ನಿಮ್ಮ ಮಂದಿರ ಬೇಡ, ಸಾಲಮನ್ನಾ ಮಾಡಿ

Update: 2018-12-02 18:32 GMT

ಜಾಗತೀಕರಣದ ನಂತರ ಹದಗೆಡುತ್ತಲೇ ಬಂದ ರೈತರ ಪರಿಸ್ಥಿತಿ ಮೋದಿ ಸರಕಾರ ಬಂದ ನಂತರ ಇನ್ನಷ್ಟು ವಿಪರೀತಕ್ಕೆ ಹೋಯಿತು. ಎರಡು ವರ್ಷಗಳ ಹಿಂದಿನ ನೋಟು ರದ್ದತಿ ಕ್ರಮ ಸಣ್ಣಪುಟ್ಟ ರೈತರ ಬದುಕನ್ನೇ ಛಿದ್ರ ಮಾಡಿತು.


ಹೋರಾಟಗಾರ್ತಿ ಕವಿತಾ ಕೃಷ್ಣನ್ ಹೇಳಿದಂತೆ ಈಗ ಎರಡು ಭಾರತಗಳಿಗಾಗಿ ಸಂಘರ್ಷ ನಡೆದಿದೆ. ಒಂದು ಗುಂಪು ಅಯೋಧ್ಯೆಯತ್ತ ಸಾಗುತ್ತಿದೆ. ದಿಲ್ಲಿಯ ಆರೆಸ್ಸೆಸ್ ಕಚೇರಿಯಿಂದ ಹೊರಟ ರಾಮಮಂದಿರ ನಿರ್ಮಾಣ ಜಾಥಾಗೆ ಲಕ್ಷಾಂತರ ಜನ ಬರುವರು ಎಂದು ನಿರೀಕ್ಷಿಸಲಾಗಿತ್ತು. ಆದರೆ ನೂರು ಜನರನ್ನು ಸೇರಿಸಲು ಆಗಲಿಲ್ಲ. ಇನ್ನೊಂದು ಕಡೆ, ರಾಜಧಾನಿ ದಿಲ್ಲಿಗೆ ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ರೈತರು ತಲುಪಿ ಮೋದಿ ಸರಕಾರದ ನಾಲ್ಕೂವರೆ ವರ್ಷಗಳ ಆಡಳಿತದ ವೈಫಲ್ಯಗಳಿಗಾಗಿ ಉತ್ತರವನ್ನು ಕೇಳುತ್ತಿದ್ದಾರೆ. ಉತ್ತರ ನೀಡಬೇಕಾದ ಪ್ರಧಾನ ಸೇವಕರು ವಿದೇಶಕ್ಕೆ ಹೋಗಿ ಕೂತಿದ್ದಾರೆ. ಆದರೆ, ಭಾರತ ಎತ್ತ ಸಾಗಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ರೈಲು, ಬಸ್, ಕಾಲ್ನಡಿಗೆಯಲ್ಲಿ ರಾಜಧಾನಿಗೆ ಧಾವಿಸಿದ 24 ರಾಜ್ಯಗಳ ಲಕ್ಷಾಂತರ ರೈತರು ರಾಮಲೀಲಾ ಮೈದಾನದಲ್ಲಿ ಟೆಂಟ್ ಹಾಕಿದ್ದರು.

