ಕನ್ನಡ ನಾಡಿನ ಹೆಮ್ಮೆಯ ಸೌಹಾರ್ದ ಪರಂಪರೆ

Update: 2018-10-28 18:49 GMT

ಕನ್ನಡ ರಾಜ್ಯೋತ್ಸವ ಮತ್ತೆ ಬಂದಿದೆ. ಅಕ್ಕಪಕ್ಕದ ರಾಜ್ಯದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಿ ಆರು ದಶಕಗಳೇ ಗತಿಸಿದವು. ರಾಷ್ಟ್ರಕವಿ ಕುವೆಂಪು ಅವರು ಈ ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ವರ್ಣಿಸಿದರು. ಇಂಥ ಸೌಹಾರ್ದದ ತಾಣದಲ್ಲಿ ಇತ್ತೀಚೆಗೆ ಜನಾಂಗ ದ್ವೇಷದ ಅಪಸ್ವರಗಳು ಕೇಳಿ ಬರುತ್ತಿವೆ. ಸೌಹಾರ್ದ ಮತ್ತು ಸಮಾನತೆಯ ಬದುಕಿಗಾಗಿ ದುಡಿದ ಡಾ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಕಳೆದುಕೊಂಡೆವು. ಈ ನಾಡು ನಡೆದು ಬಂದ ದಾರಿಯನ್ನು ಮತ್ತೆ ಹೊರಳಿ ನೋಡಬೇಕಿದೆ. ಕಾವೇರಿಯಿಂದ ಗೋದಾವರಿಗೆ ವ್ಯಾಪಿಸಿದ ಕರ್ನಾಟಕದ ಹಿರಿಮೆಯನ್ನು ಅಮೋಘ ವರ್ಷ ನೃಪತುಂಗ ಒಂಬತ್ತನೇ ಶತಮಾನದಲ್ಲೇ ಗುರುತಿಸಿದ್ದ. ಕಾಲಚಕ್ರದಲ್ಲಿ ಉಂಟಾದ ಬದಲಾವಣೆಗಳ ಪರಿಣಾಮವಾಗಿ ಅಂದಿನ ಕರ್ನಾಟಕಕ್ಕೂ ಇಂದಿನ ಕರ್ನಾಟಕಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆದರೆ ಕನ್ನಡಿಗರ ಹೃದಯ ವೈಶಾಲ್ಯ ಅಂದಿಗೂ-ಇಂದಿಗೂ ಅಬಾಧಿತವಾಗಿ ಉಳಿದಿದೆ. ಕರ್ನಾಟಕಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ. ಈ ನಾಡಿನಲ್ಲಿ ಕವಿಗಳು, ಸಾಹಿತಿಗಳು, ಸಂಗೀತಗಾರರು, ಜನಪರ ದೊರೆಗಳು ಬದುಕಿ ಹಲವಾರು ಕೊಡುಗೆಗಳನ್ನು ನೀಡಿ ಹೋಗಿದ್ದಾರೆ. ಕನ್ನಡನಾಡು ಮಹಾರಾಷ್ಟ್ರದ ರತ್ನಗಿರಿಯವರೆಗೆ ವಿಸ್ತರಿಸಿತ್ತು ಎಂಬುದು ಐತಿಹಾಸಿಕ ದಾಖಲೆಗಳಿಂದ ಖಚಿತವಾಗಿ ತಿಳಿದು ಬರುತ್ತದೆ. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಗೆ ಇತ್ತೀಚೆಗೆ ನಾನು ಹೋದಾಗ, ಕನ್ನಡ ಎಂಬ ಹೆಸರಿನ ತಾಲ್ಲೂಕನ್ನೂ ನೋಡಿದೆ. ಅಜಂತಾ-ಎಲ್ಲೋರಿನ ಗುಹೆಗಳಲ್ಲಿ ಕರ್ನಾಟಕದ ಕಲಾವೈಭವವನ್ನು ಕಂಡೆ. ಸೀಮೋಲ್ಲಂಘನ ಮಾಡಿ, ಅಲ್ಲಿ ಹೋದ ನಮ್ಮ ದೊರೆಗಳು ಈ ಕಲೆಯ ತಾಣಗಳನ್ನು ಸೃಷ್ಟಿಸಲು ಕಾರಣರಾಗಿದ್ದಾರೆ.

