ಹೊಸ ವರ್ಷದ ಹೊಸ ಸವಾಲು...

Update: 2018-12-30 18:41 GMT

ಹೊಸ ವರ್ಷದಲ್ಲಿ ಅಂದರೆ 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಈಗಿನ ಪ್ರಧಾನಿ ಮೋದಿಯನ್ನು ಮುಂದಿಟ್ಟುಕೊಂಡು ಗೆಲ್ಲಲು ಸಾಧ್ಯವಿಲ್ಲ ಎಂದು ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರದ ಮಾಲಕರಿಗೆ ಗೊತ್ತಾಗಿದೆ. ಅದಕ್ಕಾಗಿ ಅವರು ಈ ಬಾರಿ ಹೊಸ ಅಸ್ತ್ರ ಪ್ರಯೋಗಿಸಲಿದ್ದಾರೆ. ಉಗ್ರ ಹಿಂದುತ್ವದ ಆಟ ಇನ್ನು ನಡೆಯುವುದಿಲ್ಲ ಎಂದು ಗೊತ್ತಾಗಿ, ಈಗ ಮೃದು ಹಿಂದುತ್ವಕ್ಕೆ ಮೊರೆ ಹೋದಂತೆ ಕಾಣುತ್ತದೆ.


ಇಂದು 2018ರ ಕೊನೆಯ ದಿನ. ಅಂದರೆ, ಇದೇ ದಿನದ ಮಧ್ಯರಾತ್ರಿ ಹೊಸ ವರ್ಷದ ಆಗಮನ. ಹಳೆಯ ವರ್ಷದ ನೆನಪಿನ ನೆರಳಲ್ಲಿ ಒಡಮೂಡುವ ಹೊಸ ವರ್ಷ ಹೊಸ ಆಸೆ, ಭರವಸೆಗಳನ್ನು ಮೂಡಿಸುವುದು ಸಹಜ. ಕಳೆದು ಹೋದ ವರ್ಷ ಜಗತ್ತಿನ ಬಹುತೇಕ ದೇಶಗಳಂತೆ ಭಾರತೀಯರ ಪಾಲಿಗೂ ಅತ್ಯಂತ ಆತಂಕದ ನೆಮ್ಮದಿರಹಿತವಾದ ಭೀತಿಯ ವರ್ಷ. ಭಾರತಕ್ಕೆ ಬಾಹ್ಯ ಭಯೋತ್ಪದನೆಯ ಭೀತಿ ಈ ವರ್ಷ ಇರಲಿಲ್ಲ. ಯಾವ ಶತ್ರು ದೇಶವೂ ನಮ್ಮ ಮೇಲೆ ಯುದ್ಧ ಘೋಷಿಸಲಿಲ್ಲ. ಆದರೆ ನಮ್ಮನ್ನಾಳುವ ಸರಕಾರವೇ ಪ್ರಜೆಗಳ ವಿರುದ್ಧ ಯುದ್ಧ ಘೋಷಿಸಿದ ವರ್ಷವಿದು. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಬೆಲೆ ಏರಿಕೆ ಇವೆಲ್ಲದರ ಜೊತೆಗೆ ನಿತ್ಯವೂ ನಡೆಯುತ್ತ ಬಂದ ಗುಂಪು ದಾಳಿಗಳಿಂದ ಈ ದೇಶದ ಪ್ರಜೆ ತತ್ತರಿಸಿ ಹೋಗಿದ್ದಾನೆ. ಬಾಹ್ಯ ಭಯೋತ್ಪಾದನೆಯ ಭಯ ಇರದಿದ್ದರೂ ಆಂತರಿಕ ಭಯೋತ್ಪಾದನೆಯಿಂದ ಈ ದೇಶ ನಲುಗಿ ಹೋಯಿತು. ದನರಕ್ಷಣೆ ಹೆಸರಿನಲ್ಲಿ ನಡೆದ ಹತ್ಯೆಗಳು, ಲವ್ ಜಿಹಾದ್ ಹೆಸರಿನಲ್ಲಿ ನಡೆದ ಗೂಂಡಾಗಿರಿ, ಪ್ರಜೆಗಳ ರಕ್ಷಣೆಗೆ ಹೋದ ಪೊಲೀಸ್ ಅಧಿಕಾರಿಯನ್ನೇ ಕೊಚ್ಚಿ ಕೊಂದ ಕ್ರೌರ್ಯ, ಪೊಲೀಸ್ ಅಧಿಕಾರಿಯ ಹತ್ಯೆಗಿಂತ ಸತ್ತ ದನದ ವಿಚಾರಣೆ ನಡೆಸಿದ ಯೋಗಿ ಸರಕಾರ ಹೀಗೆ ಈ ವರ್ಷವೆಲ್ಲ ಇದೇ ಕಥೆ.

