ಜನದ್ರೋಹದ ಐದು ವರ್ಷ; ಕಳೆದುಹೋಗುತ್ತಿರುವ ಭಾರತ
ದೇಶದ ಆರ್ಥಿಕ ಸ್ಥಿತಿ ಈಗ ತೀವ್ರ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಈ ಮಾತನ್ನು ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್ ಮತ್ತು ರಿಸರ್ವ್ ಬ್ಯಾಂಕ್‌ನ ಹಿಂದಿನ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಮುಂಗಡ ಪತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕಡಿಮೆ ಹಂಚಿಕೆ ಮಾಡಲಾಗಿದೆ. ಸಾರಿಗೆ ಸಂಚಾರ ತುಟ್ಟಿಯಾಗಿದೆ. ವಿಜ್ಞಾನಿಗಳಿಗೆ ಸಂಬಳ ನೀಡುತ್ತಿಲ್ಲ. ಇಸ್ರೋ, ಡಿಆರ್‌ಡಿಒದಲ್ಲಿ ಹಣವಿಲ್ಲದೆ ಸಂಶೋಧನೆಗಳು ಸ್ಥಗಿತಗೊಂಡಿವೆ.
ಸ್ವತಂತ್ರ ಭಾರತದ 70 ವರ್ಷಗಳ ಇತಿಹಾಸದಲ್ಲಿ ಈ ದೇಶದಲ್ಲಿ ಇಂಥ ಸನ್ನಿವೇಶ ಹಿಂದೆಂದೂ ನಿರ್ಮಾಣ ಆಗಿರಲಿಲ್ಲ. ಇಂಥ ಸರಕಾರ ಮತ್ತು ಇಂಥ ಪ್ರಧಾನಿಯನ್ನು ಈ ಭಾರತ ಕಂಡಿರಲಿಲ್ಲ. ಸುಳ್ಳು ಕನಸುಗಳ ಗಾಳಿ ಗೋಪುರ ಕಟ್ಟಿ ಜನರನ್ನು ಅದರಲ್ಲೂ ಮೇಲ್ಜಾತಿಯ ಮಧ್ಯಮವರ್ಗದ ಜನರನ್ನು ಭ್ರಮಾಲೋಕದಲ್ಲಿ ತೇಲಿಸಿ ಅಧಿಕಾರಕ್ಕೆ ಬಂದ ವ್ಯಕ್ತಿಗೆ ಮತ್ತು ಆತನನ್ನು ಆ ಸ್ಥಾನಕ್ಕೆ ತಂದ ಪರಿವಾರಕ್ಕೆ ಈಗಲೂ ಪಶ್ಚಾತ್ತಾಪವಾಗಿಲ್ಲ. ಅಭಿವೃದ್ಧಿಯ ಹೆಸರು ಹೇಳಿ ಇಡೀ ದೇಶ ಉದ್ಧ್ದಾರ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಪ್ರಧಾನಿ ಈ ದೇಶದ ಸಂವಿಧಾನಕ್ಕೆ ನಿಷ್ಠನಾಗಿ ಎಂದೂ ಕಾರ್ಯ ನಿರ್ವಹಿಸಲಿಲ್ಲ. ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರದ ಆಣತಿಯಂತೆ ಕಾರ್ಯ ನಿರ್ವಹಿಸುತ್ತ ಬಂದ ಮೋದಿಯವರನ್ನು ನಿಯಂತ್ರಿಸುತ್ತಿರುವ ಇನ್ನೊಂದು ಶಕ್ತಿ ಕಾರ್ಪೊರೇಟ್ ಜಗತ್ತು. ಇಲ್ಲಿರುವುದು ನಾಗಪುರದ ಅಗೋಚರ ಅಧಿಕಾರ ಕೇಂದ್ರ ಮತ್ತು ಕಾರ್ಪೊರೇಟ್ ಬಂಡವಳಶಾಹಿಯ ಹೊಂದಾಣಿಕೆಯ ಪರಸ್ಪರ ಹಿತಾಸಕ್ತಿ ರಕ್ಷಿಸುವ ಸರಕಾರ.
