ಜನತಂತ್ರದ ರಕ್ಷಣೆಗೆ ಹೋರಾಟವೇ ದಾರಿ

Update: 2019-06-16 18:59 GMT

ಈ ಬಾರಿ ಚುನಾವಣೆಯ ವೈಚಿತ್ರವೆಂದರೆ ಜನಸಾಮಾನ್ಯರನ್ನು ಬಾಧಿಸುತ್ತಿರುವ ಯಾವ ವಿಷಯಗಳು ಚುನಾವಣೆಯಲ್ಲಿ ಚರ್ಚೆಯಾಗಲಿಲ್ಲ. ಬೆಲೆಏರಿಕೆ, ನಿರುದ್ಯೋಗ, ಹಸಿವು, ಅಸಮಾನತೆ ಯಾವುದೂ ಚರ್ಚೆಗೆ ಬರಲಿಲ್ಲ. ದೇಶದ ಇತಿಹಾಸದಲ್ಲೇ ಜಿಡಿಪಿ ಪಾತಾಳಕ್ಕೆ ಕುಸಿದಿದೆ. ನಲವತ್ತು ಕೋಟಿ ಮಂದಿ ನಿರುದ್ಯೋಗಿಗಳಿದ್ದಾರೆ. ನೋಟು ಅಮಾನ್ಯೀಕರಣದಿಂದ ಆರ್ಥಿಕ ವ್ಯವಸ್ಥೆ ಏರುಪೇರಾಗಿದೆ. ಇದ್ಯಾವುದೂ ಜನರ ಗಮನಕ್ಕೆ ಬರಲಿಲ್ಲ.

ಮತ್ತೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ತನ್ನ ಹಿಡನ್ ಮತ್ತು ಓಪನ್ ಅಜೆಂಡಾಗಳ ಜಾರಿಗೆ ಶರವೇಗದಿಂದ ಹೊರಟಿದೆ. ಮುಂಚೆ ಕಾಂಗ್ರೆಸ್ ಮುಕ್ತ ಭಾರತ ಎಂದು ಮಾತನ್ನಾಡುತ್ತಿದ್ದ ಅಮಿತ್ ಶಾ ಈಗ ಕೇರಳ ಬಂಗಾಳಗಳನ್ನು ಗೆದ್ದರೆ ಸಂಪೂರ್ಣವಾಗಿ ಗೆದ್ದಂತೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಕಾರ್ಪೊರೇಟ್ ಬಂಡವಾಳಶಾಹಿಗೆ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಮನಬಂದಂತೆ ಕೊಡಲಾಗುತ್ತಿದೆ.

