ಚಾಚಾ ನೆಹರೂ ಹೆಸರು ಅಳಿಸಿ ಹಾಕುವ ಹುನ್ನಾರ

Update: 2018-11-11 18:43 GMT

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಆಧುನಿಕ ಭಾರತದ ನಿರ್ಮಾಪಕ ಎಂದು ಕರೆಯುತ್ತೇವೆ. ಸ್ವಾತಂತ್ರಾ ನಂತರ ಈ ದೇಶ ಸಾಧಿಸಿದ ಪ್ರಗತಿಯಲ್ಲಿ ಅವರ ಕೊಡುಗೆ ತುಂಬಾ ಮಹತ್ತರವಾದದ್ದು. ನಮ್ಮ ಸಾರ್ವಜನಿಕ ರಂಗದ ಉದ್ಯಮಗಳು, ನೀರಾವರಿ ಯೋಜನೆಗಳು, ರಸ್ತೆ ರೈಲು ಸಂಪರ್ಕ, ವಿದ್ಯುತ್ ದೀಪ, ಶಿಕ್ಷಣ ಹೀಗೆ ಹಲವಾರು ರಂಗಗಳಲ್ಲಿ ಅವರು ದೂರದೃಷ್ಟಿಯಿಂದ ರೂಪಿಸಿದ ಯೋಜನೆಗಳು ಈ ದೇಶವನ್ನು ಮುನ್ನಡೆಸಿವೆ. ಯೋಜನಾ ಆಯೋಗದ ಮೂಲಕ ಕೈಗೊಂಡ ಪಂಚವಾರ್ಷಿಕ ಯೋಜನೆಗಳು ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿ ನಿರ್ಮಿಸಿದವು.

ಆದರೆ, ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಹಿಂದಿನ 7 ದಶಕಗಳ ಸಾಧನೆಯನ್ನು ಅಲ್ಲಗಳೆದು, ಮಹಾತ್ಮಾ ಗಾಂಧಿ ಮತ್ತು ನೆಹರೂ ಅವರ ತೇಜೋವಧೆ ಮಾಡುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ನೆಹರೂ ಸರಕಾರ ರೂಪಿಸಿದ ಯೋಜನಾ ಆಯೋಗವನ್ನು ರದ್ದುಗೊಳಿಸಿ, ನೀತಿ ಆಯೋಗವನ್ನು ಮಾಡಲಾಯಿತು. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗವನ್ನು ರದ್ದುಗೊಳಿಸಲಾಯಿತು. ಇದೀಗ ಉನ್ನತ ತನಿಖಾ ಸಂಸ್ಥೆ ಸಿಬಿಐಯನ್ನು ಹಳ್ಳ ಹಿಡಿಸಲಾಗಿದೆ. ನ್ಯಾಯಾಂಗದಲ್ಲೂ ಹಸ್ತಕ್ಷೇಪ ಮಾಡಲಾಗುತ್ತಿದೆ. ಸರಕಾರದ ವರ್ತನೆ ವಿರುದ್ಧ ರಿಸರ್ವ್ ಬ್ಯಾಂಕ್ ಗವರ್ನರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ ಮತ್ತು ನೆಹರೂ ಹೆಸರನ್ನು ಅಳಿಸಿ ಹಾಕುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ನಿತ್ಯವೂ ರಾಷ್ಟ್ರನಾಯಕರ ತೇಜೋವಧೆ ನಡೆಯುತ್ತಿದೆ. ಇದು ಸಾಲದು ಎಂಬಂತೆ ಮೋದಿ ಸರಕಾರ ದಿಲ್ಲಿಯಲ್ಲಿರುವ ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಗ್ರಂಥಾಲಯ (ತೀನ್‌ಮೂರ್ತಿ ಭವನ) ನಾಶ ಮಾಡಲು ಹೊರಟಿದೆ. ಅದರ ಸ್ವಾಯತ್ತೆಯಲ್ಲಿ ಕೈ ಹಾಕಿ ಬಿಜೆಪಿಯ ಬಾಲಬಡುಕರಾದ ಅರ್ನಬ್ ಗೋಸ್ವಾಮಿ, ಎಸ್.ಜಯಶಂಕರ್ ಹಾಗೂ ಸಂಘ ಪರಿವಾರ ಮೂಲಕ ಬಿಜೆಪಿ ಸಂಸದ ವಿನಯ್ ಸಹಸ್ರಬುದ್ದೆ ಹಾಗೂ ಲೇಖಕ ರಾಮ ಬಹದ್ದೂರ ರಾಯ ಅವರನ್ನು ತೀನ್‌ಮೂರ್ತಿ ಭವನದ ಆಡಳಿತ ಮಂಡಳಿಗೆ ನೇಮಕ ಮಾಡಲಾಗಿದೆ. ಈ ನೆಹರೂ ಸ್ಮಾರಕದ ಮೂಲ ಸ್ವರೂಪವನ್ನು ಬದಲಿಸಿ, ಅದನ್ನು ಎಲ್ಲಾ ಮಾಜಿ ಪ್ರಧಾನಿಗಳ ಪ್ರದರ್ಶನಾಲಯವಾಗಿ ಮಾಡುವ ಹುನ್ನಾರ ನಡೆದಿದೆ.

