ರಾಮ ಮಂದಿರ ಮತ್ತು ರಾಷ್ಟ್ರ ಮಂದಿರ

Update: 2018-11-25 18:36 GMT

ಕಳೆದ ನಾಲ್ಕೂವರೆ ವರ್ಷಗಳಿಂದ ಮೋದಿ ಸರಕಾರ ಜನತೆಗೆ ನೀಡಿದ ಯಾವ ಭರವಸೆಗಳನ್ನ್ನೂ ಈಡೇರಿಸಿಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿಲ್ಲ. ಅಡಿಗೆ ಅನಿಲದ ಸಿಲಿಂಡರ್‌ನ ಬೆಲೆ 399 ರೂಪಾಯಿಯಿಂದ 1,000 ರೂಪಾಯಿಗೆ ತಲುಪಿದೆ. ನೋಟು ಅಮಾನ್ಯೀಕರಣ ವಿಫಲಗೊಂಡಿದೆ ಎಂದು ಹಣಕಾಸು ಸಚಿವಾಲಯವೇ ಒಪ್ಪಿಕೊಂಡಿದೆ.


ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡು ಕಾಲು ಶತಮಾನ ಗತಿಸಿತು. 1992ರ ಡಿಸೆಂಬರ್ 6ರಂದು ಉದ್ರಿಕ್ತ ಕರಸೇವಕರು ಅರ್ಧ ಗಂಟೆಯಲ್ಲಿ ಅದನ್ನು ಧ್ವಂಸಗೊಳಿಸಿದರು. ಆ ದಿನ ಬೆಂಗಳೂರಿನ ಟೌನಹಾಲ್ ಮುಂದೆ ನಡೆದ ಪ್ರತಿಭಟನೆಯಲ್ಲಿ ನಮ್ಮಿಂದಿಗೆ ಗಿರೀಶ್ ಕಾರ್ನಾಡ್ ಮತ್ತು ಲಂಕೇಶ್ ಕೂಡ ಪಾಲ್ಗೊಂಡಿದ್ದರು. ಆಗಿನಿಂದ ಕೋಮುವಾದವನ್ನು ವಿರೋಧಿಸಿ ಹೋರಾಡುವುದು, ಬರೆಯುವುದು ನಮ್ಮ ಏಕೈಕ ಕಾರ್ಯಸೂಚಿಯಾಗಿದೆ. ಜನಸಾಮಾನ್ಯರನ್ನು ಬಾಧಿಸುತ್ತಿರುವ ದುರಂತ ಸಮಸ್ಯೆಗಳು ಕಡೆಗಣಿಸಲ್ಪಟ್ಟಿವೆ. ಅದರ ಬಗ್ಗೆ ಬರೆದು ಬರೆದು ಒಮ್ಮೆಮ್ಮೆ ಸಾಕೆನಿಸುತ್ತದೆ. ಈ ಘಟನೆ ನಡೆದು 25 ವರ್ಷಗಳ ನಂತರವೂ ಕೂಡ ಅದೇ ಮಂದಿರ ನಿರ್ಮಾಣದ ವಿಷಯ ಎತ್ತಿಕೊಂಡು ದೇಶದ ಶಾಂತಿ ಮತ್ತು ನೆಮ್ಮದಿಗೆ ಕೊಳ್ಳಿ ಇಡುವ ಹುನ್ನಾರ ನಡೆದಿದೆ. ಜನಸಾಮಾನ್ಯರು ಉದ್ಯೋಗಕ್ಕಾಗಿ, ಆಹಾರಕ್ಕಾಗಿ ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ಹಾತೊರೆಯುತ್ತಿದ್ದಾರೆ. ಆದರೆ ದೇಶವನ್ನು ಆಳುತ್ತಿರುವ ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತೆ ಸಾಮಾಜಿಕ ಶಾಂತಿ, ನೆಮ್ಮದಿಗೆ ಬೆಂಕಿ ಹಾಕಲು ಹೊರಟಿದೆ.