ಇನ್ನೊಂದೆಡೆ ಪ್ರತಿಪಕ್ಷಗಳು ಸೋಲಿನ ಆಘಾತದಿಂದ ಇನ್ನೂ ಚೇತರಿಸಿಲ್ಲ.ಲೋಕಸಭಾ ಚುನಾವಣೆಯನ್ನೂ ಕೂಡ ಸರಿಯಾಗಿ, ಸುಸಜ್ಜಿತವಾಗಿ ಎದುರಿಸಲಿಲ್ಲ. ಒಂದೆಡೆ ಆರೆಸ್ಸೆಸ್‌ನ 6 ಲಕ್ಷ ಸ್ವಯಂ ಸೇವಕರು ಗ್ರಾಮೀಣ ಪ್ರದೇಶಕ್ಕೆ ಹೋಗಿ ಮನೆಮನೆ ಬಾಗಿಲು ತಟ್ಟಿ ವ್ಯವಸ್ಥಿತವಾಗಿ ಪ್ರಚಾರ ಮಾಡಿದರು. ಆದರೆ ಪ್ರತಿಪಕ್ಷಗಳಲ್ಲಿ ಅಂಥ ಸಿದ್ಧತೆ ಇರಲಿಲ್ಲ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಬಿಜೆಪಿಯನ್ನು ಸೋಲಿಸುವ ಬಗ್ಗೆ ಮಾತಾಡಿದವು. ಆದರೆ ಅದಕ್ಕೆ ತಕ್ಕ ಕಾರ್ಯತಂತ್ರ ರೂಪಿಸಲಿಲ್ಲ. ಒಣ ಪ್ರತಿಷ್ಠೆ ಬಿಟ್ಟು ಒಂದುಗೂಡಿ ಚುನಾವಣೆ ಎದುರಿಸಿದ್ದರೆ ಇಂಥ ಸೋಲು ಅನುಭವಿಸುವ ಸ್ಥಿತಿ ಬರುತ್ತಿರಲಿಲ್ಲ. ಜಾತ್ಯತೀತತೆ ಬಗ್ಗೆ ಒಣ ಮಾತುಗಳನ್ನು ಆಡಿದರೆ ಪ್ರಯೋಜನವಿಲ್ಲ. ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಚುನಾವಣಾ ತಂತ್ರ ರೂಪಿಸಬೇಕಾಗಿತ್ತು. ಚುನಾವಣೆ ಎದುರಿಗೆ ಬಂದಾಗಲೂ ಯಾವುದೇ ಪೂರ್ವಭಾವಿ ಸಭೆಗಳನ್ನು ನಡೆಸಲಿಲ್ಲ. ಆದರೆ ಕೋಲ್ಕತಾ ಹಾಗೂ ಬೆಂಗಳೂರಿನಲ್ಲಿ ಕೆಲ ನಾಯಕರು ವೇದಿಕೆ ಹತ್ತಿ ಕೈಕೈ ಹಿಡಿದು ಕ್ಯಾಮರಾಕ್ಕೆ ಫೋಸ್ ಕೊಟ್ಟಿದ್ದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ.

ಉತ್ತರ ಪ್ರದೇಶದಲ್ಲಿ ಎಲ್ಲ ಪ್ರತಿಪಕ್ಷಗಳು ಒಂದಾಗಿದ್ದರೆ ಫಲಿತಾಂಶ ಈ ರೀತಿ ಬರುತ್ತಿರಲಿಲ್ಲ. ದಿಲ್ಲಿಯಲ್ಲಿ ಹೊಂದಾಣಿಕೆಗೆ ಕೇಜ್ರಿವಾಲ್ ತಯಾರಿದ್ದರೂ ಕಾಂಗ್ರೆಸ್ ಸ್ಪಂದಿಸಲಿಲ್ಲ. ಪಶ್ಚಿಮ ಬಂಗಾಳದಲ್ಲೂ ಹಾಗೇ ಆಯಿತು. ಕಾಂಗ್ರೆಸ್ ಏಕಾಏಕಿಯಾಗಿ ಬಹುಮತ ಗಳಿಸಿ ತಾನೇ ಸ್ವಂತ ಬಲದಿಂದ ಅಧಿಕಾರ ಹಿಡಿಯುವ ಭ್ರಮೆಯಲ್ಲಿತ್ತು. ಹೀಗಾಗಿ ಅದು ಪ್ರತಿಪಕ್ಷಗಳ ಏಕತೆಗೆ ಸ್ಪಂದಿಸಲಿಲ್ಲ. ಇನ್ನೊಂದೆಡೆ ತಮಿಳುನಾಡಿನಲ್ಲಿ ಅಂಥ ಒಂದು ಮೈತ್ರಿ ರೂಪುಗೊಂಡ ಪರಿಣಾಮವಾಗಿ ಬಿಜೆಪಿಯ ಬೇಳೆ ಅಲ್ಲಿ ಬೇಯಲಿಲ್ಲ.

