ಸಾಂವಿಧಾನಿಕ ವ್ಯವಸ್ಥೆ ವಿರುದ್ಧ ಒಳಸಂಚು

Update: 2018-11-04 18:54 GMT

ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಆರೆಸ್ಸೆಸ್‌ನ ಗುರಿ ಏನು ಎಂಬುದು ಪದೇ ಪದೇ ಬಯಲಾಗುತ್ತಲೇ ಇದೆ. ಸರ್ವರಿಗೂ ಸಮಾನತೆಯನ್ನು ನೀಡಿ, ಜಾತಿ ಮತ್ತು ಲಿಂಗ ತಾರತಮ್ಯ ಕೊಂಚವಾದರೂ ನಿವಾರಿಸಿದ ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ ವ್ಯವಸ್ಥೆಯನ್ನು ಬುಡಮೇಲು ಮಾಡಿ ಮತ್ತೆ ಜಾತಿ ಶ್ರೇಣೀಕರಣದ ಹಿಂದೂ ಹೆಸರಿನ ಮನುವಾದಿ ರಾಷ್ಟ್ರ ನಿರ್ಮಿಸುವುದು ಸಂಘ ಪರಿವಾರದ ಗುರಿ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ಖಚಿತವಾಗಿದೆ. ದೇಶವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದ ನರೇಂದ್ರ ಮೋದಿ ಸರಕಾರವನ್ನು ನಂಬಿಕೊಂಡರೆ, ಮತ್ತೆ ಬಿಜೆಪಿ ಗೆಲ್ಲುವುದು ಕಷ್ಟ ಎಂದು ಖಚಿತಪಡಿಸಿಕೊಂಡಿರುವ ಆರೆಸ್ಸೆಸ್ ಮತ್ತೆ ರಾಮಮಂದಿರ ಕಾರ್ಯಸೂಚಿಯನ್ನು ಮುಂದೆ ಮಾಡಿದೆ. ಅದರ ಜೊತೆಗೆ ಸಾಂವಿಧಾನಿಕ ವ್ಯವಸ್ಥೆಯನ್ನೇ ನಿಷ್ಕ್ರಿಯಗೊಳಿಸುವುದು ಅದರ ಉದ್ದೇಶವಾಗಿದೆ. ರಫೇಲ್ ಹಗರಣದಲ್ಲಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ನರೇಂದ್ರ ಮೋದಿಯವರಿಗೂ ಇದು ಬೇಕಾಗಿದೆ. ಪೇಜಾವರ ಸ್ವಾಮಿಗಳಿಂದ ಹಿಡಿದು ಸಂಘ ಪರಿವಾರದ ಹಿರಿಯ ನಾಯಕರಿಂದ ಬರುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಮತ್ತು ನರೇಂದ್ರ ಮೋದಿ ಸರಕಾರದ ನಡೆ, ನುಡಿಗಳನ್ನು ಅವಲೋಕಿಸಿದರೆ, ನಮ್ಮ ದೇಶದ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆ ಅದರಲ್ಲೂ ನ್ಯಾಯಾಂಗ ಮತ್ತು ಕಾರ್ಯಾಂಗಗಳು ತೀವ್ರ ಗಂಡಾಂತರ ಎದುರಿಸುತ್ತಿವೆ.

