ಮಹಿಳಾ ಐಪಿಎಸ್ ಅಧಿಕಾರಿ ಇಲ್ಮಾ ಅಫ್ರೋಝ್‌ ಮೇಲೆ ಕಾಂಗ್ರೆಸ್ ಸರಕಾರ ದಬ್ಬಾಳಿಕೆ ನಡೆಸುತ್ತಿದೆಯೇ?

Update: 2024-12-02 13:46 GMT

ಹಿಮಾಚಲ ಪ್ರದೇಶದ ಬದ್ದಿ ಜಿಲ್ಲೆಯ ಎಸ್‌ಪಿ ಇಲ್ಮಾ ಅಫ್ರೋಝ್‌ ಅವರು ದೀರ್ಘಕಾಲದ ರಜೆಯಲ್ಲಿದ್ದಾರೆ. 15 ದಿನಕ್ಕೂ ಹೆಚ್ಚು ಸಮಯದಿಂದ ಅವರು ರಜೆಯಲ್ಲಿದ್ದಾರೆ. ಎರಡು ಬಾರಿ ರಜೆ ವಿಸ್ತರಣೆ ಪಡೆದಿದ್ದಾರೆ. ಹಿಮಾಚಲ ಪ್ರದೇಶದ ಬದ್ದಿಯ ಪೊಲೀಸ್ ವರಿಷ್ಠಾಧಿಕಾರಿ ಇಲ್ಮಾ ಅಫ್ರೋಝ್‌ ಅವರು ನವೆಂಬರ್ 6 ರಂದು ಶಿಮ್ಲಾದಿಂದ ಹಿಂದಿರುಗಿದ ನಂತರ ದೀರ್ಘ ರಜೆಯ ಮೇಲೆ ಉತ್ತರಪ್ರದೇಶದ ಮೊರಾದಾಬಾದ್ ನ ಕುಂದರ್ಕಿ ಗೆ ತೆರಳಿದ್ದರು.

ರಜೆಗೆ ಹೋಗುವ ಮುನ್ನ ನವೆಂಬರ್ 7 ಮತ್ತು 8 ರಂದು ಶಿಮ್ಲಾದ ರಾಜ್ಯ ಸಚಿವಾಲಯದಲ್ಲಿ ನಡೆಯಲಿರುವ ಎರಡು ದಿನಗಳ ಸಮ್ಮೇಳನದ ತಯಾರಿಯಲ್ಲಿ ಇಲ್ಮಾ ನಿರತರಾಗಿದ್ದರು. ದೂನ್ ಶಾಸಕ ರಾಮ್ ಕುಮಾರ್ ಚೌಧರಿ ಅವರ ಒತ್ತಡವೇ ಐಪಿಎಸ್ ಅಧಿಕಾರಿಯ ರಜೆಗೆ ಕಾರಣ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಅವರು ರಜೆ ಪಡೆದಿಲ್ಲ ಬದಲಿಗೆ ಅವರನ್ನು ರಜೆಯಲ್ಲಿ ಕಳುಹಿಸಲಾಗಿದೆ ಎಂದು ವರದಿಗಳು ಆರೋಪಿಸಿವೆ. ಹಿಮಾಚಲ ಪ್ರದೇಶದಲ್ಲಿ ವಿಪಕ್ಷದಲ್ಲಿರುವ ಬಿಜೆಪಿ ಕೂಡ ಇದೇ ಆರೋಪವನ್ನು ಮಾಡುತ್ತಿದೆ. ಈ ಕುರಿತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಬಿಜೆಪಿ ನಾಯಕ ಮತ್ತು ಹಿಮಾಚಲ ಮಾಜಿ ಮುಖ್ಯಮಂತ್ರಿ ಶಾಂತ ಕುಮಾರ್ ಪತ್ರ ಬರೆದಿದ್ದಾರೆ.

Full View

ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಯನ್ನು ಶಿಕ್ಷಿಸಬೇಡಿ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೆ ಶಾಂತ ಕುಮಾರ್ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಕರ್ತವ್ಯ ಮತ್ತು ಕಾನೂನುಗಳಿಗೆ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಶಾಂತಕುಮಾರ್ ಪತ್ರದಲ್ಲಿ ಸಿಎಂ ಸುಖುಗೆ ನೆನಪಿಸಿದ್ದಾರೆ.ಸಾಮಾನ್ಯ ಕುಟುಂಬದ ಈ ಸಮರ್ಥ ಮತ್ತು ಶ್ರಮಜೀವಿ ಮಗಳು ಆಕ್ಸ್‌ಫರ್ಡ್‌ನಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದಾರೆ ಎಂದು ಶಾಂತ ಕುಮಾರ್ ಹೇಳಿದ್ದಾರೆ.