1976 ರಲ್ಲಿ ಈ ದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಾಗ, ವಿರೋಧ ಪಕ್ಷಗಳೆಲ್ಲ ಒಂದಾಗಿದ್ದವು. ಅದಕ್ಕೂ ಮುನ್ನ ನಡೆದ ಜೆಪಿ ಚಳವಳಿ ಪ್ರತಿಪಕ್ಷಗಳಿಗೆ ಪೂರಕವಾಯಿತು. ಆವಾಗ ಪ್ರತಿಪಕ್ಷಗಳಲ್ಲಿ ಎಂತಹ ಏಕತೆ ಮೂಡಿತ್ತೆಂದರೆ, ಅಂದಿನ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಪಕ್ಷ, ಸೋಶಿಯಲಿಸ್ಟ್ ಪಾರ್ಟಿ ಹಾಗೂ ಭಾರತೀಯ ಜನಸಂಘಗಳು (ಬಿಜೆಪಿ) ತಮ್ಮ ಅಸ್ತಿತ್ವ ಕಳೆದುಕೊಂಡು ಜನತಾ ಪಕ್ಷ ಎಂಬ ಹೊಸ ಪಕ್ಷ ಕಟ್ಟಿಕೊಂಡವು. ಜನ ಈ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದರು. ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ಆಗ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ್ ಜೋಶಿ ಕೇಂದ್ರ ಸಚಿವರಾದರು. ಆದರೆ ಮುಂದೆ ಈ ಸರಕಾರ ಉಳಿಯಲಿಲ್ಲ. ಜನಸಂಘ ವಿಲೀನಗೊಂಡಿದ್ದರೂ ಆರೆಸ್ಸೆಸ್ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡು ಸರಕಾರದ ಮೇಲೆ ಹಿಡಿತ ಸಾಧಿಸಲು ಯತ್ನಿಸಿತು. ಆಗ ಸೋಶಿಯಲಿಸ್ಟರು ತಕರಾರು ಮಾಡಿ ಹೊರಗೆ ಬಂದರು. ಮೊರಾರ್ಜಿ ಸರಕಾರ ಪತನಗೊಂಡಿತು.

ಜೆಪಿ ಚಳವಳಿಯಲ್ಲಿ ಸೇರಿದ ಪಕ್ಷಗಳ ಮೈತ್ರಿಕೂಟ ಒಂದು ಅವಕಾಶವಾದಿ ಹೊಂದಾಣಿಕೆ. ಅದಕ್ಕೆ ಯಾವುದೇ ಸಿದ್ದಾಂತ ಇರಲಿಲ್ಲ. ಕಾರ್ಯಕ್ರಮ ಇರಲಿಲ್ಲ. ಇಂದಿರಾಗಾಂಧಿ ವಿರೋಧ ಹಾಗೂ ಕಾಂಗ್ರೆಸ್ ವಿರೋಧ ಮಾತ್ರ ಅದರ ಏಕಮಾತ್ರ ಕಾರ್ಯಸೂಚಿಯಾಗಿತ್ತು. ಅಂತಲೇ ಕೋಮುವಾದಿ, ಮನುವಾದಿ ಬಿಜೆಪಿ ಹಾಗೂ ಲೋಹಿಯಾವಾದಿ ಸೋಶಿಯಲಿಸ್ಟರು, ಗಾಂಧಿವಾದಿ ಸಂಸ್ಥಾ ಕಾಂಗ್ರೆಸ್‌ನವರು ಕಾಂಗ್ರೆಸ್ ವಿರೋಧಿಸುವ ಏಕಮಾತ್ರ ಕಾರಣಕ್ಕಾಗಿ ಒಂದಾಗಿದ್ದರು. ಹೀಗಾಗಿ ಜೆಪಿ ಚಳವಳಿ ನನಗೆಂದೂ ಸ್ಫೂರ್ತಿ ನೀಡಲಿಲ್ಲ. ಅದರ ಒಟ್ಟು ಸಾಧನೆಯೆಂದರೆ ಆವರೆಗೆ ಜನರಿಂದ ತಿರಸ್ಕರಿಸಲ್ಪಟ್ಟಿದ್ದ ಕೋಮುವಾದಿ, ಗೋಡ್ಸೆವಾದಿ ಶಕ್ತಿಗಳಿಗೆ ಒಂದು ಸಾಮಾಜಿಕ ಮಾನ್ಯತೆ ದೊರಕಿಸಿಕೊಟ್ಟದ್ದನ್ನು ಬಿಟ್ಟರೆ ಬೇರೇನೂ ಇಲ್ಲ.

