ಜೊಲಾಂಟಾ ಎಂಬ ಇನ್ನೊಬ್ಬ ಮದರ್ ತೆರೇಸಾ
ಮದರ್ ತೆರೇಸಾ ಅವರು ಯಾವುದೋ ದೇಶದಲ್ಲಿ ಹುಟ್ಟಿ, ಭಾರತಕ್ಕೆ ಬಂದು ಕುಷ್ಠರೋಗಿಗಳ ಸೇವೆ ಮಾಡುತ್ತ, ಅನಾಥ ಮಕ್ಕಳಿಗೆ ಬೆಳಕಿನ ದಾರಿ ತೋರಿಸುತ್ತ ಅಮಾನವೀಯ ಜಗತ್ತಿನಲ್ಲಿ ಮನುಷ್ಯತ್ವದ ಒಂದು ಜಗತ್ತನ್ನೇ ನಿರ್ಮಿಸಿದರು. ಅದೇ ರೀತಿ ಜರ್ಮನಿಯ ನಾಝಿ ಪಡೆಯಿಂದ ನಿರಂತರ ಕಿರುಕುಳ ಅನುಭವಿಸಿ, ಎರಡೂವರೆ ಸಾವಿರ ಯಹೂದಿ ಜನಾಂಗದ ಮಕ್ಕಳನ್ನು ರಕ್ಷಿಸಿದ ಮಹಾತಾಯಿ ಇರೇನಾ ಸೆಂಡ್ಲರ್.
ಭಾರತದಲ್ಲಿ ಈಗ ಹಿಟ್ಲರ್, ಮುಸಲೋನಿಗಳ ಬೂಟುಗಾಲಿನ ಸದ್ದು ಕೇಳಿ ಬರುತ್ತಿದೆ. ಈ ಸದ್ದಿಗೆ ಪ್ರತಿರೋಧದ ಅಲೆಗಳು ಕೂಡ ಪ್ರಭುತ್ವದ ಗೋಡೆಗೆ ಅಪ್ಪಳಿಸುತ್ತಿವೆ. ಜರ್ಮನಿಯ ನಾಝಿ ಪಡೆಯಂತೆ ಇಲ್ಲಿಯ ಚಡ್ಡಿ ಪಡೆಯು ಬುದ್ಧಿಜೀವಿಗಳನ್ನು ಗುರಿಯಾಗಿ ಇರಿಸಿಕೊಂಡು ದಾಳಿ ಆರಂಭಿಸಿದೆ. ಈ ದೇಶದ ಹೆಸರಾಂತ ಲೇಖಕರು, ಕಲಾವಿದರು, ಚಿಂತಕರು ಕತ್ತಲ ಕೋಣೆ ಸೇರುತ್ತಿದ್ದಾರೆ. ಆನಂದ್ ತೇಲ್ತುಂಬ್ಡೆ ಅವರಂತಹ ಸಾಮಾಜಿಕ ಕಳಕಳಿಯ ಚಿಂತಕರು ಬಂಧನದ ಭೀತಿ ಎದುರಿಸುತ್ತಿದ್ದಾರೆ. ನೆರವಿಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ಪ್ರತಿಭಟನೆಗಳು ದಾಖಲಾಗುತ್ತಿವೆ.
ಇಂಥ ಸನ್ನಿವೇಶದಲ್ಲಿ ಬರವಣಿಗೆಯ ಮೂಲಕ ಅರಿವಿನ ಜ್ಯೋತಿ ಬೆಳಗಿಸುವ ಕೆಲಸ ಅವಿರತವಾಗಿ ನಡೆದಿದೆ. ಇತ್ತೀಚೆಗೆ ಪತ್ರಿಕೆಗಳಿಗಿಂತ ಓದಲು ಒಳ್ಳೆಯ ಪುಸ್ತಕಗಳು ಬರುತ್ತಿವೆ. ಇತ್ತೀಚೆಗೆ ನನ್ನ ಕೈಗೆ ಸಿಕ್ಕ ಪುಸ್ತಕ ‘ಜೊಲಾಂಟಾ’. ಇದು ಜರ್ಮನಿಯ ನಾಝಿಗಳಿಂದ ಸಾವಿರಾರು ಮಕ್ಕಳನ್ನು ಬದುಕಿಸಿದ ಇರೇನಾ ಸೆಂಡ್ಲರ್ ಅವರ ಜೀವನ ಕಥನ. ಇದನ್ನು ಬರೆದವರು ಪಲ್ಲವಿ ಇಡೂರ.
