ಐಪಿಎಲ್ 2019

Update: 2019-04-24 18:31 GMT

ಐಪಿಎಲ್ 2019ರಂತೆ ಈ ಬಾರಿಯ ಮಹಾಚುನಾವಣೆಯೂ ಹಲವು ವಾರಗಳ ಕಾಲ ನಡೆಯುತ್ತಿದೆ. ಸರಿ ಸುಮಾರು ಐದು ವಾರಗಳ ಕಾಲ ನಡೆಯುವ ಈ ಚುನಾವಣೆಯ ಫಲಿತಾಂಶಕ್ಕೆ ಅಭ್ಯರ್ಥಿಗಳು ಮಾತ್ರವಲ್ಲ, ಮತ ಹಾಕಿದವರೂ ಹಾಕದವರೂ ಕಾಯುವ ಕೆಲಸ ನಡೆದಿದೆ. ಈ ಬಾರಿಯ ಸುಡು ಬೇಸಿಗೆ ಕಾಯುವ ಕಾಲ.


ಶೀರ್ಷಿಕೆಯನ್ನು ನೋಡಿದರೆ ತಕ್ಷಣ ಈ ಲೇಖನ ಕ್ರಿಕೆಟ್ ಬಗ್ಗೆ ಎಂದು ಅನ್ನಿಸುತ್ತದೆ ಅಲ್ಲವೇ? ಇದು ಕ್ರಿಕೆಟ್ ಬಗ್ಗೆ ಅಲ್ಲ. ಇದು ಈ ದೇಶದ ರಾಜಕೀಯದ ಬಗ್ಗೆ. ಇಂಡಿಯನ್ ಪೊಲಿಟಿಕಲ್ ಲೀಗ್ ಎಂದು ಬರೆದರೆ ತಕ್ಷಣ ನಮ್ಮ ಕನ್ನಡ ಪ್ರೇಮಿಗಳು ಈ ಪದ ಸಮೂಹಕ್ಕೆ ಕನ್ನಡ ಪರ್ಯಾಯವನ್ನು ಬಳಸಬೇಕಿತ್ತು ಎಂದು ಹೇಳುತ್ತಾರೆ. ಆದರೆ ಕ್ರಿಕೆಟ್ ಪ್ರಶ್ನೆ ಬಂದಾಗ ಕನ್ನಡ ಸದ್ದಿಲ್ಲದೆ ಬಾಲ ಮುದುಡಿಸಿ ಸುಮ್ಮನಿರುತ್ತದೆ. ಹೀಗೆ ನಮ್ಮ ಭಾಷಾ ಪ್ರೇಮ ಮತ್ತು ಅಂತೆಯೇ ದೇಶ ಪ್ರೇಮವೂ ಅನುಕೂಲ ಸಿಂಧುವಿನಲ್ಲೇ ಬದುಕುತ್ತದೆ.

ಐಪಿಎಲ್ 2019ರಂತೆ ಈ ಬಾರಿಯ ಮಹಾಚುನಾವಣೆಯೂ ಹಲವು ವಾರಗಳ ಕಾಲ ನಡೆಯುತ್ತಿದೆ. ಸರಿ ಸುಮಾರು ಐದು ವಾರಗಳ ಕಾಲ ನಡೆಯುವ ಈ ಚುನಾವಣೆಯ ಫಲಿತಾಂಶಕ್ಕೆ ಅಭ್ಯರ್ಥಿಗಳು ಮಾತ್ರವಲ್ಲ, ಮತ ಹಾಕಿದವರೂ ಹಾಕದವರೂ ಕಾಯುವ ಕೆಲಸ ನಡೆದಿದೆ. ಈ ಬಾರಿಯ ಸುಡು ಬೇಸಿಗೆ ಕಾಯುವ ಕಾಲ.