ಈಗ ಅದೆಲ್ಲ ಮುಗಿದ ಕತೆ. ಈ ಬಾರಿ ಪ್ರತಿಪಕ್ಷಗಳು ಒಂದುಗೂಡಲು ಅಂಥ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಲಿಲ್ಲ. ದೇಶದ ಸಂವಿಧಾನ ರಕ್ಷಣೆ, ಜಾತ್ಯತೀತ ವ್ಯವಸ್ಥೆಯ ರಕ್ಷಣೆ ಬಹುತೇಕ ಪ್ರತಿಪಕ್ಷಗಳ ಗುರಿಯಾಗಿತ್ತು. ಆರ್ಥಿಕ ವಿಷಯದಲ್ಲಿ ಭಿನ್ನಾಭಿಪ್ರಾಯ ಇದ್ದರೂ ಯುಪಿಎ(1) ಮಾದರಿಯಲ್ಲಿ ನಿಭಾಯಿಸಬಹುದಾಗಿತ್ತು. ಆದರೆ, ಒಂದು ಸಣ್ಣ ಹೊಂದಾಣಿಕೆಗೂ ಪ್ರತಿಪಕ್ಷಗಳು ಮುಂದಾಗಲಿಲ್ಲ.

ಈ ಬಾರಿ ಚುನಾವಣೆಯ ವೈಚಿತ್ರವೆಂದರೆ ಜನಸಾಮಾನ್ಯರನ್ನು ಬಾಧಿಸುತ್ತಿರುವ ಯಾವ ವಿಷಯಗಳು ಚುನಾವಣೆಯಲ್ಲಿ ಚರ್ಚೆಯಾಗಲಿಲ್ಲ. ಬೆಲೆಏರಿಕೆ, ನಿರುದ್ಯೋಗ, ಹಸಿವು, ಅಸಮಾನತೆ ಯಾವುದೂ ಚರ್ಚೆಗೆ ಬರಲಿಲ್ಲ. ದೇಶದ ಇತಿಹಾಸದಲ್ಲೇ ಜಿಡಿಪಿ ಪಾತಾಳಕ್ಕೆ ಕುಸಿದಿದೆ. ನಲವತ್ತು ಕೋಟಿ ಮಂದಿ ನಿರುದ್ಯೋಗಿಗಳಿದ್ದಾರೆ. ನೋಟು ಅಮಾನ್ಯೀಕರಣದಿಂದ ಆರ್ಥಿಕ ವ್ಯವಸ್ಥೆ ಏರುಪೇರಾಗಿದೆ. ಇದ್ಯಾವುದೂ ಜನರ ಗಮನಕ್ಕೆ ಬರಲಿಲ್ಲ. ಹಿಂದೆಲ್ಲ ಉಳ್ಳಾಗಡ್ಡಿ ಧಾರಣೆ 50 ಪೈಸೆ ಹೆಚ್ಚಾದರೆ ಸರಕಾರಗಳೇ ಉರುಳಿ ಹೋಗಿವೆ. ಅಕ್ಕಿ, ಗೋಧಿ ಬೆಲೆ ದುಬಾರಿಯಾದರೆ ಅದು ಚುನಾವಣೆ ಮೇಲೆ ಪರಿಣಾಮ ಬೀರುತ್ತಿತ್ತು. ಆದರೆ ಈ ಬಾರಿ ಅಂಥ ಯಾವ ಅಂಶಗಳೂ ಮಹತ್ವ ಪಡೆಯಲಿಲ್ಲ. ಬದಲಾಗಿ ಮತದಾರರ ಮೆದುಳಲ್ಲಿ ತುಂಬಲಾದ ಕೋಮು ಮತ್ತು ಜಾತಿ ದ್ವೇಷದ ವಿಷ ವಿವೇಕವನ್ನೇ ನಾಶ ಮಾಡಿತು. ಬಿಜೆಪಿ ಹಿಂದುತ್ವದ ಜೊತೆಗೆ ಪ್ರಯೋಗ ಮಾಡಿದ ಸೋಶಿಯಲ್ ಇಂಜಿನಿಯರಿಂಗ್ ತಂತ್ರ ಮತದಾರರ ಅದರಲ್ಲೂ ಮೂವತ್ತರೊಳಗಿನ ಯುವ ಮತದಾರರನ್ನು ದಾರಿ ತಪ್ಪಿಸಿತು. ಹಿಂದೆಲ್ಲ ಬಿಜೆಪಿಗೆ ಅದಕ್ಕೂ ಹಿಂದೆ ಜನಸಂಘಕ್ಕೆ ಕೆಲ ಬ್ರಾಹ್ಮಣರು, ಕೆಲವೇ ಕೆಲವು ಮರಾಠರನ್ನು ಬಿಟ್ಟರೆ ಯಾರೂ ಮತ ಹಾಕುತ್ತಿರಲಿಲ್ಲ. ಎಂಬತ್ತರ ದಶಕದವರೆಗೆ ಲೋಕಸಭೆಯಲ್ಲಿ ಬಿಜೆಪಿಯಿಂದ ಬರೀ ಇಬ್ಬರು ಮಾತ್ರ ಚುನಾಯಿತರಾಗಿ ಬರುತ್ತಿದ್ದರು. ಎಂಬತ್ತರ ಕೊನೆಯಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿ ರಥಯಾತ್ರೆ ಮೂಲಕ ಬಿಜೆಪಿ ತನ್ನ ಬಲಹೆಚ್ಚಿಸಿಕೊಂಡಿತು.

