ಮೈಷುಗರ್ಸ್ ಖಾಸಗಿಗೆ ವಹಿಸಲು ರಾಜ್ಯ ಸರಕಾರ ಸಿದ್ಧತೆ?

Update: 2025-01-07 06:40 GMT

ಬೆಂಗಳೂರು, ಜ.6: ಮೈಸೂರು ಸಕ್ಕರೆ ಕಾರ್ಖಾನೆ(ಮೈಷುಗರ್ಸ್)ಯನ್ನು ಸರಕಾರಿ ಸ್ವಾಮ್ಯದಲ್ಲೇ ಉಳಿಸಿಕೊಂಡು ಪುನರುಜ್ಜೀವನಗೊಳಿಸಲಾಗುವುದು ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಸರಕಾರ ಇದೀಗ ಈ ಕಾರ್ಖಾನೆಯನ್ನು ಖಾಸಗಿಗೆ ವಹಿಸಲು ತರಾತುರಿ ನಡೆಸುತ್ತಿದೆ.

ಮೈ ಷುಗರ್ಸ್‌ನ ಕಬ್ಬು ಅರೆಯುವ ಘಟಕವನ್ನು ಎಲ್‌ಆರ್‌ಒಟಿ ಮಾದರಿಯಲ್ಲಿ ನಡೆಸಲು ಟೆಂಡರ್ ಕರೆಯುವುದು ಮತ್ತು ಎಥನಾಲ್ ಘಟಕವನ್ನು ಪಿಪಿಪಿ ಮಾದರಿಯಲ್ಲಿ ನಡೆಸಬೇಕು ಎಂದು ಆರ್ಥಿಕ ಇಲಾಖೆಯು ಚಿಂತಿಸಿದೆ. ಇದಕ್ಕೆ ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

2024-25ನೇ ಸಾಲಿನಲ್ಲಿ ಆಯವ್ಯಯ ಘೋಷಣೆಗಳ ಕಂಡಿಕೆ 327ರ ಮೇಲೆ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದ ಆರ್ಥಿಕ ಇಲಾಖೆಯು ಈ ಅಭಿಪ್ರಾಯವನ್ನು ಆಡಳಿತ ಇಲಾಖೆಗೆ (FD 493 EXP-1/2024) ನೀಡಿದೆ. ಇದನ್ನು ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘the-file.in’ಗೆ ಖಚಿತಪಡಿಸಿದ್ದಾರೆ.

ವಿಶೇಷವೆಂದರೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿಯೂ ಎಲ್‌ಆರ್‌ಒಟಿ ಆಧಾರದ ಮೇಲೆ 2021-22ನೇ ಹಂಗಾಮಿನಿಂದಲೇ 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು 2020ರ ನವೆಂಬರ್ 18ರಂದು ಅನುಮತಿ ನೀಡಿತ್ತು.

ಟೆಂಡರ್ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುವ ಗುತ್ತಿಗೆದಾರರು 2021-22ನೇ ಹಂಗಾಮಿನಿಂದ ಕಬ್ಬು ನುರಿಸುವ ಕಾರ್ಯವನ್ನು ಪ್ರಾರಂಭಿಸಬೇಕು ಎಂಬ ಷರತ್ತನ್ನೂ ವಿಧಿಸಲಾಗಿತ್ತು. ಆದರೆ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಪ್ರಸ್ತಾವಕ್ಕೆ ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಬ್ಬು ಬೆಳೆಯುವ ರೈತರು, ಕಂಪೆನಿಯ ಷೇರುದಾರರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಹಿಂದಿನ ಬಿಜೆಪಿ ಸರಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.

ಆದರೀಗ ಕಾಂಗ್ರೆಸ್ ಸರಕಾರವು ಹಿಂದಿನ ಬಿಜೆಪಿ ಸರಕಾರವು ಕೈಗೊಂಡಿದ್ದ ನಿರ್ಧಾರವನ್ನೇ ಮತ್ತೆ ಎತ್ತಿ ಹಿಡಿದಿದೆ. ಅದರಲ್ಲಿ ಎಲ್‌ಆರ್‌ಒಟಿ ಆಧಾರದ ಮೇಲೆ ಖಾಸಗಿಗೆ ವಹಿಸಲು ತರಾತುರಿ ನಡೆಸುತ್ತಿದೆ. ಒಂದೊಮ್ಮೆ ಕಾಂಗ್ರೆಸ್ ಸರಕಾರವೂ ಖಾಸಗಿಗೆ ವಹಿಸಲು ಅಂತಿಮ ತೀರ್ಮಾನ ಪ್ರಕಟಿಸಿದಲ್ಲಿ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ತುತ್ತಾಗಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ.

