ಮೀಸಲಾತಿ ವಿರುದ್ಧ ಮನುವಾದಿಗಳ ಮಸಲತ್ತು

Update: 2019-08-25 18:50 GMT

ಭಾಗವತರೇ, ಈ ದೇಶದಲ್ಲಿ ಪ್ರತಿನಿತ್ಯವೂ ಮಲದ ಗುಂಡಿಗೆ ಬಿದ್ದು ದುಡಿಯುವ ಜನ ಸಾಯುತ್ತಿದ್ದಾರೆ. ಇದನ್ನು ಬರೆಯುವ ವೇಳೆಯಲ್ಲೂ ಉತ್ತರ ಪ್ರದೇಶದಲ್ಲಿ ಮಲದ ಗುಂಡಿ ಸ್ವಚ್ಛ ಮಾಡಲು ಹೋಗಿ ಐವರು ದಲಿತ ಕಾರ್ಮಿಕರು ಉಸಿರುಗಟ್ಟಿ ಸತ್ತಿದ್ದಾರೆ. ಪ್ರತಿ ವರ್ಷ ನೂರಾರು ಜನ ಹೀಗೆ ಸಾಯುತ್ತಾರೆ. ಚರ್ಚೆ ಆಗಬೇಕಾಗಿರುವುದು ಅದರ ಬಗ್ಗೆ ಅಲ್ಲವೆ. ಅವರೂ ಭಾರತೀಯರಲ್ಲವೇ. ಅವರನ್ನು ಬದುಕಿಸಬೇಕಲ್ಲವೇ?

ಈದೇಶದಲ್ಲಿ ಯಾವುದೇ ಸಂವಾದ, ಚರ್ಚೆ ನಡೆಯದಂತೆ ನೋಡಿಕೊಳ್ಳುತ್ತ ಬಂದವರ ಬಾಯಿಯಲ್ಲಿ ಈಗ ಆ ಮಾತುಗಳು ಕೇಳಿ ಬರುತ್ತಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಸಂಘಚಾಲಕರಾದ ಮೋಹನ್ ಭಾಗವತ್, ‘ದಲಿತ, ಹಿಂದುಳಿದ ವರ್ಗಗಳ ಜನರಿಗಿರುವ ಮೀಸಲು ವ್ಯವಸ್ಥೆ ಬಗ್ಗೆ ರಾಷ್ಟ್ರೀಯ ಚರ್ಚೆ ನಡೆಯಬೇಕಿದೆ’ ಎಂದು ಹೇಳಿದ್ದಾರೆ. ಈ ರೀತಿ ಅವರು ಹೇಳುತ್ತಿರುವುದು ಇದೇ ಮೊದಲ ಬಾರಿಯಲ್ಲ. 2015ರಲ್ಲಿ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಅವರು ಮೀಸಲು ವ್ಯವಸ್ಥೆಯ ಬಗ್ಗೆ ಮರುವಿಮರ್ಶೆ ನಡೆಯಬೇಕೆಂದು ಹೇಳಿದ್ದರು. ಆಗ ಅವರ ಈ ಮಾತು ವಿವಾದದ ಅಲೆ ಎಬ್ಬಿಸಿತ್ತು. ಮೀಸಲು ವ್ಯವಸ್ಥೆಯ ಬಗ್ಗೆ ಪರಾಮರ್ಶೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸಬೇಕೆಂದು ಆಗ ಅವರು ಹೇಳಿದ್ದರು. ಅದಕ್ಕೆ ತೀವ್ರ ವಿರೋಧ ಬಂದ ನಂತರ ಹಾಗೂ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ನಂತರ, ಮೀಸಲಾತಿಗೆ ತಮ್ಮ ವಿರೋಧವಿಲ್ಲ ಎಂದು ಆರೆಸ್ಸೆಸ್ ಸ್ಪಷ್ಟೀಕರಣ ನೀಡಿತ್ತು. ಈ ಬಾರಿ ಭಾಗವತರು ಮತ್ತೆ ಮೀಸಲಾತಿ ಬಗ್ಗೆ ಹೇಳಿದ್ದಾರೆ. ಅದನ್ನು ಯಾರದೋ ಹೇಳಿಕೆ ಎಂದು ತಳ್ಳಿ ಹಾಕಲು ಆಗುವುದಿಲ್ಲ. ಈಗಿರುವ ಕೇಂದ್ರ ಸರಕಾರವನ್ನು ನಿಯಂತ್ರಿಸುವ ರಿಮೋಟ್ ಅವರ ಕೈಯಲ್ಲಿ ಇರುವುದರಿಂದ ಸಹಜವಾಗಿ ದಲಿತ, ದಮನಿತ ಸಮುದಾಯಗಳಲ್ಲಿ ಭಾಗವತರ ಹೇಳಿಕೆ ಆತಂಕವನ್ನುಂಟು ಮಾಡಿದೆ.

