ಗುಂಪುಹತ್ಯೆ ಕುರಿತು ಪ್ರಧಾನಿಗೆ ಪತ್ರ ಬರೆದ ರಾಮಚಂದ್ರ ಗುಹಾ, ಅಪರ್ಣಾ ಸೇನ್ ಸಹಿತ 50 ಗಣ್ಯರ ವಿರುದ್ಧ ಪ್ರಕರಣ

Update: 2019-10-04 06:34 GMT
ರಾಮಚಂದ್ರ ಗುಹಾ, ಅಪರ್ಣಾ ಸೇನ್, ಮಣಿರತ್ನಂ 

ಮುಝಾಫ್ಫರ್‌ಪುರ, ಅ.4: ದೇಶದಲ್ಲಿ ಹೆಚ್ಚುತ್ತಿದ್ದ ಗುಂಪುಹತ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರವನ್ನು ಬರೆದಿದ್ದ ರಾಮಚಂದ್ರ ಗುಹಾ, ಮಣಿರತ್ನಂ ಹಾಗೂ ಅಪರ್ಣಾ ಸೇನ್ ಸಹಿತ ಸುಮಾರು 50 ಗಣ್ಯರ ವಿರುದ್ಧ  ಬಿಹಾರದ ಮುಝಾಫ್ಫರ್‌ಪುರದಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ.

ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜ್ಹಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಸೂರ್ಯ ಕಾಂತ್ ತಿವಾರಿ ಆದೇಶ ಹೊರಡಿಸಿದ ಎರಡು ತಿಂಗಳ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ.

   ಸದಾರ್ ಪೊಲೀಸ್ ಠಾಣೆಯಲ್ಲಿ ಇಂದು ಎಫ್‌ಐಆರ್ ದಾಖಲಿಸಲ್ಪಟ್ಟಿರುವ ಸೆಲೆಬ್ರಿಟಿಗಳ ಬಗ್ಗೆ ನಾನು ಸಲ್ಲಿಸಿರುವ ಅರ್ಜಿಯ ಕುರಿತು ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಆ.20ರಂದು ಆದೇಶ ಹೊರಡಿಸಿದ್ದರು. ಪತ್ರದಲ್ಲಿರುವ ಸುಮಾರು 50 ಸಹಿಗಳನ್ನು ತನ್ನ ಅರ್ಜಿಯಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಇವರ ಮೇಲೆ ದೇಶದ ಘನತೆಗೆ ಧಕ್ಕೆ ತಂದಿರುವ ಹಾಗೂ ಏಕಾಂತ ಪ್ರವೃತ್ತಿಯನ್ನು ಬೆಂಬಲಿಸುವ ಜೊತೆಗೆ ಪ್ರಧಾನಮಂತ್ರಿ ಅವರ ಅದ್ಭುತ ಕಾರ್ಯಕ್ಷಮತೆ ದುರ್ಬಲಗೊಳಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ ಎಂದು ಓಜಾ ಹೇಳಿದ್ದಾರೆ.

 ದೇಶದ್ರೋಹ, ಸಾರ್ವಜನಿಕರಿಗೆ ತೊಂದರೆ, ಧಾರ್ಮಿಕ ಭಾವನೆಗೆ ಧಕ್ಕೆ, ಶಾಂತಿಯ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನಿಸುವುದಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆ(ಐಪಿಸಿ)ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ, ಚಿತ್ರನಿರ್ಮಾಪಕ ಮಣಿರತ್ನಂ, ಅನುರಾಗ್ ಕಶ್ಯಪ್, ಶ್ಯಾಮ್ ಬೆನಗಲ್, ನಟಿ ಸೌಮಿತ್ರಾ ಚಟರ್ಜಿ ಹಾಗೂ ಗಾಯಕಿ ಶುಭಾ ಮುದ್ಗಲ್ ಸಹಿತ 49 ಶ್ರೇಷ್ಠ ವ್ಯಕ್ತಿಗಳು ಈವರ್ಷದ ಜುಲೈನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದಿದು ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿದ್ದರು.

ದೇಶಾದ್ಯಂತ ಮುಸ್ಲಿಮರು, ದಲಿತರು ಹಾಗೂ ಇತರ ಅಲ್ಪ ಸಂಖ್ಯಾತರನ್ನು ಗುಂಪು ಹತ್ಯೆಯಿಂದ ಹತ್ಯೆ ಮಾಡುವ ಪೃವೃತ್ತಿಯನ್ನು ತಕ್ಷಣವೇ ನಿಲ್ಲಿಸಬೇಕು. ಭಿನ್ನಾಭಿಪ್ರಾಯವಿಲ್ಲದೆ ಯಾವುದೇ ಪ್ರಜಾಪ್ರಭುತ್ವ ಇರುವುದಿಲ್ಲ. ಜೈ ಶ್ರೀರಾಮ್ ಎಂಬ ವಾಕ್ಯ ಪ್ರಚೋದನಕಾರಿ ಯುದ್ಧದ ಕೂಗಿನಂತೆ ಕೇಳಿಸುತ್ತಿದೆ ಎಂದು ಪತ್ರದಲ್ಲಿ ಬರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News