ಅಪಾಯದ ಅಂಚಿಗೆ ಬಂದು ನಿಂತ ಭಾರತ

Update: 2019-03-24 18:31 GMT

ದೇಶವನ್ನು ಈ ಪ್ರಪಾತದಿಂದ ಮೇಲೆತ್ತಿ ಕಾಪಾಡುವುದು ಒಂದು ಸುದೀರ್ಘ ಕಾರ್ಯಕ್ರಮ. ಅದಕ್ಕಾಗಿ ಎಡಪಂಥೀಯ ಸಂಘಟನೆಗಳು, ದಲಿತ, ರೈತ, ಮಹಿಳಾ ಸಂಘಟನೆಗಳು ತಮ್ಮ ಕಾರ್ಯವಿಧಾನ ಬದಲಿಸಿಕೊಳ್ಳಬೇಕಾಗಿದೆ. ಸಭೆ, ಸೆಮಿನಾರು, ಮೆರವಣಿಗೆಗಳಲ್ಲಿ ನಾವು ನಾವೇ ಸೇರಿ ನಮ್ಮ ಕರ್ತವ್ಯ ಮುಗಿಯಿತು ಎಂದು ಸಮಾಧಾನ ಮಾಡಿಕೊಳ್ಳದೇ, ನಾವು ಈ ವರೆಗೆ ತಲುಪದ ಜನರ ಬಳಿ ಅದರಲ್ಲೂ ಯುವಜನರ ಬಳಿ ಹೋಗಬೇಕಿದೆ.


ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈ ಭಾರತ ಎಲ್ಲಿಗೆ ಬಂದು ತಲುಪಿದೆಯೆಂದರೆ ಇದೀಗ ಬುದ್ಧನ ಭಾರತ, ವಿವೇಕಾನಂದರ ಭಾರತ, ಬಸವಣ್ಣನವರ ಭಾರತವಾಗಿ ಉಳಿದಿಲ್ಲವೇನೋ ಎಂಬ ಸಂದೇಹ ಪ್ರತಿನಿತ್ಯವೂ ದಟ್ಟವಾಗುತ್ತಿದೆ. ಕಳೆದ ಶತಮಾನದ ಎರಡನೇ-ಮೂರನೇ ದಶಕದಲ್ಲಿ ಜರ್ಮನಿ, ಇಟಲಿಯಲ್ಲಿ ಪಿಡುಗಿನಂತೆ ಹಬ್ಬಿದ ಫ್ಯಾಶಿಸಮ್ ಇಲ್ಲಿ ಮರುಜನ್ಮ ಪಡೆದಿದೆ. ಹಿಟ್ಲರ್‌ನಂಥ ವ್ಯಕ್ತಿ ಈ ದೇಶದ ಅಧಿಕಾರ ಸೂತ್ರ ಹಿಡಿದು ಅದೇ ರೀತಿ ಅರಚಾಡುತ್ತಿದ್ದಾರೆ. ಆತನ ಭಕ್ತ ಪಡೆ ಬೀದಿಬೀದಿಗಳಲ್ಲಿ ಹಿಂಸಾಚಾರಕ್ಕೆ ಇಳಿದಿದೆ. ದೇಶದ ರಾಜಧಾನಿ ದಿಲ್ಲಿಗೆ ಸಮೀಪದ ಈಗ ಗುರುಗ್ರಾಮ ಎಂದು ಕರೆಯಿಸಿಕೊಳ್ಳುವ ಗುರುಗಾಂವದಲ್ಲಿ ನಡೆದ ಬೀಭತ್ಸ ಘಟನೆ ಕೇಳಿ ಎದೆ ಝಲ್ಲೆನ್ನುತ್ತಿದೆ. ಹೋಳಿ ಹಬ್ಬದ ದಿನ ‘ಜೈ ಶ್ರೀರಾಮ’ ಎಂದು ಕೂಗುತ್ತಿದ್ದ ಗುಂಪೊಂದು ಗುರುಗಾಂವ ಸಮೀಪದ ಹಳ್ಳಿಯೊಂದರ ಮುಸ್ಲಿಂ ವ್ಯಕ್ತಿಯ ಮನೆಗೆ ನುಗ್ಗಿ ಮನೆಗೆ ಬಂದಿದ್ದ ಆತಿಥಿಗಳು ಸೇರಿದಂತೆ ಎಲ್ಲರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಮಾಡಿದೆ. ಇನ್ನೊಂದೆಡೆ ಹಿಂದೂ ರಾಷಟ್ರೆದ ಪ್ರಯೋಗಶಾಲೆಯಾದ ಗುಜರಾತ್‌ನಲ್ಲಿ ಪಟಾಣ ಎಂಬಲ್ಲಿ ವ್ಯಾಸಂಗದಲ್ಲಿ ಜಾಣನಾದ ದಲಿತ ವಿದ್ಯಾರ್ಥಿಯನ್ನು ಕಂಬಕ್ಕೆ ಕಟ್ಟಿ ಹೊಡೆಯಲಾಗಿದೆ. ‘ನೀವು ಓದಬಾರದು. ಪರೀಕ್ಷೆ ಬರೆಯಬಾರದು. ನಮ್ಮ ಹೊಲಕ್ಕೆ ಕೆಲಸಕ್ಕೆ ಬರಬೇಕು’ ಎಂದು ಮೇಲ್ಜಾತಿ ಭೂಮಾಲಕರು ಬೆದರಿಕೆ ಹಾಕಿದ್ದಾರೆ.