ದೇಶದ ಬಡವರು, ದಲಿತರು ಮತ್ತು ಮಹಿಳೆಯರ ರಕ್ಷಾಕವಚವಾದ ಸಂವಿಧಾನದ ಮೇಲೆ ದಾಳಿ ಆರಂಭವಾಗಿದೆ. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಗಳು ಇತ್ತೀಚೆಗೆ ಉಡುಪಿಯಲ್ಲಿ ಮಾತ ನಾಡುತ್ತ, ‘‘ಧರ್ಮ ಮತ್ತು ಸಂಪ್ರದಾಯಗಳನ್ನು ಬದಲಾವಣೆ ಮಾಡುವ ಹಕ್ಕು ಸುಪ್ರೀಂ ಕೋರ್ಟ್‌ಗೆ ಇಲ್ಲ. ಧಾರ್ಮಿಕ ನಿರ್ಣಯಗಳನ್ನು ಮಠಾಧಿಪತಿಗಳು ಮತ್ತು ಧರ್ಮ ಗುರುಗಳು ಕೈಗೊಳ್ಳುತ್ತಾರೆ’’ ಎಂದು ಹೇಳಿದರು. ‘‘ಧರ್ಮದಲ್ಲಿ ಹಸ್ತಕ್ಷೇಪ ಮಾಡಲು ಸರಕಾರಕ್ಕೂ ಅವಕಾಶ ನೀಡುವುದಿಲ್ಲ’’ ಎಂದರು. ಶಬರಿಮಲೆ ಅಯ್ಯಪ್ಪ ದೇವಾಲಯ ದಲ್ಲಿ ಮಹಿಳೆಯರ ಪ್ರವೇಶವನ್ನು ಅವರು ವಿರೋಧಿಸಿದರು. 2019ರ ಲೋಕಸಭಾ ಚುನಾವಣೆಗೂ ಮುನ್ನ ಮತ್ತೆ ಅಯೋಧ್ಯೆ ಮಂದಿರ ಉನ್ಮಾದ ಕೆರಳಿಸಿ ಬಿಜೆಪಿಗೆ ಹಿಂದೂ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಹೊರಟಿರುವ ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಕೂಡ ಈ ಪ್ರಕರಣವನ್ನು ನ್ಯಾಯಾಲಯವು ಸಕಾಲದಲ್ಲಿ ಇತ್ಯರ್ಥಪಡಿಸದಿದ್ದರೆ, ಸರಕಾರ ಸುಗ್ರೀವಾಜ್ಞೆ ಮೂಲಕ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಹೇಳಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕಾರಿಣಿ ಸಭೆ ಕೂಡ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡದಿದ್ದರೆ, 1992ರ ಮಾದರಿಯ ರಾಷ್ಟ್ರವ್ಯಾಪಿ ಉಗ್ರ ಆಂದೋಲನ ಮಾಡುವ ಬೆದರಿಕೆ ಹಾಕಿದೆ. ‘‘ಅಯೋಧ್ಯ ರಾಮಜನ್ಮಭೂಮಿ ವಿವಾದವನ್ನು ‘ಆದ್ಯತೆಯ ವಿಷಯವಲ್ಲ’ ಎಂದು ಹೇಳುವ ಮೂಲಕ ಕೋಟ್ಯಂತರ ಹಿಂದೂಗಳಿಗೆ ಸುಪ್ರೀಂ ಕೋರ್ಟ್ ಅವಮಾನಿಸಿದೆ’’ ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ಭಯ್ಯೆಜಿ ಜೋಶಿ ಸುಪ್ರೀಂ ಕೋರ್ಟ್ ವಿರುದ್ಧ ಕೆಂಡಕಾರಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಕೂಡ ಸುಪ್ರೀಂ ಕೋರ್ಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶ ಮಾಡುವ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲಂಘಿಸುವಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಹಿರಂಗವಾಗಿ ಹಿಂದೂಗಳನ್ನು ಪ್ರಚೋದಿಸಿದ್ದಾರೆ. ಕೇರಳದಲ್ಲಿ ಅರಾಜಕ ವಾತಾವರಣ ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಕೇರಳದ ದೊಂಬಿಗೆ ಆರೆಸ್ಸೆಸ್ ಕೂಡ ಬೆಂಬಲ ವ್ಯಕ್ತಪಡಿಸಿದೆ. ಸಮಾಜದಲ್ಲಿ ಆಚರಣೆಯಲ್ಲಿರುವ ಜೀವವಿರೋಧಿ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಉಲ್ಲಂಘಿಸಲು ಮುಂದಾದಾಗ, ಸಂಪ್ರದಾಯವಾದಿಗಳಿಂದ ಇಂತಹ ಪ್ರತಿರೋಧ ಬರುವುದು ಸಹಜ. ಈಗ ಧರ್ಮದ ಹೆಸರಿನಲ್ಲಿ ಮಹಿಳೆಯರ ದೇವಾಲಯದ ಪ್ರವೇಶವನ್ನು ವಿರೋಧಿಸುತ್ತಿರುವ ಪೇಜಾವರ ಶ್ರೀಗಳು ಮತ್ತು ಸಂಘ ಪರಿವಾರ ಮತ್ತು ಅವರ ಪರಂಪರೆಗೆ ಸೇರಿದವರು ಹಿಂದೆ ಸತಿ ಸಹಗಮನ ಪದ್ಧತಿ ವಿರುದ್ಧ ಬ್ರಿಟಿಷ್ ಸರಕಾರ ಕಾನೂನು ತಂದಾಗ, ಅದರ ವಿರುದ್ಧ ಅಪಸ್ವರ ತೆಗೆದಿದ್ದರು. ಪುಣೆಯಲ್ಲಿ ಮಹಿಳೆಯರಿಗೆ ಅಕ್ಷರ ಕಲಿಸಲು ಸಾವಿತ್ರಿಬಾಯಿ ಫುಲೆ ಹೊರಟಾಗ, ಅವರ ಮೇಲೆ ಸೆಗಣಿ ಮತ್ತು ಕಲ್ಲುಗಳನ್ನು ಎಸೆದಿದ್ದರು. ಈಗ ಶಬರಿಮಲೆಯಲ್ಲಿ ಮಹಿಳೆಯರ ದೇವಾಲಯ ಪ್ರವೇಶವನ್ನು ವಿರೋಧಿಸುತ್ತಿರುವ ಕೇರಳದಲ್ಲಿ ಶತಮಾನದ ಹಿಂದೆ ಶೂದ್ರ ಮಹಿಳೆಯರು ತಮ್ಮ ಸ್ತನಗಳನ್ನು ಪ್ರದರ್ಶನ ಮಾಡಿಕೊಂಡು ತಿರುಗಾಡಬೇಕಿತ್ತು. ಅವುಗಳನ್ನು ಮುಚ್ಚಿಕೊಳ್ಳಲು ಮೇಲ್ಜಾತಿಯ ಜಮೀನ್ದಾರರು ನಿರ್ಬಂಧ ವಿಧಿಸಿದ್ದರು. ಅವುಗಳನ್ನು ಮುಚ್ಚಿಕೊಳ್ಳಬೇಕೆಂದರೆ ಸ್ತನ ಕಂದಾಯ ಕಟ್ಟಬೇಕಿತ್ತು. ಇದರಿಂದ ರೋಸಿ ಹೋದ ಆದಿವಾಸಿ ಮಹಿಳೆಯೊಬ್ಬಳು ಅಂದಿನ ಪಾಳೇಗಾರರ ಎದುರು ತನ್ನ ಸ್ತನಗಳನ್ನೇ ಕತ್ತರಿಸಿ ಇಟ್ಟಿದ್ದಳು.

