ಮುಡಾ ಪ್ರಕರಣದಲ್ಲಿ ಈಡಿ ಲೋಕಾಯುಕ್ತ ಪೊಲೀಸರಿಗೆ ಕಳಿಸಿದ ʼಸಂವಹನʼವು ನ್ಯಾಯಾಂಗದ ಮೇಲೆ ಒತ್ತಡ ಹಾಕುವ ಪ್ರಯತ್ನ
✍️ ವೇಣುಗೋಪಾಲ್
ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈಡಿ) ಸಂಸ್ಥೆಯು ನಿನ್ನೆ ತಾನೆ ʼಸಂವಹನʼವೊಂದನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ರವಾನಿಸಿದೆ. ಇದರ ಹಿಂದಿನ ಉದ್ದೇಶ ತಿಳಿಯುವುದು ಅಗತ್ಯ.
ಮೈಸೂರಿನ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯದ ಅದೇಶದ ಅನುಸಾರ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ತನಿಖಾ ವರದಿಯನ್ನು ಸಲ್ಲಿಸಲು ನ್ಯಾಯಾಲಯವು 3 ತಿಂಗಳ ಕಾಲಾವಕಾಶ ನೀಡಿದೆ. ಈ ನಡುವೆ ಈಡಿ ಕೂಡ ತನಿಖೆ ಕೈಗೊಂಡಿದೆ. PMLA ಕಾಯ್ದೆಯ ಪ್ರಕಾರ ಈಡಿ ಸ್ವತಂತ್ರ ತನಿಖಾ ಸಂಸ್ಥೆ ಅಲ್ಲ. ಅಂದರೆ ಈಡಿಗೆ ತಾನೆ ಎಫ್ಐಆರ್ ಹಾಕಿ ತನಿಖೆ ಮಾಡುವ ಅಧಿಕಾರ ಇಲ್ಲ. ದೇಶದ ಯಾವುದಾದರೊಂದು ಪೊಲೀಸ್ ಠಾಣೆಯು ಅದಾಗಲೇ ಎಫ್ಐಆರ್ ದಾಖಲಿಸಿದ್ದು, ಅದಲ್ಲಿ PMLAಗೆ ಸಂಬಂಧಿಸಿದ ಅಪರಾಧ ಉಲ್ಲೇಖಿಸಿದ್ದರೆ ಆಗ ಅಂತಹ ತನಿಖೆಯನ್ನು ತಾನು ಕೂಡ ಮಾಡುವ ಅಧಿಕಾರ ಈಡಿಗೆ ಇದೆ. ಆದರೆ ಈ ತನಿಖೆ ಮೂಲತಃ ಪೊಲೀಸರಂತೆ ಅಲ್ಲ. ಈಡಿಯು ಕೇಂದ್ರದ ಆರ್ಥಿಕ ಇಲಾಖೆಯ ಅಡಿಯಲ್ಲಿ ಬರುತ್ತಿದ್ದು, ದೇಶದ ಆರ್ಥಿಕ ನೀತಿಯನ್ನು ಬುಡಮೇಲು ಮಾಡುವಂತಹ ಪ್ರಕರಣಗಳು ಅಂದರೆ ಹವಾಲ, ಅಂತರಾಷ್ಟ್ರೀಯ ಆರ್ಥಿಕ ಅಪರಾಧ, ಡ್ರಗ್ ಮಾಫಿಯಾ, ಅಂಡರ್ ವರ್ಲ್ಡ್ ಮಾಫಿಯಾ, ಶೆಲ್ ಕಂಪೆನಿಗಳ ಅಕ್ರಮ ಇತ್ಯಾದಿ ಗಂಭೀರ ಪ್ರಕರಣಗಳನ್ನು ತನಿಖೆ ಮಾಡಿ ದೇಶದ ಆರ್ಥಿಕ ಸ್ಥಿತಿಯನ್ನು ಕಾಪಾಡುವ ಸಲುವಾಗಿ ಈಡಿ ಇರುತ್ತದೆ.
►ಯಾವ ಪ್ರಕರಣಗಳನ್ನು ಈಡಿ ತನಿಖೆ ಮಾಡಬಹುದೆಂದು PMLA ಕಾಯ್ದೆ ಹೇಳುತ್ತದೆ?
ಭ್ರಷ್ಟಾಚಾರ ವಿರೋಧ ಪ್ರಕರಣವೂ ಇರುವುದರಿಂದ ಈಡಿಯು ಮುಡಾ ಅವ್ಯವಹಾರ ತನಿಖೆಯನ್ನು ಕೈಗೊಂಡಿದೆ. ಆದರೆ ಇದರಲ್ಲಿ ಆಶ್ಚರ್ಯ ಮಾಡಿಸುವ ಸಂಗತಿಯೆಂದರೆ ನಮ್ಮ ದೇಶದಲ್ಲಿ ಸುಮಾರು 25 ಸಾವಿರ ಶೆಲ್ ಕಂಪೆನಿಗಳು ವ್ಯವಹರಿಸುತ್ತದೆ ಎಂದು ಲೋಕಸಭೆಯಲ್ಲಿ ತಿಳಿಸಲಾಗಿದೆ. ಡ್ರಗ್ಸ್ ಮಾಫಿಯಾ ದಂಧೆ, ಗಂಭೀರ ಪ್ರಕರಣಗಳು ಬಹಳಷ್ಟು ನೋಂದಾಯಿಸಲ್ಪಟ್ಟಿದೆ. ಸಾವಿರಾರು ಭ್ರಷ್ಟಾಚಾರ ಪ್ರಕರಣಗಳ ಕುರಿತು ಎಫ್ ಐ ಆರ್ ದಾಖಲಿಸಲ್ಪಟ್ಟಿದೆ.
ಹೀಗಿರುವಾಗ ಇಂತಹ ಗಂಭೀರ ಪ್ರರಕಣಗಳ ತನಿಖೆಗಳನ್ನು ಬಿಟ್ಟು ಒಂದು ಜಿಲ್ಲಾ ಮಟ್ಟದ ಸಂಸ್ಥೆಯಲ್ಲಿ(ಮುಡಾ) ನಡೆದಿರಬಹುದಾದ ಅಕ್ರಮದ ತನಿಖೆಗೆ ಈಡಿ ಬಂದಿರುವುದು ಹೇಗೆ? ಇಷ್ಟಕ್ಕೂ ಈಡಿಗೆ ರಾಜ್ಯ ಪೊಲೀಸರಿಂದ ವರದಿಯಾಗದೇ ಈಡಿಯು ಸುಮೊಟೊ ಪ್ರಕರಣ ದಾಖಲಿಸಿದೆ. ರಾಷ್ಟ್ರದಲ್ಲಿ ಸರಿಸುಮಾರು 800 ಜಿಲ್ಲೆಗಳಿದ್ದು, ಆಯಾ ಜಿಲ್ಲಾ ಮಟ್ಟದ ಸಂಸ್ಥೆಗಳ ಅಕ್ರಮದ ಬಗ್ಗೆ ತನಿಖೆ ಮಾಡದೇ ಈ ಪ್ರಕರಣಕ್ಕೆ ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಈಡಿಯಲ್ಲಿ ಪೊಲೀಸ್ ಇಲಾಖೆಯಂತೆ ಬಹಳಷ್ಟು ಅಧಿಕಾರಿಗಳು ಇರುವುದಿಲ್ಲ. ಇಡೀ ರಾಷ್ಟ್ರದಲ್ಲಿ ಕೆಲವೇ ವಲಯ ಕಚೇರಿಗಳಿವೆಯಷ್ಟೆ.
“Show me accused. I will tell you the crime” ಎಂಬಂತೆ ಈಡಿ ನಡೆಯುತ್ತಿರುವುದು ಸ್ಪಷ್ಟ. ಇಲ್ಲಿ ಈಡಿ ಆರೋಪಕ್ಕಿಂತ ಆರೋಪಿಯೇ ಮುಖ್ಯವಾದಂತಿದೆ.
ಈ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ಈಡಿ ಕಳಿಸಿರುವ ವರದಿಯನ್ನು ಗಮನಿಸಬೇಕು. ಈ ವರದಿಯನ್ನು ಕಳಿಸಿರುವ ಸಮಯ ಮತ್ತದರ ಬಹಿರಂಗವಾದ ಪರಿಯು ಈಡಿಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಹುಟ್ಟಿಸುತ್ತದೆ. ಈ ತಿಂಗಳ 10 ರಂದು ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಗ್ಗೆ ವಾದ ನಡೆಯುತ್ತಿರುವುದರಿಂದ ಈ ಪ್ರಕರಣದಲ್ಲಿ ಈವರೆಗಿನ ತನಿಖಾ ವರದಿಯನ್ನು ಸಲ್ಲಿಸುವಂತೆ ಈಗಾಗಲೇ ಲೋಕಾಯುಕ್ತ ಪೊಲೀಸರಿಗೆ ಉಚ್ಛ ನ್ಯಾಯಾಲಯ ಆದೇಶ ನೀಡಿದೆ. ಇಂತಹ ಸಮಯದಲ್ಲಿ ಈಡಿಯು ಸಂವಹನವನ್ನು ಲೋಕಾಯುಕ್ತಕ್ಕೆ ಕಳುಹಿಸಿಕೊಟ್ಟಿದೆ.
ವಾಸ್ತವಿಕವಾಗಿ ಈಡಿ ಇಂತಹ ವರದಿಯನ್ನು ಸಲ್ಲಿಸಬೇಕಿರುವುದು ತನ್ನ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯಕ್ಕೆ. ಲೋಕಾಯುಕ್ತ ಪೊಲೀಸ್ ತನಿಖೆಯು ಸ್ವತಂತ್ರವಾಗಿದ್ದು ಅದು ಈಡಿಯಿಂದ ಯಾವುದೇ ಮಾಹಿತಿಯ ವಿನಿಮಯಕ್ಕೆ ಕೇಳಿರುವುದೂ ಇಲ್ಲ!
ಎಲ್ಲಕ್ಕಿಂತ ಬಹುಮುಖ್ಯವಾಗಿ ಈಡಿ ಕಳಿಸಿರುವ ಸಂವಹನಕ್ಕೆ ಯಾವುದೇ ಸಾಕ್ಷಿ ನಿಯಮದ ಮಾನ್ಯತೆ ಇರುವುದಿಲ್ಲ. ಇಂತಹ ವರದಿಯನ್ನು ಅನುಸರಿಸಬೇಕಾದ ಯಾವುದೇ ಕಾನೂನಿನ ಒತ್ತಾಯವೂ ಇರುವುದಿಲ್ಲ. ಜೊತೆಗೆ ಈಡಿ ಕಳಿಸಿದ ವರದಿ, ಹೇಳಿಕೆಗಳನ್ನು ಪಾಲಿಸಬೇಕಾದ ಕಡ್ಡಾಯವೂ ಇರುವುದಿಲ್ಲ. ಇದು ಕೇವಲ ಮಾಹಿತಿ ವಿನಿಮಯವಷ್ಟೇ. ಇಂತಹ ಮಾಹಿತಿ ವಿನಿಮಯವನ್ನು ಸಾಮಾನ್ಯವಾಗಿ ಈಡಿಯು ಯಾವುದೇ ಅಪರಾಧ ನಡೆದಿರುವ ಬಗ್ಗೆ ತನ್ನ ಗಮನಕ್ಕೆ ಬಂದಾಗ ಅದನ್ನು ಸಂಬಂಧಿಸಿದ ಐಟಿ ಇಲಾಖೆ, ಕೇಂದ್ರ ವಿಜಿಲೆನ್ಸ್, ಒಂದು ರಾಜ್ಯದ ಪೊಲೀಸ್ ಮುಂತಾದವರ ಗಮನಕ್ಕೂ ತಂದು ಆಯಾ ಇಲಾಖೆಯು ತನ್ನ ಕಾನೂನಿನ ಅನುಸಾರವಾಗಿ ಅವುಗಳೂ ಕೂಡ ತನಿಖೆ ಮಾಡಬಹುದು ಎಂಬ ಕಾರಣಕ್ಕಾಗಿ PMLA ಕಾಯ್ದೆಯ ಕಲಂ 66ರ ಅಡಿಯಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತದೆ.
ಲೋಕಾಯುಕ್ತಕ್ಕೆ ಈಡಿ ಕಳುಹಿಸಿದ ಸಂವಹನವು ಸಾರ್ವಜನಿಕರಿಗೆ ಬಹಿರಂಗವಾದದ್ದು ಪಿಟಿಐ ಮತ್ತು ಎಎನ್ಐ ಮೂಲಕ ಮಾತ್ರ! ಈಡಿ ಅಧಿಕಾರಿಗಳು ಯಾವುದೇ ಪತ್ರಿಕೆ ಪ್ರಕಟನೆಯನ್ನು ನೀಡಿಲ್ಲ. ಹಾಗಾಗಿ ಈ ತನಿಖೆಯ ಮಾಹಿತಿಯನ್ನು ಸೋರಿಕೆ ಮಾಡಿದವರು ಯಾರು?