ಸಂಘಪರಿವಾರದ ಅಜೆಂಡಾವನ್ನು ಮೋದಿ ಸರಕಾರ ಜಾರಿಗೆ ತರುತ್ತಿರುವ ಅವಸರವನ್ನು ಗಮನಿಸಿದಾಗ ಮೀಸಲಾತಿ ಬಗೆಗಿನ ಹೇಳಿಕೆಯ ಹಿಂದೆ ಏನೋ ಇದೆ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಧಿಯ ರದ್ದತಿ ಹಾಗೂ ತ್ರಿವಳಿ ತಲಾಖ್‌ಗಳಲ್ಲಿ ಸರಕಾರ ತೋರಿದ ಆತುರ ಗಮನಾರ್ಹವಾಗಿದೆ.

ಈ ಬಾರಿ ಮೋಹನ್ ಭಾಗವತರು ಚರ್ಚೆಯ ಹಿಂದೆ ಸೌಹಾರ್ದ ಎಂಬ ಶಬ್ದ ಬಳಸಿದ್ದಾರೆ. ಮೀಸಲಾತಿ ಬಗ್ಗೆ ಪರ ಮತ್ತು ವಿರೋಧವಾಗಿರುವವರ ನಡುವೆ ಚರ್ಚೆಗೆ ಸೌಹಾರ್ದ ವಾತಾವರಣ ನಿರ್ಮಿಸಬೇಕೆಂದು ಅವರು ಹೇಳಿದ್ದಾರೆ. ಅವರ ಈ ಮಾತು ಅತ್ಯಂತ ಅಪಾಯಕಾರಿಯಾಗಿದೆ.

ಮೀಸಲಾತಿ ಎಂಬುದು ಶತಮಾನಗಳಿಂದ ತುಳಿತಕ್ಕೊಳಗಾದ ಈ ನಾಡು ಕಟ್ಟಿದ ದಲಿತ ದಮನಿತ ಸಮುದಾಯದ ಸಂವಿಧಾನದತ್ತವಾದ ಹಕ್ಕು. ಈ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲೇ ಸುದೀರ್ಘ ಚರ್ಚೆ ನಡೆದು ಡಾ.ಅಂಬೇಡ್ಕರ್ ಅವರು ಸೂಕ್ತ ಸಮಜಾಯಿಷಿ ನೀಡಿದ ನಂತರ ಒಮ್ಮತದಿಂದ ಇದನ್ನು ಅಂಗೀಕರಿಸಲಾಗಿದೆ. ಒಮ್ಮೆ ಇತ್ಯರ್ಥವಾದ ವಿಷಯದ ಬಗ್ಗೆ ಮತ್ತೆ ಚರ್ಚೆ ನಡೆಸುವ ಜರೂರತ್ತು ಈಗಿಲ್ಲ. ಆದರೆ ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂರಾಷ್ಟ್ರ ಮಾಡಲು ಹೊರಟ ಭಾಗವತರಿಗೆ ಅದರ ಜರೂರತ್ತು ಇದೆ. ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಭಾರೀ ಬೆಂಬಲ ಮತ್ತು ಬಹುಮತ ಇದೆ. ಇದೇ ಸಂದರ್ಭದಲ್ಲಿ ಮೀಸಲಾತಿಗೆ ಚಟ್ಟ ಕಟ್ಟಿ ತಮ್ಮ ಕಲ್ಪನೆಯ ಹಿಂದೂರಾಷ್ಟ್ರದ ಗುರಿ ಸಾಧಿಸುವ ಉದ್ದೇಶ ಅವರಿಗಿದೆ.

