ದೇಶ ಸುಡುವ ಈ ಬೆಂಕಿ ನಂದಿಸಲು ಒಂದಾಗೋಣ

Update: 2019-07-14 18:34 GMT

ಇಡೀ ದೇಶ ಫ್ಯಾಶಿಸ್ಟ್ ದಳ್ಳುರಿಗೆ ಸಿಲುಕಿದೆ. ಈ ಬೆಂಕಿಯನ್ನು ನಂದಿಸಲು ನೀರು ಬೇಕು. ಆ ನೀರು ಪವಿತ್ರ ಗಂಗಾ ನದಿಯ ನೀರೇ ಆಗಬೇಕೆಂದಿಲ್ಲ. ಗಟಾರದಲ್ಲಿ ಹರಿಯುವ ಕೊಳಚೆ ನೀರಾದರೂ ಸರಿ ಅದನ್ನು ಬಳಸಿಕೊಂಡು ಈ ಬೆಂಕಿಯನ್ನು ಆರಿಸೋಣ. ಫ್ಯಾಶಿಸಂ ವಿರುದ್ಧ ಮಾತಾಡುವ ಎಲ್ಲರಿಗೂ ಸ್ನೇಹ ಹಸ್ತ ಚಾಚೋಣ.


ಭಾರತ ಮನುವಾದಿ ಫ್ಯಾಶಿಸ್ಟ್ ಬೆಂಕಿಯ ದವಡೆಗೆ ಸಿಲುಕಿದೆ. ಹಾದಿ, ಬೀದಿಗಳಲ್ಲಿ ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ಹೊಡೆದು ಕೊಲ್ಲುವ ಪೈಶಾಚಿಕ ಕೃತ್ಯಗಳು ನಡೆಯುತ್ತಿವೆ. ಈ ಕೊಲೆಗಡುಕತನವನ್ನು ಸಮರ್ಥಿಸುವ ಸಮೂಹ ಸನ್ನಿ ಸಾಮಾಜಿಕ ಜೀವನವನ್ನು ತಲ್ಲಣಗೊಳಿಸಿದೆ. ಇಂಥ ಅಪಾಯಕಾರಿ ಸನ್ನಿವೇಶದಲ್ಲಿ ಇನ್ಫೋಸಿಸ್‌ನ ನಾರಾಯಣಮೂರ್ತಿ ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳ ಬಗ್ಗೆ ಈಗ ಸಂದೇಹ ಪಡುವುದು ಬೇಡ.

ಈಗ ಪರಿಸ್ಥಿತಿ ಕೈ ಮೀರಿ ಹೋಗಿದೆ. ಜನಾಂಗ ದ್ವೇಷದ ವಿಷ ಇಡೀ ಸಾಮಾಜಿಕ ಬದುಕನ್ನು ಆವರಿಸುತ್ತಿದೆ. ಜೈ ಶ್ರೀ ರಾಮ್ ಹೇಳು ಎಂದು ನಡು ರಸ್ತೆಯಲ್ಲಿ ಬಡಿದು ಸಾಯಿಸಲಾಗುತ್ತಿದೆ. ಇದರ ವಿರುದ್ಧ ಧ್ವನಿಯೆತ್ತುವ ಬುದ್ಧಿಜೀವಿಗಳ, ಸಾಹಿತಿಗಳ ಮತ್ತು ಚಿಂತಕರ ಗತಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಮನೆ ಬಾಗಿಲಿಗೆ ಬಂದು ಗುಂಡಿಕ್ಕಿ ಸಾಯಿಸಿದರು. ಕೆಲ ಜನಪರ ಸಂಘಟನೆಗಳನ್ನು ಬಿಟ್ಟರೆ ನಾಗರಿಕ ಸಮಾಜದಲ್ಲಿ ಈ ಹತ್ಯೆ ಗಳ ಬಗ್ಗೆ ಅಂತಹ ಪ್ರತಿರೋಧ ವ್ಯಕ್ತವಾಗಲಿಲ್ಲ. ಅಂತಲೇ ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿ ಮಾತಾಡಿದ ಸಾಧ್ವಿ ಪ್ರಜ್ಞಾ ಸಿಂಗ್‌ಳನ್ನು ನಮ್ಮ ಜನ ಚುನಾಯಿಸಿ ಸಂಸತ್ತಿಗೆ ಕಳಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳು ಸೋಲುತ್ತವೆ ಎಂಬ ನಿರೀಕ್ಷೆ ಹುಸಿಯಾಯಿತು. ಪ್ರತಿಪಕ್ಷಗಳು ಒಂದಾಗಿದ್ದರೆ ಕೊಂಚ ಬಿಸಿ ಮುಟ್ಟಿಸಬಹುದಾಗಿತ್ತೇನೋ? ಆದರೆ ಆಗಲಿಲ್ಲ. ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದು ಕೂತಿದೆ.

