ನವಕರ್ನಾಟಕದ ಶಿಲ್ಪಿ ರಾಜಾರಾಮ್...

Update: 2019-02-24 18:40 GMT

ರಾಜಾರಾಮ್ ಅವರಿಗೆ ಪುಸ್ತಕೋದ್ಯಮದ ಪರಿಚಯವಿರಲಿಲ್ಲ. ಅವರು ಮೂಲತಃ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತ. ಮಂಗಳೂರಿನಲ್ಲಿ ಸಿಪಿಐನ ಯುವ ಸಂಘಟನೆ, ಎಐವೈಎಫ್‌ನಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ರಾಜಾರಾಮ್ ಅವರನ್ನು, ಅವರ ಸಾಮರ್ಥ್ಯವನ್ನು ಗುರುತಿಸಿದ ಕಮ್ಯುನಿಸ್ಟ್ ನೇತಾರ ಬಿ.ವಿ. ಕಕ್ಕಿಲಾಯ ಬೆಂಗಳೂರಿಗೆ ಕರೆದುಕೊಂಡು ಬಂದರು. ಕಳೆದ ವಾರ ಒಂದು ಅಪರೂಪದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿತ್ತು. ಅದು ನವಕರ್ನಾಟಕ ಪ್ರಕಾಶನ ಏರ್ಪಡಿಸಿದ್ದ ಕಾರ್ಯಕ್ರಮ. ನವಕರ್ನಾಟಕವನ್ನು ಕಟ್ಟಿ, ಬೆಳೆಸಿದ ಆರ್.ಎಸ್.ರಾಜಾರಾಮ್ ಅಭಿನಂದನಾ ಸಮಾರಂಭ ಮತ್ತು ಬಹುಮುಖ ಪ್ರತಿಭೆಯ ಕುಮಾರ ವೆಂಕಣ್ಣ ಅವರ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಇವೆರಡಕ್ಕೂ ಆಸರೆಯಾಗಿದ್ದು ಒಂದೇ ವೇದಿಕೆ.

ಬೆಂಗಳೂರಿನ ಪರಾಗ್ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ನವಕರ್ನಾಟಕದ ರಮೇಶ ಉಡುಪ ಮತ್ತು ಸಿದ್ಧನಗೌಡ ಪಾಟೀಲರು ಒತ್ತಾಯಿಸಿದ್ದರು. ಅಲ್ಲಿ ಹೋಗಿ ಬಂದ ನಂತರ ಅದಕ್ಕೆ ಹೋಗಿರದಿದ್ದರೆ, ಏನೋ ಮಿಸ್ ಮಾಡಿಕೊಳ್ಳುತ್ತಿದ್ದೆ ಎಂಬ ಭಾವನೆ ಉಂಟಾಯಿತು. ಈ ಅಭಿನಂದನಾ ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿ ಮತ್ತು ಡಾ. ವಿಜಯಮ್ಮ ಇದ್ದರು. ವೇದಿಕೆಯ ಮುಂಭಾಗದಲ್ಲಿ ಖ್ಯಾತ ಚಿಂತಕ ಡಾ. ಜಿ.ರಾಮಕೃಷ್ಣ, ಡಾ. ಬಾಲಚಂದ್ರರಾವ್ ಮುಂತಾದ ಗಣ್ಯರು ಭಾಗವಹಿಸಿದ್ದರು. ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು.
ಆರ್.ಎಸ್. ರಾಜಾರಾಮ್ ಕನ್ನಡದ ಸಾರಸ್ವತ ಲೋಕಕ್ಕೆಲ್ಲ ಗೊತ್ತು. ಅವರು ಕಳೆದ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ನವಕರ್ನಾಟದಂತಹ ದೊಡ್ಡ ಪ್ರಕಾಶನ ಸಂಸ್ಥೆ ಕಟ್ಟಿ ಬೆಳೆಸಿದವರು. ಇನ್ನು ವೆಂಕಣ್ಣ ಎಂದರೆ ಇಂದಿನ ಪೀಳಿಗೆಯವರಿಗೆ ಗೊತ್ತಿಲ್ಲ. ನಾನು 70ರ ದಶಕದಲ್ಲಿ ಬೆಂಗಳೂರಿಗೆ ಬಂದಾಗ, ಸಾಹಿತಿ ನಿರಂಜನರ ಮನೆಯಲ್ಲಿ ಮತ್ತು ಜನಪ್ರಗತಿ ಕಚೇರಿಯಲ್ಲಿ ಒಂದೆರಡು ಬಾರಿ ಭೇಟಿಯಾಗಿದ್ದೆ.