ಕಾನೂನು ಮತ್ತು ಸುವ್ಯವಸ್ಥೆಯು ಒಂದು ರಾಜ್ಯದ ಸ್ವತಂತ್ರ ವಿಷಯವಾಗಿದೆ. ಆಯಾ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಅಪರಾಧಗಳ ತನಿಖೆ ಮಾಡಲು ಸ್ವತಂತ್ರವಿದ್ದು, ಕೇಂದ್ರವು ಹಸ್ತಕ್ಷೇಪ ಮಾಡುವಂತಿಲ್ಲ. ಲೋಕಾಯುಕ್ತ ಪೊಲೀಸರು ಕಾನೂನಿನ ಮೇರೆಗೆ ತನಿಖೆಯನ್ನು ಪೂರ್ಣಮಾಡುವ ಮೊದಲೇ ಅನುಮಾನದಿಂದ ನೋಡುವುದು ಒಳ್ಳೆಯ ಬೆಳವಣಿಯಲ್ಲ. ರಾಜ್ಯದ ಅಧಿಕಾರಿಗಳು ರಾಜ್ಯ ಸರಕಾರದ ತಾಳಕ್ಕೆ ಕುಣಿಯುವರು ಎಂದು ತೀರ್ಮಾನಕ್ಕೆ ಬರುವುದಾದರೆ, ಕೇಂದ್ರ ಸರಕಾರದ ಅಧಿಕಾರಿಗಳೂ ಕೂಡ ಹಾಗೆಯೇ ಮಾಡುತ್ತಾರೆ ಎಂಬ ತೀರ್ಮಾನಕ್ಕೆ ಬರಬೇಕಾಗುವುದು. ಇದು ಅತ್ಯಂತ ಗಂಭೀರ, ದುರಾದೃಷ್ಟಕರ.
ಒಂದು ರಾಜ್ಯದ ಪೊಲೀಸರ ತನಿಖೆಯಲ್ಲಿ ಹಿಂಬಾಗಿಲ ಮೂಲಕ ʼಸಂವಹನʼದ ಹೆಸರಿನಲ್ಲಿ ಒತ್ತಡ ಹಾಕುವುದು ಕಾನೂನುಬಾಹಿರ. ಹಾಗೆ ಈಡಿ ಮಾಡಿದರೆ, ಅದು ರಾಷ್ಟ್ರದ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸಿದಂತೆ.
ಅಂತೆಯೇ ಉಚ್ಛ ನ್ಯಾಯಾಲಯದಲ್ಲಿ ಮುಡಾ ಪ್ರಕರಣವು ಸಿಬಿಐ ತನಿಖೆವ್ಯಾಪ್ತಿಗೆ ತರುವ ಸಲುವಾಗಿ ಈಡಿಯು ಈ ಕೆಲಸ ಮಾಡಿದ್ದರೆ ಅದು ಉಚ್ಛ ನ್ಯಾಯಾಲಯವನ್ನು ತಪ್ಪುದಾರಿಗೆಳೆಯುವ ಪ್ರಯತ್ನವೆಂದೇ ಹೇಳಬೇಕಾಗುವುದು.
ಈ ತಿಂಗಳ 10 ರಂದು ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಉಚ್ಛ ನ್ಯಾಯಾಲಯಕ್ಕೆ ತನ್ನ ʼತನಿಖಾ ವರದಿʼಯನ್ನು ಸಲ್ಲಿಸುವರು ; ಅದನ್ನು ನ್ಯಾಯಾಲಯವು ಪರಿಶೀಲಿಸಿ ತನ್ನ ಆದೇಶವನ್ನು ನೀಡುವುದು ; ಹಾಗಾಗಿ ತನ್ನ ʼಸಂವಹನʼವು ಅಂತಹ ಲೋಕಾಯುಕ್ತ ವರದಿಯ ಭಾಗವಾಗಲಿ ಎಂಬ ದುರ್ಭಾವದಿಂದ ಈ ʼಸಂವಹನʼ ದಾರಿಯನ್ನು ಈಡಿ ಹುಡುಕಿಕೊಂಡಿದ್ದರೆ, ಈಡಿಗೇ ತಿರುಗುಬಾಣವಾಗುವುದು ಖಚಿತ.
ಈಡಿಯಂತಹ ಉನ್ನತ ಸಂಸ್ಥೆಗಳು ತನ್ನ ಯಾವುದೇ ವರದಿಯನ್ನು ಕಾನೂನು ಮೇರೆಗೆ ನ್ಯಾಯಾಲಕ್ಕೆ ಸಲ್ಲಿಸದೇ ಹೀಗೇ ವಾಮಮಾರ್ಗವನ್ನು ಅನುಸರಿಸಿದರೆ ಅದು ಪಕ್ಷಪಾತಿ ಧೋರಣೆ ಹೊಂದಿದೆ ; ವಿರೋಧ ಪಕ್ಷಗಳನ್ನು ಹಣಿಯಲು ತನ್ನನ್ನು ದುರ್ಬಳಕೆ ಮಾಡಿಕೊಳ್ಳಲು ತಾನೇ ಅನುಮತಿಸಿದೆ ಎಂದೇ ಭಾವಿಸಬೇಕಾಗಿರುವುದು.
(ಲೇಖಕರು ಮೈಸೂರಿನ ವಕೀಲರು)