ಇದಕ್ಕೂ ಮುನ್ನ ಈ ಮನೆಯ ಮುಂದೆ ಮುಸ್ಲಿಂ ಕುಟುಂಬದ ಮಕ್ಕಳು ಕ್ರಿಕೆಟ್ ಆಟವಾಡುತ್ತಿದ್ದರು. ಅಲ್ಲಿಗೆ ನುಗ್ಗಿದ ಐವತ್ತರಷ್ಟಿದ್ದ ಗುಂಪು ಅಲ್ಲಿ ಆಟವಾಡಕೂಡದು ಎಂದು ಬೆದರಿಕೆ ಹಾಕಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಮನೆಯ ಹಿರಿಯ ಮುಹಮ್ಮದ್ ಸಾಜಿದ್‌ರನ್ನು ಥಳಿಸಿದೆ. ಮನೆ ಖಾಲಿಮಾಡಿ ಪಾಕಿಸ್ತಾನಕ್ಕೆ ಹೋಗುವಂತೆ ಈ ಗುಂಪುಅರಚಾಡಿದೆ. ಏಟು ತಿಂದ ರಕ್ತ ಸಿಕ್ತ ಪತಿಯನ್ನು ಬಿಡಿಸಲು ಹೋದ ಪತ್ನಿಗೂ ಏಟು ಬಿದ್ದಿದೆ.

ಇವೆರಡೂ ಘಟನೆಗಳು ಆಕಸ್ಮಿಕವಾಗಿ ನಡೆದ ಘಟನೆಗಳಲ್ಲ. ಸಂಘ ಪರಿವಾರದ ಸೂತ್ರದ ಗೊಂಬೆ ಮತ್ತು ಕಾರ್ಪೊರೇಟ್ ಬಂಡವಾಳಶಾಹಿಯ ಕೃಪಾಪೋಷಿತ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಇಂಥ ಘಟನೆಗಳು ಸರಣಿಯಾಗಿ ನಡೆಯುತ್ತಿವೆ. ದಾದ್ರಿ, ಉನಾ, ಕಥುವಾ ಒಂದೇ ಎರಡೇ ದೇಶದ ಎಲ್ಲೆಡೆ ದನ ರಕ್ಷಣೆ ಹೆಸರಲ್ಲಿ, ಮನುವಾದಿ ಧರ್ಮದ ಹೆಸರಿನಲ್ಲಿ ಕೊಲ್ಲುವ, ಚಚ್ಚುವ, ಬೆಂಕಿ ಹಚ್ಚುವ, ಪೈಶಾಚಿಕ ಕೃತ್ಯಗಳು ನಡೆಯುತ್ತಲೇ ಇವೆ. ಯೋಗಿ ಆದಿತ್ಯನಾಥರ ರಾಜ್ಯದಲ್ಲಿ ಗೋರಕ್ಷಕರು ಪೊಲೀಸ್ ಅಧಿಕಾರಿಯನ್ನೇ ಕೊಂದು ಹಾಕಿದರು. ದನ ಸತ್ತರೆ ತನಿಖೆಗೆ ತಂಡ ರಚಿಸುವ ಆದಿತ್ಯರ ಸರಕಾರ ಪೊಲೀಸ್ ಅಧಿಕಾರಿ ಹತ್ಯೆಯ ಬಗ್ಗೆ ತನಿಖೆ ನಡೆಸಲಿಲ್ಲ. ದಿಲ್ಲಿಯ ಕುರ್ಚಿಯ ಮೇಲೆ ಕುಳಿತ ಫೇಕೇಂದ್ರ ತನಿಖೆ ನಡೆಸುವಂತೆ ಹೇಳಲೂ ಇಲ್ಲ.