ಪೊಲೀಸ್ ಅಧಿಕಾರಿಯಾಗಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಹಿಮಾಚಲದ ಹಲವೆಡೆ ಮರಳು, ಜಲ್ಲಿ ಮತ್ತು ಗಣಿಗಾರಿಕೆ ಮಾಫಿಯಾ ಅತ್ಯಂತ ಪ್ರಭಾವಶಾಲಿಯಾಗುತ್ತಿದೆ. ಈ ರಜೆ ವಿಷಯದಲ್ಲೂ ಈ ಕೆಲವು ಮಾಫಿಯಾಗಳ ಒತ್ತಡದಲ್ಲಿ ಇದೆಲ್ಲ ನಡೆಯುತ್ತಿದೆ ಎಂಬಂತಹ ಸುದ್ದಿಗಳು ಬರುತ್ತಿವೆ ಎಂದು ಶಾಂತಕುಮಾರ್ ಪತ್ರದಲ್ಲಿ ಆರೋಪಿಸಿದ್ದಾರೆ.

ಇದು ಶಾಂತ ಕುಮಾರ್ ಬರೆದ ಮೊದಲ ಪತ್ರವೇನೂ ಅಲ್ಲ. ಸುದೀರ್ಘ ರಜೆಯ ಮೇಲೆ ತೆರಳಿರುವ ಬದ್ದಿ ಎಸ್ಪಿ ಇಲ್ಮಾ ಅಫ್ರೋಝ್‌ ಅವರ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಶಾಂತಕುಮಾರ್ ಈ ಹಿಂದಿನ ಪತ್ರದಲ್ಲಿ ಮುಖ್ಯಮಂತ್ರಿಯಲ್ಲಿ ಕೋರಿದ್ದರು.

►ಈ ಎಲ್ಲಾ ಆರೋಪಗಳ ಹಿಂದಿನ ಕಾರಣ ಏನು?

ಪೊಲೀಸ್ ಮೂಲಗಳ ಪ್ರಕಾರ, ಇಲ್ಮಾ ಅಫ್ರೋಝ್‌ ಅವರು 2024ರ ಆಗಸ್ಟ್ 4ರಂದು ಬದ್ದಿ-ದೂನ್ ಪ್ರದೇಶದಲ್ಲಿ ಕಾನೂನುಬಾಹಿರ ಮರಳು ಗಣಿಗಾರಿಕೆಗೆ ಸಂಬಂಧಿಸಿದ ವಾಹನವೊಂದನ್ನು ವಶಕ್ಕೆ ಪಡೆದು, ದಂಡ ವಿಧಿಸಿದ್ದರು. ಈ ವಾಹನವು ದೂನ್ ಶಾಸಕರ ಪತ್ನಿ ಕುಲದೀಪ್ ಕೌರ್ ಹೆಸರಲ್ಲಿ ನೋಂದಾಯಿತವಾಗಿದೆ.

ಅಫ್ರೋಝ್‌ ಅವರು ಕಾನೂನುಬಾಹಿರ ಮರಳು ಗಣಿಗಾರಿಕೆಯನ್ನು ತೀವ್ರವಾಗಿ ವಿರೋಧಿಸುವ ಅಧಿಕಾರಿಯಾಗಿದ್ದು, ಈ ಪ್ರಕರಣದಲ್ಲಿ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು.ಈ ಪ್ರಕರಣದ ಬಳಿಕ, ಬದ್ದಿ-ಬರೋಟಿವಾಲಾ-ನಲಗಡ ಪ್ರದೇಶದಲ್ಲಿ ಇಲ್ಮಾ ಜನಪ್ರಿಯತೆ ಗಳಿಸಿದ್ದರು. ಆದರೆ ಇದರಿಂದಾಗಿ ದೂನ್ ಕ್ಷೇತ್ರದ ಕಾಂಗ್ರೆಸ್ ಶಾಸಕರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ಹೇಳಲಾಗುತ್ತಿದೆ.

ಇದಾದ ನಂತರ, ಇಲ್ಮಾ ಅಫ್ರೋಝ್‌ ರಜೆಯಲ್ಲಿದ್ದು ಇದರ ಹಿಂದೆ ಶಾಸಕರ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕ ರಾಮ್ ಕುಮಾರ್ ಚೌಧರಿ ಸ್ಪಷ್ಟನೆ ನೀಡಿದ್ದು, ಇದರಲ್ಲಿ ನನ್ನ ಯಾವ ಪಾತ್ರವೂ ಇಲ್ಲ ಎಂದಿದ್ದಾರೆ. ಈ ಬಗ್ಗೆ ಸ್ಥಳೀಯರು ಹಾಗೂ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಇಲ್ಮಾ ಅಫ್ರೋಝ್‌ ಅವರ ಕಾರ್ಯವೈಖರಿ ಬಗ್ಗೆ ಬದ್ದಿ ಪ್ರದೇಶದ ಜನರಲ್ಲಿ ವ್ಯಾಪಕ ಮೆಚ್ಚುಗೆ ಇದೆ.

ಸೆಪ್ಟೆಂಬರ್‌ನಲ್ಲಿ ಶಾಸಕರು ಐಪಿಎಸ್ ಅಧಿಕಾರಿ ಇಲ್ಮಾ ಅಫ್ರೋಝ್‌ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದರು. ಈ ಬಗ್ಗೆ ಹಿಮಾಚಲ ಸರಕಾರ ಪ್ರತಿಕ್ರಿಯೆ ನೀಡಿದೆ. ಐಪಿಎಸ್ ಅಧಿಕಾರಿ ಇಲ್ಮಾ ಅಫ್ರೋಝ್‌ ಅವರ ಸುದೀರ್ಘ ರಜೆ ಕುರಿತ ಆರೋಪಗಳನ್ನು ಹಿಮಾಚಲ ಪ್ರದೇಶ ಸರ್ಕಾರ ತಳ್ಳಿಹಾಕಿದೆ.

ಕೌಟುಂಬಿಕ ಕಾರಣಗಳಿಂದ ಅಫ್ರೋಝ್‌ ರಜೆ ತೆಗೆದುಕೊಂಡಿದ್ದು, ಅವರಿಗೆ ಇಷ್ಟವಾದಾಗ ಅವರು ಮತ್ತೆ ಕರ್ತವ್ಯಕ್ಕೆ ಸೇರುವುದಾಗಿ ಸರ್ಕಾರ ಹೇಳಿದೆ. ಅವರು ಯಾರ ಒತ್ತಡಕ್ಕೂ ಮಣಿಯುವುದಿಲ್ಲ, ಬ್ಲಾಕ್ ಮೇಲ್ ಗೆ ಕೂಡ ಒಳಗಾಗಲ್ಲ ಎಂದು ಹಿಮಾಚಲ ಕಾಂಗ್ರೆಸ್ ಸರ್ಕಾರ ಹೇಳಿದೆ. ಸರ್ಕಾರ ಅರ್ಹತೆ ಮತ್ತು ಸಾಮರ್ಥ್ಯವನ್ನು ಸಂಪೂರ್ಣವಾಗಿ ಗೌರವಿಸುತ್ತದೆ ಎಂದು ಹಿಮಾಚಲ ಪ್ರದೇಶ ಸರ್ಕಾರದ ವಕ್ತಾರರು ಹೇಳಿದ್ದಾರೆ. ರಾಜ್ಯದಲ್ಲಿ ನುರಿತ ಹಾಗೂ ದಕ್ಷ ಅಧಿಕಾರಿಗಳಿಗೆ ಬಡ್ತಿ ನೀಡಲಾಗುತ್ತಿದೆ.

ಐಪಿಎಸ್ ಅಧಿಕಾರಿ ಇಲ್ಮಾ ಅಫ್ರೋಝ್‌ ಅವರನ್ನು ಸರ್ಕಾರ ಔಟ್ ಆಫ್ ಟರ್ನ್ ಎಸ್ಪಿಯಾಗಿ ನೇಮಕ ಮಾಡಿತ್ತು. ಅವರ ಬ್ಯಾಚ್ ಲೆಕ್ಕದಲ್ಲಿ ಹತ್ತು ತಿಂಗಳ ಹಿಂದೆಯೇ ಬದ್ದಿಯಂತಹ ಪ್ರಮುಖ ಜಿಲ್ಲೆಯ ಪೊಲೀಸ್ ಕಮಾಂಡ್ ಅವರಿಗೆ ನೀಡಲಾಗಿತ್ತು ಎಂದು ಸರಕಾರ ಸಮರ್ಥಿಸಿಕೊಂಡಿದೆ.

