ಸೋಲನ್ನೇ ಕಾಣದ ಖರ್ಗೆ ಎಂಬ ಜನ ನಾಯಕ

Update: 2019-04-21 18:41 GMT

ಖರ್ಗೆಯವರು ಬರೀ ಮಾತಾಡುವವರಲ್ಲ. ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಖರ್ಗೆಯವರು ಮಾಡಿದ ಕೆಲಸಗಳನ್ನು ಕಣ್ಣಾರೆ ಕಾಣಬೇಕು. ತಾನು ಮಾಡಿದ ಕೆಲಸದ ಬಗ್ಗೆ ಖರ್ಗೆಯವರು ಎಂದೂ ಡಂಗುರ ಸಾರಿದವರಲ್ಲ. ಅಂತಲೇ ಕಳೆದ ಐವತ್ತು ವರ್ಷಗಳಿಂದ ಈ ಭಾಗದ ಜನ ಅವರನ್ನು ಚುನಾಯಿಸುತ್ತ ಬಂದಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತ್ಯಂತ ಗಮನ ಸೆಳೆದ ಮತ ಕ್ಷೇತ್ರ ಯಾವುದು? ಕನ್ನಡ ಟಿವಿ ಮಾಧ್ಯಮಗಳ ದೃಷ್ಟಿಯಲ್ಲಿ ಸುಮಲತಾ ಮತ್ತು ಮುಖ್ಯಮಂತ್ರಿ ಪುತ್ರ ನಿಖಿಲ್ ಸ್ಪರ್ಧಿಸಿದ ಮಂಡ್ಯ ಲೋಕಸಭಾ ಕ್ಷೇತ್ರ ಹೆಚ್ಚು ಪ್ರಾಮುಖ್ಯತೆ ಪಡೆದ ಕ್ಷೇತ್ರ. ಆದರೆ ಇಡೀ ದೇಶದ ಗಮನ ಸೆಳೆದ ಮತಕ್ಷೇತ್ರವೆಂದರೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿದ ಕಲಬುರಗಿ. ಪ್ರಧಾನ ಮಂತ್ರಿ ತೀವ್ರ ಆಸಕ್ತಿ ಹೊಂದಿರುವ ಮತ ಕ್ಷೇತ್ರವಿದು.

ಕಲಬುರಗಿ ಮತಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಆಸಕ್ತಿ ಹೊಂದಿದ್ದಾರೆ. ತಮ್ಮೆಲ್ಲ ಶಕ್ತಿಯನ್ನು ಅಲ್ಲಿ ವಿನಿಯೋಗ ಮಾಡುತ್ತಿದ್ದಾರೆ. ಖರ್ಗೆ ಸೋಲಿನ ಬಗ್ಗೆ ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರವೂ ವಿಶೇಷ ಆಸಕ್ತಿ ಹೊಂದಿದೆ

ಈ ಬಾರಿ ಖರ್ಗೆಯವರು ಜಯಶಾಲಿಯಾದರೆ ಪ್ರಧಾನಿ ಸ್ಥಾನದ ಹೊಣೆಗಾರಿಕೆಯೂ ಅವರ ಮನೆ ಬಾಗಿಲಿಗೆ ಬರಲಿದೆ. ಕಾಂಗ್ರೆಸ್‌ಗೆ ನಿಚ್ಚಳ ಬಹುಮತ ಬರುತ್ತದೆ ಎಂದು ಆ ಪಕ್ಷವೂ ನಿರೀಕ್ಷಿಸಿಲ್ಲ. ಸಮಾನ ಮನಸ್ಕ ಪಕ್ಷಗಳು ಸೇರಿ ಸರಕಾರ ರಚಿಸುವ ಸಂದರ್ಭ ಬಂದರೆ ಹಿಂದೆ ದೇವೇಗೌಡರಿಗೆ ಒಲಿದು ಬಂದಂತೆ ಈ ಬಾರಿ ಖರ್ಗೆಯವರಿಗೆ ಪ್ರಧಾನಿ ಸ್ಥಾನ ಒಲಿದು ಬರಬಹುದು ಎಂಬ ಮಾತು ದಿಲ್ಲಿಯ ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿದೆ.

