ಶುದ್ಧಗಾಳಿಯಲ್ಲಿ ಮಂಜಿನ ನಗರಿ ಮಡಿಕೇರಿ ದೇಶಕ್ಕೇ ಪ್ರಥಮ
ಮಡಿಕೇರಿ: ಶುದ್ಧಗಾಳಿಯನ್ನು ಹೊಂದಿರುವ ನಗರಗಳ ಪಟ್ಟಿಯನ್ನು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆಗೊಳಿಸಿದ್ದು, ಕೊಡಗು ಜಿಲ್ಲೆಯ ಮಡಿಕೇರಿ ನಗರ ಮೊದಲ ಸ್ಥಾನ ಪಡೆದಿದೆ.
ದೇಶದಲ್ಲಿ ಮಡಿಕೇರಿ ನಗರ ಅತಿ ಕಡಿಮೆ ವಾಯುಮಾಲಿನ್ಯ ಹೊಂದಿರುವ ನಗರಗಳ ಪೈಕಿ ಅಗ್ರ ಸ್ಥಾನದಲ್ಲಿದೆ. ಇದೀಗ ಶುದ್ಧಗಾಳಿ ಸೇವನೆಗೆ ಮಡಿಕೇರಿ ನಗರ ದೇಶದಲ್ಲೇ ಮೊದಲು ಎಂಬ ಖ್ಯಾತಿ ಪಡೆದಿದ್ದು ಮಂಜಿನ ನಗರಿ ಮಡಿಕೇರಿ ದೇಶದೆಲ್ಲೆಡೆ ಮತ್ತಷ್ಟು ಪ್ರಚಾರ ಪಡೆಯುತ್ತಿದೆ.
ಕಳೆದ ವರ್ಷ ಐದನೇ ಸ್ಥಾನ: ದೇಶದಲ್ಲಿ ಅತ್ಯಂತ ಶುದ್ಧಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮಡಿಕೇರಿ ಕಳೆದ ವರ್ಷ ಐದನೇ ಸ್ಥಾನದಲ್ಲಿತ್ತು. ಆದರೆ ಈ ವರ್ಷ ಮೊದಲ ಸ್ಥಾನ ಪಡೆದಿದೆ. ದೇಶದ ದೊಡ್ಡ ನಗರಗಳಲ್ಲಿ ಅಭಿವೃದ್ಧಿಯ ನೆಪವೊಡ್ಡಿ ಪರಿಸರವನ್ನು ಮಲಿನ ಮಾಡುತ್ತಿರುವುದು ಸಾಮಾನ್ಯವಾಗಿದೆ.
ದೇಶದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ. ಇದೀಗ ಅತ್ಯಂತ ಶುದ್ಧ ಗಾಳಿ ಸೇವನೆಗೆ ಮಡಿಕೇರಿ ನಗರ ದೇಶದಲ್ಲೇ ಮೊದಲ ಸ್ಥಾನ ಪಡೆದಿರುವುದು ಕೊಡಗು ಜಿಲ್ಲೆಯ ಪರಿಸರ ಸಂರಕ್ಷಣೆಗೆ ಸಿಕ್ಕ ಪ್ರತಿಫಲವಾಗಿದೆ.
► ಜಿಲ್ಲೆಯಲ್ಲೂ ಪರಿಸರ ಮಾಲಿನ್ಯದ ವಿರುದ್ಧ ಕ್ರಮ ಅಗತ್ಯ: ಕೊಡಗು ಅರಣ್ಯ, ಕಾಫಿ ತೋಟಗಳಿಂದ ಹಚ್ಚ ಹಸಿರಿನಿಂದ ಕೂಡಿರುವ ಜಿಲ್ಲೆ. ಅದಲ್ಲದೇ ಪ್ರತೀ ವರ್ಷ ಕೊಡಗಿನ ಸೊಬಗನ್ನು ಸವಿಯಲು ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಪರಿಸರ, ಹಕ್ಕಿಗಳ ಚಿಲಿಪಿಲಿ, ನದಿ, ಜಲಪಾತಗಳ ವೈಭವ,ಶುದ್ಧಗಾಳಿ ಹೀಗೇ ಜಿಲ್ಲೆಯ ಸೊಬಗನ್ನು ಸವಿಯಲು ಪ್ರವಾಸಿಗರು ಬರುತ್ತಾರೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಕಸದ ಸಮಸ್ಯೆ ಎಲ್ಲೆಡೆ ಉದ್ಭವಿಸಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಸವನ್ನು ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲ. ಪ್ರವಾಸಿಗರು ಕೂಡ ರಸ್ತೆ ಬದಿಯಲ್ಲಿಯೇ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುತ್ತಾರೆ. ಅದಲ್ಲದೆ ನಿರಂತರವಾಗಿ ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ದೇಶದಲ್ಲಿ ಜನರಿಗೆ ಶುದ್ಧಗಾಳಿ ಸಿಗದೆ ಕೃತಕಗಾಳಿಗೆ ಮೊರೆಹೋಗುವ ಪರಿಸ್ಥಿತಿ ಬಾರದಿರಲು ಅರಣ್ಯ, ಪರಿಸರವನ್ನು ಉಳಿಸುವ ಕೆಲಸ ಆಗಬೇಕಾಗಿದೆ.
