ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ

Update: 2019-04-14 18:31 GMT

ಬಿಜೆಪಿ ಪರೋಕ್ಷವಾಗಿ ಹೇಳುವ ಸಂಘ ಪರಿವಾರದ ಹಿಂದೂರಾಷ್ಟ್ರ ನಿರ್ಮಾಣದ ಘೋಷಣೆಯೇ ಸಂವಿಧಾನ ವಿರೋಧಿಯಾಗಿದೆ. ಭಾರತವು ಎಲ್ಲ ಧರ್ಮಗಳಿಗೆ ಸೇರಿದ ದೇಶ ಎಂದು ಸಂವಿಧಾನ ಸಾರಿದೆ. ಭಾರತ ಸಾರ್ವಭೌಮ ಸಮಾಜವಾದಿ ಧರ್ಮ ನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯ ವಾಗಿಯೇ ಮುಂದುವರಿಯುತ್ತದೆ. ಹಾಗೆ ಮುಂದುವರಿದರೆ ಮಾತ್ರ ಈ ದೇಶ ಸುರಕ್ಷಿತವಾಗಿರುತ್ತದೆ.


ಭಾರತದ ದಮನಿತ ಸಮುದಾಯ ಸ್ವಾತಂತ್ರಾನಂತರ ಇದೇ ಮೊದಲ ಬಾರಿ ಅತ್ಯಂತ ಆತಂಕದ ಕ್ಷಣಗಳನ್ನು ಎದುರಿಸುತ್ತಿದೆ. ತಮಗೆ ರಕ್ಷಾ ಕವಚವಾದ ಸಂವಿಧಾನವನ್ನೇ ಬುಡಮೇಲು ಮಾಡಲು ನಡೆದಿರುವ ಮಸಲತ್ತುಗಳ ಬಗ್ಗೆ ಒಂದು ವಿಧದ ಭೀತಿಯ ವಾತಾವರಣ ಉಂಟಾಗಿದೆ. ಇದಕ್ಕೆ ಕಾರಣವಿಲ್ಲದಿಲ್ಲ. ಸಂವಿಧಾನವನ್ನು ಇಟ್ಟುಕೊಂಡೇ ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಡೆದ ಸಂವಿಧಾನ ವಿರೋಧಿ ಚಟುವಟಿಕೆಗಳು ಹಾಗೂ ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎಂಬ ಕೇಂದ್ರ ಸಚಿವರ ಮಾತುಗಳು ಸಹಜವಾಗಿ ಅವಕಾಶ ವಂಚಿತ ಸಮುದಾಯದಲ್ಲಿ ಮುಂದೇನಾಗುತ್ತದೆ ಎಂಬ ಆತಂಕ ಉಂಟು ಮಾಡಿದೆೆ.

ಶತಮಾನಗಳ ಕಾಲದ ಅಸಮಾನತೆಯ ಅಂಧಕಾರ ಕವಿದ ಭಾರತಕ್ಕೆ ಸಂವಿಧಾನ ಎಂಬ ಬೆಳಕನ್ನು ನೀಡಿದ ಬಾಬಾಸಾಹೇಬ ಅಂಬೇಡ್ಕರ್ ಅವರ 125ನೇ ಜನ್ಮದಿನವನ್ನು ದೇಶದ ಜನ ನಿನ್ನೆ ಸಂಭ್ರಮ ಮತ್ತು ಸಂಕಟದಿಂದ ಆಚರಿಸಿದರು. ತಮ್ಮ ಬದುಕನ್ನು ಆವರಿಸಿದ್ದ ಕತ್ತಲನ್ನು ತೊಲಗಿಸಿ ಬೆಳಕನ್ನು ನೀಡಿದ ಭಾಗ್ಯವಿಧಾತನ ಜನ್ಮದಿನದ ಸಂತಸ ಒಂದೆಡೆಯಿದ್ದರೆ, ಈ ಬೆಳಕನ್ನೇ ನಂದಿಸಲು ಕತ್ತಲಕೋರ ಶಕ್ತಿಗಳು ನಡೆಸಿದ ಹುನ್ನಾರಗಳ ಬಗ್ಗೆ ಸಂಕಟ ಮನೆ ಮಾಡಿತ್ತು.

