ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿದೀತೇ?

Update: 2019-05-05 18:39 GMT

ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದರಿಂದಲೇ ಇಲ್ಲಿ ಬಡವರು ಮಾತ್ರವಲ್ಲ ಎಲ್ಲ ಭಾರತೀಯ ಪ್ರಜೆಗಳ ಬದುಕಿಗೆ ಭದ್ರತೆಯಿದೆ. ಈ ಜನತಂತ್ರ ವ್ಯವಸ್ಥೆ ಇರದಿದ್ದರೆ ಅರಾಜಕತೆ ಉಂಟಾಗುತ್ತದೆ. ಅರಾಜಕತೆ ಉಂಟಾದರೆ ಜನರ ಬದುಕು ಛಿದ್ರ ಛಿದ್ರವಾಗುತ್ತದೆ ಮಾತ್ರವಲ್ಲ, ದೇಶ ಒಡೆದು ಚೂರು ಚೂರಾಗಿ ಹೋಗುತ್ತದೆ.


ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಳಸಿಕೊಂಡು 2014 ರಲ್ಲಿ ಅಧಿಕಾರಿಕ್ಕೆ ಬಂದ ಬಿಜೆಪಿ ಈ ಚುನಾವಣೆಯಲ್ಲಿ ಮತ್ತೆ ಕೇಂದ್ರದ ಅಧಿಕಾರಸೂತ್ರ ಹಿಡಿದು ಜನತಂತ್ರ ವ್ಯವಸ್ಥೆಯನ್ನೇ ಧ್ವಂಸಗೊಳಿಸುವ ಷಡ್ಯಂತ್ರ ರೂಪಿಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ಆತಂಕವನ್ನು ಗದಗ್‌ನಲ್ಲಿ ಶನಿವಾರ ನಡೆದ ಮೇ ಸಾಹಿತ್ಯ ಮೇಳದಲ್ಲಿ ಮಹಾರಾಷ್ಟ್ರದ ಹಿರಿಯ ಲೇಖಕ ರಾವ ಸಾಹೇಬ ಕಸಬೆ ಅವರು ವ್ಯಕ್ತಪಡಿಸಿದರು.

ಜನತಂತ್ರವನ್ನು ಉಳಿಸಿಕೊಳ್ಳುವವರಿಗೆ ಇರುವ ಆತಂಕ ಒಂದು ಬಗೆಯದಾದರೆ ಇದನ್ನು ನಾಶ ಮಾಡಲು ಹೊರಟವರಿಗೆ ತಮ್ಮ ಗುರಿ ಈಡೇರುವುದೋ ಇಲ್ಲವೋ, ಎಲ್ಲಿ ಜನರು ತಮ್ಮನ್ನು ತಿರಸ್ಕರಿಸುತ್ತಾರೋ ಎಂಬ ಇನ್ನೊಂದು ಬಗೆಯ ಆತಂಕ ಉಂಟಾಗಿದೆ. ಅಂತಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೋಲಿನ ಭೀತಿಯಿಂದ ಹತಾಶರಾಗಿ ವಿರೋಧಿಗಳು ನನ್ನನ್ನು ಕೊಲ್ಲುತ್ತಾರೆ ಎಂದು ಜನರ ಅನುಕಂಪ ಗಿಟ್ಟಿಸಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ

 ಈ ದೇಶವನ್ನು ಮನುವಾದದ ಕತ್ತಲ ಯುಗಕ್ಕೆ ಮತ್ತೆ ಕೊಂಡೊಯ್ಯಲು ಬಾಬಾಸಾಹೇಬರ ಸಂವಿಧಾನ ಮುಖ್ಯ ಅಡ್ಡಿಯಾಗಿದೆ. ಜೊತೆಗೆ ಬುದ್ಧ, ಬಸವ, ಫುಲೆ, ಶಾಹು ಮಹಾರಾಜ, ವಿವೇಕಾನಂದ, ತುಕಾರಾಮ, ಮಹಾವೀರರ ದೊಡ್ಡ ಪರಂಪರೆ ಈ ದೇಶಕ್ಕೆ ಇದೆ. ಈ ಪರಂಪರೆಯ ಎದುರು ಸಾವರ್ಕರ್, ಗೋಳ್ವಾಲ್ಕರ್‌ರ ಮನುವ್ಯಾಧಿಗಳ ಆಟ ನಡೆಯುವುದಿಲ್ಲ.