ಈ ಎಲ್ಲ ಹತ್ಯೆ, ಗೂಂಡಾಗಿರಿಯ ಹಿಂದೆ ಒಂದು ಸಿದ್ಧ್ದಾಂತವಿದೆ. ಒಂದು ಅಜೆಂಡಾ ಇದೆ. ಸಿದ್ಧಾಂತ ಇಲ್ಲದವರು ‘ಜೈ ಶ್ರೆ ರಾಮ’ ಎಂದು ಕೂಗುವುದಿಲ್ಲ. ಮುಸಲ್ಮಾನರಿಗೆ ಪಾಕಿಸ್ತಾನಕ್ಕೆ ಹೋಗಲು ಹೇಳುವುದಿಲ್ಲ. ನೇರವಾಗಿ ಗುರಿಯಾಗಿರಿಸಿಕೊಂಡು ಸ್ವಾಮಿ ಅಗ್ನವೇಶ್ ಮತ್ತು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ ಮೇಲೆ ಹಲ್ಲೆ ಮಾಡುವುದಿಲ್ಲ.

ಇದಕ್ಕೂ ಮುನ್ನ ಇಲ್ಲವೇ ಇದೇ ಕಾಲಘಟ್ಟದಲ್ಲಿ ದೇಶದ ಹಿರಿಯ ಚಿಂತಕರಾದ ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್, ಲೇಖಕ ಗೋವಿಂದ ಪನ್ಸಾರೆ, ಕರ್ನಾಟಕದ ಸತ್ಯಶೋಧಕ ಡಾ. ಎಂ.ಎಂ. ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಯಿತು. ದಾಭೋಲ್ಕರ್ ಹಂತಕರನ್ನು ಹಿಡಿದಿದ್ದರೆ ಮುಂದೆ ನಡೆದ ಪನ್ಸ್ಸಾರೆ, ಕಲಬುರ್ಗಿ, ಗೌರಿ ಹತ್ಯೆಯಾಗುತ್ತಿರಲಿಲ್ಲ. ಆದರೆ ಮಹಾರಾಷ್ಟ್ರದ ಬಿಜೆಪಿ ಸರಕಾರ ಮತ್ತು ಕೇಂದ್ರದ ಮೋದಿ ಸರಕಾರ ಹಂತಕರನ್ನು ಹಿಡಿಯಲು ಆಸಕ್ತಿ ತೋರಿಸಲಿಲ್ಲ. ಮಾತ್ರವಲ್ಲ, ಅವರಿಗೆ ರಕ್ಷಣೆ ಕೊಡುವಂತೆ ವರ್ತಿಸಿದವು.

ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಸಂವಿಧಾನದ ಮೇಲೆ ಗೋಳ್ವಲ್ಕರ್‌ಗೆ ಕೋಪವಿತ್ತು. ಶ್ರೇಣೀಕೃತ ಜಾತಿಪದ್ಧತಿಯಲ್ಲಿ ನಂಬಿಕೆ ಹೊಂದಿದ್ದ ಅವರು ಸ್ವಾತಂತ್ರಾನಂತರ ಹಿಂದೂರಾಷ್ಟ್ರ ಕಟ್ಟಲು ಬಯಸಿದ್ದರು. ಆದರೆ ಗಾಂಧೀಜಿ, ನೆಹರೂ, ಅಂಬೇಡ್ಕರ್ ಅದಕ್ಕೆ ಅವಕಾಶ ನೀಡಲಿಲ್ಲ. ದೇಶ ಪ್ರಜಾಪ್ರಭುತ್ವ ಪದ್ಧ್ದತಿಯನ್ನು ಒಪ್ಪಿಕೊಂಡಾಗ ಅದು ಪರಕೀಯ ಪದ್ಧತಿ ಎಂದು ಗೋಳ್ವಲ್ಕರ್ ಟೀಕಿಸಿದ್ದರು.