ಆಂತರಿಕ ಭಯೋತ್ಪಾದನೆಯ ಬಿಸಿ ಎಲ್ಲರಿಗೂ ತಟ್ಟಿರಲಿಕ್ಕಿಲ್ಲ. ಕೆಲ ದುರ್ಬಲ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆದ ಆಂತರಿಕ ಭಯೋತ್ಪಾದನೆ ಸಮಾಜದ ಮೇಲ್ವರ್ಗಗಳಿಗೆ ತಟ್ಟಲು ಸಾಧ್ಯವಿಲ್ಲ. ಆದರೆ, ಇದನ್ನು ಪ್ರತಿಭಟಿಸುವ ಮೇಲ್ವರ್ಗಗಳಲ್ಲಿ ಇರುವ ಚಿಂತಕರ ಕೊರಳಿಗೂ ಯಮ ಪಾಶ ಬಿಗಿದ ವರ್ಷವಿದು. ಈ ದೇಶದಲ್ಲಿ ಹುಟ್ಟಿದ ದಲಿತರು, ಅಲ್ಪಸಂಖ್ಯಾತರು ಮತ್ತು ಎಲ್ಲಾ ಜಾತಿಯ ಬಡವರು ಸಹಜವಾಗಿ ಇದರ ಬಿಸಿ ಅನುಭವಿಸಿದರು. ಸರಕಾರ ನಡೆಸುವ ಪಕ್ಷದ ಪರಿವಾರಕ್ಕೆ ಸೇರಿದ ಗುಂಪುಗಳು ನಡೆಸುವ ಬೀದಿ ಹಲ್ಲೆಗಳ ಜೊತೆಗೆ ಸರಕಾರವೇ ನೇರವಾಗಿ ನಡೆಸಿದ ಆರ್ಥಿಕ ಭಯೋತ್ಪಾದನೆ ಜನರನ್ನು ಹಿಂಡಿ ಹಿಪ್ಪೆ ಮಾಡಿತು. ಅಸಹಾಯಕ ರೈತರ ಆತ್ಮಹತ್ಯೆ, ದಲಿತರ ಮೇಲಿನ ದೌರ್ಜನ್ಯ. ಸಿಬಿಐ ಮತ್ತು ಎನ್‌ಐಎಯಂತಹ ತನಿಖಾ ಸಂಸ್ಥೆಗಳೇ ಸಂಶಯದ ಕಟಕಟೆಯಲ್ಲಿ ನಿಂತ ವರ್ಷವಿದು. ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹಂತಕರು ಪತ್ತೆಯಾಗಲೇ ಇಲ್ಲ. ಇದರ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರದ ಎಸ್‌ಐಟಿ ಮತ್ತು ಸಿಬಿಐಗಳು ನಿಷ್ಕಾಳಜಿ ತೋರಿದವು. ಈ ಬಗ್ಗೆ ಮುಂಬೈ ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿತು. ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ರಚಿಸಿದ ಎಸ್‌ಐಟಿ ಹಂತಕರ ಜಾಲವನ್ನು ಭೇದಿಸಿ ಅವರನ್ನೆಲ್ಲ ಹಿಡಿದು ಹಾಕಿದೆ.