ಈ ನಾಡಿನ ಚರಿತ್ರೆಯ ಪುಟಪುಟಗಳಲ್ಲೂ ಕರ್ನಾಟಕದ ಹೆಮ್ಮೆ ಮೈದುಂಬಿ ನಿಂತಿದೆ. ಚಾಲುಕ್ಯ ಅರಸರು ಕರ್ನಾಟಕದ ರತ್ನ ಸಿಂಹಾಸನಾಧೀಶ್ವರರಾಗಿದ್ದರು. ಆ ಚಾಲುಕ್ಯ ದೊರೆಗಳ ವಂಶಕ್ಕೆ ಸೇರಿದ ಇಂದಿನ ನೇಪಾಳದ ಅರಸರು ಪಡೆದ ಅನೇಕ ಬಿರುದುಗಳಲ್ಲಿ ಕರ್ನಾಟಕ ರತ್ನ ಸಿಂಹಾಸನಾಧೀಶ್ವರ ಎಂಬುದು ಒಂದು ಬಿರುದಾಗಿದೆ. ಈ ಚಾಲುಕ್ಯರು ಈ ಕನ್ನಡನಾಡಿನ ಅವಿಭಜಿತ ವಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ ಅರಸೊತ್ತಿಗೆ ಕಟ್ಟಿಕೊಂಡಿದ್ದರು. ಖ್ಯಾತ ಆಂಗ್ಲ ಲೇಖಕ ಮಡೋಜ್ ಟೇಲರ್ ರಚಿಸಿರುವ ಗ್ರಂಥವೊಂದರಲ್ಲಿ ಕರ್ನಾಟಕದ ಸೀಮೆ ಎಲ್ಲಿಯವರೆಗೆ ವಿಸ್ತರಿಸಿತ್ತು ಎಂಬುದರ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ವಿಜಯದುರ್ಗ ಎಂಬ ಪಟ್ಟಣ ಕನ್ನಡ ಭಾಷೆಯನ್ನಾಡುವ ಜನರ ಉತ್ತರದ ಕೊನೆಯ ಗಡಿಯಾಗಿತ್ತೆಂದು ಆತ ಹೇಳಿದ್ದಾನೆ.

ಪರಶುರಾಮನು ಸಮುದ್ರದೊರೆ ಸಗರನಿಗೆ ಏಳು ಕೊಂಕಣ ನಿರ್ಮಿಸಲು ಹೇಳಿದನೆಂದು ಐತಿಹ್ಯವಿದೆ. ಸಗರನು ನಿರ್ಮಿಸಿದ ಏಳು ಕೊಂಕಣಗಳಲ್ಲಿ ಕರ್ನಾಟಕವೂ ಒಂದು. ಉಳಿದವು ಕರಾಟ, ಮರಾಟ, ಕೊಂಕಣ, ಹೈಗ, ತುಳುವ ಮತ್ತು ಕೇರಳ. ಬಂಗಾಳದಲ್ಲಿ ಒಂಬತ್ತನೇ ಶತಮಾನದಷ್ಟು ಹಿಂದೆಯೇ ಕರ್ನಾಟಕದ ಭವನಗಳಿದ್ದವು ಎಂದು ಖ್ಯಾತ ಬಂಗಾಳಿ ಸಾಹಿತಿ ಸುನೀತಿಕುಮಾರ ಚಟರ್ಜಿ ಹೇಳಿದ್ದಾರೆ. ಕರ್ನಾಟಕ ಸಂಗೀತ ಪರಂಪರೆ ಬಿಹಾರ್‌ವರೆಗೆ ವ್ಯಾಪಿಸಿತ್ತು. ಬಂಗಾಳದ ಕೇಶಾಲಂಕಾರ ಪದ್ಧತಿ ಕರ್ನಾಟಕವನ್ನು ಹೋಲುತ್ತದೆ. ಬಂಗಾಳದಲ್ಲಿ ಬಹು ಪ್ರಮಾಣದಲ್ಲಿ ನೆಲೆಸಿರುವ ಸೇನರು ಹಲವಾರು ಶತಮಾನಗಳ ಹಿಂದೆ ಕರ್ನಾಟಕದಿಂದ ವಲಸೆ ಹೋದವರು. ಈ ಸೇನರ ಮೂಲ ಧಾರವಾಡ ಜಿಲ್ಲೆಯ ಮುಳುಗುಂದ. ಹೆಸರಾಂತ ಕವಿ ನಯಸೇನ ಇದೇ ಮುಳಗುಂದದವರು ಎಂಬುದು ಗಮನಾರ್ಹ. ಈ ಕುರಿತು ಪಶ್ಚಿಮ ಬಂಗಾಳದ ಹಿರಿಯ ಕಮ್ಯುನಿಸ್ಟ್ ನಾಯಕರಾಗಿದ್ದ ಮೋಹಿತ್ ಸೇನ್. ಅವರನ್ನು ನಾನೊಂದು ಬಾರಿ ಕೇಳಿದ್ದೆ. ಹೌದು, ನಮ್ಮ ಪೂರ್ವಿಕರು ಕರ್ನಾಟಕದಿಂದ ಬಂದವರು ಎಂದು ಒಪ್ಪಿಕೊಂಡರು.

