ಗಾಂಧಿಯನ್ನು ಇಂದು ಅರ್ಥಮಾಡಿಕೊಳ್ಳುವುದು ಹೇಗೆ?

Update: 2019-10-09 10:41 GMT
ಗಾಂಧಿಯನ್ನು ಇಂದು ಅರ್ಥಮಾಡಿಕೊಳ್ಳುವುದು ಹೇಗೆ?
  • whatsapp icon

ಮಾನವೀಯತೆಯನ್ನು ಆಧರಿಸಿದ ಸಮುದಾಯವನ್ನು ಕಟ್ಟುವುದೇ ಗಾಂಧಿಯರ ಚಿಂತನೆಗಳ ಕೇಂದ್ರ ಕಾಳಜಿಯಾಗಿದೆ. ಅವರ ಚಿಂತನೆಗಳಿಗೆ ಒಂದು ನೈತಿಕ ಸಮುದಾಯ ಮತ್ತು ಮಾನವ ಸಮುದಾಯವನ್ನು ಕಟ್ಟುವ ಜವಾಬ್ದಾರಿ ಮತ್ತು ಉದ್ದೇಶಗಳಿವೆ. ಗಾಂಧಿಯವರ ಚಿಂತನೆಗೆ ಭಾರತವನ್ನು ಕೇವಲ ಬಯಲು ಶೌಚಮುಕ್ತವಾಗಿಸುವ ಆಶಯವು ಮಾತ್ರವಲ್ಲದೆ ಮೂಲಭೂತವಾಗಿ ಭಾರತದ ಜಾತಿಗ್ರಸ್ಥ ಮನಸ್ಥಿತಿಯ ಆಳದಲ್ಲಿರುವ ಅಸ್ಪೃಶ್ಯತೆಯಿಂದಲೂ ಮುಕ್ತವಾಗಲು ಬೇಕಾದ ಸಾಮಾಜಿಕ ಭರವಸೆಯನ್ನು ಹುಟ್ಟುಹಾಕಲು ಜನತೆಯನ್ನು ಅಣಿನೆರೆಸಲು ಬೇಕಾದ ಸಮಕಾಲೀನತೆಯೂ ಇದೆ.

ಪ್ರಾಯಶಃ ಗಾಂಧಿಯ ಬಗ್ಗೆ ಬರೆದಷ್ಟು ಮತ್ತ್ಯಾರ ಬಗ್ಗೆಯೂ ಬರೆದಿರಲಿಕ್ಕಿಲ್ಲ. ಹಾಗೆಯೇ ಗಾಂಧಿಯವರು ಅಷ್ಟೇ ತೀವ್ರವಾಗಿ ದ್ವೇಷಿಸಲ್ಪಟ್ಟ ವ್ಯಕ್ತಿಯೂ ಹೌದು. ಕೆಲವರು ಅವರನ್ನು ಜನನಾಯಕರೆಂದು ಭಾವಿಸಿದರೆ ಕೆಲವರು ಅದನ್ನು ಸಾರಾಸಗಟಾಗಿ ನಿರಾಕರಿಸುತ್ತಾರೆ. ಇನ್ನೂ ಕೆಲವರು ವಿದೇಶಿ ಆಳ್ವಿಕೆಯ ವಿರುದ್ಧ ರಾಷ್ಟ್ರೀಯವಾದಿ ಹೋರಾಟವು ಗಟ್ಟಿಗೊಳ್ಳುತ್ತಿರುವ ಸಂದರ್ಭದಲ್ಲಿ ಅವರು ತೆಗೆದುಕೊಂಡ ನಿಲುವುಗಳ ಬಗ್ಗೆ ಮತ್ತು ಅವರ ಚಿಂತನಾ ಸರಣಿಯ ಬಗ್ಗೆ ಕಟುವಾದ ವಿಮರ್ಶೆಗಳನ್ನು ಮುಂದುವರಿಸಿದ್ದಾರೆ. ಅವರನ್ನು ದ್ವೇಷಿಸುವವರಿಗೆ ಯಾವ ಬಲವಾದ ಕಾರಣಗಳೂ ಬೇಕಿಲ್ಲ. ಏಕೆಂದರೆ ಹಿಂಸಾತ್ಮಕ ದ್ವೇಷಗಳಿಗೆ ಯಾವ ತಾರ್ಕಿಕ ಬೆಂಬಲದ ಅಗತ್ಯವೂ ಬೀಳುವುದಿಲ್ಲ. ದ್ವೇಷ ಮತ್ತು ಮತ್ಸರಗಳು ಎರಡು ವಿನಾಶಕಾರಿ ಅಂಶಗಳಾಗಿವೆ. ಅವು ತಮ್ಮ ನೆಲೆಯನ್ನು ಕಂಡುಕೊಳ್ಳುವುದು