ಚುನಾವಣಾ ಗೆಲುವಿನ ಸಂಭ್ರಮದಲ್ಲಿರುವ ಬಿಜೆಪಿ ಈಗ ಕಾಂಗ್ರೆಸ್ ಮುಕ್ತ ಮಾತ್ರವಲ್ಲ, ಪ್ರತಿಪಕ್ಷಗಳಿಲ್ಲದ ಭಾರತ ನಿರ್ಮಿಸಲು ಹೊರಟಿದೆ. ಗೋವಾ ವಿಧಾನಸಭೆಯ ಪ್ರತಿಪಕ್ಷ ನಾಯಕನೂ ಸೇರಿದಂತೆ ಹತ್ತು ಮಂದಿ ಕಾಂಗ್ರೆಸ್ ಸದಸ್ಯರನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಂಡಿದೆ. ವಾಸ್ತವವಾಗಿ 2017ರಲ್ಲಿ ನಡೆದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಶಾಸನ ಸಭೆಯ ಒಟ್ಟು 40ರ ಪೈಕಿ 13 ಸ್ಥಾನಗಳನ್ನು ಮಾತ್ರ ಬಿಜೆಪಿ ಗೆದ್ದಿತ್ತು. 17 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನೇ ಇಬ್ಭ್ಬಾಗ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂತು.

ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ ಗೆದ್ದು ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆಗ ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನ ನೀಡಿದರು. ಆದರೆ ನಿಗದಿತ ಕಾಲಾವಧಿಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಡಿಯೂರಪ್ಪ ವಿಫಲಗೊಂಡರು. ಆಗ ಕಾಂಗ್ರೆಸ್-ಜೆಡಿಎಸ್ ಸೇರಿ ಬಹುಮತ ಸಾಧಿಸಿ ಸರಕಾರ ರಚಿಸಿದವು. ಈಗ ಕುಮಾರಸ್ವಾಮಿ ಅವರ ಸರಕಾರವನ್ನು ಉರುಳಿಸಲು ಬಿಜೆಪಿ ಆಡುತ್ತಿರುವ ಆಟ ಎಲ್ಲರಿಗೆ ಗೊತ್ತಿದೆ. ಒಬ್ಬ ಶಾಸಕನಿಗೆ ತಲಾ 40 ಕೋಟಿ ರೂಪಾಯಿ ಕೊಡುವ ಭರವಸೆ ನೀಡಿ ಕೆಲ ಶಾಸಕರನ್ನು ಮುಂಬೈಗೆ ಒಯ್ದು ಪಂಚತಾರಾ ಹೊಟೇಲ್‌ನಲ್ಲಿ ಇರಿಸಿದೆ. ಇವರ ರಾಜೀನಾಮೆ ಪ್ರಶ್ನೆ ಇತ್ಯರ್ಥವಾಗಿಲ್ಲ. ತಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ಸಂವಿಧಾನಕ್ಕೆ ಬದ್ಧನಾಗಿ ನಡೆದುಕೊಳ್ಳುವುದಾಗಿ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಖಂಡ ತುಂಡವಾಗಿ ಹೇಳಿದ್ದಾರೆ.

ಎರಡನೇ ಮಹಾಯುದ್ಧದ ಕಾಲದ ಜರ್ಮನಿಯ ದಿನಗಳು ಭಾರತದಲ್ಲಿ ಮರುಕಳಿಸುವ ಆತಂಕ ಎದುರಾಗಿದೆ. ಆಗ ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಬೆನ್ನು ಮೂಳೆ ಮುರಿಯಲು ಸೋವಿಯತ್ ರಶ್ಯದ ನಾಯಕ ಜೋಸೆಫ್ ಸ್ಟಾಲಿನ್ ಜಾಣತನದ ಹೆಜ್ಜೆ ಇಟ್ಟರು. ಇಡೀ ಜಗತ್ತನ್ನೇ ನಾಶ ಮಾಡಲು ಹೊರಟ ಹಿಟ್ಲರ್ ಎಂಬ ದೆವ್ವವನ್ನು ಹಿಮ್ಮೆಟ್ಟಿಸಲು ಅಮೆರಿಕ ಮತ್ತು ಇಂಗ್ಲೆಂಡ್ ಮೈತ್ರಿ ಮಾಡಿಕೊಂಡವು, ರಶ್ಯದ ನಾಯಕ ಸ್ಟಾಲಿನ್, ಇಂಗ್ಲೆಂಡ್‌ನ ಚರ್ಚಿಲ್ ಮತ್ತು ಅಮೆರಿಕದ ರೂಸ್ವೆಲ್ಟ್ ಒಂದುಗೂಡಿದರು. ಅದು ಅಂದಿನ ಚಾರಿತ್ರಿಕ ಅನಿವಾರ್ಯತೆಯಾಗಿತ್ತು.

