ಭತ್ತದ ಕೃಷಿಯಲ್ಲಿ ಭಾರೀ ಇಳಿಕೆ
ಭತ್ತ ಹೆಚ್ಚು ಬೆಳೆಯುವ ಜಿಲ್ಲೆಗಳು ಕೊಪ್ಪಳ ಜಿಲ್ಲೆಯಲ್ಲಿ 2022-2023ನೇ ಸಾಲಿನಲ್ಲಿ 61,185 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಕೃಷಿ ಮಾಡಲಾಗಿದ್ದು, ಕಳೆದ 10 ವರ್ಷಗಳಲ್ಲಿ ಸುಮಾರು 21 ಸಾವಿರ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಭತ್ತ ಕೃಷಿಯನ್ನು ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ 2024ರಲ್ಲಿ 91,735 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 2014-15ರಲ್ಲಿ 1,08,130 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು. ಆದರೆ ಗಣನೀಯ ಇಳಿಕೆ ಕಂಡುಬಂದಿಲ್ಲ.
ಮಂಗಳೂರು: ರಾಜ್ಯದಲ್ಲಿ 2014-15ರಲ್ಲಿ 13.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 2022-23ರಲ್ಲಿ 9.72 ಲಕ್ಷ ಹೆಕ್ಟೇರ್ಗೆ ಭತ್ತ ಕೃಷಿ ಇಳಿಕೆಯಾಗಿದೆ. 2014ರಲ್ಲಿ ಅಕ್ಕಿಯ ಉತ್ಪಾದನೆ 40.25ಲಕ್ಷ ಟನ್ ಆಗಿದ್ದರೆ 2022-23ರ ಹೊತ್ತಿಗೆ 31.27 ಲಕ್ಷ ಟನ್ಗೆ ಇಳಿಕೆಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತ ಕೃಷಿ ಶೇ.10ಕ್ಕಿಂತಲೂ ಕಡಿಮೆ ಪ್ರದೇಶಕ್ಕೆ ಇಳಿಕೆ ಕಂಡಿದ್ದು, ತೀವ್ರ ಕಳವಳ ಸೃಷ್ಟಿಯಾಗಿದೆ.
2023-24ನೇ ಸಾಲಿನಲ್ಲಿ ಕ್ವಿಂಟಾಲ್ ಭತ್ತಕ್ಕೆ 2,183ರಿಂದ 2,203 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದ ಕೇಂದ್ರ ಸರಕಾರ ಈ ಬಾರಿ 2,300 ರೂ. ನಿಗದಿ ಮಾಡಿದೆ. ಪ್ರತೀ ಎಕರೆಗೆ ಕನಿಷ ್ಠ25 ಕ್ವಿಂಟಾಲ್, ಪ್ರತೀ ರೈತನಿಂದ ಗರಿಷ್ಠ 50 ಕ್ವಿಂಟಾಲ್ನಂತೆ ರಾಜ್ಯಾದ್ಯಂತ ಒಟ್ಟು 2.24 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದ ರೈತರು ಮಾರುಕಟ್ಟೆಯಲ್ಲೇ ಭತ್ತ ಮಾರಾಟ ಮಾಡಬೇಕಿದೆ. ಮಾರುಕಟ್ಟೆ ದರ 2023ರಲ್ಲಿ 3 ಸಾವಿರ ರೂ.ವರೆಗೆ ಇತ್ತು. ಈ ವರ್ಷ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ 1,800ರಿಂದ 2 ಸಾವಿರ ರೂ.ವರೆಗೆ ಇದೆ. ಒಂದು ಕಡೆ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳದ ಹೊರೆ ಹೊತ್ತ ರೈತರಿಗೆ ಮಾರುಕಟ್ಟೆ ಬೆಲೆ ಕುಸಿತವಾಗಿರುವುದು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದಂತಾಗಿದೆ.
ಕೆಲಸದಾಳುಗಳ ಕೊರತೆ, ದುಬಾರಿ ನಿರ್ವಹಣೆ, ನೀರಿನ ಸಮಸ್ಯೆ, ಸರಕಾರದ ಪ್ರೋತ್ಸಾಹದ ಕೊರತೆ ಸಹಿತ ಹತ್ತು, ಹಲವು ಸಮಸ್ಯೆಗಳಿಂದ ಭತ್ತ ಕೃಷಿಯಿಂದ ರೈತರು ವಿಮುಖರಾಗುತ್ತಲೇ ಇದ್ದಾರೆ. ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳ ಬಹುತೇಕ ಗದ್ದೆಗಳು ಹಡಿಲು ಬಿದ್ದಿವೆ. ಕೆಲವು ರೈತರು ಹಡಿಲು ಬಿದ್ದ ಗದ್ದೆಗೆ ಮಣ್ಣು ತುಂಬಿಸಿ ಅಡಿಕೆ, ತೆಂಗು, ಕಾಫಿ, ಏಲಕ್ಕಿ ಸಹಿತ ಇತರ ವಾಣಿಜ್ಯ ಕೃಷಿಯತ್ತ ಮುಖಮಾಡಿದರೆ, ಕೆಲವು ಹಡಿಲು ಬಿದ್ದ ಗದ್ದೆಗಳಲ್ಲೇ ಕಟ್ಟಡಗಳು ತಲೆ ಎತ್ತಿ ನಿಂತಿವೆ. ರಿಯಲ್ ಎಸ್ಟೇಟ್ ಉದ್ಯಮಗಳು ಕೂಡ ಭತ್ತದ ಗದ್ದೆಗಳಲ್ಲೇ ಲಾಭದ ಫಸಲು ಪಡೆಯುತ್ತಿವೆ.
ಯುವಜನತೆ ಕೃಷಿ ಕ್ಷೇತ್ರದತ್ತ ಒಲವು ತೋರುತ್ತಿಲ್ಲ. ಉದ್ಯೋಗಕ್ಕೆಂದು ನಗರವನ್ನೇ ಯುವಜನತೆ ಆಶ್ರಯಿಸುವುದರಿಂದ ಹೆಚ್ಚಿನ ಹಳ್ಳಿಗಳಲ್ಲಿ ಯುವಜನತೆ ಕಣ್ಮರೆಯಾಗಿದ್ದು, ಹಿರಿಯ ನಾಗರಿಕರೇ ತುಂಬಿರುವ ಹಳ್ಳಿಗಳು ವೃದ್ಧಾಶ್ರಮಗಳಂತಾಗಿವೆ.
►► ಅಳಿವಿನಂಚಿನಲ್ಲಿರುವ ತಳಿಗಳು
ಕಗ್ಗ, ಅಂಬೆಮೊಹರ್, ಕರಿಗಜವಿಲೆ, ರಸಕದಂ, ರಕ್ತಸಾಳಿ, ಕಯಾಮೆ, ರಾಜಕಯಾಮೆ, ಮಸೂರಿ, ಗಂಧಸಾಲೆ ಮುಂತಾದ ಭತ್ತದ ನಾಡ ತಳಿಗಳು ಈಗ ಅಳಿವಿನಂಚಿನಲ್ಲಿವೆ. ಈ ತಳಿಗಳು ನಾಶವಾಗದಂತೆ ಎಚ್ಚರ ವಹಿಸಬೇಕಾಗಿದೆ. ಪ್ರಮುಖವಾದ ತಳಿ ಕಗ್ಗ ಭತ್ತವು ನೆರೆ ಬಂದರೂ ಕೊಳೆಯದೆ, ಮೊಳಕೆ ಹಾಳಾಗದಂತೆ ಇದ್ದು ನೆರೆ ಇಳಿದ ನಂತರ ಸದೃಢವಾಗಿ ಕ್ಷಾರಯುಕ್ತ ಜಮೀನಿನಲ್ಲಿ ಅರಳಬಲ್ಲ ಶಕ್ತಿ ಹೊಂದಿರುವ, ನಮ್ಮ ಪೂರ್ವಜರು ಅಭಿ
ವೃದ್ಧಿಪಡಿಸಿದ ಅಪರೂಪದ, ವಿಶಿಷ್ಟ ಭತ್ತದ ತಳಿ. ಕಗ್ಗ ಭತ್ತಕ್ಕೆ ಯಾವುದೇ ರೀತಿಯ ರಾಸಾಯನಿಕ ಅಥವಾ ಸಾವಯದ ಗೊಬ್ಬರ ಬೇಡ. ಒಂದು ವೇಳೆ ಈ ತಳಿಗಳು ಅಳಿದರೆ ಮತ್ತೆಂದೂ ಇಂತಹ ತಳಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ.
►► ಬಳಕೆಯಲ್ಲಿರುವ ನಾಡ ತಳಿಗಳು
ಸೋನಾ ಮಸೂರಿ, ಬಾಸ್ಮತಿ, ಜಯಾ, ಇಂದ್ರಾಣಿ, ರಕ್ತಸಾಳಿ, ದೊಡಗ್ಯ, ಕರಿಗಜವಿಲೆ, ಡಾಂಬರುಸಾಳಿ, ಕರಿಯಕ್ಕಿ, ಗಂಧಸಾಲೆ, ಬೆಳಗಾಂ ಬಾಸ್ಮತಿ, ಮೈಸೂರು ಸಣ್ಣ, ಜೀರಿಗೆ ಸಣ್ಣ, ಕೆಂಪಕ್ಕಿ, ಸೇಲಂ ಸಣ್ಣ, ಮೈಸೂರು ಮಲ್ಲಿಗೆ, ದೊಡ್ಡ ಬೈರನೆಲ್ಲು, ರಾಜಮುಡಿ, ನವರ, ಮುಳ್ಳಾರೆ, ಮುಗದ ಭತ್ತ, ಸಿದ್ಧಗಿರಿ, ಬಾದಶಾಹಭೋಗ, ಡಾಂಬರಸಾಳಿ, ಮಟಾಲಗ, ಕೊತಂಬರ ಸಾಳಿ, ರಾಜಭೋಗ, ಚಿನ್ನಪೊನ್ನಿ, ಹುಗ್ಗಿ ಭತ್ತ, ಮಾಲ್ಗುಡಿ ಸಣ್ಣ, ರತ್ನಚೂಡಿ ಇನ್ನೂ ಮುಂತಾದವುಗಳು. ಶಿವಮೊಗ್ಗದ ರೈತರು ಕರಿಗಜವಿಲೆ, ಮಂಡ್ಯದಲ್ಲಿ ಡಾಂಬರುಸಾಳಿ, ಸೊರಬಸಾಗರದಲ್ಲಿ ಮುಗದ ಬಾಸ್ಮತಿ ಯಥೇಚ್ಛವಾಗಿ ಬೆಳೆಯುತ್ತಿದ್ದಾರೆ.
►► ನಗರದತ್ತ ಹಳ್ಳಿಗರ ವಲಸೆ
ಭತ್ತ ಕೃಷಿ ಇಳಿಮುಖವಾಗಲು ಕಾರ್ಮಿಕರ ಕೊರತೆಯೂ ಒಂದು ಪ್ರಮುಖ ಕಾರಣ. ಬದಲಾದ ಕಾಲಘಟ್ಟದಲ್ಲಿ ಯುವ ಜನತೆ ಉದ್ಯೋಗ ಅರಸಿಕೊಂಡು ನಗರದತ್ತ ಮುಖ ಮಾಡಿದಾಗ ಕೃಷಿಯನ್ನು ನೆಚ್ಚಿಕೊಂಡಿದ್ದವರಿಗೆ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಯಿತು. ಕೂಲಿಗೆ ಜನ ಬಂದರೂ ಅತಿ ಹೆಚ್ಚು ಕೂಲಿ ನೀಡಬೇಕಾಗಿರುವುದರಿಂದ ರೈತರಿಗೆ ಆದಾಯ ಕಡಿಮೆಯಾಗುತ್ತದೆ. ಈಗ ಉಳುಮೆಗೆ, ಟಿಲ್ಲರ್, ಟ್ರ್ಯಾಕ್ಟರ್, ಗದ್ದೆ ಕೊಯ್ಲು ಯಂತ್ರ ಸಹಿತ ತರಹೇವಾರಿ ಯಂತ್ರಗಳು ಬಂದಿವೆ. ಆದರೆ, ಬಡ ರೈತರು ಈ ಯಂತ್ರಗಳ ಮೊರೆ ಹೋಗಲು ಸಾಧ್ಯವಿಲ್ಲದಂತಾಗಿದೆ. ಆದಾಯವೆಲ್ಲ ಯಂತ್ರಗಳ ಬಾಡಿಗೆಗೆ ಸರಿಯಾಗಲಿದೆ ಎಂಬುದು ರೈತರ ಆತಂಕ.