ಈ ಬಾರಿ ಅಂಬೇಡ್ಕರ್ ಜಯಂತಿ ನಡೆಯುವ ತಿಂಗಳಲ್ಲೇ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಬಾರಿಯ ಚುನಾವಣೆ ಹಿಂದಿನ ಚುನಾವಣೆಗಳಂತಲ್ಲ. ಬಹುಮುಖಿ ಭಾರತದ ಚಹರೆಯನ್ನೇ ಬದಲಿಸುವ ಭೀತಿಯನ್ನುಂಟು ಮಾಡಿದ ಚುನಾವಣೆ ಇದು. ಈ ಚುನಾವಣೆ ಫಲಿತಾಂಶದ ಮೇಲೆ ದೇಶದ ಸಂವಿಧಾನ ಮತ್ತು. ಪ್ರಜಾಪ್ರಭುತ್ವದ ಭವಿಷ್ಯ ನಿಂತಿದೆ. ಸಂವಿಧಾನವನ್ನು ಬದಲಿಸುತ್ತೇವೆಂದು ಹೇಳುವುದು ಮಾತ್ರವಲ್ಲ ಆ ಸಂವಿಧಾನವನ್ನು ದೇಶದ ರಾಜಧಾನಿ ದಿಲ್ಲಿಯಲ್ಲಿ ಸಂಸತ್ ಭವನದ ಎದುರೇ ಸುಟ್ಟುಹಾಕಿದ ಘಟನೆಯೂ ನಡೆಯಿತು. ಸಂವಿಧಾನ ಸುಟ್ಟವರ ಮೇಲೆ ಸರಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ.
ಸಂವಿಧಾನ ಇಲ್ಲದ ಭಾರತ ಹೇಗಿತ್ತು ಎಂದು ಊಹೆ ಮಾಡಿದರೆ ಹೆದರಿಕೆಯಾಗುತ್ತದೆ. ಮುಂಚೆ ರಾಜ ಮಹಾರಾಜರ ಕಾಲದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಆಧರಿಸಿ ಈ ಸಮಾಜ ನಡೆಯುತ್ತಿತ್ತು.ರಾಜನ ಮಗ ರಾಜ.ಶಾನುಭೋಗನ ಮಗ ಶಾನುಭೋಗ, ಕಸಗುಡಿಸುವವನ ಮಗ ಕಸಗುಡಿಸುವವನಾಗುವ ವ್ಯವಸ್ಥೆ ಆಗಿತ್ತು. ಬ್ರಿಟಿಷರ ಕಾಲದಲ್ಲಿ ಈ ವ್ಯವಸ್ಥೆಗೆ ಕೊಂಚ ಪೆಟ್ಟು ಬಿತ್ತು. ಸೆಗಣಿ ಬಳಿಯುವವರ ಮಕ್ಕಳು ಶಾಲೆಗೆ ಹೋಗುವಂತಾಯಿತು. ಅಂತಲೇ ರಾಷ್ಟ್ರಕವಿ ಕುವೆಂಪು ಅವರು, ಬ್ರಿಟಿಷರು ಬರದಿದ್ದರೆ ನಾನು ದನದ ಕೊಟ್ಟಿಗೆಯಲ್ಲಿ ಸೆಗಣಿ ಬಳಿಯುತ್ತಿದ್ದೆ ಎಂದು ಹೇಳಿದ್ದಾರೆ. ಇದರರ್ಥ ವಿದೇಶಿ ಆಡಳಿತ ಒಳ್ಳೆಯದೆಂದಲ್ಲ. ಆದರೆ ಅದನ್ನು ಬರಮಾಡಿಕೊಳ್ಳುವಷ್ಟು ಈ ದೇಶದ ಜಾತಿ ವ್ಯವಸ್ಥೆ ಅಸಮಾನತೆಯಿಂದ ಕೂಡಿತ್ತು.

