದ ಸಾಧ್ಯವಿಲ್ಲ. ಇಂದಿಗೂ ಗೋಪಾಲ ಗೋಡ್ಸೆಯ ‘‘ಗಾಂಧಿ ಹತ್ಯೆ ಮತ್ತು ನಾನು’’ ಪುಸ್ತಕವನ್ನು ನಿಮ್ಮ ಪುಸ್ತಕದಂಗಡಿಯಲ್ಲಿ ಮಾರಾಟ ಮಾಡುವ ನೀವು ಗುರೂಜಿ ಪುಸ್ತಕ ವಾಪಸು ಪಡೆಯಲು ಸಾಧ್ಯವಿಲ್ಲ.
ಭಾಗವತರೇ ನಿಜವಾಗಿ ಹೇಳಿ. ನಗರ ನಕ್ಸಲ್ ಸಿದ್ಧಾಂತ ರೂಪುಗೊಂಡಿದ್ದು ನಿಮ್ಮ ನಾಗಪುರದ ಸಂಘದ ಕಾರ್ಯಾಲಯದಲ್ಲಿ ಅಲ್ಲವೇ? ನಿಮ್ಮ ಈ ಅರ್ಬನ್ ನಕ್ಸಲ್ ಸಿದ್ಧಾಂತವನ್ನು ಕೇಂದ್ರದ ಮೋದಿ ಸರಕಾರ ಒಪ್ಪಿಕೊಂಡು, ಮಾನವ ಹಕ್ಕು ಹೋರಾಟ ಗಾರರು, ಸಾಹಿತಗಳು, ವಕೀಲರು, ಅಧ್ಯಾಪಕರನ್ನು ನಗರ ನಕ್ಸಲರೆಂದು ಬಂಧಿಸಲಾ ಯಿತು. ಈ ಬಂಧನದ ಉದ್ದೇಶ ಸ್ಪಷ್ಟವಿದೆ. ನಿಮಗೆ ಕಾರ್ಮಿಕ ಸಂಘಟನೆಗಳ ಹೆದರಿಕೆ ಇಲ್ಲ. ಅವರ ಸಂಬಳದ ಬೇಡಿಕೆಗಳನ್ನು ಈಡೇರಿಸಿದರೆ ಬಿಎಂಎಸ್ ಜೈ ಅನ್ನುತ್ತಾರೆ. ಆದರೆ ಈ ಚಿಂತಕರು ಮುಗ್ದ ಹೊಸ ಪೀಳಿಗೆಯ ವಿದ್ಯಾರ್ಥಿಗಳು ಇದ್ದಾರಲ್ಲ ಅವರ ಹೆದರಿಕೆ ನಿಮಗಿದೆ. ಅಂತಲೇ ಜೆಎನ್‌ಯು ಮೇಲೆ ದಾಳಿ ಮಾಡಿ ಕನ್ಹಯ್ಯಾಕುಮಾರ್, ಉಮರ್ ಖಾಲಿದ್‌ರಂಥವರನ್ನು ರಾಷ್ಟ್ರದ್ರೋಹಿಗಳೆಂದು ಬಿಂಬಿಸಿದಿರಿ.
ಜೆಎನ್‌ಯು ಕ್ಯಾಂಪಸ್‌ನಲ್ಲಿ ತುಕಡೆ ತುಕಡೆ ಘೋಷಣೆ ಹಾಕಿಲ್ಲ ಎಂದು ಸುಪ್ರೀಂ ಕೋರ್ಟ್ ತನಿಖೆಯಿಂದ ಖಚಿತವಾದರೂ, ನಿಮ್ಮ ಗ್ಲೋಬಲ್ ಪ್ರಚಾರದಿಂದಾಗಿ ದೇಶದ ಜನ ಕನ್ಹಯ್ಯೋಕುಮಾರ್‌ರನ್ನು ಇಂದಿಗೂ ಸಂಶಯದಿಂದ ನೋಡುತ್ತಾರೆ. ಈಗ ವರವರರಾವ್, ಆನಂದ್ ತೇಲ್ತುಂಬ್ಡೆ ಸರದಿ.