ಜಗತ್ತಿನಲ್ಲಿ ಅನಾಥರಾದವರಿಗೆ, ತೊಂದರೆಗೆ ಒಳಗಾದವರಿಗೆ, ಬೀದಿಯಲ್ಲಿ ಬಿದ್ದವರಿಗೆ, ರೋಗಿಗಳಿಗೆ ನೆರವು ನೀಡುತ್ತ ಅವರಿಗಾಗಿಯೇ ತಮ್ಮ ಬದುಕನ್ನು ಮೇಣದ ಬತ್ತಿಯಂತೆ ಸುಟ್ಟುಕೊಂಡ ಮದರ್ ತೆರೇಸಾ ಅವರ ಹೆಸರನ್ನು ಕೇಳಿದ್ದೇವೆ. ಅಂಥ ಇನ್ನೊಬ್ಬ ತಾಯಿಯನ್ನು ಪಲ್ಲವಿಯವರು ಕನ್ನಡ ಓದುಗರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಪರಿಚಯ ಅನ್ನುವುದಕ್ಕಿಂತ ತಮ್ಮ ಆಪ್ತ ಬೆರವಣಿಗೆಯ ಮೂಲಕ ನಮ್ಮ ಕಣ್ಣೆದುರು ತಂದು ನಿಲ್ಲಿಸಿದ್ದಾರೆ. ಮದರ್ ತೆರೇಸಾ ಅವರು ಯಾವುದೋ ದೇಶದಲ್ಲಿ ಹುಟ್ಟಿ, ಭಾರತಕ್ಕೆ ಬಂದು ಕುಷ್ಠರೋಗಿಗಳ ಸೇವೆ ಮಾಡುತ್ತ, ಅನಾಥ ಮಕ್ಕಳಿಗೆ ಬೆಳಕಿನ ದಾರಿ ತೋರಿಸುತ್ತ ಅಮಾನವೀಯ ಜಗತ್ತಿನಲ್ಲಿ ಮನುಷ್ಯತ್ವದ ಒಂದು ಜಗತ್ತನ್ನೇ ನಿರ್ಮಿಸಿದರು. ಅದೇ ರೀತಿ ಜರ್ಮನಿಯ ನಾಝಿ ಪಡೆಯಿಂದ ನಿರಂತರ ಕಿರುಕುಳ ಅನುಭವಿಸಿ, ಎರಡೂವರೆ ಸಾವಿರ ಯಹೂದಿ ಜನಾಂಗದ ಮಕ್ಕಳನ್ನು ರಕ್ಷಿಸಿದ ಮಹಾತಾಯಿ ಇರೇನಾ ಸೆಂಡ್ಲರ್. ಪೋಲೆಂಡ್ ದೇಶದ ಇರೇನಾ ಯಹೂದಿಯರ ಮಕ್ಕಳನ್ನು ರಕ್ಷಿಸಲು ಪಟ್ಟ ಪರಿಶ್ರಮ, ಅದನ್ನು ನಿಭಾಯಿಸಿದ ರೀತಿಯನ್ನು ತಿಳಿಯಬೇಕೆಂದರೆ ಈ ಪುಸ್ತಕ ಓದಬೇಕು. ಜಗತ್ತು ಶಿಲಾಯುಗದತ್ತ ಹಿಮ್ಮುಖವಾಗಿ ಚಲಿಸುತ್ತಿರುವಾಗ, ಮನುಷ್ಯರ ನಡುವೆ ಜಾತಿಗಳ ಅಡ್ಡಗೋಡೆ ಎದ್ದು ನಿಂತಿರುವಾಗ ಇರೇನಾ ಸೆಂಡ್ಲರ್ ಅವರ ಹೋರಾಟದ ಬದುಕು ನಮ್ಮ ಕಣ್ಣು ತೆರೆಸುತ್ತದೆ.
ಮದರ್ ತೆರೇಸಾ ಅವರನ್ನು ಜಗತ್ತು ಗುರುತಿಸಿ, ನೂರಾರು ಪ್ರಶಸ್ತಿ ನೀಡಿದೆ. ಆದರೆ ಹಿಟ್ಲರ್‌ನ ನಾಝಿ ಕ್ಯಾಂಪ್‌ನಿಂದ ಎರಡೂವರೆ ಸಾವಿರ ಮಕ್ಕಳನ್ನು ಬದುಕಿಸಿದ ಇರೇನಾ ಸೆಂಡ್ಲರ್ ಎಲೆಮರೆ ಕಾಯಿಯಂತೆ ಬದುಕಿದರು. ಯಾರಿಗೂ ಗೊತ್ತಿಲ್ಲದಂತೆ ಭೂಗತವಾಗಿ ತಮ್ಮ ಪಾಡಿಗೆ ತಾವಿದ್ದರು. ಇವರಿಗೂ ಪ್ರಶಸ್ತಿಗಳು ಬಂದವು. ಆದರೆ ಆ ಪ್ರಶಸ್ತಿಗಳು ಬಂದಾಗ, ಅವರು ಬದುಕಿನ ಇಳಿಸಂಜೆಯಲ್ಲಿ ಇದ್ದರು. ಹೀಗೆ ಬದುಕಿ, 98ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ತನ್ನ ಗುರುತು ಹೇಳಿದ್ದರೆ, ನಾಝಿ ಸೈನಿಕರು ಆಕೆಯನ್ನು ಸುಮ್ಮನೆ ಬಿಡುತ್ತಿರಲಿಲ್ಲ. ವಾರ್ಸಾ ನಗರದಲ್ಲಿ ಜನಿಸಿದ ಇರೇನಾ ಸೆಂಡ್ಲರ್ ವೈದ್ಯರಾಗಿ, ರೋಗಿಗಳನ್ನು ಸೇವೆ ಮಾಡುತ್ತ ಕೊನೆಯುಸಿರೆಳೆದರು. ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ಸೇವಾ ಮನೋಭಾವ ಮೈಗೂಡಿಸಿಕೊಂಡ ಅವರು ಯಹೂದಿ ಮಕ್ಕಳ ಪ್ರಾಣ ಉಳಿಸಲು ಪಟ್ಟ ಶ್ರಮ ವರ್ಣಿಸಲು ಸಾಧ್ಯವಿಲ್ಲ. ಇರೇನಾ ಸೆಂಡ್ಲರ್ ನೆಲೆಸಿದ್ದು ಪೋಲೆಂಡ್‌ನಲ್ಲಿ. ಎರಡನೇ ಮಹಾಯುದ್ಧ ಆರಂಭಗೊಂಡಾಗ, ಹಿಟ್ಲರ್ ಈ ದೇಶವನ್ನು ಆಕ್ರಮಿಸಿಕೊಂಡ. ಆರ್ಯನ್ ಜನಾಂಗ ಶ್ರೇಷ್ಠತೆಯ ಅಗ್ರ ಪ್ರತಿಪಾದಕಾನಗಿದ್ದ ಹಿಟ್ಲರ್ ಯಹೂದಿಗಳ ಬಗ್ಗೆ ಮೈತುಂಬಾ ದ್ವೇಷ ತುಂಬಿಕೊಂಡಿದ್ದ. ಯಹೂದಿಗಳು ಭೂಮಿಯಲ್ಲಿ ಬದುಕಲು ಯೋಗ್ಯ ಅಲ್ಲದವರು ಎಂದು ಪರಿಗಣಿಸಿದ ಆತ, ಅವರು ನೆಲೆಸಿದ ಪ್ರದೇಶಕ್ಕೆ ತಡೆಗೋಡೆ, ಬೇಲಿ ನಿರ್ಮಿಸಿ ಅವರಿಗೆ ನೀರು, ವಿದ್ಯುತ್ ಹಾಗೂ ಆಹಾರ ಸಿಗದಂತೆ ಮಾಡಿದ. ಪುಟ್ಟ ಕೊಳಚೆಪ್ರದೇಶದಲ್ಲಿ ಲಕ್ಷಾಂತರ ಯಹೂದಿಗಳನ್ನು ಕೂಡಿ ಹಾಕಿದ್ದ. ಅನೇಕ ಯಹೂದಿ ಮಕ್ಕಳು ಹಸಿವಿನಿಂದ, ಕೊರೆಯುವ ಚಳಿಯಿಂದ ಒದ್ದಾಡಿ ಸತ್ತರು. ಇದನ್ನು ಕಂಡ ಇರೇನಾ ಸೆಂಡ್ಲರ್ ಎಂಬ ಯುವತಿ ಸುಮ್ಮನಿರಲಿಲ್ಲ. ಆರೋಗ್ಯ ಕಾರ್ಯಕರ್ತೆಯಾಗಿ ಜೊಲಾಂಟಾ ಎಂಬ ಬೇರೆ ಹೆಸರು ಇಟ್ಟುಕೊಂಡು ತಡೆಗೋಡೆಯೊಳಗೆ ನುಸುಳಿದ ಆಕೆ ಅಲ್ಲಿ ಕೊನೆಯುಸಿರು ಎಳೆಯುತ್ತಿದ್ದ ಹಸುಗೂಸುಗಳನ್ನು ಎತ್ತಿಕೊಂಡು ಬಂದು ಬದುಕಿಸಿದ ಕಥೆ ರೋಮಾಂಚಕಾರಿ ಆಗಿದೆ.
ಈ ಎರಡೂವರೆ ಮಕ್ಕಳ ಜೀವ ಉಳಿಸಿದ್ದು ಅಲ್ಲದೆ ನಾಮಕರಣವೂ ಮಾಡಿದ ಆಕೆಯ ಹೆಸರಿನ ದಾಖಲೆಯನ್ನು ಗಾಜಿನ ಹೂಜಿಯಲ್ಲಿ ಮುಚ್ಚಿಟ್ಟುಕೊಂಡಿದ್ದರು. ಇಂಥ ಇರೇನಾ ಮೇಲೆ ಸಂಶಯಗೊಂಡ ಹಿಟ್ಲರ್‌ನ ನಾಝಿ ಸೇನೆ ಆಕೆಯನ್ನು ಬಂಧಿಸಿ, ಚಿತ್ರಹಿಂಸೆ ನೀಡಿತು. ಆಕೆಯ ಎರಡು ಕಾಲುಗಳನ್ನು ಊನಗೊಳಿಸಲಾಯಿತು. ಆದರೂ ಕೂಡ ಯಹೂದಿ ಮಕ್ಕಳ ವಿವರಣೆ ಗುಟ್ಟನ್ನು ಆಕೆ ಬಿಟ್ಟುಕೊಡಲಿಲ್ಲ. ಕೊನೆಗೆ ಆಕೆಗೆ ಮರಣ ದಂಡನೆ ವಿಧಿಸಲಾಯಿತು. ಆಗ ಆಕೆ ಸೆರೆಮನೆ ಅಧಿಕಾರಿಗೆ ಆಮಿಷವೊಡ್ಡಿ ಒಂದಿಷ್ಟು ಕಾಸು ಕೊಟ್ಟರು. ಅಲ್ಲಿಂದ ತಪ್ಪಿಸಿಕೊಂಡು ಬಂದು ಇಪ್ಪತ್ತು ವರ್ಷ ಭೂಗತ ಜೀವನ ನಡೆಸಿದರು. 1845ರ ಮಹಾಯುದ್ಧದಲ್ಲಿ ಹಿಟ್ಲರ್ ಪಥನವಾದ ನಂತರ ಜೀವಯದಿಂದ ಪಾರಾದ ಅವರು ಪೋಲೆಂಡ್‌ನಲ್ಲಿ ಮತ್ತೆ ಸರಕಾರಿ ಕೆಲಸಕ್ಕೆ ಸೇರಿಕೊಂಡರು. ಹಿಟ್ಲರ್ ಸತ್ತ ನಂತರವೂ ತಾವು ಯಹೂದಿ ಮಕ್ಕಳನ್ನು ಬದುಕಿಸಿದ ಕಥೆಯನ್ನು ಅವರು ಯಾರಿಗೂ ಹೇಳಿಲಿಲ್ಲ.
ಸಾಮಾನ್ಯ ವ್ಯಕ್ತಿಯಂತೆ ಅನಾಮಿಕರಾಗಿ ಬದುಕಿದರು. 1990ರಲ್ಲಿ ಅಮೆರಿಕದ ನಾಲ್ವರು ವಿದ್ಯಾರ್ಥಿನಿಯರು ತಮ್ಮ ಶಾಲೆಯಲ್ಲಿ ನಡೆಯುತ್ತಿದ್ದ ಇತಿಹಾಸ ದಿನಾಚರಣೆ ಸಂದರ್ಭಕ್ಕಾಗಿ ಇತಿಹಾಸದ ಪುಟಗಳನ್ನು ತಿರುವು ಹಾಕುತ್ತಿದ್ದಾಗ, ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಅಮೆರಿಕದ ಹಳೆಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸಣ್ಣ ವರದಿಯೊಂದರ ತುಣುಕು ಇರೇನಾ ಅವರ ಕತ್ತಲ ಬದುಕಿನ ಮೇಲೆ ಹೊಸ ಬದುಕನ್ನು ಚೆಲ್ಲಿತು. ಆನಂತರ ಅವರ ಸಾಹಸದ ಜೀವನಗಾಥೆ ಜಗತ್ತಿಗೆ ಗೊತ್ತಾಯಿತು. 2007ರಲ್ಲಿ ನೊಬೆಲ್ ಪ್ರಶಸ್ತಿಗೂ ಇವರ ಹೆಸರು ಶಿಪಾರಸು ಆಗಿತ್ತು. ಇಂಥ ಅಪರೂಪದ ಮಹಿಳೆಯ ಜೀವನಕಥನವನ್ನು ಪಲ್ಲವಿಯವರು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇದು ಅನುವಾದಿತ ಕೃತಿಯಲ್ಲ. ಜಗತ್ತಿನ ಎಲ್ಲಾ ಕಡೆಯಿಂದ ಮಾಹಿತಿಯನ್ನು ಕಲೆ ಹಾಕಿ, ತಮ್ಮದೇ ಆದ ಶೈಲಿಯಲ್ಲಿ ಕನ್ನಡಿಗರಿಗೆ ನೀಡಿದ್ದಾರೆ.
ಯಹೂದಿ ಕ್ಯಾಂಪ್‌ನಲ್ಲಿ ಇರೇನಾ ಸೆಂಡ್ಲರ್ ಅವರಿಂದ ಬದುಕಿದ ಮಕ್ಕಳು ದೊಡ್ಡವರಾಗಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅವರಿಗೂ ತಮ್ಮನ್ನು ಬದುಕಿಸಿದ ತಾಯಿಯ ಬಗ್ಗೆ ಗೊತ್ತಿರಲಿಲ್ಲ. ಗೊತ್ತಾದ ನಂತರ ಅವರೆಲ್ಲ, ಈಕೆ ನೆಲೆಸಿದ್ದಲ್ಲಿಗೆ ಬಂದು ಕಣ್ಣೀರಾದರು. ನಂತರ ಅನೇಕ ಪ್ರಶಸ್ತಿಗಳು ಕೂಡ ಇವರನ್ನು ಹುಡುಕಿಕೊಂಡು ಬಂದವು. 1945ರ ಮಹಾಯುದ್ಧದ ಸಂದರ್ಭದಲ್ಲಿ ಐದು ಲಕ್ಷ ಯಹೂದಿಗಳನ್ನು ಬಂದಿಸಿದ್ದ ಹಿಟ್ಲರ್, ಅವರಿಗೆ ನಾನಾ ಚಿತ್ರಹಿಂಸೆ ನೀಡಿದ್ದ. ಈ ಬಗ್ಗೆ ಅನೇಕ ರೋಚಕ ಕಥೆಗಳು ಈಗಾಗಲೇ ಪ್ರಕಟವಾಗಿವೆ. ಆದರೆ, ಲಕ್ಷಾಂತರ ಜನರನ್ನು ಕೊಳಚೆಪ್ರದೇಶದಲ್ಲಿ ಬಂಧಿಸಲ್ಪಟ್ಟ ಕಥೆ ಈವರೆಗೆ ಯಾರಿಗೂ ಗೊತ್ತಿರಲಿಲ್ಲ. ಅಲ್ಲಿ ಜೊಲಾಂಟಾ ಎಂಬ ಹೆಸರು ಇಟ್ಟುಕೊಂಡು ಈ ತಾಯಿ ಮಾಡಿದ ಸೇವೆ ಇತ್ತೀಚೆಗೆ ಬೆಳಕಿಗೆ ಬಂತು. ಈ ಪುಸ್ತಕ ಓದುತ್ತ್ತಾ ಹೋದಂತೆ ಎದೆ ನಡುಗುತ್ತದೆ. ಅಲ್ಲಲ್ಲಿ ನಿಂತು ವಿರಮಿಸಿ ಓದದಿದ್ದರೆ, ಇದು ಅರ್ಥವಾಗುವುದಿಲ್ಲ. ಯಹೂದಿಗಳನ್ನು ಹಿಟ್ಲರ್ ಯಾಕೆ ದ್ವೇಷಿಸುತ್ತಿದ್ದ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪಲ್ಲವಿಯವರು ತಡಕಾಡಿದ್ದಾರೆ. ಆದರೆ ಹುಸಿ ದೇಶಪ್ರೇಮದ ಧರ್ಮಾಂಧತೆ, ಜನಾಂಗದ್ವೇಷದ ಅಮಲನ್ನು ತುಂಬಿಕೊಂಡವರ ಮನುಷ್ಯದ್ವೇಷಕ್ಕೆ ಕಾರಣಗಳು ಸಿಗುವುದಿಲ್ಲ.
ನಾಝಿ ಕ್ರೌರ್ಯದ ಕುರಿತು ಕನ್ನಡದಲ್ಲಿ ಪುಸ್ತಕಗಳು ಬಂದದ್ದು ತುಂಬಾ ಕಡಿಮೆ. ಅಕ್ಕಲಕೋಟೆಯ ಗಿರೀಶ್ ಜಕಾಪುರೆ ಅವರು ನಾಝಿ ನರಮೇಧ ಪುಸ್ತಕದಲ್ಲಿ ಈ ಕ್ರೌರ್ಯವನ್ನು ಸಾಕಷ್ಟು ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದಾರೆ. ಈಗ ಜೊಲಾಂಟಾ ಜೀವನ ಕಥನ ನೀಡಿದ ಪಲ್ಲವಿಯರು ಕ್ರೌರ್ಯದ ಇನ್ನೊಂದು ಸಂಗತಿಯ ಮೇಲೆ ಬೆಳಕು ಚೆಲ್ಲಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಈ ರೀತಿಯ ಪುಸ್ತಕಗಳು ಬಂದಿರುವುದು ಅಪರೂಪ. ಮಂಡ್ಯದ ಸಂಕಥನದ ರಾಜೇಂದ್ರ ಪ್ರಸಾದ್ ತುಂಬಾ ಆಸಕ್ತಿ ವಹಿಸಿ ಈ ಕೃತಿಯನ್ನು ಪ್ರಕಟಿಸಿ ಕನ್ನಡಿಗರಿಗೆ ನೀಡಿದ್ದಾರೆ. ಇಡೀ ಪುಸ್ತಕ ಓದಿದ ನಂತರ ಹಿಟ್ಲರ್ ಸತ್ತ ನಂತರವೂ ಕಮ್ಯುನಿಸ್ಟ್ ಆಡಳಿತವಿದ್ದ ಪೋಲೆಂಡ್‌ನಲ್ಲಿ ಇರೇನಾ ಸೆಂಡ್ಲರ್ 60 ವರ್ಷ ಯಾಕೆ ಭೂಗತ ಜೀವನ ನಡೆಸಿದರು ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕಮ್ಯುನಿಸ್ಟರು ಕೂಡ ಹಿಟ್ಲರ್‌ನ ವಿರುದ್ಧ ಹೋರಾಡಿದರು. ಅಂಥ ದೇಶದಲ್ಲಿ ಇರೇನಾ ಭೂಗತರಾಗಿ ಇರುವ ಆವಶ್ಯಕತೆ ಏನಿತ್ತು. ಬಹುಶಃ ಆಕೆ ತಾನು ಮಾಡಿದ ಸೇವೆಗೆ ಪ್ರಚಾರ ಬಯಸಿರಲಿಲ್ಲ ಎಂದು ಕಾಣುತ್ತದೆ. ಆದರೂ ಕೊನೆಗೆ ಜಗತ್ತು ಆಕೆಯನ್ನು ಗುರುತಿಸಿತು. ಭಾರತದ ಇಂದಿನ ಸಂದರ್ಭದಲ್ಲಿ ಎಲ್ಲರೂ ಓದಬೇಕಾದ ಬಹಳ ಅತ್ಯುತ್ತಮ ಪುಸ್ತಕ ಇದು.