ನೆಹರೂ ಅವರು ಬದುಕಿದ್ದಾಗ, ಈ ತೀನ್‌ಮೂರ್ತಿ ಭವನದಲ್ಲೇ ವಾಸವಿದ್ದರು. ಅದನ್ನೀಗ, ಸ್ವಾತಂತ್ರ ಹೋರಾಟದ ಮ್ಯೂಸಿಯಂ ಮತ್ತು ಸಂಶೋಧನಾ ಕೇಂದ್ರವನ್ನಾಗಿ ಮಾಡಲಾಗಿದೆ. ದೇಶದ ಸ್ವಾತಂತ್ರ ಹೋರಾಟಕ್ಕೆ ಸಂಬಂಧಿಸಿದ ಅನೇಕ ದಾಖಲೆಗಳು ಅಲ್ಲಿ ಸಿಗುತ್ತವೆ. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸದ ಸಂಘ ಪರಿವಾರಕ್ಕೆ ಸೇರಿದ ನರೇಂದ್ರ ಮೋದಿಯವರಿಗೆ ಈ ಸ್ಮಾರಕ ಕಂಡರೆ ಆಗುತ್ತಿಲ್ಲ. ಇದರ ಮೂಲ ಸ್ವರೂಪ ನಾಶ ಮಾಡಲು ಅವರು ಸಂಚು ನಡೆಸಿದ್ದಾರೆ. ನೆಹರೂ ಭಾವಚಿತ್ರ ಇರುವಲ್ಲಿ ಸಂಘ ಪರಿವಾರದ ದೀನ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರ ತೂಗು ಹಾಕಲಾಗಿದೆ. ಇದನ್ನು ಪ್ರತಿಭಟಿಸಿ, ಆಡಳಿತ ಮಂಡಳಿಯಲ್ಲಿದ್ದ ಹೆಸರಾಂತ ಚಿಂತಕ ಪ್ರತಾಪಬಾನು ಮೆಹ್ತಾ ಮತ್ತು ನಿತಿನ್ ದೇಸಾಯಿ ರಾಜೀನಾಮೆ ನೀಡಿದ್ದಾರೆ. ನಾನು ದಿಲ್ಲಿಗೆ ಈವರೆಗೆ ನಾಲ್ಕು ಬಾರಿ ಹೋಗಿದ್ದೇನೆ. ಪ್ರತಿ ಬಾರಿ ಹೋದಾಗಲೂ ಗಾಂಧೀಜಿಯವರು ಗುಂಡಿಗೆ ಬಲಿಯಾದ ಬಿರ್ಲಾ ಭವನ ಮತ್ತು ನೆಹರೂ ಅವರು ತಂಗಿದ್ದ ತೀನ್‌ಮೂರ್ತಿ ಭವನಕ್ಕೆ ಹೋಗಿ, ಅಲ್ಲಿ ಗಂಟೆಗಟ್ಟಲೇ ಸಮಯ ಕಳೆದು ಬರುತ್ತೇನೆ. ತೀನ್‌ಮೂರ್ತಿ ಭವನದ ಒಳಗೆ ಹೋದರೆ, ಅದನ್ನೆಲ್ಲ ನೋಡಿ ಹೊರಬರಲು ಕನಿಷ್ಠ 5 ಗಂಟೆ ಬೇಕು. ಅಲ್ಲಿ ನೆಹರೂ ಅವರ ಗ್ರಂಥಾಲಯ ಮತ್ತು ವಸ್ತುಗಳಿಗಾಗಿ ಕೇವಲ ಮೂರು ಕೊಠಡಿಗಳು ಮಾತ್ರ. ಉಳಿದಿದ್ದೆಲ್ಲ, ಸ್ವಾತಂತ್ರ ಹೋರಾಟಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಸ್ವಾತಂತ್ರ ಹೋರಾಟ ನಡೆದಾಗ, ದೇಶದ ವಿವಿಧ ಭಾಷೆಗಳ ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಅಂದಿನ ಪತ್ರಿಕೆಗಳ ಸಹಿತ ಪ್ರದರ್ಶನಕ್ಕೆ ಇಡಲಾಗಿದೆ.