ಬಹುಪ್ರಾಚೀನ ಇತಿಹಾಸವುಳ್ಳ ಈ ಕನ್ನಡನಾಡು ರಾಷ್ಟ್ರಕವಿ ಕುವೆಂಪು ವರ್ಣಿಸಿದಂತೆ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಹಿಂದೂ-ಮುಸಲ್ಮಾನ-ಕ್ರೈಸ್ತ-ಲಿಂಗಾಯತ-ಜೈನ-ಬೌದ್ಧ ಹೀಗೆ ಎಲ್ಲ ಸಮುದಾಯದ ಜನರು ಸೇರಿ ಈ ನಾಡನ್ನು ಕಟ್ಟಿದರು. ಈ ನಾಡಿನ ಸಂಸ್ಕೃತಿ, ಶಿಲ್ಪಕಲೆ, ವಾಣಿಜ್ಯ ವ್ಯವಹಾರಗಳಿಗೆ ಎಲ್ಲ ಸಮುದಾಯದ ದೊರೆಗಳು ಮತ್ತು ಜನರು ಕೊಡುಗೆ ನೀಡಿದರು. ಬನವಾಸಿಯನ್ನು ಆಳುತ್ತಿದ್ದ ಅಚ್ಚಕನ್ನಡದ ಅರಸರು ಶತಮಾನಗಳ ಹಿಂದೆಯೇ ವಿದೇಶದೊಂದಿಗೆ ವಾಣಿಜ್ಯ ವ್ಯವಹಾರ ಮಾಡುತ್ತಿದ್ದರೆಂದು ಗ್ರೀಕ್ ಇತಿಹಾಸಕಾರ ಟಾಲೇಮಿ ದಾಖಲಿಸಿದ್ದಾನೆ. ಈಜಿಫ್ಟ್‌ನಲ್ಲಿ ಎರಡನೇ ಶತಮಾನ ದಷ್ಟು ಹಿಂದೆ ಸಿಕ್ಕ ಗ್ರೀಕ್ ನಾಟಕದಲ್ಲಿ ಕನ್ನಡದ ಚನ್ನುಡಿ ಕಂಡು ಬಂದಿದೆ. ‘ಕೊಂಚ ಮಧುಪಾತ್ರೆಗೆ ಹಾಕು’ ಎಂಬ ಮಾತು ಆ ನಾಟಕದ ಒಂದು ಪಾತ್ರದ ಬಾಯಿಯಿಂದ ಬರುತ್ತದೆ.

ಮನುಷ್ಯರೆಲ್ಲ ಸಮಾನರು ಎಂಬ ಆಶಯ ಕನ್ನಡಿಗರಲ್ಲಿ ರಕ್ತಗತವಾಗಿದೆ. ಅಂತಲೇ ಮನುಷ್ಯದ್ವೇಷಕ್ಕೆ ಈ ನೆಲದಲ್ಲಿ ಜಾಗವಿಲ್ಲ. ಸಕಲ ಜೀವಾತ್ಮದ ಲೇಸನ್ನೇ ಬಯಸಿದ ಬಸವಣ್ಣ ಕುಲಕುಲವೆಂದು ಏಕೆ ಹೊಡೆದಾಡುವಿರಿ ಎಂದು ಪ್ರಶ್ನಿಸಿದ ಈ ನಾಡಿನಲ್ಲಿ ಆಗಿ ಹೋಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಸಿಕ್ಕಿದ ಅಶೋಕನ ಶಾಸನವೊಂದರಲ್ಲಿ ಮನುಷ್ಯರೆಲ್ಲ ಸಮಾನರು ಎಂಬ ಸಂದೇಶವಿದೆ. ಕರ್ನಾಟಕವನ್ನು ಆಳಿದ ಅರಸರು ಉತ್ತಮ ಸಂಸ್ಕಾರ ಹೊಂದಿದವರು. ಹೃದಯ ವೈಶಾಲ್ಯವಿದ್ದವರು. ಗೆದ್ದಾಗ ಅಹಂಕಾರದಿಂದ ಬೀಗಿದವರಲ್ಲ. ಸೋತಾಗ ಕುಗ್ಗಿದವರಲ್ಲ. ಚಾಲುಕ್ಯ ದೊರೆ ಎರಡನೇ ಪುಲಕೇಶಿ ಉತ್ತರದ ಸಾಮ್ರಾಟ ಹರ್ಷವರ್ಧನನನ್ನು ಯುದ್ಧದಲ್ಲಿ ಸೋಲಿಸಿದನಾದರೂ ಆತನನ್ನು ಅವಮಾನಗೊಳಿಸಲಿಲ್ಲ. ಆತನಿಂದ ಗೆದ್ದ ರಾಜ್ಯವನ್ನು ಆತನಿಗೆ ಮರಳಿಕೊಟ್ಟ.