ಆರ್.ಎಸ್. ರಾಜಾರಾಮ್ ಅವರನ್ನು ನಾನು ಮೊದಲು ಭೇಟಿಯಾಗಿದ್ದು 1972ರಲ್ಲಿ. ಆಗ ನವಕರ್ನಾಟಕ ಇನ್ನೂ ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆದಿರಲಿಲ್ಲ. ಬೆಂಗಳೂರಿನ ಕೆಂಪೇಗೌಡ ರಸ್ತೆಯ ಸರ್ಪಭೂಷಣ ಮಠದ ಆವರಣದ ಮುಂಭಾಗದಲ್ಲಿ ಪುಟ್ಟ ಅಂಗಡಿಯಲ್ಲಿ ನವಕರ್ನಾಟಕ ಪ್ರಕಾಶನದ ಪುಟ್ಟ ಮಳಿಗೆಯಿತ್ತು. ಆಗ ನವಕರ್ನಾಟಕ ಮಳಿಗೆಯಲ್ಲಿ ಸೋವಿಯತ್ ರಶ್ಯದಿಂದ ಬರುತ್ತಿದ್ದ ಮಾರ್ಕ್ಸ್‌ವಾದಿ ಮತ್ತು ಲೆನಿನ್‌ವಾದಿ ಪುಸ್ತಕ ಧಾರಳವಾಗಿ ಸಿಗುತ್ತಿತ್ತು. ಆಗ ಬೆಂಗಳೂರು ಇಷ್ಟು ಬೆಳೆದಿರಲಿಲ್ಲ. ಆಗ ಪುಸ್ತಕ ಮಳಿಗೆಗಳು ತುಂಬಾ ಕಡಿಮೆ. ನವಕರ್ನಾಟಕ ಪುಸ್ತಕ ಮಳಿಗೆಗೆ ಕೆಲ ವಿಚಾರವಾದಿಗಳು ಆಗಾಗ ಭೇಟಿ ಕೊಡುತ್ತಿದ್ದರು. ಈಗ ವಿಧಾನಸಭಾ ಅಧ್ಯಕ್ಷರಾಗಿರುವ ರಮೇಶ್ ಕುಮಾರ್ ಅವರು ಆಗಾಗ ಮಳಿಗೆಗೆ ಬರುತ್ತಿದ್ದರು. ಆಗಿನ ಮುಖ್ಯಮತ್ರಿ ದೇವರಾಜ ಅರಸು ತಮಗೆ ಬೇಕಾದ ಮಾರ್ಕ್ಸ್‌ವಾದಿ ಪುಸ್ತಕಗಳನ್ನು ತರಿಸಿಕೊಳ್ಳುತ್ತಿದ್ದರು.