ಕಳೆದ ಐದು ವರ್ಷಗಳ ಕಾಲಾವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯ ಕಾಂಗ್ರೆಸ್ ಗುಂಪಿನ ನಾಯಕರಾಗಿ ತಮ್ಮ ಅಭ್ಯಾಸಪೂರ್ಣ ಭಾಷಣಗಳ ಮೂಲಕ ಇಡೀ ದೇಶದ ಗಮನ ಸೆಳೆದರು. ಮೋದಿ ಸರಕಾರವನ್ನು ತುದಿಗಾಲ ಮೇಲೆ ನಿಲ್ಲಿಸುವ ಯಾವ ಅವಕಾಶವನ್ನು ಖರ್ಗೆಯವರು ಕಳೆದುಕೊಳ್ಳಲಿಲ್ಲ. ಕಳೆದ ಲೋಕಸಭೆಗೆ ಹೋಗುವ ಮುನ್ನ ಕರ್ನಾಟಕದ ನಾಲ್ಕು ದಶಕಗಳ ರಾಜಕೀಯದ ಅನುಭವವಿದ್ದ ಖರ್ಗೆ ಅವರು ಯುಪಿಎ ಸರಕಾರವಿದ್ದಾಗ ಮೊದಲ ಬಾರಿ ಸಂಸತ್ತನ್ನು ಪ್ರವೇಶಿಸಿ ಕೇಂದ್ರ ಕಾರ್ಮಿಕ ಮತ್ತು ರೈಲ್ವೆ ಮಂತ್ರಿಯಾಗಿ ಸಾಕಷ್ಟು ಕೆಲಸ ಮಾಡಿದರು. ಕರ್ನಾಟಕಕ್ಕೆ ಹೊಸ ಯೋಜನೆಗಳನ್ನು ತಂದರು.

 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಂದರೆ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಖರ್ಗೆಯವರು ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕತ್ವವನ್ನು ವಹಿಸಿಕೊಂಡರು. ಮೋದಿ ಸರಕಾರ ಖರ್ಗೆಯವರನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾನ್ಯ ಮಾಡಬೇಕಾಗಿತ್ತು. ಆದರೆ ಮಾಡಲಿಲ್ಲ. ಆದರೆ ಖರ್ಗೆ ಜಗ್ಗಲಿಲ್ಲ. ಕೇವಲ ನಲವತ್ತು ಮಂದಿ ಕಾಂಗ್ರೆಸ್ ಸಂಸದರನ್ನು ಕಟ್ಟಿಕೊಂಡು ಮೋದಿ ಸರಕಾರದ ವಿರುದ್ಧ ಸದನದಲ್ಲಿ ಐದು ವರ್ಷ ಕಾಲ ಸೆಣಸಿದರು. ಸಾಮಾನ್ಯವಾಗಿ ದಕ್ಷಿಣ ಭಾರತದಿಂದ ಬರುವ ಸಂಸದರಿಗೆ ಹಿಂದಿ ಭಾಷೆ ಅಷ್ಟಾಗಿ ಬರುವುದಿಲ್ಲ. ಆದರೆ ಉತ್ತರ ಕರ್ನಾಟಕದ ಕಲಬುರಗಿಯ ಖರ್ಗೆಯವರಿಗೆ ಹಿಂದಿ ಮಾತ್ರವಲ್ಲ ಮರಾಠಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಪ್ರಭುತ್ವವಿದೆ.

ಕಳೆದ ಐದು ವರ್ಷಗಳ ಕಾಲಾವಧಿಯಲ್ಲಿ ಲೋಕಸಭೆಯಲ್ಲಿ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಯಾವ ಅವಕಾಶವನ್ನು ಖರ್ಗೆಯವರು ಕಳೆದುಕೊಳ್ಳಲಿಲ್ಲ. ಖರ್ಗೆಯವರ ಮಾತಿಗೆ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮೋದಿಯವರು ಸದನಕ್ಕೆ ಬಾರದೆ ತಪ್ಪಿಸಿಕೊಳ್ಳುತ್ತಿದ್ದರು. ತಮ್ಮ ಕೊಠಡಿಯಲ್ಲೇ ಕುಳಿತು ಸದನದ ಕಲಾಪ ವೀಕ್ಷಿಸುತ್ತಿದ್ದರು. ಅಂತಲೇ ಖರ್ಗೆಯವರು ಮೋದಿ ಬಗ್ಗೆ ಆತ ಹೊರಗೆ ಹುಲಿ, ಸದನದಲ್ಲಿ ಇಲಿ ಎಂದು ಜೋಕ್ ಮಾಡುತ್ತಾರೆ.