ಅಲ್ಲಿ 1939ನೇ ಇಸವಿಯ ಸಂಯುಕ್ತ ಕರ್ನಾಟಕ ಪತ್ರಿಕೆ ನೋಡಿದೆ. ಅದರಲ್ಲಿ ನಮ್ಮೂರು ಸಾವಳಗಿ ಪೊಲೀಸ್ ಠಾಣೆಗೆ ಸ್ವಾತಂತ್ರ ಹೋರಾಟಗಾರರು ಬೆಂಕಿ ಹಚ್ಚಿದ ಸುದ್ದಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಈ ತೀನ್ ಮೂರ್ತಿ ಭವನವನ್ನು ಬಹಳ ಇಷ್ಟಪಡುತ್ತಿದ್ದರು. ಆದರೆ, ಈಗ ಅಧಿಕಾರದಲ್ಲಿರುವ ಅವಿದ್ಯಾವಂತ ಸಂಸ್ಕೃತಿಹೀನ ಮನುಷ್ಯನಿಗೆ ಇದರ ಪ್ರಾಮಾಣಿಕತೆ ಗೊತ್ತಿಲ್ಲ. ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರ ಮತ್ತು ಅಂಬಾನಿ, ಅದಾನಿಗಳು ಹೇಳಿದಂತೆ ಕುಣಿಯುವ ಈ ವ್ಯಕ್ತಿ ತೀನ್‌ಮೂರ್ತಿ ಭವನಕ್ಕೆ ಅಪಾಯವನ್ನು ತಂದೊಡಿದ್ದಾರೆ.

ತಮ್ಮದೇ ಪಕ್ಷದ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯವರಿಂದಾದರೂ ಸಹ ಇವರು ಸಭ್ಯತೆಯ ಪಾಠ ಕಲಿಯಬೇಕಿತ್ತು. ವಾಜಪೇಯಿಯವರು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ, ಅವರ ಅಧಿಕೃತ ಕೊಠಡಿಯಲ್ಲಿದ್ದ ನೆಹರೂ ಅವರ ಫೋಟೊವನ್ನು ಅವರ ಸಿಬ್ಬಂದಿ ತೆಗೆದು ಹಾಕಿದ್ದರು. ಇದರಿಂದ ಕೆರಳಿ, ಕೆಂಡವಾದ ವಾಜಪೇಯಿ ಅವರನ್ನು ತರಾಟೆಗೆ ತೆಗೆದುಕೊಂಡು ನೆಹರೂ ಅವರ ಫೋಟೊ ತರಿಸಿ, ತಾವು ಕೂಡುವ ಕುರ್ಚಿಯ ಮೇಲ್ಭಾಗದಲ್ಲಿ ಹಾಕಿದರು. ಆದರೆ ಈಗ ಅಧಿಕಾರದಲ್ಲಿ ಇರುವವರಿಗೆ ಆ ಸಂಸ್ಕೃತಿ ಇಲ್ಲ. ಇವರು ನೆಹರೂ ಅವರನ್ನು ದ್ವೇಷಿಸಲು ಕಾರಣ: ಸ್ವಾತಂತ್ರಾ ನಂತರ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟ ಕೋಮುವಾದಿ ಶಕ್ತಿಗಳ ಹುನ್ನಾರವನ್ನು ನೆಹರೂ ವಿರೋಧಿಸಿದರು. ಭಾರತದಲ್ಲಿ ಫ್ಯಾಶಿಸಂ ಬಂದರೆ, ಅದು ಹಿಂದೂ ಕೋಮುವಾದಿ ಮೂಲಕ ಬರುವುದೆಂದು ನೆಹರೂ ಸ್ಪಷ್ಟವಾಗಿ ಹೇಳುತ್ತಿದ್ದರು. ನೆಹರೂ ಅವರನ್ನು ದ್ವೇಷಿಸುವ ವ್ಯಕ್ತಿ-ಶಕ್ತಿಗಳು ಮುಖ್ಯವಾಗಿ ಬಲಪಂಥೀಯ ವಲಯದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರ ಸೈದ್ಧಾಂತಿಕ ಹಿನ್ನ್ನೆಲೆ ಹೊಂದಿದವರು ನೆಹರೂಗಿಂತ ಪಟೇಲರಿಗೆ ಹೆಚ್ಚು ಇಷ್ಟಪಡುತ್ತಾರೆ. ಇವೆರಡಕ್ಕೂ ಸಂಬಂಧಪಡದ ಅರೆಬರೆ ತಿಳಿವಳಿಕೆ ಹೊಂದಿದವರು ಕೂಡ ಇಂಥದ್ದೇ ಮಾತನ್ನು ಆಡುತ್ತಾರೆ.