ದೇಶ ಈಗ ಮತ್ತೆ ಮತ್ತೆ ಮಾತನಾಡಬೇಕಿದೆ

Update: 2019-02-03 18:35 GMT

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬುದ್ಧಿಜೀವಿಗಳನ್ನು, ಚಿಂತಕರನ್ನು, ಲೇಖಕರನ್ನು ಗುರಿಯಾಗಿರಿಸಿಕೊಂಡು ಅವರನ್ನು ಮುಗಿಸುವ ಕೆಲಸ ಎರಡು ವಿಧಗಳಲ್ಲಿ ನಡೆದಿದೆ. ಒಂದೆಡೆ, ಬಡ ಹುಡುಗರಿಗೆ ಕೋಮು ಉನ್ಮಾದ ಕೆರಳಿಸಿ ಅವರ ಮೂಲಕ ನರೇಂದ್ರ ದಾಭೋಳ್ಕರ್, ಗೋವಿಂದ್ ಪನ್ಸಾರೆ, ಡಾ. ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಮುಗಿಸಿದರು. ಮತ್ತೊಂದೆಡೆ, ಪ್ರಭುತ್ವದ ಮೂಲಕ ಪೊಲೀಸರನ್ನು ಬಳಸಿಕೊಂಡು ಚಿಂತಕರನ್ನು ಬಂಧಿಸುವ ಕೆಲಸ ಅವ್ಯಾಹತವಾಗಿ ನಡೆದಿದೆ.


ದೆೀಶದಲ್ಲಿ ಒಂದೆಡೆ ಮತಾಂಧತೆ ವಿಷದಂತೆ ಹರಡುತ್ತಿದೆ. ಇನ್ನೊಂದೆಡೆ ಮತಾಂಧತೆಯನ್ನು ಪ್ರೋತ್ಸಾಹಿಸುತ್ತಿರುವ ಆಳುವ ವರ್ಗ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೆ ತಂದಿದೆ. ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿಯಲ್ಲಿ ಜೆಪಿ ಚಳವಳಿ ಜೊತೆ ಸೇರಿದ ಕೆಲ ಪ್ರತಿಪಕ್ಷಗಳು ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿದ್ದವು. ಆದರೆ ಈ ಬಾರಿಯ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ದಲಿತ ಮತ್ತು ಪ್ರಗತಿಪರ ಚಿಂತಕರು, ಆದಿವಾಸಿಗಳ ಪರ ಹೋರಾಡುವ ನ್ಯಾಯವಾದಿಗಳು ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶುಕ್ರವಾರ ಬೆಳಗಿನ ಜಾವ 3:30ಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದ ದಲಿತ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಅದರಲ್ಲೂ ವಿಶೇಷವಾಗಿ ಅಂಬೇಡ್ಕರ್ ಸಾಹಿತ್ಯವನ್ನು ಹೊಸ ಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆನಂದ್ ತೇಲ್ತುಂಬ್ಡೆ ಅವರನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ.

ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡಿದ್ದರೂ ಕೂಡ ಅದರ ಆದೇಶವನ್ನು ಧಿಕ್ಕರಿಸಿ, ಆ ರಾಜ್ಯದ ಬಿಜೆಪಿ ಸರಕಾರದ ಆಣತಿಯಂತೆ ಈ ಬಂಧನ ನಡೆದಿದೆ. ಭೀಮಾ-ಕೋರೆಗಾಂವ್ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಈಗಾಗಲೇ ದಲಿತಪರ ಚಿಂತಕರನ್ನು, ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಗಲಭೆಗೆ ಪ್ರಚೋದಿಸಿದ ಸಂಜಯ್ ಬಿಢೆಯಂತಹ ಕೋಮು ಪ್ರಚೋದಕನನ್ನು ಬಿಡುಗಡೆ ಮಾಡಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬುದ್ಧಿಜೀವಿಗಳನ್ನು, ಚಿಂತಕರನ್ನು, ಲೇಖಕರನ್ನು ಗುರಿಯಾಗಿರಿಸಿಕೊಂಡು ಅವರನ್ನು ಮುಗಿಸುವ ಕೆಲಸ ಎರಡು ವಿಧಗಳಲ್ಲಿ ನಡೆದಿದೆ. ಒಂದೆಡೆ, ಬಡ ಹುಡುಗರಿಗೆ ಕೋಮು ಉನ್ಮಾದ ಕೆರಳಿಸಿ ಅವರ ಮೂಲಕ ನರೇಂದ್ರ ದಾಭೋಳ್ಕರ್, ಗೋವಿಂದ್ ಪನ್ಸಾರೆ, ಡಾ. ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಮುಗಿಸಿದರು.

ಮತ್ತೊಂದೆಡೆ, ಪ್ರಭುತ್ವದ ಮೂಲಕ ಪೊಲೀಸರನ್ನು ಬಳಸಿಕೊಂಡು ಚಿಂತಕರನ್ನು ಬಂಧಿಸುವ ಕೆಲಸ ಅವ್ಯಾಹತವಾಗಿ ನಡೆದಿದೆ. ಕೆಲ ದಿನಗಳ ಹಿಂದೆ ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಮತ್ತು ಬಿಜೆಪಿ ಕಾರ್ಯದರ್ಶಿ ರಾಮ ಮಾಧವ್ ಅವರು ಬುದ್ಧಿಜೀವಿಗಳ ಮೇಲೆ ಕೆಂಡಕಾರುತ್ತ ಲೇಖಕರು ಮತ್ತು ಕಲಾವಿದರಿಂದ ಈ ದೇಶಕ್ಕೆ ಗಂಡಾಂತರ ಎದುರಾಗಿದೆ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಅವರು ಹೇಳಿಕೆ ಕೊಟ್ಟ ಕೆಲವೇ ದಿನಗಳಲ್ಲಿ ಪೊಲೀಸರು ಚಿಂತಕರನ್ನು ಹುಡುಕಿ, ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಬಂಧಿಸುತ್ತಿದ್ದಾರೆ. ಒಂದು ಕಾಲದಲ್ಲಿ ಇಟಲಿ ಮತ್ತು ಜರ್ಮನಿಯಲ್ಲಿ ಮುಸಲೋನಿ ಮತ್ತು ಹಿಟ್ಲರ್ ಇದೇ ರೀತಿ ಬುದ್ಧಿಜೀವಿಗಳನ್ನು ಮತ್ತು ಸಾಹಿತಿಗಳನ್ನು ಬಂಧಿಸಿ ಕತ್ತಲ ಕೋಣೆಗೆ ತಳ್ಳುತ್ತಿದ್ದರು. 1933ರಲ್ಲಿ ಇಟಲಿಯಲ್ಲಿ ಮುಸಲೋನಿಯ ಪ್ಯಾಶಿಸ್ಟ್ ಪಕ್ಷ ಇದೇ ರೀತಿ ಚಿಂತಕರ ನರ ಬೇಟೆಯಾಡುತ್ತಿತ್ತು.ಆಂಟೋನಿಯೊ ಗ್ರಾಮ್ಷಿರಂತಹ ಚಿಂತಕರು ಪ್ಯಾಶಿಸ್ಟರ ಜೈಲುಗಳಲ್ಲಿ ಕೊನೆಯುಸಿರೆಳೆದರು.

ರೋಸಾ ಲಕ್ಸಂಬರ್ಗ್‌ರಂತಹ ಹೋರಾಟಗಾರ್ತಿ ಪ್ಯಾಶಿಸ್ಟರ ಗುಂಡಿಗೆ ಬಲಿಯಾದರು. ಭಾರತದ ಆರೆಸ್ಸೆಸ್ ಸಂಘಟನೆಯ ಗುರು ಗೋಳ್ವಾಲ್ಕರ್‌ಗೆ ಈ ಮುಸಲೋನಿ, ಹಿಟ್ಲರ್‌ಗಳೇ ಸ್ಫೂರ್ತಿಯ ಸೆಲೆ. ಈಗ ಅಧಿಕಾರದಲ್ಲಿರುವ ಕೇಂದ್ರದ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರದ ಫಡ್ನವೀಸ್ ಆರೆಸ್ಸೆಸ್ ಸ್ವಯಂ-ಸೇವಕರು. ಇವರು ತಮ್ಮ ಗುರುವಿನಿಂದ ಪ್ರೇರಣೆಗೊಂಡು ಈ ದಮನ ಕಾಂಡ ನಡೆಸಿದ್ದಾರೆ. ಈ ದಮನ ಕಾಂಡದ ವಿರುದ್ಧ ನಿರೀಕ್ಷಿತ ಪ್ರತಿರೋಧ ದೇಶದಲ್ಲಿ ಕಂಡು ಬರುತ್ತಿಲ್ಲ. ಯುವ ಸಮೂಹದಲ್ಲೇ ಇದನ್ನು ಬೆಂಬಲಿಸುವ ಪಡೆಯೊಂದನ್ನು ಪ್ಯಾಶಿಸ್ಟರು ನಿರ್ಮಿಸಿದ್ದಾರೆ. ಪೊಲೀಸ್ ಇಲಾಖೆ, ನ್ಯಾಯಾಂಗ ಮತ್ತು ಎಲ್ಲೆಡೆ ಅತ್ಯಂತ ವ್ಯವಸ್ಥಿತವಾಗಿ ಸಂಘ ಪರಿವಾರದ ಕಾರ್ಯಕರ್ತರು ಸೇರಿಕೊಂಡಿರುವುದರಿಂದ ಈ ದಮನ ಕಾಂಡ ನಿರಾತಂಕವಾಗಿ ನಡೆದಿದೆ.