►► ರಾಸಾಯನಿಕ ಬಳಕೆಯಿಂದ ನಷ್ಟ
ಭತ್ತ ಕೃಷಿ ಲಾಭದಾಯಕ ಕೃಷಿಯಲ್ಲ. ರೈತರು ಹೆಚ್ಚಾಗಿ ರಾಸಾಯನಿಕಗಳ ಬಳಕೆಗೆ ಮುಂದಾಗುವುದರಿಂದಲೇ ಹಾಕಿದ ಬಂಡವಾಳಕ್ಕೆ ಅಸಲನ್ನೂ ಪಡೆಯಲು ಸಾಧ್ಯವಾಗದೆ ಹೆಚ್ಚಿನ ನಷ್ಟವನ್ನು ಅನುಭವಿಸುತ್ತಾರೆ. ನೈಸರ್ಗಿಕ ಗೊಬ್ಬರಗಳ ಬಳಕೆಗೆ ರೈತರು ಹೆಚ್ಚಿನ ಒತ್ತು ನೀಡಿದಾಗ ಭೂಮಿಯ ಫಲವತ್ತತೆ ಕಾಪಾಡುವುದರ ಜೊತೆಗೆ ಭತ್ತ ಕೃಷಿಯಲ್ಲಿ ಅನುಭವಿಸುವ ನಷ್ಟದಿಂದ ಪಾರಾಗಬಹುದಾಗಿದೆ.
ಅಕ್ಕಿ ಉತ್ಪಾದನೆಗೆ ಹೊಡೆತ: ಒಂದು ಎಕರೆಯಲ್ಲಿ ಭತ್ತ ಬೆಳೆಯಬೇಕಿದ್ದರೆ ಸಾಮಾನ್ಯವಾಗಿ 38ರಿಂದ 42 ಸಾವಿರ ರೂ. ಖರ್ಚು ತಗಲುತ್ತದೆ. ಮಳೆಯಿಂದ ಬೆಳೆ ಹಾಳಾದರೆ, ಇಳುವರಿ ಕಡಿಮೆಯಾದರೆ, ಫಸಲಿನ ಗುಣಮಟ್ಟವೂ ಕುಸಿದರೆ, ರೈತರು ನಷ್ಟ ಅನುಭವಿಸಬೇಕಾಗುತ್ತದೆ. ರಾಜ್ಯದಲ್ಲಿ ಭತ್ತ ಬೆಳೆಯುವ ಬಹುತೇಕ ಜಿಲ್ಲೆಗಳಲ್ಲಿ ಭತ್ತ ನಾಟಿ ಕುಂಠಿತಗೊಂಡಿರುವುದು ಅಕ್ಕಿ ಉತ್ಪಾದನೆಗೆ ಹೊಡೆತ ಕೊಡುತ್ತಿದೆ.
ಹವಾಮಾನ ವೈಪರೀತ್ಯ: ಇನ್ನು ಹವಾಮಾನ ವೈಪರೀತ್ಯದಿಂದ ನಾಟಿ ಮಾಡುವ ಸಮಯದಲ್ಲಿ ಮಳೆ ಬರದೆ, ನೀರಿಲ್ಲದೆ ಹರಸಾಹಸ ಪಡಬೇಕಾಗುತ್ತದೆ. ಗದ್ದೆ ಕೊಯ್ಲು ಸಮಯದಲ್ಲಿ ಅಕಾಲಿಕ ಮಳೆ ಬಂದು ಭತ್ತ, ಹುಲ್ಲು ಹಾಳಾಗುವುದರಿಂದ ಬೆಳೆಯುವ ಬೆಳೆ ಕೈಗೆ ಸಿಗದೆ ನಷ್ಟ ಅನುಭವಿಸಬೇಕಾಗುತ್ತದೆ.
ಕಾಡುವ ರೋಗಗಳು: ಭತ್ತಕ್ಕೆ ಅಂಟಿಕೊಳ್ಳುವ ಪ್ರಮುಖ ರೋಗಗಳು ಕೂಡ ಜಾಗತಿಕವಾಗಿ ಭತ್ತದ ಕೃಷಿಗೆ ಗಮನಾರ್ಹ ಅಪಾಯವನ್ನು ತಂದೊಡ್ದುತ್ತವೆ. ಬೆಂಕಿ ರೋಗ, ಕಂದು ಎಲೆಚುಕ್ಕೆ ರೋಗ, ಹಸಿರು ಕಾಡಿಗೆ ರೋಗ, ಊದು ಬತ್ತಿ ರೋಗ, ತೆನೆ ಕವಚ ಕೊಳೆ ರೋಗ, ದುಂಡಾಣು ಅಂಗಮಾರಿ ರೋಗ ಭತ್ತ ಕೃಷಿಯ ನಷ್ಟಕ್ಕೆ ಪರಿಣಾಮ ಬೀರುತ್ತವೆ. ರೋಗಗಳ ಕಾರಣಗಳು, ಲಕ್ಷಣಗಳು ಮತ್ತು ನಿರ್ವಹಣಾ ತಂತ್ರಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ರೈತರು ಗದ್ದೆಗಳಲ್ಲಿ ಪರಿಣಮಿಸಬಹುದಾದ ರೋಗಗಳನ್ನು, ಕೀಟಗಳನ್ನು ನಿಯಂತ್ರಿಸಬಹುದು. ಪ್ರಮುಖವಾಗಿ ಕೃಷಿ ಇಲಾಖೆ ಅಥವಾ ವಿಜ್ಞಾನಿಗಳು ಶಿಫಾರಸು ಮಾಡಿರುವುದಕ್ಕಿಂತ ಹೆಚ್ಚಿನ ರಾಸಾಯನಿಕ ಬಳಕೆಯಿಂದ ಕೂಡ ರೈತರು ದೂರವಿರಬೇಕು.