ಆದರೆ ಮೀಸಲಾತಿ ಎಂಬುದು ಯಾರೋ ನೀಡಿದ ಭಿಕ್ಷೆ ಅಲ್ಲ. ಅದು ಸಾಂವಿಧಾನಿಕ ಹಕ್ಕು. ಚರ್ಚೆ ಆಗಬೇಕಾಗಿರುವುದು ಅದರ ಬಗ್ಗೆ ಅಲ್ಲ. ಜಾತಿ ಪದ್ಧತಿ,ಅಸ್ಪಶ್ಯತೆ, ಅನಕ್ಷರತೆ, ಸ್ತ್ರೀ ಭ್ರೂಣ ಹತ್ಯೆ, ಭೂರಹಿತರಿಗೆ ಭೂಮಿ ಹಂಚಿಕೆ ಇವುಗಳ ಬಗ್ಗೆ ಚರ್ಚೆ ಆಗಬೇಕಾಗಿದೆ. ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷಗಳಾದರೂ ಈ ದೇಶದ ಶೇ.54ರಷ್ಟು ದಲಿತರಿಗೆ ತಮ್ಮದೆನ್ನುವ ಒಂದಿಂಚು ಭೂಮಿಯೂ ಇಲ್ಲ ಅದರ ಬಗ್ಗೆ ಚರ್ಚೆಯಾಗಬೇಕು.

ಅಪಘಾತದಲ್ಲಿ ಮೃತಪಟ್ಟ ದಲಿತ ವ್ಯಕ್ತಿಯೊಬ್ಬನ ಪಾರ್ಥಿವ ಶರೀರವನ್ನು ಸಾರ್ವಜನಿಕ ರಸ್ತೆಯಲ್ಲಿ ಸಾಗಿಸಲು ಸವರ್ಣೀಯರು ಅವಕಾಶ ನೀಡಲಿಲ್ಲವೆಂದು ಆ ಶವವನ್ನು 20 ಅಡಿ ಎತ್ತರದ ಸೇತುವೆಯಿಂದ ಶವಕ್ಕೆ ಹಗ್ಗ ಬಿಗಿದು ಕೆಳಗೆ ಇಳಿಸುವ ಮನ ಕಲಕುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರುದ್ರಭೂಮಿಗೆ ಸಾಗಿಸುವ ರಸ್ತೆಯ ಸುತ್ತಲಿನ ಜಮೀನುಗಳನ್ನು ಉಚ್ಚ ಎಂದು ಹೇಳಿಕೊಳ್ಳುವ ವಣ್ಣಿಯಾರ ಹಾಗೂ ಗೌಂಡರ ಜಾತಿಯ ಜನರು ಖರೀದಿಸಿರುವುದರಿಂದ ಅವರು ಶವ ಸಾಗಿಸಲು ಬಿಡಲಿಲ್ಲ. ಹೀಗಾಗಿ ಶವವನ್ನು ಹಗ್ಗ ಕಟ್ಟಿ ಸೇತುವೆ ಕೆಳಗೆ ಬಿಟ್ಟು ಬೇರೆ ರುದ್ರ ಭೂಮಿಗೆ ಸಾಗಿಸಿ ಅಂತ್ಯಕ್ರಿಯೆ ಮಾಡಿದರು. ಭಾಗವತರೇ ಚರ್ಚೆಯಾಗಬೇಕಾಗಿರುವುದು ಇದರ ಬಗ್ಗೆ ಅಲ್ಲವೇ? ಭಾಗವತರೇ, ಈ ದೇಶದಲ್ಲಿ ಪ್ರತಿನಿತ್ಯವೂ ಮಲದ ಗುಂಡಿಗೆ ಬಿದ್ದು ದುಡಿಯುವ ಜನ ಸಾಯುತ್ತಿದ್ದಾರೆ. ಇದನ್ನು ಬರೆಯುವ ವೇಳೆಯಲ್ಲೂ ಉತ್ತರ ಪ್ರದೇಶದಲ್ಲಿ ಮಲದ ಗುಂಡಿ ಸ್ವಚ್ಛ ಮಾಡಲು ಹೋಗಿ ಐವರು ದಲಿತ ಕಾರ್ಮಿಕರು ಉಸಿರುಗಟ್ಟಿ ಸತ್ತಿದ್ದಾರೆ. ಪ್ರತಿ ವರ್ಷ ನೂರಾರು ಜನ ಹೀಗೆ ಸಾಯುತ್ತಾರೆ. ಚರ್ಚೆ ಆಗಬೇಕಾಗಿರುವುದು ಅದರ ಬಗ್ಗೆ ಅಲ್ಲವೆ. ಅವರೂ ಭಾರತೀಯರಲ್ಲವೇ. ಅವರನ್ನು ಬದುಕಿಸಬೇಕಲ್ಲವೇ? ಈ ದೇಶದಲ್ಲಿ ಮಲದ ಗುಂಡಿಗೆ ಬಿದ್ದು ಉಸಿರುಗಟ್ಟಿ ಸಾಯುವ ಮೀಸಲಾತಿ ಹಲವರಿಗಿದೆ. ದೇವಾಲಯಗಳಲ್ಲಿ ಮಂತ್ರ ಹೇಳಿ ಗಂಟೆ ಬಾರಿಸಿ ದಕ್ಷಿಣೆ ಪಡೆಯುವ ಮೀಸಲಾತಿ ಕೆಲವರಿಗಿದೆ. ದೇಶ ಕಟ್ಟುವ ದುಡಿಯುವ ಜನರಿಗೆ ಇರುವ ಮೀಸಲಾತಿ ಬೇರೆ, ಐಷಾರಾಮಿ ಜೀವನ ನಡೆಸುವ ಅಂಬಾನಿ, ಅದಾನಿ ಗಳಂಥ ಕಾರ್ಪೊರೇಟ್ ಧಣಿಗಳಿಗೆ ಇರುವ ಮೀಸಲಾತಿ ಬೇರೆ. ಈ ಅಘೋಷಿತ ಮೀಸಲು ವ್ಯವಸ್ಥೆಯ ಬಗ್ಗೆ ಚರ್ಚೆಯಾಗಬೇಕೆಂದು ನೀವು ಎಂದಾದರೂ ಹೇಳಿದ್ದೀರಾ? ಈಗ ತುರ್ತಾಗಿ ಚರ್ಚಿಸಬೇಕಾಗಿದ್ದು ಕುಸಿದು ಹೋಗುತ್ತಿರುವ ನಮ್ಮ ದೇಶದ ಆರ್ಥಿಕತೆ ಬಗ್ಗೆ, ಕೈಗಾರಿಕೆಗಳು ಒಂದೊಂದಾಗಿ ಮುಚ್ಚುತ್ತಿವೆ. ಸಾವಿರಾರು ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಜಿಡಿಪಿ ಪಾತಾಳಕ್ಕೆ ಹೋಗಿದೆ. ರೂಪಾಯಿ ಮೌಲ್ಯ 71 ರೂಪಾಯಿ ಆಗಿದೆ. ಇವೆಲ್ಲದರ ಬಗ್ಗೆ ಚರ್ಚಿಸಿ ಈ ಬಿಕ್ಕಟ್ಟಿನ ಸುಳಿಯಿಂದ ದೇಶವನ್ನು ಪಾರು ಮಾಡಬೇಕಾಗಿದೆ. ಇದಕ್ಕೆ ನಿಮ್ಮ ಬಳಿ ಏನು ಪರಿಹಾರವಿದೆ ಭಾಗವತರೇ? ಸಂವಾದ, ಸಮಾಲೋಚನೆ, ಚರ್ಚೆ ಇವೆಲ್ಲದಕ್ಕೂ ಪ್ರಜಾಪ್ರಭುತ್ವವಾದಿ ಮನಸ್ಸು ಬೇಕು. ಸಹನೆ, ಸಹಿಷ್ಣುತೆ, ತಾಳ್ಮೆ ಬೇಕು. ಬಹುತ್ವ ಈ ನೆಲದ ಜೀವಸತ್ವ. ಅದನ್ನು ನೀವು ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳುವ ಮುನ್ನ ಭರತಖಂಡದ ಇತಿಹಾಸವನ್ನು ಒಮ್ಮೆ ನೋಡಿ. ಬೌದ್ಧ ಧರ್ಮದ ಮೇಲೆ ನಡೆದ ದಾಳಿ, ಜೈನ ಧರ್ಮದ ಮೇಲೆ ನಡೆದ ಆಕ್ರಮಣ, ಹನ್ನೆರಡನೇ ಶತಮಾನದಲ್ಲಿ ಜಾತಿ ಕಂದಾಚಾರದ ವಿರುದ್ಧ ಹೋರಾಡಿದ ಶರಣರ ಧ್ವನಿಯನ್ನು ಅಡಗಿಸಿದ್ದು, ಬಸವಣ್ಣನವರ ಅಂತ್ಯ, ನಂತರ ಮಹಾರಾಷ್ಟ್ರದಲ್ಲಿ ಬಂದ ಸಂತ ತುಕಾರಾಮ ಅವರನ್ನು ಅವರ ಅಭಂಗಗಳ ಸಹಿತ ನೀರಿನಲ್ಲಿ ಮುಳುಗಿಸಿ ದೇವಲೋಕದಿಂದ ಪರಮಾತ್ಮ ಬಂದು ವಿಮಾನದಲ್ಲಿ ಕರೆದುಕೊಂಡು ಹೋದನೆಂಬ ಕತೆ ಕಟ್ಟಿದ್ದು. ಈ ಅನೈಕ್ಯತೆಯಿಂದಾಗಿ ಈ ನೆಲ ವಿದೇಶಿ ಆಕ್ರಮಣಕ್ಕೆ ಈಡಾಗಿದ್ದು ಹೀಗೆ ಇಲ್ಲಿ ಭಿನ್ನಾಭಿಪ್ರಾಯ, ಭಿನ್ನಮತವನ್ನು ಸಹಿಸಿದ, ಸಂವಾದ ಮಾಡಿದ ಉದಾಹರಣೆಗಳು ತುಂಬಾ ಕಡಿಮೆ. ಇತ್ತೀಚೆಗೆ ನಡೆದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆೆ, ಡಾ.ಎಂ .ಎಂ. ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಗಳು ಇವೆಲ್ಲದರ ಬಗ್ಗೆ ನೀವು ಎಂದೂ ಮಾತಾಡಿಲ್ಲ ಎಂದೂ ಖಂಡಿಸಿಲ್ಲ. ಆದರೆ ಮೀಸಲಾತಿ ಪ್ರಶ್ನೆ ಬಂದಾಗ ಒಮ್ಮೆಲೆ ಅಲರ್ಟ್ ಆಗಿಬಿಡುತ್ತೀರಿ. ನೀವು ಬಯಸಿದಂತೆ ಮೀಸಲಾತಿ ಬಗ್ಗೆ ಸೌಹಾರ್ದ ವಾತಾವರಣದಲ್ಲಿ ಸಂವಾದ, ಚರ್ಚೆ, ನಡೆಯುವ ಮುನ್ನ ಮನುಷ್ಯನನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣುವ ಜಾತಿ ಪದ್ಧತಿಯ ಬಗ್ಗೆ ಮೊದಲು ಚರ್ಚೆ, ಸಂವಾದ ನಡೆಯಬೇಕು. ಅದು ಎಷ್ಟು ಆಳವಾಗಿ ಬೇರು ಬಿಟ್ಟಿದೆಯೆಂದರೆ ಇತ್ತೀಚೆಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿರಾಶ್ರಿತರಲ್ಲಿ ಕೂಡ ಊಟ ಮಾಡುವಾಗ ಜಾತಿ ವಕ್ಕರಿಸಿತು. ಆದ್ದರಿಂದ ಮೊದಲು ಜಾತಿಪದ್ಧತಿ ತೊಲಗಿಸೋಣ. ಇದರ ಜೊತೆಗೆ ಸಂಪತ್ತಿನ ಸಮಾನ ಹಂಚಿಕೆಯಾಗಲಿ. ಈ ಭರತಭೂಮಿ ಇಲ್ಲಿ ನೆಲೆಸಿದ ಎಲ್ಲರಿಗೂ ಸೇರಿದ್ದು. ಸಂಪತ್ತಿನ ಸಮಾನ ಹಂಚಿಕೆಯಾದರೆ ಮೀಸಲಾತಿ ಬೇಡ. ನೀವು ಇಂಥ ಸಮಾನತೆಯ ಆಶಯವನ್ನು ಬೆಂಬಲಿಸುವಿರಾ?