ಚುನಾವಣೆ ನಡೆಯುತ್ತಿದೆಯೆಂದು ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಮೈದಾನಕ್ಕೆ ಹೋಗಿ ನೋಡುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಇನ್ನುಳಿದವರು ಟಿವಿ ಪರದೆಯಲ್ಲಿ ಈ ಪಂದ್ಯಗಳನ್ನು ವೀಕ್ಷಿಸುತ್ತಾರೆ. ದೇಶದ ಎಲ್ಲೆಡೆ ಟಿವಿ ಮತ್ತು ಮೊಬೈಲ್ ಸೇವೆ ಬಂದಿರುವುದರಿಂದ (ಹಾಗೆ ನಮ್ಮನ್ನಾಳುವವರು ಫರ್ಮಾನು ಹೊರಡಿಸಿದ್ದಾರೆ!) ಪತ್ರಿಕೆಯಲ್ಲಿ ಇದನ್ನೋದುವವರ ಸಂಖ್ಯೆ ಕ್ಷೀಣಿಸಿರಬಹುದು. ಆದರೂ 125-130 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಯಾವುದಕ್ಕೂ ಬೇಕಷ್ಟು ಜನರಿದ್ದಾರೆ.

 ಈ ಬಾರಿಯ ಮಹಾ ಚುನಾವಣೆಯಲ್ಲಿ ಹಿಂದೆಂದೂ ಕಾಣದಷ್ಟು ಹಣದ ಹೊಳೆ ಹರಿದಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ. ಹಣದ ಪ್ರವಾಹವೆಂಬ ಪದ ನುಡಿಗಟ್ಟಿಗೆ ಸೇರಿರಬೇಕು. ಈ ಪ್ರವಾಹ ಪೀಡಿತರು ಯಾರು? ಮತದಾರರೇ? ಅಭ್ಯರ್ಥಿಗಳೇ? ಅಥವಾ ದೇಶವೇ? ಯೋಚಿಸಬೇಕಾದ ಅಂಶ. ಅಂತೂ ಚುನಾವಣೆಯೆಂದರೆ ಒಂದು ಕೊಡುಕೊಳ್ಳುವ ವ್ಯವಹಾರವೆಂಬುದು ಸಾಬೀತಾಗಿದೆ ಮತ್ತು ಇದನ್ನು ‘ಪ್ರಜಾಪ್ರಭುತ್ವ’ವೆಂದು ಘೋಷಿಸಲಾಗಿದೆ. ಹಣ ತೆತ್ತು ಪಂದ್ಯಗಳನ್ನು ನೋಡುವುದೂ ಹಣ ಪಡೆದು ಮತ ನೀಡುವುದೂ ಎರಡು ವಿಪರ್ಯಾಸಗಳು. ಆದರೆ ಎರಡರಲ್ಲೂ ಜನರಿಗೆ ತೃಪ್ತಿಯಿದೆಯೆಂಬುದೇ ಸಮಾಧಾನದ ವಿಷಯ. ‘ಕುರುಡು ಕಾಂಚಾಣ ಕುಣಿಯುತಲಿತ್ತೊ’ ಎಂಬ ಬೇಂದ್ರೆಯವರ ಹಾಡನ್ನು ಚುನಾವಣಾ ಗೀತೆಯಾಗಿ ಹಾಡಬಹುದು.