ದೇಶಕ್ಕೆ ಸ್ವಾತಂತ್ರ ಬಂದಾಗ ಭಾರತದಲ್ಲಿ 4,635 ಜನಾಂಗೀಯ ಪಂಗಡಗಳು, 325 ಭಾಷೆಗಳು, 25 ಲಿಪಿಗಳು ಆರಕ್ಕಿಂತ ಹೆಚ್ಚು ಪ್ರಧಾನ ಧರ್ಮಗಳು, 500ಕ್ಕಿಂತ ಹೆಚ್ಚು ಸಂಸ್ಥಾನಗಳು, ನೂರಾರು ಜಾತಿ, ಉಪಜಾತಿಗಳು, ತಮ್ಮದೇ ಆಹಾರ ಪದ್ಧತಿ ಹೊಂದಿದ ವಿಭಿನ್ನ ಸಂಸ್ಕೃತಿ ಗಳ ಜನ ಸಮುದಾಯಗಳು ಇವೆಲ್ಲವನ್ನು ಒಟ್ಟುಗೂಡಿಸಿ ಭಾರತ ಎಂಬ ಪರಿಕಲ್ಪನೆಯಲ್ಲಿ ಒಂದುಗೂಡಿಸಿ ಒಂದು ದೇಶವನ್ನಾಗಿ ಮಾಡಿದ್ದು ಬಾಬಾ ಸಾಹೇಬರು ರೂಪಿಸಿದ ನಮ್ಮ ಸಂವಿಧಾನ. ಈ ದೇಶ ಮುನ್ನ ಡೆಯಲು ಒಂದು ಸಂವಿಧಾನ ಬೇಕಿತ್ತು. ಅದನ್ನು ಅಂಬೇಡ್ಕರ್ ನೀಡಿದರು. ಈ ಸಂವಿಧಾನ ಜಾತಿ, ಮತ, ಭಾಷೆ ಧರ್ಮದ ಆಧಾರದಲ್ಲಿ ನಡೆಯುತ್ತ ಬಂದ ತಾರತಮ್ಯವನ್ನು ನಿವಾರಿಸುವ ದಿಶೆನಲ್ಲಿ ಮಹತ್ವದ ದಿಕ್ಕನ್ನು ಈ ದೇಶಕ್ಕೆ ತೋರಿಸಿತು. ನಮ್ಮ ಸಂವಿಧಾನ ಜಗತ್ತಿನಲ್ಲೇ ಅತಿ ದೊಡ್ಡದಾದ ಲಿಖಿತ ಸಂವಿಧಾನ. ಇಂಥ ಸಂವಿಧಾನವನ್ನು ಬದಲಿಸಿ ಬ್ರಿಟಿಷರು ಬರುವುದಕ್ಕಿಂತ ಮುಂಚೆ ಇದ್ದ ಮನುಸ್ಮತಿಯನ್ನೇ ದೇಶದ ಸಂವಿಧಾನವನ್ನಾಗಿ ಮಾಡುವ ಹುನ್ನಾರ ಇತ್ತೀಚೆಗೆ ತೀವ್ರ ಸ್ವರೂಪದಲ್ಲಿ ನಡೆದಿದೆ. ಇದು ಈಗ ನಡೆದ ಮಸಲತ್ತಲ್ಲ. ಇದಕ್ಕೆ ದಶಕಗಳ ಇತಿಹಾಸವಿದೆ. ಬಾಬಾಸಾಹೇಬರ ನೇತೃತ್ವದ ಸಂವಿಧಾನ ಕರಡು ರಚನಾ ಸಮಿತಿ ಸಂವಿಧಾನಕ್ಕೆ ಅಂತಿಮ ಸ್ವರೂಪ ನೀಡಿದಾಗ ಶತಮಾನಗಳಿಂದ ಇನ್ನೊಬ್ಬರ ದುಡಿಮೆಯಲ್ಲಿ ಮಜಾ ಮಾಡುತ್ತಿದ್ದ ಶೋಷಕ ವರ್ಗಗಳು ಸಹಿಸಲಿಲ್ಲ. ಈ ಸಂವಿಧಾನ ಭಾರತದ ಆಚಾರ ವಿಚಾರಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಆರೆಸ್ಸೆಸ್‌ನ ಅಂದಿನ ಸರ ಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಟೀಕಿಸಿದ್ದರು. ಆದರೆ ಆಗ ಇಡೀ ದೇಶವೇ ಒಂದಾಗಿ ಸಂವಿಧಾನವನ್ನು ಬೆಂಬಲಿಸಿದ್ದರಿಂದ ಇವರ ಆಟ ನಡೆಯಲಿಲ್ಲ.

