ಬಿಲ್ಲವರ ಏಳಿಗೆಯಲ್ಲಿ ನಾರಾಯಣಗುರುಗಳ ಪಾತ್ರ ಮಹತ್ತರ: ಡಾ.ಮುಕೇಶ್ ಕುಮಾರ್
19ನೇ ಶತಮಾನದಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮೇಲ್ವರ್ಗದಿಂದ ಅಸ್ಪಶ್ಯರಾಗಿದ್ದ, ದೇವಾಲಯಗಳ ಪ್ರವೇಶದಿಂದ ವಂಚಿತರಾಗಿದ್ದ, ಆರ್ಥಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲದೆ ಶೈಕ್ಷಣಿಕವಾಗಿ ಹಿಂದುಳಿದಿದ್ದ ಬಿಲ್ಲವ ಸಮುದಾಯ ಪ್ರಸಕ್ತ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗಿದ್ದಾರೆ. ಕಳೆದೆರಡು ಶತಮಾನಗಳ ನಡುವಿನಲ್ಲಾದ ಈ ಸ್ಥಿತ್ಯಂತರಕ್ಕೆ, ಆಧ್ಮಾತ್ಮಿಕ ಗುರು, ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರೇರಣೆ ಬಹುಮುಖ್ಯ ಕಾರಣ ಎನ್ನುತ್ತಾರೆ ಸ್ವಿಟ್ಸರ್‌ಲ್ಯಾಂಡ್ ಜುರಿಕ್ ಯುನಿವರ್ಸಿಟಯ ಸಹಾಯಕ ಪ್ರಾಧ್ಯಾಪಕ ಡಾ.ಮುಕೇಶ್ ಕುಮಾರ್.
19ನೇ ಶತಮಾನದ ಆರಂಭದಲ್ಲಿ ಮೇರ್ಲ್ವಗದ ಸಮುದಾಯಗಳಿಂದ ಅಸ್ಪಶ್ಯರಾಗಿದ್ದ, ದೇವಾಲಯಗಳ ಪ್ರವೇಶದಿಂದ ವಂಚಿತರಾಗಿದ್ದ, ಆರ್ಥಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲದೆ, ಶೈಕ್ಷಣಿಕವಾಗಿ ಹಿಂದುಳಿದ್ದ ಬಿಲ್ಲವ ಸಮುದಾಯ ಆ ಕಾಲದಲ್ಲಿ ಬಾಸೆಲ್ ಮಿಶನ್‌ನ ಪ್ರಭಾವದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವತ್ತ ಆಕರ್ಷಿತವಾಗಿತ್ತು. ಆದರೆ ಆ ಅವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ‘ಒಂದೇ ಮತ, ಒಂದೇ ದೇವರು’ ಎಂಬ ತತ್ವ ಬಿಲ್ಲವ ಸಮುದಾಯದ ಪ್ರಮುಖರನ್ನು ಆಕರ್ಷಿಸಿ ಅವರ ಪ್ರೇರಣೆಯಂತೆ ದೇವಾಲಯ ಸ್ಥಾಪನೆಯೊಂದಿಗೆ ದ.ಕ. ಜಿಲ್ಲೆಯಲ್ಲೂ ಸಾಮಾಜಿಕ ಪರಿವರ್ತನೆಗೆ ಕಾರಣವಾಯಿತು ಎನ್ನುವುದು ಡಾ.ಮುಕೇಶ್ ಕುಮಾರ್‌ರ ಸಂಶೋಧನಾ ಅಧ್ಯಯನದ ಅಭಿಪ್ರಾಯ.
ರಾಜಸ್ತಾನ ಮೂಲದ ಡಾ. ಮುಕೇಶ್ ಕುಮಾರ್ ಪ್ರಸಕ್ತ ಸ್ವಿಟ್ಸರ್‌ಲ್ಯಾಂಡ್ ಜುರಿಕ್ ಯುನಿವರ್ಸಿಟಿಯಲ್ಲಿ ಸೀನಿಯರ್ ಫೆಲೋ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಬಿಲ್ಲವರಲ್ಲಿ ಜಾತಿ, ಧರ್ಮ ಮತ್ತು ಸಾಮಾಜಿಕ ಚಲನಶೀಲತೆಯ ಸಮಸ್ಯೆಗಳ ಪರಿಹಾರ’ ಮತ್ತು ‘ನಿರ್ದಿಷ್ಟವಾಗಿ ಹೊಸದಿಲ್ಲಿಯ ಸಂತ ರಾಂಪಾಲ್ ಅವರ ಧಾರ್ಮಿಕ ಕ್ರಮ, ನಗರ ಧರ್ಮ’ (addressing issues of caste, religion, and social mobility among the Billavas, and another focusing on urban religion, specifically the religious order of Sant Rampal in Delhi) ಎಂಬ ಎರಡು ವಿಷಯಗಳಲ್ಲಿ ಸಂಶೋಧನಾತ್ಮಕ ಅಧ್ಯಯನ ನಡೆಸುತ್ತಿರುವ ಡಾ.ಮುಕೇಶ್ ತಮ್ಮ ಸಂಶೋಧನಾ ಅಧ್ಯಯನಕ್ಕಾಗಿ ದ.ಕ. ಜಿಲ್ಲೆಯ ಭೇಟಿಯಲ್ಲಿದ್ದು, ಬಿಲ್ಲವರ ಸ್ಥಿತಿಗತಿಗಳ ಬಗ್ಗೆ ಜಿಲ್ಲಾದ್ಯಂತ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಎರಡು ತಿಂಗಳ ಅವಧಿಗಾಗಿ ದ.ಕ. ಜಿಲ್ಲೆಯ ಭೇಟಿಯಲ್ಲಿರುವ ಡಾ.ಮುಕೇಶ್‌ರ ಸಂಶೋಧನಾ ಅಧ್ಯಯನದ ಬಗ್ಗೆ ‘ವಾರ್ತಾಭಾರತಿ’ ಸಂದರ್ಶನ ನಡೆಸಿದಾಗ ಅವರು ಈವರೆಗಿನ ತಮ್ಮ ಅಧ್ಯಯನದ ಕುರಿತಂತೆ ಮಾಹಿತಿಗಳನ್ನು ಹಂಚಿಕೊಂಡರು.