ಈ ನಾಡಿಗೆ ಆಶ್ರಯ ಕೋರಿ ಬಂದವರಿಗೆಲ್ಲ ಕರ್ನಾಟಕ ಅಭಯ ಹಸ್ತ ನೀಡಿದೆ. ಚಂದ್ರಗುಪ್ತ ಮೌರ್ಯನ ಕಾಲದಿಂದಲೂ ಕನ್ನಡಿ ಗರು ಸಹಿಷ್ಣುಗಳು ಮತ್ತು ಪರೋಪಕಾರಿಗಳು ಎಂದು ಹೆಸ ರಾಗಿದ್ದವರು. ಇದಕ್ಕೆ ನಿದರ್ಶನವಾಗಿ ಶ್ರವಣಬೆಳಗೊಳ ನಮ್ಮ ಮುಂದಿದೆ. ಶೈವರಾದ ಚೋಳ ದೊರೆಗಳ ಹಿಂಸೆ ತಾಳದೆ ಓಡಿ ಬಂದ ಅಸಹಾಯಕ ಜನರಿಗೆ ಹೊಯ್ಸಳ ದೊರೆಗಳು ಆಶ್ರಯ ನೀಡಿದರು. ಮರಾಠ ಸರ್ದಾರರು ದೋಚಿಕೊಂಡು ಹೋದ ಶಂಕರಾಚಾರ್ಯರ ಮಠಕ್ಕೆ ಟಿಪ್ಪು ಸುಲ್ತಾನ್ ಉದಾರ ನೆರವು ನೀಡಿ, ಅದನ್ನು ಮರುನಿರ್ಮಿಸಿದ. ಈ ಮರಾಠ ಸೈನಿಕರು ಹಣದಾಸೆಯಿಂದ ಕಿತ್ತೆಸೆದ ಶಾರದಾಮಾತೆಯ ವಿಗ್ರಹವನ್ನು ಮುಸಲ್ಮಾನ ದೊರೆ ಟಿಪ್ಪು ಸುಲ್ತಾನ್ ಪುನರ್‌ಪ್ರತಿಷ್ಠಾಪನೆ ಮಾಡಿದ. ಇಂತಹ ಸೌಹಾರ್ದ ಪರಂಪರೆ ನಮ್ಮದು.

ಕರ್ನಾಟಕದ ದೊರೆಗಳ ಬಿರುದುಗಳು ಅರ್ಥಪೂರ್ಣವಾಗಿ ದ್ದವು. ಚಾಲುಕ್ಯ ದೊರೆಗಳು ಸತ್ಯಾಶ್ರಯ ಕುಲತಿಲಕ ಎಂದು ಕರೆಯ ಲ್ಪಟ್ಟರು. ಮೈಸೂರು ದೊರೆಗಳು ಆರಿಸಿಕೊಂಡಿದ್ದ ಲಾಂಛನ ಗಂಡಭೇರುಂಡ. ಇವು ಮುಖ ಹಲವಿದ್ದರೂ ಮನಸ್ಸು ಒಂದೇ ಇರಬೇಕು ಎಂಬ ಸಂದೇಶವನ್ನು ನೀಡುತ್ತದೆ. ಮೈಸೂರು ದೊರೆ ಚಿಕ್ಕದೇವರಾಜ ಭಾರತದಲ್ಲೇ ಪ್ರಪ್ರಥಮ ಬಾರಿ ಅಂಚೆ ವ್ಯವಸ್ಥೆ ಏರ್ಪಡಿಸಿದ. ಅದರಂತೆಯೇ ಶಿವನಸಮುದ್ರ ಜಲವಿದ್ಯುತ್ ಯೋಜನೆ ಏಶ್ಯಾದಲ್ಲೇ ಮೊದಲನೆಯದ್ದು.