ಕಳೆದ ನಾಲ್ಕೂವರೆ ವರ್ಷಗಳಿಂದ ಮೋದಿ ಸರಕಾರ ಜನತೆಗೆ ನೀಡಿದ ಯಾವ ಭರವಸೆಗಳನ್ನ್ನೂ ಈಡೇರಿಸಿಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿಲ್ಲ. ಅಡಿಗೆ ಅನಿಲದ ಸಿಲಿಂಡರ್‌ನ ಬೆಲೆ 399 ರೂಪಾಯಿಯಿಂದ 1,000 ರೂಪಾಯಿಗೆ ತಲುಪಿದೆ. ನೋಟು ಅಮಾನ್ಯೀಕರಣ ವಿಫಲಗೊಂಡಿದೆ ಎಂದು ಹಣಕಾಸು ಸಚಿವಾಲಯವೇ ಒಪ್ಪಿಕೊಂಡಿದೆ. ಹಣಕಾಸು ಸಚಿವಾಲಯಕ್ಕೂ ರಿಸರ್ವ್ ಬ್ಯಾಂಕಿಗೂ ಹೊಂದಾಣಿಕೆ ಇಲ್ಲ. ಕೇಂದ್ರೀಯ ತನಿಖಾತಂಡ ಸಿಬಿಐ ಒಳಗೆ ಕಿತ್ತಾಟ ನಡೆದಿದೆ. ಅದನ್ನು ಬಳಸಿಕೊಂಡು ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸರಕಾರ ಯತ್ನಿಸುತ್ತಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಮುಚ್ಚಿ ಹೋಗುವ ಸ್ಥಿತಿಗೆ ಬಂದಿವೆ. ನ್ಯಾಯಾಂಗದ ಮೇಲೆ ಸವಾರಿ ಮಾಡುವ ಯತ್ನ ನಡೆದಿದೆ. ರಫೇಲ್ ಭ್ರಷ್ಟಾಚಾರದ ದುರ್ವಾಸನೆ ಎಲ್ಲೆಡೆ ಹರಡಿದೆ. ದೇಶದ ಅಧಿಕಾರ ಸೂತ್ರ ಹಿಡಿಯಲು ಅಡ್ವಾಣಿ ರಥಯಾತ್ರೆಗೆ ಹೊರಟಾಗ ಸೃಷ್ಟಿಸಿದ ಅಯೋಧ್ಯೆಯ ವಿವಾದ ಜನಸಾಮಾನ್ಯರ ನೆಮ್ಮದಿ ಹಾಳು ಮಾಡಿದೆ. ಕೋಮು ಸೌಹಾರ್ದ ಅಪಾಯದಲ್ಲಿದೆ. ಜನಪರ ಚಿಂತಕರು ಮತ್ತು ವಿಚಾರವಾದಿಗಳು ತಮ್ಮ ಬರಹಗಳಿಗಾಗಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಈ ದೇಶದಲ್ಲಿ ಈಗ ಯಾರಾದರೂ ನೆಮ್ಮದಿಯಾಗಿದ್ದರೆ ಅದು ಕಾರ್ಪೊರೇಟ್ ಬಂಡವಾಳಶಾಹಿಗಳು ಮತ್ತು ದೇವಾಲಯಗಳಲ್ಲಿ ಮಂತ್ರ ಹೇಳುವ ಪುರೋಹಿತರು ಮಾತ್ರ. 2014ರಲ್ಲಿ 5 ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದ ಮುಖೇಶ್ ಅಂಬಾನಿ ಈಗ ಗಳಿಸಿರುವ ಆಸ್ತಿ ಒಂದೂವರೆ ಲಕ್ಷ ಕೋಟಿ ರೂಪಾಯಿ ಆಗಿದೆ. ಗೌತಮ್ ಅದಾನಿಯ ಆಸ್ತಿ ಐವತ್ತು ಸಾವಿರ ಕೋಟಿ ರೂಪಾಯಿ ದಾಟಿದೆ. ಇನ್ನೊಂದೆಡೆ ದೇಶದ ತುಂಬೆಲ್ಲ ಹೈಟೆಕ್ ದೇವಾಲಯಗಳು ತಲೆ ಎತ್ತುತ್ತಿವೆ. ಅಲ್ಲಿ ಪುರೋಹಿತರ ದಂಧೆಯೂ ನಿರಾತಂಕವಾಗಿ ನಡೆದಿದೆ. ಆದರೆ ದೇಶದ ದುಡಿಯುವ ಜನರ ಬದುಕು ಛಿದ್ರ ಛಿದ್ರವಾಗಿ ಹೋಗುತ್ತಿದೆ.
ದೇಶದಲ್ಲಿ ಸರಕಾರಿ ಆಸ್ಪತ್ರೆಗಳು, ಸರಕಾರಿ ಶಾಲೆಗಳ ಸಂಖ್ಯೆ ಕಡಿಮೆ ಆಗುತ್ತಿವೆ. ಎಲ್ಲೆಡೆ ಖಾಸಗಿ ಆಸ್ಪತ್ರೆಗಳು ಮತ್ತು ಶಾಲೆಗಳು ತಲೆ ಎತ್ತುತ್ತಿವೆ. ಜೈಲಿನಲ್ಲಿರಬೇಕಾದವರು ಸಂಸತ್ತಿನಲ್ಲಿದ್ದಾರೆ. ಸಂಸತ್ತಿನಲ್ಲಿ ಇರಬೇಕಾದವರು ಜೈಲಿನಲ್ಲಿದ್ದಾರೆ. ಬುದ್ಧಿಜೀವಿಗಳ ಬಾಯಿ ಮುಚ್ಚಿಸಲು ನಗರ ನಕ್ಸಲರು ಎಂಬ ಹೊಸ ಪದವನ್ನು ಸೃಷ್ಟಿಸಿದ್ದಾರೆ.

ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಂಡ ನಾಲ್ಕೂವರೆ ವರ್ಷಗಳಲ್ಲಿ ಈ ದೇಶದಲ್ಲಿ ಸಂಭವಿಸಿದ ಮನುಷ್ಯರ ಅಸಹಜ ಸಾವುಗಳಿಗೆ ಲೆಕ್ಕವಿಲ್ಲ. ಗೋರಕ್ಷಣೆಯ ಹೆಸರಿನಲ್ಲಿ ಗೂಂಡಾಗಳು ಬೀದಿಯಲ್ಲಿ ಅಮಾಯಕರನ್ನು ಕೊಲ್ಲುತ್ತಿದ್ದಾರೆ. ಗೋವಿಂದ ಪನ್ಸಾರೆ, ಡಾ. ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ನಡೆಯಿತು. ಆದರೆ ಆರೋಪಿಗಳನ್ನು ಗುರುತಿಸಿ ಶಿಕ್ಷಿಸಲು ಇನ್ನೂ ಸಾಧ್ಯವಾಗಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಅಸ್ತಿತ್ವದಲ್ಲಿ ಇದ್ದಿದ್ದರಿಂದ ಹಂತಕರ ಜಾಲ ಭೇದಿಸಲು ಸಾಧ್ಯವಾಯಿತು. ಆದರೆ ಆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಈ ಎಲ್ಲ ಹತ್ಯೆ ಪ್ರಕರಣಗಳಲ್ಲಿ ಬಂಧನಕ್ಕೊಳಗಾದವರು ವಿಧಿಸಬಹುದಾದ ಶಿಕ್ಷೆಗೆ ತಲೆ ಕೊಡುವವರೂ ಹಿಂದುಳಿದ ಸಮುದಾಯದ ಶೂದ್ರರ ಮಕ್ಕಳು. ಇವರ ಮೆದುಳಲ್ಲಿ ಹಿಂದುತ್ವವನ್ನು ತುಂಬಿದವರ ಮಕ್ಕಳು ಅಮೆರಿಕದಲ್ಲಿ ವ್ಯಾಸಂಗ ಇಲ್ಲವೇ ನೌಕರಿ ಮಾಡುತ್ತಿದ್ದಾರೆ. ಇಂತಹ ಗಂಭೀರ ಸನ್ನಿವೇಶದಲ್ಲಿ ಜನಸಾಮಾನ್ಯರನ್ನು ನೈಜ ಸಮಸ್ಯೆಗಳಿಂದ ದೂರಕ್ಕೆ ಕೊಂಡೊಯ್ಯಲು, ಅಮಾಯಕರನ್ನು ಕೋಮು ಸಂಘರ್ಷದ ದಳ್ಳುರಿಗೆ ನೂಕಲು ಕೋಮುವಾದಿ ಶಕ್ತಿಗಳು ಹುನ್ನಾರ ನಡೆಸುತ್ತಲೇ ಇವೆ. ಇದಕ್ಕಾಗಿ ಅಯೋಧ್ಯೆಗೆ ಲಕ್ಷಾಂತರ ಜನರನ್ನು ಸೇರಿಸಲಾಗಿದೆ. ಮಂದಿರ ನಿರ್ಮಾಣಕ್ಕಾಗಿ ಜನಾಗ್ರಹ ಸಭೆಗಳು ನಡೆದಿವೆ.