ಈ ಧರ್ಮ ಸಂಸತ್ ಆಗಾಗ ಸಭೆ ಸೇರುತ್ತದೆ. ಹಿಂದೂ ಧರ್ಮದ ರಕ್ಷಣೆ ಹೆಸರಿನಲ್ಲಿ ಅಸಮಾನತೆಯ ಮನುವಾದಿ ಕಂದಾಚಾರಗಳನ್ನು ದೇಶದ ಮೇಲೆ ಹೇರುವುದು ಇದರ ಹುನ್ನಾರವಾಗಿದೆ. ಇದರ ಅಪಾಯಕಾರಿ ಚಟುವಟಿಕೆಗಳ ಬಗ್ಗೆ ಕಮ್ಯುನಿಸ್ಟರು ಮುಂಚಿನಿಂದ ಹೇಳುತ್ತಾ ಬಂದರೂ ಉಳಿದವರು ಗಂಭೀರವಾಗಿ ಪರಿಗಣಿಸಲಿಲ್ಲ. ಐವತ್ತರ ದಶಕದಲ್ಲಿ ಸಂವಿಧಾನವನ್ನು ವಿರೋಧಿಸಿದ್ದ ಶಕ್ತಿಗಳು ಮತ್ತೆ ಬಾಲ ಬಿಚ್ಚಿದ್ದು ತೊಂಬತ್ತರ ದಶಕದಲ್ಲಿ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಚಳವಳಿಯ ಆಸುಪಾಸಿನಲ್ಲಿ ದೊರೆತ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಮನುವಾದಿ, ಕೋಮುವಾದಿ ಶಕ್ತಿಗಳು ಹಿಂದೂ ಮೇಲ್ಜಾ ತಿಯ ಧರ್ಮ ಗುರುಗಳ ಸಭೆಯೊಂದನ್ನು ಕರೆದು ಭಾರತದ ಜನತೆ ಚುನಾಯಿಸಿದ ಸಂಸತ್ತಿಗೆ ಪ್ರತಿಯಾಗಿ ಧರ್ಮ ಸಂಸತ್ ನ್ನು ರಚಿಸಿದರು.ಈ ಧರ್ಮ ಸಂಸತ್ ಉದ್ದೇಶ ಈಗಿರುವ ಸಂವಿಧಾನವನ್ನು ಬದಲಿಸಿ ಮನುವಾದಿ ಸಂವಿಧಾನವನ್ನು ದೇಶದ ಮೇಲೆ ಹೇರುವುದಾಗಿದೆ.