ಸಂಸತ್ ಭವನ ಸಮೀಪದ ಜಂತರ್ ಮಂತರ್‌ವರೆಗೆ ಮೆರವಣಿಗೆ ಹೋದರು. ಆದರೆ, ಎನ್‌ಡಿಟಿವಿ, ಮಿರರ್‌ನೌ ಹೊರತುಪಡಿಸಿ ಯಾವ ದೃಶ್ಯ ಮಾಧ್ಯಮಗಳಿಗೂ ಇದು ಸುದ್ದಿಯೆಂದು ಅನ್ನಿಸಲಿಲ್ಲ. ಮುದ್ರಣ ಮಾಧ್ಯಮದಲ್ಲೂ ಕೂಡ ಕೆಲವೇ ಕೆಲವು ಪತ್ರಿಕೆಗಳಲ್ಲಿ ಎರಡನೇ ದಿನ ಈ ಸುದ್ದಿ ಬಂತು. ಆದರೆ ಜನ ಇವುಗಳಿಗಾಗಿ ಕಾಯುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದು ವ್ಯಾಪಕವಾಗಿ ಪ್ರಚಾರ ಪಡೆಯಿತು. ದೇಶದ 200 ರೈತ ಸಂಘಟನೆಗಳ ಬೆಂಬಲ ಪಡೆದ ಕಿಸಾನ್ ಮುಕ್ತಿ ಮೋರ್ಚಾ ಸಂಘಟಿಸಿದ ರೈತರ ಬೃಹತ್ ರ್ಯಾಲಿಯಲ್ಲಿ ಸೇರಿದ ಜನರು ಯಾವುದೇ ಒಂದು ಜಾತಿ, ಧರ್ಮ, ಭಾಷೆ, ಪ್ರದೇಶಕ್ಕೆ ಸೇರಿದವರಲ್ಲ. ಅವರೆಲ್ಲ ಈ ಅಡ್ಡಗೋಡೆಗಳನ್ನು ದಾಟಿ ಬಂದ ಭಾರತೀಯರು. ದೇಶದ ಎಲ್ಲಾ ಸಮುದಾಯಗಳ, ಎಲ್ಲಾ ಭಾಷೆಗಳನ್ನು ಆಡುವ ರೈತರು ದಿಲ್ಲಿಗೆ ಬಂದಿದ್ದರು. ಅವರ ಬೇಡಿಕೆ ಬದುಕಿಗೆ ಸಂಬಂಧವಿಲ್ಲದ ಯಾವುದೇ ಗುಡಿ, ಗುಂಡಾರದ ನಿರ್ಮಾಣವಾಗಿರಲಿಲ್ಲ. ತಮ್ಮ ಬದುಕನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ತಾವು ಚುನಾಯಿಸಿದ ಸರಕಾರದ ಎದುರು ಹೇಳಲು ಅವರು ಬಂದಿದ್ದರು. ಕೇಳಿಸಿಕೊಳ್ಳಲು ಅಲ್ಲಿ ಸರಕಾರ ಎಂಬುದು ಇರಲಿಲ್ಲ. ರೈತರ ಹೋರಾಟದ ಗುರಿ ಕೆಲವೇ ಆರ್ಥಿಕ ಬೇಡಿಕೆ ಆಗಿರಲಿಲ್ಲ.

ಸ್ವರಾಜ್ ಮೋರ್ಚಾ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದಂತೆ, ಮುಂದಿನ ಐದು ತಿಂಗಳ ಕಾಲ ನಮ್ಮ ಗುರಿ ಒಂದೇ ಒಂದು. ಅದು ರೈತ ವಿರೋಧಿ ಮೋದಿ ಸರಕಾರವನ್ನು ಬದಲಿಸಿ, ರೈತ ಸ್ನೇಹಿ ಸರಕಾರವನ್ನು ಅಸ್ತಿತ್ವಕ್ಕೆ ತರುವುದು ಎಂದು ಹೇಳಿದರು. ಮೋದಿ ನೇತೃತ್ವದ ಸರಕಾರದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಲ ತಿಂಗಳ ಹಿಂದೆ ಸಂಘಟಿತ ಕಾರ್ಮಿಕ ವರ್ಗದ ಪ್ರತಿಭಟನೆಯು ದಿಲ್ಲಿಯಲ್ಲಿ ನಡೆದಿತ್ತು. ಆದರೆ ಅದು ಇಷ್ಟು ಪರಿಣಾಮ ಬೀರಿರಲಿಲ್ಲ. ರೈತರ ಆಕ್ರೋಶಕ್ಕೆ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು. ದಿಲ್ಲಿಯ ಶಾಲಾಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ರೈತರು ಪ್ರತಿ ನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಮೋದಿ ಸರಕಾರ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನ ಅವರಲ್ಲಿದೆ. ಕೇವಲ ಐದು-ಆರು ಸಾವಿರ ಸಾಲಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ರೈತರು ನಮ್ಮಲ್ಲಿದ್ದಾರೆ. ಆದರೆ, ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶಕ್ಕೆ ಪಲಾಯನ ಮಾಡಿದ ನೀರವ್ ಮೋದಿ, ಮಲ್ಯ, ಮಿತ್ತಲ್‌ಗಳು ಹಾರಿ ಹೋಗಲು ಮೋದಿ ಸರಕಾರ ಅವಕಾಶ ಮಾಡಿಕೊಟ್ಟಿತು.

