ಸಮ್ಮೇಳನದಲ್ಲಿ ಹಿಂದಿ ಹೇರಿಕೆ ವಿರುದ್ಧ ಅಭಿಯಾನ

Update: 2024-12-22 08:14 GMT

ಮಂಡ್ಯ, ಡಿ.22: ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ, ಕನ್ನಡ ಭಾಷೆ, ಕನ್ನಡಿಗರ ಹಲವು ಬೇಡಿಕೆಗಳನ್ನು ಪೂರೈಸುವ ನಿರ್ಣಯಗಳನ್ನು ಕೈಗೊಳ್ಳಬೇಕು ಎಂಬ ಭಿತ್ತಿಚಿತ್ರ ಹಂಚುವ ವಿಶೇಷ ಅಭಿಯಾನಕ್ಕೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಯಿತು.

ಅಭಿಯಾನವನ್ನು ‘ಹಿಂದಿ ಹೇರಿಕೆ ವಿರೋಧಿ ಕರ್ನಾಟಕ’ ಸಂಘಟನೆ ವತಿಯಿಂದ ನಡೆಸಲಾಗುತ್ತಿದ್ದು, ಸಮ್ಮೇಳನದಲ್ಲಿ ನಡೆಯುವ ಎಲ್ಲ ಗೋಷ್ಠಿಗಳ ಹತ್ತಿರ ಹೋಗಿ ಕರಪತ್ರ ಹಂಚಿ ಗೋಷ್ಠಿಯ ಅಧ್ಯಕ್ಷರು ಸೇರಿದಂತೆ, ಸಾರ್ವಜನಿಕರಿಗೆ ಕರಪತ್ರವನ್ನು ನೀಡುವ ಮೂಲಕ ಹಿಂದಿ ಹೇರಿಕೆ ವಿರುದ್ಧದ ನಿರ್ಣಯ ಕೈಗೊಳ್ಳಲು ಜನಾಭಿಪ್ರಾಯ ರೂಪಿಸಲಾಗುತ್ತಿದೆ.

ಕರ್ನಾಟಕದಲ್ಲಿನ ರಾಷ್ಟ್ರೀಕೃತ ಬ್ಯಾಂಕ್, ಅಂಚೆ, ವಿಮಾ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಬಳಸದೇ ನಿರ್ಲಕ್ಷಿಸಲಾಗುತ್ತಿದೆ. ಕನ್ನಡದ ಬದಲಿಗೆ ಹಿಂದಿಯನ್ನು ವ್ಯವಸ್ಥಿತವಾಗಿ ಹೇರಲಾಗುತ್ತಿದೆ, ಕರ್ನಾಟಕದಲ್ಲಿ ಕನ್ನಡವನ್ನು ಅಪ್ರಸ್ತುತಗೊಳಿಸುವ ಪಿತೂರಿ ಇದಾಗಿದೆ. ಈ ಧೋರಣೆ ಬದಲಾಗಬೇಕು ಎಂಬುದು ಅಭಿಯಾನದ ಉದ್ದೇಶವಾಗಿದೆ.

ಜಿಎಸ್ಟಿ ತೆರಿಗೆ ಹಂಚಿಕೆಯಲ್ಲಿ ಒಕ್ಕೂಟ ಸರಕಾರದಿಂದ ಕರ್ನಾಟಕಕ್ಕೆ ನ್ಯಾಯಬದ್ಧಪಾಲು ಸಿಗಬೇಕು. ಕೇಂದ್ರ ಸರಕಾರಕ್ಕೆ ಕರ್ನಾಟಕದಿಂದ ಲಕ್ಷಾಂತರ ಕೋಟಿ ರೂಪಾಯಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಆದರೆ ಕರ್ನಾಟಕಕ್ಕೆ ಹಿಂದಿರುಗಿಸಿ, ನೀಡುತ್ತಿರುವ ಆರ್ಥಿಕ ನೆರವು ತೀರಾ ಕಡಿಮೆಯಾಗಿದೆ. ಅದನ್ನು ಕೇಂದ್ರ ಸರಕಾರ ನಿಲ್ಲಿಸಬೇಕಿದೆ ಎಂಬುದು ಅಭಿಯಾನದ ಒತ್ತಾಯವಾಗಿದೆ.

► ದ್ವಿಭಾಷಾ ನೀತಿ ಜಾರಿಯಾಗಲಿ

ಕರ್ನಾಟಕದಲ್ಲಿ ಶಾಲಾ ಪಠ್ಯಪುಸ್ತಕದಲ್ಲಿ ತ್ರಿಭಾಷಾ ನೀತಿಯನ್ನು ಮಾಡಿ, ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಸಾವಿರಾರು ಮಕ್ಕಳ ಬದುಕು ಅತಂತ್ರವಾಗುತ್ತಿದೆ. ಹಿಂದಿಯನ್ನು ಒಂದು ಭಾಷೆಯಾಗಿ ವಿರೋಧಿಸುವ ಅಗತ್ಯವಿಲ್ಲವಾದರೂ, ಅದರ ಕಲಿಕೆಯಿಂದ ಆಗುವ ಉಪಯೋಗವಿಲ್ಲ. ಹಿಂದಿ ಹೇರಿಕೆಯೂ ಕನ್ನಡಿಗರಲ್ಲಿ ನಿರುದ್ಯೋಗಕ್ಕೆ ಕಾರಣವಾಗುತ್ತಿದೆ. ಅದು ಕರ್ನಾಟಕದಲ್ಲಿ ಕನ್ನಡಿಗರ ಬದುಕನ್ನು ನಾಶ ಮಾಡುವ ರೂಪದಲ್ಲಿ ಹೇರಿಕೆಯಾಗುತ್ತಿರುವುದನ್ನು ವಿರೋಧಿಸುತ್ತಿದ್ದೇವೆ ಎಂದು ‘ಹಿಂದಿ ಹೇರಿಕೆ ವಿರೋಧಿ ಕರ್ನಾಟಕ’ದ ಸಂಚಾಲಕ ಪಾರ್ವತೀಶ ಬಿಳಿದಾಳೆ ತಿಳಿಸಿದರು.

ಹಿಂದಿ ದಬ್ಬಾಳಿಕೆಯ ಭಾಷೆಯಾಗಿದೆ. ಅದಕ್ಕಾಗಿ ಸಮ್ಮೇಳನದಲ್ಲಿ ಹಿಂದಿ ಹೇರಿಕೆಯ ವಿರುದ್ಧ ನಿರ್ಣಯ ಕೈಗೊಳ್ಳಬೇಕಿದೆ. ಸಮ್ಮೇಳನದಲ್ಲಿ ಬರುವ ಜನರಿಗೆ ಹಿಂದಿ ಹೇರಿಕೆ ಕುರಿತು ಜಾಗೃತಿ ಮೂಡಿಸಿ, ಜನಾಭಿಪ್ರಾಯಕ್ಕಾಗಿ 1ಲಕ್ಷ ಕರಪತ್ರಗಳನ್ನು ಹಂಚುತ್ತಿದ್ದೇವೆ.

- ಪಾರ್ವತೀಶ ಬಿಳಿದಾಳೆ, ಹಿಂದಿ ವಿರೋಧಿ- ಕರ್ನಾಟಕದ ಸಂಚಾಲಕ

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಮಾಳಿಂಗರಾಯ ಕೆಂಭಾವಿ

contributor

Similar News