ವೈರಾಗ್ಯವೇ ಮೈವೆತ್ತಿ ನಿಂತ 56 ಅಡಿ ಎತ್ತರದ ಶ್ರವಣಬೆಳಗೊಳದ ಗೋಮಟೇಶ್ವರ ಮತ್ತು ಒಮ್ಮೆ ಕೂಗಿದರೆ,ಒಂಬತ್ತು ಸಲ ಪ್ರತಿಧ್ವನಿಸುವ ಬಿಜಾಪುರದ ಗೋಲ ಗುಮ್ಮಟ, ಕಲ್ಲನ್ನೇ ಮೇಣದಂತೆ ಮಾಡಿ ನಿರ್ಮಿಸಿದ ಮೇಣಬಸದಿ ಎಂಬ ಅದ್ಭುತ ಕಲಾಸೃಷ್ಟಿ. ಬೇಲೂರು, ಹಳೆಬೀಡಿನ ಶಿಲಾವೈಭವಗಳು ಈ ನಾಡಿನ ಹೆಮ್ಮೆಯ ಸ್ಮಾರಕಗಳಾಗಿವೆ.

ಈ ನಾಡಿನಲ್ಲಿ ಜನಪರ ದೊರೆಗಳು ಮಾತ್ರವಲ್ಲ ದಕ್ಷ ಪ್ರಾಮಾಣಿಕ ಮಂತ್ರಿಗಳು ಆಗಿ ಹೋಗಿದ್ದಾರೆ. ಬೀದರ್‌ನ ಮುಹಮ್ಮದ್ ಗವಾನ್ ಮತ್ತು ಮೈಸೂರಿನ ಸರ್ ಎಂ. ವಿಶ್ವೇಶ್ವರಯ್ಯ ಇವರನ್ನು ಈ ನಾಡು ಎಂದಿಗೂ ಮರೆಯಬಾರದು. ಇತರರಿಗೆ ಮಾದರಿಯಾಗುವಂತೆ ಇವರು ಬದುಕಿದರು. ಮುಹಮ್ಮದ್ ಗವಾನ್ ಬಹಮನಿ ದೊರೆ ಮುಹಮ್ಮದ್ ಶಾಹ್‌ನ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದರು. ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ಇಂತಹ ಮಂತ್ರಿ ವಿರುದ್ಧ ಆಗ ಕೆಲ ಸ್ವಾರ್ಥ ಸಾಧಕರು ದೊರೆ ಮುಹಮ್ಮದ್ ಶಾಹ್‌ನ ಕಿವಿ ಕಚ್ಚಿದರು. ಮುಹಮ್ಮದ್ ಗವಾನ್ ಭ್ರಷ್ಟಾಚಾರಿಯಾಗಿದ್ದಾನೆ. ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದಾನೆ ಎಂದು ರಾಜರಿಗೆ ಚಾಡಿ ಹೇಳಿದರು. ಹಿತ್ತಾಳೆ ಕಿವಿಯ ರಾಜ ಹಿಂದೆಮುಂದೆ ಯೋಚಿಸದೆ, ವಿಚಾರಿಸದೆ ಮುಹಮ್ಮದ್ ಗವಾನ್‌ನನ್ನು ಆನೆಕಾಲಿಗೆ ಹಾಕಿ ತುಳಿಸಿದ. ನಂತರ ಗವಾನ್ ಗಳಿಸಿದ್ದನೆನ್ನಲಾದ ಹೇರಳ ಸಂಪತ್ತನ್ನು ಹೇರಿಕೊಂಡು ಬರಲು ದೊರೆ ಮುಹಮ್ಮದ್ ಶಾಹ್‌ತನ್ನ ಸೈನಿಕರನ್ನು ಕಳುಹಿಸುತ್ತಾನೆ. ಆದರೆ ಗವಾನ್ ಮನೆಯಲ್ಲಿ ದೊರೆತಿದ್ದು, ಅಡುಗೆ ಮಾಡಿಕೊಂಡು ಉಣ್ಣುತ್ತಿದ್ದ ಒಂದೆರಡು ಮಣ್ಣಿನ ಗಡಿಗೆಗಳು. ಅವನು ಮಲಗುತ್ತಿದ್ದ ಈಚಲು ಚಾಪೆ ಮತ್ತು ಅವನು ನಿತ್ಯವೂ ಬರೆಯುತ್ತಿದ್ದ ದಿನಚರಿ. ಇದು ಬಿಟ್ಟು ಮತ್ತೇನೂ ಸಿಗಲಿಲ್ಲ. ಈ ದಿನಚರಿಯಲ್ಲಿ ತನಗೆ ಬರುತ್ತಿದ್ದ ವೇತನದ ಖರ್ಚುವೆಚ್ಚಗಳನ್ನು ಬರೆದಿಡುತ್ತಿದ್ದ. ಮನೆಯವರ ಖರ್ಚಿಗೆ ಸ್ವಲ್ಪ ಹಣ ಕೊಟ್ಟು ಉಳಿದಿದ್ದನ್ನು ದಾನ ಮಾಡುತ್ತಿದ್ದ. ಸ್ವಂತ ಖರ್ಚಿಗೆ ಆತನ ಬಳಿ ಬಿಡಿಗಾಸು ಇರಲಿಲ್ಲ. ಇದನ್ನು ಕೇಳಿ ದೊರೆ ಪಶ್ಚಾತ್ತಾಪದಿಂದ ನಡುಗಿ ಹೋದ.

