ಇದು ಗಾಂಧಿ ಮತ್ತು ಅಂಬೇಡ್ಕರ್ ಒಂದಾಗಬೇಕಾದ ಕಾಲ

Update: 2018-09-30 18:48 GMT

ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಮನುಷ್ಯ ಸಮಾನತೆ ಬಗ್ಗೆ ಭಿನ್ನಮತ ಇರಲಿಲ್ಲ. ಗಾಂಧೀಜಿಗೆ ಆ ಕಾಲಘಟ್ಟದಲ್ಲಿ ದೇಶಕ್ಕೆ ಸ್ವಾತಂತ್ರ ಪಡೆಯುವುದು ಮುಖ್ಯವಾಗಿತ್ತು. ಅದಕ್ಕಾಗಿ ಉಳಿದೆಲ್ಲ ಅಂಶಗಳನ್ನು ಅವರು ಕಡೆಗಣಿಸಿದರು. ಆದರೆ ಬಾಬಾ ಸಾಹೇಬರು ಎತ್ತಿದ ಪ್ರಶ್ನೆ ಅದಲ್ಲ. ದೇಶಕ್ಕೆ ಸ್ವಾತಂತ್ರ ಸಿಕ್ಕರೂ ನನ್ನ ಜನರಿಗೆ ಸ್ವಾತಂತ್ರ ಯಾವಾಗ ಎಂದು ಪ್ರಶ್ನಿಸಿದರು. ಭಗತ್ ಸಿಂಗ್ ಕೂಡ ಬಯಸಿದ್ದು ಸಮಾನತೆಯ ಭಾರತವನ್ನು. ಆದರೆ ಅವರ ದಾರಿಗಳು ಬೇರೆಬೇರೆಯಾಗಿದ್ದವು.


ಮಹಾತ್ಮಾಗಾಂಧಿ ಎಂಬ ಬೆಳಕು ಈ ಭೂಮಿಗೆ ಬಂದು ನಾಳೆ ಅಕ್ಟೋಬರ್ 2ಕ್ಕೆ 149 ವರ್ಷವಾಗುತ್ತದೆ. ಈ ಬೆಳಕು ನಂದಿ ಹೋಗಿ 70 ವರ್ಷಗಳಾದವು. ಜಾಗತೀಕರಣ, ಖಾಸಗೀಕರಣ, ನವ ಉದಾರೀಕರಣ ಮತ್ತು ಹಿಟ್ಲರೀಕರಣದ ನಡುವೆ ಮನುಷ್ಯನೇ ಕಳೆದು ಹೋಗುತ್ತಿರುವಾಗ ಗಾಂಧಿ ನಮಗೆ ಮತ್ತೆ ನೆನಪಾಗುತ್ತಾರೆ.

ಗಾಂಧಿ ಅಗಲಿ 7 ದಶಕಗಳೇ ಕಳೆದರೂ ಅವರು ಜನಮಾನಸದಲ್ಲಿ ಗಟ್ಟಿಯಾಗಿ ಉಳಿದಿದ್ದಾರೆ. ಅವರ ಬಗ್ಗೆ ಜನರು ಮಾತನಾಡುವುದರ ಜೊತೆಗೆ ಪರ-ವಿರೋಧ ಅಭಿಪ್ರಾಯಗಳು ಸಹ ವ್ಯಕ್ತಪಡಿಸುತ್ತಾರೆ. ಬಾಪು ಹತ್ಯೆಗೆ ಪ್ರಚೋದಿಸಿದ ಸಿದ್ಧಾಂತವನ್ನು ತಲೆ ಮೇಲೆ ಹೊತ್ತುಕೊಂಡು ಕುಣಿಯುವವರು, ಜಾತ್ಯತೀತ ಭಾರತ ನಾಶ ಮಾಡಲು ಹೊರಟವರು ಇಂದಿಗೂ ಗಾಂಧೀಜಿಯನ್ನು ದ್ವೇಷಿಸುತ್ತಾರೆ. ನಿತ್ಯವೂ ಬೇರೆ ಬೇರೆ ಸ್ವರೂಪದಲ್ಲಿ ಅವರ ತೇಜೋವಧೆ ಮಾಡುತ್ತಾರೆ.

ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯ ಜಯಂತಿ ಒಂದೆಡೆ ಆಚರಿಸಿದರೆ, ಇನ್ನೊಂದೆಡೆ ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಧಾರೆ ಒಪ್ಪಿದವರೂ ಸಹ ಗಾಂಧೀಜಿಯನ್ನು ವಿರೋಧಿಸುತ್ತಾರೆ. ದೇಶದಲ್ಲಿ ಅಂಬೇಡ್ಕರ್ ಒಬ್ಬರೇ ಮಹಾತ್ಮ ಎಂದು ಹೇಳಿಕೊಳ್ಳುತ್ತಾರೆ. ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಹೋಲಿಸಿ ಬೇರೆಯದ್ದೇ ಚಿತ್ರಣ ನೀಡಲು ಪ್ರಯತ್ನಿಸುತ್ತಾರೆ.

ಆಯಾ ಕಾಲಘಟ್ಟ ಅನುಸಾರ ಗಾಂಧೀಜಿ ಮತ್ತು ಅಂಬೇಡ್ಕರ್ ಭಿನ್ನಾಭಿಪ್ರಾಯ ಹೊಂದಿದ್ದು ನಿಜ. ಇಬ್ಬರ ದೃಷ್ಟಿಕೋನ ಬೇರೆ ಬೇರೆಯಾಗಿ ಇದ್ದದ್ದು ಸತ್ಯ. ಆದರೆ ದೇಶವು ಸ್ವಾತಂತ್ರ ಗಳಿಸಿದ ಬಳಿಕ ಇಬ್ಬರೂ ಮಹನೀಯರು ದೇಶ ಕಟ್ಟುವಲ್ಲಿ ಮತ್ತು ಎಲ್ಲರ ಹಿತ ಕಾಪಾಡಲು ಒತ್ತು ನೀಡಿದರೇ ಹೊರತು ಭಿನ್ನಾಭಿಪ್ರಾಯ ಮುಂದುವರಿಸಲಿಲ್ಲ. ಸ್ವಾತಂತ್ರ ಗಳಿಸಿದ ಹುಮ್ಮಸ್ಸಿನಲ್ಲಿದ್ದ ದೇಶದ ಜನರನ್ನು ಒಟ್ಟುಗೂಡಿಸಲು ಶ್ರಮಿಸಿದರು. ಒಂದೇ ಸಂವಿಧಾನದಡಿ ಎಲ್ಲಾ ಜಾತಿ-ಧರ್ಮ-ಮತದವರು ಸೌಹಾರ್ದದ ಬದುಕು ಕಂಡುಕೊಳ್ಳಬೇಕೆಂದು ಅರಿವು ಮೂಡಿಸಿದರು.

ಕುಟುಂಬ ಸದಸ್ಯರು, ಜನಸಾಮಾನ್ಯರು ಅಥವಾ ಮಹನೀಯರೇ ಆಗಿರಲಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಅಥವಾ ಮೂವರ ವ್ಯಕ್ತಿಗಳ ನಡುವೆ ಸಹಜವಾಗಿಯೇ ಭಿನ್ನಾಭಿಪ್ರಾಯ ಇರುತ್ತದೆ. ಬೇರೆಯದ್ದೇ ಆಲೋಚನಾ ಕ್ರಮ ಇರುತ್ತದೆ. ಒಬ್ಬರ ವಿಚಾರ ಇನ್ನೊಬ್ಬರು ಒಪ್ಪದಿರಬಹುದು ಅಥವಾ ಬೇರೆಯದ್ದೇ ದೃಷ್ಟಿಕೋನ ಹೊಂದಿರಬಹುದು. ಅದೇ ತೆರನಾದ ಭಿನ್ನಾಭಿಪ್ರಾಯ ಗಾಂಧೀಜಿ ಮತ್ತು ಅಂಬೇಡ್ಕರ್ ಅವರಲ್ಲೂ ಇತ್ತು. ಗಾಂಧೀಜಿಯವರು ದೇಶದ ದೃಷ್ಟಿಯಿಂದ ಸ್ವಾತಂತ್ರದ ಪರಿಕಲ್ಪನೆ ಹೊಂದಿದ್ದರೆ, ಅಂಬೇಡ್ಕರ್ ಅವರು ಜನಸಾಮಾನ್ಯರ ದೃಷ್ಟಿಯಿಂದ ಸ್ವಾತಂತ್ರದ ಕಲ್ಪನೆ ಹೊಂದಿದ್ದರು. ದೇಶವು ಸ್ವಾತಂತ್ರಗೊಂಡ ಬಳಿಕ ಎಲ್ಲವೂ ಸರಿ ಹೋಗಬಹುದು ಎಂಬ ನಂಬಿಕೆ ಗಾಂಧೀಜಿ ಅವರಲ್ಲಿದ್ದರೆ, ಸ್ವಾತಂತ್ರ ಗಳಿಸಿದ ಬಳಿಕವೂ ಜಾತಿ ತಾರತಮ್ಯ, ಅಸಮಾನತೆ ಮುಂದುವರಿದರೆ ಸ್ವಾತಂತ್ರವು ನಿಷ್ಪ್ರಯೋಜಕ ಆಗುವುದು ಎಂಬ ಆತಂಕ, ಕಳವಳ ಅಂಬೇಡ್ಕರ್ ಅವರಲ್ಲಿತ್ತು.