ದ.ಕ.: 32,843 ಹೆಕ್ಟೇರ್ನಿಂದ 9,090ಕ್ಕೆ ಇಳಿಮುಖ
ರಾಜ್ಯದ ದ.ಕ. ಜಿಲ್ಲೆಯಲ್ಲಿ 2008-09ರ ಸಾಲಿನಲ್ಲಿ 32,843 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಮಾಡಲಾಗಿತ್ತು. ಆದರೆ 2023ರ ಹೊತ್ತಿಗೆ ಕೇವಲ 9,090 ಹೆಕ್ಟೇರ್ ಪ್ರದೇಶಕ್ಕೆ ಭತ್ತ ಕೃಷಿ ಇಳಿಮುಖವಾಗಿರುವುದು ಆತಂಕಕಾರಿ ಬೆಳವಣಿಗೆ.
ಮಂಗಳೂರು ತಾಲೂಕು: ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ 2008-09 ರಲ್ಲಿ 11,728 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿಯಾಗಿದ್ದರೆ, 2009-10ರಲ್ಲಿ 11,559 ಹೆಕ್ಟೇರ್, 2010-11ರಲ್ಲಿ 11,434, 2011-12ರಲ್ಲಿ 11,422, 2012-13ರಲ್ಲಿ 10,759, 2013-14ರಲ್ಲಿ 10,820, 2014-15ರಲ್ಲಿ 10,080, 2015-16ರಲ್ಲಿ 8,901, 2016-17ರಲ್ಲಿ 8,900, 2017-18ರಲ್ಲಿ 5,313, 2018-19ರಲ್ಲಿ 2,500, 2020-21ರಲ್ಲಿ 5,954, 2021-22ರಲ್ಲಿ 1,452, 2022-23ರಲ್ಲಿ 1,450 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗಿದೆ. 2008ಕ್ಕೆ ಹೋಲಿಸಿದರೆ 2023ರಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಂಗಳೂರು ತಾಲೂಕಿನಲ್ಲೇ ಭತ್ತ ಕೃಷಿ ಇಳಿಮುಖವಾಗಿದೆ.
ಬಂಟ್ವಾಳ ತಾಲೂಕು: 2008-09ರಲ್ಲಿ 9,370, 2009-10ರಲ್ಲಿ 9,333, 2010-11ರಲ್ಲಿ 9,343, 2011-12ರಲ್ಲಿ 9,305, 2012-13ರಲ್ಲಿ 9,125, 2013-14ರಲ್ಲಿ 9,200, 2014-15ರಲ್ಲಿ 8,820, 2015-16ರಲ್ಲಿ 8,568, 2016-17ರಲ್ಲಿ 8,800, 2017-18ರಲ್ಲಿ 7,900, 2018-19ರಲ್ಲಿ 3,000, 2019-20ರಲ್ಲಿ 2,830, 2020-21ರಲ್ಲಿ 1,821, 2021-22ರಲ್ಲಿ 1,300, 2022-23ರಲ್ಲಿ 1,490 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗಿದ್ದು, 2018ರಿಂದ ತೀವ್ರ ಇಳಿಮುಖವಾಗಿದೆ. 2008ಕ್ಕೆ ಹೋಲಿಸಿದರೆ 2023ರಲ್ಲಿ ಸುಮಾರು 7.8 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆ ಇಳಿಮುಖವಾಗಿದೆ.
ಬೆಳ್ತಂಗಡಿ ತಾಲೂಕು: 2008-09ರಲ್ಲಿ 8,285, 2009-10ರಲ್ಲಿ 8,290, 2010-11ರಲ್ಲಿ 8,227, 2011-12ರಲ್ಲಿ 8,245, 2012-13ರಲ್ಲಿ 8,160, 2013-14ರಲ್ಲಿ 8,175, 2014-15ರಲ್ಲಿ 7,840, 2015-16ರಲ್ಲಿ 7,570, 2016-17ರಲ್ಲಿ 7,850, 2017-18ರಲ್ಲಿ 7,395, 2018-19ರಲ್ಲಿ 4,700, 2019-20ರಲ್ಲಿ 1,695, 2020-21ರಲ್ಲಿ 1,660, 2021-22ರಲ್ಲಿ 1,540, 2022-23ರಲ್ಲಿ 1,570 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 2008ಕ್ಕೆ ಹೋಲಿಸಿದರೆ 2023ರಲ್ಲಿ ಸುಮಾರು 6,700ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿಲ್ಲ.
ಪುತ್ತೂರು ತಾಲೂಕು: 2008-09ರಲ್ಲಿ 2,975 ಹೆಕ್ಟೇರ್, 2009-2010ರಲ್ಲಿ 2,910, 2010-11ರಲ್ಲಿ 2,908, 2011-2012ರಲ್ಲಿ 2,950, 2012-2013ರಲ್ಲಿ 2,953, 2013-14ರಲ್ಲಿ 2,950, 2014-15ರಲ್ಲಿ 2,701, 2015-16ರಲ್ಲಿ 2,500, 2016-17ರಲ್ಲಿ 2,500, 2017-2018ರಲ್ಲಿ 2,250, 2018-19ರಲ್ಲಿ 1,500, 2019-20ರಲ್ಲಿ 351, 2020-21ರಲ್ಲಿ 414, 2021-22ರಲ್ಲಿ 190, 2022-23ರಲ್ಲಿ 205 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 2008ಕ್ಕೆ ಹೋಲಿಸಿದರೆ 2023ರಲ್ಲಿ ಸುಮಾರು 2,700ಕ್ಕೂ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆ ಇಳಿಮುಖವಾಗಿದೆ.
ಸುಳ್ಯ ತಾಲೂಕು: 2008-09ರಲ್ಲಿ 485 ಹೆಕ್ಟೇರ್, 2009-10ರಲ್ಲಿ 491, 2010-11ರಲ್ಲಿ 496, 2011-12ರಲ್ಲಿ 501, 2012-13ರಲ್ಲಿ 501, 2013-14ರಲ್ಲಿ 501, 2014-15ರಲ್ಲಿ 501, 2015-16ರಲ್ಲಿ 490, 2016-17ರಲ್ಲಿ 500, 2017-18ರಲ್ಲಿ 485, 2018-19ರಲ್ಲಿ 300, 2019-20ರಲ್ಲಿ 300, 2020-21ರಲ್ಲಿ 236, 2021-2022ರಲ್ಲಿ 235, 2022-23ರಲ್ಲಿ 235 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 2008ಕ್ಕೆ ಹೋಲಿಸಿದರೆ 2023ರಲ್ಲಿ ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿಲ್ಲ.
ಉಳಿದಂತೆ ಕಡಬ ತಾಲೂಕಿನ ಕಳೆದ 3 ವರ್ಷಗಳ ಭತ್ತ ಕೃಷಿಯನ್ನು ಅವಲೋಕಿಸುವುದಾದರೆ 2021-22ರಲ್ಲಿ 155 ಹೆಕ್ಟೇರ್, 2022-23ರಲ್ಲಿ 165, 2023-24ರಲ್ಲಿ 161 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗಿದ್ದು, 2021ಕ್ಕೆ ಹೋಲಿಸುವುದಾದರೆ 2024ರ ಅವಧಿಗೆ ಸುಮಾರು 6 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ವಿಸ್ತೀರ್ಣ ಹೆಚ್ಚಿದೆ. ಇನ್ನು ಉಳ್ಳಾಲ 2021-22ರಲ್ಲಿ 424, 2022-23ರಲ್ಲಿ 720, 2023-24ರಲ್ಲಿ 850 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 2021ಕ್ಕೆ ಹೋಲಿಸುವುದಾದರೆ ಸುಮಾರು 426 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಹೆಚ್ಚಳವಾಗಿದೆ.
ಉಳಿದಂತೆ ಮುಲ್ಕಿ ತಾಲೂಕಿನಲ್ಲಿ 2021-22ರಲ್ಲಿ 1,654, 2022-23ರಲ್ಲಿ 1,635, 2023-24ರಲ್ಲಿ 1,700 ಭತ್ತ ಕೃಷಿಯಾಗಿದ್ದು, ತುಸು ಚೇತರಿಕೆ ಕಂಡಿದೆ. ಮೂಡುಬಿದಿರೆ ತಾಲೂಕಿನಲ್ಲಿ 2021-22ರಲ್ಲಿ 2,434, 2022-23ರಲ್ಲಿ 1,620, 2023-24ರಲ್ಲಿ 1,650 ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ತೀವ್ರ ಇಳಿಕೆ ಕಂಡಿದೆ.
ದ.ಕ ಜಿಲ್ಲಾದ್ಯಂತ ಎಲ್ಲೆಲ್ಲ ಭತ್ತ ಕೃಷಿ ಇಳಿಮುಖವಾಗಿದೆಯೋ ಅಲ್ಲೆಲ್ಲ ವಾಣಿಜ್ಯ ಕೃಷಿ ಲಗ್ಗೆ ಇಟ್ಟಿದೆ. ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತಿದೆ.
ಉಡುಪಿ: 10 ವರ್ಷಗಳಲ್ಲಿ 14,226 ಹೆ.ಪ್ರದೇಶದಲ್ಲಿ ಇಳಿಕೆ
ಉಡುಪಿ ಜಿಲ್ಲೆಯಲ್ಲಿ 2014-15ರ ಹೊತ್ತಿಗೆ 49,548 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿತ್ತು. 2023-24ರಲ್ಲಿ ಅಂದರೆ ಸುಮಾರು 10 ವರ್ಷಗಳ ನಂತರ 35,322 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗಿದ್ದು, 14,226 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಇಳಿಮುಖವಾಗಿದೆ. 2014-2015ರಲ್ಲಿ 49,548 ಹೆಕ್ಟೇರ್, 2015-2016ರಲ್ಲಿ 49,608, 2016-2017ರಲ್ಲಿ 47,831, 2017-2018 - 47,095, 2018-2019ರಲ್ಲಿ 39,158, 2019-2020ರಲ್ಲಿ 39,851, 2020-2021ರಲ್ಲಿ 40,812, 2021-2022ರಲ್ಲಿ 43,564, 2022-2023ರಲ್ಲಿ 41,198, 2023-2024ರಲ್ಲಿ 35,322 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.
ಶಿವಮೊಗ್ಗ: 37,576 ಹೆ. ಇಳಿಕೆ
ಶಿವಮೊಗ್ಗ ಜಿಲ್ಲೆಯಲ್ಲಿ 2014ರಲ್ಲಿ 1,06,333 ಹೆಕ್ಟೇರ್, 2015ರಲ್ಲಿ 97,342, 2016ರಲ್ಲಿ 1,01,092, 2017ರಲ್ಲಿ 78,677, 2018ರಲ್ಲಿ 1,04,259, 2019ರಲ್ಲಿ 97,357, 2020ರಲ್ಲಿ 89,700, 2021ರಲ್ಲಿ 78,616, 2022ರಲ್ಲಿ 79,131 2023ರಲ್ಲಿ 72,135, 2024ರಲ್ಲಿ 68,757 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. 2014ಕ್ಕೆ ಹೋಲಿಸುವುದಾದರೆ ಸುಮಾರು 37,576 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಇಳಿಮುಖವಾಗಿದೆ.
