‘ಭಾಗ್ಯಲಕ್ಷ್ಮಿ’ ಯೋಜನೆಗೆ 18 ವರ್ಷ: ಅರ್ಹ ಫಲಾನುಭವಿಗಳಿಗೆ ಸಿಗಲಿದೆ ಯೋಜನೆಯ ಫಲ
ಮಡಿಕೇರಿ, ಡಿ.22: 2006-07ರಲ್ಲಿ ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ದೂರದೃಷ್ಟಿಯ ಭಾಗ್ಯಲಕ್ಷ್ಮಿ ಯೋಜನೆಯು ಇದೀಗ ಮೆಚ್ಯೂರಿಟಿಯಾಗಿದ್ದು, 18 ವರ್ಷಗಳ ಬಳಿಕ ಭಾಗ್ಯಲಕ್ಷ್ಮಿ ಯೋಜನೆಯ ಫಲವನ್ನು 18 ವರ್ಷ ತುಂಬಿದ ಹೆಣ್ಣು ಮಕ್ಕಳು ಪಡೆಯುತ್ತಿದ್ದಾರೆ.
ಹೆಣ್ಣು ಮಕ್ಕಳ ವಿವಾಹ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2006-07ರಲ್ಲಿ ರಾಜ್ಯದಲ್ಲಿ ಜಾರಿಗೊಳಿಸಿದ್ದ ಭಾಗ್ಯಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳು ಇದೀಗ 35 ಸಾವಿರ ರೂ. ಪಡೆಯುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 2006-07ರಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ 1,355 ಹೆಣ್ಣುಮಕ್ಕಳು ಪರಿಪಕ್ವ ಮೊತ್ತ ಪಡೆಯಲು ಅರ್ಹರಾಗಿದ್ದಾರೆ.
ಇಬ್ಬರು ಹೆಣ್ಣುಮಕ್ಕಳು ಅರ್ಹರು: 2006-07ನೇ ಸಾಲಿನಲ್ಲಿ ಜಾರಿಗೆ ಬಂದ ಭಾಗ್ಯಲಕ್ಷ್ಮಿ ಯೋಜನೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವ ಸರಕಾರವು ನಿಗದಿಪಡಿಸಿದ್ದ ಮಾನದಂಡಗಳ ಅನ್ವಯ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ತಾಯಿಗೆ ಜನಿಸುವ ಇಬ್ಬರು ಹೆಣ್ಣುಮಕ್ಕಳು ಅರ್ಹರು ಮತ್ತು ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಾಂಡ್ಗಳನ್ನು ನೀಡಲಾಗಿತ್ತು. ಇದೀಗ ಬಾಂಡ್ ನೀಡಲಾಗಿದ್ದ ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದ್ದು,ಬಾಂಡ್ ಕೂಡ ಮೆಚ್ಯೂರಿಟಿಯಾಗಿದೆ.
ಕೊಡಗು ಜಿಲ್ಲೆಯಲ್ಲಿ 2006-07ರಲ್ಲಿ 3,004 ಹೆಣ್ಣು ಮಕ್ಕಳು ಜನಿಸಿದ್ದರು. ಅದರಲ್ಲಿ 1,368 ಹೆಣ್ಣುಮಕ್ಕಳು ಬಿಪಿಎಲ್ ಕುಟುಂಬದಲ್ಲಿ ಜನಿಸಿದ್ದಾರೆ. ಎಲ್ಲ ಸೂಕ್ತ ದಾಖಲೆಗಳನ್ನು ಸಲ್ಲಿಸಿರುವ ಬಿಪಿಎಲ್ ಕುಟುಂಬದ 1,355 ಹೆಣ್ಣುಮಕ್ಕಳನ್ನು ಆಯ್ಕೆ ಮಾಡಲಾಗಿತ್ತು.
ಕೊಡಗು ಜಿಲ್ಲೆಯಲ್ಲಿ ಬಾಂಡ್ ಸ್ವೀಕೃತವಾದ, ಪ.ಜಾ. 291, ಪ.ಪಂ. 123, ಅಲ್ಪ ಸಂಖ್ಯಾತ 280 ಹಾಗೂ ಇತರ 661 ಸೇರಿ 1,355 ಫಲಾನುಭವಿಗಳು ಭಾಗ್ಯಲಕ್ಷ್ಮಿ ಹಣವನ್ನು ಪಡೆಯಲಿದ್ದಾಳೆ. ಇದರಲ್ಲಿ ಕೆಲವರು ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನವನ್ನು ಪಡೆದಿದ್ದು, ಇದೀಗ ಅವರ ಪಡೆದ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿ, ಉಳಿದ ಹಣವನ್ನು ನೀಡಲಾಗುತ್ತದೆ.