ದೇಶದ ಹಾಗೂ ಜನತೆಯ ಹಿತಾಸಕ್ತಿಯ ಪ್ರಶ್ನೆಯಲ್ಲಿ ಮೋದಿ ಸರಕಾರದ ಜೊತೆ ಖಗೆರ್ ಎಂದೂ ರಾಜಿ ಮಾಡಿಕೊಳ್ಳದೆ ಅನೇಕ ಬಾರಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಕಮ್ಯುನಿಸ್ಟ್ ಪಕ್ಷದ ಯುವ ನಾಯಕ ಕನ್ಹಯ್ಯ್ ಕುಮಾರ್ ಅವರನ್ನು ಬಿಟ್ಟರೆ ಖರ್ಗೆಯವರ ಮಾತಿಗೆ ಮೋದಿ ಬೆಚ್ಚಿ ಬೀಳುತ್ತಾರೆ ಎಂದು ಅನೇಕ ಸಂಸದರು ಹೇಳುತ್ತಾರೆ.

ಹಿಂದೆ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಪ್ರಧಾನಿ ಸ್ಥಾನವನ್ನು ನಿರಾಕರಿಸಿದಾಗ ದೇವೇಗೌಡರಿಗೆ ಆ ಸ್ಥಾನ ಒಲಿದು ಬಂತು. ಅನಿರೀಕ್ಷಿತವಾಗಿ ಬಂದ ಈ ಅವಕಾಶವನ್ನು ದೇವೇಗೌಡರು ಸಮರ್ಥವಾಗಿ ನಿಭಾಯಿಸಿದರು. ಅದೇ ರೀತಿ ಸದನದಲ್ಲಿ ಪ್ರತಿಪಕ್ಷ ಅಂದರೆ ಕಾಂಗ್ರೆಸ್ ತಂಡದ ನಾಯಕತ್ವ ವಹಿಸಿಕೊಳ್ಳುವ ಅವಕಾಶ ಬಂದಾಗ ಖರ್ಗೆಯವರು ಅದನ್ನು ಸಮರ್ಥವಾಗಿ ನಿಭಾಯಿಸಿದರು. ರಫೇಲ್ ಸೇರಿದಂತೆ ಹಲವಾರು ಹಗರಣಗಳನ್ನು ಬಯಲಿಗೆಳೆದರು. ರೋಹಿತ್ ವೇಮುಲ ಸಾವು ಹಾಗೂ ಜೆಎನ್‌ಯು ಪ್ರಕರಣಗಳಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಸದನದಲ್ಲಿ ಒಂದು ಬಾರಿ ಗೋಮಾಂಸ ಸೇವನೆ ಬಗ್ಗೆ ಬಿಜೆಪಿ ಸದಸ್ಯರು ಗಲಾಟೆ ಮಾಡಿ ಗೋಮಾಂಸ ತಿನ್ನುವವರು ದೇಶವನ್ನು ಬಿಟ್ಟು ಹೋಗಬೇಕೆಂದು ಕೂಗಾಡಿದರು. ಆಗ ಕೆರಳಿ ನಿಂತ ಖರ್ಗೆಯವರು, ‘ಈ ದೇಶ ನಮ್ಮದು. ನಾವು ಈ ದೇಶದ ಮೂಲ ನಿವಾಸಿಗಳು. ನೀವು ಹೊರಗಿನಿಂದ ಬಂದವರು ನೀವು ದೇಶದಿಂದ ತೊಲಗಿ’ ಎಂದು ಗರ್ಜಿಸಿದರು. ಆಗ ಸದನ ನಿಶ್ಯಬ್ದವಾಯಿತು.
 ಇನ್ನೊಂದು ಸಂದರ್ಭದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಅಯೋಧ್ಯೆಯ ಮಂದಿರದ ಬಗ್ಗೆ ಹೇಳುತ್ತಾ, ಶ್ರೆರಾಮಚಂದ್ರನ ಮಹಿಮೆಗಳ ಬಗ್ಗೆ ವರ್ಣಿಸತೊಡಗಿದರು. ಆಗ ಖರ್ಗೆಯವರು ಎದ್ದು ನಿಂತು, ನೀವು ರಾಮ, ಕೃಷ್ಣರ ಬಗ್ಗೆ ಹೇಳುತ್ತೀರಿ. ಆದರೆ ಹೆಬ್ಬೆರಳು ಕಳೆದುಕೊಂಡ ಏಕಲವ್ಯ ಮತ್ತು ಶಂಭೂಕನ ಬಗ್ಗೆ ಮಾತಾಡುವುದಿಲ್ಲ. ಮಾತಾಡಿದರೆ ನಿಮ್ಮ ಬುಡಕ್ಕೆ ಬರುತ್ತದೆ ಎಂದು ಜಾಡಿಸಿದರು.
ನಾನು ಖರ್ಗೆಯವರನ್ನು 1972ರಿಂದ ನೋಡುತ್ತಿದ್ದೇನೆ. ವಿದ್ಯಾರ್ಥಿ ಯಾಗಿದ್ದಾಗಲೇ ಕಾರ್ಮಿಕ ಚಳವಳಿಯಲ್ಲಿ ಅವರು ಪಾಲ್ಗೊಂಡವರು. ಅವರ ತಂದೆ ಮಾಪಣ್ಣ ಖರ್ಗೆ ಕಲಬುರಗಿ ಎಂ.ಎಸ್.ಕೆ. ಮಿಲ್ ಕಾರ್ಮಿಕರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಬೆಳೆದದ್ದು ಲೇಬರ್ ಕಾಲನಿಯಲ್ಲಿ.