ಇಂಥ ಪುಟ್ಟ ಅಂಗಡಿಯಲ್ಲಿ ರಾಜಾರಾಮ್ ಭೇಟಿಯಾಗಿದ್ದರು. ಹಿರಿಯ ಮಾರ್ಕ್ಸ್‌ವಾದಿ ಚಿಂತಕ ಎಸ್.ಆರ್. ಭಟ್ ಸಹಾಯಕರಾಗಿ ಅಲ್ಲಿ ಕೆಲಸ ಮಾಡುತ್ತಿದ್ದರು. ಅದಮ್ಯ ಶ್ರಮಜೀವಿಯಾದ ರಾಜಾರಾಮ್ ಅವರ ಸಾಹಸವನ್ನು ಅಂದೇ ಗುರುತಿಸಿದ್ದ ನಿರಂಜನ ಅವರು, ರಾಜಾರಾಮ್ ಹುಲಿಯ ಗವಿ ಹೊಕ್ಕು ಸುರಕ್ಷಿತವಾಗಿ ವಾಪಸ್ ಬರಬಲ್ಲರು ಎಂದು ವರ್ಣಿಸುತ್ತಿದ್ದರು. ಅಂತೆಯೇ ಕೇವಲ ಎಡಪಂಥೀಯರು ಮತ್ತು ಪ್ರಗತಿಪರರ ಪುಸ್ತಕ ಮಳಿಗೆಯಾಗಿದ್ದ ನವಕರ್ನಾಟಕವನ್ನು ಕರ್ನಾಟಕದ ದೊಡ್ಡ ಪ್ರಕಾಶನ ಸಂಸ್ಥೆಯಾಗಿ ಬೆಳೆಸಿದ್ದರಲ್ಲಿ ರಾಜಾರಾಮ್ ಪ್ರಮುಖ ಪಾತ್ರ ವಹಿಸಿದ್ದಾರೆ.

ರಾಜಾರಾಮ್ ಅವರಿಗೆ ಪುಸ್ತಕೋದ್ಯಮದ ಪರಿಚಯವಿರಲಿಲ್ಲ. ಅವರು ಮೂಲತಃ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತ. ಮಂಗಳೂರಿನಲ್ಲಿ ಸಿಪಿಐನ ಯುವ ಸಂಘಟನೆ, ಎಐವೈಎಫ್‌ನಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ರಾಜಾರಾಮ್ ಅವರನ್ನು, ಅವರ ಸಾಮರ್ಥ್ಯವನ್ನು ಗುರುತಿಸಿದ ಕಮ್ಯುನಿಸ್ಟ್ ನೇತಾರ ಬಿ.ವಿ. ಕಕ್ಕಿಲಾಯ ಬೆಂಗಳೂರಿಗೆ ಕರೆದುಕೊಂಡು ಬಂದರು. ನವಕರ್ನಾಟಕ ಪ್ರಕಾಶನದ ಹೊರೆಯನ್ನು ಅವರ ಹೆಗಲ ಮೇಲೆ ಹಾಕಿದರು. ತನ್ನ ಹೆಗಲ ಮೇಲೆ ಹಾಕಿದ ಈ ಹೊಣೆಯನ್ನು ರಾಜಾರಾಮ್ ಯಶಸ್ವಿಯಾಗಿ ನಿಭಾಯಿಸಿದರು. ಅಂತಲೇ 60ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ನವಕರ್ನಾಟಕ 5,296 ಪುಸ್ತಕಗಳನ್ನು ಪ್ರಕಟಿಸಿದೆ. ಹೊಸತು ಎಂಬ ವೈಚಾರಿಕ ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಮೈಸೂರು, ಕಲಬುರಗಿ ಮತ್ತು ಮಂಗಳೂರಿನಲ್ಲಿ ಪುಸ್ತಕ ಮಳಿಗೆಗಳನ್ನು ಹೊಂದಿದೆ. ಧಾರವಾಡ, ದಾವಣಗೆರೆ, ಶಿವಮೊಗ್ಗ ಮುಂತಾದ ಕಡೆ ಸಂಚಾರಿ ಪುಸ್ತಕ ಮಳಿಗೆಗಳಿವೆ. ಈಗ ನವಕರ್ನಾಟಕ ಬರೀ ರಾಜಕೀಯ ಪ್ರಕಾಶನವಾಗಿ ಉಳಿದಿಲ್ಲ. ವಿಜ್ಞಾನ, ಕಲೆ, ಸಾಹಿತ್ಯ, ಮಕ್ಕಳ ಸಾಹಿತ್ಯ, ಗಣಿತಶಾಸ್ತ್ರ, ಭೂಗೋಳ, ಇತಿಹಾಸ ಹೀಗೆ ಹಲವಾರು ವಿಷಯಗಳ ಬಗ್ಗೆ ಪುಸ್ತಕಗಳನ್ನು ಬರೆಸಿ, ಪ್ರಕಟಿಸುತ್ತಿದೆ. ಅನೇಕ ಹೊಸ ಬರಹಗಾರರು ನವಕರ್ನಾಟಕದ ಮೂಲಕ ಬೆಳಕಿಗೆ ಬಂದಿದ್ದಾರೆ.