ಈಗಂತೂ ಬಹುತೇಕ ಹಿಂದುಳಿದ ಯುವಕರಿಗೆ ಹಿಂದುತ್ವದ ನಶೆ ಏರಿಸಲಾಗಿದೆ. ಆರ್ಥಿಕ, ಸಾಮಾಜಿಕ ವಾಸ್ತವ ಪರಿಸ್ಥಿತಿಯ ಆಘಾತಗಳ ಅರಿವಾಗದಂತೆ ಧರ್ಮದ ಅನಸ್ತೇಸಿಯಾ ನೀಡಲಾಗಿದೆ. ಈ ಅರಿವಳಿಕೆಯ ಆವೇಶದ ಲಾಭವನ್ನು ಬಿಜೆಪಿ ಪಡೆದಿದೆ.

ಬರಲಿರುವ ದಿನಗಳಲ್ಲಿ ಫ್ಯಾಶಿಸ್ಟ್ ದುರಾಕ್ರಮಣ ಹೆಚ್ಚಾಗಲಿದೆ. ಕಾನೂನು ಸುವ್ಯವಸ್ಥೆ ಬಿಕ್ಕಟ್ಟಿನಲ್ಲಿದೆ. ಉತ್ತರ ಪ್ರದೇಶದಲ್ಲಿ ರಾಜ್ಯ ವಕೀಲರ ಸಂಘದ (ಬಾರ್ ಅಸೋಸಿಯೇಷನ್) ಅಧ್ಯಕ್ಷೆಯನ್ನು ಹಾಡ ಹಗಲೇ ಗುಂಡಿಕ್ಕಿ ಕೊಲ್ಲಲಾಗಿದೆ. ದಲಿತರ ಮೇಲೆ ದಾಳಿಗಳು ಹೆಚ್ಚಾಗಿವೆ. ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುತ್ತಿದ್ದಾರೆ. ಅಮಿತ್ ಶಾ ಕೇಂದ್ರ ಗೃಹ ಮಂತ್ರಿಯಾದುದರಿಂದ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತದೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಸಾಹಿತಿ, ಕಲಾವಿದರ ಮೇಲೆ ದಾಳಿ. ಹಲ್ಲೆಗಳು ಹೆಚ್ಚಾಗುವ ಸಂಭವವಿದೆ. ಇದನ್ನೆದುರಿಸಿ ಹೋರಾಡುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಮನವಿ ಕೊಡುವ, ದಿಲ್ಲಿ ಚಲೋ ಮಾಡುವ, ಧರಣಿ ಮಾಡುವ ದಿನಗಳು ಮುಗಿದವೇನೊ? ಜನ ಹೋರಾಟಗಳು ಹೊಸ ಕಾರ್ಯತಂತ್ರ ರೂಪಿಸಬೇಕಾಗಿದೆ.