ನ್ಯಾಯಾಲಯಗಳಲ್ಲೂ ಮಾನವ ಹಕ್ಕುಗಳ ಹೋರಾಟಗಾರರಿಗೆ ರಕ್ಷಣೆ ಸಿಗದಂತಹ ವಾತಾವರಣ ನಿರ್ಮಾಣವಾಗಿದೆ. ದಲಿತ, ದಮನಿತ, ಮಹಿಳಾ ಸಮುದಾಯಗಳ ಪಾಲಿಗೆ ಮತ್ತು ಅಲ್ಪಸಂಖ್ಯಾತರಿಗೆ ಭರವಸೆ ಇಲ್ಲದಂತಹ ದಿನಗಳು ಬಂದಿವೆ. ಈ ವ್ಯವಸ್ಥೆಯ ಚೌಕಟ್ಟಿನಲ್ಲಿ ನ್ಯಾಯ ಸಿಗುವ ವಿಶ್ವಾಸ ಉಳಿದಿಲ್ಲ. ಇಂಥ ಸನ್ನಿವೇಶದಲ್ಲಿ ಈ ದೇಶದ ಆರೋಗ್ಯಪೂರ್ಣ ಮನಸ್ಸುಗಳು ಮಾತನಾಡಬೇಕಿದೆ. ಮತಾಂಧತೆ ಮತ್ತು ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಬೇಕಿದೆ. ದೇಶಕ್ಕೆ ಸ್ವಾತಂತ್ರ ಬಂದಾಗ, ಇಂಥದ್ದೇ ಆತಂಕದ ವಾತಾವರಣ ಉಂಟಾಗಿತ್ತು. ದೇಶದ ಗಡಿ ಪ್ರದೇಶದಲ್ಲಿ ಕೋಮು ಹಿಂಸಾಚಾರ ನಡೆಯಿತು. ಅನೇಕ ಕಡೆ ಪರಿಸ್ಥಿತಿ ಕೈ ಮೀರಿ ಹೋಯಿತು. ಇಂಥ ಸಂದರ್ಭದಲ್ಲಿ ನಮ್ಮ ರಾಜಕಾರಣಿಗಳು ದಿಲ್ಲಿಯಲ್ಲಿ ಅಧಿಕಾರ ವಹಿಸಿಕೊಳ್ಳುವ ಸಂಭ್ರಮದಲ್ಲಿದ್ದರೆ, ಮಹಾತ್ಮಾ ಗಾಂಧೀಜಿ ಶಾಂತಿಗಾಗಿ ನಿರಶನ ನಡೆಸಿದ್ದರು. ಕೋಮು ಹಿಂಸಾಚಾರ ನಡೆದ ನೌಖಾಲಿಗೆ ಪಾದಯಾತ್ರೆ ಹೊರಟರು. ಗಾಂಧೀಜಿ ಅಲ್ಲಿ ಬರಬಾರದೆಂದು ದಂಗೆಕೋರರು ದಾರಿಯಲ್ಲಿ ಕಲ್ಲು, ಮುಳ್ಳು ಹಾಕಿದರು. ಆದರೆ ಇದಕ್ಕೆ ಜಗ್ಗದ ಗಾಂಧೀಜಿ ಕಲ್ಲು, ಮುಳ್ಳು ತುಳಿಯುತ್ತ, ಕೋಲೂರುತ್ತ ನೌಖಾಲಿಗೆ ಹೋದರು. ಆಗ ಕೋಮು ದ್ವೇಷ ತಣ್ಣಗಾಯಿತು.

