ಇದು ಎರಡು ಸಂವಿಧಾನಗಳ ನಡುವಿನ ಸಂಘರ್ಷ

Update: 2018-11-18 18:45 GMT

ಮಹಿಳೆಯರ ದೇವಾಲಯ ಪ್ರವೇಶವನ್ನು ವಿಶ್ವ ಹಿಂದೂ ಪರಿಷತ್ ಮಾತ್ರ ವಿರೋಧಿಸಿದ್ದರೆ ತಲೆ ಕೆಡಿಸಿಕೊಳ್ಳಬೇಕಿರಲಿಲ್ಲ. ಆದರೆ, ಸಂವಿಧಾನಕ್ಕೆ ನಿಷ್ಠೆ ಹೊಂದಿರುವುದಾಗಿ ಹೇಳಿ ಸಂವಿಧಾನ ನೀಡುವ ಎಲ್ಲಾ ಅಧಿಕಾರ, ಸ್ಥಾನಮಾನವನ್ನು ಅನುಭವಿಸುತ್ತ ಅದೇ ಸಂವಿಧಾನದಡಿ ಅಸ್ತಿತ್ವದಲ್ಲಿರುವ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಜನರನ್ನು ಪ್ರಚೋದಿಸುತ್ತಿರುವುದು ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷ.


ಕೇರಳದಲ್ಲಿ ಶಬರಿಮಲೆ ಅಯ್ಯಪ್ಪನ ಹೆಸರಿನಲ್ಲಿ ನಡೆಯುತ್ತಿರುವುದೇನು? ಮಾಧ್ಯಮದ ಲಘುವಾದ ವ್ಯಾಖ್ಯಾನದ ಪ್ರಕಾರ, ಇದು ಬಿಜೆಪಿ ಮತ್ತು ಕೇರಳದ ಸಿಪಿಎಂ ನೇತೃತ್ವದ ಎಡ ರಂಗ ಸರಕಾರದ ನಡುವಿನ ಜಿದ್ದಾಜಿದ್ದಿನ ಕಾದಾಟ. ಆದರೆ, ವಾಸ್ತವ ಸಂಗತಿ ಇದಷ್ಟೇ ಆಗಿಲ್ಲ. ಕೇರಳದಲ್ಲಿ ಮಾತ್ರವಲ್ಲ ಈ ದೇಶದಲ್ಲಿ ಈಗ ನಡೆಯುತ್ತಿರುವುದು ಬರೀ ಪಕ್ಷಗಳ ನಡುವಿನ ಕಾದಾಟವಲ್ಲ. ಇದು ಎರಡು ಸಂವಿಧಾನಗಳ ನಡುವಿನ ಸಂಘರ್ಷ. ಒಂದು ಸಂವಿಧಾನವೆಂದರೆ, ಅದು ಭಾರತದ ಜನತೆ ಒಪ್ಪಿಕೊಂಡ ಡಾ. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ. ಇನ್ನೊಂದು ಸಂವಿಧಾನವೆಂದರೆ, ಮನುಷ್ಯರಲ್ಲಿ ಮೇಲುಕೀಳನ್ನು ಸೃಷ್ಟಿಸಿದ ಮನುವಾದಿಗಳ ಸಂವಿಧಾನ.

ಕೇರಳವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಸರಳವಾಗಿ ಹೇಳಬೇಕೆಂದರೆ, ಶಬರಿಮಲೆ ಅಯ್ಯಪ್ಪನ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅಂಬೇಡ್ಕರ್ ಅವರ ಸಂವಿಧಾನ ಆಧರಿಸಿದ ತೀರ್ಪು. ಈ ತೀರ್ಪನ್ನು ಜಾರಿಗೆ ತರುವ ಸಾಂವಿಧಾನಿಕ ಕರ್ತವ್ಯವನ್ನು ಕೇರಳದ ಎಡ ರಂಗ ಸರಕಾರ ನಿರ್ವಹಿಸುತ್ತಿದೆ. ಆದರೆ, ಮಹಿಳೆಯರ ದೇವಾಲಯ ಪ್ರವೇಶವನ್ನು ಮನುವಾದಿಗಳ ಸಂವಿಧಾನ ಒಪ್ಪುವುದಿಲ್ಲ. ಹಿಂದೂಗಳ ಭಾವನೆಯನ್ನು ಗೌರವಿಸಬೇಕೆಂದು ಹೇಳಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಸದ ಬುಟ್ಟಿಗೆ ಹಾಕಲು ಅದು ಒತ್ತಾಯಿಸುತ್ತಿದೆ. ಸಂಘ ಪರಿವಾರ ಈ ಮನುವಾದಿ ಸಂವಿಧಾನವನ್ನು ಜಾರಿಗೆ ತರಲು ಬೀದಿ ಕಾಳಗಕ್ಕೆ ಇಳಿದಿದೆ. ಅಮಾಯಕ ಜನರನ್ನು ಬೀದಿಗೆ ತಂದು, ಅಶಾಂತಿಯ ವಾತಾವರಣ ನಿರ್ಮಿಸಿ ಪೊಲೀಸರು ಗೋಲಿಬಾರ್ ಮಾಡುವಂತಹ ವಾತಾವರಣ ನಿರ್ಮಿಸುತ್ತಿದೆ. ಆದರೆ, ಪಿಣರಾಯಿ ಸರಕಾರ ಅಲ್ಲಿ ಎಚ್ಚರದ ಹೆಜ್ಜೆ ಇಡುತ್ತಿದೆ.

ದೇಶಕ್ಕೆ ಸ್ವಾತಂತ್ರ ಬಂದ ನಂತರ ಅನುಷ್ಠಾನಕ್ಕೆ ಬಂದ ಅಂಬೇಡ್ಕರ್ ಸಂವಿಧಾನ ಎಲ್ಲರಿಗೂ ಸಕಲ ಅವಕಾಶ ನೀಡುತ್ತಿದೆ. ಈ ಸಂವಿಧಾನದ ಬಲದಿಂದ ಕೇರಳದ ಮುಖ್ಯಮಂತ್ರಿ ಕಮ್ಯುನಿಸ್ಟ್ ಪಕ್ಷದ ಪಿಣರಾಯಿ ವಿಜಯನ್ ಅಧಿಕಾರದಲ್ಲಿ ಇದ್ದಾರೆ. ಪ್ರಧಾನಿ ಮೋದಿ ಕೂಡ ಇದೇ ಸಂವಿಧಾನ ಬಲದಿಂದ ಅಧಿಕಾರ ಅನುಭವಿಸುತ್ತಿದ್ದಾರೆ. ಆದರೆ, ಅವರು ಸಂವಿಧಾನವನ್ನು ಬದಲಿಸಿ ಮನುವಾದಿ ಸಂವಿಧಾನವನ್ನು ತರಲು ಹೊರಟಿದ್ದಾರೆ. ಮನುವಾದಿ ಸಂವಿಧಾನದ ಪ್ರಕಾರ, ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಅವರವರಿಗೆ ಅವರವರ ಕರ್ತವ್ಯ ನೊಗವನ್ನು ಹೇರಲಾಗಿದೆ. ಆದರೆ, ಅಂಬೇಡ್ಕರ್ ಸಂವಿಧಾನ ಈ ಶ್ರೇಣೀಕೃತ ವ್ಯವಸ್ಥೆಯನ್ನು ಮೂಲೆಗುಂಪು ಮಾಡಿ, ಕತ್ತಲ ಲೋಕದಲ್ಲಿದ್ದ ಜನರಿಗೆ ಬೆಳಕನ್ನು ನೀಡಿದೆ.