ಕೊಪ್ಪಳ: ಭತ್ತದ ಭೂಮಿ ವಿಸ್ತೀರ್ಣ, ರಫ್ತಿನಲ್ಲೂ ಮುಂಚೂಣಿ
ಕೊಪ್ಪಳ ಜಿಲ್ಲೆಯಲ್ಲಿ 2014-15ರಲ್ಲಿ 39,278 ಹೆಕ್ಟೇರ್, 2015-2016ರಲ್ಲಿ 39,920, 2016-2017ರಲ್ಲಿ 36,777, 2017-2018ರಲ್ಲಿ 36,326, 2018-2019ರಲ್ಲಿ 39694, 2019-2020ರಲ್ಲಿ 39,324, 2021-2022ರಲ್ಲಿ 61,165, 2022-2023ರಲ್ಲಿ 61,185 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಕೃಷಿ ಮಾಡಲಾಗಿದ್ದು, ಸುಮಾರು 21 ಸಾವಿರ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಭತ್ತ ಕೃಷಿ ಹೆಚ್ಚಳ ಕಂಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ಅಕ್ಕಿ ಮಧ್ಯ ಪ್ರಾಚ್ಯ ಮತ್ತು ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿ ಭತ್ತ ಕೃಷಿ ಚಟುವಟಿಕೆ ರಾಜ್ಯದಲ್ಲೇ ಬಿರುಸಿನಿಂದ ಸಾಗುತ್ತಿದೆ. ಇಲ್ಲಿ ಹೆಚ್ಚಾಗಿ ಸೋನಾ ಮಸೂರಿ ಅಕ್ಕಿ ಬೆಳೆಯಲಾಗುತ್ತಿದೆ.
ಗಂಗಾವತಿ ಸೋನಾ ಅಧಿಕ ಇಳುವರಿ ಕೊಡುವ ತಳಿಯಾಗಿದೆ. ಈ ತಳಿಯ ಇಳುವರಿ ಸಾಮರ್ಥ್ಯ 6.8ಟನ್/ಹೆ. ಇದ್ದು, 130-ರಿಂದ 135 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಸವಳು ಭೂಮಿಗೆ ಸೂಕ್ತವಾದ ಈ ತಳಿಯನ್ನು ವರ್ಷದ ಮೂರು ಹಂಗಾಮಿನಲ್ಲೂ ಬೆಳೆಯಲಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಈ ತಳಿ ಹೊಂದಿದೆ.
ಬೆಳಗಾವಿಯಲ್ಲೊಂದು ಸಾವಯವ ಕೃಷಿಕರ ಬಳಗ
ಬೆಳಗಾವಿ ಜಿಲ್ಲೆಯ ಗುಂಡೇನಟ್ಟಿ ಗ್ರಾಮದ ರೈತರು ‘ಸಿದ್ಧಾರೂಢ ಸಾವಯವ ಕೃಷಿಕರ ಬಳಗ’ದ ಮೂಲಕ ಭತ್ತ ಕೃಷಿ ಸಂರಕ್ಷಣೆ ಮಾಡುತ್ತಿದ್ದಾರೆ.
ಸಾವಯವ ಬೀಜ ಬ್ಯಾಂಕ್ ನಿರ್ಮಿಸಿ, ದೇಶದ ವಿವಿಧೆಡೆ ಬೀಜ ಮಾರಾಟ ಮಾಡಿ ಇಲ್ಲಿನ ರೈತರು ಸ್ವಾವಲಂಬಿಗಳಾಗಿದ್ದಾರೆ. ಇಲ್ಲಿ ರೈತರೆಲ್ಲರೂ ಸೇರಿ 1,200 ಎಕರೆ ಜಮೀನಿನಲ್ಲಿ ವಿವಿಧ ದೇಸಿ ತಳಿಗಳ ಬೀಜಗಳನ್ನು ಬೆಳೆಯುತ್ತಾರೆ. ಇವುಗಳ ಮಾರಾಟಕ್ಕೆ ದೇಸಿ ಬೀಜ ಬ್ಯಾಂಕ್ ಸ್ಥಾಪಿಸಿದ್ದಾರೆ.
ಇಲ್ಲಿ ಬೆಳೆಯುವ ಬೀಜಗಳಿಗೆ ದಿಲ್ಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಧಾರವಾಡ ಸಹಿತ ವಿವಿಧ ನಗರಗಳಲ್ಲಿ ಬೇಡಿಕೆ ಇದೆ. ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಂದಲೂ ಬೇಡಿಕೆ ಇದೆ.
ಭತ್ತ ಇಳಿಕೆ ಕಂಡ ಪ್ರಮುಖ ಜಿಲ್ಲೆಗಳು
ದ. ಕ. ಜಿಲ್ಲೆಯಲ್ಲಿ ಕಳೆದ 15 ವರ್ಷಗಳಲ್ಲಿ 32,843 ಹೆಕ್ಟೇರ್ನಿಂದ 9,090 ಹೆಕ್ಟೇರ್‌ಗೆ ಇಳಿಮುಖವಾಗಿದೆ. ಉಡುಪಿ ಜಿಲ್ಲೆಯಲ್ಲಿ 10 ವರ್ಷಗಳಲ್ಲಿ 14,226 ಹೆ.ಪ್ರದೇಶದಲ್ಲಿ ಇಳಿಕೆ ಕಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 37,576 ಹೆ. ಇಳಿಕೆಯಾಗಿದೆ. ತುಮಕೂರು ಜಿಲ್ಲೆಯಲ್ಲಿ ಭತ್ತ ಬೆಳೆಯುವುದೇ 3,784 ಹೆಕ್ಟೇರ್ ಪ್ರದೇಶದಲ್ಲಿ, ಆದರೆ ಪ್ರಸಕ್ತ ಸಾಲಿನಲ್ಲಿ 2,700 ಹೆ.ನಲ್ಲಿ ಮಾತ್ರ ಬಿತ್ತನೆಯಾಗಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ 2021-22ರಲ್ಲಿ 1,55,460 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗಿದ್ದು, 2024ರಲ್ಲಿ 1,82,278 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡುವ ಮೂಲಕ ಹೆಚ್ಚಿನ ಗುರಿ ಸಾಧಿಸಲಾಗಿದೆ.