ಸಂವಿಧಾನ ಜಾರಿಗೆ ಬಂದ ನಂತರ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಸಂವಿಧಾನ ಬರುವುದಕ್ಕಿಂತ ಮುಂಚೆ ಭಾರತ ಒಂದಾಗಿರಲಿಲ್ಲ. ಈ ದೇಶದಲ್ಲಿ ಊರೂರಿಗೆ ರಾಜ ಮಹಾರಾಜರಿದ್ದರು. ಗುಪ್ತರ ಭಾರತ, ವೌರ್ಯರ ಭಾರತ. ಹರ್ಷವರ್ಧನನ ಭಾರತ ಎಂದೆಲ್ಲ ಹರಿದು ಹಂಚಿ ಹೋಗಿತ್ತು. ಕಾಶ್ಮೆರದಿಂದ ಕನ್ಯಾಕುಮಾರಿಯವರೆಗೆ ಈ ಭೂಪ್ರದೇಶ ಒಂದೇ ಆಡಳಿತಕ್ಕೊಳಪಟ್ಟಿರಲಿಲ್ಲ. ಸಂವಿಧಾನ ಈ ದೇಶವನ್ನು ಒಂದು ಗೂಡಿಸಿತು. ಇಂಥ ಸಂವಿಧಾನದ ವಿರುದ್ಧ್ದ ನಡೆದಿರುವ ಸಂಚು ಆಘಾತಕಾರಿಯಾಗಿದೆ. ಈ ಸಂಚಿನ ಭಾಗವಾಗಿಯೇ ಹೊಸ ಪೀಳಿಗೆಯ ಯುವಕರ ಮೆದುಳಲ್ಲಿ ವಿಷ ತುಂಬಲಾಗುತ್ತದೆ. ಇಂಥ ವಿಷ ತುಂಬಿಕೊಂಡವರಿಂದ ಅರವತ್ತು ವರ್ಷಗಳಲ್ಲಿ ಈ ದೇಶದಲ್ಲಿ ಏನೂ ಆಗಿಲ್ಲ, ಮೋದಿ ಬಂದ ನಂತರವೇ ಎಲ್ಲ ಆಗಿದೆ ಎಂಬಂಥ ಮಾತುಗಳು ಕೇಳಿ ಬರುತ್ತಿವೆ. ಇದೇ ರೀತಿ ಮುಂದುವರಿದರೆ ನಮ್ಮ ರಾಜಕೀಯ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬರುತ್ತದೆ ಆದಷ್ಟು ಬೇಗ ಈ ವೈರುಧ್ಯಗಳನ್ನು ನಿರ್ಮೂಲನ ಮಾಡಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು.

ಈ ಅಪಾಯದ ಅರಿವಿದ್ದ ಬಾಬಾಸಾಹೇಬರು 1950ರ ಜನವರಿ 26 ರಂದು ನಾವು ಹೊಸ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ಸಮಾನತೆ ಪಡೆದಿರುತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರಿದಿರುತ್ತದೆ. ರಾಜಕೀಯದಲ್ಲಿ ಒಬ್ಬರಿಗೆ ಒಂದು ಓಟು ಮತ್ತು ಒಂದು ಓಟಿಗೆ ಒಂದು ವೌಲ್ಯವನ್ನು ಪರಿಗಣಿಸಿರುತ್ತೇವೆ. ಆದರೆ ನಮ್ಮ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಮನುಷ್ಯನಿಗೆ ಒಂದು ವೌಲ್ಯ ಎಂಬ ತತ್ವವನ್ನು ನಿರಾಕರಿಸಲಾಗುತ್ತಿದೆ. ಈ ವೈರುಧ್ಯಗಳಿಂದ ಕೂಡಿದ ಸಮಾಜವನ್ನು ಎಷ್ಟು ಕಾಲ ಮುಂದುವರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದರು.