ಕೌಟುಂಬಿಕ ಕಾರಣ ನೀಡಿ ಐಪಿಎಸ್ ಅಧಿಕಾರಿ ಅಫ್ರೋಝ್‌ ರಜೆ ಮೇಲೆ ತೆರಳಿದ್ದಾರೆ. ಮಾಜಿ ಮುಖ್ಯಮಂತ್ರಿ ಶಾಂತಕುಮಾರ್ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಪತ್ರದ ಮೂಲಕ ಉತ್ತರ ನೀಡಲಾಗಿದೆ ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ. ಶಿಮ್ಲಾದಲ್ಲಿ ತನ್ನ ತಾಯಿಯೊಂದಿಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು. ತಾಯಿಯ ಅನಾರೋಗ್ಯದ ಕಾರಣ ನೀಡಿ ರಜೆ ನೀಡುವಂತೆ ಕೋರಿದ್ದರು. ಅವರ ರಜೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ವದಂತಿಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳುಗಳು ವಾಸ್ತವಕ್ಕೆ ವಿರುದ್ಧವಾಗಿವೆ ಎಂದು ಸರಕಾರ ಹೇಳಿದೆ.

ಮುಖ್ಯಮಂತ್ರಿಗೆ ಹೇಳಿ ಐಪಿಎಸ್ ಅಧಿಕಾರಿ ರಜೆ ಮೇಲೆ ತೆರಳಿದ್ದಾರೆ. ಅವರಿಗೆ ಅನಿಸಿದಾಗ ಮತ್ತೆ ಕರ್ತವ್ಯಕ್ಕೆ ಸೇರುತ್ತಾರೆ. ಮಾಜಿ ಮುಖ್ಯಮಂತ್ರಿ ಶಾಂತಕುಮಾರ್ ಆತಂಕ ಪಡುವುದು ಬೇಡ ಎಂದು ಸರಕಾರದ ವಕ್ತಾರರು ಕಿವಿಮಾತು ಹೇಳಿದ್ದಾರೆ.

ಈಗಿನ ಸರ್ಕಾರ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಬ್ಲಾಕ್ ಮೇಲ್ ಮಾಡುವುದೂ ಇಲ್ಲ. ಈ ಸರ್ಕಾರ ಗಣಿ ಮಾಫಿಯಾಗೆ ಕಡಿವಾಣ ಹಾಕಿದ್ದು, ಸಾಮಾನ್ಯ ಮತ್ತು ವಿಶೇಷ ಎಂಬ ತಾರತಮ್ಯವಿಲ್ಲದೇ ಕ್ರಮ ಕೈಗೊಳ್ಳುತ್ತಿದೆ. ಇದು ಸರ್ಕಾರದ ನೈತಿಕತೆಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಈಗಿನ ಸರ್ಕಾರ ವ್ಯವಸ್ಥೆಯಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದ್ದು, ಜನಸಾಮಾನ್ಯರಿಗೆ ನೇರವಾಗಿ ಅನುಕೂಲವಾಗುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.

ಈ ಘಟನೆಯಿಂದ ಬಿಜೆಪಿ ರಾಜಕೀಯ ಲಾಭ ಪಡೆದುಕೊಳ್ಳುವುದಕ್ಕೂ ಪ್ರಯತ್ನಿಸಿದೆ. ಉತ್ತರ ಪ್ರದೇಶದ 65% ಮುಸ್ಲಿಮ್ ಬಾಹುಳ್ಯದ ಕುಂದರ್ಕಿಯ ಉಪಚುನಾವಣೆಯಲ್ಲಿ ಬಿಜೆಪಿಯ ಅದ್ಭುತ ಜಯಕ್ಕೆ ಒಂದು ಕಾರಣ ಇಲ್ಮಾ ಆಫ್ರೋಝ್ ಜೊತೆ ಹಿಮಾಚಲ ಕಾಂಗ್ರೆಸ್ ಸರಕಾರ ನಡೆದುಕೊಂಡ ರೀತಿ ಎಂದೂ ಹೇಳಲಾಗುತ್ತಿದೆ.

ಕುಂದರ್ಕಿ ಮೂಲದ ಈಗ ಹಿಮಾಚಲದ ಬದ್ದಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಇಲ್ಮಾ ಅಫ್ರೋಝ್‌ ಅವರನ್ನು ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸಿತ್ತು. ಬಿಜೆಪಿಯ ಸ್ಥಳೀಯ ಘಟಕವು ಇಲ್ಮಾ ಪ್ರಕರಣವನ್ನು ಎತ್ತಿ ತೋರಿಸಿತ್ತು ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಸ್ಲಿಂ ಅಧಿಕಾರಿಯ ರಕ್ಷಣೆಗೆ ಬರುತ್ತಿಲ್ಲ ಎಂದು ಆರೋಪಿಸಿತ್ತು. ಕುಂದರ್ಕಿಯ ಪಕ್ಷದ ಉಸ್ತುವಾರಿ, ಉತ್ತರ ಪ್ರದೇಶದ ಸಹಕಾರಿ ಸಚಿವ ಜೆಪಿಎಸ್ ರಾಥೋಡ್ ಕೂಡ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಇಲ್ಮಾ ಅವರು ಎದುರಿಸಿದ "ಅನ್ಯಾಯ" ದ ಬಗ್ಗೆ ಹೇಳಿದ್ದರು.

ಬಿಜೆಪಿ ಮುಸ್ಲಿಂ ಮಹಿಳೆಯರಲ್ಲಿ ಇಲ್ಮಾ ಹಿಮಾಚಲದಲ್ಲಿ ಎದುರಿಸಿದ ಸಮಸ್ಯೆಯನ್ನು ಹೇಳಿತ್ತು . ನ್ಯೂಸ್ ಪೇಪರ್ ಕಟಿಂಗ್ಸ್ ತೋರಿಸುವ ಮೂಲಕ ಕುಂದರ್ಕಿಯ ಮಗಳಿಗೆ ಹೇಗೆ ಅನ್ಯಾಯವಾಗಿದೆ ಎಂದು ಹೇಳಲು ಪ್ರಯತ್ನಿಸಿತ್ತು. ಅಖಿಲೇಶ್ ತಮ್ಮ ಸ್ನೇಹಿತ ರಾಹುಲ್ ಬಳಿ ಈ ವಿಷಯವನ್ನು ಪ್ರಸ್ತಾಪಿಸಬಹುದು, ಆದರೆ ಅವರು ಹಾಗೆ ಮಾಡುವುದಿಲ್ಲ. ಏಕೆಂದರೆ ಅವರು ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಆಗಿ ಬಳಸುತ್ತಾರೆ ಎಂದು ಬಿಜೆಪಿ ಆರೋಪಿಸಿತ್ತು.

ಮೂರು ದಶಕಗಳಲ್ಲಿ ಇದೇ ಮೊದಲ ಬಾರಿ ಕುಂದರ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಅದೂ ಸುಮಾರು ಒಂದೂವರೆ ಲಕ್ಷದಷ್ಟು ಮತಗಳ ಅಂತರದಿಂದ. ಇಲ್ಮಾ ಕುರಿತ ನಮ್ಮ ಪ್ರಚಾರ ಹೇಗೋ ಕೆಲಸ ಮಾಡಿತು ಎಂದು ಮೊರಾದಾಬಾದ್‌ ಬಿಜೆಪಿಯ ಮಹಿಳಾ ವಿಭಾಗದ ನಾಯಕಿಯೊಬ್ಬರು ಹೇಳಿದ್ದರು.

IPS ಅಧಿಕಾರಿ ಇಲ್ಮಾ ಆಫ್ರೋಜ್ ಪ್ರಸ್ತುತ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಕುಂದರ್ಕಿಯಲ್ಲಿರುವ ಅವರ ತವರು ನಿವಾಸದಲ್ಲಿದ್ದಾರೆ. ಮೂಲತಃ ಮೊರಾದಾಬಾದ್ ಜಿಲ್ಲೆಯ ಉತ್ತರ ಪ್ರದೇಶದ ಕುಂದರ್ಕಿ ಪಟ್ಟಣದವರಾದ ಇಲ್ಮಾ ಅಫ್ರೋಝ್‌ 2017 ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಅವರು 2018 ರಲ್ಲಿ IPS ಗೆ ಸೇರಿದ್ದರು.

ಇಲ್ಮಾ ಅಫ್ರೋಝ್‌ ಅವರ ಬಾಲ್ಯ ಸಂಕಷ್ಟಗಳಿಂದ ತುಂಬಿತ್ತು. 14 ನೇ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡರು. ನಂತರ, ಅವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ತತ್ವಶಾಸ್ತ್ರದ ಅಧ್ಯಯನ ಮಾಡಿದರು. ವಿದ್ಯಾರ್ಥಿವೇತನದ ಸಹಾಯದೊಂದಿಗೆ ಅವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದರು. ಆಮೇಲೆ ಅಮೆರಿಕದಲ್ಲೇ ಕೆಲಸ ಮಾಡುವ ಅವಕಾಶವಿದ್ದರೂ ಭಾರತಕ್ಕೆ ಮರಳಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News