2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ನೀಡಿದ ಯಾವ ಭರವಸೆಯನ್ನೂ ಇವರು ಈಡೇರಿಸಲಿಲ್ಲ. ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಬ್ಯಾಂಕ್ ಖಾತೆಗಳಿಗೆ ತಲಾ 15 ಲಕ್ಷ ರೂ. ಜಮಾ ಮಾಡುವುದು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ, ಬೆಲೆ ಏರಿಕೆ ನಿಯಂತ್ರಣ, ಅಚ್ಛೇದಿನ್ ಈ ಯಾವುದನ್ನ್ನೂ ಈಡೇರಿಸಲು ಇವರಿಂದ ಆಗಲಿಲ್ಲ. ಕಳೆದ 45 ವರ್ಷಗಳಲ್ಲೇ ಇಲ್ಲದ ನಿರುದ್ಯೋಗ ಈಗ ಭಯಾನಕ ಸ್ವರೂಪ ತಾಳಿ ನಿಂತಿದೆ. ಕಳೆದ ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿಸಲು ಇವರಿಂದ ಸಾಧ್ಯವಾಗಿಲ್ಲ.
ದೇಶದ ಆರ್ಥಿಕ ಸ್ಥಿತಿ ಈಗ ತೀವ್ರ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಈ ಮಾತನ್ನು ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್ ಮತ್ತು ರಿಸರ್ವ್ ಬ್ಯಾಂಕ್‌ನ ಹಿಂದಿನ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಮುಂಗಡ ಪತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕಡಿಮೆ ಹಂಚಿಕೆ ಮಾಡಲಾಗಿದೆ. ಸಾರಿಗೆ ಸಂಚಾರ ತುಟ್ಟಿಯಾಗಿದೆ. ವಿಜ್ಞಾನಿಗಳಿಗೆ ಸಂಬಳ ನೀಡುತ್ತಿಲ್ಲ. ಇಸ್ರೋ, ಡಿಆರ್‌ಡಿಒದಲ್ಲಿ ಹಣವಿಲ್ಲದೆ ಸಂಶೋಧನೆಗಳು ಸ್ಥಗಿತಗೊಂಡಿವೆ. ನರೇಗಾ ಕಾರ್ಮಿಕರಿಗೆ ಎಂಟು ತಿಂಗಳಿಂದ ಸಂಬಳ ಪಾವತಿಯಾಗಿಲ್ಲ. ಇದಕ್ಕೆ ಮೀಸಲಾಗಿಟ್ಟ ಹಣ ಎಲ್ಲಿ ಹೋಯಿತು? ಏನಾಯಿತು?
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಿಕ್ಕಟ್ಟು ಆವರಿಸಿದೆ. ರಿಸರ್ವ್ ಬ್ಯಾಂಕ್ ಗವರ್ನರ್‌ಗೆ ಗೊತ್ತಿಲ್ಲದೆ ನೋಟು ಅಮಾನ್ಯೀಕರಣ ಮಾಡಿ ಜನ ಸಾಮಾನ್ಯರ ಪ್ರಾಣ ಹಿಂಡಲಾಯಿತು. ಆಗ ಎಟಿಎಂ ಮತ್ತು ಬ್ಯಾಂಕುಗಳ ಮುಂದೆ ಪಾಳಿಯಲ್ಲಿ ನಿಂತು 900 ಜನ ಅಸುನೀಗಿದರು. ಅದಕ್ಕೆ ಯಾರು ಹೊಣೆ?