ಈ ಹಂತಕರು ಬೇರೆ ಯಾವುದೇ ದೇಶದಿಂದ ಬಂದವರಲ್ಲ. ವಿದೇಶಿ ಭಯೋತ್ಪಾದಕರೂ ಅಲ್ಲ. ಇವರು ಬಿಜಾಪುರ, ಬೆಳಗಾವಿ, ಮಂಗಳೂರು, ತುಮಕೂರು ಮುಂತಾದ ಊರಿನವರು. ಇದೇ ನೆಲದಲ್ಲಿ ಬೆಳೆದವರು. ಯಾವ ವಿದೇಶಿ ಭಯೋತ್ಪಾದಕರೂ ಇವರಿಗೆ ತರಬೇತಿ ನೀಡಿಲ್ಲ. ಇವರ ಮೂಲ ಹುಡುಕುತ್ತ ಹೊರಟರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಾಗಿಲ ಬಳಿ ಹೋಗಿ ನಾವು ನಿಲ್ಲಬೇಕಾಗುತ್ತದೆ. ರಾಷ್ಟ್ರದ ಹೆಸರಿನಲ್ಲಿ, ಹಿಂದುತ್ವದ ಹೆಸರಿನಲ್ಲಿ, ರಾಮನ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಇವರು ನಾಶ ಮಾಡ ಹೊರಟಿರುವುದು ಆಧುನಿಕ ಜಾತ್ಯತೀತ ಭಾರತವನ್ನು. ಇವರು ವಿವೇಕಾನಂದ, ಬಸವಣ್ಣರ ಓದಿಲ್ಲ. ಬುದ್ಧ ಇವರಿಗೆ ಗೊತ್ತಿಲ್ಲ. ಬಾಬಾ ಸಾಹೇಬರ ಪರಿಚಯವಿಲ್ಲ. ಆದರೆ ಅವರ ಹೆಸರನ್ನು ಧಾರಾಳವಾಗಿ ಬಳಸಿಕೊಳ್ಳುತ್ತಾರೆ. ಇವರು ಕಟ್ಟಲು ಹೊರಟಿರುವ ಹಿಂದೂ ರಾಷ್ಟ್ರ, ಎಲ್ಲಾ ಹಿಂದೂಗಳ ರಾಷ್ಟ್ರವಲ್ಲ. ಅದು ಪೇಶ್ವೆಗಳ ಮನುವಾದಿ ಹಿಂದೂ ರಾಷ್ಟ್ರ. ಬ್ರಿಟಿಷರ ಕಾಲದಲ್ಲಿ ಹಾಗೂ ಸ್ವಾತಂತ್ರಾ ನಂತರ ಭಾರತದ ಎಲ್ಲಾ ಸಮುದಾಯಗಳ ಬದುಕಲ್ಲಿ ಕ್ರಮೇಣ ಆವರಿಸುತ್ತ ಬಂದ ಬೆಳಕನ್ನು ನಂದಿಸಲು ಮತ್ತು ಮನುವಾದದ ಕತ್ತಲ ಯುಗಕ್ಕೆ ಈ ದೇಶವನ್ನು ಕೊಂಡೊಯ್ಯಲು ಸಂಕಲ್ಪ ಮಾಡಿರುವ ಇವರು ದೇಶದಲ್ಲಿ ಆಂತರಿಕ ಕಲಹದ ಭೀತಿ ನಿರ್ಮಿಸಿದ್ದಾರೆ.

ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರ ಮತ್ತು ಕಾರ್ಪೊರೇಟ್ ಬಂಡವಾಳಶಾಹಿಯ ಅನುಕೂಲ ಸಿಂಧು ಮೈತ್ರಿಯ ಪರಿಣಾಮವಾಗಿ ಈ ದೇಶಕ್ಕೊಬ್ಬ ಬಾಯಿಬಡುಕ ಪ್ರಧಾನಿ ಸಿಕ್ಕರು. ಮನ್ ಕಿ ಬಾತ್ ಎಂದು ಮಾತನಾಡುತ್ತಲೇ ಭವ್ಯ ಭಾರತದ ಆರ್ಥಿಕತೆಯ ಸೊಂಟವನ್ನೇ ಅವರು ಮುರಿದರು. ಬಡವರ ಬಾಯಿಗೆ ಮಣ್ಣು ಹಾಕಿ, ಅಂಬಾನಿ ಮತ್ತು ಅದಾನಿಯಂತಹ ಕಾರ್ಪೊರೇಟ್ ಧಣಿಗಳ ಖಜಾನೆ ತುಂಬಿದರು. ಕರ್ನಾಟಕದ ಮುಖ್ಯಮಂತ್ರಿ ಘೋಷಿಸಿದ ರೈತರ ಸಾಲ ಮನ್ನಾ ಯೋಜನೆ ಬಗ್ಗೆ ವ್ಯಂಗ್ಯ ಮಾಡುವ ಈ ಪ್ರಧಾನಿ ಕಾರ್ಪೊರೇಟ್ ಧಣಿಗಳ ಮೂರು ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿ, ಬ್ಯಾಂಕುಗಳನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದರು. ಅದು ಸಾಲದು ಎಂಬಂತೆ ರಿಸರ್ವ್ ಬ್ಯಾಂಕ್‌ನ ವಿಶೇಷ ನಿಧಿಗೂ ಕೈ ಹಾಕಿದರು. ಅದನ್ನು ಕೊಡಲು ನಿರಾಕರಿಸಿದ ರಿಸರ್ವ್ ಬ್ಯಾಂಕ್‌ನ ಗವರ್ನರನ್ನು ಎತ್ತಂಗಡಿ ಮಾಡಿದರು. ಈ ವರ್ಷದ ಮೊದಲ ದಿನ ಪುಣೆ ಸಮೀಪದ ಭೀಮಾ ಕೋರೆಗಾಂವ್‌ನಲ್ಲಿ ಕರಾಳ ಘಟನೆಯೊಂದು ನಡೆಯಿತು.