ಅರ್ಬನ್ ನಕ್ಸಲ್‌ರೆಂದು ಬಂಧಿಸಲ್ಪಟ ವರವರರಾವ್, ಆನಂದ ತೇಲ್ತುಂಬ್ಡೆ ಮುಂತಾದ ಆರು ಜನರ ಮೇಲೆ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಲು ಮಹಾ ರಾಷ್ಟ್ರ ಪೊಲೀಸರಿಗೆ ಈವರೆಗೆ ಸಾಧ್ಯವಾಗಿಲ್ಲ. ಆರೋಪ ಪಟ್ಟಿ ಸಲ್ಲಿಸಲಾಗದಿದ್ದರೆ ಅವರ ಬಿಡುಗಡೆ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇನ್ನು ಕೇಂದ್ರ ಸರಕಾರದ ವಕೀಲರು, ‘‘ಸುಪ್ರೀಂ ಕೋರ್ಟ್ ಇದರಲ್ಲಿ ಮಧ್ಯಪ್ರವೇಶ ಮಾಡಬಾರದು’’ ಎಂದು ದಾರ್ಷ್ಟದಿಂದ ವಾದಿಸುತ್ತಾರೆ.
ಬೆಲೆ ಏರಿಕೆ, ನಿರುದ್ಯೋಗ, ಸುಳ್ಳು ಭರವಸೆ ಇವೆಲ್ಲವುಗಳಿಂದ 2019ರ ಚುನಾವಣೆ ಯಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ನಿಮಗೆ ಖಾತ್ರಿಯಾಗಿದೆ. ಅದಕ್ಕಾಗಿ ಜನರನ್ನು ಹುಸಿ ರಾಷ್ಟ್ರಭಕ್ತಿಯ ಉನ್ಮಾದದಲ್ಲಿ ತೇಲಿಸಿ ಸಂಘ ಪರಿವಾರದ ವಿರೋಧಿಗಳನ್ನೆಲ್ಲ ನಗರ ನಕ್ಸಲರೆಂದು ಕರೆದು ಜನರನ್ನು ದಾರಿ ತಪ್ಪಿಸಲು ಹೊರಟಿದ್ದೀರಿ.
ಭಾಗವತ್ ಜೀ, ನಿಮ್ಮ ದ್ವೇಷದ ಸಿದ್ಧಾಂತದಿಂದಾಗಿ ದೇಶದ ಪ್ರತೀ ಹಳ್ಳಿ ಬಡಾವಣೆ ಗಳಲ್ಲಿ ಭಾರತೀಯರ ನಡುವೆ ದ್ವೇಷದ ಅಡ್ಡಗೋಡೆ ಎದ್ದು ನಿಂತಿದೆ. ಯಾದವೀ ಕಲಹದ ವಾತಾವರಣ ನಿರ್ಮಾಣವಾಗಿದೆ. ನಿಮಗೆ ದೇಶದ ಬಗ್ಗೆ ನಿಜವಾಗಿ ಕಾಳಜಿ ಎಂಬು ದಿದ್ದರೆ ನಿಮ್ಮ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಿಸರ್ಜಿಸಿ. ಬಹುತ್ವ ಭಾರತಕ್ಕೆ ನಿಮ್ಮ ಸಂಘದ ಅಗತ್ಯವಿಲ್ಲ. ಭಾಗವತರೇ, ನಿಮ್ಮ ಬೆಣ್ಣೆಯಂಥ ಮಾತುಗಳನ್ನು ನಾವು ನಂಬುವುದಿಲ್ಲ. ನೀವು ನಡೆದು ಬಂದ ದಾರಿ ಯಾವುದೆಂಬುದು ನಮಗೆ ಗೊತ್ತಿದೆ. ಅದು ಬಹುಮುಖಿ ಭಾರತವನ್ನು ನಾಶ ಮಾಡುವ ದಾರಿ. ದೇಶವನ್ನು ವಿನಾಶದತ್ತ ತಳ್ಳುವ ಈ ದಾರಿಗೆ ಅಡ್ಡವಾಗಿ ಮಾನವತೆಯ ಗೋಡೆಯನ್ನು ನಾವು ಕಟ್ಟುತ್ತೇವೆ.