ಚುನಾವಣೆ ವೇಳೆ ಇಂಥ ಪ್ರಶ್ನೆಗಳು ಎದುರಾಗುವುದು ಸಹಜ. ಬೆಲೆ ಏರಿಕೆ ಯಾಕೆ ನಿಯಂತ್ರಣ ಮಾಡಲಿಲ್ಲ. ಉದ್ಯೋಗ ಸೃಷ್ಟಿಯ ಭರವಸೆ ಏನಾಯಿತು ಎಂದು ಪ್ರಶ್ನಿಸಿದರೆ ನಮ್ಮ ಪ್ರಧಾನಿ ತಮ್ಮ ಸರಕಾರದ ಸಾಧನೆಗಳನ್ನು (ಮಾಡಿದ್ದರೆ) ಜನರಿಗೆ ವಿವರಿಸಬೇಕಿತ್ತು. ಅದನ್ನು ಬಿಟ್ಟು ನಾವು ನೆಲ, ವಾಯು, ಬಾಹ್ಯಾಕಾಶದಲ್ಲಿ ದಾಳಿ ನಡೆಸುವ ತಾಕತ್ತು ತೋರಿಸಿದ್ದೇವೆ ಎಂದು ಉತ್ತರಿಸುತ್ತಾರೆ. ಸೇನೆಯ ಸಾಧನೆ ದೇಶದ ಸಾಧನೆ, ಬಾಹ್ಯಾಕಾಶದ ಸಾಧನೆ ವಿಜ್ಞಾನಿಗಳ ಸಾಧನೆ. ಅದು ಬಿಜೆಪಿಯ ಸಾಧನೆಯಲ್ಲ, ಮೋದಿಯ ಸಾಧನೆಯಲ್ಲ. ಯಾರೋ ನೆತ್ತರು ಸುರಿಸಿ ಕಟ್ಟಿದ ದೇಶದ ಸಿಂಹಾಸನದ ಮೇಲೆ ಕುಳಿತು ಇದು ನನ್ನ ಸಾಧನೆ ಎಂದು ಹೇಳಿಕೊಳ್ಳಲು ಭಾರೀ ಭಂಡತನ ಇರಬೇಕಾಗುತ್ತದೆ. ಅದೊಂದೇ ಇವರ ಬಳಿ ಇರುವ ಏಕೈಕ ಬಂಡವಾಳ.
ಹೋಗಲಿ ಜನಸಾಮಾನ್ಯರನ್ನು ನೆಮ್ಮದಿಯಾಗಿರಲು ಬಿಟ್ಟರಾ? ಅದೂ ಇಲ್ಲ. ಗೋಮಾಂಸದ ನೆಪ ಮುಂದೆ ಮಾಡಿ ಇವರ ಭಕ್ತರು ಜೈ ಶ್ರೆರಾಮ್ ಎನ್ನುತ್ತಾ ಎಷ್ಟು ಜನರನ್ನು ಕೊಂದರು. ಲವ್ ಜಿಹಾದ್ ಹೆಸರಿನಲ್ಲಿ ಎಷ್ಟು ಯುವಜೋಡಿಗಳಿಗೆ ಚಿತ್ರಹಿಂಸೆ ನೀಡಿದರು ಇವರು. ಮನುವಾದಿ, ಕೋಮುವಾದಿ ಸಿದ್ಧಾಂತ ಹಾಗೂ ಕೊಲೆಗಡುಕತನವನ್ನು ವಿರೋಧಿಸಿದ ದಾಭೋಲ್ಕರ್, ಪನ್ಸಾರೆ , ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಗೆ ಯಾರು ಕಾರಣ? ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರವಿದ್ದಾಗ ಆರೋಪಿಗಳನ್ನು ಬಂಧಿಸಲಾಯಿತು. ಆದರೆ ಬಿಜೆಪಿ ಸರಕಾರವಿರುವ ಮಹಾರಾಷ್ಟ್ರದಲ್ಲಿ ಹಂತಕರ ಬಂಧನವಾಗಲಿಲ್ಲ. ಈ ಬಗ್ಗೆ ಮುಂಬೈ ಹೈಕೋರ್ಟ್ ಅಲ್ಲಿನ ಬಿಜೆಪಿ ಸರಕಾರಕ್ಕೆ ತರಾಟೆಗೆ ತೆಗೆದುಕೊಂಡಿದೆ.