ಹಿಂದುಳಿದ ಈಳವ (ಈಡಿಗ) ಸಮುದಾಯದ ಕಮ್ಯುನಿಸ್ಟ್ ನಾಯಕ ಪಿಣರಾಯಿ ವಿಜಯನ್ ಅವರು ಅಧಿಕಾರದಲ್ಲಿ ಇರುವುದು ಸಂಘ ಪರಿವಾರಕ್ಕೆ ಇಷ್ಟವಿಲ್ಲ. ದಕ್ಷಿಣ ಭಾರತದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಉತ್ತರ ಭಾರತದ ಅಯೋಧ್ಯೆಯಂತೆ ದಕ್ಷಿಣದಲ್ಲೂ ಶಬರಿಮಲೆ ವಿವಾದವನ್ನು ಬಿಜೆಪಿ ಸೃಷ್ಟಿ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಜನರನ್ನು ಪ್ರಚೋದಿಸುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಲು ಬಹಿರಂಗವಾಗಿ ಕರೆ ಕೊಡುತ್ತಿದ್ದಾರೆ. ಮಹಿಳೆಯರ ದೇವಾಲಯ ಪ್ರವೇಶವನ್ನು ವಿಶ್ವ ಹಿಂದೂ ಪರಿಷತ್ ಮಾತ್ರ ವಿರೋಧಿಸಿದ್ದರೆ ತಲೆ ಕೆಡಿಸಿಕೊಳ್ಳಬೇಕಿರಲಿಲ್ಲ. ಆದರೆ, ಸಂವಿಧಾನಕ್ಕೆ ನಿಷ್ಠೆ ಹೊಂದಿರುವುದಾಗಿ ಹೇಳಿ ಸಂವಿಧಾನ ನೀಡುವ ಎಲ್ಲಾ ಅಧಿಕಾರ, ಸ್ಥಾನಮಾನವನ್ನು ಅನುಭವಿಸುತ್ತ ಅದೇ ಸಂವಿಧಾನದಡಿ ಅಸ್ತಿತ್ವದಲ್ಲಿರುವ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಜನರನ್ನು ಪ್ರಚೋದಿಸುತ್ತಿರುವುದು ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷ. ಈ ಪಕ್ಷಕ್ಕಾಗಲಿ, ಇದನ್ನು ನಿಯಂತ್ರಿಸುವ ಆರೆಸ್ಸೆಸ್‌ಗಾಗಲಿ ಈ ಸಂವಿಧಾನದ ಮೇಲೆ ನಿಷ್ಠೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಇಷ್ಟು ದಿನಗಳವರೆಗೆ ಸಂಘ ಪರಿವಾರ ಮುಸಲ್ಮಾನರು ಮತ್ತು ಕ್ರೈಸ್ತರ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ಉಂಟು ಮಾಡುತ್ತಿತ್ತು. ಆದರೆ, ಅದರ ಗುರಿ ಬರೀ ಅವರಷ್ಟೇ ಅಲ್ಲ, ಹಿಂದೂ ಧರ್ಮದಲ್ಲಿರುವ ಮಹಿಳೆಯರು ಮತ್ತು ಶೂದ್ರರು ಮನು ಧರ್ಮದ ಚೌಕಟ್ಟಿನಲ್ಲಿ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಬಯಸುತ್ತದೆ. ಕೇರಳದ ಶಬರಿಮಲೆ ವಿವಾದ ಇತರ ಧರ್ಮೀಯರ ಜೊತೆ ಅಲ್ಲ. ಇದು ಹಿಂದೂ ಧರ್ಮದ ಮಹಿಳೆಯರ ಜೊತೆಗೆ. ಕಾನೂನಿನ ಎದುರು ಎಲ್ಲರೂ ಸಮಾನರು ಎಂದು ನಾವು ಹೇಳಿದರೆ, ಸಂಘ ಪರಿವಾರ ಹಿಂದೂಗಳ ನಂಬಿಕೆ ಪ್ರಶ್ನೆ ಮುಂದೆ ಮಾಡಿ ಲಿಂಗ ತಾರತಮ್ಯ ಮುಂದುವರಿಸಲು ಯತ್ನಿಸುತ್ತಿದೆ.

ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಒಂದು ಲೇಖನದಲ್ಲಿ ಆರೆಸ್ಸೆಸ್ ಬಗ್ಗೆ ಬರೆಯುತ್ತ, ಮುಸಲ್ಮಾನರನ್ನು ಇಡಿಯಾಗಿ ಪಾಕಿಸ್ತಾನಕ್ಕೆ ಕಳುಹಿಸಿದ ನಂತರ ಆರೆಸ್ಸೆಸ್‌ಗೆ ಮಾಡಲು ಬೇರೆ ಕೆಲಸ ಇಲ್ಲ. ಆಗ ಅದು ಮನು ಧರ್ಮಶಾಸ್ತ್ರ ಜಾರಿಗೆ ತರಲು ಮುಂದಾಗುತ್ತದೆ. ಬ್ರಾಹ್ಮಣರ ಕಾಲನಿಯಲ್ಲಿ ಕುರುಬರು ಮತ್ತು ನಾಯಕರು ಮನೆ ಮಾಡಬಾರದೆಂದು ಕಟ್ಟುಪಾಡು ವಿಧಿಸುತ್ತದೆ ಎಂದು ಹೇಳಿದ್ದರು. ಈಗ ಅದು ಹೊರಟ ದಾರಿಯನ್ನು ನೋಡಿದರೆ, ತೇಜಸ್ವಿ ಮಾತು ನಿಜ ಅನ್ನಿಸುತ್ತದೆ.