ತಮ್ಮ ಪ್ರಸಕ್ತ ಸಂಶೋಧನಾ ಅಧ್ಯಯನದ ವಿಷಯ ಮತ್ತು ನೀವು ಈವರೆಗೆ ಕಲೆ ಹಾಕಿರುವ ಪ್ರಮುಖ ಅಂಶಗಳೇನು ?
ಅಂದಾಜು ೧೮೪೦ರ ಅವಧಿಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲದೆ ಶೈಕ್ಷಣಿಕವಾಗಿ ಹಿಂದುಳಿದಿದ್ದ ಬಿಲ್ಲವ ಸಮುದಾಯ ಬಾಸೆಲ್ ಮಿಶನ್‌ನಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವತ್ತ ಆಕರ್ಷಿತವಾಗಿತ್ತು ಎನ್ನುವುದು ವಾಸ್ತವ. ಇದೇ ವೇಳೆ ಬ್ರಹ್ಮ ಸಮಾಜದ ಮೂಲಕವೂ ಸಾಕಷ್ಟು ಪರಿವರ್ತನೆಗಳು ಆರಂಭವಾಗಿದ್ದವು. ನೆರೆಯ ಕೇರಳದಲ್ಲಿ ಅದ್ವೈತ ಸಿದ್ಧಾಂತದ ಮೇಲೆ ನಂಬಿಕೆ ಇರಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳು ವಿವಿಧ ಪಂಗಡಗಳಾಗಿ ಹರಿದು ಹಂಚಿ ಹೋಗಿದ್ದ ಬಿಲ್ಲವ ಸಮುದಾಯವನ್ನು ಒಗ್ಗೂಡಿಸುವ ಕಾರ್ಯ ಆರಂಭಿಸಿದ್ದರು.
ಒಂದೇ ಜಾತಿ ಒಂದೇ ಧರ್ಮ, ಒಂದೇ ದೇವರ ಮೇಲೆ ನಂಬಿಕೆ ಇರಿಸಿದ್ದ ನಾರಾಯಣಗುರುಗಳು ಬಿಲ್ಲವರಿಗೆ ಪ್ರತ್ಯೇಕ ದೇವಾಲಯ ಸ್ಥಾಪನೆಯ ಜತೆಗೆ ಶಿಕ್ಷಣಕ್ಕೆ ಒತ್ತು ನೀಡಿ ಚಳವಳಿ ಆರಂಭಿಸಿದ್ದರು. ಇದರಿಂದ ಪ್ರಭಾವಿತರಾದ ಇಲ್ಲಿನ ಬಿಲ್ಲವ ಸಮುದಾಯದ ಹಿರಿಯರು ಅವರನ್ನು ಇಲ್ಲಿಗೆ ಕರೆಸಿ ಕುದ್ರೋಳಿಯಲ್ಲಿ ದೇವಾಲಯ ಸ್ಥಾಪನೆಗೆ ನಾಂದಿ ಹಾಡಿದರು. ಸಮಾಜದಲ್ಲಿ ಸಮಾನತೆ ಬೇಕಾದರೆ ಯಾವುದಕ್ಕೆ ನಿರಾಕರಣೆಯಾಗುತ್ತದೋ ಅದಕ್ಕೆ ಅವಕಾಶ ಸಿಗಬೇಕು ಎಂಬುದು ನಾರಾಯಣಗುರುಗಳ ಆಶಯವಾಗಿತ್ತ್ತು. ಅದಕ್ಕಾಗಿಯೇ ಬಿಲ್ಲವರಿಗೆ ನಿಷಿದ್ಧವಾಗಿದ್ದ ದೇವಾಲಯ ಸ್ಥಾಪನೆಗೆ ಆದ್ಯತೆ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ ಬಿಲ್ಲವ ಸಮುದಾಯ ನೇತೃತ್ವದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು ಎಂಬ ವಿಷಯಗಳನ್ನು ನಾನು ಕಳೆದ ನವೆಂಬರ್ ೧೫ರಿಂದ ಈವರೆಗೆ ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಸಿರುವ ಅಧ್ಯಯನದ ಮೂಲಕ ಮಾಹಿತಿ ಕಲೆ ಹಾಕಿದ್ದೇನೆ. ‘ಬಿಲ್ಲವರಲ್ಲಿ ಜಾತಿ, ಧರ್ಮ ಮತ್ತು ಸಾಮಾಜಿಕ ಚಲನಶೀಲತೆಯ ಸಮಸ್ಯೆಗಳು’ ವಿಚಾರದಲ್ಲಿ ಅಧ್ಯಯನ ನಡೆಸುತ್ತಿದ್ದೇನೆ. ಬ್ರಹ್ಮಶ್ರೀ ನಾರಾಯಣಗುರುಗಳ ಸಿದ್ಧಾಂತವನ್ನು ಅನುಸರಿಸಿಕೊಂಡು ಬಿಲ್ಲವರು ಯಾವ ಹಂತದಲ್ಲಿ ಪ್ರಗತಿ ಸಾಧಿಸಿದ್ದಾರೆನ್ನುವ ನಿಟ್ಟಿನಲ್ಲಿ ನನ್ನ ಅಧ್ಯಯನ ಸಾಗಲಿದೆ.
► ಮಂಗಳೂರಿನಲ್ಲಿ ಬಾಸೆಲ್ ಮಿಶನ್‌ನ ಕಾರ್ಯಚಟುವಟಿಕೆಗಳ ಬಗ್ಗೆ ನಿಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದೇನು ?