ಅಂತಲೇ ತಮಗೆ ಅಡ್ಡಿಯಾಗಿರುವ ಈ ಸಂವಿಧಾನವನ್ನು ಬದಲಿಸಲು ಪ್ರಗತಿ ವಿರೋಧಿ ಶಕ್ತಿಗಳು ಯತ್ನಿಸುತ್ತಿವೆ. ಈ ಬಾರಿ ಚುನಾವಣೆಯಲ್ಲಿ ಗೆದ್ದರೆ ಸಂವಿಧಾನವನ್ನು ಹೇಗಾದರೂ ಮಾಡಿ ತೆಗೆದು ಹಾಕಲು ಈ ಕರಾಳ ಶಕ್ತಿಗಳು ಹುನ್ನಾರ ನಡೆಸಿವೆ. ಆದರೆ ಚುನಾವಣೆ ಗೆಲ್ಲುವುದು ಸುಲಭವಲ್ಲ ಎಂಬುದು ಇವರಿಗೆ ಖಾತ್ರಿಯಾಗಿದೆ. ಅಂತಲೇ ಹತಾಶರಾಗಿ ಉಗ್ರ ಹಿಂದುತ್ವಕ್ಕೆ ಮೊರೆ ಹೋಗಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದರಿಂದಲೇ ಇಲ್ಲಿ ಬಡವರು ಮಾತ್ರವಲ್ಲ ಎಲ್ಲ ಭಾರತೀಯ ಪ್ರಜೆಗಳ ಬದುಕಿಗೆ ಭದ್ರತೆಯಿದೆ. ಈ ಜನತಂತ್ರ ವ್ಯವಸ್ಥೆ ಇರದಿದ್ದರೆ ಅರಾಜಕತೆ ಉಂಟಾಗುತ್ತದೆ. ಅರಾಜಕತೆ ಉಂಟಾದರೆ ಜನರ ಬದುಕು ಛಿದ್ರ ಛಿದ್ರವಾಗುತ್ತದೆ ಮಾತ್ರವಲ್ಲ, ದೇಶ ಒಡೆದು ಚೂರು ಚೂರಾಗಿ ಹೋಗುತ್ತದೆ.

 ಭಾರತ ಬಹು ಧರ್ಮೀಯ, ಬಹುಸಂಸ್ಕೃತಿಯ, ಬಹುಭಾಷೆಗಳ, ಬಹುಜನಾಂಗೀಯ ದೇಶ. ವೈವಿಧ್ಯತೆ ಈ ದೇಶದ ಜೀವಾಳ. ಈ ಬಹುಮುಖಿ ದೇಶ ಸುರಕ್ಷಿತವಾಗಿ ಉಳಿದಿದ್ದು ನಮ್ಮ ಸಂವಿಧಾನದಿಂದ. ಈ ಸಂವಿಧಾನವನ್ನು ಉಳಿಸುವುದು ಈ ದೇಶದ ಜನ ಸಾಮಾನ್ಯರ ಕರ್ತವ್ಯವಾಗಿದೆ.

ಕಳೆದ ಐದು ವರ್ಷಗಳ ಕಾಲ ಈ ದೇಶವನ್ನು ಆಳಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನರನ್ನು ಬಾಧಿಸುತ್ತಿರುವ ಯಾವ ಸಮಸ್ಯೆಗಳನ್ನೂ ಬಗೆಹರಿಸಲಿಲ್ಲ.ಅದರ ಬದಲಾಗಿ ಜನ ಸಾಮಾನ್ಯರನ್ನು ಇನ್ನಷ್ಟು ತೊಂದರೆಗೀಡು ಮಾಡಿತು. ತನ್ನ ಈ ವೈಷಮ್ಯವನ್ನು ಮುಚ್ಚಿಕೊಳ್ಳಲು ಭಾರತೀಯರನ್ನು ಕೋಮು ಆಧಾರದಲ್ಲಿ ವಿಭಜಿಸಲು ಯತ್ನಿಸುತ್ತಿದೆ. ಅದಕ್ಕಾಗಿ ಸುಳ್ಳು ಕತೆಗಳನ್ನು, ಅಂತೆಕಂತೆಗಳನ್ನು ಸೃಷ್ಟಿಸಿ ಸುಳ್ಳು ವದಂತಿಗಳನ್ನು ಹರಡುತ್ತಿದೆ.