ನವಕರ್ನಾಟಕದ ಪುಸ್ತಕಗಳು ಅನೇಕ ಶಾಲಾಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಗಿವೆ. ರಾಜಕೀಯ ಭಿನ್ನಾಭಿಪ್ರಾಯ ಇದ್ದವರೂ ಕೂಡ ನವಕರ್ನಾಟಕ ಪುಸ್ತಕ ಮಳಿಗೆಗೆ ಬಂದು ಪುಸ್ತಕ ಖರೀದಿಸುತ್ತಾರೆ. ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಸುರೆಶ್ ಕುಮಾರ್ ಆಗಾಗ ಮಳಿಗೆಗೆ ಭೇಟಿ ನೀಡಿ, ತಮಗೆ ಬೇಕಾದ ಪುಸ್ತಕ ಖರೀದಿಸುತ್ತಾರೆ. ಹಾಗೆಂದು ನವಕರ್ನಾಟಕವು ಸೈದ್ಧಾಂತಿಕ ವಿಷಯದಲ್ಲಿ ರಾಜಿ ಮಾಡಿಕೊಂಡಿಲ್ಲ. ಕೋಮುವಾದದ ಬಗ್ಗೆ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದು ನವಕರ್ನಾಟಕ. ವಿಶ್ವ ಕಥಾ ಕೋಶ ನವಕರ್ನಾಟಕದ ಹೆಮ್ಮೆಯ ಕೊಡುಗೆ. ನಿರಂಜನರ ಸಂಪಾದಕತ್ವದಲ್ಲಿ ಪ್ರಕಟವಾದ ಜಗತ್ತಿನ ಎಲ್ಲಾ ದೇಶಗಳ ಅಮೂಲ್ಯ ಕಥೆಗಳ ಪುಸ್ತಕಗಳು ಕನ್ನಡಿಗರ ಮನಸೊರೆಗೈದವು. ಈ ಯೋಜನೆ ರೂಪಿಸಿದವರು ಕೂಡ ಆರ್.ಎಸ್.ರಾಜಾರಾಮ್. 80ರ ದಶಕದಲ್ಲಿ ಪ್ರಕಟವಾದ ಈ ಕಥಾಕೋಶದ ಸಂಪುಟಗಳು ಮತ್ತೆ ಬೆಳಕಿಗೆ ಬಂದಿದ್ದು ಮೂರು ವರ್ಷಗಳ ಹಿಂದೆ. ಕಾರ್ಯಕ್ರಮವೊಂದರಲ್ಲಿ ಇವುಗಳನ್ನು ಮರುಪ್ರಕಟಿಸಬಹುದೇ ಎಂದು ಸಭಿಕರೊಬ್ಬರು ಕೇಳಿದಾಗ, ನವಕರ್ನಾಟಕ ಆಡಳಿತ ನಿರ್ದೇಶಕ ರಾಜಾರಾಮ್ ಅವರು ಯಾರಾದರೂ ಸಹಾಯ ಮಾಡಿದರೆ ಮರುಪ್ರಕಟಿಸಬಹುದು ಎಂದು ಹೇಳಿದರು. ಆಗ ಸಭೆಯಲ್ಲಿದ್ದ ಇನ್ಫೋಸಿಸ್‌ನ ಸುಧಾಮೂರ್ತಿಯವರು ವಿಶ್ವಕಥಾ ಕೋಶದ ಮರುಪ್ರಕಟಣೆಗೆ ನೆರವಾಗುವುದಾಗಿ ಹೇಳಿದರು. ಹೀಗೆ ಅವು ಮರುಪ್ರಕಟಣೆಗೊಂಡು ಮಾರಾಟವಾದವು.