► ಡಿಸೆಂಬರ್ ಮೊದಲ ವಾರ 28 ಎಕ್ಯೂಐ ದಾಖಲು: ಭಾರತೀಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ದೇಶದ ನಗರಗಳ ವಾಯುಮಾಲಿನ್ಯದ ಪ್ರಮಾಣವನ್ನು ಏರ್ ಕ್ವಾಲಿಟಿ ಇಂಡೆಕ್ಸ್ (ಎಕ್ಯೂಐ)ನಲ್ಲಿ ದಾಖಲಿಸುತ್ತದೆ. ಡಿಸೆಂಬರ್ 1ರ ಮಾಹಿತಿಯ ಪ್ರಕಾರ ಮಡಿಕೇರಿ ನಗರ ದೇಶದಲ್ಲಿ 28 ಎಕ್ಯೂಐನೊಂದಿಗೆ ಮೊದಲ ಸ್ಥಾನ ಪಡೆದಿದೆ.
0-50 ಎಕ್ಯೂಐ ಹೊಂದಿರುವ ಪ್ರದೇಶಗಳನ್ನು ಉತ್ತಮ ವಾಯುಗುಣಮಟ್ಟ ಹೊಂದಿರುವ ಪ್ರದೇಶಗಳಾಗಿ ಗುರುತಿಸಲಾಗುತ್ತದೆ. ಕಳೆದ ವರ್ಷ ಮಡಿಕೇರಿ ನಗರದಲ್ಲಿ 50ಕ್ಕಿಂತ ಹೆಚ್ಚು ಎಕ್ಯೂಐ ದಾಖಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮಡಿಕೇರಿ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ.
0-50 ಉತ್ತಮ, 51-100 ಸಮಾಧಾನಕರ, 101-200 ಮಧ್ಯಮ, 201-300 ಕಳಪೆ, 301-400 ಪ್ರಮಾಣವನ್ನು ಅತಿ ಕಳಪೆ ಎಂದು ಗುರುತಿಸಲ್ಪಡುತ್ತದೆ. ಡಿಸೆಂಬರ್ 1ರ ಮಾಹಿತಿ ಪ್ರಕಾರ ದೇಶದಲ್ಲಿ ಅತೀ ಹೆಚ್ಚು ವಾಯುಮಾಲಿನ್ಯ ಉಂಟಾಗುವ ಪ್ರದೇಶಗಳಲ್ಲಿ 372 ಎಕ್ಯೂಐನೊಂದಿಗೆ ದಿಲ್ಲಿ ಮೊದಲ ಸ್ಥಾನದಲ್ಲಿದೆ.
ಅತೀ ಹೆಚ್ಚು ವಾಯುಮಾಲಿನ್ಯ ಉಂಟಾಗುವ ಮೊದಲ ಸ್ಥಾನದಲ್ಲಿ ಕರ್ನಾಟಕದ ಯಾವುದೇ ಪ್ರದೇಶಗಳಿಲ್ಲ. ಅತೀ ಕಡಿಮೆ ವಾಯುಮಾಲಿನ್ಯ ಉಂಟಾಗುವ ಪ್ರದೇಶಗಳ ಪೈಕಿ ಟಾಪ್ ಹತ್ತರದಲ್ಲಿ ಕೊಡಗಿನ ಮಡಿಕೇರಿ ಸೇರಿ ರಾಜ್ಯದ ಐದು ಪ್ರದೇಶಗಳು ಜಾಗ ಪಡೆದಿವೆ.
42ಎಕ್ಯೂಐನೊಂದಿಗೆ ಚಾಮರಾಜನಗರ 6ನೇ ಸ್ಥಾನ, 50ಎಕ್ಯೂಐನೊಂದಿಗೆ ಗದಗ 8ನೇ ಸ್ಥಾನ, 51ಎಕ್ಯೂಐ ಹಾವೇರಿ 9ನೇ ಸ್ಥಾನ ಹಾಗೂ 52 ಎಕ್ಯೂಐನೊಂದಿಗೆ ಬಾಗಲಕೋಟೆ ಹತ್ತನೇ ಸ್ಥಾನ ಪಡೆದಿದೆ.