ಅಯೋಧ್ಯೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಇದನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕೆಂದು ಕೋಮುವಾದಿ ಶಕ್ತಿಗಳು ಮಾಡುತ್ತಿರುವ ಒತ್ತಾಯವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಇದರಿಂದ ರೋಸಿಹೋದ ಆರೆಸ್ಸೆಸ್ ನಾಯಕರು ಸುಪ್ರೀಂ ಕೋರ್ಟ್ ಹಿಂದೂಗಳ ಭಾವನೆಗೆ ಅವಮಾನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ದೇಶದ ಎಂಬತ್ತು ಕೋಟಿ ಹಿಂದೂಗಳು ತಮ್ಮ ಪರವಾಗಿ ಮಾತನಾಡುವಂತೆ ಇವರಿಗೆ ಸ್ಟಾಂಪ್ ಪೇಪರ್ ಮೇಲೆ ಬರೆದು ಕೊಟ್ಟಿಲ್ಲ. ಆದರೂ ಅವರ ಹೆಸರಿನಲ್ಲಿ ಇವರು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ನಡೆದರೂ ಪ್ರಧಾನಿ ಸ್ಥಾನದಲ್ಲಿ ಕುಳಿತ ವ್ಯಕ್ತಿ ತಮ್ಮ ಬಾಯಿಗೆ ಹಾಕಿದ ಬೀಗವನ್ನು ತೆಗೆದಿಲ್ಲ. ಅದರ ಬೀಗದ ಕೈ ನಾಗಪುರದಲ್ಲಿದೆ.