 ಈಗಲೂ ದೇಶದಲ್ಲಿ ಕೋಮು ದ್ವೇಷ ಹೊಗೆಯಾಡುತ್ತಿದೆ. ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕರ ಕಗ್ಗೊಲೆ ನಡೆದಿವೆ. ಯುವಕರ ಮೆದುಳಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕೋಮು ದ್ವೇಷ ತುಂಬಲಾಗಿದೆ. ಈ ದೇಶದ ಪ್ರತಿ ಹಳ್ಳಿಗಳಲ್ಲೂ ಸಂದೇಹದ ಗೋಡೆ ಎದ್ದು ನಿಲ್ಲುತ್ತಿದೆ. ಇಂಥ ಸಂದಭರ್ದಲ್ಲಿ ಸೌಹಾರ್ದದ ತೇರು ಎಳೆಯುತ್ತಿದ್ದ ತೇಲ್ತುಂಬ್ಡೆ ಅಂಥವರನ್ನು ಜೈಲಿಗೆ ತಳ್ಳುತ್ತಿದೆ. ಒಟ್ಟಾರೆ, ದೇಶವ್ಯಾಪಿ ಒಂದು ವಿಧದ ಆತಂಕಕಾರಿ ವೌನ ಆವರಿಸಿದೆ. ಮದ್ಯಪಾನದ ವಿರುದ್ಧ ಸಾಣೇಹಳ್ಳಿ ಮಠದ ಶ್ರೀಗಳು ಇತ್ತೀಚೆಗೆ ಗಾಂಧಿವಾದಿ ಪ್ರಸನ್ನ ಅವರನ್ನು ಕರೆದುಕೊಂಡು ಬೆಂಗಳೂರಿಗೆ ಪಾದಯಾತ್ರೆ ನಡೆಸಿದರು. ಇದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ದಲಿತ ಚಿಂತಕ, ಕ್ರಾಂತಿಕಾರಿ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ನಮ್ಮ ಯುವಕರಿಗೆ ಮದ್ಯಪಾನಕ್ಕಿಂತ ಮತಾಂಧತೆ ಹೆಚ್ಚು ಅಪಾಯಕಾರಿಯಾಗಿದೆ. ಮತಾಂಧತೆ ವಿರುದ್ಧ ಪಾದಯಾತ್ರೆ ಮಾಡಿ ಎಂದು ಸಾಣೇಹಳ್ಳಿ ಶ್ರೀಗಳಿಗೆ ಮನವಿ ಮಾಡಿಕೊಂಡರು. ನಿಜಕ್ಕೂ ಇದು ದೇಶಕ್ಕೆ ಅತ್ಯಂತ ಸಂಕಟದ ಕಾಲ.

ತುಂಬಾ ತ್ಯಾಗ, ಬಲಿದಾನ ಮಾಡಿ ಗಳಿಸಿದ ಸ್ವಾತಂತ್ರ ಮತ್ತು ನಾವು ನಂತರ ಕಟ್ಟಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಬಂದಿದೆ. ಸರ್ವರಿಗೂ ಸಮಾನ ಅವಕಾಶ ನೀಡಿದ ಸಂವಿಧಾನವು ಅಪಾಯದಲ್ಲಿದೆ. ಇಂಥ ಸಂದರ್ಭದಲ್ಲಿ ಮನುಷ್ಯರನ್ನು ಪ್ರೀತಿಸುವ ಮಠಾಧೀಶರು, ಕಲಾವಿದರು, ಚಿಂತಕರು, ಪ್ರಜ್ಞಾವಂತರು ಮಾತನಾಡಬೇಕಿದೆ. ಇಡೀ ದೇಶ ಒಂದಾಗಿ, ದಮನ ಕಾಂಡದ ವಿರುದ್ಧ ಧ್ವನಿ ಎತ್ತಬೇಕಿದೆ. ಈಗ ನಾವು ಧ್ವನಿ ಎತ್ತದಿದ್ದರೆ, ದೇಶ ಒಡೆದು ಚೂರು ಚೂರಾಗುತ್ತದೆ. ಮತಾಂಧರ ಕೈಗೆ ಸಿಲುಕಿ, ಸ್ವತಂತ್ರ ಭಾರತದ ಸಾಧನೆಗಳು ನುಚ್ಚುನೂರಾಗಿ ಹೋಗುತ್ತವೆ. ಮನುಷ್ಯರ ನಡುವೆ ಭೇದ ಹುಟ್ಟಿಸುವ ಮನುವಾದಿ, ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ಹೊರ ದಬ್ಬುವುದು ಮಾತ್ರವಲ್ಲ, ಅವರು ಮತ್ತೆ ತಲೆಯೆತ್ತದಂತೆ ಮಾಡಲು ಸಂಕಲ್ಪ ತೊಡಬೇಕಿದೆ. ಇದು ಗೋಡ್ಸೆ, ಸಾವರ್ಕರ್ ಭಾರತವಲ್ಲ, ಇದು ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಭಾರತ ಎಂದು ಸಾರಿ ಸಾರಿ ಹೇಳಬೇಕಿದೆ. ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News