ಮೈಸೂರಿನಲ್ಲಿ ಮಂತ್ರಿಯಾಗಿದ್ದ ಸರ್ ಮೋಕ್ಷಗುಂಡುಂ ವಿಶ್ವೇಶ್ವರಯ್ಯನಂತಹವರು ಶತಮಾನಕ್ಕೊಮ್ಮೆ ಸಿಗುತ್ತಾರೆ. ತಾಯಿಯ ಮಾತನ್ನು ಶಿರಸಾವಹಿಸಿ ಪಾಲಿಸುತ್ತಿದ್ದ ವಿಶ್ವೇಶ್ವರಯ್ಯ ಸರಳತೆಯ ಸಾಕಾರಮೂರ್ತಿಯಾಗಿದ್ದರು. ಮಗ ಮೈಸೂರಿನಲ್ಲಿ ದಿವಾನನಾಗಬೇಕು ಎಂಬುದು ತಾಯಿಯ ಹಾರೈಕೆಯಾಗಿತ್ತು. ಅಂತಹ ಅವಕಾಶ ತಾನಾಗಿಯೇ ಒದಗಿ ಬಂತು. ನಾಲ್ವಡಿ ಕೃಷ್ಣರಾಜ ಅರಸರು ವಿಶ್ವೇಶ್ವರಯ್ಯನವರನ್ನು ದಿವಾನರನ್ನಾಗಿ ಮಾಡಲು ತೀರ್ಮಾನಿಸಿದರು. ಆದರೆ ಈ ನೇಮಕವನ್ನು ವಿಶ್ವೇಶ್ವರಯ್ಯ ತಕ್ಷಣ ಒಪ್ಪಲಿಲ್ಲ. ತಾಯಿಯನ್ನು ಕೇಳಿ ಬಂದು ಹೇಳುವುದಾಗಿ ತಿಳಿಸಿದರು. ತಾಯಿಯ ಬಳಿ ಕಾಲಿಗೆ ಬಿದ್ದು, ನೀವು ಒಪ್ಪಿದರೆ ಮಾತ್ರ ದಿವಾನ ಪದವಿ ಸ್ವೀಕರಿಸುತ್ತೇನೆಂದು ಹೇಳಿದರು. ತಾಯಿ ಒಪ್ಪಿಗೆ ನೀಡಿದರು.

ಆದರೆ ವಿಶ್ವೇಶ್ವರಯ್ಯ ಅಷ್ಟಕ್ಕೆ ಸುಮ್ಮನಾಗಲಿಲ್ಲ. ತಾಯಿಗೆ, ನೀವು ಒಂದು ಮಾತನ್ನು ನಡೆಸಿಕೊಟ್ಟರೆ ಮಾತ್ರ ನಾನು ದಿವಾನ ಪದವಿ ಸ್ವೀಕರಿಸುತ್ತೇನೆ ಎಂದು ಹೇಳಿದರು. ಆಗ ತಾಯಿ ಯಾವ ಮಾತು ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ವಿಶ್ವೇಶ್ವರಯ್ಯ,ನಾನು ದಿವಾನ ಪದವಿ ವಹಿಸಿಕೊಂಡು ಅಧಿಕಾರ ನಡೆಸುತ್ತಿರುವಾಗ ತನ್ನ ಸಂಬಂಧಿಕರ ಪರವಾಗಿ, ಬೇಕಾದವರ ಪರವಾಗಿ ವಶೀಲಿ ಹಚ್ಚಬಾರದು. ಯಾವುದೇ ಶಿಫಾರಸು ತರಬಾರದು ಎಂದು ಕರಾರು ಹಾಕಿದರು. ಅದೇ ರೀತಿ ತಮ್ಮ ಬಂಧುಗಳನ್ನು ಮತ್ತು ನೆಂಟರನ್ನು ಕರೆದು ಯಾವುದೇ ಕೆಲಸಕ್ಕೂ ತಮ್ಮ ಮೇಲೆ ಪ್ರಭಾವ ಬೀರುವುದಿಲ್ಲವೆಂದು ಮಾತು ತೆಗೆದುಕೊಂಡರು. ಇಂತಹ ವಿಶ್ವೇಶ್ವರಯ್ಯನವರನ್ನು ಈಗಿನ ಮಂತ್ರಿಗಳಿಗೆ ಹೋಲಿಸಲು ಸಾಧ್ಯವೇ? ವಿಶ್ವೇಶ್ವರಯ್ಯನವರು ಗ್ರಾಮೀಣ ಪ್ರದೇಶದಲ್ಲಿ ಪ್ರವಾಸಕ್ಕೆ ಹೋದಾಗ, ಸರಕಾರಿ ಕೆಲಸಕ್ಕೆ ಸರಕಾರಿ ಮೇಣದಬತ್ತಿಯನ್ನು ಉರಿಸುತ್ತಿದ್ದರು. ಅದಾದ ಮೇಲೆ ಸ್ವಂತದ ಕೆಲಸಕ್ಕೆ ಸ್ವಂತದ ಮೇಣದಬತ್ತಿಯನ್ನು ಉರಿಸುತ್ತಿದ್ದರು. ಒಮ್ಮೆ ಮಂತ್ರಿಯಾದ ಮೇಲೆ ಸರಕಾರಕ್ಕೆ ಸೇರಿದ್ದಲ್ಲ ತನ್ನದೇ ಎಂದು ಈಗಿನವರಂತೆ ಎಲ್ಲವನ್ನೂ ಕಬಳಿಸುವ ಚಾಳಿ ಅವರಿಗೆ ಇರಲಿಲ್ಲ.