 ಈ ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಸಲ್ಮಾನರ, ಕ್ರೈಸ್ತರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಟ್ಟು ಕತೆಗಳನ್ನು ಹರಡುತ್ತಿದೆ. ಆದರೆ ವಾಸ್ತವವಾಗಿ ಇದು ನಿಜವಲ್ಲ. ಭಾರತವನ್ನು ಮೊಘಲರು ಐದು ನೂರು ವರ್ಷಗಳ ಕಾಲ ಆಳಿದರು. ನಂತರ ಬ್ರಿಟಿಷರು ಎರಡು ನೂರು ವರ್ಷಗಳ ಕಾಲ ಆಳಿದರು. ಆದರೆ ಈ ದೇಶದಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಾಗಬೇಕಾಗಿತ್ತು. ಕ್ರೈಸ್ತರ ಸಂಖ್ಯೆ ಜಾಸ್ತಿಯಾಗಬೇಕಾಗಿತ್ತು. ಆದರೆ ಅದ್ಯಾವುದೂ ಆಗಲಿಲ್ಲ. ಇಂದಿಗೂ ಈ ದೇಶದಲ್ಲಿ ಶೇ.86ರಷ್ಟು ಹಿಂದೂಗಳಿದ್ದಾರೆ, ಮುಸಲ್ಮಾನರ ಸಂಖ್ಯೆ ಶೇ.16 ರಷ್ಟು ಮಾತ್ರ. ಉಳಿದ ಶೇ.4 ರಲ್ಲಿ ಕ್ರೈಸ್ತರು, ಜೈನರು ಸೇರಿದ್ದಾರೆ. ಆದ್ದರಿಂದ ಹಿಂದೂಗಳ ಜನಸಂಖ್ಯೆ ಜಾಸ್ತಿಯಾಗುತ್ತದೆ ಎಂಬುದು ಬರೀ ಕುತ್ಸಿತ ಅಪಪ್ರಚಾರ ಮಾತ್ರ. ಇಂಥ ಸುಳ್ಳು ಕತೆಗಳನ್ನು ಕಟ್ಟಿ ಹಿಂದೂ ಓಟ್ ಬ್ಯಾಂಕ್ ನಿರ್ಮಿಸಿ ಮತ್ತೆ ಅಧಿಕಾರಕ್ಕೆ ಬರುವ ಮೋದಿಯವರ ಹುನ್ನಾರಕ್ಕೆ ಭಾರತೀಯರು ಬಲಿಯಾಗುವುದಿಲ್ಲ.

ಕಳೆದ ಐದು ವರ್ಷಗಳ ಮೋದಿ, ಅಂದರೆ ಸಂಘ ಪರಿವಾರದ ಆಡಳಿತದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಲಾಯಿತು. ಮೊದಲು ಯೋಜನಾ ಆಯೋಗದ ಚಟ್ಟ ಕಟ್ಟಿ ನೀತಿ ಆಯೋಗವನ್ನು ಮಾಡಲಾಯಿತು. ಸಿಬಿಐನಲ್ಲಿ ಹಸ್ತಕ್ಷೇಪ ಮಾಡಿ ಅದರ ಸ್ವಾಯತ್ತತೆಗೆ ಧಕ್ಕೆ ತರಲಾಯಿತು. ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕೈ ಹಾಕಿ ಅದನ್ನು ಹಾಳು ಮಾಡಲಾಯಿತು.ಈಗ ಎಲ್ಲ ವಿಶ್ವವಿದ್ಯಾಲಯಗಳ ಸಂಶೋಧನಾ ಕಾರ್ಯಗಳಿಗೆ ನೀಡುತ್ತಿದ್ದ ಅನುದಾನವನ್ನು ರದ್ದುಗೊಳಿಸಲಾಗಿದೆ.

ಈ ಲೋಕಸಭಾ ಚುನಾವಣೆ ಸಂದರ್ಭದಲ್ಲಂತೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಾಂವಿಧಾನಿಕ ಸಂಸ್ಥೆಗಳು ಲೆಕ್ಕಕ್ಕೇ ಇಲ್ಲ. ತಮ್ಮ ಪ್ರಚಾರ ಭಾಷಣದಲ್ಲಿ ಮೋದಿಯವರು ಮಾದರಿ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘನೆ ಮಾಡುತ್ತಲೇ ಬಂದರು. ಪುಲ್ವಾಮ ಹುತಾತ್ಮ ಸೈನಿಕರ ಹೆಸರಿನಲ್ಲಿ ಮತ ಯಾಚಿಸಿದರು. ಮಾಲೆಗಾಂವ್ ಬಾಂಬ್ ಸ್ಫೋಟದ ಭಯೋತ್ಪಾದಕಿ ಸಾಧ್ವಿ ಪ್ರಜ್ಞಾ ಸಿಂಗ್‌ಳನ್ನು ಬೆಂಬಲಿಸಿ ಮಾತಾಡಿದ ಮೋದಿ, ಪ್ರಜ್ಞಾ ಭಯೋತ್ಪಾದಕಿ ಅಂದರೆ ಹಿಂದೂ ನಾಗರಿಕತೆಯನ್ನು ಅವಮಾನಿಸಿದಂತೆ ಎಂದರು. ಪ್ರತಿಪಕ್ಷಗಳು ಗೆದ್ದರೆ ಪಾಕಿಸ್ತಾನಕ್ಕೆ ಖುಷಿಯಾಗುತ್ತದೆ ಎಂದರು. ಕೊನೆಗೆ ಹತಾಶರಾಗಿ ಕಾಂಗ್ರೆಸ್ ನನ್ನನ್ನು ಕೊಲ್ಲುವ ಕನಸು ಕಾಣುತ್ತಿದೆ ಎಂದರು

ಪ್ರಧಾನಿ ಮೋದಿಯವರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಸೇರಿದಂತೆ ಅನೇಕರು ಸುಮಾರು 37 ದೂರುಗಳನ್ನು ನೀಡಿದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಎರಡು ಪ್ರಕರಣಗಳಲ್ಲಿ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿತು.ಇದು ನಮ್ಮ ಸಾಂವಿಧಾನಿಕ ಸಂಸ್ಥೆಗಳು ತಲುಪಿದ ಅಧೋಗತಿ.

ಈ ಬಾರಿ ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಿದವರು ಮುಂದಿನ ಸಲ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಸಮಾಧಿ ಮಾಡುವ ಸಂಚು ರೂಪಿಸಿದ್ದಾರೆಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಇದು ಈ ದೇಶದ ದುಡಿಯುವ ಜನರಿಗೆ, ದಲಿತ ವಂಚಿತ ಸಮುದಾಯಗಳಿಗೆ ಗೊತ್ತು. ಅಂತಲೇ ಈ ಬಾರಿ ಮೋದಿಯನ್ನು ಮನೆಗೆ ಕಳಿಸಲು ಜನ ತೀರ್ಮಾನಿಸಿದಂತೆ ಕಾಣುತ್ತದೆ.

ಎಷ್ಟೇ ಲೆಕ್ಕಾಚಾರ ಮಾಡಿದರೂ ಬಿಜೆಪಿ ಈ ಬಾರಿ 180ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ರಾಜಕೀಯ ಪರಿಣತರ ಅಭಿಪ್ರಾಯವಾಗಿದೆ. ಅಂತಲೇ ಮೋದಿ, ಅಮಿತ್ ಶಾ ಹತಾಶರಾಗಿದ್ದಾರೆ. ಈ ಸೋಲನ್ನು ಹೇಗಾದರೂ ಮಾಡಿ ತಪ್ಪಿಸಲು ಆರೆಸ್ಸೆಸ್ ಹರ ಸಾಹಸ ಮಾಡುತ್ತಿದೆ. ಆದರೆ ಮೋದಿ ಮತ್ತೆ ಗೆಲ್ಲುವುದು ಸುಲಭವಲ್ಲ ಎಂಬ ಮಾತು ಪೇಜಾವರ ಸ್ವಾಮಿಗಳಂಥವರಿಂದಲೇ ಬರುತ್ತಿದೆ. ಯಾವುದಕ್ಕೂ ಮೇ 23ರ ವರೆಗೆ ಕಾಯಬೇಕು. ಹಿಂದಿನಂತೆ ಜನರೇ ಈ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುತ್ತಾರೆ ಎಂಬ ಆಶಯ ಪ್ರಜ್ಞಾವಂತರಿಗೆಲ್ಲ ಇದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News