135 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಕೋಮುವಾದಿ ಪಕ್ಷ ಅಧಿಕಾರ ಸೂತ್ರ ಹಿಡಿದರೂ ಕೂಡ ಅಂಬೇಡ್ಕರ್ ಅವರ ಸಂವಿಧಾನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ತಮ್ಮದೇ ಸಂವಿಧಾನ ಜಾರಿಗೆ ತರಲು ಯತ್ನಿಸುತ್ತದೆ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಗಳ ಭಾವನೆಗೆ ನೋವು ಆಗುವಂತಹ ತೀರ್ಪು ನೀಡಬಾರದು ಎಂದು ಕೇಂದ್ರ ಸಚಿವರೊಬ್ಬರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಕಟ್ಟಪ್ಪಣೆ ವಿಧಿಸುವಂತಹ ಸನ್ನಿವೇಶ ಈಗ ನಿರ್ಮಾಣವಾಗಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಈಗ ಅಸ್ತಿತ್ವದಲ್ಲಿರುವ ನಗರಗಳ ಹೆಸರುಗಳನ್ನು ಬದಲಾಯಿಸಲು ಮುಂದಾಗಿದೆ. ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಿಸಲಾಗಿದೆ. ಅದೇ ರೀತಿ ಪೈಝಾಬಾದ್, ಅಲಿಗಡ, ಅಜಂಗಡ ಮುಂತಾದ ಹೆಸರುಗಳನ್ನು ಬದಲಿಸಿ ಹಿಂದೂ ಹೆಸರುಗಳನ್ನು ಇಡಲು ತೀರ್ಮಾನಿಸಿದೆ. ಅಧಿಕಾರದಲ್ಲಿ ಇರುವವರು ಈ ರೀತಿಯ ಹುಚ್ಚು ಖಯಾಲಿಯಲ್ಲಿ ತೊಡಗಿದ್ದರೆ, ನಮ್ಮ ಜನಸಾಮಾನ್ಯರ ಬದುಕು ಅತ್ಯಂತ ದಾರುಣವಾಗುತ್ತದೆ. ವರ್ಷದಿಂದ ವರ್ಷಕ್ಕೆ ಬಡತನ ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಈಗ ಪಕೋಡ ಮಾರಿ ಹೊಟ್ಟೆ ಹೊರೆಯುವಂತೆ ಉಪದೇಶ ನೀಡುತ್ತಿದ್ದಾರೆ. ಕಾರ್ಪೊರೇಟ್ ಬಂಡವಾಳಗಾರರ ಮೂರು ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿ, ಬ್ಯಾಂಕುಗಳನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಇದರಿಂದ ರೋಸಿ ಹೋದ ರಿಸರ್ವ್ ಬ್ಯಾಂಕ್ ಗವರ್ನರ್ ಹಣಕಾಸು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೈಫಲ್ಯ ಮುಚ್ಚಿಕೊಂಡು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಂಘ ಪರಿವಾರ ಧಾರ್ಮಿಕ ವಿಷಯವನ್ನು ಕೆದಕಿ ಭಾರತೀಯರನ್ನು ಕೋಮು ಆಧಾರದಲ್ಲಿ ವಿಭಜಿಸಲು ಹೊರಟಿವೆ. ಒಂದು ದೇಶ ನಾಶವಾಗುವುದು ಇಂಥ ವಿಭಜನಕಾರಿ ಹುನ್ನಾರಗಳಿಂದ. ಪ್ರಚಲಿತ ದಿನಮಾನಗಳಲ್ಲಿ ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ದೇಶದ ಪ್ರಧಾನಿಗೆಯಾಗಲಿ, ಅವರ ಸರಕಾರಕ್ಕೆ ಆಗಲಿ, ಪಕ್ಷಕ್ಕೆ ಆಗಲಿ ಯಾವುದೇ ಕಾಳಜಿಯಿಲ್ಲ. ಪ್ರತಿ ನಿತ್ಯ ಆಹಾರದ ಹೆಸರಿನಲ್ಲಿ ವಿಷವನ್ನು ಸೇವಿಸುತ್ತಿದ್ದೇವೆ. ರಾಸಾಯನಿಕ ಬಳಸಿ ಬೆಳೆಯುವ ಕೃಷಿ ಉತ್ಪನ್ನಗಳಿಂದ ಆರೋಗ್ಯ ಹಾಳಾಗಿ ಹೋಗುತ್ತಿದೆ.

ವಿಶ್ವ ವ್ಯಾಪಿಯಾಗಿ ನಿಷೇಧಿಸಿದ ಕೀಟನಾಶಕಗಳನ್ನು ಭಾರತದಲ್ಲಿ ಧಾರಾಳವಾಗಿ ಬಳಸಲಾಗುತ್ತಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೇ ಎಲ್ಲರನ್ನೂ ಇದು ಬಾಧಿಸುತ್ತಿದೆ. ಹಿಂದೂ ರಾಷ್ಟ್ರ ಕಟ್ಟಲು ಹೊರಟವರಿಗೆ ಇದರ ಅರಿವಿಲ್ಲ. ವಿಶ್ವ ಸಂಸ್ಥೆ ವರದಿ ಪ್ರಕಾರ, ಅಮೆರಿಕ ಮತ್ತು ಯುರೋಪಿನ ದೇಶಗಳಲ್ಲಿ ತಿರಸ್ಕೃತವಾದ ಆಹಾರ ಸಾಮಗ್ರಿಗಳನ್ನು ತಯಾರಿಸುವ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ನಮ್ಮ ಈಗಿನ ಆಹಾರ ಪದ್ಧತಿಯಿಂದ ಜನಸಾಮಾನ್ಯರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ನಾವು ತಿನ್ನುತ್ತಿರುವ ಆಹಾರದಲ್ಲಿ ಗರಿಷ್ಠ ಪ್ರಮಾಣದ ಕೀಟನಾಶಕವಿದೆಯೆಂದು ಅಧಿಕೃತ ವರದಿಗಳು ಹೇಳುತ್ತವೆ. 2003ರಲ್ಲಿ ಕೋಕಕೋಲಾ ಮತ್ತು ಪೆಪ್ಸಿ ಕೋಲಾಗಳನ್ನು ಅಪಾಯಕಾರಿ ಪೇಯವೆಂದು ಸಂಸತ್ತಿನಲ್ಲಿ ನಿಷೇಧಿಸಿದ್ದರೂ ಅವುಗಳ ಮಾರಾಟ ಹೊರಗೆ ಧಾರಾಳವಾಗಿ ನಡೆದಿದೆ. ಆಹಾರದಲ್ಲಿ ವಿಷಕಾರಿ ಬಣ್ಣಗಳ ಬಳಕೆ ಮತ್ತು ಕಲಬೆರಕೆ ವ್ಯಾಪಕವಾಗಿದೆ. ಆದರೆ, ಇವುಗಳ ಮಾರಾಟ ನಿರಂತರವಾಗಿ ನಡೆದಿದೆ. ಇವುಗಳನ್ನು ಪತ್ತೆ ಮಾಡಿ ಹಿಡಿಯುವ ತಪಾಸಣಾ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಇದ್ದರೂ ಭ್ರಷ್ಟಾಚಾರ ಎಲ್ಲವನ್ನೂ ಮುಚ್ಚಿ ಹಾಕುತ್ತದೆ. ನಮ್ಮ ಪ್ರಧಾನ ಮಂತ್ರಿಗಳು ಮತ್ತು ಅವರಿಗೆ ಮಾರ್ಗದರ್ಶನ ನೀಡುವ ಸಂಘ ಪರಿವಾರ ಈ ಅಪಾಯಕಾರಿ ವಿಷಕಾರಿ ಆಹಾರದ ಬಗ್ಗೆ ಮಾತನಾಡುವುದಿಲ್ಲ. ಅಭಿವೃದ್ಧಿಯ ಅಟ್ಟಹಾಸದಲ್ಲಿ ಮನುಷ್ಯತ್ವ ಇಲ್ಲಿ ನಾಶವಾಗಿ ಹೋಗುತ್ತಿದೆ.

 ನಮ್ಮನ್ನು ಆಳುತ್ತಿರುವವರಿಗೆ ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಅವರ ಏಕೈಕ ಕಾರ್ಯ ಸೂಚಿ ಸರ್ವರಿಗೂ ಸಮಾನ ಅವಕಾಶ ನೀಡಿರುವ ಇಂದಿನ ಸಂವಿಧಾನವನ್ನು ನಾಶ ಮಾಡಿ, ಮನುವಾದ ಸಂವಿಧಾನವನ್ನು ದೇಶದ ಮೇಲೆ ಹೇರುವುದಾಗಿದೆ. ಅದಕ್ಕಾಗಿ ಮಹಿಳೆಯರ ದೇವಾಲಯ ಪ್ರವೇಶದಂತಹ ವಿಷಯವನ್ನು ವಿವಾದವನ್ನಾಗಿ ಮಾಡುತ್ತಿದ್ದಾರೆ. ಉತ್ತರ ಭಾರತದಂತೆ ದಕ್ಷಿಣ ಬಾರತದಲ್ಲಿ ನೆಲೆ ವಿಸ್ತರಿಸಿ ಅಧಿಕಾರ ಕೇಂದ್ರೀಕರಣ ಮಾಡಿಕೊಂಡ ನಂತರ ಸಂವಿಧಾನ ಬದಲಾವಣೆ ಇವರ ಗುರಿಯಾಗಿದೆ. ಸಂವಿಧಾನ ಬದಲಾದರೆ, ಮೀಸಲಾತಿ ಇರುವುದಿಲ್ಲ ಮತ್ತು ಸಮಾನತೆಯೂ ಇರುವುದಿಲ್ಲ. ಈ ಸಂವಿಧಾನದ ಚೌಕಟ್ಟಿನಲ್ಲಿ ಬಿಜೆಪಿ ತನ್ನ ಕಾರ್ಯಸೂಚಿ ಜಾರಿಗೆ ತರುತ್ತಿದೆ. ಮಧ್ಯಪ್ರದೇಶದಲ್ಲಿ ಶಾಲಾ ಪಠ್ಯಪುಸ್ತಕಗಳನ್ನು ಕೋಮುವಾದೀಕರಣ ಗೊಳಿಸಿರುವುದು ಮಾತ್ರವಲ್ಲದೇ ಸಚಿವ ಸಂಪುಟದಲ್ಲಿ ಐವರು ಸನ್ಯಾಸಿಗಳನ್ನು ಸೇರಿಸಿಕೊಂಡು ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಹೀಗೆ ಸಂವಿಧಾನವನ್ನು ದುರ್ಬಲಗೊಳಿಸುವ ಹುನ್ನಾರ ಅವ್ಯಾಹತವಾಗಿ ನಡೆದಿದೆ.

ಭಾರತದ ಸಂವಿಧಾನದಡಿಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕಾರ್ಯನಿರ್ವಹಿಸುತ್ತವೆ. ಇವುಗಳ ಕಾರ್ಯನಿರ್ವಹಣೆಗೆ ಅಡ್ಡಿ ಉಂಟು ಮಾಡುವುದು ರಾಷ್ಟ್ರದ್ರೋಹವಾಗುತ್ತದೆ. ಈಗ ದೇಶದಲ್ಲಿ ನಡೆದಿರುವುದು ಇಂಥ ದ್ರೋಹದ ಕೆಲಸ. ಇದು ಎರಡು ಸಂವಿಧಾನಗಳ ನಡುವಿನ ಸಂಘರ್ಷ. ಈ ಸಂಘರ್ಷದಲ್ಲಿ ಈಗಿರುವ ಸಂವಿಧಾನ ಹಿನ್ನಡೆ ಅನುಭವಿಸಿದರೆ ಭಾರತದಲ್ಲಿ ಮತ್ತೆ ಮನುವಾದದ ಕತ್ತಲ ಯುಗ ಆರಂಭವಾಗುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News