ಬೀದರ್ | ಬ್ರಿಮ್ಸ್ ಆಸ್ಪತ್ರೆಯಲ್ಲಿ ಶೌಚಾಲಯ, ಕುಡಿಯುವ ನೀರಿಗಾಗಿ ರೋಗಿಗಳ ಪರದಾಟ

Update: 2024-12-21 15:02 GMT

ಬೀದರ್ : ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿನ ಬಹುತೇಕ ಎಲ್ಲ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ. ಆರು ಅಂತಸ್ತಿನ ಆಸ್ಪತ್ರೆಯಲ್ಲಿ ಒಂದೂ ಮಹಡಿಯಲ್ಲಿಯು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವ ಶೋಚನಿಯ ಸ್ಥಿತಿ ಬ್ರಿಮ್ಸ್ ಆಸ್ಪತ್ರೆಯದ್ದಾಗಿದೆ.

ಆಸ್ಪತ್ರೆಯ ಹೆರಿಗೆ ವಿಭಾಗ, ಮೂಳೆ ಮತ್ತು ಎಲುಬಿನ ವಿಭಾಗ, ಶಿಶು ಮಕ್ಕಳ ವಿಭಾಗ ಸೇರಿದಂತೆ ಆಸ್ಪತ್ರೆಯ ಎಲ್ಲ ವಿಭಾಗಗಳಲ್ಲಿ ಶೌಚಾಲಯ ಇದ್ದರೂ ಸಹ ಇಲ್ಲದಂತಾಗಿದೆ.

ಶೌಚಾಲಯಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ಗಬ್ಬೆಂದು ದುರ್ವಾಸನೆ ಬರುತ್ತಿವೆ. ಒಂದೊಂದು ವಾರ್ಡಿನಲ್ಲಿ ಶೌಚಾಲಯದ ಬಾಗಿಲುಗಳು ತೆರೆದಿದ್ದರೂ ಸಹ ರೋಗಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿ, ಅಸ್ವಚ್ಛತೆ ತಾಂಡವವಾಡುತ್ತಿದೆ. ರೋಗ ನಿರ್ಮೂಲನೆ ಮಾಡುವ ಸ್ಥಳದಲ್ಲಿಯೇ ರೋಗಕ್ಕೆ ತುತ್ತಾಗುವ ಭಯ ನಿರ್ಮಾಣವಾಗಿದೆ. ನಡೆದಾಡುವ ರೋಗಿಗಳು ಮತ್ತು ರೋಗಿಗಳ ಜೊತೆಗೆ ಬರುವ ಸಾರ್ವಜನಿಕರು ಅನಿವಾರ್ಯವಾಗಿ ಹೊರಗಡೆ ದೂರದ ಖಾಸಗಿ ಶೌಚಾಲಯಕ್ಕೆ ಹೋಗುತ್ತಿದ್ದಾರೆ. ಆದರೆ ನಡೆಯಕ್ಕಾಗದ ಒಳರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಆರು ಅಂತಸ್ತಿನ ಆಸ್ಪತ್ರೆಯಾಗಿದ್ದರೂ ಸಹ ಯಾವುದೇ ಅಂತಸ್ತಿನ ಮೇಲೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 3ನೇ ಅಂತಸ್ತಿನಲ್ಲಿ ಒಂದು ನೀರಿನ ವಾಟರ್ ಫಿಲ್ಟರ್ ಕೆಟ್ಟು ದಿನಗಳು ಕಳೆದರೂ ದುರಸ್ತಿಯ ಸಮಯ ಕೂಡಿ ಬಂದಿಲ್ಲ. ಒಂದು ವಾಟರ್ ಫೀಲ್ಟರ್ ಬೀಗ ಹಾಕಿ ಮೂಲೆಯಲ್ಲಿ ಇಡಲಾಗಿದೆ. ನೆಲಮಹಡಿಯ ಒಂದು ಬದಿಯಲ್ಲಿ ರೋಟರಿ ಕ್ಲಬ್ ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಮಹಡಿಯ ರೋಗಿಗಳು ಇದನ್ನೇ ಅವಲಂಬಿಸಿದ್ದಾರೆ. ರೋಗಿಗಳ ಜೊತೆಗೆ ಯಾರು ಸಂಬಂಧಿಕರು ಇಲ್ಲದಿದ್ದರೆ ಆ ರೋಗಿಗಳು ನೀರಿಗಾಗಿ ಸಾಯುವ ಪರಿಸ್ಥಿತಿ ಇಲ್ಲಿದೆ ಎಂದರೆ ತಪ್ಪಾಗಲಾರದು.