ದಲಿತರು ಮತ್ತು ಸವರ್ಣೀಯರ ಪ್ರಶ್ನೆ ಬಂದಾಗ ನೀವು ಸಾಮರಸ್ಯದ ಮಾತನ್ನಾಡುತ್ತೀರಿ. ಆದರೆ ಹಿಂದೂ, ಮುಸ್ಲಿಂ, ಕ್ರೈಸ್ತ ಪ್ರಶ್ನೆ ಬಂದಾಗ ಸಂಘರ್ಷದ ಮಾತನ್ನು ಆಡುತ್ತೀರಿ. ನಿಮ್ಮ ದೃಷ್ಟಿಯಲ್ಲಿ ಸಾಮರಸ್ಯವೆಂದರೆ ದಲಿತರಿಗೆ ಒದ್ದರೆ ಒದೆಸಿಕೊಂಡು ಬಾಯಿ ಮುಚ್ಚಿಕೊಂಡು ಬಿದ್ದಿರಬೇಕು ಎಂದಲ್ಲವೇ? ಇತ್ತೀಚೆಗೆ ದಿಲ್ಲಿಯಲ್ಲಿ 16ನೇ ಶತಮಾನದ ಸಂತ ಕವಿ ರವಿದಾಸ ಮಂದಿರವನ್ನು ಕೆಡವಿದಾಗ ದಲಿತರು ಅದನ್ನು ಪ್ರತಿಭಟಿಸಿ ಬೀದಿಗಿಳಿದರು. ಆಗ ಭೀಮ ಆರ್ಮಿಯ ಯುವ ನಾಯಕ ಚಂದ್ರಶೇಖರ ಆಝಾದ್‌ರನ್ನು ಬಂಧಿಸಿದ ಪೊಲೀಸರು ರಾತ್ರಿಯೆಲ್ಲ ಲಾಠಿಯಿಂದ ಥಳಿಸಿದರು. ಇದರ ಬಗ್ಗೆ ನೀವು ಮಾತಾಡಲಿಲ್ಲ.

ಕೊನೆಯದಾಗಿ ಮೀಸಲಾತಿ ವಿರುದ್ಧ ನೀವು ನಡೆಸಿರುವ ಮಸಲತ್ತು ಈ ದೇಶವನ್ನು ಶತಮಾನಗಳ ಹಿಂದೆ ಕೊಂಡೊಯ್ಯಲಿದೆ. ನೀವು ಪೇಶ್ವೆಗಳ ಕಾಲದ ಸಮಾಜ ವ್ಯವಸ್ಥೆಯನ್ನು ತರಲು ಹೊರಟಿದ್ದೀರಿ. ಆಗ ದಲಿತರು ಪುಣೆಯಲ್ಲಿ ಊರೊಳಗೆ ಬರಬೇಕಾದರೆ ಕೊರಳಿಗೆ ಮಡಿಕೆ, ಸೊಂಟಕ್ಕೆ ಕಸಬರಿಗೆ ಕಟ್ಟಿಕೊಂಡು ಬರಬೇಕಾಗಿತ್ತು. ಅಸ್ಪಶ್ಯರ ಹೆಜ್ಜೆ ನೆಲದ ಮೇಲೆ ಮೂಡಬಾರದು. ಅವರ ಉಗುಳು ನೆಲಕ್ಕೆ ಬೀಳಬಾರದೆಂದು ಪೇಶ್ವೆಗಳು ಇಂಥ ಕ್ರೂರ ವ್ಯವಸ್ಥೆಯನ್ನು ನಿರ್ಮಿಸಿದ್ದರು. ಮತ್ತೆ ಅದಕ್ಕೆ ಅವಕಾಶ ನೀಡಲು ಈ ದೇಶದ ದಮನಿತ ಜನ ಮೂರ್ಖರಲ್ಲ. ಹುಟ್ಟಿದ ಜಾತಿ ಕಾರಣಕ್ಕಾಗಿ ನಾವು ಯಾರನ್ನೂ ದ್ವೇಷಿಸುವುದಿಲ್ಲ. ನೀವು ಮತ್ತು ನಿಮ್ಮ ಸಂಘ ಜೀವಪರ ಕಾಳಜಿ ಬೆಳೆಸಿಕೊಂಡು ಕುದ್ಮುಲ್ ರಂಗರಾವ್, ಗೋಪಾಲಸ್ವಾಮಿ ಅಯ್ಯರ್, ಕಾಕಾ ಕಾರ್ಖಾನಿಸ್ ಅವರಂತೆ ವಂಚಿತ ಸಮುದಾಯಗಳ ನೋವಿಗೆ ಸ್ಪಂದಿಸಲಿ ಎಂಬುದು ಎಲ್ಲ ಜೀವಪರರ ಹಾರೈಕೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