ಬರೀ ಅರಸರು ಮಾತ್ರವಲ್ಲ ಅನೇಕ ವಿಚಾರಧಾರೆ ಗಳು ಜನ್ಮತಾಳಿದ ನಾಡಿದು. ದ್ವೈತ-ಅದ್ವೈತ-ವಿಶಿಷ್ಟ ಅದ್ವೈತ ಸಿದ್ಧಾಂತಗಳು ಈ ನೆಲದಲ್ಲಿ ಒಡಮೂಡಿದವು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಅತ್ತಿಮಬ್ಬೆ, ವಿದ್ಯಾರಣ್ಯ, ಕೃಷ್ಟದೇವರಾಯ, ಟಿಪ್ಪು ಸುಲ್ತಾನ್, ಬಿಜಾಪುರದ ಆದಿಲಶಾಹಿ ಇಂತಹ ದೊರೆಗಳು ಮಾತ್ರವಲ್ಲ ರನ್ನ, ಪಂಪ, ಹರಿಹರ, ರಾಘವಾಂಕ, ಲಕ್ಷ್ಮೀಶ, ನಾರಣಪ್ಪ, ಜಕಣಾಚಾರಿ, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಲ್, ಬಸವರಾಜ ರಾಜಗುರು, ಕುಮಾರ್ ಗಂಧರ್ವ, ಪಂಡಿತ್ ತಾರಾನಾಥ್ ಹೀಗೆ ಸಾವಿರಾರು ಚೇತನಗಳು ನಾಡನ್ನು ಬೆಳಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಲ್ ಮಾರ್ಕ್ಸ್‌ಗಿಂತ 700 ವರ್ಷಗಳ ಹಿಂದೆಯೇ ಮನುಷ್ಯ ಸಮಾನತೆಯನ್ನು, ಸ್ತ್ರೀಸಮಾನತೆಯನ್ನು, ಕಾಯಕಪ್ರಧಾನವಾದ ಸಮಾಜವನ್ನು ಸೃಷ್ಟಿಸಿ ಬಸವಣ್ಣ ಹೊಸ ಬೆಳಕನ್ನು ನೀಡಿದರು. ಆದಿಕವಿ ಪಂಪ ‘ಮನುಷ್ಯಜಾತಿ ತಾನೊಂದೇ ವಲಂ’ ಎಂದು ಹೇಳಿದ. ಆನಂತರ ಬಂದ ಕುವೆಂಪು, ಬೇಂದ್ರೆ, ಅಡಿಗ, ಜಿಎಸ್‌ಎಸ್, ಮಾಸ್ತಿ, ಗೋಕಾಕ, ಕಾರಂತ, ನಿರಂಜನ, ಅನಂತಮೂರ್ತಿ, ಲಂಕೇಶ್, ಕಾರ್ನಾಡ, ಪಾಟೀಲ ಪುಟ್ಟಪ್ಪ ಅವರಂತಹ ಹೆಸರಾಂತ ಲೇಖಕರು ಈ ನಾಡಿನ ಹೆಮ್ಮೆಯಾಗಿದ್ದಾರೆ.