ಈ ಬಾರಿ ಸಂಘ ಪರಿವಾರದ ವ್ಯೆಹ ಅಯೋಧ್ಯೆಗೆ ಮಾತ್ರ ಸೀಮಿತವಾಗಿಲ್ಲ. ಅದು ಕಾಶಿಯ ವಿಶ್ವನಾಥ್ ಮಂದಿರ ಮತ್ತು ಗ್ಯಾನ್‌ವ್ಯಾಪಿ ಮಸೀದಿಯನ್ನು ಇನ್ನೊಂದು ವಿವಾದ ಸೃಷ್ಟಿಸಲು ಹೊರಟಿದೆ. 1992ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರು ಬಾಬರಿ ಮಸೀದಿ ಮಾತ್ರವಲ್ಲ ಸುತ್ತಮುತ್ತಲ ಕಟ್ಟಡ ಮತ್ತು ಮನೆಗಳನ್ನು ನೆಲಸಮಗೊಳಿಸಿದರು. ಈಗ ಕಾಶಿ ವಿಶ್ವನಾಥ್ ಮಂದಿರದ ಸುತ್ತಲಿನ ಪ್ರದೇಶದ ಮನೆ ಮತ್ತು ಅಂಗಡಿಗಳನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ನೆಲಸಮಗೊಳಿಸುತ್ತಿದೆ. ದೇವಾಲಯ ನಗರಗಳ ಸೌಂದರ್ಯ ವರ್ಧನೆಗಾಗಿ ಪ್ರಧಾನಿ ರೂಪಿಸಿದ ಯೋಜನೆಯಂತೆ ಇದೆಲ್ಲ ನಡೆದಿದೆಯಂತೆ. ತಮ್ಮ ಪರವಾಗಿ ತೀರ್ಪು ನೀಡದ ಸುಪ್ರೀಂ ಕೋರ್ಟ್ ವಿರುದ್ಧ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಬಾಗವತ್ ದಾಳಿ ನಡೆಸಿದ್ದಾರೆ. ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಲು ಒತ್ತಾಯಿಸುತ್ತಿದ್ದಾರೆ.

ಕೋಮು ಆಧಾರದಲ್ಲಿ ಎಲ್ಲರನ್ನು ಧ್ರುವೀಕರಣಗೊಳಿಸಿ ಕೇಂದ್ರದಲ್ಲಿ ಮತ್ತೆ ಮೋದಿ ಸರಕಾರ ಅಸ್ತಿತ್ವಕ್ಕೆ ಬರುವಂತೆ ಮಾಡಲು ಮತ್ತೆ ರಾಮನಾಮಸ್ಮರಣೆ ನಡೆದಿದೆ. ಮಂದಿರ ನಿರ್ಮಾಣಕ್ಕೆ ನಡೆದ ಈ ಚಳವಳಿಯನ್ನು ಎರಡು ವರ್ಷದ ಹಿಂದೆಯೇ ಮಾಡಬೇಕಾಗಿತ್ತು. ಆದರೆ ಲೋಕಸಭೆ ಚುನಾವಣೆ ಸಮೀಪಿಸಿದಾಗ ಇದನ್ನು ಮತ್ತೆ ಕೈಗೆತ್ತಿಕೊಂಡಿರುವುದು ಶ್ರೀರಾಮಚಂದ್ರನ ಮೇಲಿನ ಭಕ್ತಿಯಿಂದಲ್ಲ.

ಆರೆಸ್ಸೆಸ್‌ನ ಈ ಹುನ್ನಾರದ ಬಗ್ಗೆ ದ್ವಾರಕಾಪೀಠದ ನಿಯೋಜಿತ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದಾರೆ. ಆದರೆ ಮೋದಿಯಿಂದ ಅವರಿಗೆ ಉತ್ತರ ಬಂದಿಲ್ಲ. ಹಿಂದೂಗಳ ಭಾವನೆ ಕೆರಳಿಸಿ ತಮ್ಮ ರಾಜಕೀಯ ಸ್ವಾರ್ಥ ಸಾಧಿಸಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎಂದು ದ್ವಾರಕಾಪೀಠದ ಶಂಕರಾಚಾರ್ಯರು ಆಪಾದಿಸಿದ್ದಾರೆ. ಇವರು ಕಾಶಿಯಲ್ಲಿ ಇನ್ನೊಂದು ಅಯೋಧ್ಯೆ ವಿವಾದ ಸೃಷ್ಟಿಸಲು ಹೊರಟಿದ್ದಾರೆ ಎಂದು ಆಪಾದಿಸಿದ್ದಾರೆ.