► ಅಂದು ಭಾಗ್ಯಲಕ್ಷ್ಮಿ, ಇಂದು ಸುಕನ್ಯಾ ಸಮೃದ್ಧಿ ಯೋಜನೆ
2006-07ರಲ್ಲಿ ಜಾರಿಗೆ ಬಂದಿದ್ದ ಯೋಜನೆಯು 15 ವರ್ಷಗಳ ಬಳಿಕ 2020-21ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ತಾವು ಜಾರಿಗೆ ತಂದಿದ್ದ ಹಳೆಯ ಯೋಜನೆಯಾದ ಭಾಗ್ಯಲಕ್ಷ್ಮಿ ಎಂಬ ಹೆಸರನ್ನು ಸುಕನ್ಯಾ ಸಮೃದ್ಧಿ ಯೋಜನೆ ಎಂದು ಹೆಸರು ಬದಲಾಯಿಸಿದ್ದರು. ಅದಲ್ಲದೇ ಯೋಜನೆಯಲ್ಲಿ ಕೊಂಚ ಬದಲಾವಣೆ ಕೂಡ ಮಾಡಿದ್ದರು.
2006ರಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಆರಂಭವಾದ 2 ವರ್ಷಗಳವರೆಗೆ ಮೆಚ್ಯೂರಿಟಿ ಬಾಂಡ್ ಹಣವನ್ನು 35 ಸಾವಿರ ರೂ.ಗೆ ಮಿತಿಗೊಳಿಸಲಾಗಿತ್ತು.
ಅದಾದ ಬಳಿಕ ಭಾಗ್ಯಲಕ್ಷ್ಮಿ ಹಣವನ್ನು ಒಂದು ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು. 2006ರ ಎಪ್ರಿಲ್ 1ರಿಂದ 2008ರ ಜುಲೈ 31ರ ಒಳಗೆ ಜನಿಸಿ ಯೋಜನೆಯಡಿ ಬಾಂಡ್ ಪಡೆದ ಕುಟುಂಬದ ಮೊದಲನೆ ಮಗುವಿಗೆ 34,751 ರೂ. ಹಾಗೂ ಎರಡನೇ ಮಗುವಿಗೆ 40,619 ರೂ. ಪರಿಪಕ್ವ ಮೊತ್ತ ದೊರೆಯುತ್ತದೆ.
2008ರ ಆ.1ರಿಂದ ಜನಿಸಿ ಬಾಂಡ್ ಪಡೆದ ಮೊದಲನೇ ಮಗುವಿಗೆ 1,00,052 ರೂ. ಹಾಗೂ ಎರಡನೇ ಮಗುವಿಗೆ 1,00,097 ರೂ. ನೀಡಲಾಗುತ್ತದೆ.
ಒಂದೇ ಮನೆಯಲ್ಲಿ ಇಬ್ಬರು ಲಕ್ಷ್ಮಿ: ರಾಜ್ಯದಲ್ಲಿ 2023ರಲ್ಲಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಕಳೆದ ಒಂದು ವರ್ಷದಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂ.ಯನ್ನು ಗೃಹಲಕ್ಷ್ಮಿ ಯೋಜನೆಯಡಿ ನೀಡುತ್ತಿದೆ.
ಇದೀಗ 18 ವರ್ಷಗಳ ಬಳಿಕ ಭಾಗ್ಯಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳೂ 35 ಸಾವಿರ ರೂ. ಪಡೆಯುತ್ತಿದ್ದಾರೆ. ಒಂದೇ ಮನೆಯಲ್ಲಿ ಒಂದೆಡೆ ತಾಯಿ ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದರೆ, ಮತ್ತೊಂದೆಡೆ ಮಗಳು ಭಾಗ್ಯಲಕ್ಷ್ಮಿ ಯೋಜನೆ ಪಡೆಯುತ್ತಿದ್ದಾಳೆ.
ಕೊಡಗು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವಾರು ಮಂದಿ ಮಹಿಳೆಯರು ಮಾಸಿಕವಾಗಿ 2 ಸಾವಿರ ರೂ. ಪಡೆಯುತ್ತಿದ್ದಾರೆ. ಇದೀಗ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಮೆಚ್ಯೂರಿಟಿಯಾಗಿದ್ದು 2006-07ನೇ ಸಾಲಿನ ಅರ್ಹ ಫಲಾನುಭವಿಗಳಿಗೆ 35 ಸಾವಿರ ರೂ. ಸಿಗಲಿದೆ.
-ನಟರಾಜ್, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಗು
ಕೊಡಗು ಜಿಲ್ಲೆಯ ಭಾಗ್ಯಲಕ್ಷ್ಮಿ ಫಲಾನುಭವಿಗಳು
ಮಡಿಕೇರಿ: 285
ಸೋಮವಾರಪೇಟೆ: 587
ವೀರಾಜಪೇಟೆ: 483
ಒಟ್ಟು: 1,355