ಆವರಣ ಕುಖ್ಯಾತಿಯ ಎಸ್.ಎಲ್.ಭೈರಪ್ಪ ಅವರು ಜವಾಹರಲಾಲ್ ನೆಹರೂ ಅವರನ್ನು ತೇಜೋವಧೆ ಮಾಡಿ, ಧಾರಾವಾಹಿ ಬರೆಯುತ್ತಲೇ ಇದ್ದಾರೆ. ರಶ್ಯದ ಕಮ್ಯುನಿಸ್ಟ್ ಮಾದರಿಯನ್ನು ಅನುಸರಿಸಿದ್ದೇ ದೇಶದ ದುರಂತಕ್ಕೆ ಕಾರಣ. ಖಾಸಗಿ ರಂಗವನ್ನು ಸೊರಗಿಸಿ, ಸರಕಾರಿ ರಂಗವನ್ನು ಅವರು ಬೆಳೆಸಿದರು. ಅದಕ್ಕಾಗಿ ಭಾರತ ಇಂದು ದುರವಸ್ಥೆಗೀಡಾಗಿದೆ ಎಂದು ವಾದಿಸುತ್ತಾರೆ.

ನೆಹರೂ ಅವರ ಬಗ್ಗೆ ನಾವು ಚಿಕ್ಕಂದಿನಲ್ಲಿದ್ದಾಗ ಜನಜನಿತವಾದ ಹಲವಾರು ಮಾತುಗಳನ್ನು ಕೇಳುತ್ತಿದ್ದೆವು. ನೆಹರೂ ಭಾರಿ ಸಿರಿವಂತರ ಮನೆಯಲ್ಲಿ ಹುಟ್ಟಿದವರು. ಅವರ ಬಟ್ಟೆಗಳು ಇಂಗ್ಲೆಂಡ್‌ನಿಂದ ಇಸ್ತ್ರಿಯಾಗಿ ಬರುತ್ತವೆ. ಕ್ಷೌರ ಮಾಡಿಸಿಕೊಳ್ಳಲು ಅವರು ಅಮೆರಿಕೆಗೆ ಹೋಗುತ್ತಾರೆ ಎಂದೆಲ್ಲ ಜನ ಆಡುತ್ತಿದ್ದರು. ಅದೇ ರೀತಿ ನೆಹರೂ ಕುಟುಂಬದ ತ್ಯಾಗದ ಬಗೆಗೂ ಅನೇಕ ಹಿರಿಯರು ಹೇಳುತ್ತಿದ್ದರು. ಅಲಹಾಬಾದಿನ ತಮ್ಮ ಅರಮನೆಯನ್ನು ಮೋತಿಲಾಲ್ ನೆಹರೂ ದೇಶಕ್ಕೆ ನೀಡಿದರು ಎಂದು ಕೇಳುತ್ತಿದ್ದೆವು. ದೊಡ್ಡವರಾಗುತ್ತ ಬಂದಂತೆ ನೆಹರೂ ಅವರ ವರ್ಣರಂಜಿತ ಜೀವನದ ಬಗ್ಗೆ ನಾನಾ ಕಥೆಗಳನ್ನು ಪತ್ರಿಕೆಗಳಲ್ಲಿ ಓದತೊಡಗಿದೆವು. ಲೇಡಿ ವೌಂಟ್‌ಬೆಟನ್ ಮತ್ತು ನೆಹರೂ ಸಂಬಂಧದ ಬಗ್ಗೆ ರಸವತ್ತಾಗಿ ಬರೆದು ಪ್ರಕಟಿಸುವ ಪತ್ರಿಕೆಗಳು ಇವತ್ತಿಗೂ ಇವೆ. ಸಾಮಾಜಿಕ ಜಾಲತಾಣದಲ್ಲೂ ನೆಹರೂ ಕುರಿತು ತೇಜೋವಧೆ ನಡೆದಿದೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಸುತ್ತ ಇಂಥ ಕತೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಸಾವರ್ಕರ್ ಮತ್ತು ನಾಥೂರಾಮ್ ಗೋಡ್ಸೆ ನಡುವೆ ಅಸಹಜ ಸಂಬಂಧವಿತ್ತು ಎಂಬ ಕಥೆಯನ್ನು ಕೆಲವರು ಹೇಳುತ್ತಿದ್ದರು. ಯಾವುದೇ ವ್ಯಕ್ತಿಯ ಖಾಸಗಿ ಜೀವನದ ಬಗ್ಗೆ ಚರ್ಚಿಸುವುದು ಒಳ್ಳೆಯ ಅಭಿರುಚಿ ಅನ್ನಿಸುವುದಿಲ್ಲ.