ಐತಿಹಾಸಿಕವಾಗಿ ಕ್ರೂಢೀಕೃತವಾದ ಪೂರ್ವಗ್ರಹಗಳಲ್ಲೇ ವಿನಾ ಸೂಕ್ಷ್ಮವಾದ ವಾದಗಳಲ್ಲಲ್ಲ. ಅವರು ಮೂಲದಲ್ಲಿ ಗಾಂಧಿಯ ಜೊತೆಗಾಗಲೀ, ನಂತರದಲ್ಲಿ ಗಾಂಧಿವಾದಿ ವಿದ್ವಾಂಸರ ಅಥವಾ ವ್ಯಾಖ್ಯಾನಕಾರ ಜೊತೆಗಾಗಲೀ ಯಾವುದೇ ಗಂಭೀರವಾದ ವಾದ-ಪ್ರತಿವಾದಗಳಲ್ಲಿ ತೊಡಗಿದಂತಿಲ್ಲ. ಬದಲಿಗೆ ಅವರು ಗಾಂಧಿಯ ಪರವಾಗಿ ದಿಢೀರ್ ಹೇಳಿಕೆಯನ್ನು ನೀಡುವವರಲ್ಲೇ ತಮ್ಮ ಉದ್ದೇಶದ ಹಾಗೂ ಸಮಾಧಾನದ ಸಾಥಕರ್ತೆಯನ್ನು ಕಂಡುಕೊಳ್ಳುತ್ತಾರೆ.

ಹೀಗೆ ಒಂದು ವಿದ್ವತ್ತಿನ ಮತ್ತು ವೈಧಾನಿಕ ಮಟ್ಟದಲ್ಲಿ ನೋಡುವುದಾದರೆ, ಗಾಂಧಿಯವರು ವಿದ್ವಾಂಸರಿಗೆ, ವ್ಯಾಖ್ಯಾನಕಾರರಿಗೆ ತಮ್ಮ ಚಿಂತನೆಗಳ ಬಗ್ಗೆ ನಿರ್ದಿಷ್ಟವಾದ ಮತ್ತು ಅಂತಿಮವಾದ ಚೌಕಟ್ಟನ್ನು ಒದಗಿಸುವ ಸೌಲಭ್ಯವನ್ನು ನಿರಾಕರಿಸುತ್ತಾರೆ. ಅಂದರೆ ಗಾಂಧಿಯವರ ಚಿಂತನೆಗಳ ಬಗ್ಗೆ ಸಂಪೂರ್ಣವಾದ ಮತ್ತು ಅಂತಿಮವಾದ ವಿವರಣೆಯನ್ನು ಕೊಡುವುದು ಅವರಿಗೆ ಕಷ್ಟವಾಗುತ್ತದೆ. ಅವರ ಬರಹಗಳು ಮುಕ್ತ ತೆರಪನ್ನು ಹೊಂದಿರುವುದರಿಂದ ಅವು ಯಾವುದೇ ಖಚಿತವಾದ ಅಥವಾ ನಿರ್ದಿಷ್ಟವಾದ ವರ್ಗೀಕರಣಕ್ಕೆ ಒಳಪಡುವುದಿಲ್ಲ. ಈ ಮುಕ್ತತೆಯೇ ಗಾಂಧಿಯನ್ನು ಹಲವಾರು ಅವತಾರಗಳಲ್ಲಿ ಮುಂದಿಡುವ ಅವಕಾಶವನ್ನು ನೀಡುತ್ತದೆ. ಹೀಗಾಗಿಯೇ ಗಾಂಧಿಯನ್ನು ವಸಾಹತೋತ್ತರ ರಾಷ್ಟ್ರೀಯವಾದಿಯೆಂದೂ, ಅಂತರ್‌ರಾಷ್ಟ್ರೀಯವಾದಿಯೆಂದೂ, ಪರ್ಯಾಯ ಆಧುನಿಕವಾದಿಯೆಂದೂ, ಆಧುನಿಕೋತ್ತರವಾದಿಯೆಂದೂ, ಭಾವನಾವಾದಿಯೆಂದೂ- ವ್ಯಾವಹಾರಿಕವಾದಿಯೆಂದೂ. ಮಹಿಳಾವಾದಿುಂದೂ, ತಳಸಮುದಾಯವಾದಿಯೆಂದೂ, ಸಮುದಾಯವಾದಿಯೆಂದೂ ಹಾಗೂ ಉದಾರವಾದಿಯೆಂದೂ ಏಕಕಾಲದಲ್ಲಿ ಬಣ್ಣಿಸಲಾಗುತ್ತಿದೆ. ಚಿಂತನೆಗಳೊಳಗಿನ ಮುಕ್ತತೆ ಮತ್ತು ಚಿಂತನೆಯ ಮುಕ್ತತೆಗಳು ಇಂದು ಕೆಲವು ಗಾಂಧಿ ವಿರೋಧಿಗಳನ್ನು ತಾತ್ವಿಕ ಘನತೆಯೂ ಇಲ್ಲದವನ್ನಾಗಿ, ರಾಜಕೀಯವಾಗಿ ಆಷಾಢಭೂತಿಗಳನ್ನಾಗಿ, ಬೌದ್ಧಿಕವಾಗಿ ಅಸಹಾಯಕರನ್ನಾಗಿ, ಹತಾಷರನ್ನಾಗಿ ಮತ್ತು ಕೆಲವೊಮ್ಮೆ ಅಧೀರರನ್ನಾಗಿಯೂ ಮಾಡುತ್ತಿದೆ. ಗಾಂಧಿಯನ್ನು ಅರ್ಥಮಾಡಿಕೊಳ್ಳುವ ವಾಗ್ವಾದಗಳ ಬಗ್ಗೆ ಅವರಿಗೆ ಯಾವುದೇ ಆಸಕ್ತಿ ಇಲ್ಲದಿರುವುದರಿಂದ ಅವರು ಬಹಳ ಬೇಗ ಕೃದ್ಧರಾಗುತ್ತಾರೆ. ಗಾಂಧಿಯ ಮೇಲೆ ಬೌದ್ಧಿಕವಾಗಿ ಹೇಗೆ ದಾಳಿ ಮಾಡಬೇಕೆಂಬುದು ತಿಳಿಯದೇ ಕೆಲವರು ಹತಾಷರಾಗುತ್ತಾರೆ. ಗಾಂಧಿ ಪರಂಪರೆಯನ್ನು ತೊಡೆದುಹಾಕಲು ಸದಾ ಬಯಸುತ್ತಿದ್ದರೂ ಅದನ್ನು ಸಾಧಿಸಿಕೊಳ್ಳಲು ಆಗದಿರುವವರು ಸಹ ಶಬ್ದಾಡಂಬರಗಳ ಮೂಲಕವಾದರೂ ಗಾಂಧಿಯವರನ್ನು ಉಲ್ಲೇಖಿಸುವುದು ಇಂದು ಅನಿವಾರ್ಯವಾಗಿದೆ. ಅಂತಹವರ ರಾಜಕೀಯ ಧಾರ್ಮಿಕತೆಯು ಅಥವಾ ಅವರ ಅಸಂತುಷ್ಟ ಪ್ರಜ್ಞೆಯು ಅವರ ಒಳಗಿನ ನೈಜ ಉದ್ದೇಶ ಮತ್ತು ಹೊರಗಿನ ಅಭಿವ್ಯಕ್ತಿಗಳ ನಡುವೆ ಏರ್ಪಡುವ ವೈರುಧ್ಯದಲ್ಲಿ ಸ್ಪಷ್ಟವಾಗುತ್ತದೆ. ಗಾಂಧಿಯವರ ಅಭಿವ್ಯಕ್ತಿಯು ಸಂವಾದಾತ್ಮಕವಾದದ್ದಾಗಿದೆ, ಈ ವಿಧಾನವು ಸಮಾಜದ ಅತ್ಯಂತ ಸಂಪ್ರದಾಯ ಶರಣನನ್ನೂ ಮಾತುಕತೆಗೆ ಎಳೆಯುತ್ತದೆ. ಈ ವಿಧಾನವು ಅವರಿಗೆ ಭಾರತದ ವಿದ್ವತ್ ಪರಂಪರೆಯಿಂದಲೇ ಲಭ್ಯವಾಗಿದೆ. ಅವರ ಒಳಗಿನಿಂದಲೇ ಅವರ ಚಿಂತನೆಯು ರೂಪುಗೊಳ್ಳುತ್ತದೆ. ಗಾಂಧಿಯ ಚಿಂತನೆಗಳು ವಿದ್ವಾಂಸರ ಗ್ರಹಿಕಾಪಟದ ಮೇಲೆ ಏಕರೂಪಿ ಚಹರೆಗಳನ್ನೇನೂ ಮೂಡಿಸುವುದಿಲ್ಲ. ಕೆಲವು ಗಾಂಧಿ ವಿದ್ವಾಂಸರು ಸರಿಯಾಗಿಯೇ ಪ್ರತಿಪಾದಿಸುವಂತೆ ಗಾಂಧಿಯವರು ಭಾರತೀಯರು ಪಾಶ್ಚಿಮಾತ್ಯ ಗ್ರಹಿಕಾಪದ್ಧತಿಗಳಿಗೆ ದಾಸರಾಗುವುದಕ್ಕೆ ವಿರುದ್ಧವಾಗಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಅವರು ವಸಾಹತು ಶಕ್ತಿಯ ವಿರುದ್ಧ ಮತ್ತು ಸ್ಥಳೀಯ ಸಮಾಜದ ಮೇಲಿನ ಬ್ರಾಹ್ಮಣೀಯ ಹಿಡಿತದ ವಿರುದ್ಧ ಜನಸಮುದಾಯವನ್ನು ಅಣಿನೆರೆಸುವುದಕ್ಕೆ ಪೂರಕವಾಗಲಾರದು ಎಂದು ಭಾವಿಸಿದ ಗ್ರಹಿಕಾ ಸಾಧನಗಳನ್ನು ಕೈಬಿಡುವಷ್ಟು ಎಚ್ಚರವನ್ನು ತೋರಿದ್ದರು. ಹೀಗಾಗಿಯೇ ವಿದೇಶಿ ಆಳ್ವಿಕೆಯನ್ನು ಎದುರಿಸುವಲ್ಲಿ ಅವರ ಸಹಿಷ್ಣುತೆ, ಅಹಿಂಸೆ ಮತ್ತು ಅಸಹಕಾರದ ಭಾಷೆಗಳು ಅತ್ಯಂತ ಪರಿಣಾಮಕಾರಿಯಾದವು. ಹಾಗೆಯೇ ತಮ್ಮ ವಿರೋಧಿಗಳ ಬಗ್ಗೆ ಅತ್ಯಂತ ತೀವ್ರವಾದ ಹಾಗೂ ಹರಿತವಾದ ಧೋರಣೆಯನ್ನು ಇಟ್ಟುಕೊಳ್ಳಬೇಕಿಲ್ಲದ ಸಾಮಾನ್ಯ ಜನರಿಗೆ ಸೇವೆ, ಅನುಕಂಪ ಮತ್ತು ಟ್ರಸ್ಟೀಶಿಪ್‌ನಂಥ ಪರಿಕಲ್ಪನೆಗಳು ಹೆಚ್ಚು ನಮ್ಯವಾಗುತ್ತಿತ್ತು. ಅಂತಹ ಭಾಷೆಗಳ ಹಿಂದಿನ ಭಾವನಾತ್ಮಕ ಅಂಶವು ಗ್ರಹಿಕೆಗಳ ವರ್ಗೀಕರಣವನ್ನು ಮಾಡುವುದರ ಅಡಿಪಾಯವಾಗಿರುವ ತರ್ಕದ ಶಕ್ತಿಯನ್ನು ಸುಧಾರಣೆಗೊಳಪಡಿಸುತ್ತದೆ. ಅಂತಹ ಪ್ರಮುಖ ಗ್ರಹಿಕಾಮುಕ್ತ ವರ್ಗದ ಭಾಗವಾದ ‘ಹರಿಜನ’ ಎಂಬ ಪದವು ಸವರ್ಣೀಯರ ಸಾಮಾಜಿಕ ಸ್ಥಾನಮಾನಗಳನ್ನು ತಟಸ್ಥಗೊಳಿಸಿ ನಂತರ ಕೆಳಜಾತಿಗಳೊಡನೆ ಅವನ್ನು ಸಮತಟ್ಟಾಗಿಸುತ್ತದೆ. ಗಾಂಧಿಯವರು ಅನುಸರಿಸಿದ ಈ ವೈಧಾನಿಕ ನಡೆಯೇ ಅವರನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಜನರನ್ನು ಅಣಿನೆರೆಸುವಲ್ಲಿ ಯಶಸ್ವಿಯಾಗಿಸಿತು. ತಮ್ಮ ಪ್ರತಿರೋಧಿಗಳನ್ನು ಕೂಡಲೇ ವ್ಯಗ್ರರನ್ನಾಗಿಸದ ಇಂತಹ ಭಾಷೆಯು ಸಾಮಾನ್ಯ ಜನರಲ್ಲಿ ಸುರಕ್ಷಿತ ಮತ್ತು ಸಮಾಧಾನಕರ ಭಾವನೆಯನ್ನು ಹುಟ್ಟಿಸುವುದು ಸಹಜವೇ ಆಗಿದೆ. ಹೀಗೆ ಗಾಂಧಿಯವರ ಚಿಂತನೆಗಳು ತಮ್ಮ ಸಾಮಾಜಿಕ ಬೆಂಬಲದ ಸ್ಥರದಲ್ಲಿ ಒಂದು ಮುಕ್ತತೆಯನ್ನು ಪಡೆದುಕೊಳ್ಳುತ್ತವೆ. ಏಕೆಂದರೆ ಅವರು ಬಳಸುವ ಗ್ರಹಿಕಾ ಮುಕ್ತ ವರ್ಗದ ಭಾಷೆಗಳು ಜನಸಮೂಹದ ಬೆಂಬಲವನ್ನು ಪಡೆದುೊಳ್ಳುವಲ್ಲಿ ಯಶಸ್ವೀ ಸಾಧನವಾಗಿದೆ.

ಗಾಂಧಿಯವರ ಚಿಂತನೆಯಲ್ಲಿರುವ ಮುಕ್ತತೆಯು ಸಾರದಲ್ಲಾಗಲಿ ಅಥವಾ ಭಾಷಾ ಸ್ವರೂಪದಲ್ಲಾಗಲಿ ಯಾವುದೇ ನಿಷೇಧವನ್ನು ಹೇರುವುದಿಲ್ಲ. ಅವರ ಚಿಂತನೆಗಳನ್ನು ಬಹಳ ಸುಲಭವಾಗಿ ಮತ್ತು ವಿಧವಿಧವಾಗಿ ವ್ಯಾಖ್ಯಾನಿಸಬಹುದು ಮತ್ತು ಆರೋಗ್ಯಕರ ವಿಮರ್ಶೆಗೆ ಗುರಿ ಮಾಡಬಹುದು. ಅವರ ಚಿಂತನೆಗಳು ಅಭಿವ್ಯಕ್ತಿ ಮತ್ತು ಲಹರಿಯನ್ನು ಶಿಸ್ತಿಗೆ ಒಳಪಡಿಸುವ ಯಾವುದೇ ನಿಯಂತ್ರಣವನ್ನು ನಿರಾಕರಿಸುತ್ತದೆ. ಅವರ ಚಿಂತನೆಗಳು ಪರಿಶೀಲನೆ ಮತ್ತು ಅನ್ವೇಷಣೆಗಳ ಬಯಲು ಭೂಮಿಯಾಗಿದೆ. ಅದೇನೇ ಇದ್ದರೂ ಗಾಂಧಿ ಚಿಂತನೆಗಳಲ್ಲಿರುವ ಮುಕ್ತತೆ ಎಂದರೆ ಬೇಕಾಬಿಟ್ಟಿತನವೆಂದಲ್ಲ. ವಾಸ್ತವವಾಗಿ ಮಾನವೀಯತೆಯನ್ನು ಆಧರಿಸಿದ ಸಮುದಾಯವನ್ನು ಕಟ್ಟುವುದೇ ಅವರ ಚಿಂತನೆಗಳ ಕೇಂದ್ರ ಕಾಳಜಿಯಾಗಿದೆ. ಗಾಂಧಿಯವರ ಚಿಂತನೆಗಳಿಗೆ ಒಂದು ನೈತಿಕ ಸಮುದಾಯ ಮತ್ತು ಮಾನವ ಸಮುದಾಯವನ್ನು ಕಟ್ಟುವ ಜವಾಬ್ದಾರಿ ಮತ್ತು ಉದ್ದೇಶಗಳಿವೆ. ಗಾಂಧಿಯವರ ಚಿಂತನೆಗೆ ಭಾರತವನ್ನು ಕೇವಲ ಬಯಲು ಶೌಚಮುಕ್ತವಾಗಿಸುವ ಆಶಯವು ಮಾತ್ರವಲ್ಲದೆ ಮೂಲಭೂತವಾಗಿ ಭಾರತದ ಜಾತಿಗ್ರಸ್ಥ ಮನಸ್ಥಿತಿಯ ಆಳದಲ್ಲಿರುವ ಅಸ್ಪೃಶ್ಯತೆಯಿಂದಲೂ ಮುಕ್ತವಾಗಲು ಬೇಕಾದ ಸಾಮಾಜಿಕ ಭರವಸೆಯನ್ನು ಹುಟ್ಟುಹಾಕಲು ಜನತೆಯನ್ನು ಅಣಿನೆರೆಸಲು ಬೇಕಾದ ಸಮಕಾಲೀನತೆಯೂ ಇದೆ.

ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News