ಸರ್ವರಿಗೂ ಸಮಾನಾವಕಾಶ ನೀಡಿದ ಭಾರತದ ಸಂವಿಧಾನ ಈಗ ಬಿಕ್ಕಟ್ಟಿನಲ್ಲಿದೆ. ಅಧಿಕಾರ ಕೇಂದ್ರದ ಅಂಗಳದಿಂದಲೇ ಸಂವಿಧಾನ ಬದಲಾವಣೆಯ ಅಪಸ್ವರಗಳುಕೇಳಿ ಬರುತ್ತಿವೆ. ಈ ಸಂವಿಧಾನ ಹೋದರೆ ಸಕಲರಿಗೂ ಸಮಾನಾವಕಾಶದ ತತ್ವ ಮಾಯವಾಗುತ್ತದೆ. ಮೀಸಲಾತಿ ರದ್ದಾಗುತ್ತದೆ. ಮಹಿಳೆಯರಿಗೆ ಈಗಿರುವ ಸ್ವಾತಂತ್ರ ಅಪಹರಣವಾಗುತ್ತದೆ. ಜನರು ಚುನಾಯಿಸುವ ಸಂಸತ್ತಿನ ಬದಲಾಗಿ ಮಠಾಧೀಶರು ಮತ್ತು ಕೋಮುವಾದಿಗಳು ಚುನಾಯಿಸುವ ಧರ್ಮ ಸಂಸತ್ ಅಸ್ತಿತ್ವಕ್ಕೆ ಬರುತ್ತದೆ. ಮೋದಿಯವರು ಈ ಬಾರಿ ಚುನಾಯಿತರಾಗಿ ಬಂದರೆ ಮುಂದಿನ ಲೋಕಸಭಾ (2024) ಚುನಾವಣೆ ನಡೆಯುವುದಿಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಈಗಾಗಲೇ ಹೇಳಿದ್ದಾರೆ. ಈ ಹೇಳಿಕೆಯನ್ನು ಪ್ರಧಾನಿ ಸೇರಿದಂತೆ ಯಾರೂ ನಿರಾಕರಿಸಿಲ್ಲ. ಬದಲಾಗಿ ಸಾಕ್ಷಿ ಮಹಾರಾಜ್‌ಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯ ಟಿಕೆಟ್ ನೀಡಲಾಗಿದೆ.

ಈ ಸಲದ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಸಂವಿಧಾನಕ್ಕೆ ಎದುರಾಗಬಹುದಾದ ಗಂಡಾಂತರದ ಸೂಕ್ಷ್ಮ ಸುಳಿವುಗಳು ದೊರೆತಿವೆ. ಕೇರಳದ ಶಬರಿಮಲೆಯಲ್ಲಿ ಅಯ್ಯಪ್ಪದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಧಾರ್ಮಿಕ ನಂಬಿಕೆ ಆಧಾರದಲ್ಲಿ ನಿಷೇಧಿಸಲಾಗಿದೆ. ಸುಪ್ರೀಂ ಕೋರ್ಟ್ ಮಹಿಳೆಯರ ಮೇಲಿನ ಈ ನಿರ್ಬಂಧವನ್ನು ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸಂಘಪರಿವಾರ ಇತ್ತೀಚೆಗೆ ಕೇರಳದಲ್ಲಿ ಹಿಂಸಾಚಾರ ನಡೆಸಿತು. ಈಗ ಬಿಜೆಪಿ ಪ್ರಣಾಳಿಕೆಯಲ್ಲಿ ಮಹಿಳೆಯರ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಆಚರಣೆಗಳ ರಕ್ಷಣೆಗಾಗಿ ಕಾನೂನಿಗೆ ತಿದ್ದುಪಡಿ ತರಲಾಗುವುದೆಂದು ಘೋಷಿಸಲಾಗಿದೆ. ಇದರರ್ಥ ಮಹಿಳೆಯರಿಗೆ ಸಂವಿಧಾನ ನೀಡಿರುವ ಹಕ್ಕುಗಳ ಅಪಹರಣವಲ್ಲದೇ ಬೇರೇನೂ ಅಲ್ಲ. ಈಗ ನಾವು ಸುಮ್ಮನಿದ್ದುಬಿಟ್ಟರೆ ನಾಳೆ ದಲಿತರು ಮತ್ತು ಹಿಂದುಳಿದವರ ದೇವಾಲಯ ಇತ್ಯಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕಾನೂನಿಗೆ ತಿದ್ದುಪಡಿ ತಂದರೆ ಅಚ್ಚರಿ ಪಡಬೇಕಾಗಿಲ್ಲ.