ಜರ್ಮನಿಯ ಹೇಡಲ್‌ಬರ್ಗ್ ಯುನಿವರ್ಸಿಟಿಯಲ್ಲಿ ನಾನು ಸಂಶೋಧನಾ ವಿದ್ಯಾರ್ಥಿಯಾಗಿದ್ದ ವೇಳೆ ಸ್ವಿಟ್ಸರ್‌ಲ್ಯಾಂಡ್‌ನ ಪ್ರೊಟೆಸ್ಟಂಟ್ ಜರ್ಮನಿ ಮಿಶನರಿಗಳ ಬಗ್ಗೆ ವಿಷಯದ ಅಧ್ಯಯನದ ಹಿನ್ನೆಲೆಯಲ್ಲಿ ಬಾಸೆಲ್ ಮಿಶನ್ ಬಗ್ಗೆ ಅರಿಯಲು 2021-22ನೇ ಸಾಲಿನಲ್ಲಿ ಮಂಗಳೂರಿಗೆ ಪ್ರಥಮ ಭೇಟಿ ನೀಡಿದ್ದೆ. ಆಗಿನಿಂದ ಪದೇ ಪದೇ ಭೇಟಿ ನೀಡುತ್ತಿದ್ದೇನೆ. ಜರ್ಮನಿಯ ಬಾಸೆಲ್ ಮಿಶನ್ ಎಂಬ ಮಿಶನರಿ ಮಂಗಳೂರಿನಲ್ಲಿ 19ನೇ ಶತಮಾನದ ಮಧ್ಯಭಾಗದಲ್ಲಿ ಕಾರ್ಯಚಟುವಟಿಕೆ ಆರಂಭಿಸಿದಾಗ ಈ ಮಿಶನರಿಯ ಪ್ರಮುಖ ಉದ್ದೇಶ ಮತಾಂತರವಾಗಿತ್ತು. ಬಾಸೆಲ್ ಮಿಶನ್‌ನಡಿ ದ.ಕ. ಜಿಲ್ಲೆಯಲ್ಲಿ ಮತಾಂತರಗೊಂಡವರು ಅತ್ಯಲ್ಪವಾಗಿದ್ದರೂ, ಹೆಚ್ಚಿ
ನವರು ಬಿಲ್ಲವರಾಗಿದ್ದರು. ಕ್ರೈಸ್ತ ಧರ್ಮ ಮತ್ತು ಯೇಸುಕ್ರಿಸ್ತನನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಮತಾಂತರಗೊಳ್ಳಬೇಕೆಂಬುದು ಈ ಮಿಶನರಿಯ ನಿಯಮವಾಗಿದ್ದ ಕಾರಣ, ಅವರು ಗುಣಮಟ್ಟಕ್ಕೆ ಒತ್ತು ನೀಡಿದ್ದರೇ ಹೊರತು ಪ್ರಮಾಣಕ್ಕೆ ಆದ್ಯತೆ ನೀಡಿರಲಿಲ್ಲ. ಮತಾಂತರಗೊಂಡವರು ಬಳಿಕ ದೈವಾರಾಧನೆ ಅಥವಾ ಶೇಂದಿ ಸೇವನೆ ಮಾಡುತ್ತಿದ್ದ್ದುದ್ದನ್ನು ಮಿಶನರಿಯವರು ಒಪ್ಪುತ್ತಿರಲಿಲ್ಲ. ಹೀಗಾಗಿ ಮತಾಂತರಗೊಳ್ಳುವುದು ಕಠಿಣ ಪ್ರಕ್ರಿಯೆ ಆಗಿತ್ತು. ಆ ಸಮಯದಲ್ಲಿ ಬಿಲ್ಲವರ ಪ್ರಮುಖ ವೃತ್ತಿ ಶೇಂದಿ ತೆಗೆಯುವುದು ಮತ್ತು ಮಾರಾಟ ಮಾಡುವುದಾಗಿತ್ತು. ಈ ಪ್ರಕ್ರಿಯೆಗೆ ವಸಾತುಶಾಹಿ ತೆರಿಗೆ ವಿಧಿಸಲಾಗಿತ್ತು. ಬ್ರಿಟಿಷರಿಂದ ಪರವಾನಿಗೆ ಹೊಂದಿದವರು ಮಾತ್ರವೇ ಶೇಂದಿ ತೆಗೆಯುವುದು ಅಥವಾ ಮಾರಾಟ ಮಾಡಲು ಅವಕಾಶ ನೀಡಲಾಯಿತು. ಮರಗಳನ್ನು ಕೂಡಾ ಅವರೇ ಗುರುತು ಮಾಡಿ ತೆರಿಗೆ ಹಾಕುತ್ತಿದ್ದರು. ಇದರಿಂದ ಬಿಲ್ಲವ ಸಮುದಾಯ ಕಂಗಾಲಾಗುವಂತಾಯಿತು. 1840ರ ಆಸುಪಾಸಿನಲ್ಲಿ ಸುಮಾರು 5,000 ರಷ್ಟು ಮಂದಿ ಮಿಶನರಿಗಳ ಬಳಿ ತೆರಳಿ, ‘ನಮ್ಮನ್ನು ನೀವು ಸ್ವೀಕರಿಸಿದರೆ, ನಾವು ಮಂದಿರ ಕಟ್ಟಿ ಅಲ್ಲಿ ಬೈಬಲ್ ಇಟ್ಟು ಪೂಜಿಸುತ್ತೇವೆ’ ಎಂದು ಹೇಳಿಕೊಂಡಿರುವ ಬಗ್ಗೆ ದಾಖಲೆಯೂ ಇದೆ. ಆದರೆ ಮಿಶನರಿಗಳಿಗೆ ಮತಾಂತರಗೊಳ್ಳುವವರ ಸಂಖ್ಯೆಯಲ್ಲಿ ಆಸಕ್ತಿ ಇರಲಿಲ್ಲ. ಮತಾಂತರಗೊಳ್ಳುವವರು ತಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟು, ಮನೆಯ ಸುತ್ತ ಕೃಷಿ ಮಾಡಿಕೊಂಡು ದೈವಾರಾಧನೆಯಿಂದ ದೂರವಾಗಿ ತಮ್ಮ ಉಡುಗೆ ತೊಡುಗೆಗಳಿಂದ ಇತರ ಧರ್ಮ ಅಥವಾ ಇತರ ಬಿಲ್ಲವರಿಗಿಂತ ಭಿನ್ನವಾಗಿರುವುದನ್ನು ತೋರ್ಪಡಿಸುವುದು ಮಿಶನರಿಗಳ ನಿಯಮವಾಗಿತ್ತು. ಮಿಶನರಿಗಳ ಈ ಪ್ರಕ್ರಿಯೆಯನ್ನು ಗಮನಿಸುವುದಾದರೆ, ಆರ್ಥಿಕವಾಗಿ ಸದೃಢತೆ, ಶಿಕ್ಷಣ ಪಡೆಯುವುದು ಕೂಡಾ ಮತಾಂತರದ ಪ್ರಮುಖ ಧ್ಯೇಯ ಎಂಬುದು ಕಂಡುಬರುತ್ತದೆ. ಹಾಗಾಗಿಯೇ ಬಾಸೆಲ್ ಮಿಶನ್ ಆರಂಭಿಸಿದ ಶಾಲೆಗಳಲ್ಲಿ ಎಲ್ಲರಿಗೂ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಯಿತು. 19ನೆ ಶತಮಾನದ ಆರಂಭದಲ್ಲಿ ಬಾಸೆಲ್ ಮಿಶನ್‌ನ ಶಾಲೆಗಳ ಮೂಲಕವೇ ಬಿಲ್ಲವರಿಗೂ ಶಿಕ್ಷಣದ ಅವಕಾಶ ಆರಂಭಗೊಂಡಿರುವುದು ಕಂಡುಬರುತ್ತದೆ. ಶಿಕ್ಷಣದ ಜತೆಗೆ ಬಾಸೆಲ್ ಮಿಶನ್ ತಂತ್ರಜ್ಞಾನಕ್ಕೂ ಆದ್ಯತೆ ನೀಡಿತ್ತು. ಅದರಿಂದಾಗಿಯೇ ಕನ್ನಡ ದಿನ ಪತ್ರಿಕೆ ‘ಮಂಗಳೂರು ಸಮಾಚಾರ್’ ಇಲ್ಲಿಂದಲೇ ಆರಂಭಗೊಂಡಿತ್ತು. ಜರ್ಮನಿ ತಂತ್ರಜ್ಞಾನದಿಂದ ಕೂಡಿದ ಹೆಂಚಿನ ಕಾರ್ಖಾನೆಗಳು ಇಲ್ಲಿ ಆರಂಭಗೊಂಡವು. ಈ ರೀತಿಯಾಗಿ 19ನೆ ಶತಮಾನದಲ್ಲಿ ದ.ಕ. ಜಿಲ್ಲೆಯಲ್ಲಿ ಸಂಭವಿಸಿದ ಈ ಕ್ರಾಂತಿಕಾರಕ ಬದಲಾವಣೆಗಳ ಸಂದರ್ಭ ಮತಾಂತರದಿಂದ ಹೊರಗುಳಿದವರು ಎಲ್ಲಿ ಹೋದರು ಎಂದು ಹುಡುಕಿದಾಗ ಅವರೆಲ್ಲಾ ನಾರಾಯಣಗುರುಗಳಿಂದ ಪ್ರೇರಿತರಾಗಿ ಬಿಲ್ಲವರಾಗಿಯೇ ಉಳಿದುಕೊಂಡಿರುವುದು ಕಂಡುಬರುತ್ತದೆ. ಆ ಸಮಯದಲ್ಲಿ ಆರ್ಥಿಕವಾಗಿ ಜರ್ಜರಿತವಾಗಿದ್ದ, ಸಾಮಾಜಿಕವಾಗಿ ತುಳಿತಕ್ಕೊಳಗಾಗಿ ಕ್ರೈಸ್ತ ಸಮುದಾಯಕ್ಕೆ ಮತಾಂತರಗೊಳ್ಳಬಹುದಾಗಿದ್ದ ಬಿಲ್ಲವ ಸಮುದಾಯವದವರು ನಾರಾಯಣಗುರುಗಳ ತತ್ವ ಸಿದ್ಧಾಂತಗಳಿಂದಾಗಿ ಧರ್ಮ ಪರಿವರ್ತನೆಗೊಳ್ಳದೆ ಹಿಂದೂಗಳಾಗಿ ಉಳಿಯಲು ಸಾಧ್ಯವಾಗಿದೆ ಎನ್ನುವುದು ದೃಢಗೊಳ್ಳುತ್ತದೆ. ನಾರಾಯಣಗುರುಗಳ ದೃಷ್ಟಿಕೋನ ಬಿಲ್ಲವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಢಗೊಳ್ಳುವಲ್ಲಿ ಸಹಕಾರಿಯಾಯಿತು. ಆ ಸಮಯದಲ್ಲಿ ಬಾಸೆಲ್ ಮಿಶನ್ ಮತಾಂತರದ ಉದ್ದೇಶ ಹೊಂದಿತ್ತಾದರೂ ಶಿಕ್ಷಣ, ತಂತ್ರಜ್ಞಾನಕ್ಕೆ ಅದು ಒತ್ತು ನೀಡಿದ್ದರ ಪರಿಣಾಮ ಹಾಗೂ ಈ ನಡುವೆ ಜಾಗತಿಕವಾಗಿ ಹಾಗೂ ರಾಷ್ಟ್ರೀಯವಾಗಿ ನಡೆದ ಕ್ರಾಂತಿಕಾರ, ವೈಜ್ಞಾನಿಕ ಬದಲಾವಣೆಗಳು ಕೂಡಾ ಸಮುದಾಯದ ಮೇಲೆ ಪರಿಣಾಮ ಬೀರಿವೆ.