ಒಬ್ಬ ಪ್ರಧಾನಿಯಾಗಿ ಚುನಾವಣೆ ಪ್ರಚಾರದಲ್ಲಿ ಪಾಕಿಸ್ತಾನ ಉಗ್ರರ ಹೆಣಗಳನ್ನು ಎಣಿಸುತ್ತಿದ್ದರೆ ವಿರೋಧ ಪಕ್ಷಗಳು ಬಾಲಕೋಟ್ ದಾಳಿಯ ಸಾಕ್ಷ ಕೇಳುತ್ತಿವೆ ಎಂದು ಹೇಳುತ್ತಾರೆ.
ಮೋದಿಯವರೇ ಐದು ವರ್ಷಗಳಲ್ಲಿ ಯೋಜನಾ ಆಯೋಗ, ಯುಜಿಸಿ, ಆರ್‌ಬಿಐ, ಸಿಬಿಐಗಳಂಥ ಸಾಂವಿಧಾನಿಕ ಸಂಸ್ಥೆಗಳನ್ನು ಹಾಳು ಮಾಡಿದ್ದೀರಿ. ಚುನಾವಣಾ ಆಯೋಗದಲ್ಲೂ ಕೈ ಆಡಿಸುತ್ತಿದ್ದೀರಿ. ಉಪಗ್ರಹ ಉಡಾವಣೆಯಂಥ ಪ್ರಕಟನೆೆಯನ್ನು ನೀವೇ ಮಾಡಿದಿರಿ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾದರೂ ಚುನಾವಣಾ ಆಯೋಗ ವೌನ ತಾಳಿತು. ಅಷ್ಟರ ಮಟ್ಟಿಗೆ ಅದರ ಮೇಲೆ ನಿಯಂತ್ರಣ ಸಾಧಿಸಿದ್ದೀರಿ.
ರಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಸರಕಾರಿ ಸ್ವಾಮ್ಯದ ಎಚ್‌ಎಎಲ್ ಕಡೆಗಣಿಸಿ ವಿಮಾನ ತಯಾರಿಕೆ ಅನುಭವವಿಲ್ಲದ ಹಾಗೂ ನಷ್ಟದಲ್ಲಿದ್ದ ಅನಿಲ್ ಅಂಬಾನಿಗೆ ಅವಕಾಶ ನೀಡಿದ್ದೀರಿ. ಈ ಹಗರಣದ ಬಗ್ಗೆ ಉತ್ತರಿಸಲು ಕೇಳಿದರೆ ಸೈನಿಕರ ಸಾಧನೆಗಳ ಬಗ್ಗೆ ಹೇಳಿ ದಿಕ್ಕು ತಪ್ಪಿಸುತ್ತೀರಿ.
ಶೈಕ್ಷಣಿಕ ಕ್ಷೇತ್ರ ಸಂಘಿಗಳ ಹಾವಳಿಯಿಂದ ತತ್ತರಿಸಿ ಹೋಗಿದೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಮೋದಿ ಸರಕಾರ ಮಾಡಿದ ಅವಾಂತರ ತುಕಡೆ ತುಕಡೆ ನಕಲಿ ಸಿಡಿ ಮಾಡಿ ಕನ್ಹಯ್ಯಾಕುಮಾರ್, ಉಮರ್ ಖಾಲಿದ್‌ರನ್ನು ದೇಶದ್ರೋಹಿಗಳೆಂದು ಬಿಂಬಿಸಲು ನಡೆಸಿದ ಯತ್ನ, ಪುಣೆ ಫಿಲಂ ಸಂಸ್ಥೆಯಲ್ಲಿ ಮಾಡಿದ ಅವಾಂತರ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದ ರೋಹಿತ್ ವೇಮುಲಾ ಸಂಶಯಾಸ್ಪದ ಸಾವು ಇವೆಲ್ಲ ಮೋದಿ ಸರಕಾರದ ಸಾಧನೆಗಳು.