ಪೇಶ್ವೆಗಳನ್ನು ಸೋಲಿಸಿದ ಕೋರೆಗಾಂವ್ ಯುದ್ಧದ ವಿಜಯೋತ್ಸವ ಆಚರಿಸಲು ಬಂದ ದಲಿತ ಸಮುದಾಯಗಳ ಮೇಲೆ ಹಲ್ಲೆ, ಗೂಂಡಾಗಿರಿ ನಡೆಯಿತು. ಈ ಹಲ್ಲೆ ಮಾಡಿಸಿದ ಸಂಘ ಪರಿವಾರದ ಸಂಬಾಜಿ ಭೀಡೆ, ಮಿಲಿಂದ್ ಏಕಬೋಟೆ ದೋಷಮುಕ್ತರಾಗಿ ಹೊರಬಂದರು. ಹಲ್ಲೆಗೆ ಒಳಗಾದವರ ಪರವಾಗಿ ನಿಂತ ಸೋಮಾ ಸೇನ್, ಮಹೇಶ್ ರಾವತ್, ಸುರೇಂದ್ರ ಗಾಡ್ಲಿಂಗ್ ಮತ್ತು ಸುಧೀರ್ ಧವಳೆ ಅವರನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಇದು ಸಾಲದು ಎಂಬಂತೆ ಪ್ರಧಾನಿ ಹತ್ಯೆಯ ಸಂಚಿನ ಕತೆ ಕಟ್ಟಿ ಕವಿ ವರವರ ರಾವ್, ಆದಿವಾಸಿಗಳ ಪರ ಹೋರಾಡುತ್ತ ಬಂದ ಖ್ಯಾತ ನ್ಯಾಯವಾದಿ ಸುಧಾ ಭಾರದ್ವಾಜ್, ಪತ್ರಕರ್ತ ಗೌತಮ್ ನವ್ಲಾಖಾ, ಅರುಣ್ ಪೆರೇರಾ, ಕಾರ್ಮಿಕ ಹೋರಾಟಗಾರ ಗೊನ್ಸಲ್ವಿಸ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ. ಅವರ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಲು ಮಹಾರಾಷ್ಟ್ರ ಪೊಲೀಸರು ತಿಣಕಾಡುತ್ತಲೇ ಇದ್ದಾರೆ. ಹೀಗೆ ಬುದ್ಧಿಜೀವಿಗಳನ್ನು ಮತ್ತು ಚಿಂತಕರನ್ನು ಜೈಲಿಗೆ ತಳ್ಳುತ್ತ, ಬೀದಿಯಲ್ಲಿ ಕೊಲ್ಲುತ್ತ, ಭಯದ ವಾತಾವರಣ ಸೃಷ್ಟಿಸಿರುವಾಗಲೇ, ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಬಾಗವತ್‌ರು ಬುದ್ಧಿಜೀವಿಗಳಿಂದ ದೇಶಕ್ಕೆ ಗಂಡಾಂತರವಿದೆ ಎಂದು ಹೇಳಿದ್ದಾರೆ. ಬಿಜೆಪಿ ಕಾರ್ಯದರ್ಶಿ ರಾಮ ಮಾಧವ್ ಕೂಡ ಅದಕ್ಕೆ ಧ್ವನಿಗೂಡಿಸಿದರು. ಈ ದೇಶದಲ್ಲಿ ಹಸಿವಿನಿಂದ ಸಾಯುವವರ ಬಗ್ಗೆ, ಭ್ರೂಣ ಹತ್ಯೆ, ಅತ್ಯಾಚಾರದ ಬಗ್ಗೆ, ನಿರುದ್ಯೋಗದ ಬಗ್ಗೆ ಎಂದಿಗೂ ಮಾತನಾಡದ ಇವರಿಗೆ ಗಂಡಾಂತರವಾಗಿ ಕಂಡಿದ್ದು ಚಿಂತಕರು ಮಾತ್ರ. ತಮ್ಮನ್ನು ವಿರೋಧಿಸುವವರನ್ನು ಹತ್ತಿಕ್ಕಲು ಅರ್ಬನ್ ನಕ್ಸಲೀಯರು ಎಂಬ ಪದವನ್ನು ಇವರು ಸೃಷ್ಟಿಸಿದರು. ಹೀಗಾಗಿ ಬುದ್ಧಿಜೀವಿಗಳನ್ನು ಕೊಲ್ಲುವುದು ಈ ದೇಶದಲ್ಲಿ ಸುಲಭವಾಗಿದೆ. ಈಗಂತೂ ಸರಕಾರವೇ ನೇರವಾಗಿ ದಾಳಿಗೆ ಇಳಿದು, ದೇಶದ್ರೋಹದ ಆರೋಪದಡಿ ಜೈಲಿಗೆ ಅಟ್ಟುತ್ತಿದೆ.

ಕಳೆದ ಶತಮಾನದ 40ರ ದಶಕದಲ್ಲಿ ಅಮೆರಿಕದಲ್ಲಿ ಸೆನೆಟರ್ ಆಗಿದ್ದ ಜೋಸೆಫ್ ಮೆಕಾರ್ಥಿ ಎಂಬ ವ್ಯಕ್ತಿ ದೇಶದ ಸಾಹಿತಿಗಳು, ಕವಿಗಳು, ಬುದ್ಧಿಜೀವಿಗಳೆಲ್ಲ ರಶ್ಯಾದ ಗೂಢಚಾರರು ಎಂದು ಕರೆದು ಜೈಲಿಗೆ ತಳ್ಳಲು ಒತ್ತಾಯಿಸಿದ್ದ. ಅದೇ ಮೆಕಾರ್ಥಿ ವಾದ ಇಲ್ಲಿ ಮತ್ತೆ ತಲೆ ಎತ್ತಿದೆ. ಜರ್ಮನಿಯ ಹಿಟ್ಲರ್, ಇಟಲಿಯ ಮುಸಲೋನಿ ಇವರೆಲ್ಲ ಸೃಷ್ಟಿಸಿದ ನರಕವನ್ನೇ ನಮ್ಮ ದೇಶದಲ್ಲಿ ಸೃಷ್ಟಿಸಲು ಕೋಮುವಾದಿ ಶಕ್ತಿಗಳು ಹೊರಟಿವೆ. ಉಳಿದವರೆಲ್ಲ ಸುಮ್ಮನಿರುವಾಗ, ಸಾಹಿತಿಗಳು ಮಾತನಾಡುತ್ತಾರೆಂದು ಅವರ ಮೇಲೆ ದಾಳಿಗೆ ಮುಂದಾಗಿವೆ. ಆದರೆ ಜನ ಮೂರ್ಖರಲ್ಲ. ಹಿಟ್ಲರ್, ಮುಸಲೋನಿಯವರಿಗೆ ಕಲಿಸಿದ ಪಾಠವನ್ನೇ ಇವರಿಗೆ ಕಲಿಸಲು ಅವರು ಮುಂದಾಗಿದ್ದಾರೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ಎಷ್ಟೇ ಚಿತ್ರ-ವಿಚಿತ್ರ ಭಾಷಣಗಳನ್ನು ಮಾಡಿದರೂ ಬಿಜೆಪಿ ಅಲ್ಲಿ ಪರಾಭವಗೊಂಡಿತು.

ಇದು ಬರಲಿರುವ 2019ರ ಲೋಕಸಭಾ ಚುನಾವಣೆಯ ಮುನ್ಸೂಚನೆ ಎಂಬಂತೆ ಕಂಡು ಬರುತ್ತಿದೆ. ಹೊಸ ವರ್ಷದಲ್ಲಿ ಅಂದರೆ 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಈಗಿನ ಪ್ರಧಾನಿ ಮೋದಿಯನ್ನು ಮುಂದಿಟ್ಟುಕೊಂಡು ಗೆಲ್ಲಲು ಸಾಧ್ಯವಿಲ್ಲ ಎಂದು ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರದ ಮಾಲಕರಿಗೆ ಗೊತ್ತಾಗಿದೆ. ಅದಕ್ಕಾಗಿ ಅವರು ಈ ಬಾರಿ ಹೊಸ ಅಸ್ತ್ರ ಪ್ರಯೋಗಿಸಲಿದ್ದಾರೆ. ಉಗ್ರ ಹಿಂದುತ್ವದ ಆಟ ಇನ್ನು ನಡೆಯುವುದಿಲ್ಲ ಎಂದು ಗೊತ್ತಾಗಿ, ಈಗ ಮೃದು ಹಿಂದುತ್ವಕ್ಕೆ ಮೊರೆ ಹೋದಂತೆ ಕಾಣುತ್ತದೆ. ಅದಕ್ಕಾಗಿ ನಿತಿನ್ ಗಡ್ಕರಿ ಎಂಬ ವಾಜಪೇಯಿ ಮಾದರಿಯ ತಮ್ಮ ಶಿಷ್ಯನನ್ನು ಪ್ರಧಾನಿ ಸ್ಥಾನಕ್ಕೆ ಬಿಂಬಿಸಲು ಮೋಹನ್ ಭಾಗವತ್ ತಂತ್ರ ರೂಪಿಸಿದ್ದಾರೆ. ನಿತಿನ್ ಗಡ್ಕರಿಯವರದ್ದು ನರೇಂದ್ರ ಮೋದಿಯವರಿಗೆ ತದ್ವಿರುದ್ಧವಾದ ವ್ಯಕ್ತಿತ್ವ. ಎಲ್ಲಾ ಪಕ್ಷಗಳ ನಾಯಕರೊಂದಿಗೆ ಸ್ನೇಹದಿಂದ ಇರುವ ಗಡ್ಕರಿ ಎಲ್ಲಿಯೂ ಕೋಮು ಪ್ರಚೋದನೆಯ ಭಾಷಣ ಮಾಡುವುದಿಲ್ಲ. ನಾಗಪುರ ಮೂಲದ ಗಡ್ಕರಿಯವರನ್ನು ಪ್ರಧಾನಿ ಮಾಡಬೇಕೆಂದು ಆರೆಸ್ಸೆಸ್ ಬಯಸಿತ್ತು. ಆದರೆ, ದೇಶದ ಕಾರ್ಪೊರೇಟ್ ಬಂಡವಾಳಶಾಹಿಗಳು ಹಾಗೂ ಸಂಘದ ಕೆಲ ಹಂತದ ನಾಯಕರು ಮೋದಿ ಪರ ನಿಂತಿದ್ದರಿಂದ ಇದು ಸಾಧ್ಯವಾಗಲಿಲ್ಲ. ಆದರೆ, ಈಗ ಮೋದಿ ಪ್ರಭಾವ ಕ್ಷೀಣಿಸಿದೆ. ಅದಕ್ಕಾಗಿ ತನ್ನ ಅಜೆಂಡಾ ಜಾರಿಗೆ ಗಡ್ಕರಿ ಎಂಬ ಹೊಸ ಮುಖವಾಡ ಸಂಘಕ್ಕೆ ಬೇಕಾಗಿದೆ. ಇದು ಗೊತ್ತಾಗಿಯೇ ಗಡ್ಕರಿ ಈಗ ನೇರವಾಗಿ ಮಾತನಾಡಲು ಆರಂಭಿಸಿದ್ದಾರೆ. ಇತ್ತೀಚಿನ ವಿಧಾನಸಭಾ ಫಲಿತಾಂಶದ ಹೊಣೆಯನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ಹೊರಬೇಕೆಂದು ನೇರವಾಗಿ ಹೇಳಿದರು. ಗೆಲುವಿಗೆ ಎಲ್ಲರೂ ಅಪ್ಪಂದಿರು, ಸೋಲು ಎಂದಿಗೂ ಅನಾಥ ಎಂದು ಅವರು ವ್ಯಂಗ್ಯವಾಗಿ ಮಾತನಾಡಿದರು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಡೆದ ದುರಾಡಳಿತ, ಗೂಂಡಾಗಿರಿಯಿಂದ ಪಕ್ಷದ ಪ್ರತಿಷ್ಠೆ ಕುಗ್ಗಿದೆ. ಅದಕ್ಕಾಗಿ ಮೋದಿ ಅವರನ್ನು ಬದಲಿಸಿ ಗಡ್ಕರಿಯವರನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆ ಎದುರಿಸಲು ಆರೆಸ್ಸೆಸ್ ತಂತ್ರ ರೂಪಿಸಿದೆ. ಈ ಬಾರಿ ಬಿಜೆಪಿ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಅದಕ್ಕೆ ಮಿತ್ರಪಕ್ಷಗಳು ಅಗತ್ಯ. ಅಂತಲೇ ತೆಲಂಗಾಣ ಮುಖ್ಯಮಂತ್ರಿ ಟಿ.ಆರ್.ಚಂದ್ರಶೇಖರ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಾತ್ರವಲ್ಲ ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರಿಗೂ ಬಲೆ ಬೀಸಲಾಗಿದೆ. ಇವರೆಲ್ಲರ ಜೊತೆಗೆ ಗಡ್ಕರಿ ಉತ್ತಮ ಸಂಬಂಧ ಹೊಂದಿದ್ದಾರೆ. ಗಡ್ಕರಿ ಮೂಲಕ ಪ್ರತಿಪಕ್ಷಗಳ ಏಕತೆಯನ್ನು ಮುರಿದು ಬಿಜೆಪಿಗೆ ಮಿತ್ರ ಪಕ್ಷಗಳ ಬಲವನ್ನು ತಂದುಕೊಡಲು ಭಾಗವತರು ಮುಂದಾಗಿದ್ದಾರೆ. ಅಂತಲೇ ಈ ಗಡ್ಕರಿ ಈವರೆಗೂ ಯಾವುದೇ ವಿವಾದದಲ್ಲಿ ಸಿಲುಕಿಕೊಂಡಿಲ್ಲ. ಈ ಮನುಷ್ಯ ಎಷ್ಟು ಸ್ನೇಹಪರವೆಂದರೆ, ಕೇಂದ್ರ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನ ಆತ ನೇರವಾಗಿ ಭಾರತ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಕಚೇರಿಯಾದ ಅಜಯ್ ಭವನಕ್ಕೆ ಬಂದು ಸಿಪಿಐ ನಾಯಕ ಎ.ಬಿ.ಬರ್ಧನ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಇವರಿಬ್ಬರೂ ನಾಗಪುರ ಮೂಲದವರು. ಇಷ್ಟೆಲ್ಲ ಇದ್ದರೂ ಗಡ್ಕರಿ ಸಂಘದ ಕಟ್ಟಾ ಸ್ವಯಂ ಸೇವಕ. ಈ ಬಾರಿ ಭಾಗವತರ ಅಜೆಂಡಾಗೆ ಅವರು ಮುಖವಾಡ ಆಗುವ ಸಂಭವವಿದೆ. 2019ರ ಚುನಾವಣೆ ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಅಳಿವು ಉಳಿವಿನ ಚುನಾವಣೆ. ಭಾಗವತರು ಮುಖವಾಡಗಳನ್ನು ಬದಲಿಸಿದರೂ ಅವರ ಮನುವಾದಿ ಹಿಂದೂ ರಾಷ್ಟ್ರ ಅಜೆಂಡಾ ಬದಲಿಸಲು ಸಾಧ್ಯವಿಲ್ಲ. ಅದರ ಜಾರಿಗಾಗಿಯೇ ಒಮ್ಮೆ ಮೋದಿಯನ್ನು, ಇನ್ನೊಮ್ಮೆ ಗಡ್ಕರಿಯನ್ನು ಅವರು ಮುಂದೆ ಮಾಡುತ್ತಾರೆ. ಜನ ಎಚ್ಚೆತ್ತು, ತಿರಸ್ಕರಿಸುತ್ತಾರೆ ಎಂದು ಅವರಿಗೆ ಗೊತ್ತಿದೆ. ಆದರೂ ಅವರು ತಮ್ಮ ಪ್ರಯತ್ನ ಮುಂದುವರಿಸುತ್ತಾರೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News