► ಬಿಲ್ಲವ ಸಮುದಾಯ ದ.ಕ. ಜಿಲ್ಲೆಯಲ್ಲಿ ಸದೃಢವಾಗಿರುವುದಕ್ಕೆ ನಿಮ್ಮ ವ್ಯಾಖ್ಯಾನವೇನು ?
ದ.ಕ. ಜಿಲ್ಲೆಯಲ್ಲಿ ನಾರಾಯಣಗುರುಗಳ ಪ್ರೇರಣೆಯಿಂದ ಶಿಕ್ಷಣ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ಮಂದಿರಗಳು ಸ್ಥಾಪನೆಯಾದವು. ನಾರಾಯಣಗುರುಗಳಿಗೆ ಧರ್ಮಕ್ಕಿಂತ ಮಿಗಿಲಾಗಿ ಸಮುದಾಯವು ವಿದ್ಯೆ, ವೃತ್ತಿಯಿಂದ ಒಗ್ಗಟ್ಟಾಗುವುದು ಪ್ರಮುಖ ಗುರಿಯಾಗಿತ್ತು.
ಶಾಂತಿ, ಅಹಿಂಸೆಯ ಪ್ರತಿಪಾದಕರಾಗಿದ್ದ ನಾರಾಯಣ ಗುರುಗಳ ಈ ವಿಚಾರಧಾರೆಗಳು ದ.ಕ. ಜಿಲ್ಲೆಯಲ್ಲಿ ಬಿಲ್ಲವ ಸಮುದಾಯವನ್ನು ಒಗ್ಗೂಡಿಸುವಲ್ಲಿ ಸಹಕಾರಿಯಾಯಿತು. ನಂತರದ ಕಾಲಘಟ್ಟದಲ್ಲಿ ದೇಶದಲ್ಲಿಯೇ ಆರ್ಥಿಕ ಸ್ಥಿತ್ಯಂತರಗಳು ಕಂಡು ಬಂದಂತೆ ಇಲ್ಲಿನ ಬಿಲ್ಲವ ಸಮುದಾಯದ ಯುವಕರು ಮುಂಬೈ, ಗಲ್ಫ್ ದೇಶಗಳಿಗೆ ವಲಸೆ ಹೋಗಿ ಆರ್ಥಿಕವಾಗಿ ಸಬಲತೆಯನ್ನು ಪಡೆದುಕೊಳ್ಳಲಾರಂಭಿಸಿದರು. ಕೋಟಿ ಚೆನ್ನಯ ಗರಡಿಗಳು ಸಬಲತೆಯನ್ನು ಪಡೆದುಕೊಳ್ಳಲಾರಂಭಿಸಿದವು. ಆರ್ಥಿಕ ಸ್ಥಿತಿಗತಿ ಬದಲಾಗದೆ ಸಾಮಾಜಿಕ ಬದಲಾವಣೆ ಅಸಾಧ್ಯವಾಗಿದ್ದ ಕಾರಣ, ನಿಧಾನಗತಿಯ ಆರ್ಥಿಕ ಸದೃಢತೆ ದ.ಕ. ಜಿಲ್ಲೆಯ ಬಿಲ್ಲವ ಸಮುದಾಯ ಪ್ರಸಕ್ತ ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಲಿಷ್ಠಗೊಳ್ಳುತ್ತ್ತಿದೆ. ಔದ್ಯೋಗಿಕ, ರಾಜಕೀಯವಾಗಿಯೂ ತನ್ನ ನೆಲೆಯನ್ನು ಕಂಡುಕೊಂಡಿದೆ. ಬಿಲ್ಲವ ಸಮುದಾಯದ ವಿವಿಧ ಯೂನಿಯನ್‌ಗಳು, ಯುವವಾಹಿನಿ, ದಾಮೋದರ ಸುವರ್ಣ ಚಾರಿಟೆಬಲ್ ಟ್ರಸ್ಟ್, ಗುರುಬೆಳದಿಂಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇಂದು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಮುದಾಯವನ್ನು ಮೇಲೆತ್ತುವಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. 19ನೇ ಶತಮಾನದ ಆರಂಭದಲ್ಲಿ ಹಾಗೂ ಈಗಿನ ಬಿಲ್ಲವ ಸಮುದಾಯಗಳ ಜೀವನ ಹಾಗೂ ಸ್ಥಿತಿಗತಿಗಳಲ್ಲಿ ಸಾಕಷ್ಟು ಅಂತರ- ಬದಲಾವಣೆಗಳನ್ನ್ನು ಕಾಣಬಹುದಾಗಿದ್ದು, ಇದಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರೇರಣೆಯೇ ಪ್ರಮುಖ ಕಾರಣವೆನ್ನಬಹುದು.
► ವಿವಿಧ ಜಾತಿ, ಸಮುದಾಯಗಳ ಬಗ್ಗೆ ಅಧ್ಯಯನ ನಡೆಸಿರುವ ತಾವು ಬಿಲ್ಲವ ಸಮುದಾಯವನ್ನು ಹೇಗೆ ವಿಶ್ಲೇಷಿಸುವಿರಿ ?