ಆದರೆ ಮತದಾನದ ಪ್ರಮಾಣವನ್ನು ಗಮನಿಸಿದರೆ ಹೀಗೆ ಹರಿದ ಹಣದ ಹೊಳೆಯ ಮುಕ್ಕಾಲು ಪಾಲು ಜನ ಸಾಗರವನ್ನು ಸೇರಿದ್ದರೂ ಮತ ಪೆಟ್ಟಿಗೆಯ ಭೂಮಿಯಲ್ಲಿ ಇಂಗಿಲ್ಲವೆಂಬುದು ಸ್ಪಷ್ಟ. ಒಂದು ಸುಲಭ ಉದಾಹರಣೆಯನ್ನು ಗಮನಿಸಬಹುದು: ಮಹಾ ನಗರಗಳ ಶ್ರೀಮಂತರು ವಾಸಿಸುವ ಬಡಾವಣೆಗಳಲ್ಲಿ ಹಿಂದಿನಿಂದಲೂ ಮತದಾನದ ಪ್ರಮಾಣ ಅತ್ಯಂತ ಕ್ಷೀಣ. ಬೆಂಗಳೂರಿನ ಸದಾಶಿವನಗರದಂತಹ ವೈಭವದ ಬಡಾವಣೆಗಳಲ್ಲಿ ಐದೋ ಹತ್ತೋ ಶೇಕಡಾ ಮತದಾನವಾಗುತ್ತಿತ್ತೆಂದು ಪ್ರತೀತಿ. ಈಗ ಹೇಗೋ ಗೊತ್ತಿಲ್ಲ. ಈ ಪ್ರಮಾಣವನ್ನು ಹೆಚ್ಚಿಸಲು ಮಹಾನಗರಗಳಲ್ಲಿ ಯಾರೂ ಪ್ರಯತ್ನಿಸಿದಂತಿಲ್ಲ. ಅನೇಕ ಬುದ್ಧಿವಂತರು ಚುನಾವಣೆಗಳ ಬಗ್ಗೆ, ದೇಶದ ಭವಿಷ್ಯದ ಬಗ್ಗೆ ಭಾಷಣ ಮಾಡಲು ಉತ್ಸುಕರಾದಷ್ಟು ತಮ್ಮ, ತಮ್ಮ ಸಪರಿವಾರದ, ನೆರೆಕರೆಯ ಮಂದಿಯ ಮತದಾನದ ಬಗ್ಗೆ ಉತ್ಸುಕರಾದಂತಿಲ್ಲ. ಆದ್ದರಿಂದ ಈ ಬಾರಿಯೂ ಕರ್ನಾಟಕದಲ್ಲಿ ಬೆಂಗಳೂರು ಅತ್ಯಂತ ಕಡಿಮೆ ಮತದಾನದ ಪ್ರಮಾಣವನ್ನು ಕಂಡಿದೆ. ನಗರದಲ್ಲಿ ವಾಸಿಸುವವರನ್ನು ನಾಗರಿಕರು ಎಂದು ಕರೆಯುತ್ತಾರೆ. ನಗರದಿಂದ ಹೊರಗಿರುವವರನ್ನು ಅನಾಗರಿಕರು ಎಂದು ಕರೆಯಲಾಗುತ್ತದೆ. ಈ ಬಾರಿ ಎಂದಲ್ಲ, ಎಂದೆಂದೂ ಅನಾಗರಿಕರೇ ಈ ದೇಶದ ಭವಿಷ್ಯವನ್ನು ನಿರ್ಧರಿಸುವವರು.

ನಾಗರಿಕರು ಭಾಷಣ, ಬರಹ, ಚಿಂತನ ಇವುಗಳಲ್ಲಿ ಮುಳುಗಿರುತ್ತಾರೆ. ಪ್ರಚಾರ ಗಿಟ್ಟುವಲ್ಲಿ ಮುಂದಿರುತ್ತಾರೆ. ತಮಗೆ ಮತದಾನದ ಹಕ್ಕಿದೆಯೇ ಎಂದು ನಿರ್ಧರಿಸುವ ಗೋಜಿಗೇ ಹೋಗುವುದಿಲ್ಲ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲವೆಂದು ಸಂತೋಷಿಸುವ ಮಂದಿಯನ್ನೂ ಕಾಣಬಹುದು. ಮತದಾನಕ್ಕೆ ಮುನ್ನ ಪಟ್ಟಿಯನ್ನು ಪರಿಶೀಲಿಸುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳದೆ ಆನಂತರ ಕೊರಗಿದವರೂ ಇದ್ದಾರೆ. ಮತದಾನವನ್ನು ಹೆಚ್ಚಿಸಲು ಕೆಲವು ಮಹಾನುಭಾವರನ್ನು ಚುನಾವಣಾ ಆಯೋಗವು ತನ್ನ ರಾಯಭಾರಿಗಳನ್ನಾಗಿ ನೇಮಿಸಿ ಅವರ ಬೃಹತ್ ಚಿತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ರಾರಾಜಿಸಲು ವ್ಯವಸ್ಥೆ ಮಾಡಿದೆ. ಉದ್ದೇಶ ಒಳ್ಳೆಯದೇ. ಆದರೆ ಈ ರಾಯಭಾರಿಗಳ ಪೈಕಿ ಹಲವರು ಜನರಿಗೆ ಯಾರೆಂದೇ ಗೊತ್ತಿಲ್ಲ. ಈ ನೀಲಿಗಣ್ಣಿನ ಮಹನೀಯರಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲವಂತೆ!. ಚುನಾವಣಾ ಆಯೋಗವು ಇಂತಹ ಒಂದು ಪ್ರಮಾದವನ್ನೆಸಗುವುದು ಭಾರತದಲ್ಲಿ ಮಾತ್ರ ಸಾಧ್ಯ. ಇವೆಲ್ಲ ನಮ್ಮ ಮತದಾನದ ಪ್ರಮಾಣವನ್ನು ಹೆಚ್ಚಿಸಲು ವಿಫಲವಾಗಿದೆ. ಹಣ, ಹೆಂಡದಂತಹ ಆಮಿಷಗಳಷ್ಟೇ ಮತದಾನದ ಪ್ರಮಾಣವನ್ನು ಎತ್ತರಿಸಲು ಸಾಧ್ಯವೆಂದು ಸ್ವತಂತ್ರ ಭಾರತದ ಚರಿತ್ರೆ ಹೇಳಿದೆ.