ಪುಣೆ ಒಪ್ಪಂದದಲ್ಲಿ ಅಸ್ಪಶ್ಯ ಸಮುದಾಯಕ್ಕೆ ಅನ್ಯಾಯವಾಗಿದ್ದು ನಿಜ. ಕಸ್ತೂರ್ಬಾ ಗಾಂಧಿ ಸೆರೆಗೊಡ್ಡಿ ಪತಿಯ ಪ್ರಾಣ ಉಳಿಸಲು ಬೇಡಿಕೊಂಡ ನಂತರ ಬಾಬಾ ಸಾಹೇಬರು ಒಪ್ಪಂದಕ್ಕೆ ಸಮ್ಮತಿ ನೀಡಿದರು. ಆನಂತರ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ನಾವೆಲ್ಲರೂ ಒಪ್ಪುವಂತಹ ಸಂವಿಧಾನ ನೀಡಿದರು. ದಮನಿತ, ತುಳಿತಕ್ಕೊಳಗಾದವರ, ಶೋಷಿತರ ಪರವಾಗಿ ಅಲ್ಲದೇ ಎಲ್ಲಾ ವರ್ಗ, ಸಮುದಾಯ, ಜಾತಿ, ಧರ್ಮದವರಿಗೂ ಸಂವಿಧಾನದಲ್ಲಿ ಆದ್ಯತೆ ನೀಡಿದರು. ಇದಕ್ಕಿಂತ ಮಿಗಿಲಾಗಿ ಎಲ್ಲರಿಗೂ ಹಕ್ಕು ಮತ್ತು ಬಾಧ್ಯತೆ ಒದಗಿಸಿದರು. ಸತ್ಪ್ರಜೆಗಳಾಗಿ ಬಾಳಲು ಸ್ಪಷ್ಟ ಚೌಕಟ್ಟು ಹಾಕಿಕೊಟ್ಟರು. ಅದರ ತಳಹದಿ ಆಧರಿಸಿಯೇ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಭಾರತ ಹೊರಹೊಮ್ಮಿದೆ. ಹಲವು ಸವಾಲು, ಸಮಸ್ಯೆಗಳ ನಡುವೆ, ಅಡೆತಡೆಗಳ ನಡುವೆ ಯಶಸ್ಸು ಕಂಡಿದೆ.

ಆದರೆ ಇಂದು ಮೂಲಭೂತವಾದಿ ಶಕ್ತಿಗಳಿಗೆ ದೇಶವನ್ನು ಜಾತಿ-ಧರ್ಮದ ಹೆಸರಿನಲ್ಲಿ ಛಿದ್ರಗೊಳಿಸುವ ಮದವೇರಿದೆ. ಎಲ್ಲರೂ ಕಚ್ಚಾಡಿಕೊಂಡು ಪ್ರಾಣ ಕಳೆದುಕೊಳ್ಳಬೇಕು ಇಲ್ಲವೇ ಹಿಂಸಾಕೃತ್ಯ ಮತ್ತು ದ್ವೇಷ ಭಾವನೆಯಲ್ಲೇ ಜೀವನ ಕಳೆದುಬಿಡಬೇಕು ಎಂಬ ವಿಕೃತ ಗುರಿಯನ್ನು ಜೀವವಿರೋಧಿ ಸಂಘಟನೆಗಳು ಹೊಂದಿವೆ. ಹಿಂಸೆಯನ್ನು ಪ್ರಚೋದಿಸುತ್ತಿರುವ ಆ ಮನುವಾದಿ ಸಂಘಟನೆಗಳು ಎಲ್ಲಿ ಬೇಕೆಂದಲ್ಲಿ, ಹೇಗೆ ಬೇಕೆ ಹಾಗೆ ಕಂಡಕಂಡವರ ಮೇಲೆ ಹಲ್ಲೆ ಮಾಡುತ್ತಿವೆ. ಪ್ರಾಣ ತೆಗೆದು ಹಾಕಲು ಸಹ ಹೇಸುವುದಿಲ್ಲ. ಇವರ ದುಷ್ಕೃತ್ಯಗಳಿಂದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತರಾದರು. ಸ್ವಾಮಿ ಅಗ್ನಿವೇಶ್ ಪದೇ ಪದೇ ಹಲ್ಲೆಗೆ ಒಳಗಾಗುತ್ತಿದ್ದಾರೆ. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರ ಪಾಡಂತೂ ಹೇಳತೀರದು. ಅವರು ಸಂಘಟನೆಗಳ ವಿಕೃತಿಗೆ ಬಲಿಯಾಗುವುದರ ಜೊತೆಜೊತೆಗೆ ಬೇರೆ ಬೇರೆ ಕೃತ್ಯಗಳಿಗೆ ದುರ್ಬಳಕೆಯೂ ಆಗುತ್ತಿದ್ದಾರೆ.

ಗಾಂಧೀಜಿಯನ್ನು ಕೊಂದವರು ತಮ್ಮ ಹಿಂದೂ ರಾಷ್ಟ್ರದ ಗುರಿ ಸಾಧನೆಗಾಗಿ ಮತ್ತೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಮೀಸಲಾತಿ ವಿರುದ್ಧ ಮಾತನಾಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುವ ಅಪಸ್ವರಗಳು ಕೇಳಿ ಬರುತ್ತಿವೆ. ಜಾತಿವಾದಿ ಸಾಧುಸಂತರು ದೇಶವನ್ನು ಆಳಬೇಕು ಮತ್ತು ಅವರ ಚಿಂತನೆಗಳನ್ನು ಆಧರಿಸಿ ದೇಶವನ್ನು ಮುನ್ನಡೆಸಬೇಕು ಎಂಬ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕಿದೆ. ಗಾಂಧೀಜಿ ಮತ್ತು ಅಂಬೇಡ್ಕರ್ ಸಂಪೂರ್ಣವಾಗಿ ಗೊತ್ತಿರದ ನವಪೀಳಿಗೆಯವರನ್ನು ದಾರಿ ತಪ್ಪಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಅವರ ಕುರಿತಾಗಿ ಇಲ್ಲಸಲ್ಲದ್ದನ್ನು ಹೇಳಿ ನವಪೀಳಿಗೆಯವರ ಮನಸ್ಸಿನಲ್ಲಿ ವಿಷ ಬಿತ್ತಲಾಗುತ್ತಿದೆ. ಅವರಿಬ್ಬರನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳದ ಇಂದಿನ ಯುವಜನರು, ದೇಶಕ್ಕಾಗಿ ಅವರು ನೀಡಿದ ಕೊಡುಗೆಯೇನು? ಎಂದು ಪ್ರಶ್ನಿಸತೊಡಗಿದ್ದಾರೆ. ಇದರ ಹಿನ್ನೆಲೆಯಲ್ಲಿ ಭವಿಷ್ಯದ ದಿನಗಳ ಬಗ್ಗೆ ಈಗಿನಿಂದಲೇ ಮುಂಜಾಗ್ರತೆ ವಹಿಸುವುದು ಅವಶ್ಯ ಮತ್ತು ಅನಿವಾರ್ಯ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಕೊಡುಗೆ, ತ್ಯಾಗ, ಪಟ್ಟ ಪರಿಶ್ರಮ, ಎದುರಿಸಿದ ಸವಾಲುಗಳು ಮುಂತಾದವುಗಳ ಬಗ್ಗೆ ಯುವಜನರಿಗೆ ಮಾಹಿತಿ ನೀಡಬೇಕಿದೆ. ಅವರಲ್ಲಿ ಜಾಗೃತಿ ಮೂಡಿಸಬೇಕಿದೆ. ವಾಸ್ತವಾಂಶಗಳನ್ನು ಅವರಿಗೆ ತಿಳಿಯಪಡಿಸಬೇಕಿದೆ.

ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಮನುಷ್ಯ ಸಮಾನತೆ ಬಗ್ಗೆ ಭಿನ್ನಮತ ಇರಲಿಲ್ಲ. ಗಾಂಧೀಜಿಗೆ ಆ ಕಾಲಘಟ್ಟದಲ್ಲಿ ದೇಶಕ್ಕೆ ಸ್ವಾತಂತ್ರ ಪಡೆಯುವುದು ಮುಖ್ಯವಾಗಿತ್ತು. ಅದಕ್ಕಾಗಿ ಉಳಿದೆಲ್ಲ ಅಂಶಗಳನ್ನು ಅವರು ಕಡೆಗಣಿಸಿದರು. ಆದರೆ ಬಾಬಾ ಸಾಹೇಬರು ಎತ್ತಿದ ಪ್ರಶ್ನೆ ಅದಲ್ಲ. ದೇಶಕ್ಕೆ ಸ್ವಾತಂತ್ರ ಸಿಕ್ಕರೂ ನನ್ನ ಜನರಿಗೆ ಸ್ವಾತಂತ್ರ ಯಾವಾಗ ಎಂದು ಪ್ರಶ್ನಿಸಿದರು. ಭಗತ್ ಸಿಂಗ್ ಕೂಡ ಬಯಸಿದ್ದು ಸಮಾನತೆಯ ಭಾರತವನ್ನು. ಆದರೆ ಅವರ ದಾರಿಗಳು ಬೇರೆಬೇರೆಯಾಗಿದ್ದವು.

ಈಗ ಹಿಟ್ಲರ್‌ವಾದಿ, ಹಿಂದೂತ್ವವಾದಿಗಳಿಂದ ಈ ಗಾಂಧೀಜಿ, ಅಂಬೇಡ್ಕರ್ ಮತ್ತು ಭಗತ್‌ಸಿಂಗ್ ಸಿದ್ಧಾಂತಗಳಿಗೆ ಗಂಡಾಂತರ ಬಂದಿದೆ. ಗೋರಕ್ಷಣೆ ಹೆಸರಿನಲ್ಲಿ ಗುಂಪು ಹತ್ಯೆಗಳು, ವಿಚಾರವಾದಿಗಳ ಕಗ್ಗೊಲೆಗಳು, ಭೀಮಾ ಕೋರೆಗಾಂವ್‌ನಲ್ಲಿ ದಲಿತ ಪರ ಸಂಘಟನೆ ಮತ್ತು ಹೋರಾಟಗಾರರ ಮೇಲೆ ನಡೆದ ದೌರ್ಜನ್ಯ ಇವೆಲ್ಲವನ್ನೂ ಗಮನಿಸಿದರೆ, ಮನುಷ್ಯ ವಿರೋಧಿ ಮನುವಾದಿ ಕೋಮುವಾದಿ ಶಕ್ತಿಗಳ ವಿರುದ್ಧ್ದ ಈಗ ಗಾಂಧಿವಾದಿಗಳು, ಅಂಬೇಡ್ಕರ್‌ವಾದಿಗಳು ಮತು ಎಡಪಂಥೀಯರು ಒಂದಾಗಬೇಕಿದೆ. ಎಲ್ಲರೂ ಒಂದಾಗಿ ಬಹುಮುಖಿ ಭಾರತವನ್ನು ಕಾಪಾಡಿಕೊಳ್ಳುವ ಸವಾಲು ಎದುರಾಗಿದೆ. ಈ ನಿಟ್ಟಿನಲ್ಲಿ ಚಿಂತನೆ ಮತ್ತು ಕಾರ್ಯಾಚರಣೆ ನಡೆಯಬೇಕಿದೆ. ಇದು ಈ ಕ್ಷಣದ ಅಗತ್ಯ ಮತ್ತು ಅನಿವಾರ್ಯತೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News