ಬಿಲ್ಲವರು ನಿಷ್ಠುರವಾದಿಗಳು ಮತ್ತು ಜಾಗರೂಕರು. ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿ ಈ ಸಮುದಾಯ ಇತರ ಸಮುದಾಯಗಳಿಂದ ಹೆಚ್ಚು ಬದ್ಧತೆಯುಳ್ಳವರಾಗಿದ್ದಾರೆ. ಪ್ರಸಕ್ತ ರಾಜಕೀಯವಾಗಿ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ, ನಾರಾಯಣಗುರುಗಳ ಸಿದ್ಧಾಂತಗಳು, ಅವರ ಬೋಧನೆಗಳಿಗೆ ಮಹತ್ವ ನೀಡುತ್ತಾರೆ. ತಮ್ಮ ಸಮುದಾಯದ ಪ್ರಗತಿ, ಯಶಸ್ಸಿನ ಬಗ್ಗೆ ಸಮುದಾಯದ ಜನರು ಬದ್ಧತೆಯನ್ನು ಹೊಂದಿದವರಾಗಿದ್ದಾರೆ. ಸಮುದಾಯದ ಸಬಲೀಕರಣಕ್ಕಾಗಿ ನಾರಾಯಣಗುರುಗಳ ತತ್ವವನ್ನು ಅನುಸರಿಸುವವರಾಗಿದ್ದಾರೆ. ಒಂದಿಷ್ಟು ಸವಾಲು, ಭಿನ್ನಮತಗಳ ಹೊರತಾಗಿಯೂ ಬಿಲ್ಲವ ಸಮುದಾಯದಲ್ಲಿ ತಮ್ಮ ಜನರ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವಿದ್ದು, ಇದು ಬಹು ಮುಖ್ಯವಾಗಿದೆ.
ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಸಮುದಾಯದ ವಿವಿಧ ಸಂಘಟನೆ ಹಾಗೂ ಟ್ರಸ್ಟ್‌ಗಳು ಉಚಿತ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನದ ಮೂಲಕ ಪ್ರೋತ್ಸಾಹ ನೀಡುತ್ತಿವೆ. ಸಂಕಷ್ಟದ ಸಮಯದಿಂದ ಸಮುದಾಯ ಬಹುತೇಕವಾಗಿ ಹೊರಬಂದಿದ್ದು, ಇದೀಗ ತಮ್ಮ ಸಮುದಾಯದ ಜತೆಗೆ ಇತರ ಸಮುದಾಯಗಳನ್ನೂ ಮೇಲೆತ್ತುವ ಕಾರ್ಯ ಆಗಬೇಕು ಎಂಬ ಭಾವನೆ ಸಮುದಾಯದ ನಾಯಕರಲ್ಲಿ ವ್ಯಕ್ತವಾಗಿರುವುದು ಸಮುದಾಯದ ಸಬಲೀಕರಣದ ಬಹುದೊಡ್ಡ ಆಯಾಮ ಎನ್ನಬಹುದು. ತಮ್ಮ ಸಮುದಾಯದ ಸಮಸ್ಯೆಗಳನ್ನು ನಿವಾರಿಸಿಕೊಂಡು ಇತರರ ಬಗ್ಗೆ ಯೋಚಿಸುವುದು ಸಾಮಾಜಿಕ ಬದಲಾವಣೆಯ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ. ಇಂತಹ ಬೆಳವಣಿಗೆಗಳು ಜಿಲ್ಲೆಯ ಇತರ ಎಲ್ಲಾ ಸಣ್ಣ ಪುಟ್ಟ ಅಥವಾ ಬಲಿಷ್ಠ ಸಮುದಾಯಗಳಿಂದ ನಡೆದಾಗ ಸಮಾನತೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಕ ಜಾತಿ, ಧರ್ಮಗಳನ್ನು ಮೀರಿ ನಾವು ಮೇಲೇರೀಲು ಸಾಧ್ಯಾವಾಗಲಿದೆ. ಈ ಕಾರಣಕ್ಕಾಗಿಯೇ ನಾರಾಯಣಗುರುಗಳ ತತ್ವಗಳು ಮಹತ್ವದ್ದಾಗಿವೆ.
► ದ.ಕ. ಜಿಲ್ಲೆಯಲ್ಲಿ ನಿಮಗೆ ಆಕರ್ಷಿತವಾದ ವಿಷಯಗಳು ?
ಬಾಸೆಲ್ ಮಿಶನ್‌ನ ಅಧ್ಯಯನಕ್ಕೆ ಸಂಬಂಧಿಸಿ ನಾನು 2021-22ನೇ ಸಾಲಿನಿಂದಲೂ ಮಂಗಳೂರಿಗೆ ಆಗಾಗ ಭೇಟಿ ನೀಡುತ್ತಿದ್ದೇನೆ. 2023ರಲ್ಲಿಯೂ ನಾನು ಬಂದಿದ್ದು, ಇದೀಗ 2024ರಲ್ಲಿ ಕಳೆದ ನವೆಂಬರ್ 15ರಿಂದ 2 ತಿಂಗಳ ಕಾಲ ಇಲ್ಲಿ ಸಂಶೋದನಾ ಅಧ್ಯಯನ ನಡೆಸುತ್ತಿದ್ದೇನೆ. ಬಿಲ್ಲವ ಸಮುದಾಯದ ಸಂಘಟನೆಗಳು, ನಾಯಕರ ಜತೆ ಮಾತುಕತೆ ನಡೆಸುತ್ತಿದ್ದೇನೆ. ಹಳ್ಳಿ, ಗ್ರಾಮಗಳಿಗೂ ತೆರಳುತ್ತಿದ್ದೇನೆ. ಜನವರಿ 15ರವರೆಗೆ ಇರಲಿದ್ದೇನೆ. ಬಳಿಕ ಜುರಿಕ್ ಯುನಿವರ್ಸಿಟಿಯಲ್ಲಿ ತರಗತಿಗಳು ಆರಂಭವಾಗಲಿದೆ. ದಸರಾ ಸಂದರ್ಭ ಮತ್ತೆ ಭೇಟಿ ನೀಡಲಿದ್ದೇನೆ. ಬಳಿಕ 2026ರ ಜನವರಿ, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಬಂದು ಭೂತಾರಾಧನೆಯ ಬಗ್ಗೆಯೂ ತಿಳಿಯಲಿದ್ದೇನೆ. ದ.ಕ. ಜಿಲ್ಲೆಯಲ್ಲಿ ಭೂತಾರಾಧನೆ ಬಹಳ ಮಹತ್ವವನ್ನು ಪಡೆದುಕೊಂಡಿದ್ದು, ಅದರ ಬಗ್ಗೆ ತಿಳಿಯುವ ಆಸಕ್ತಿ ಬಹಳಷ್ಟಿದೆ. ಸದ್ಯ, ನಾರಾಯಣಗುರುಗಳ ಧರ್ಮದ ಬಗೆಗಿನ ವ್ಯಾಖ್ಯಾನವನ್ನು, ಅವರ ತತ್ವ ಆದರ್ಶಗಳನ್ನು ಸಮುದಾಯ ಎಷ್ಟರ ಮಟ್ಟಿಗೆ ಅನುಸರಿಸುತ್ತಿದೆ ಎನ್ನುವುದು ನನ್ನ ಅಧ್ಯಯನದ ಪ್ರಮುಖ ಅಂಶವಾಗಿದೆ. ಈ ಅನುಸರಣೆಯಿಂದ ಯಾವ ರೀತಿಯಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿವೆ ಎಂಬ ಬಗ್ಗೆಯೂ ನನ್ನ ಅಧ್ಯಯನ ನಡೆಯಲಿದೆ.