ಇವೆಲ್ಲ ನಿಜವೇ ಇರಬಹುದು. ಇಲ್ಲದಿರಬಹುದು. ಆದರೆ ಭಾರತದ ಪ್ರಧಾನಿಯಾಗಿ ನೆಹರೂ ಅವರು ದೇಶಕ್ಕೆ ನೀಡಿದ ಕೊಡುಗೆ ಏನು? ಅವರ ನಿಲುವುಗಳು ಕಾಲದ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆಯೇ? ವಿರೋಧಿಗಳೆಲ್ಲ ಬಿಂಬಿಸುವಷ್ಟು ಅವರು ಕೆಟ್ಟವರೇ? ಈ ಬಗ್ಗೆ ಯೋಚಿಸಿದಾಗ, ಅವರನ್ನು ದ್ವೇಷಿಸುವ ಆಸಕ್ತ ವಲಯಗಳಿಗಿಂತ ಅವರನ್ನು ಇಷ್ಟಪಡುವ ಕೋಟ್ಯಂತರ ಭಾರತೀಯರು ಆಗಲೂ ಇದ್ದರು. ಈಗಲೂ ಇದ್ದಾರೆ. ಅವರ ಅಭಿಮಾನಿಗಳಲ್ಲಿ ಜಾತಿ-ಮತಗಳ ಭೇದವಿಲ್ಲ. ರಾಜಕಾರಣಿಗಳಲ್ಲಿ ಅಪರೂಪವಾದ ಚಿಂತನಶೀಲತೆ ನೆಹರೂ ಅವರಿಗೆ ಇತ್ತು. ಇಲ್ಲದಿದ್ದರೆ, ಜೈಲಿನಲ್ಲೇ ಕೂತುಕೊಂಡು ದಿ ಡಿಸ್ಕವರಿ ಆಫ್ ಇಂಡಿಯಾ ಮತ್ತು ಜಗತ್ತಿನ ಚರಿತ್ರೆಯನ್ನು ರಚಿಸಲು ಸಾಧ್ಯವಾಗುತ್ತಿರಲಿಲ್ಲ. ಮಗಳು ಇಂದಿರೆಗೆ ಅವರು ಬರೆದ ಪತ್ರಗಳು ಮನುಕುಲದ ಹೆಜ್ಜೆ ಗುರುತುಗಳನ್ನು ದಾಖಲಿಸುತ್ತವೆ. ನೆಹರೂ ಮತ್ತು ಅಂಬೇಡ್ಕರ್ ಇವರಿಬ್ಬರೂ ಇರದಿದ್ದರೆ, ಈ ದೇಶ ಜಾತ್ಯತೀತ ರಾಷ್ಟ್ರವಾಗಿ ಉಳಿಯುತ್ತಿತ್ತೆ? ಬಾಪೂಜಿಯವರನ್ನು ಕೊಂದ ಫ್ಯಾಶಿಸ್ಟ್ ಶಕ್ತಿಗಳು ಭಾರತವನ್ನು ಸುರಕ್ಷಿತವಾಗಿಡಲು ಬಿಡುತ್ತಿದ್ದವೇ ಎಂಬ ಪ್ರಶ್ನೆ ಪದೇ ಪದೇ ಕೆಣಕುತ್ತಲೇ ಇರುತ್ತದೆ.