ಸಂಸತ್ತಿನ ಗುಣಮಟ್ಟವೂ ಈಗ ಕಡಿಮೆಯಾಗಿದೆ. ಖರ್ಗೆ ಅವರಂಥ ಕೆಲವರನ್ನು ಬಿಟ್ಟರೆ ಅಲ್ಲಿ ಸಾಕ್ಷಿ ಮಹಾರಾಜ, ನಿರಂಜನ ಜ್ಯೋತಿ, ಗಿರಿರಾಜ ಸಿಂಗರಂಥವರ ಸಂಖ್ಯೆಯೇ ಹೆಚ್ಚಿಗಿದೆ. ನಮ್ಮ ಪ್ರಧಾನಿಗೆ ಪ್ರಚಾರದ ಗೀಳು ಮಿತಿ ಮೀರಿದೆ. ಏರ್ ಇಂಡಿಯಾದ ಬೋಡಿರ್ಂಗ್ ಪಾಸ್‌ನಲ್ಲೂ ತನ್ನ ಫೋಟೊ ಇರಬೇಕು. ತನ್ನ ಸಾಧನೆಗಳನ್ನು ಪ್ರಕಟಿಸಬೇಕೆಂದು ಪ್ರಧಾನಿ ಬಯಸುತ್ತಾರೆ.
ಒಟ್ಟಾರೆ ಕಳೆದ ಐದು ವರ್ಷಗಳ ಸಂಘಿ ನಿಯಂತ್ರಿತ ಕಾರ್ಪೊರೇಟ್ ಕೈಗೊಂಬೆ ಮೋದಿ ಆಡಳಿತ ಜನದ್ರೋಹ ಮತ್ತು ಜನ ವಂಚನೆಯ ಆಡಳಿತವಲ್ಲದೇ ಬೇರೇನೂ ಅಲ್ಲ.
ಉಳಿದದ್ದು ಏನಾದರೂ ಆಗಲಿ. ಸರ್ವಜನಾಂಗದ ಶಾಂತಿಯ ತೋಟವಾದ ಭಾರತ ನಮ್ಮ ಕಣ್ಣೆದುರೇ ಕಳೆದು ಹೋಗುತ್ತಿದೆ. ಅದನ್ನು ಈಗ ಉಳಿಸಿಕೊಳ್ಳದಿದ್ದರೆ ಮತ್ತೆ ಇಂಥ ಭಾರತ ನಮಗೆ ಸಿಗುವುದಿಲ್ಲ. ಈ ಮೋದಿಗಿಂತ ಈ ಆರೆಸ್ಸೆಸ್‌ಗಿಂತ ನಮ್ಮ ಭಾರತ ದೊಡ್ಡದು, ಪುರಾತನವಾದದ್ದು. ಬುದ್ಧ್ದ, ಬಸವ, ವಿವೇಕಾನಂದ, ಅಂಬೇಡ್ಕರ್ ಭಾರತ ನಮ್ಮ ಭಾರತ. ದಾರಾಶಿಕೊ ಪಾಶ್ಚಾತ್ಯರಿಗೆ ಉಪನಿಷತ್ತುಗಳನ್ನು ಪರಿಚಯಿಸಿದ, ಬಾಬಾ ಬುಡನಸಾಬ್ ಚಿಕ್ಕಮಗಳೂರಿಗೆ ಕಾಫಿಯನ್ನು ತಂದ, ಶಿಶುನಾಳ ಶರೀಫರಿಗೆ ಗೋವಿಂದ ಭಟ್ಟರು ದೀಕ್ಷೆ ನೀಡಿದ ಭಾರತ ನಮ್ಮ ಭಾರತ. ಗೋಡ್ಸೆ ಗಾಂಧೀಜಿಯನ್ನು ಕೊಂದ ಭಾರತ ನಮ್ಮ ಭಾರತವಲ್ಲ. ಬಾಬರಿ ಮಸೀದಿಯನ್ನು ಕೆಡವಿದ ಭಾರತ ನಮ್ಮ ಭಾರತವಲ್ಲ. ನಮ್ಮ ನಿಜವಾದ ಭಾರತ ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ.