ಸಮ್ಮೇಳನದಲ್ಲಿ ಗಮನ ಸೆಳೆದ ಕೈದಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ

Update: 2024-12-22 08:32 GMT

ಮಂಡ್ಯ, ಡಿ.22: ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ತಪ್ಪು ಮಾಡಿ ಜೈಲು ಸೇರಿದ ಸಜಾ ಕೈದಿಗಳ ಪ್ರತಿಭೆ ಹೊರಹಾಕಲು ಮಂಡ್ಯದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಒಂದು ಒಳ್ಳೆಯ ಅವಕಾಶ ಕಲ್ಪಿಸಿಕೊಟ್ಟಿದೆ.

ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಿಂದ ಬೆಂಗಳೂರು, ಬಳ್ಳಾರಿ, ಬೆಳಗಾವಿ, ಮೈಸೂರು ಸೇರಿದಂತೆ ಎಂಟು ಕೇಂದ್ರ ಕಾರಾಗೃಹಗಳಲ್ಲಿ ಬಂಧಿಯಾಗಿರುವ ಸಜಾ ಕೈದಿಗಳು ತಯಾರಿಸಿದ ವಸ್ತುಗಳನ್ನು ಸಾಹಿತ್ಯ ಸಮ್ಮೇಳನದ ವಸ್ತು ಪ್ರದರ್ಶನದಲ್ಲಿ ಪರಿವರ್ತನಾ ಉತ್ಪನ್ನಗಳು: ಪ್ರದರ್ಶನ ಮತ್ತು ಮಾರಾಟ ಎಂಬ ಹೆಸರಿನಲ್ಲಿ ಮಳಿಗೆ ತೆರೆಯಲಾಗಿದ್ದು, ಇದು ಹೆಚ್ಚು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಇಲಾಖೆಯು ನಿಜಕ್ಕೂ ಕೈದಿಗಳ ಮನ: ಪರಿವರ್ತಿಸುವಲ್ಲಿ ಹೆಚ್ಚು ಸಹಕಾರಿಯಾಗಿದ್ದು, ಕೈದಿಗಳು ತಮ್ಮ ಶಿಕ್ಷಾವಧಿ ಮುಗಿಯುವವರೆಗೂ ಮಾಡಿದ ತಪ್ಪಿನ ಗುಂಗಿನಲ್ಲಿರುವ ಬದಲಾಗಿ ಅವರಲ್ಲಿನ ವಿವಿಧ ಪ್ರತಿಭೆ, ಸಾಮರ್ಥ್ಯವನ್ನು ಹೊರಹಾಕಲು ಅತ್ಯಂತ ಸಹಕಾರಿ ಎನಿಸಿದೆ.

ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುವ ವೃತ್ತಿಪರ ತರಬೇತಿ, ಶೈಕ್ಷಣಿಕ ಕಲಿಕಾ ತರಗತಿಗಳು, ಯೋಗ, ವ್ಯಾಯಾಮ ಸೇರಿ ಮುಂತಾದವುಗಳ ಕುರಿತು ಮಳಿಗೆಯಲ್ಲಿ ಇಡಲಾಗಿದ್ದ ಚಿತ್ರಗಳು ನೋಡುಗರ ಕಣ್ಸೆಳೆದವು. ಕೈದಿಗಳು ಜೈಲಿನೊಳಗೆ ಹೇಗೆಲ್ಲಾ ಪಾಠ ಕಲಿಯುತ್ತಾರೆ ಎಂಬುದನ್ನು ಮಳಿಗೆಯತ್ತ ಬರುವ ಸಾರ್ವಜನಿಕರಿಗೆ ಜೈಲು ಸಿಬ್ಬಂದಿ ವಿವರಿಸುತ್ತಿದ್ದ ರೀತಿ ಗಮನಾರ್ಹವಾಗಿತ್ತು.

► ತರಬೇತಿ

ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಸಜಾ ಕೈದಿಗಳಿಗೆ ಅವರ ಆಸಕ್ತಿಯ ಅನುಸಾರ ನುರಿತ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುತ್ತದೆ. ಯಾವುದೇ ಕೆಲಸವನ್ನೂ ಸುಮಾರು ಮೂರು ತಿಂಗಳೊಳಗೆ ಕೈದಿಗಳು ಕಲಿತುಕೊಳ್ಳುತ್ತಾರೆ. ಆ ನಂತರದಲ್ಲಿ ಅವರ ಕಲಿಕೆಯ ಅನುಸಾರ ಕೆಲಸ ನೀಡಲಾಗುತ್ತದೆ. ಕೆಲಸಕ್ಕೆ ಅನುಗುಣವಾಗಿ ಸರಕಾರ ಕೈದಿಗಳಿಗೆ ಕೂಲಿಯನ್ನು ನೀಡುತ್ತದೆ ಎನ್ನುತ್ತಾರೆ ಕೈದಿಗಳ ತರಬೇತುದಾರ ಅಶೋಕ್.

ಮಳಿಗೆಯಲ್ಲೇನೇನಿದೆ?

ಸಾಹಿತ್ಯ ಸಮ್ಮೇಳನದ ಪರಿವರ್ತನಾ ಉತ್ಪನ್ನ ಮಳಿಗೆಯಲ್ಲಿ ಕೈದಿಗಳಿಂದ ತಯಾರಾದಂತಹ ಟವೆಲ್, ಕಂಬಳಿ, ಮ್ಯಾಟ್, ಬೆಡ್ಶೀಟ್, ಜಮಕಾನ, ಕುರ್ಚಿ, ಉಣ್ಣೆ ಬಟ್ಟೆಗಳು ಮುಂತಾದ ವಸ್ತುಗಳು ಮಾರಾಟಕ್ಕಿದ್ದವು. ಯಥೇಚ್ಛವಾಗಿ ಗ್ರಾಹಕರು ಖರೀದಿಯಲ್ಲಿ ಮುಗಿಬಿದ್ದ ದೃಶ್ಯ ಕಂಡಬಂತು.

ಕರ್ನಾಟಕದ ಕಾರಾಗೃಹಗಳಲ್ಲಿ ಹೆಚ್ಚು ಕನ್ನಡಿಗರೇ ಇದ್ದಾರೆ. ಕೈದಿಗಳು ಕಾರಾಗೃಹದೊಳಗೆ ಬಂದರೆ ಅವರು ಏನು ಮಾಡುತ್ತಾರೆ, ಹೇಗಿರುತ್ತಾರೆ ಎಂಬುದರ ಪರಿಕಲ್ಪನೆ, ಕುತೂಹಲ ಹೊರಗಿನವರಿಗೆ ಹೆಚ್ಚಾಗಿರುತ್ತದೆ. ಸಜಾ ಬಂಧಿಗಳನ್ನು ಜೈಲೊಳಗೆ ಸುಮ್ಮನೇ ಕೂಡಿ ಹಾಕುವುದಿಲ್ಲ. ಅವರ ಆಸಕ್ತಿಗನುಸಾರ ತರಬೇತಿ ಕೊಟ್ಟು ಕೆಲಸ ನೀಡುತ್ತೇವೆ.

- ಲೋಕೇಶ್ ಟಿ.ಕೆ., ಅಧೀಕ್ಷಕರು, ಜಿಲ್ಲಾ ಕಾರಾಗೃಹ ಮಂಡ್ಯ

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಯೋಗೇಶ್ ಮಲ್ಲೂರು

contributor

Similar News