ಹೀಗೆ ಕಂದಾಚಾರಿಗಳು ಧರ್ಮದ ಹೆಸರಿನಲ್ಲಿ ಕಟ್ಟುಪಾಡುಗಳನ್ನು ವಿಧಿಸುತ್ತಲೇ ಬಂದಿದ್ದಾರೆ. ಅವುಗಳನ್ನು ವಿರೋಧಿಸಿ ಹೋರಾಟಗಳು ನಡೆಯುತ್ತಲೇ ಬಂದಿವೆ. ಅದೇ ಕೇರಳದಲ್ಲಿ ನಾರಾಯಣಗುರುಗಳು ಅಸ್ಪಶ್ಯ ಪಾಲಿಸುವ ದೇವಾಲಯಗಳನ್ನು ಬಹಿಷ್ಕರಿಸಿದರು. ಶೂದ್ರ ಸಮುದಾಯಕ್ಕಾಗಿ ಶಿವ ಮಂದಿರಗಳನ್ನು ನಿರ್ಮಿಸಿದರು. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ವೈದಿಕ ಶಾಹಿಗಳ ಕಟ್ಟುಪಾಡು ಗಳನ್ನು ಧಿಕ್ಕರಿಸಿದರು. ‘‘ವೇದಕ್ಕೆ ಒರೆಯ ಕಟ್ಟುವೆ, ಆಗಮದ ಮೂಗ ಕುಯ್ಯುವೆ’’ ಎಂದು ಸನಾತನಿಗಳಿಗೆ ಸವಾಲು ಹಾಕಿ ನಿಂತರು. ತನ್ನನ್ನು ಮಾದಾರ ಚನ್ನಯ್ಯನ ಮಗ ಎಂದು ಕರೆದುಕೊಂಡರು. ಮನುಷ್ಯ ವಿರೋಧಿ ಸಂಪ್ರದಾಯಗಳನ್ನು ಉಲ್ಲಂಘಿಸುವ ದೊಡ್ಡ ಪರಂಪರೆ ಈ ದೇಶದಲ್ಲಿದೆ. ಆಯಾ ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಅದನ್ನು ರಕ್ಷಿಸುವ ಪೇಜಾವರ ಸ್ವಾಮಿಗಳಂತಹವರು ಆಗಿ ಹೋಗಿದ್ದಾರೆ. ಆದರೆ, ಕಂದಾಚಾರದ ಕಟ್ಟುಪಾಡುಗಳು ಸಡಿಲಾಗಿವೆ. ಇವುಗಳನ್ನು ಉಲ್ಲಂಘಿಸಿದವರು ಜಯಶಾಲಿಯಾಗಿದ್ದಾರೆ. ಶನಿ ಸಿಂಗನಾಪುರದಲ್ಲಿ ಮಹಿಳೆಯರ ಪ್ರವೇಶವನ್ನು ಒಪ್ಪಿಕೊಳ್ಳುವ ಬಿಜೆಪಿ ಮತ್ತು ಸಂಘ ಪರಿವಾರ ಕೇರಳದಲ್ಲಿ ಎಡ ರಂಗ ಸರಕಾರದ ವಿರುದ್ಧ ಹಿಂದೂಗಳನ್ನು ಎತ್ತಿ ಕಟ್ಟಲು ಧರ್ಮದ ಹೆಸರಿನಲ್ಲಿ ಹಿಂಸೆಗೆ ಪ್ರಚೋದಿಸುತ್ತಿದೆ. ಈ ದೇಶಕ್ಕೆ ಸ್ವಾತಂತ್ರ ಬಂದಾಗ, ಇದನ್ನು ಹಿಂದೂ ರಾಷ್ಟ್ರವನ್ನಾಗಿ ರೂಪಿಸಬೇಕು ಎಂದು ಹಿಂದೂ ಮಹಾಸಭೆೆ ಮತ್ತು ಆರೆಸ್ಸೆಸ್‌ಗಳು ಮಸಲತ್ತು ನಡೆಸಿದ್ದವು. ಆದರೆ, ನಮ್ಮ ಸ್ವಾತಂತ್ರ ಹೋರಾಟದ ನಾಯಕರು ಭಾರತವನ್ನು ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ನಿರ್ಮಿಸಿದರು. ಮಹಾತ್ಮಾ ಗಾಂಧಿ, ಸುಭಾಷ್, ನೆಹರೂ, ಭಗತ್ ಸಿಂಗ್ ಇವರೆಲ್ಲರ ಕನಸಿನ ಭಾರತ ಜಾತ್ಯತೀತ ಭಾರತವಾಗಿತ್ತು. ಡಾ. ಅಂಬೇಡ್ಕರ್ ಅದಕ್ಕೊಂದು ಸಂವಿಧಾನ ನೀಡಿದರು. ಇದಾದ ನಂತರ ಮನುವಾದಿ ಹಿಂದೂ ರಾಷ್ಟ್ರದ ಕನಸು ಭಗ್ನಗೊಂಡಿದ್ದರಿಂದ ಈ ಕೋಮುವಾದಿ ಶಕ್ತಿಗಳು ಅದರ ವಿರುದ್ಧ ಮಸಲತ್ತು ಮಾಡುತ್ತಲೇ ಇವೆ.