ಬಿಜೆಪಿ ಪರೋಕ್ಷವಾಗಿ ಹೇಳುವ ಸಂಘ ಪರಿವಾರದ ಹಿಂದೂರಾಷ್ಟ್ರ ನಿರ್ಮಾಣದ ಘೋಷಣೆಯೇ ಸಂವಿಧಾನ ವಿರೋಧಿಯಾಗಿದೆ. ಭಾರತವು ಎಲ್ಲ ಧರ್ಮಗಳಿಗೆ ಸೇರಿದದೇಶ ಎಂದು ಸಂವಿಧಾನ ಸಾರಿದೆ. ಭಾರತ ಸಾರ್ವಭೌಮ ಸಮಾಜವಾದಿ ಧರ್ಮ ನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿಯೇ ಮುಂದುವರಿಯುತ್ತದೆ. ಹಾಗೆ ಮುಂದುವರಿದರೆ ಮಾತ್ರ ಈ ದೇಶ ಸುರಕ್ಷಿತವಾಗಿರುತ್ತದೆ. ಇದು ಸರ್ವ ಜನಾಂಗದ ಶಾಂತಿಯ ತೋಟ. ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ ಎಂದು ಬಲವಂತವಾಗಿ ಹೇರಲು ಹೊರಟರೆ ಈ ದೇಶ ಛಿದ್ರ ಛಿದ್ರವಾಗುತ್ತದೆ. ಅದನ್ನು ತಪ್ಪಿಸಬೇಕೆಂದರೆ ಸಂವಿಧಾನ ವಿರೋಧಿ ಫ್ಯಾಶಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ಹೊರದಬ್ಬಬೇಕಾಗಿದೆ.

ಈ ದೇಶದಲ್ಲಿ ನೆಲೆಸಿದವರು ಯಾವುದೇ ಧರ್ಮದವರಿರಲಿ, ಯಾವುದೇ ಜನಾಂಗದವರಿರಲಿ, ಯಾವುದೇ ಭಾಷೆಯನ್ನಾಡಲಿ ಮೊದಲು ಅವರು ಈ ದೇಶದ ಸಂವಿಧಾನಕ್ಕೆ ತಲೆ ಬಾಗಬೇಕು.

ಸಂವಿಧಾನದಡಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಂವಿಧಾನಕ್ಕೆ ನಿಷ್ಠೆ ಹೊಂದಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿದವರೇ ಇಂದು ಸಂವಿಧಾನದ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಹಿಂದೂ ರಾಷ್ಟ್ರದ ಘೋಷಣೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ಧ ಹಿಂಸೆಗೆ ಪ್ರಚೋದಿಸುತ್ತಿದ್ದಾರೆ. ದಲಿತರ ಧ್ವನಿಯನ್ನು ಅಡಗಿಸಲು ಬ್ರಿಟಿಷ್ ಕಾಲದ ರಾಜದ್ರೋಹದ ಕಾನೂನನ್ನು ಬಳಸಿಕೊಳ್ಳುತ್ತಿದ್ದಾರೆ, ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ನಲ್ಲಿ ದಲಿತರ ಮೇಲೆ ಹಿಂಸಾಚಾರ ಮಾಡಿದವರಿಗೆ ರಕ್ಷಣೆ ನೀಡಿ ದಲಿತ ನಾಯಕರನ್ನು, ಚಿಂತಕರನ್ನು ಬಂಧಿಸಿ ರಾಜದ್ರೋಹದ ಆರೋಪ ಹೊರಿಸಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದಾರೆ. ಇವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಮಾತ್ರವಲ್ಲ ಪ್ರಜಾಪ್ರಭುತ್ವವೇ ನಾಶವಾಗುತ್ತದೆ. ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಬಾಬಾಸಾಹೇಬರ ಸಂವಿಧಾನ ಬೇಕೋ ಅಥವಾ ಜಾತಿ ಶ್ರೇಣೀಕರಣದ ಮನುಸ್ಮತಿ ಬೇಕೋ? ರಾಜ್ಯಾಂಗ ಬೇಕೋ? ಅಥವಾ ಪಂಚಾಂಗ ಬೇಕೋ ಎಂಬುದನ್ನು ನಾವು ತೀರ್ಮಾನಿಸಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News