  ಚರಿತ್ರೆಯಲ್ಲಿ ಸಹಜವಾಗಿ ದಾಖಲಾದ ರಾಜ-ಮಹಾರಾಜರು ಮಾತ್ರ ಈ ನಾಡನ್ನು ಕಟ್ಟಲಿಲ್ಲ. ಆಸ್ಥಾನನ ಸಾಹಿತಿಗಳಿಂದಾಗಿ ಇವರ ಹೆಸರು ಚರಿತ್ರೆಯಲ್ಲಿ ದಾಖಲಾಗಿರಬಹುದು. ಆದರೆ ಇವರಿಗೆಲ್ಲ ಒತ್ತಾಸೆಯಾಗಿ ನಿಂತವರು ಜನಸಾಮಾನ್ಯರು. ವಿಜಯನಗರ ಸಾಮ್ರಾಜ್ಯ, ಬನವಾಸಿ ಅರಸೊತ್ತಿಗೆ, ಬಾದಾಮಿಯ ಶಿಲ್ಪಕಲೆ ಇವುಗಳನ್ನೆಲ್ಲ ದುಡಿಯುವ ಜನ ತಮ್ಮ ಮೈಬೆವರಿನಿಂದ ನಿರ್ಮಿಸಿದರು. ಜನಸಾಮಾನ್ಯರ ನಡುವಿನಿಂದಲೇ ಬಂದ ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ, ಅಮಟೂರು ಬಾಳಪ್ಪ, ಹಲಗಲಿಯ ಬೇಡರು, ಸಾಮಾನ್ಯ ಸೈನಿಕನಾಗಿದ್ದ ಹೈದರಲಿ ಇವರೆಲ್ಲರ ಪರಿಶ್ರಮ ಈ ನಾಡು ಎದ್ದು ನಿಲ್ಲಲು ಕಾರಣವಾಗಿದೆ.

ಆದರೆ ಇಂತಹ ಭವ್ಯ ಇತಿಹಾಸವುಳ್ಳ ಕರ್ನಾಟಕ ಇಂದೇನಾಗಿದೆ ಎಂಬ ಬಗ್ಗೆ ಆತಂಕ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ನಾಡಿನ ಪ್ರಕೃತಿ ಸಂಪತ್ತು ಮುಂಚಿನಂತೆ ಸುರಕ್ಷಿತವಾಗಿ ಉಳಿದಿಲ್ಲ. ಜಾಗತೀಕರಣದ ಪ್ರಭಾವದ ಎದುರು ಕನ್ನಡಭಾಷೆಯ ಬುಡ ಅಲ್ಲಾಡುತ್ತಿದೆ. ಇಲ್ಲಿನ ನೆಲ-ಜಲ-ಜನ ಎಲ್ಲದಕ್ಕೂ ಈಗ ಅಪಾಯಕಾರಿ ಸವಾಲುಗಳು ಎದುರಾಗಿವೆ. ಶತಮಾನಗಳಿಂದ ಇಂತಹ ಸವಾಲುಗಳನ್ನು ಎದುರಿಸಿ, ಮೈಕೊಡವಿ ಎದ್ದುನಿಂತ ನಮ್ಮ ರಾಜ್ಯ ಕಾಲ ಪ್ರವಾಹದಲ್ಲಿ ಕೊಚ್ಚಿ ಹೋಗುವುದಿಲ್ಲ ಎಂಬ ನಂಬಿಕೆಯೊಂದೇ ಆಶಾಕಿರಣವಾಗಿದೆ.

ಜಗತ್ತಿನ ಬೇರೆ ಬೇರೆ ಕಡೆ ನೆಲೆಸಿರುವ ಕನ್ನಡಿಗರು ತಮ್ಮ ನಾಡಿನ ಶೀಮಂತ ಪರಂಪರೆಯನ್ನು ಸ್ಮರಿಸಿಕೊಳ್ಳುವುದರ ಜೊತೆಗೆ ಈ ನಾಡು ಇಂದು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಚಿಂತಿಸಬೇಕಾಗಿದೆ. ಇದೆಲ್ಲದರೊಂದಿಗೆ ದಶಕಗಳ ಹಿಂದೆ ಅಲ್ಲಿ ಹೋಗಿ ನೆಲೆಸಿದವರು ಮುಂದಿನ ಪೀಳಿಗೆಗೆ ಕರ್ನಾಟಕದ ಹಿರಿಮೆಯನ್ನು ತಿಳಿಸಿ ಹೇಳಬೇಕಾಗಿದೆ. ಆ ಕೆಲಸವನ್ನು ವಿದೇಶದಲ್ಲಿರುವ ಕನ್ನಡ ಸಂಘಟನೆಗಳು ಮಾಡುತ್ತಿವೆ ಎಂಬುದು ಒಂದು ಹೆಮ್ಮೆಯ ಸಂಗತಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News