ಈ ಸೋಲಿನಿಂದ ಉಳಿದವರು ಇನ್ನೂ ಚೇತರಿಸಿರಲಿಕ್ಕಿಲ್ಲ. ಆದರೆ ವೈಜ್ಞಾನಿಕ, ಸಮಾಜವಾದಿ ಸಿದ್ದಾಂತ ಹೊಂದಿರುವ ಕಮ್ಯುನಿಸ್ಟ್ ಪಕ್ಷಗಳು ಸೋಲಿನ ಬಗ್ಗೆ ವಸ್ತುನಿಷ್ಠವಾಗಿ ವಿಮರ್ಶಿಸಬೇಕಿದೆ. ಮತ್ತೆ ಪುಟಿದೇಳಬೇಕಿದೆ. ಇದಕ್ಕಿಂತ ಮೊದಲು ಎಲ್ಲ ಕಮ್ಯುನಿಸ್ಟ್ ಪಕ್ಷಗಳು ಈಗಲಾದರೂ ಒಂದು ಗೂಡಬೇಕಾಗಿದೆ. 1964ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಇಭ್ಭಾಗವಾದಾಗ ಇದ್ದ ಪರಿಸ್ಥಿತಿ ಈಗಿಲ್ಲ. ಸನ್ನಿವೇಶ ಬದಲಾಗಿದೆ.ಕಾರ್ಯಕ್ರಮಗಳೂ ಹೊಸ ಸಂದರ್ಭಕ್ಕೆ ತಕ್ಕಂತೆ ಬದಲಾಗಬೇಕಾಗಿದೆ.

ಕಮ್ಯುನಿಸ್ಟ್ ಪಕ್ಷಗಳು ಒಂದುಗೂಡಿದರೆ ಫ್ಯಾಶಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುತ್ತದೆ. ಈ ಬಾರಿ ಬಿಜೆಪಿಗೆ ದೊರೆತ ಅಧಿಕಾರವನ್ನು ಅದು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ಮೂವತ್ತರೊಳಗಿನ ಯುವಕರನ್ನು ಬಿಜೆಪಿ ಒಲಿಸಿಕೊಂಡಿದೆ. ಬಹುತೇಕ ತರುಣರು ಬಿಜೆಪಿಗೆ ಮತ ಹಾಕಿದ್ದಾರೆ. ಈ ಯುವಕರು ಇನ್ನು ಅರ್ಧ ಶತಮಾನ ಕಾಲ ಬಿಜೆಪಿ ಮತದಾರರಾಗಿ ಉಳಿಯುತ್ತಾರೆ. ಅದರ ಅರ್ಥ ಸುದೀರ್ಘ ಕಾಲ ಬಿಜೆಪಿ ಅಧಿಕಾರದಲ್ಲಿರುತ್ತದೆ. ಹೊಸ ಪೀಳಿಗೆಯ ನಾಡಿಯ ಮಿಡಿತವನ್ನು ಗುರುತಿಸುವಲ್ಲಿ ಎಡಪಂಥೀಯ ಪಕ್ಷಗಳು ಸೇರಿದಂತೆ ಎಲ್ಲ ಪಕ್ಷಗಳು ವಿಫಲವಾಗಿರುವುದು ವಾಸ್ತವ ಸಂಗತಿ.