► ಬಿಲ್ಲವ ಸಮುದಾಯ ಇನ್ನಷ್ಟು ಸಬಲತೆ ಪಡೆಯುವಲ್ಲಿ ನಿಮ್ಮ ಸಲಹೆಗಳೇನು?
ಬಿಲ್ಲವ ಸಮುದಾಯದಲ್ಲಿ ಆರ್ಥಿಕವಾಗಿ ಸದೃಢರಾಗಿರುವವರು, ಶೈಕ್ಷಣಿಕವಾಗಿ ಮುಂದುವರಿದವರು ಈಗಾಗಲೇ ವಿವಿಧ ಟ್ರಸ್ಟ್, ಸಂಘಸಂಸ್ಥೆಗಳ ಮೂಲಕ ಸಾಕಷ್ಟು ರೀತಿಯಲ್ಲಿ ಸಮಾಜಕ್ಕೆ ಸಹಕಾರ, ಪ್ರೋತ್ಸಾಹ ನೀಡಿ ಸಬಲೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ಆದಲ್ಲಿ ಗ್ರಾಮೀಣ ಪ್ರದೇಶದ ಸಮುದಾಯದ ಎಲ್ಲರನ್ನೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಜತೆ, ಇತರ ಸಣ್ಣಪುಟ್ಟ ಹಿಂದುಳಿದ ಸಮುದಾಯಗಳನ್ನೂ ಮೇಲಕ್ಕೆತ್ತಲು ಬಿಲ್ಲವ ಸಮುದಾಯದಿಂದ ಸಾಧ್ಯವಾಗಲಿದೆ. ಈ ಕ್ಷಮತೆ ಬಿಲ್ಲವ ಸಮುದಾಯದಲ್ಲಿದೆ.
ಮಂಗಳೂರು ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು ನೋಡಿದಂತೆ ಮಂಗಳೂರು ಮಿನಿ ವಿಶ್ವವಾಗಿ ಗೋಚರಿಸಿದೆ. ಇಲ್ಲಿ ವಿಶ್ವದ ಎಲ್ಲಾ ಪ್ರಮುಖ ಧರ್ಮಗಳ ಸಂಪ್ರದಾಯಗಳನ್ನು ಅನುಸರಿಸುವ ಹಿಂದೂ, ಕ್ರೈಸ್ತರು, ಜೈನರು, ಬೌದ್ಧರು, ನಾತಪಂಥದವರು, ಮುಸ್ಲಿಮರಿದ್ದಾರೆ. ಅದಕ್ಕಿಂತಲೂ ಇಲ್ಲಿನ ವಿಶೇಷತೆ ದೈವಾರಾಧನೆ. ತಮ್ಮ ಪೂರ್ವಜರನ್ನು ದೇವರ ರೂಪದಲ್ಲಿ ಪೂಜಿಸುವ ವಿಶೇಷ ಕ್ರಮ ಇಲ್ಲಿ ಕಂಡಿದ್ದೇನೆ. ಮಂಗಳೂರು ವ್ಯಾವಹಾರಿಕವಾಗಿಯೂ ಗಲ್ಫ್ , ಯೂರೋಪ್ ಹಾಗೂ ಇತರ ದೇಶಗಳ ಜತೆ ನೇರವಾಗಿ ಸಂರ್ಪಕವನ್ನು ಹೊಂದಿರುವುವುದು ಕೂಡಾ ಮಂಗಳೂರಿನಲ್ಲಿ ವೈವಿಧ್ಯಯ ಸಂಸ್ಕೃತಿ ಪ್ರತಿಬಿಂಬಿಸಲು ಕಾರಣವಾಗಿದೆ. ಮಂಗಳೂರು ಕಾಸ್ಮೋಪಾಲಿಟನ್ ನಗರವಾಗಿ ರೂಪುಗೊಂಡಿದೆ. ಹಾಗಾಗಿ ಇಲ್ಲಿ ಕೆಲವೊಂದು ಸವಾಲುಗಳೂ ಇವೆ. ವಿವಿಧ ಧರ್ಮ, ಜಾತಿಗಳನ್ನು ಅನುಸರಿಸುವ ಜನರಿರುವ ಕಾರಣ ವ್ಯತ್ಯಾಸಗಳಾಗುವುದು ಸಹಜ. ಇಲ್ಲಿ ಕೆಲವೊಂದು ಘರ್ಷಣೆ, ಹಿಂಸಾತ್ಮಕ ಪ್ರಕ್ರಿಯೆಗಳು ನಡೆದರೂ ಅದು ಸ್ವಲ್ಪ ಸಮಯದಲ್ಲೇ ಬಗೆಹರಿಯುತ್ತದೆ. ಅದಕ್ಕೆ ಕಾರಣ ಇಲ್ಲಿನ ಜನರು ಎಲ್ಲರನ್ನು ಒಳಗೊಂಡು ಬದುಕುವ ಮನಸ್ಥಿತಿಯವರು. ಹಬ್ಬ, ಉತ್ಸವಗಳಲ್ಲಿ ಪರಸ್ಪರ ಭಾಗಿಯಾಗುವುದು ಮಾತ್ರವಲ್ಲ, ವ್ಯಾಪಾರ- ವಹಿವಾಟುಗಳಲ್ಲಿಯೂ ಜತೆಯಾಗಿರುತ್ತಾರೆ. ಅದಕ್ಕಾಗಿಯೇ ನಾನಾ ರೀತಿಯ ಮತೀಯ ಸವಾಲುಗಳ ಹೊರತಾಗಿಯೂ ಮಂಗಳೂರು ವಿವಿಧತೆಯಲ್ಲಿ ಏಕತೆಯಿಂದ ಕೂಡಿದ ವಿವಿಧ ಧರ್ಮಗಳ ನಡುವೆಯೂ ಸಹಬಾಳ್ವೆ ಅಥವಾ ಬಂಧುತ್ವದ ಜೀವನ, ಕಾಸ್ಮೋಪಾಲಿಟನ್ ನಗರಕ್ಕೆ ಮಾದರಿಯಾಗಬಲ್ಲ ನಗರವಾಗಿದೆ.