ದೂರದ ತೆಲಂಗಾಣ, ಮಹಾರಾಷ್ಟ್ರ ಹಾಗೂ ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಜನ ಈ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಿರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳಾದ ನೀರು ಮತ್ತು ಶೌಚಾಲಯವಿಲ್ಲದೆ ಪರದಾಡುವ ಸ್ಥಿತಿ ಇದೆ ಎಂದು ಸ್ಥಳೀಯ ರೋಗಿಗಳ ವಾರ್ತಾ ಭಾರತಿ ಜೊತೆ ಮಾತನಾಡಿ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಜಿಲ್ಲಾಡಳಿತ, ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಒದಗಿಸಿ ರೋಗಿಗಳಿಗೆ ಒಂದೊಳ್ಳೆ ವಾತಾವರಣ ನಿರ್ಮಾಣ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯಲ್ಲಿ ಇನ್ ವೈಟರ್ ಸೇರಿದಂತೆ ಇನ್ನು ಇತರೆ ಸಲಕರಣೆಗಳು, ಮೂಲಭೂತ ಸೌಕರ್ಯ ಇಲ್ಲವೆಂದು ಆರೋಪಿಸಿ ಈ ಹಿಂದೆ ಯೂಟ್ಯೂಬರ್ ಒಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು, ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ.

6 ತಿಂಗಳಿನ ಹಳೆ ವಿಡಿಯೋ ಇತ್ತೀಚಿಗೆ ಮತ್ತೊಮ್ಮೆ ಸಮಾಜಿಕ ಜಾಲಾತಾಣದಲ್ಲಿ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ರೋಗಿಗೆ ಹಣಕೊಟ್ಟು ಈ ರೀತಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆ ಇಲ್ಲ.

ಶಿವಕುಮಾರ್ ಶೇಟಜರ್, ನಿರ್ದೇಶಕರು, ಬ್ರಿಮ್ಸ್ ಆಸ್ಪತ್ರೆ ಬೀದರ್.

ಆಸ್ಪತ್ರೆಯ ಶೌಚಾಲಯಗಳು ಗಬ್ಬೆಂದು ನಾರುತ್ತಿವೆ. ಇದರಿಂದಾಗಿ ರೋಗಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲಿನ ಯಾವುದೇ ಮಹಡಿಯಲ್ಲಿ ನೀರಿನ ವ್ಯವಸ್ಥೆ ಇಲ್ಲ. ಹಾಗಾಗಿ ಮೇಲಿನ ಮಹಡಿಯಲ್ಲಿ ಚಿಕಿತ್ಸೆಪಡೆಯುತ್ತಿರುವವರಿಗೆ ನೀರಿನ ಸಮಸ್ಯೆಯಾಗುತ್ತಿದೆ. ಆಸ್ಪತ್ರೆ ಕಟ್ಟಡದ ಕೆಳಭಾಗದಲ್ಲಿ ನೀರಿನ ಬುಗ್ಗೆಗಳು ಏಳುತಿದ್ದು, ಇದರಿಂದ ಆಸ್ಪತ್ರೆ ಕಟ್ಟಡಕ್ಕೆ ಧಕ್ಕೆಯಾಗುವ ಸಂಭವವಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು.

ಬಾಬುರಾವ್ ಪಾಸ್ವಾನ್

Tags:    

Writer - ವಾರ್ತಾಭಾರತಿ

contributor

Editor - Ashik

contributor

Contributor - ಚಿತ್ರಶೇನ ಫುಲೆ

contributor

Similar News