ಯುವಜನರಿಂದ ಕೃಷಿ ಸಂಘ ರಚನೆಯಾಗಲಿ
ರಾಜ್ಯದಲ್ಲಿ ನೀರಾವರಿ ಇರುವ ಪ್ರದೇಶದಲ್ಲಿ ಸೂಪರ್ ಫೈನ್ ಭತ್ತ ಬೆಳೆಯಲಾಗುತ್ತಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಭತ್ತ ಕೃಷಿ ಕಡಿಮೆಯಾಗುತ್ತಿದೆ. ಇಲ್ಲಿನ ಜನರು ಹೆಚ್ಚಾಗಿ ಉಪಯೋಗಿಸುವ ಭತ್ತ ಕೃಷಿ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯು ಎದುರಾಗಿವೆ. ನಮ್ಮ ಯುವಜನರು ಸುಸ್ಥಿರ ಸಾವಯವ ಕೃಷಿ ಮಾಡಲು, ನೆಮ್ಮದಿಯ ಪರಿಸರ, ಗ್ರಾಮೀಣ ಪ್ರದೇಶ ಆಧಾರಿತ ನವೋದ್ಯಮ ಸ್ಥಾಪಿಸಲು ಹಳ್ಳಿಯತ್ತ ಮುಖಮಾಡಬೇಕು. ರೈತರನ್ನು ಒಗ್ಗೂಡಿಸಿ ಕೃಷಿ ಸಂಘಗಳನ್ನು ರಚಿಸಬೇಕು
ಪ್ರಕಾಶ್ ಕಮ್ಮರಡಿ
- ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ
ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿ
ಭತ್ತ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಕನಿಷ್ಠ ಬೆಂಬಲ ಬೆಲೆ ನ್ಯಾಯಯುತವಾಗಿ ನಿಗದಿಯಾಗುತ್ತಿಲ್ಲ. ಈಗ ಕ್ವಿಂಟಲ್ಗೆ 2,300 ರೂ. ಮಾಡಿದ್ದಾರೆ. ಸರಕಾರ ಕನಿಷ್ಠ 3,000 ರೂ.ಗೆ ಹೆಚ್ಚಿಸಿ ಭತ್ತ ಬೆಳೆಯುವ ರೈತರನ್ನು ಪ್ರೋತ್ಸಾಹಿಸಬೇಕು.
ಕುರುಬೂರು ಶಾಂತಕುಮಾರ್
- ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ
ರೈತರನ್ನು ಪ್ರೋತ್ಸಾಹಿಸಲು ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ಇನ್ನು ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಾಧ್ಯವಾಗದ ರೈತರಿಗೆಂದು ಸರಕಾರ ಕೃಷಿ ಯಂತ್ರಧಾರೆ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಡಿಮೆ ಬಾಡಿಗೆಗೆ ಯಂತ್ರಗಳನ್ನು ನೀಡುತ್ತಿದೆ. ಆದರೆ ಭತ್ತ ಕೃಷಿಯನ್ನು ಉಳಿಸಬೇಕಾದರೆ ಸರಕಾರದ ಪ್ರೋತ್ಸಾಹ ಮಾತ್ರ ಸಾಕಾಗುವುದಿಲ್ಲ. ರೈತರು ಕೂಡ ಹೆಚ್ಚಿನ ಕಾಳಜಿ ವಹಿಸಿ ಭತ್ತ ಕೃಷಿಯತ್ತ ಮುಖ ಮಾಡಬೇಕಿದೆ. ರೈತರು ಹೆಚ್ಚಾಗಿ ವಾಣಿಜ್ಯ ಬೆಳೆಗಳತ್ತ ಸಾಗಿರುವುದರಿಂದ ಮತ್ತು ಹೆಚ್ಚು ಲಾಭದಾಯಕ ಕೃಷಿ ಅಲ್ಲ ಎಂದುಕೊಂಡಿರುವುದರಿಂದ ಭತ್ತ ಕೃಷಿ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.
- ಹೊನ್ನಪ್ಪ ಗೌಡ, ಜೆಡಿಎ ಮಂಗಳೂರು
ನಮ್ಮ ಬಳಕೆಗೆ ಎಷ್ಟು ಬೇಕೋ ಅಷ್ಟೇ ಭತ್ತ ಬೆಳೆದರೆ ಉತ್ತಮ. ಹೆಚ್ಚು ಬೆಳೆದಾಗ ರೈತರಿಗೆ ಸೂಕ್ತ ಬೆಲೆ ಕೂಡ ಸಿಗುವುದಿಲ್ಲ. ರೈತರು ಸಿರಿಧಾನ್ಯ ಬೆಳೆಯಲು ಆಸಕ್ತಿ ತೋರಬೇಕು.
- ಡಾ.ವಿ.ಎಸ್.ಅಶೋಕ್, ಜೆಡಿಎ ಮಂಡ್ಯ ಜಿಲ್ಲೆ
ಮಂಡ್ಯದ ಘನಿಖಾನ್ರ ಭತ್ತದ ಮ್ಯೂಸಿಯಂ, 1,350 ತಳಿ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲಿನ ರೈತ ಸೈಯದ್ ಘನಿ ಖಾನ್ ತನ್ನ 14 ಎಕರೆ ಜಮೀನಿನಲ್ಲಿ ಭತ್ತ ಕೃಷಿಯನ್ನು ಮಾಡುತ್ತಿದ್ದಾರೆ. 1,350 ವಿಧದ ಭತ್ತದ ತಳಿಗಳನ್ನು ಬೆಳೆಯುತ್ತಿದ್ದಾರೆ. ದೇಶಾದ್ಯಂತ ಸಂಚರಿಸಿ ಎಲ್ಲ ರಾಜ್ಯಗಳ ಭತ್ತದ ತಳಿಗಳನ್ನು ಅವರು ಸಂಗ್ರಹಿಸಿದ್ದಾರೆ. ಭತ್ತದ ವಿವಿಧ ತಳಿಗಳನ್ನು ಸಂರಕ್ಷಿಸಲೆಂದೇ ಇವರು ಭತ್ತದ ಮ್ಯೂಸಿಯಂ ಕೂಡ ಮಾಡಿದ್ದಾರೆ. ಘನಿಖಾನ್ರ ಜಮೀನಿಗೆ ಹಲವು ರಾಜ್ಯಗಳ ರೈತರು, ವಿದ್ಯಾರ್ಥಿಗಳು ಮಾತ್ರವಲ್ಲ ವಿದೇಶದ ವಿದ್ಯಾರ್ಥಿಗಳು ಕೂಡ ಅಧ್ಯಯನಕ್ಕಾಗಿ ಭೇಟಿ ನೀಡುತ್ತಾರೆ. ಘನಿಖಾನ್ರ ಕೃಷಿಕಾರ್ಯಕ್ಕೆ ಅವರ ಸಹೋದರರೂ ಬೆಂಬಲ ನೀಡುತ್ತಾರೆ.
ನೈಸರ್ಗಿಕ ಗೊಬ್ಬರ ಬಳಕೆಯಿಂದ ಲಾಭ: ನೈಸರ್ಗಿಕ ಭತ್ತ ಕೃಷಿ ಮಾಡುವತ್ತ ರೈತರು ಮುಂದಾಗಬೇಕು. ರಾಸಾಯನಿಕ ಗೊಬ್ಬರ ಮತ್ತು ಸಾವಯವ ಗೊಬ್ಬರಗಳೆಂದು ಕರೆಯುವ ಹಲವು ಉತ್ಪನ್ನಗಳಲ್ಲಿ ರಾಸಾಯನಿಕಗಳೇ ಹೆಚ್ಚಿವೆ. ರಾಸಾಯನಿಕ ಬಳಸಿ ಮಾಡುವ ಭತ್ತದ ಪೈರು ಸದೃಢವಾಗಿರುವುದಿಲ್ಲ. ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ ಕೃಷಿಗೆ ಬಳಸುವುದರಿಂದ ನಷ್ಟವಾಗುವುದಿಲ್ಲ ಎನ್ನುತ್ತಾರೆ ಪ್ರಗತಿಪರ ರೈತ ಘನಿಖಾನ್.
ದೇವರಾವ್ ಬಳಿ 180ಕ್ಕೂ ಅಧಿಕ ಭತ್ತದ ತಳಿ
ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಮೈ ದೇವರಾವ್ 5.5 ಎಕರೆ ಜಮೀನಿನಲ್ಲಿ 180ಕ್ಕೂ ಅಧಿಕ ಭತ್ತದ ತಳಿಗಳನ್ನು ಬೆಳೆಸಿ, ಬಳಸಿ, ಮುಂದಿನ ಪೀಳಿಗೆಗಾಗಿ ಸಂರಕ್ಷಿಸುತ್ತಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ತಮ್ಮ ಕೃಷಿಗೆ ಬೇಕಾದ ಹಸಿರೆಲೆ ಗೊಬ್ಬರ ಮತ್ತು ಹಟ್ಟಿಗೊಬ್ಬರವನ್ನು ತಾವೇ ತಯಾರಿಸುತ್ತಾರೆ.
180ಕ್ಕೂ ಅಧಿಕ ಭತ್ತದ ತಳಿಗಳನ್ನು ಸಂರಕ್ಷಿಸಿರುವ ದೇವರಾವ್ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ‘ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ-2020-21 ಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದ್ದರು.
ಇಂಗು ಗುಂಡಿ ಬದಲಿಗೆ ಭತ್ತಕ್ಕೆ ಸಿಗಲಿ ಪ್ರೋತ್ಸಾಹ ಧನ:
ಸರಕಾರಗಳು ಅಂತರ್ಜಲ ವೃದ್ಧಿಗೆಂದು ಇಂಗು ಗುಂಡಿಗೆ ಪ್ರೋತ್ಸಾಹಧನ ನೀಡುವ ಅಗತ್ಯವಿಲ್ಲ. ಇಂಗು ಗುಂಡಿಯ ಜಾಗ ಕೂಡ ವ್ಯರ್ಥ. ಅದರ ಬದಲಾಗಿ ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಿದರೆ ಹಡಿಲು ಬಿದ್ದ ಭೂಮಿಯಲ್ಲಿ ಮತ್ತೆ ರೈತರು ಭತ್ತ ಕೃಷಿ ಮಾಡಲು ಮುಂದಾಗುತ್ತಾರೆ. ಭತ್ತ ಕೃಷಿ ವಾರ್ಷಿಕವಾಗಿ ಎರಡು ಬಾರಿ ಮಾಡಿದರೂ ಗದ್ದೆಗಳಲ್ಲಿ ನೀರು ತುಂಬಿರುವುದರಿಂದ ಭೂಮಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ. ಕೆರೆ, ಬಾವಿ, ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದ್ದು, ಇಂಗು ಗುಂಡಿಗಿಂತಲೂ ಭತ್ತದ ಗದ್ದೆ ಪ್ರಯೋಜನಕಾರಿ ಎನ್ನುತ್ತಾರೆ ನೈಸರ್ಗಿಕ ಕೃಷಿಕ, ಅಮೈ ದೇವರಾವ್ರ ಪುತ್ರ ಬಿ.ಕೆ.ಪರಮೇಶ್ವರ ರಾವ್.