ಇರಲಿ; ಈ ಬಾರಿಯ ಮಹಾ ಚುನಾವಣೆ ಈ ದೇಶದ ಸಂಸ್ಕೃತಿಯನ್ನು ಬೆತ್ತಲೆ ನಿಲ್ಲಿಸಿದೆ. ನಾವೆಷ್ಟೇ ವಿಶ್ವಮಾನ್ಯರೆಂದು ನಮ್ಮ ಬೆನ್ನು ತಟ್ಟಿಕೊಂಡರೂ ನಮ್ಮೆದುರು ಕನ್ನಡಿಯಿಲ್ಲದ್ದರಿಂದ ನಾವು ಹೇಗಿದ್ದೇವೆಂದು ನಮಗೆ ಗೊತ್ತಿಲ್ಲದಂತಿದೆ. ಈಗ ಇಂತಹ ಚುನಾವಣೆಗಳೇ ಒಂದೊಂದು ಸಂಶೋಧನಾ ಪ್ರಬಂಧಕ್ಕೆ ವಸ್ತುವಾಗಬಹುದು. ಎಲ್ಲಕ್ಕಿಂತ ಹೆಚ್ಚು ನಮ್ಮ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಎಂತಹ ನಾಟಕಗಳನ್ನು ವಂಚನೆಗಳನ್ನೂ ನಡೆಸಲು ಶಕ್ತರು ಎಂಬುದನ್ನು ಈ ಹಿಂದಿನಂತೆ ಈ ಬಾರಿಯೂ ತೋರಿಸಿಕೊಟ್ಟಿವೆ. ಇವುಗಳ ಮಹಾ ಸಮುದ್ರದಲ್ಲಿ ಪಯಣಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ.