ಡಾ.ಮುಖೇಶ್ ಕುಮಾರ್ ಪರಿಚಯ
► ಪ್ರಸಕ್ತ ಸ್ವಿಟ್ಸರ್‌ಲ್ಯಾಂಡ್ ಜುರಿಕ್ ಯುನಿವರ್ಸಿಟಿಯಲ್ಲಿ ಸೀನಿಯರ್ ಫೆಲೋ ಅಸಿಸ್ಟೆಂಟ್.
► ಪೂರ್ವ ರಾಜಸ್ಥಾನದ ಭರತ್‌ಪುರ್ ಜಿಲ್ಲೆಯಲ್ಲಿ ಜನನ
► ದಿಲ್ಲಿ ಯುನಿರ್ವಸಿಟಿಯಲ್ಲಿ ಬಿಎ, ಎಂಎ ಮತ್ತು ಎಂಫಿಲ್
► 2019 ರಲ್ಲಿ ಸಿಡ್ನಿ ಯುನಿವರ್ಸಿಟಿಯಿಂದ ಪಿಎಚ್‌ಡಿ
► ಪಿಎಚ್‌ಡಿ ಬಳಿಕ ಅವರ ಸಂಶೋಧನಾ ಚಟುವಟಿಕೆಗಳಿಗೆ 2019-21ರವರೆಗೆ ಅಲೆಕ್ಸಾಂಡನ್ ವಾನ್ ಹಮ್ಬೋಲ್ಡ್ಟ್ ಫೌಂಡೇಶನ್, 2021-23ರವರೆಗೆ ಇಟಿಎಚ್ ಜುರಿಕ್ ಪೋಸ್ಟ್ ಡಾಕ್ಟರಲ್ ರಿಸರ್ಚ್ ಫೆಲೋಶಿಪ್‌ಗೆ ಪ್ರತಿಷ್ಠಿತ ಅನುದಾನ ಮತ್ತು ಫೆಲೋಶಿಪ್ ಪಡೆದಿದ್ದಾರೆ. ಇದೀಗ 2024-28ರವರೆಗೆ ಸ್ವಿಸ್ ನ್ಯಾಷನಲ್ ಸೈನ್ಸಸ್ ಫೌಂಡೇಶನ್‌ನಿಂದ ಅನುದಾನ ಹಾಗೂ ಫೆಲೋಶಿಪ್ ಪಡೆದುಕೊಂಡು ಸಂಶೋಧನಾ ಅಧ್ಯಯನ ಆರಂಭಿಸಿದ್ದಾರೆ.
► ಅವರ ಪ್ರಥಮ ಕೃತಿ ‘ಬಿಟ್ವೀನ್ ಮುಸ್ಲಿಮ್ ಪೀರ್ ಆ್ಯಂಡ್ ಹಿಂದೂ ಸೈಂಟ್; ಲಾಲ್‌ದಾಸ್ ಆ್ಯಂಡ್ ಡಿವೋಶನಲ್ ಕಲ್ಚರ್ ಇನ್ ನಾರ್ತ್ ಇಂಡಿಯಾ (2024) ‘ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್‌ನಿಂದ ಪ್ರಕಟಗೊಂಡಿದೆ.
► ಲೇಡೆನ್ ಯುನಿವರ್ಸಿಟಿ ಪ್ರೆಸ್ ಜತೆಗಿನ ಒಪ್ಪಂದದೊಂದಿಗೆ ಬಾಸೆಲ್ ಮಿಶನ್‌ನ ಸಹ ಸಂಪಾದಿತ ಸಂಪುಟದ ಜತೆಗೆ ‘ಬಿಲ್ಲವರಲ್ಲಿ ಜಾತಿ, ಧರ್ಮ ಮತ್ತು ಸಾಮಾಜಿಕ ಚಲನಶೀಲತೆಯ ಸಮಸ್ಯೆಗಳ ಪರಿಹಾರ’ ಮತ್ತು ‘ನಿರ್ದಿಷ್ಟವಾಗಿ ದಿಲ್ಲಿಯ ಸಂತ ರಾಂಪಾಲ್ ಅವರ ಧಾರ್ಮಿಕ ಕ್ರಮ, ನಗರ ಧರ್ಮ’(addressing issues of caste, religion, and social mobility among the Billavas, and another focusing on urban religion, specifically the religious order of Sant Rampal in Delhi.) ಎಂಬ ಎರಡು ವಿಷಯಗಳಲ್ಲಿ ಪ್ರಸಕ್ತ ಸಂಶೋಧನಾ ಅಧ್ಯಯನ ನಡೆಸುತ್ತಿದ್ದಾರೆ.