ನೆಹರೂ ಅವರ ಬಗ್ಗೆ ಬಲಪಂಥೀಯ ಶಕ್ತಿಗಳಿಗೆ ಇರುವುದು ವೈಯಕ್ತಿಕ ದ್ವೇಷವಲ್ಲ. ಅದು ಸೈದ್ಧಾಂತಿಕ ಹಗೆತನ. ನೆಹರೂ ಪ್ರಖರ ವೈಚಾರಿಕ ದೃಷ್ಟಿಕೋನವನ್ನು ಹೊಂದಿದ್ದರು. ಮೂಢನಂಬಿಕೆ, ಕಂದಾಚಾರಗಳನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದರು. ಯಾವುದೇ ದೇವಾಲಯಗಳಿಗೆ ದರ್ಶನ ಕೊಡುತ್ತಿರಲಿಲ್ಲ. ಜಾತ್ಯತೀತಕ್ಕೆೆ ಅವರ ಬದ್ಧತೆಗೆ ಅಚಲವಾಗಿತ್ತು. ಕಾರ್ಲ್ ಮಾರ್ಕ್ಸರ ಚಾರಿತ್ರಿಕ ಭೌತಿಕವಾದದ ಬೆಳಕಿನಲ್ಲಿ ಜಗತ್ತಿನ ಮತ್ತು ಭಾರತದ ಅಧ್ಯಯನವನ್ನು ಅವರು ಕೈಗೊಂಡಿದ್ದರು. ಅಂತಲೇ ಅವರು ಭಾರತದ ಮೂಲನಿವಾಸಿಗಳು ಯಾರು? ಹೊರಗಿನಿಂದ ಬಂದವರು ಯಾರು? ಬೌದ್ಧ ಧರ್ಮ ಈ ದೇಶಕ್ಕೆ ನೀಡಿದ ಕೊಡುಗೆ ಏನು ಎಂಬುದರ ಬಗ್ಗೆ ತಮ್ಮ ಕೃತಿಗಳಲ್ಲಿ ವೈಜ್ಞಾನಿಕ ವಿಶ್ಲೇಷನೆ ಮಾಡಿದ್ದಾರೆ. ದೇವರನ್ನು ನಂಬದ ನೆಹರೂ, ಗಾಂಧೀಜಿಯವರನ್ನು ಮಾತ್ರ ದೇವರ ಸಮಾನ ಎಂದು ಗೌರವಿಸುತ್ತಿದ್ದರು. ಗಾಂಧೀಜಿಯೂ ಈ ನಾಸ್ತಿಕ ಶಿಷ್ಯನನ್ನು ಇಷ್ಟಪಡುತ್ತಿದ್ದರು. ಇವರಿಬ್ಬರನ್ನು ಬೆಸೆದ ಕೊಂಡಿ ಮನುಷ್ಯತ್ವದ ಬಗೆಗಿನ ಕಾಳಜಿ.

ಈ ದೇಶದ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಡೆದ ಸ್ವಾತಂತ್ರ ಹೋರಾಟದಲ್ಲಿ ನೆಹರೂ ಗಾಂಧೀಜಿಯ ಬಲಗೈಯಂತೆ ಕೆಲಸ ಮಾಡಿದರು.
ಗಾಂಧಿ ಮಾರ್ಗ ಒಪ್ಪದ ಸುಭಾಷ್‌ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ತಮ್ಮದೇ ದಾರಿಯಲ್ಲಿ ಸಾಗಿದರು. ಆದರೆ ಇಡೀ ಹೋರಾಟದಲ್ಲಿ ಎಂದೂ ಪಾಲ್ಗೊಳ್ಳದೇ ನಿರಂತರ ದ್ರೋಹವೆಸಗುತ್ತ ಬಂದ ಸಂಘಟನೆ ಆರೆಸ್ಸೆಸ್ ಹೆಡಗೇವಾರ್ ಮತ್ತು ಗೋಳ್ವಾಲ್ಕರ್‌ರು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಎಂದಿಗೂ ಮಾತನಾಡಲಿಲ್ಲ. ಸ್ವಾತಂತ್ರಕ್ಕಿಂತ ಶ್ರೇಣೀಕೃತವಾದ ಹಿಂದೂರಾಷ್ಟ್ರ ಸ್ಥಾಪನೆ ಅವರ ಆಸಕ್ತಿಯ ವಿಷಯವಾಗಿತ್ತು. ಅಂತಲೇ ನೆಹರೂ ಅವರನ್ನು ವಿರೋಧಿಸುತ್ತಲೇ ಬಂದರು.