ಇಂತಹ ಮಹಾ ಪರಾಕ್ರಮಿ, ಪರಿಶ್ರಮ ಜೀವಿ ರಾಜಾರಾಮ್ ಕಳೆದ ವರ್ಷ ನವಕರ್ನಾಟಕದ ಹೊಣೆಯನ್ನು ಸಂಗಾತಿ ಸಿದ್ಧನಗೌಡ ಪಾಟೀಲ ಮತ್ತು ರಮೇಶ್ ಅವರ ಹೆಗಲಿಗೆ ಹೊರಿಸಿದರು. ವಯೋಸಹಜವಾದ ಅಸ್ವಸ್ಥದಿಂದಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೂ ನವಕರ್ನಾಟಕದ ಬೆಳವಣಿಗೆಯನ್ನು ಗಮನಿಸುತ್ತ ಇರುತ್ತಾರೆ. ನವಕರ್ನಾಟಕ ಬೆಳೆಸಿದ್ದು ರಾಜಾರಾಮ್‌ರಾದರೂ 50ರ ದಶಕದಲ್ಲಿ ಅದನ್ನು ಸ್ಥಾಪಿಸಿದವರು ಹಿರಿಯ ಕಮ್ಯುನಿಸ್ಟ್ ನಾಯಕರಾದ ಬಿ.ವಿ.ಕಕ್ಕಿಲಾಯ ಮತ್ತು ಎಂ.ಎಸ್.ಕೃಷ್ಣನ್. ವಿದ್ಯಾರ್ಥಿ ದೆಸೆಯಲ್ಲೇ ಕಮ್ಯುನಿಸ್ಟ್ ಚಳವಳಿಗೆ ಬಂದ ಎಂ.ಎಸ್.ಕೃಷ್ಣನ್ ಬೆಂಗಳೂರಿನಲ್ಲಿ ಹಿರಿಯರಿಂದ ತಮ್ಮ ಪಾಲಿಗೆ ಬಂದಿದ್ದ ಮನೆಯನ್ನು ಮಾರಾಟ ಮಾಡಿ, ಅದೇ ಹಣದಿಂದ ಜನಶಕ್ತಿ ಮುದ್ರಣಾಲಯವನ್ನು ಆರಂಭಿಸಿದರು. ಬಿ.ವಿ. ಕಕ್ಕಿಲಾಯ ಸ್ವಂತದ ಹಣ ನೀಡಿ, ನವಕರ್ನಾಟಕದ ಪ್ರಕಾಶನ ಸಂಸ್ಥೆಯನ್ನು ಬೆಳೆಸಿದರು. ಹೀಗೆ ಆರಂಭದಲ್ಲೇ ಸ್ವಂತ ಮುದ್ರಣಾಲಯ ಹೊಂದಿ ನವಕರ್ನಾಟಕ ಬೆಳೆಯಿತು. ಸಿ.ಆರ್.ಕೃಷ್ಣರಾವ್ ಅವರಂತಹ ಹಿರಿಯ ಪತ್ರಕರ್ತರು ಆಗ ಪ್ರಕಟವಾಗುತ್ತಿದ್ದ ಜನಶಕ್ತಿ ವಾರಪತ್ರಿಕೆಯ ಸಂಪಾದಕರಾಗಿದ್ದರು. ಅದಕ್ಕಿಂತ ಮುಂಚೆ ಕಮ್ಯುನಿಸ್ಟ್ ಪಕ್ಷದ ಮೇಲೆ ನಿಷೇಧವಿದ್ದಾಗ, ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ಜನಶಕ್ತಿಗೆ ನಿರಂಜನ (ಕುಳಕುಂದ ಶಿವರಾಯ) ಸಂಪಾದಕರಾಗಿದ್ದರು. ಇದು ನವಕರ್ನಾಟಕ ನಡೆದು ಬಂದ ದಾರಿ.