ಈ ಎಲ್ಲ ಹಲ್ಲೆ, ಹತ್ಯೆ, ಕೊಲೆಗಳ ಹಿಂದೆ ಒಂದು ನಿರ್ದಿಷ್ಟ ಕಾರ್ಯಸೂಚಿ ಇದೆ. ಒಂದು ಸಿದ್ಧಾಂತವಿದೆ. ಅದು ಬೇರಾವುದೂ ಅಲ್ಲ, ಆರೆಸ್ಸೆಸ್ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ಸಿದ್ಧ್ದಾಂತ. ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ಹಿಂದುತ್ವದ ಮೊದಲ ಶತ್ರುಗಳು ಎಂದು ಗೋಳ್ವಲ್ಕರ್ ಹೇಳಿದ್ದರು. ರಾಷ್ಟ್ರಪ್ರೇಮವನ್ನು ಹಿಟ್ಲರ್‌ನಿಂದ ಕಲಿಯಬೇಕೆಂದು, ಮುಸಲ್ಮಾನರು, ಕ್ರೈಸ್ತರು ಎರಡನೇ ದರ್ಜೆಗಳ ಪ್ರಜೆಗಳಾಗಿರಬೇಕೆಂದು ಅವರು ಹೇಳಿದ್ದರು.

ಹೀಗೆ ಸಾಮಾಜಿಕ ನ್ಯಾಯವನ್ನು, ಸಂವಿಧಾನವನ್ನು, ಮುಸಲ್ಮಾನರನ್ನು, ಸಮಾಜವಾದಿಗಳನ್ನು ವಿರೋಧಿಸುತ್ತ, ದ್ವೇಷಿಸುತ್ತ ಬಂದ ಅವರು ಮಹಿಳೆಯರು ಅಡುಗೆ ಮನೆಗೆ, ಪತಿಯ ಸೇವೆಗೆ ಸೀಮಿತರಾಗಿರಬೇಕೆಂದು ಪ್ರತಿಪಾದಿಸಿದವರು. ಸಂಘ ಪರಿವಾರದ ಸ್ವಯಂ ಸೇವಕ ಈ ನರೇಂದ್ರ ಮೋದಿ, ಅಂತಲೇ ಆತ ತಮ್ಮ ಗುರುಗಳ ಅಜೆಂಡಾ ಜಾರಿಗೆ ಕಟಿಬದ್ಧರಾಗಿದ್ದಾರೆ. ದೇಶದ ಜನರನ್ನು ಅದರಲ್ಲೂ ಯುವಕರನ್ನು ದಿಕ್ಕು ತಪ್ಪಿಸಲು ಇವರೀಗ ಯಶಸ್ವಿಯಾಗಿದ್ದಾರೆ. ಅಂತಲೇ ಹುಡುಗರಿಗೆ ಸೌಹಾರ್ದದ, ಸ್ನೇಹದ, ಪ್ರೀತಿಯ, ಅನುಕಂಪದ , ದಯೆಯ ಮಾತುಗಳ ಬದಲಿಗೆ ದ್ವೇಷದ , ವೈರತ್ವದ, ಪಾಕಿಸ್ತಾನಕ್ಕೆ ಹೋಗೆನ್ನುವ ಸೂಲಿಬೆಲೆ, ಸಾಕ್ಷಿಮಹಾರಾಜರಂಥವರ ಮಾತುಗಳು ಹೆಚ್ಚು ರುಚಿಸುತ್ತಿವೆ.

ಅಂಬೇಡ್ಕರ್ ಅವರು ಸಾವಿರಾರು ಅನುಯಾಯಿಗಳ ಜೊತೆ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದಾಗಲೂ ಗೋಳ್ವಲ್ಕರ್ ಟೀಕಿಸಿದ್ದರು. ‘ದಲಿತರು ಬೌದ್ಧರಾಗಲಿಲ್ಲ, ಬುದ್ಧ ಹೊಲೆಯನಾದ’ ಎಂದು ವ್ಯಂಗ್ಯ ಮಾಡಿದ್ದರು, ಆಗ ಕೆರಳಿ ನಿಂತ ಬಾಬಾಸಾಹೇಬ ಅಂಬೇಡ್ಕರ್ ಅವರು ಕೆಲವರು ಕೆಳಗಿನಿಂದ ವಿಸರ್ಜನೆ ಮಾಡುವುದನ್ನು ಬಾಯಿಯಿಂದ ಮಾಡುತ್ತಾರೆ ಎಂದು ಜಾಡಿಸಿದ್ದರು