ಆದರೆ ಕೆಲವಂಶಗಳನ್ನು ಗಮನಿಸಬಹುದು:
 ಅಭ್ಯರ್ಥಿಗಳಲ್ಲಿ ಕ್ರಿಮಿನಲ್ ಪ್ರಕರಣಗಳಿರುವವರು ಭಾರೀ ಸಂಖ್ಯೆಯಲ್ಲಿದ್ದಾರೆ. ಇವುಗಳನ್ನು ತಮ್ಮ ನಾಮಪತ್ರದಲ್ಲಿ ನಮೂದಿಸಬೇಕೆಂಬ ನಿಯಮವಿದೆ. ಈ ನಿಯಮ ಯಾಕಾದರೂ ಇದೆಯೋ ಗೊತ್ತಿಲ್ಲ. ಏಕೆಂದರೆ ಹೀಗೆ ಕ್ರಿಮಿನಲ್ ಪ್ರಕರಣಗಳಿದ್ದರೆ ಸ್ಪರ್ಧಿಸಬಾರದೆಂದಿದ್ದರೆ ಆಗ ಇವುಗಳ ಸೇರ್ಪಡೆಗೆ ಒಂದು ಅರ್ಥವಿತ್ತು. ಹೆಸರಿಸುವುದಷ್ಟೇ ಕೆಲಸವಾದರೆ ಅದೊಂದು ಅರ್ಹತೆಯೆಂದು ಜನರು ಭಾವಿಸುವುದಕ್ಕೆ ಕಾರಣವಾಗುತ್ತದೆ. ಹೇಗಿದ್ದರೂ ಮತದಾರರು ಅಭ್ಯರ್ಥಿಯ ನಾಮಪತ್ರದ ವಿವರಗಳನ್ನು ಹೊಂದಿರುವುದಿಲ್ಲ ಮತ್ತು ಕ್ರಿಮಿನಲ್ ಪ್ರಕರಣಗಳಿವೆಯೆಂದು ತಮ್ಮ ನಿಷ್ಠೆಯನ್ನು ಬದಲಾಯಿಸುವುದೂ ಇಲ್ಲ. ದೇಶದ ಹಿತವನ್ನು ಕಾಪಾಡುವುದಕ್ಕೆ ಕಂಕಣಬದ್ಧರಾದವರು ಹೀಗೆ ಕಪ್ಪುಕಲೆಯಿರುವವರು ಸಂಸತ್ತನ್ನು ಪ್ರವೇಶಿಬಾರದೆಂಬ ಕಾನೂನನ್ನು ಈ ವರೆವಿಗೂ ಮಾಡಿಲ್ಲ. ಇನ್ನು ಮಾಡುವುದೂ ಇಲ್ಲ. ಏಕೆಂದರೆ ಹೀಗೆ ಪ್ರವೇಶಿಸುವವರಲ್ಲಿ ಬಹುಪಾಲು ಕ್ರಿಮಿನಲ್ ಪ್ರಕರಣಗಳನ್ನು ಹೊತ್ತವರೇ!

ಚುನಾವಣಾ ಆಯೋಗವೆಂದರೆ ಕಾಗದದ ಹುಲಿಯಂತಿದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಯಾವ ಪರಿಣಾಮಕಾರೀ ಕಾನೂನಾಗಲೀ ನಿಯಂತ್ರಣವಾಗಲೀ ಇಲ್ಲ. ಚುನಾವಣೆಯ ಸಮಯದಲ್ಲಿ ಅಕ್ರಮ ನಡೆಸಿದರೆ ಅಭ್ಯರ್ಥಿ ತಕ್ಷಣ ಅನರ್ಹನಾಗುವುದಿದ್ದರೆ ಪ್ರಾಯಃ ಅಕ್ರಮಗಳಿಗೆ ಕಡಿವಾಣ ಬೀಳುತ್ತಿತ್ತು. ಆದರೆ ನಮ್ಮ ಕಾನೂನು ಹೇಗಿದೆಯೆಂದರೆ ಈಗ ನಡೆದ ಚುನಾವಣಾ ಅಕ್ರಮಗಳ ಕುರಿತು ಆರೋಪ ಪಟ್ಟಿ ಸಲ್ಲಿಕೆಯಾಗುತ್ತದೆಂಬ ಖಾತ್ರಿಯಿಲ್ಲ. ಆರೋಪ ಪಟ್ಟಿ ಸಲ್ಲಿಕೆಯಾದರೂ ಅದು ನಮ್ಮ ಸರಕಾರಿ ನೌಕರರ/ಅಧಿಕಾರಿಗಳ (ಅ)ದಕ್ಷತೆಯಿಂದಾಗಿ ಜಾಳುಜಾಳಾಗಿ ಲೆಕ್ಕಕ್ಕಷ್ಟೇ ಇರುತ್ತದೆ. ಒಂದುವೇಳೆ ಸರಿಯಾಗಿಯೇ ಆರೋಪ ಪಟ್ಟಿ ಸಲ್ಲಿಕೆಯಾಯಿತೆಂದಿಟ್ಟುಕೊಳ್ಳಿ: ಪ್ರಕರಣವನ್ನು ಅವರು ಎಲ್ಲರ ನೆರವಿನೊಂದಿಗೆ ಮುಂದಿನ ಐದು ವರ್ಷಗಳ ಕಾಲ ತಳ್ಳುವುದಕ್ಕೆ ಈ ದೇಶದ ಕಾನೂನು ಆಸ್ಪದ ನೀಡುತ್ತದೆ. ಯಾವುದಾದರೊಂದು ನ್ಯಾಯಾಲಯವು ಶೀಘ್ರವಾಗಿ ಇದನ್ನು ವಿಲೇವಾರಿ ಮಾಡಿದರೂ ಸರ್ವೋಚ್ಚ ನ್ಯಾಯಾಲಯದ ವರೆಗಿನ ಮೇಲ್ಮನವಿ ವಿಳಂಬ ತಂತ್ರದಿಂದಾಗಿ ಒಂದು ವೇಳೆ ಆರೋಪವು ಸಾಬೀತಾದರೂ ಅದು ನಿಷ್ಫಲವಾಗುತ್ತದೆ. ಒಂದು ವೇಳೆ ಚುನಾವಣಾ ಅಕ್ರಮಗಳ ಕುರಿತು ಪ್ರತೀ ರಾಜ್ಯದಲ್ಲೂ ಅದಕ್ಕಾಗಿಯೇ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿದರಷ್ಟೇ ಚುನಾವಣಾ ಅಕ್ರಮಗಳು ಬಯಲಿಗೆ ಬರಬಹುದು. ಇಲ್ಲವಾದರೆ ಅವೂ ಒಂದು ನಾಟಕವಾಗುತ್ತವೆ!