 ಹೈದರಾಬಾದ್ ಕರ್ನಾಟಕ ಭಾಗದ ಕಮ್ಯುನಿಸ್ಟ್ ನಾಯಕರಾಗಿದ್ದ ಶ್ರೆನಿವಾಸ ಗುಡಿ ಮತ್ತು ಗಂಗಾಧರ ನಮೋಶಿಯವರ ಒಡನಾಟದಲ್ಲಿ ಬೆಳೆದ ಖರ್ಗೆಯವರ ಮೇಲೆ ಅಂಬೇಡ್ಕರ್ ಮತ್ತು ಅವರ ಸಮಕಾಲೀನರಾಗಿದ್ದ ಬಿ.ಶಾಮಸುಂದರ ಪ್ರಭಾವವೂ ಇತ್ತು. ಹೀಗಾಗಿ ವಕೀಲಿ ಪರೀಕ್ಷೆ ಪಾಸಾಗಿ ಕಪ್ಪುಕೋಟ್ ಹಾಕಿದ ನಂತರ ಖರ್ಗೆ ರಾಜಕೀಯ ಪ್ರವೇಶಿಸಿದ್ದು ಅಂಬೇಡ್ಕರ್ ಅವರ ರಿಪಬ್ಲಿಕನ್ ಪಾರ್ಟಿ ಮೂಲಕ. ಆನಂತರ 1972ರಲ್ಲಿ ದೇವರಾಜ ಅರಸರು ಖರ್ಗೆ ಮತ್ತು ಧರಂಸಿಂಗ್‌ರನ್ನು ಗುರುತಿಸಿ ಕಾಂಗ್ರೆಸ್ ಟಿಕೆಟ್ ನೀಡಿ ವಿಧಾನಸಬೆಗೆ ಆರಿಸಿ ತಂದರು. ಹೀಗಾಗಿ ರಿಪಬ್ಲಿಕನ್ ಪಾರ್ಟಿಯಲ್ಲಿದ್ದ ಖರ್ಗೆ ಮತ್ತು ಕಮ್ಯುನಿಸ್ಟರ ಒಡನಾಟದಲ್ಲಿದ್ದ ಧರಂಸಿಂಗ್ ಕಾಂಗ್ರೆಸ್ ಸೇರಿದರು. ಮತ್ತೆ ಇವರು ತಿರುಗಿ ನೋಡಲಿಲ್ಲ. ಮೊದಲ ಬಾರಿ ಖರ್ಗೆಯವರು ಸದನಕ್ಕೆ ಬಂದಾಗ ಇವರೇನು ಮಾತಾಡುತ್ತಾರೆ ಎಂದು ಎಲ್ಲರೂ ಅಚ್ಚರಿಗೊಂಡಿದ್ದರು. ಆದರೆ ಖರ್ಗೆ ಮೊದಲ ದಿನವೇ ತಮ್ಮ ಛಾಪು ಮೂಡಿಸಿದರು.