ದೇಶವನ್ನು ಈ ಪ್ರಪಾತದಿಂದ ಮೇಲೆತ್ತಿ ಕಾಪಾಡುವುದು ಒಂದು ಸುದೀರ್ಘ ಕಾರ್ಯಕ್ರಮ. ಅದಕ್ಕಾಗಿ ಎಡಪಂಥೀಯ ಸಂಘಟನೆಗಳು, ದಲಿತ, ರೈತ, ಮಹಿಳಾ ಸಂಘಟನೆಗಳು ತಮ್ಮ ಕಾರ್ಯವಿಧಾನ ಬದಲಿಸಿಕೊಳ್ಳಬೇಕಾಗಿದೆ. ಸಭೆ, ಸೆಮಿನಾರು, ಮೆರವಣಿಗೆಗಳಲ್ಲಿ ನಾವು ನಾವೇ ಸೇರಿ ನಮ್ಮ ಕರ್ತವ್ಯ ಮುಗಿಯಿತು ಎಂದು ಸಮಾಧಾನ ಮಾಡಿಕೊಳ್ಳದೇ, ನಾವು ಈ ವರೆಗೆ ತಲುಪದ ಜನರ ಬಳಿ ಅದರಲ್ಲೂ ಯುವಜನರ ಬಳಿ ಹೋಗಬೇಕಿದೆ.

ಮನೆ ಮನೆಗೆ ಹೋಗಿ ಮನದ ಬಾಗಿಲು ತಟ್ಟಿ ದೇಶಕ್ಕೆ ಎದುರಾದ ಅಪಾಯದ ಬಗ್ಗೆ ತಿಳಿಸಿ ಹೇಳಬೇಕಾಗಿದೆ. ದೇಶದ ಜಾತ್ಯತೀತ ಪಕ್ಷಗಳು, ಸಂಘಟನೆಗಳು, ಪ್ರಗತಿಪರರು, ಎಡಪಂಥೀಯರು, ಗಾಂಧಿವಾದಿಗಳು ಯುವಕರನ್ನ ಮನದ ಬಾಗಿಲನ್ನು ತಟ್ಟಿ ಅಲ್ಲಿ ತುಂಬಿದ ದ್ವೇಷದ ಕಸವನ್ನು ತೆಗೆಯಲು ಸಾಧ್ಯವಾಗಿಲ್ಲ. ಅದಕ್ಕೆ ಪ್ರತಿಯಾಗಿ ಜನಾಂಗೀಯ ದ್ವೇಷದ ಪ್ರತಿಪಾದಕರು ದೇಶದ ಆಡಳಿತಾಂಗದ, ಸಾಂವಿಧಾನಿಕ ಸಂಸ್ಥೆಗಳಲ್ಲಿ ನುಸುಳುವಲ್ಲಿ ಯಶಸ್ವಿಯಾಗಿದ್ದಾರೆ. ಮೋದಿ ಸರಕಾರದ ಬಗ್ಗೆ,ಸಂಘ ಪರಿವಾರದ ಕೋಮುವಾದಿ ಸಿದ್ಧಾಂತದ ಬಗ್ಗೆ ನಾವಾಡುವ ಮಾತುಗಳು ಜನರಿಗೆ ಅದರಲ್ಲೂ ಯುವಕರಿಗೆ ತಲುಪುತ್ತಿಲ್ಲವೇಕೆ ಎಂದು ನಾವು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಅದಕ್ಕಿಂತ ಮೊದಲು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಈ ಅನಾಹುತಗಳಿಗೆಲ್ಲ ಕಾರಣವಾದ, ಸಂವಿಧಾನವನ್ನು ನಾಶ ಮಾಡಲು ಹೊರಟ ಬಿಜೆಪಿಯನ್ನು ಸೋಲಿಸಬೇಕಿದೆ. ರಾಜಕೀಯ ಅಧಿಕಾರದಿಂದ ಅದನ್ನು ದೂರವಿಡಬೇಕಿದೆ. ಬಿಜೆಪಿಯನ್ನು ಸೋಲಿಸಬಲ್ಲ ಯಾವುದೇ ಪಕ್ಷ ನಮ್ಮ ಆದ್ಯತೆಯಾಗಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News