ಇನ್ನು ಕುಮಾರ ವೆಂಕಣ್ಣ ಅವರ ಬಗ್ಗೆ ಹೇಳಬೇಕೆಂದರೆ, ಒಂದೆರಡು ಬಾರಿ ನೋಡಿದ್ದನ್ನು ಬಿಟ್ಟರೆ ಅವರ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. ಹೀಗೆ ಪ್ರಕಟಗೊಂಡ ಪರಂಜ್ಯೋತಿ ಅವರ ಪುಸ್ತಕದಲ್ಲಿ ಅವರ ಹೋರಾಟದ ಬದುಕು ಅನಾವರಣಗೊಂಡಿದೆ. ಪರಂಜ್ಯೋತಿ ಅವರು ಸಾಕಷ್ಟು ವಿವರಗಳನ್ನು ಕಲೆ ಹಾಕಿ, ಈ ಪುಸ್ತಕ ಬರೆದಿದ್ದಾರೆ. ಮಂಗಳೂರಿನಿಂದ ಸುಮಾರು 45 ಕಿ.ಮೀ. ದೂರದ ಒಂದು ಗ್ರಾಮದಲ್ಲಿ ಜನಿಸಿದ ಕುಮಾರ ವೆಂಕಣ್ಣ ಆರಂಭದ ದಿನಗಳಲ್ಲಿ ಮಂಗಳೂರಿನ ಕಮ್ಯುನಿಸ್ಟ್ ಮತ್ತು ಕಾರ್ಮಿಕ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಂತರ ಬೆಂಗಳೂರಿಗೆ ಬಂದು ಸ್ವತಂತ್ರ ಕರ್ನಾಟಕ ಮತ್ತು ಉಷಾ ಮಾಸಪತ್ರಿಕೆಗಳಲ್ಲಿ ಸಹಸಂಪಾದಕರಾಗಿ ಕೆಲಸ ಮಾಡಿದರು.

ಕಥೆ, ಕಾದಂಬರಿ, ಜೀವನ ಚರಿತ್ರೆ ಸೇರಿದಂತೆ 80ಕ್ಕೂ ಹೆಚ್ಚು ಪುಸ್ತಕಳನ್ನು ಅವರು ಬರೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ದೊರೆಸ್ವಾಮಿ ವೆಂಕಣ್ಣನವರನ್ನು ನೆನಪಿಸಿಕೊಳ್ಳುತ್ತ, ವೆಂಕಣ್ಣ ತಮ್ಮ ಹೆಗಲಿನ ಚೀಲದಲ್ಲಿ ಜಾಗಟೆಯನ್ನು ಇಟ್ಟುಕೊಂಡು ಇರುತ್ತಿದ್ದರು. ಉತ್ತಮ ಮಾತುಗಾರರಾಗಿದ್ದ ಅವರು ತಮ್ಮ ವಿಚಾರಗಳನ್ನು ಜನರಿಗೆ ತಿಳಿಸಬೇಕು ಎನ್ನಿಸಿದಾಗ, ರಸ್ತೆಯಲ್ಲಿ ನಿಂತು ಜಾಗಟೆ ಬಾರಿಸುತ್ತಿದ್ದರು. ಆಗ ಜನ ಸೇರುತ್ತಿದ್ದರು. ಜನ ಸೇರಿದ ಬಳಿಕ ಸ್ವಾತಂತ್ರ ಚಳವಳಿ, ಸಮಾಜವಾದದ ಬಗ್ಗೆ ಮಾತನಾಡುತ್ತಿದ್ದರು ಎಂದು ಹೇಳಿದರು.

ಹೀಗೆ ನಮ್ಮ ನಡುವೆ ಬದುಕಿದ ಮತ್ತು ನಿರ್ಗಮಿಸಿದ ಮಹಾನ್ ಚೇತನಗಳ ಬಗ್ಗೆ ಏರ್ಪಟ್ಟ ಈ ಕಾರ್ಯಕ್ರಮ ಐದು ದಶಕಗಳ ಹಿಂದಿನ ಕರ್ನಾಟಕಕ್ಕೆ ಕರೆದೊಯ್ಯಿತು ಮುಂದೆ ನಡೆಯಬೇಕಾದ ದಾರಿ ಬಗ್ಗೆ ಬೆಳಕು ಚೆಲ್ಲಿತು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News