ಉತ್ತರ ಭಾರತದಲ್ಲಿ ಅಯೋಧ್ಯೆ ವಿವಾದ ಸೃಷ್ಟಿಸಿದಂತೆ ಕೇರಳದಲ್ಲಿ ಶಬರಿಮಲೆ ವಿವಾದ ಹಾಗೂ ಕರ್ನಾಟಕದಲ್ಲಿ ಬಾಬಾ ಬುಡಾನ್‌ಗಿರಿ ವಿವಾದ ಸೃಷ್ಟಿಸಿ ಉರಿಯುವ ಬೆಂಕಿಯಲ್ಲಿ ಮತಗಳ ಬೇಟೆಯಾಡಲು ಬಿಜೆಪಿ ಹೊರಟಿದೆ. ಆಂತರಿಕವಾಗಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ಒಡೆದುಹೋದ ದೇಶವನ್ನು ದಾಳಿಮಾಡಿ ವಶಪಡಿಸಿಕೊಳ್ಳುವುದು ಶತ್ರುಗಳಿಗೆ ಸುಲಭದ ಸಂಗತಿ. ಈ ದೇಶ ಹಿಂದೆ ವಿದೇಶಿಗಳ ಆಕ್ರಮನಕ್ಕೆ ಒಳಗಾದಾಗೆಲ್ಲ ಆಂತರಿಕ ಒಡಕು, ಇಲ್ಲಿನ ಶ್ರೇಣೀಕೃತ ಜಾತಿಪದ್ಧತಿ ಜನರ ಐಕ್ಯ ಹೋರಾಟಕ್ಕೆ ಅಡ್ಡಿಯಾಯಿತು. ಮನುಷ್ಯರ ನಡುವೆ ಒಡಕಿನ ಬೀಜ ಬಿತ್ತಿ ಮನಸ್ಸುಗಳ ನಡುವೆ ಗೋಡೆ ಕಟ್ಟಿ ಈಗ ಹಿಂದೂಗಳೆಲ್ಲ ಒಂದೆಂದು ಹೇಳಿದರೆ ವಂಚನೆಯಾಗುತ್ತದೆ. ಅಂತಲೇ ಬಾಬಾ ಸಾಹೇಬ ಅಂಬೇಡ್ಕರ್ ಮಹಾತ್ಮಾ ಗಾಂಧಿ ಜತೆಗೆ ಮಾತನಾಡುವಾಗ ‘ನನ್ನ ಜನರನ್ನು ಊರಾಚೆ ಇಟ್ಟ, ನನ್ನ ಜನರಿಗೆ ಕುಡಿಯಲು ನೀರು ಕೊಡದ, ವೇದವನ್ನು ಓದಿದರೆ ನಾಲಗೆ ಕತ್ತರಿಸುವ ದೇಶವನ್ನು ನನ್ನ ದೇಶವೆಂದು ಹೇಗೆ ಕರೆಯಲಿ’ ಎಂದು ಪ್ರಶ್ನಿಸಿದ್ದರು. ಆ ಪ್ರಶ್ನೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.

ರಾಮ ಮಂದಿರ ನಿರ್ಮಾಣ ಮಾಡಲು ಹೊರಟವರಿಂದ ಸರ್ವಜನಾಂಗದ ಶಾಂತಿಯ ತೋಟವಾದ ರಾಷ್ಟ್ರಮಂದಿರಕ್ಕೆ ಗಂಡಾಂತರ ಎದುರಾಗಿದೆ. ರಾಷ್ಟ್ರ ಸುರಕ್ಷಿತವಾಗಿ ಇರಬೇಕಿದ್ದರೆ ಜನರನ್ನು ವಿಭಜಿಸುವ ಇಂತಹ ಅಪಸ್ವರಗಳು ನಿಲ್ಲಬೇಕು. ದೇಹವೇ ದೇವಾಲಯ ಎಂಬ ಬಸವಣ್ಣ ಅವರ ಮಾತು ಮತ್ತು ಕುಲಕುಲವೆಂದು ಬಡಿದಾಡದಿರಿ ಎಂಬ ಕನಕದಾಸರ ಸಂದೇಶ ನಮಗೆ ಬೆಳಕು ನೀಡಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News