ಖರ್ಗೆಯವರು ಬರೀ ಮಾತಾಡುವವರಲ್ಲ. ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಖರ್ಗೆಯವರು ಮಾಡಿದ ಕೆಲಸಗಳನ್ನು ಕಣ್ಣಾರೆ ಕಾಣಬೇಕು. ತಾನು ಮಾಡಿದ ಕೆಲಸದ ಬಗ್ಗೆ ಖರ್ಗೆಯವರು ಎಂದೂ ಡಂಗುರ ಸಾರಿದವರಲ್ಲ. ಅಂತಲೇ ಕಳೆದ ಐವತ್ತು ವರ್ಷಗಳಿಂದ ಈ ಭಾಗದ ಜನ ಅವರನ್ನು ಚುನಾಯಿಸುತ್ತ ಬಂದಿದ್ದಾರೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಈ ದೇಶದಲ್ಲಿ ಈ ಸಮಾಜದಲ್ಲಿ ಶತಮಾನಗಳ ಕಾಲ ಕತ್ತಲ ಜಗತ್ತಿನಲ್ಲಿದ್ದ ಖರ್ಗೆಯವರು ಏಣಿಯ ಒಂದೊಂದೆ ಹಲಗೆಯನ್ನು ಹತ್ತಿ ಮೇಲೆ ಬಂದು ನಿಲ್ಲುವುದು ಸಾಮಾನ್ಯ ಸಂಗತಿಯಲ್ಲ. ಅದರಲ್ಲೂ ಗೌಡರು, ದೇಸಾಯರು, ದೇಶಮುಖರು, ದೇಶಪಾಂಡೆಗಳು, ನಾಡಗೌಡರಂಥ ಸಾವಿರಾರು ಎಕರೆ ಭೂಮಿ ಹೊಂದಿದ ಹೈದರಾಬಾದ್ ಕರ್ನಾಟಕದಲ್ಲಿ ಖರ್ಗೆಯವರು ಈ ಎತ್ತರಕ್ಕೆ ಬೆಳೆದು ನಿಂತಿರುವುದು ಸಾಮಾನ್ಯ ಸಂಗತಿಯಲ್ಲ. ಅದರ ಹಿಂದೆ ಅಪಾರ ಪರಿಶ್ರಮವಿದೆ. ನಿರಂತರವಾಗಿ ಅಧಿಕಾರದಲ್ಲಿದ್ದರೂ ಎಲ್ಲೂ ಹೆಸರು ಕೆಡಿಸಿಕೊಳ್ಳದ ಶುಭ್ರ ಚಾರಿತ್ರವಿದೆ. ಅಕ್ಷರವೆಂಬ ಯಾರೂ ಕಿತ್ತುಕೊಳ್ಳದ ಬಾಬಾಸಾಹೇಬರು ನೀಡಿದ ಅಸ್ತ್ರವಿದೆ. ಬಾಲ್ಯದಿಂದಲೂ ಓದಿದ ಅಂಬೇಡ್ಕರ್ ಸಾಹಿತ್ಯದ ಬೆಳಕು ನಿರಂತರವಾಗಿ ಮುನ್ನಡೆಸುತ್ತಿದೆ.

ನಾನು ಕಲಬುರಗಿ ನಗರವನ್ನು ಎಪ್ಪತ್ತರ ದಶಕದಿಂದ ನೋಡುತ್ತಿರುವೆ. ಅದರ ಹತ್ತಿರದ ಬಿಜಾಪುರ ಜಿಲ್ಲೆಯವನಾದ ನಾನು ಆಗಾಗ್ಗೆ ಅಲ್ಲಿ ಹೋಗುತ್ತಿರುತ್ತೇನೆ. ಆದರೆ ನಾನು ನಾಲ್ಕು ದಶಕಗಳ ಹಿಂದೆ ಕಂಡ ಕಲಬುರಗಿಗೂ ಇಂದಿನ ಕಲಬುರಗಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲಿನ ವಿಶಾಲವಾದ ರಸ್ತೆಗಳು, ಮೆಡಿಕಲ್ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಕಣ್ಣಿಗೆ ಎದ್ದು ಕಾಣುತ್ತವೆ. ಈ ಸಾಧನೆಗಳನ್ನು ನೋಡಿದರೆ ಖರ್ಗೆಯವರು ಅವಿರೋಧವಾಗಿ ಆರಿಸಿ ಬರಬೇಕು. ಆದರೆ ಇಂದಿನ ರಾಜಕೀಯದಲ್ಲಿ ಅದೆಲ್ಲಿ ಸಾಧ್ಯ?