ಬೌದ್ಧಿಕ ವಲಯಗಳಲ್ಲಿ ಕಮ್ಯುನಿಸ್ಟರ ಸೈದ್ಧಾಂತಿಕ ಬದ್ದತೆಯ ಬಗ್ಗೆ ಪ್ರಶ್ನೆಗಳು ಬರುತ್ತಿವೆ. ಪಶ್ಚಿಮ ಬಂಗಾಳದ ಲೋಕಸಭಾ ಚುನಾವಣೆಯಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟರು ಬಿಜೆಪಿಗೆ ಸಾರಾ ಸಗಟಾಗಿ ಓಟು ಹಾಕಿರುವುದು ಬರೀ ಮಾಧ್ಯಮಗಳ ಟೀಕೆಯಾಗಿ ಉಳಿದಿಲ್ಲ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರೇ ಒಪ್ಪಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಗೂಂಡಾಗಳ ಹಿಂಸೆ ತಡೆಯದೇ ಬಿಜೆಪಿಗೆ ಹಾಕಿದ್ದಾಗಿ ಕೆಲವರು ಸಮರ್ಥಿಸಿದರೂ ಅದು ಸರಿಯಲ್ಲ. ಬುದ್ಧ್ದದೇವ ಭಟ್ಟಾಚಾರ್ಯ ಅವರು ಹೇಳಿದಂತೆ, ಇದೊಂದು ರೀತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ. ಇದರ ಬದಲಾಗಿ ಪಶ್ಚಿಮ ಬಂಗಾಳ ಬಿಜೆಪಿ ವಶವಾಗುವುದನ್ನು ತಪ್ಪಿಸಲು ಸಿಪಿಎಂ ಹಾಗೂ ಟಿಎಂಸಿಗಳು ಒಂದು ತಾತ್ಕಾಲಿಕ ಹೊಂದಾಣಿಕೆಗೆ ಬರಬೇಕಾಗಿತ್ತು.

ಹೀಗೆ ಪ್ರತಿಪಕ್ಷಗಳಲ್ಲಿ ಉಂಟಾಗಿರುವ ಗೊಂದಲ ಬಿಜೆಪಿಗೆ ವರದಾನವಾಗಿದೆ. ಆರೆಸ್ಸೆಸ್ ಸಂಘಟನಾ ಶಕ್ತಿ, ಮೋದಿಯವರ ಚರಿಷ್ಮಾ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿಯ ಹಣ ಇವೆಲ್ಲ ಸೇರಿ ಏನನ್ನೂ ಸಾಧನೆ ಮಾಡದೆ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಈ ಚುನಾವಣೆ ಬರೀ ಒಂದು ಪಕ್ಷ ಹೋಗಿ, ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದಿದ್ದರೆ ಅಷ್ಟು ಗಂಭೀರವಾಗಿ ಪರಿಗಣಿಸಬೇಕಾಗಿರಲಿಲ್ಲ. ಆದರೆ ಇದು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆ. ಈಗ ಗೆದ್ದಿರುವ ಪಕ್ಷಕ್ಕೆ ಸಂವಿಧಾನಿಕ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಇದರಿಂದ ಜನತಂತ್ರಕ್ಕೂ ಅಪಾಯವಿದೆ. ಕಾರಣ ಆತಂಕ ಪಡಬೇಕಾಗಿದೆ. ಈ ಅಪಾಯದಿಂದ ದೇಶವನ್ನು ಪಾರು ಮಾಡಲು ಸುದೀರ್ಘ ಜನಾಂದೋಲನದ ಅಗತ್ಯವಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News