ಚುನಾವಣೆಯ ಸಮಯದಲ್ಲಿ ಸರಕಾರಿ ಸಂಸ್ಥೆಗಳು ತಮ್ಮಷ್ಟಕ್ಕೆ ತಾವು ಕೆಲಸ ಮಾಡುವಂತಿರಬೇಕು. ಅವುಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವಂತಿರಬಾರದು. ಐದು ವರ್ಷಗಳ ಕಾಲ ಹೊದ್ದು ಮಲಗಿದ ಆದಾಯ ಕರ ಇಲಾಖೆ ಚುನಾವಣೆ ಘೋಷಣೆಯಾದದ್ದೇ ತಡ, ಎಲ್ಲಿಲ್ಲದ ಹುಮ್ಮಸ್ಸಿನಿಂದ ವಿರೊಧ ಪಕ್ಷಗಳ ರಾಜಕಾರಣಿಗಳ ವಿರುದ್ಧ ಧಾಳಿ ನಡೆಸಿದರೆ ಅದನ್ನೇನೆನ್ನಬೇಕು? ಆದಾಯ ಕರ ಇಲಾಖೆ ಮಾತ್ರವಲ್ಲ, ಹಾಗೆಯೇ ಸಿಬಿಐ, ಇಡಿ ಮುಂತಾದ ಸಂಸ್ಥೆಗಳು ನಿಜಕ್ಕೂ ಶಕ್ತವಾಗಿದ್ದರೆ, ಸ್ವತಂತ್ರವಾಗಿದ್ದರೆ ಅವು ಎಲ್ಲ ಕಾಲದಲ್ಲೂ ಎಲ್ಲ ಪಕ್ಷಗಳ ವಿರುದ್ಧವೂ ಕ್ರಮ ಜರುಗಿಸುವಂತಿದ್ದರೆ ಪ್ರಜಾಪ್ರಭುತ್ವವು ಯಶಸ್ವಿಯಾಗಲು ಸಾಧ್ಯ. ಇಂದು ಇರುವ ವಿದ್ಯುನ್ಮಾನ ಸಾಧನಗಳು ಒಳ್ಳೆಯದನ್ನೂ ಕೆಟ್ಟದ್ದನ್ನೂ ಸಮಾನವಾಗಿ ಪ್ರಸಾರಮಾಡಲು ಸಾಧ್ಯ. ಆದ್ದರಿಂದ ಈ ಕುರಿತು ನಿಯಮಗಳನ್ನು ರೂಪಿಸದಿದ್ದರೆ ಏನೇನು ಅವಾಂತರವಾಗಬಹುದೆಂಬುದನ್ನು ಕಳೆದ ಕೆಲವು ತಿಂಗಳುಗಳಿಂದ ಕಾಣುತ್ತಿದ್ದೇವೆ. ಫೋಟೋಷಾಪಿಂಗ್‌ನಂತಹ ಕರಾಳತಂತ್ರಗಳಿಂದ ಯಾರ ಮುಖಕ್ಕೂ ಮಸಿಬಳಿಯಬಹುದು. ಇವುಗಳಿಗಾಗಿಯೇ ರಾಜಕೀಯ ಪಕ್ಷಗಳು ಖಳತಜ್ಞರನ್ನೊಳಗೊಂಡ ಪ್ರತ್ಯೇಕ ಶಾಖೆಯನ್ನು ಆರಂಭಿಸಿದ್ದಾರೆಂದು ಹೇಳಲಾಗಿದೆ. ಇವಲ್ಲದೆ ಪ್ರಜೆಗಳೇ ತಮ್ಮ ಪ್ರತಿಭೆಯನ್ನು ಬೆಳಗಿಸಲೋಸುಗ ಕೆಸರೆರಚುವ, ಮಸಿಬಳಿಯುವ ಕೆಲಸವನ್ನು ಮಾಡುತ್ತಾರೆ. ಇದರಲ್ಲಿ ವಿದ್ಯಾವಂತರ ಮತ್ತು ಉದ್ಯೋಗಿಗಳ ಸಂಖ್ಯೆಯೇ ಹೆಚ್ಚೆಂಬುದನ್ನೂ ಗಮನಿಸಬಹುದು. ಇವರ ಈ ಉಪಕಸಬನ್ನು ನೋಡಿದರೆ ಇವರಿಗೆ ಸಂಬಳ ಸಹಿತ ನಿರುದ್ಯೋಗವನ್ನು ನೀಡಿದ್ದಾರೇನೋ ಎಂದು ಅನ್ನಿಸುತ್ತದೆ.