ದೇಶಕ್ಕೆ ಸ್ವಾತಂತ್ರ ಬಂದಾಗ, ಭಾರತದ ಪ್ರಧಾನಿ ಯಾರು ಆಗಬೇಕು ಎಂಬ ಪ್ರಶ್ನೆ ಉದ್ಭವಿಸಿತು. ಜಿನ್ನಾ ಪ್ರತ್ಯೇಕಗೊಂಡ ನಂತರ ನೆಹರೂ ಮತ್ತು ಪಟೇಲ್‌ರಲ್ಲಿ ಪೈಪೋಟಿ ಆರಂಭವಾಯಿತು. ಆಗ ಗಾಂಧೀಜಿ ಯಾರ ಹೆಸರನ್ನು ಸೂಚಿಸುತ್ತಾರೋ ಅವರೇ ಪ್ರಧಾನಿ ಆಗಬೇಕು ಎಂದು ಒಮ್ಮತಕ್ಕೆ ಬರಲಾಯಿತು. ಗುಡಿ-ಗುಂಡಾರಗಳಿಗೆ ಹೋಗುತ್ತಿದ್ದ ಧಾರ್ಮಿಕ ಮನೋಭಾವದ ಪಟೇಲರು ಗಾಂಧೀಜಿಗೆ ಹತ್ತಿರದವರಾಗಿದ್ದರು. ಅವರ ಹೆಸರನ್ನೇ ಗಾಂಧಿ ಸೂಚಿಸುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ವೈಚಾರಿಕವಾಗಿ ತನ್ನ ನಿಲುವುಗಳನ್ನು ವಿರೋಧಿಸುತ್ತ ಬಂದ ನೆಹರೂ ಅವರ ಹೆಸರನ್ನು ಬಾಪೂಜಿ ಸೂಚಿಸಿದರು. ಭಾರತದಂತಹ ಬಹುಧರ್ಮೀಯ, ಬಹುಭಾಷಿಕ, ವೈವಿಧ್ಯಮಯ ದೇಶಕ್ಕೆ ಆಧುನಿಕ ಮನೋಧರ್ಮದ ನೆಹರೂ ಅವರಂತಹ ಜಾತ್ಯತೀತವಾದಿಯೇ ಸೂಕ್ತ ಪ್ರಧಾನಿ ಎಂಬುದು ಗಾಂಧೀಜಿಯ ನಿಲುವಾಗಿತ್ತು.

ನೆಹರೂ ಸಮಾಜವಾದ ಬಗ್ಗೆ ಹೇಳುತ್ತಿದ್ದರೂ ಅವರನ್ನು ಸಮ್ಮಿಶ್ರ ಸಮಾಜವಾದ ಎಂದು ಕಮ್ಯುನಿಸ್ಟರು ಛೇಡಿಸುತ್ತಿದ್ದರು. ಆದರೆ ಪಟೇಲ್ ಮತ್ತು ನೆಹರೂ ಆಯ್ಕೆಯ ಪ್ರಶ್ನೆ ಬಂದಾಗ, ಅವರ ಆಯ್ಕೆ ನೆಹರೂ ಆಗಿದ್ದರು. ದೇಶಕ್ಕೆ ಸ್ವಾತಂತ್ರ ದೊರೆತ ನಂತರ ಈ ದೇಶದ ಆರ್ಥಿಕ ನೀತಿ ಹೇಗಿರಬೇಕು ಎಂಬ ಬಗ್ಗೆ ನೆಹರೂಗೆ ಖಚಿತ ನಿಲುವು ಇತ್ತು. ಸಂಪೂರ್ಣ ರಾಷ್ಟ್ರೀಕರಣ ಮಾಡಲು ಸಾಧ್ಯವಿರಲಿಲ್ಲ. ಆದರೆ ಖಾಸಗಿ ವಲಯಕ್ಕೆ ಪರ್ಯಾಯವಾಗಿ ಸಾರ್ವಜನಿಕ ಉದ್ಯಮರಂಗವನ್ನು ಬೆಳೆಸುವಲ್ಲಿ ಬೃಹತ್ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾರ್ಖಾನೆಗಳು ಆಧುನಿಕ ದೇವಾಲಯಗಳು ಎಂದು ಕರೆದರು. ಅದಕ್ಕಿಂತ ಮುಖ್ಯವಾಗಿ ಭಾರತಕ್ಕೆ ಅತ್ಯಂತ ಸೂಕ್ತವಾದ ಸ್ವತಂತ್ರ ವಿದೇಶಾಂಗ ನೀತಿಯನ್ನು ರೂಪಿಸಿದ ಶ್ರೇಯಸ್ಸು ನೆಹರೂ ಅವರಿಗೆ ಸಲ್ಲುತ್ತದೆ. ಈಜಿಪ್ಟ್‌ನ ನಾಸಿರ್ ಮತ್ತು ಯುಗೋಸ್ಲಾವಿಯಾದ ಟಿಟೋ ಜೊತೆ ಸೇರಿ ಅಲಿಪ್ತ ಚಳವಳಿಯನ್ನು ನೆಹರೂ ಕಟ್ಟಿ ಬೆಳೆಸಿದರು.

ಇಂಥ ನೆಹರೂ ಅವರನ್ನು ಬಲಪಂಥೀಯ ಕೋಮುವಾದಿ ಶಕ್ತಿಗಳು ದ್ವೇಷಿಸುವುದು ಅಶ್ಚರ್ಯಕರವೇನಲ್ಲ. ಭೈರಪ್ಪನಂತಹವರು ಮಾತ್ರವಲ್ಲ ಪ್ರಧಾನಿ ಮೋದಿ ಕೂಡ ನೆಹರೂ ಅವರನ್ನು ಇಂದಿಗೂ ದ್ವೇಷಿಸುತ್ತಾರೆ ಎಂದರೆ, ನೆಹರೂ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡಿದ್ದಾರೆ ಎಂದೇ ಅರ್ಥ. ಈ ದೇಶದ ಸೌಹಾರ್ದ ಪರಂಪರೆಗೆ ನೆಹರೂ ನೀಡಿದ ಕೊಡುಗೆ ಸಾಮಾನ್ಯವಾದುದಲ್ಲ.

 ಭಾರತದ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸದವರು ರಾಷ್ಟ್ರನಾಯಕರಲ್ಲೇ ನೆಹರೂ ವಿರುದ್ಧ ಪಟೇಲ್‌ರನ್ನು, ಗಾಂಧಿ ವಿರುದ್ಧ ಸುಭಾಷ್‌ರನ್ನು ಎತ್ತಿ ಕಟ್ಟುವ ಹುನ್ನಾರ ನಡೆಸಿದ್ದಾರೆ. ಆದರೆ, ಗಾಂಧಿ ಹತ್ಯೆ ನಂತರ, ಗೃಹಸಚಿವರಾಗಿದ್ದ ಪಟೇಲರು ಆರೆಸ್ಸೆಸ್‌ನ್ನು ಏಕೆ ನಿಷೇಧಿಸಿದರು ಎಂಬ ಪ್ರಶ್ನೆಗೆ ಉತ್ತರ ಬೇಕು. ನಿಷೇಧ ಹಿಂದೆಗೆದುಕೊಳ್ಳಲು ಆರೆಸ್ಸೆಸ್‌ನ ಸರಸಂಘಚಾಲಕ ಗೃಹಸಚಿವರಿಗೆ ಯಾವ ಪ್ರಮಾಣಪತ್ರ ಬರೆದುಕೊಟ್ಟರು ಎಂಬುದು ಗೃಹ ಸಚಿವಾಲಯದಲ್ಲಿ ಇಂದಿಗೂ ದಾಖಲೆ ಇದೆ. ಸುಭಾಷಚಂದ್ರ ಬೋಸ್ ಆಝಾದ್ ಹಿಂದ್ ಸೇನೆ ಕಟ್ಟಲು ಹೊರಟಾಗ ಸಾವರ್ಕರ್, ಸುಭಾಷ್‌ಗೆ ಮಾಡಿದ ದ್ರೋಹ ಬಯಲಿಗೆ ಬಂದಿದೆ. ನಮ್ಮ ಯುವಜನರಿಗೆ ಇದನ್ನೆಲ್ಲ ತಿಳಿಸಿ ಹೇಳುವ ಕೆಲಸ ಆಗಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News