ಭಾರತದಲ್ಲಿ ಈಗ ಅಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿರೋಧವೇ ಇಲ್ಲದ ಮನುವಾದಿ ಹಿಂದೂರಾಷ್ಟ್ರ ನಿರ್ಮಿಸಲು ಹೊರಟ ಫ್ಯಾಶಿಸ್ಟ್ ಸಂಘ ಪರಿವಾರದ ವಿರುದ್ಧ ಎಲ್ಲ ಪ್ರತಿಪಕ್ಷ ಗಳು ಒಂದುಗೂಡಬೇಕಾಗಿದೆ. ಪ್ರತಿಪಕ್ಷ ಗಳು ಮಾತ್ರವಲ್ಲ, ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರಂಥವರು ಫ್ಯಾಶಿಸ್ಟ್ ವಿರೋಧಿ ವೇದಿಕೆಗೆ ಬರಬೇಕಾಗಿದೆ. ಅದಕ್ಕಾಗಿ ಮಡಿವಂತಿಕೆ ಬಿಟ್ಟು ಮೋದಿ ಸರಕಾರದ ವಿರುದ್ಧ ಅವರಾಡಿದ ಮಾತುಗಳನ್ನು ಸ್ವಾಗತಿಸೋಣ.

ಇಡೀ ದೇಶ ಫ್ಯಾಶಿಸ್ಟ್ ದಳ್ಳುರಿಗೆ ಸಿಲುಕಿದೆ. ಈ ಬೆಂಕಿಯನ್ನು ನಂದಿಸಲು ನೀರು ಬೇಕು. ಆ ನೀರು ಪವಿತ್ರ ಗಂಗಾ ನದಿಯ ನೀರೇ ಆಗಬೇಕೆಂದಿಲ್ಲ. ಗಟಾರದಲ್ಲಿ ಹರಿಯುವ ಕೊಳಚೆ ನೀರಾದರೂ ಸರಿ ಅದನ್ನು ಬಳಸಿಕೊಂಡು ಈ ಬೆಂಕಿಯನ್ನು ಆರಿಸೋಣ. ಫ್ಯಾಶಿಸಂ ವಿರುದ್ಧ ಮಾತಾಡುವ ಎಲ್ಲರಿಗೂ ಸ್ನೇಹ ಹಸ್ತ ಚಾಚೋಣ.
ಕೋಮುವಾದದ ಈ ಫ್ಯಾಸಿಸ್ಟ್ ಬೆಂಕಿಯನ್ನು ಮೊದಲು ನಂದಿಸೋಣ. ಅದು ಆರಿ ತಣ್ಣಗಾದ ನಂತರ ಭವಿಷ್ಯದ ಭಾರತದ ಬಗ್ಗೆ ಯೋಚಿಸೋಣ. ಆಗ ಇನ್ಫೋಸಿಸ್ ನಾರಾಯಣ ಮೂರ್ತಿ ಅಂಥವರ ಜೊತೆ ಕಿತ್ತಾಡೋಣ. ಸಮಾಜವಾದಿ ಸಮಾನತೆಯ ಭಾರತ ನಿರ್ಮಾಣವಾಗಬೇಕಾದರೆ, ಮೊದಲು ಜನಾಂಗೀಯ ದ್ವೇಷವನ್ನು ತೊಲಗಿಸಬೇಕು. ಮೊದಲು ಭಾರತ ಎಲ್ಲರ ಭಾರತವಾಗಿ ಸುರಕ್ಷಿತವಾಗಿ ಉಳಿಯಬೇಕು. ಆ ನಂತರ ಮುಂದೇನು ಎಂಬ ಬಗ್ಗೆ ತೀರ್ಮಾನ ಮಾಡೋಣ. ಇದೊಂದೇ ಈಗ ಉಳಿದ ದಾರಿ.