ರೈತರನ್ನು ಬಾಧಿಸುತ್ತಿರುವ ಬಹುಪಾಲು ಸಮಸ್ಯೆಗಳಿಗೆ ಸ್ವಾಮಿನಾಥನ್ ಆಯೋಗ ನೀಡಿದ ವರದಿ ಪರಿಹಾರವಾಗಿದೆ. ಈ ವರದಿಯನ್ನು ಕೊಟ್ಟು 16 ವರ್ಷವಾದರೂ ಯಾವ ಸರಕಾರವೂ ಇದನ್ನು ಜಾರಿಗೊಳಿಸುವ ಗೋಜಿಗೆ ಹೋಗಲಿಲ್ಲ. ಆದರೆ, ಜಿಎಸ್‌ಟಿ ವಿಧೇಯಕ ಪಾಸು ಮಾಡಲು ಮಧ್ಯರಾತ್ರಿ ಸಂಸತ್ತಿನ ಜಂಟಿ ಅಧಿವೇಶನ ಕರೆದು ಯಾವುದೇ ಚರ್ಚೆಯಿಲ್ಲದೇ ಅದನ್ನು ಅಂಗೀಕರಿಸಲಾಯಿತು. ರೈತರನ್ನು ಬದುಕಿಸುವುದಕ್ಕಾಗಿ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದ್ದಾಗಿ ಸರಕಾರ ಹೇಳುತ್ತದೆ. ಆದರೆ ಈ ಫಸಲ್ ಬಿಮಾ ಯೋಜನೆಯಿಂದ ವಿಮಾ ಕಂಪೆನಿಗಳ ಖಜಾನೆ ತುಂಬುತ್ತದೆ. ಇದರಲ್ಲಿ ದೊಡ್ಡ ಹಗರಣವಿದೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ ಆರೋಪಿಸಿದ್ದಾರೆ. ಜಾಗತೀಕರಣದ ನಂತರ ಹದಗೆಡುತ್ತಲೇ ಬಂದ ರೈತರ ಪರಿಸ್ಥಿತಿ ಮೋದಿ ಸರಕಾರ ಬಂದ ನಂತರ ಇನ್ನಷ್ಟು ವಿಪರೀತಕ್ಕೆ ಹೋಯಿತು. ಎರಡು ವರ್ಷಗಳ ಹಿಂದಿನ ನೋಟು ರದ್ದತಿ ಕ್ರಮ ಸಣ್ಣಪುಟ್ಟ ರೈತರ ಬದುಕನ್ನೇ ಛಿದ್ರ ಮಾಡಿತು. ನಗದು ಹಣಕಾಸಿನ ಕೊರತೆಯಿಂದ ಹಿಂಗಾರು ಹಂಗಾಮಿಗೆ ಬೇಕಾದ ಗೊಬ್ಬರ ಖರೀದಿಸಲು ಸಾಧ್ಯವಾಗಲಿಲ್ಲ.

ಇನ್ನೊಂದೆಡೆ ನಗದು ಕೊರತೆಯಿಂದಾಗಿ ರಾಷ್ಟ್ರೀಯ ಬಿತ್ತನೆ ಬೀಜ ನಿಗಮದ 1.38 ಕ್ವಿಂಟಲ್‌ಗಳಷ್ಟು ಗೋಧಿ ಮಾರಾಟವಾಗದೇ ಉಳಿಯಿತು. ನೋಟು ರದ್ದತಿ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡ ಪ್ರಧಾನ ಸೇವಕರು ಆಗಾಗ ಟಿವಿಯಲ್ಲಿ ಕಾಣಿಸಿಕೊಂಡು ಡಿಜಿಟಲ್ ಅರ್ಥವ್ಯವಸ್ಥೆ ಬಗ್ಗೆ ಪ್ರವಚನ ನೀಡಿದರು. ನಗದು ಬಿಕ್ಕಟ್ಟು ಇನ್ನು 6 ತಿಂಗಳಲ್ಲಿ ಬಗೆಹರಿಸದಿದ್ದರೆ, ತನ್ನನ್ನು ಜೀವಂತ ಸುಟ್ಟು ಹಾಕಬೇಕೆಂದು ಬಹಿರಂಗವಾಗಿ ಹೇಳಿದರು. ಆದರೆ, ಸುಟ್ಟು ಹಾಕುವುದು ಭಾರತೀಯ ಸಂಸ್ಕೃತಿಯಲ್ಲ. ಅದು ಜರ್ಮನಿಯಿಂದ ಆಮದು ಮಾಡಿಕೊಂಡ ಹಿಟ್ಲರ್ ಸಂಸ್ಕೃತಿಯಾಗಿದೆ. ಅದೇನೆ ಇರಲಿ, ಒಟ್ಟಾರೆ ಸರಕಾರದ ಹೊಣಗೇಡಿತನದಿಂದ 30 ಕೋಟಿ ರೈತರು ಬೀದಿಗೆ ಬಿದ್ದಿದ್ದಾರೆ.

ರೈತರ ದುರವಸ್ಥೆ ಕೇಂದ್ರ ಕೃಷಿ ಸಚಿವಾಲಯದ ಟಿಪ್ಪಣಿಯಿಂದ ಸ್ಪಷ್ಟವಾಗುತ್ತದೆ. ಪ್ರಧಾನ ಸೇವಕರು ಬಹಿರಂಗ ಸಭೆಗಳಲ್ಲಿ ವಿವಿಧ ಭಂಗಿಗಳಲ್ಲಿ ಎಷ್ಟೇ ಕೂಗಾಡಿ, ಮಾತನಾಡಲಿ, ನೋಟು ರದ್ದತಿಯ ವೈಫಲ್ಯವನ್ನು ಅವರದ್ದೇ ಸರಕಾರದ ಕೃಷಿ ಸಚಿವಾಲಯ ಒಪ್ಪಿಕೊಂಡಿದೆ. ಈ ಕುರಿತು ಹಣಕಾಸಿನ ಸ್ಥಾಯಿ ಸಮಿತಿಗೆ ಅದು ವರದಿ ನೀಡಿತ್ತು. ಆದರೆ ಈ ಗುಟ್ಟು ಬಯಲಾದ ನಂತರ ಅಧಿಕಾರಿಗಳ ಮೇಲೆ ಒತ್ತಡ ತಂದು ಈ ವರದಿಯನ್ನು ವಾಪಸ್ ಪಡೆಯಲಾಯಿತು. ನೋಟು ರದ್ದತಿಯಿಂದ ರೈತರ ಕೈಯಲ್ಲೂ ನಗದು ಇರಲಿಲ್ಲ. ವ್ಯಾಪಾರಿಗಳ ಕೈಯಲ್ಲೂ ನಗದು ಇರಲಿಲ್ಲ. ಗ್ರಾಹಕರ ಕೈಯಲ್ಲೂ ನಗದು ಇರಲಿಲ್ಲ. ನಗದು ರಹಿತ ಭಾರತದ ಪ್ರಧಾನ ಸೇವಕರ ಪರಿಕಲ್ಪನೆಯಿಂದಾಗಿ ದೇಶದ ಅರ್ಥವ್ಯವಸ್ಥೆ ತೀವ್ರ ಬಿಕ್ಕಟ್ಟಿಗೆ ಸಿಲುಕಿತು. ಬೆಳ್ಳುಳ್ಳಿ ಧಾರಣೆ ಕೆಜಿಗೆ 130ಕ್ಕೆ ಇದ್ದದ್ದು 20 ರೂಪಾಯಿಗೆ ಕುಸಿಯಿತು. ರೈತರು ಅಲ್ಲಲ್ಲಿ ಪ್ರತಿಭಟಿಸಿದರು. ಮಧ್ಯಪ್ರದೇಶದ ಸರಕಾರ ರೈತರ ಮೇಲೆ ಗೋಲಿಬಾರ್ ಮಾಡಿ, 6 ಜನರನ್ನು ಕೊಂದು ಹಾಕಿತು.