ಸ್ವಾತಂತ್ರ ಹೋರಾಟದ ಅರಿವು ಇಲ್ಲದ ಹೊಸ ಪೀಳಿಗೆಯಲ್ಲಿ ಹಿಂದುತ್ವದ ಉನ್ಮಾದವನ್ನು ಕೆರಳಿಸಿ ನಮ್ಮ ಸಾಂವಿಧಾನಿಕ ವ್ಯವಸ್ಥೆಯ ವಿರುದ್ಧ ಜನರನ್ನು ಎತ್ತಿ ಕಟ್ಟಲು ಸಂಘ ಪರಿವಾರ ಮತ್ತು ಮಠಾಧೀಶರು ಯತ್ನಿಸುತ್ತಿದ್ದಾರೆ. ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ತೀರ್ಪು ನೀಡುವ ಅಧಿಕಾರ ಸುಪ್ರೀಂ ಕೋರ್ಟ್ ಗೆ ಇಲ್ಲ ಎಂದು ಹೇಳುವ ಪೇಜಾವರ ಮಠಾಧೀಶರು ಉಡುಪಿ ಮಠದ ಅನೇಕ ವಿವಾದಗಳನ್ನು ತಾವೇಕೆ ಬಗೆಹರಿಸಿಲ್ಲ. ಶಿರೂರು ಮಠದ ಸ್ವಾಮಿಯ ಸಾವಿನ ಪ್ರಕರಣ ಪೊಲೀಸ್ ಠಾಣೆಗೆ ಯಾಕೆ ಹೋಯಿತು? ಪೂಜೆಗೆ ಸಂಬಂಧಿಸಿದಂತೆ ಮಂತ್ರಾಲಯ ಮತ್ತು ಉತ್ತರಾಧಿಮಠದ ನಡುವಿನ ವಿವಾದ ನ್ಯಾಯಾಲಯದಲ್ಲಿ ಏಕಿದೆ? ಇವು ಹಿಂದೂ ಮತ್ತು ಮುಸ್ಲಿಂ ವಿವಾದಗಳಲ್ಲ. ಹಿಂದೂಗಳೆಲ್ಲರ ವಿವಾದಗಳೂ ಅಲ್ಲ. ಬ್ರಾಹ್ಮಣ ಒಳಪಂಗಡಗಳ ಮಠಗಳ ವಿವಾದ. ತೀರ ಇತ್ತೀಚೆಗೆ ರಾಮಚಂದ್ರಾಪುರ ಮಠದ ವಿವಾದವು ನ್ಯಾಯಾಲಯದಲ್ಲಿದೆ. ಇವುಗಳನ್ನು ಧರ್ಮಗುರುಗಳು ತಾವೇ ಕೂತು ಬಗೆಹರಿಸಬೇಕಿತ್ತು. ನಮ್ಮ ಸಾಂವಿಧಾನಿಕ ವ್ಯವಸ್ಥೆ ಇರದಿದ್ದರೆ, ಕೋರ್ಟ್-ಕಚೇರಿಗಳು ಇರದಿದ್ದರೆ, ಪೊಲೀಸರು ಇರದಿದ್ದರೆ, ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಘ ಪರಿವಾರ ಸೃಷ್ಟಿಸಿದ ಚೈತ್ರಾ ಕುಂದಾಪುರ ನಡೆಸಿದ ಗಲಭೆಯ ಉದಾಹರಣೆಯೇ ಸಾಕ್ಷಿಯಾಗಿದೆ. ಹಿಂದುತ್ವದ ಎರಡು ಗುಂಪುಗಳ ನಡುವೆ ಹೊಡೆದಾಟ ಆಗಿ, ಒಂದು ಗುಂಪು ಜೈಲುಪಾಲಾಗಿದೆ. ಪೇಜಾವರ ಮಠಾಧೀಶರು ಧಾರ್ಮಿಕ ಚೌಕಟ್ಟಿನಲ್ಲಿ ಏಕೆ ಈ ವಿವಾದ ಬಗೆಹರಿಸಲಿಲ್ಲ.

1947ರಲ್ಲಿ ನಮ್ಮ ದೇಶ ಸ್ವಾತಂತ್ರ ಪಡೆದು ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಈ ದೇಶಕ್ಕೊಂದು ಸಂವಿಧಾನವಿದೆ. ನ್ಯಾಯಾಲಯಗಳ ತೀರ್ಪು ಗಳನ್ನು ಮತ್ತು ಸಂವಿಧಾನವನ್ನು ಪ್ರಶ್ನಿಸುವುದು ದೇಶದ್ರೋಹವಾಗುತ್ತದೆ. ಪೇಜಾವರ ಸ್ವಾಮಿಗಳಂತಹವರು ಈ ರೀತಿ ನ್ಯಾಯಾಲಯದ ತೀರ್ಪಿನ ವಿರುದ್ಧ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಈ ದೇಶದಲ್ಲಿ ಯಾವುದೇ ಧರ್ಮ ಅಥವಾ ದೇವರು ಅವರ ಮನೆಯಲ್ಲಿ ಇರಲಿ. ಸಾರ್ವಜನಿಕ ಆಚರಣೆಯ ಪ್ರಶ್ನೆ ಬಂದಾಗ, ಜಾತಿ ಮತ್ತು ಲಿಂಗ ಭೇದ ಮಾಡುವುದು ಕಾನೂನಿಗೆ ವಿರೋಧವಾಗುತ್ತದೆ. ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುವವರು ನಾಳೆ ದೇವಾಲಯಕ್ಕೆ ದಲಿತರ ಪ್ರವೇಶಕ್ಕೂ ಅವಕಾಶ ಕೊಡುವುದಿಲ್ಲ ಎಂದು ಹೇಳುತ್ತಾರೆ. ಅದು ಧಾರ್ಮಿಕ ಆಂತರಿಕ ವಿಷಯ ಎನ್ನುತ್ತಾರೆ. ಸುಪ್ರೀಂ ಕೋರ್ಟ್ ಪ್ರವೇಶ ಬೇಡ ಎನ್ನುತ್ತಾರೆ. ಹೀಗೆ ಎನ್ನುವವರು ಈ ದೇಶವನ್ನು ಕತ್ತಲ ಲೋಕಕ್ಕೆ ವಾಪಸ್ ಕರೆದುಕೊಂಡು ಹೊರಟಿದ್ದಾರೆ.

ಈ ದೇಶದಲ್ಲಿ ಶತಮಾನದ ಹಿಂದೆ ಒಂದು ಸಂಪ್ರದಾಯ ಇತ್ತು. ಪುಣೆಯಂತಹ ನಗರದಲ್ಲಿ ದಲಿತರು ಊರು ಪ್ರವೇಶ ಮಾಡಬೇಕಿದ್ದರೆ ನೆಲದ ಮೇಲೆ ಅವರ ಉಗುಳು ಬೀಳಬಾರದೆಂದು ಕೊರಳಿಗೆ ಮಣ್ಣಿನ ಗಡಿಗೆ ಕಟ್ಟಿಕೊಂಡು ಬರಬೇಕಿತ್ತು. ಅವರ ಹೆಜ್ಜೆ ನೆಲದ ಮೇಲೆ ಮೂಡಬಾರದೆಂದು ಕಾಲಿಗೆ ಪೊರಕೆ ಕಟ್ಟಿಕೊಂಡು ಬರಬೇಕಿತ್ತು. ಇದು ಕೂಡ ಮನುಪ್ರಣೀತ ಧರ್ಮದ ಕಟ್ಟುಪಾಡು. ಆಗ ಇದನ್ನು ವಿರೋಧಿಸಿದಾಗಲೂ ಪೇಜಾವರ ಸ್ವಾಮಿಗಳಂತೆ ಧರ್ಮಗಳ ಹೆಸರಿನಲ್ಲಿ ಇದನ್ನು ಸಮರ್ಥಿಸುವವರು ಇದ್ದರು. ಆದರೆ, ಬದಲಾವಣೆಯ ಪ್ರವಾಹದಲ್ಲಿ ಅವರೆಲ್ಲ ಕೊಚ್ಚಿ ಹೋದರು. ಈಗಲೂ ಅದೇ ಗತಿ ಇವರಿಗೆ ಬರುತ್ತದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿವಾದದ ಬಗ್ಗೆ ಹೇಳಬೇಕೆಂದರೆ, ಬರೀ ಮಂದಿರ ನಿರ್ಮಾಣದ ಪ್ರಶ್ನೆಯಾಗಿದ್ದರೆ ಸುಪ್ರೀಂ ಕೋರ್ಟ್ ಪ್ರವೇಶದ ಅಗತ್ಯ ಇರಲಿಲ್ಲ. ಆದರೆ, ಅಲ್ಲಿ ವಿವಾದ ಇರುವುದು 16ನೇ ಶತಮಾನದ ಮಸೀದಿಯನ್ನು ಹಾಡಹಗಲೇ ನೆಲಸಮಗೊಳಿಸಿದ ಪ್ರಕರಣದ ಬಗ್ಗೆ.