ನಮ್ಮ ಮಾಧ್ಯಮಗಳ ವರದಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಲ್ಲದ್ದನ್ನು ಇರುವಂತೆ ಮತ್ತು ಇರುವುದನ್ನು ಇಲ್ಲದಂತೆ ಹೇಳುವುದರಲ್ಲಿ ವರ್ತಮಾನದ ವರದಿಗಾರರು ನಿಸ್ಸೀಮರು. ಅವರಿಗೆ ರೂಪಕಗಳು, ಹೋಲಿಕೆಗಳು ಇವೆಲ್ಲ ಗೌಣ.

 ಚರ್ಚಾಸ್ಪದವಾದರೂ ಒಂದೆರಡು ಉದಾಹರಣೆಗಳನ್ನು ನೀಡಬಹುದು: ಆಝಮ್ ಖಾನ್ ಎಂಬ ಸಮಾಜವಾದಿ ಪಕ್ಷದ ಅಭ್ಯರ್ಥಿ ತನ್ನ ಎದುರಾಳಿ ಮತ್ತು ಆಗಷ್ಟೇ ಸಮಾಜವಾದ ಪಕ್ಷದಿಂದ ಭಾಜಪಕ್ಕೆ ನೆಗೆದ ತಮ್ಮ ಎದುರಾಳಿ ಅಭ್ಯರ್ಥಿ ಜಯಪ್ರದ ಎಂಬ ಸಿನೆಮಾ ನಟಿಯನ್ನು ಹೆಸರಿಸದೆಯೇ ಖಾಕಿ ಒಳ ಉಡುಪನ್ನು ಧರಿಸಿದ್ದಾರೆಂಬ ಅರ್ಥದ ಮಾತುಗಳನ್ನು ಹೇಳಿದರು. ಗುಪ್ತ ಕಾರ್ಯಸೂಚಿ ಎಂಬುದಕ್ಕೆ ಈ ಮಾತನ್ನು ಎಲ್ಲ ಕಡೆ ಬಳಸುತ್ತಾರೆ. (ಕೇಸರಿ, ಕೆಂಪು ಹೀಗೆಲ್ಲ ಹಿಂದೆ ಟೀಕೆಗಳಿದ್ದವು!) ಆದರೆ ತಕ್ಷಣ ನಮ್ಮ ಮಾಧ್ಯಮದ ಪ್ರಭೃತಿಗಳು ಇದನ್ನು ಎಷ್ಟು ರೋಚಕವಾಗಿ, ಅವಾಚ್ಯವಾಗಿ ಮತ್ತು ಅಶ್ಲೀಲವಾಗಿ ವರದಿಮಾಡಿದರೆಂದರೆ ಅದೊಂದು ರಾಷ್ಟ್ರೀಯ ಸುದ್ದಿಯಾಯಿತು! ರಫೇಲ್ ಪ್ರಕರಣದಲ್ಲಿ ಕೇಂದ್ರ ಸರಕಾರವು ದಾಖಲೆಗಳನ್ನು ಮುಚ್ಚಿಟ್ಟು ಪಡೆದ ತೀರ್ಪಿನ ಪುನರ್ವಿಮರ್ಶೆಯ ಅರ್ಜಿಯಲ್ಲಿ ಹಾಗೆ ಮುಚ್ಚಿಟ್ಟ ದಾಖಲೆಗಳ ಫೋಟೋಪ್ರತಿಗಳನ್ನು ಅರ್ಜಿದಾರರು ಸಲ್ಲಿಸಿದ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯವು ಸರಕಾರದ ವಿರುದ್ಧ ತೀರ್ಪು ನೀಡಿ ಅವುಗಳನ್ನು ಪರಿಗಣಿಸಬಹುದೆಂದು ಹೇಳಿತು. ಆದರೆ ಅದು ‘ಚೌಕಿದಾರ್ ಚೋರ್ ಹೈ’ ಎಂಬ ಮಾತನ್ನು ಹೇಳಿದೆಯೆಂಬರ್ಥದಲ್ಲಿ ರಾಹುಲ್ ಗಾಂಧಿ ಟೀಕಿಸಿದ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು.