ಒಂದು ಕಾಲದಲ್ಲಿ ಕರ್ನಾಟಕದ ಎರಡನೇ ರಾಜಧಾನಿ ಎಂದು ಹೆಸರಾಗಿದ್ದ ಹುಬ್ಬಳ್ಳಿ ಧಾರವಾಡಗಳು ಈಗ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಈ ಅವಳಿ ನಗರದ ರಸ್ತೆಗಳನ್ನು ನೋಡಿದರೆ ಇಲ್ಲಿಂದ ಸತತವಾಗಿ ಆರಿಸಿಬರುವ ಬಿಜೆಪಿ ಸಂಸದ ಹಾಗೂ ಶಾಸಕರ ಮೇಲೆ ಕೋಪ ಬರುತ್ತದೆ. ಜಗದೀಶ್ ಶಟ್ಟರ್ ಮುಖ್ಯ ಮಂತ್ರಿಯಾದರೂ ಹುಬ್ಬಳ್ಳಿ ಸುಧಾರಣೆ ಕಾಣಲಿಲ್ಲ. ಆದರೆ ಕಲಬುರಗಿ ಹಾಗೆ ಅಲ್ಲ. ಅಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಆದರೆ ಮಳೆಯ ಅಭಾವ ಮತ್ತು ಬೇಸಿಗೆಯ ಬಿಸಿಲಿಗೆ ಜನ ಬಳಲಿ ಬೆಂಡಾಗುತ್ತಾರೆ. ಈ ನಿಸರ್ಗ ಪ್ರಕೋಪ ಬಿಟ್ಟರೆ ಕಲಬುರಗಿ ಈಗ ರಾಜ್ಯದ ಬ್ರಹತ್ ನಗರವಾಗಿ ಬೆಳೆದು ನಿಂತಿದೆ. ಖರ್ಗೆಯವರು ಹಠ ಹಿಡಿದು ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಕಿದ್ವಾಯಿ ಆಸ್ಪತ್ರೆಗಳನ್ನು ಇಲ್ಲಿಗೆ ತಂದಿದ್ದಾರೆ. ಇದರಿಂದ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಲಬುರಗಿ ನನಗೆ ಯಾಕೆ ಇಷ್ಟವಾಗುತ್ತದೆ ಅಂದರೆ ಇಲ್ಲಿ ಕೋಮು ಗಲಭೆಯಿಲ್ಲ. ಕಳೆದ ನಾಲ್ಕು ದಶಕಗಳಿಂದ ಇಲ್ಲಿ ಹಿಂಸೆ, ಆಶಾಂತಿ, ಕರ್ಫ್ಯೂ, ಲಾಠಿ ಪ್ರಹಾರ, ಗೋಲಿಬಾರ್ ಯಾವುದೂ ನಡೆದಿಲ್ಲ. ಫ್ಯಾಶಿಸ್ಟ್ ಕೋಮುವಾದಿ ಶಕ್ತಿಗಳು ಇಲ್ಲಿ ಬಾಲ ಬಿಚ್ಚುವುದಿಲ್ಲ. ಇದರ ಶ್ರೇಯಸ್ಸು ಖರ್ಗೆಯವರಿಗೆ ಮಾತ್ರವಲ್ಲ ಇಲ್ಲಿನ ಬಸವ ಧರ್ಮೀಯರಿಗೆ, ದಲಿತ ಸಂಘಟನೆಗಳಿಗೆ, ಎಡಪಂಥೀಯ ಚಳವಳಿಗಳಿಗೆ ಸಲ್ಲುತ್ತದೆ. ಕಲಬುರಗಿಯ ಲಿಂಗಾಯತರು ಉತ್ತರ ಕರ್ನಾಟಕದ ಉಳಿದ ಕಡೆಗಳಂತೆ ಸಂಘಪರಿವಾರದ ಜೊತೆಗಿಲ್ಲ. ಅವರಿಗೆ ಇಂದಿಗೂ ಬಸವಣ್ಣ ಆದರ್ಶ. ಅವರ ಬೆಂಬಲ ಖರ್ಗೆಯವರಿಗೆ.
ಇಂಥ ಖರ್ಗೆಯವರನ್ನು ಸೋಲಿಸಲು ಕೋಮುವಾದಿ ಮತ್ತು ಜಾತಿವಾದಿ ಶಕ್ತಿಗಳು ಒಂದಾಗಿದ್ದರೂ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಆಸಕ್ತಿ ವಹಿಸಿದ್ದರೂ ಜಾತಿ ಮತ ಮೀರಿ ಜನ ಬೆಂಬಲ ಖರ್ಗೆಯವರಿಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News