ಉದ್ರಿಕ್ತ ಜನಜಂಗುಳಿ 1992ರ ಡಿಸೆಂಬರ್ 6ರಂದು ಮಸೀದಿಯನ್ನು ನೆಲಸಮಗೊಳಿಸುವಾಗ ಪೇಜಾವರ ಶ್ರೀಗಳು ಅಲ್ಲಿದ್ದರು. ಮಸೀದಿ ಕೆಡವಿದ ಬಗ್ಗೆ ಲಿಬರ್ಹಾನ್ ಆಯೋಗ 16 ವರ್ಷ ತನಿಖೆ ನಡೆಸಿ, 900 ಪುಟಗಳ ವರದಿ ನೀಡಿದೆ. ಇದಕ್ಕೆ 8 ಕೋಟಿ ರೂ. ಖರ್ಚು ಆಗಿದೆ. ಆದ್ದರಿಂದ ಉದ್ರಿಕ್ತ ಜನಜಂಗುಳಿ ಕಾನೂನನ್ನು ಕೈಗೆತ್ತಿಕೊಂಡು ಮಸೀದಿ ಕೆಡವಿದ ಪ್ರಕರಣದ ಬಗ್ಗೆ ನ್ಯಾಯಾಲಯ ತನಿಖೆ ನಡೆಸಿ, ಮೊದಲು ತೀರ್ಪು ನೀಡಬೇಕಿದೆ. ವಿವಾದದ ಜಾಗದಲ್ಲಿ ಮಂದಿರ ನಿರ್ಮಿಸುವುದು ತಪ್ಪೋ, ಸರಿಯೋ ಎಂದು ಇತ್ಯರ್ಥವಾಗದೇ ಹಿಂದೂಗಳ ಭಾವನೆ ಗೌರವಿಸಬೇಕೆಂದು ಹೇಳುವುದು ಸಂಘ ಪರಿವಾರದ ರಾಜಕೀಯ ಹುನ್ನಾರವಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ಹೋರಾಟ ಮಾತ್ರವಲ್ಲ ದೇಶದ ದಮನಿತ ಸಮುದಾಯಗಳಿಗೆ, ಮಹಿಳೆಯರಿಗೆ ರಕ್ಷಾ ಕವಚವಾದ ಸಂವಿಧಾನ ಸುರಕ್ಷಿತವಾಗಿರಬೇಕೋ ಇಲ್ಲ ಅದು ನಾಶವಾಗಿ ಮತ್ತೆ ಹಿಂದುತ್ವದ ಸೋಗು ಹಾಕಿ ಮನುವಾದ ಈ ದೇಶವನ್ನು ನಾಶ ಮಾಡಬೇಕೋ ಎಂಬ ಪ್ರಶ್ನೆಗೆ ಈ ಚುನಾವಣೆಯಲ್ಲಿ ಉತ್ತರ ಕಂಡುಕೊಳ್ಳಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News