ಪ್ರತಿರೋಧವನ್ನು ಮತ್ತು ಪ್ರತಿಪಕ್ಷಗಳನ್ನು ನಾಶ ಮಾಡುವ ಬಿಜೆಪಿಯ ಹುನ್ನಾರದ ವಿರುದ್ಧ ಧ್ವನಿಯೆತ್ತೋಣ. ಇದನ್ನು ಬರೆಯುವಾಗ ಪಶ್ಚಿಮ ಬಂಗಾಳದ 107 ಕಾಂಗ್ರೆಸ್, ಟಿಎಂಸಿ ಮತ್ತು ಸಿಪಿಎಂ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಬಂತು. ಈಗ ಹೇಳಲು, ಕೇಳಲು ಏನೂ ಉಳಿದಿಲ್ಲ.
ಜಗತ್ತಿನಲ್ಲಿ ಭಾರತದಂಥ ದೇಶ ಇನ್ನೊಂದಿಲ್ಲ. ಇಲ್ಲಿ ಎಲ್ಲ ಸಮುದಾಯಗಳ ಜನರಿದ್ದಾರೆ. 22 ಅಧಿಕೃತ ಭಾಷೆಗಳಿವೆ. 1,652 ಜನರಾಡುವ ಮಾತೃ ಭಾಷೆಗಳಿವೆ. 6 ರಾಷ್ಟ್ರೀಯ ಅಲ್ಪಸಂಖ್ಯಾತ ಧರ್ಮಗಳಿವೆ. ಹಲವಾರು ನಾಗರಿಕತೆಗಳು, ಸಂಸ್ಕೃತಿಗಳು ಇಲ್ಲಿವೆ. ಭಿನ್ನ ರಾಷ್ಟ್ರೀಯತೆಗಳಿವೆ. ಇಂಥ ಅದ್ಭುತವಾದ ದೇಶ ಜಗತ್ತಿನಲ್ಲಿ ಇನ್ನೆಲ್ಲೂ ಇಲ್ಲ. ಇಂಥ ವೈವಿಧ್ಯಮಯ ದೇಶವನ್ನು ಏಕ ಧರ್ಮೀಯ, ಏಕ ಸಂಸ್ಕೃತಿಯ, ಏಕ ಭಾಷೆಯ ಫ್ಯಾಶಿಸ್ಟ್ ರಾಷ್ಟ್ರವನ್ನಾಗಿ ಮಾಡಲು ಹೊರಟ ಹಿಟ್ಲರ್‌ವಾದಿಗಳ ಹುನ್ನಾರವನ್ನು ವಿಫಲಗೊಳಿಸಲು ಎಲ್ಲರೂ ಒಂದಾಗಬೇಕಾದ ಕಾಲವಿದು.

ನಾರಾಯಣ ಮೂರ್ತಿ, ಗೋದ್ರೆಜ್ ಅವರಂಥ ಬಂಡವಾಳಶಾಹಿಗಳು ತಮ್ಮ ವ್ಯಾಪಾರಿ ಹಿತಾಸಕ್ತಿಗಾಗಿ ಈ ಫ್ಯಾಶಿಸ್ಟ್ ಆಡಳಿತ ವಿರೋಧಿಸಿದರೆ, ಅದರ ಬಗ್ಗೆ ಆಕ್ಷೇಪ ಬೇಡ. ವ್ಯಾಪಾರಿಗಳಿಗೂ, ಉದ್ಯಮಪತಿಗಳಿಗೂ ತಮ್ಮ ವ್ಯವಹಾರ ನಡೆಯಲು ಶಾಂತಿಯುತ ವಾತಾವರಣ ಬೇಕು. ಆದ್ದರಿಂದಲೇ ಅವರೂ ರೋಸಿ ಹೋಗಿರಬಹುದು.

ಮೊದಲು ಭಾರತದ ಬಹುತ್ವವನ್ನು ಕಾಪಾಡೋಣ. ಬಹುತ್ವ ಭಾರತದ ಉಳಿವಿಗಾಗಿ, ಮನೆಗೆ ಬಿದ್ದ ಬೆಂಕಿ ಆರಿಸಲು ಎಲ್ಲ ಅಗ್ನಿಶಾಮಕಗಳನ್ನು ಬಳಸೋಣ. ಬೇಡ ಅಂದರೆ ಈ ದೇಶ ನಾಶವಾಗಿ ಹೋಗುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News