ಒಂದೆಡೆ ಸಾಲದ ಶೂಲಕ್ಕೆ ಸಿಲುಕಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ಮೋದಿ ಸರಕಾರ ಅಂಬಾನಿ, ಅದಾನಿ ಸೇರಿದಂತೆ ದೇಶದ ಪ್ರಮುಖ ಉದ್ಯಮಪತಿಗಳ 3 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದೆ. ಇದರಿಂದಾಗಿ ಸಾರ್ವಜನಿಕ ರಂಗದ ಬ್ಯಾಂಕುಗಳು ದಿವಾಳಿ ಅಂಚಿಗೆ ಬಂದು ನಿಂತಿವೆ. ಈ ಬ್ಯಾಂಕುಗಳನ್ನು ನಾಶ ಮಾಡಿದ ಸರಕಾರ ಈಗ ರಿಸರ್ವ್ ಬ್ಯಾಂಕನ್ನು ಮುಗಿಸಲು ಹೊರಟಿದೆ. ಕೇಂದ್ರ ಸರಕಾರದ ಹಸ್ತಕ್ಷೇಪದಿಂದ ಆರ್‌ಬಿಐ ಸ್ವಾತಂತ್ರಕ್ಕೆ ಗಂಡಾಂತರ ಬಂದಿದೆ ಎಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ದೂರು ನೀಡಿದ್ದಾರೆ. ರಿಸರ್ವ್ ಬ್ಯಾಂಕ್‌ನಲ್ಲಿ ಇರುವ ಮೀಸಲು ನಿಧಿಯನ್ನು ಸರಕಾರದ ಖರ್ಚಿಗೆ ಕೊಡಬೇಕೆಂದು ಪಟ್ಟು ಹಿಡಿದ ಮೋದಿ ಸರಕಾರ ಬಲವಂತ ಮಾಡಿ, ಲಕ್ಷಾಂತರ ರೂಪಾಯಿಯನ್ನು ಕಿತ್ತುಕೊಂಡಿದೆ. ಸರಕಾರದ ಹಸ್ತಕ್ಷೇಪದಿಂದಾಗಿ ಸಿಬಿಐನಲ್ಲೂ ಅಸಮಾಧಾನ ಹೊಗೆಯಾಡುತ್ತಿದೆ. ನ್ಯಾಯಾಂಗದಲ್ಲೂ ಸರಕಾರ ಹಸ್ತಕ್ಷೇಪ ಮಾಡುತ್ತದೆ ಎಂಬ ಅಸಮಾಧಾನ ಒಳಗೊಳಗೆ ಕುದಿಯುತ್ತಿದೆ.

ಈ ಎಲ್ಲಾ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಲೋಕಸಭೆ ಚುನಾವಣೆಗೆ ಐದು ತಿಂಗಳು ಇರುವಾಗ, ಸಂಘ ಪರಿವಾರದ ಅಯೋಧ್ಯೆಯ ಶ್ರೀರಾಮಚಂದ್ರ ನಾಟಕ ಮಂಡಳಿ ಮತ್ತೆ ಎಲ್ಲೆಡೆ ಟೆಂಟ್ ಹಾಕುತ್ತ ಹೊರಟಿದೆ. ಹಿಂದಿನ ಚುನಾವಣೆಗಳಲ್ಲಿ ಇಟ್ಟಿಗೆ ಪೂಜೆ, ಪಾದುಕೆ ಪೂಜೆ ಮಾಡಿ ಚುನಾವಣೆ ನಂತರ ಮುಚ್ಚಿ ಹೋಗುತ್ತಿದ್ದ ಈ ನಾಟಕ ಮಂಡಳಿ ಮತ್ತೆ ಈಗ ಪ್ರದರ್ಶನಕ್ಕೆ ಸಿದ್ಧವಾಗಿದೆ. ಆದರೆ ಇದನ್ನು ನೋಡಲು ಜನ ಸಿದ್ಧರಿಲ್ಲ. ಈ ಬಾರಿ ಶ್ರೀರಾಮಚಂದ್ರನ ನಕಲಿ ಭಕ್ತರ ನಾಟಕ ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಕಳೆದ ವಾರ ದಿಲ್ಲಿಗೆ ಬಂದಿದ್ದ ರೈತರು, ನಿಮ್ಮ ಮಂದಿರ ನಮಗೆ ಬೇಡ. ಸಾಲ ಮನ್ನಾ ಬೇಕು ಎಂದು ಹಾಕಿದ ಘೋಷಣೆ ದೇಶದ ತುಂಬೆಲ್ಲ ಪ್ರತಿಧ್ವನಿಸುತ್ತಿದೆ. ಅಂತಲೇ ಈ ಬಾರಿ ಅಯೋಧ್ಯೆ ಯಾತ್ರೆಗೆ ಜನ ಬೆಂಬಲ ವ್ಯಕ್ತವಾಗುತ್ತಿಲ್ಲ. ಕೇಂದ್ರದಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಬಿಜೆಪಿ ಸರಕಾರವಿದೆ. ಅದಕ್ಕೆ ನಿಚ್ಚಳ ಬಹುಮತ ಇದೆ. ಅಯೋಧ್ಯೆ ಮಂದಿರಕ್ಕಾಗಿ ಸುಗ್ರೀವಾಜ್ಞೆ ತರಬಹುದಿತ್ತು. ಆದರೆ, ಅದ್ಯಾವುದನ್ನೂ ಮಾಡದೇ ಚುನಾವಣೆ ಸಮೀಪಿಸಿದಾಗ, ಮತ್ತೆ ಜನರನ್ನು ದಾರಿ ತಪ್ಪಿಸಲು ಸುಪ್ರೀಂ ಕೋರ್ಟ್ ಬಗ್ಗೆ ತಪ್ಪು ಕಲ್ಪನೆ ಉಂಟು ಮಾಡಲು ಅಯೋಧ್ಯೆಯತ್ತ ಯಾತ್ರೆ ಹೊರಟಿದೆ.

ರೈತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಒತ್ತಾಯಿಸುತ್ತಿದ್ದಾರೆ. ವಿಶೇಷ ಅಧಿವೇಶನ ಕರೆದು, ಚರ್ಚೆಯಿಲ್ಲದೇ ಜಿಎಸ್‌ಟಿ ಮಸೂದೆ ಪಾಸು ಮಾಡಿಕೊಳ್ಳುವ ಸರಕಾರ ವಿಶೇಷ ಅಧಿವೇಶನ ಕರೆದು ರೈತರ ಸಾಲ ಮನ್ನಾ ಮಾಡಬಹುದಿತ್ತು. ಆದರೆ, ಅದಕ್ಕೆ ಮನಸ್ಸಿಲ್ಲ. ಅಂತಲೇ, ರೈತರು ನಿಮ್ಮ ಮಂದಿರ ಬೇಡ, ಸಾಲ ಮನ್ನಾ ಬೇಕು ಎಂದು ದಿಲ್ಲಿಗೆ ಬಂದಿದ್ದಾರೆ. ನಾಳೆ ಯುವಕರು ಕೂಡ ನಿಮ್ಮ ಮಂದಿರ ಬೇಡ, ಉದ್ಯೋಗ ಬೇಕು ಎಂದು ದಿಲ್ಲಿಗೆ ಬರಬಹುದು. ಮಹಿಳೆಯರು ಕೂಡ ಶೇ.33 ಮೀಸಲಾತಿಗಾಗಿ ರಾಜಧಾನಿಗೆ ಧಾವಿಸಬಹುದು. ಆದ್ದರಿಂದ ಬರಲಿರುವ ದಿನಗಳು ಮೋದಿ ಸರಕಾರಕ್ಕೆ ಇಕ್ಕಟ್ಟಿನ ದಿನಗಳಾಗಿವೆ. ಈ ಬಿಕ್ಕಟ್ಟಿನಿಂದ ಪಾರಾಗಲು ಅಯೋಧ್ಯೆ ಮಂದಿರದ ಜೊತೆಗೆ ಕಾಶಿ, ಮಥುರಾ, ಗೋಮಾತೆ, ಮತಾಂತರ, ಲವ್ ಜಿಹಾದ್ ಎಂದೆಲ್ಲ ಹೊಸ ಹೊಸ ನಾಟಕಗಳು ಪ್ರದರ್ಶನಕ್ಕೆ ಬರಬಹುದು. ಆದರೆ, ಈ ಬಾರಿ ಜನ ಮೋಸ ಹೋಗುವುದಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News