ರಾಹುಲ್ ಗಾಂಧಿ ಬೇಷರತ್ ವಿಷಾದ ವ್ಯಕ್ತಪಡಿಸಿದರು. (ಪ್ರಕರಣವಿನ್ನೂ ಮುಗಿದಿಲ್ಲ. ನ್ಯಾಯಾಲಯ ನಿಂದನೆಯ ನೋಟಿಸಿಗೆ ಉತ್ತರಿಸಲು ಎಪ್ರಿಲ್ 30ಕ್ಕೆ ಮುಂದೂಡಲಾಗಿದೆ.) ಆದರೆ ಮಾಧ್ಯಮಗಳು ಸರ್ವೋಚ್ಚ ನ್ಯಾಯಾಲಯವು ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ ಎಂದದ್ದನ್ನು ಅಲ್ಲಗಳೆದು ಮೋದಿಯವರನ್ನು ನಿರ್ದೋಷಿಯೆಂದು ಹೇಳಿದೆ ಎಂಬರ್ಥದಲ್ಲಿ ವರದಿಮಾಡಿದವು. ಸರ್ವೋಚ್ಚ ನ್ಯಾಯಾಲಯವು ತಾನು ಹೇಳದ ಮಾತನ್ನು ತನಗೆ ಅನ್ವಯಿಸಿದೆಂಬುದನ್ನಷ್ಟೇ ರಾಹುಲ್ ಗಾಂಧಿಯ ಮೇಲೆ ಆರೋಪಿಸಿದೆಯೇ ಹೊರತು ರಫೇಲ್ ಪ್ರಕರಣದ ಕುರಿತು ತೀರ್ಪು ನೀಡಿಲ್ಲ. ಅದಿನ್ನೂ ಪುನರ್ವಿಮರ್ಶೆಯ ಹಂತದಲ್ಲಿದೆ. ಆದರೆ ಎರಡೂ ವರದಿಗಳು ಸತ್ಯವನ್ನು ಮರೆಮಾಚಿದವು.
ಇವೆಲ್ಲ ಜನಸಾಮಾನ್ಯರ ಬುದ್ಧಿಗಿಳಿಯದ ಹೊರತು ಭಾರತ ಬದಲಾಗುವುದಿಲ್ಲ. ಐಪಿಎಲ್ ಜನಾಕರ್ಷಕವಾಗಿರುತ್ತದೆ. ಯಾರು ಬೇಕಾದರೂ ಹೀರೋಗಳಾಗಬಹುದೆಂಬುದನ್ನು ನಿರೂಪಿಸುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News