ದಿ ಮೈಸೂರು ಷುಗರ್ ಕಂಪೆನಿಯು ಬಾಕಿ ಉಳಿಸಿಕೊಂಡಿದ್ದ 53.05 ಕೋಟಿ ರೂ. ವಿದ್ಯುತ್ ಬಾಕಿಯನ್ನು ಮನ್ನಾ ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದಿಸಿತ್ತು. ಇದರಿಂದಾಗಿ ರಾಜ್ಯ ಸರಕಾರದ ಬೊಕ್ಕಸದ ಮೇಲೆ 37,74,95,141 ರೂ. ಆರ್ಥಿಕ ಹೊರೆಯೂ ಬಿದ್ದಿತ್ತು. ಅಲ್ಲದೇ ವಿದ್ಯುಚ್ಛಕ್ತಿ ಬಾಕಿ ಮೊತ್ತದ ಮೇಲಿನ ಬಡ್ಡಿ ಮೊತ್ತವನ್ನೂ ಮನ್ನಾ ಮಾಡಲು ಇಂಧನ ಇಲಾಖೆಯೂ ಸಹಮತಿ ನೀಡಿತ್ತು.

ಹೀಗೆ ಮೈಷುಗರ್ಸ್ ಕಂಪೆನಿಗೆ ಸಂಬಂಧಿಸಿದಂತೆ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಂಡಿದ್ದ ಸರಕಾರವೇ ಇದೀಗ ಈ ಕಾರ್ಖಾನೆ ಯನ್ನು ಖಾಸಗಿಗೆ ವಹಿಸಲು ಮುಂದಾಗಿದೆ. ಸರಕಾರವು ದಿಢೀರ್ ಎಂದು ಕೈಗೊಂಡಿರುವ ಈ ನಿರ್ಧಾರದ ಹಿಂದೆ ಸಕ್ಕರೆ ಲಾಬಿಯೂ ಕೆಲಸ ಮಾಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಮೈಸೂರು ಷುಗರ್ಸ್ ಕಂಪೆನಿಯು ಸಾರ್ವಜನಿಕ ವಲಯದ ಉದ್ಯಮವಾಗಿದೆ. 1950-51ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಒಟ್ಟು 35 ಹಂಗಾಮುಗಳಲ್ಲಿ 34,738.90 ಲಕ್ಷ ರೂ.ಗಳಷ್ಟು ಕ್ರೋಡೀಕೃತ ನಷ್ಟ ಅನುಭವಿಸಿತ್ತು. ಅಲ್ಲದೆ ಪ್ರಸಕ್ತ 273.48 ಕೋಟಿ ರೂ. ಸಾಲವನ್ನೂ ಹೊಂದಿತ್ತು. ಆರ್ಥಿಕ ಸಂಕಷ್ಟದಲ್ಲಿರುವ ಈ ಕಾರ್ಖಾನೆಯು ಚೆಸ್ಕಾಂಗೆ ಬಾಕಿ ಉಳಿಸಿಕೊಂಡಿದ್ದ 53,46,34,707 ರೂ.ಗಳ ವಿದ್ಯುತ್ ಬಿಲ್‌ನ್ನೂ ಪಾವತಿಸಲು ಸಾಧ್ಯವಾಗಿರಲಿಲ್ಲ.

ಕಬ್ಬು ಮೀಸಲು ಕ್ಷೇತ್ರದಲ್ಲಿನ ರೈತರ ಹಿತದೃಷ್ಟಿಯಿಂದ ಕಾರ್ಖಾನೆಯಲ್ಲಿನ ಕಬ್ಬು ಅರೆಯುವ ಕಾರ್ಯವನ್ನು ಕೈಗೊಳ್ಳುವುದು ಮತ್ತು ಕಂಪೆನಿಯನ್ನು ಆರ್ಥಿಕ ಸಂಕಷ್ಟದಿಂದ ಹೊರ ತರುವ ಅವಶ್ಯಕತೆಯಿತ್ತು. ಈ ಹಿನ್ನೆಲೆಯಲ್ಲಿ ಮೈ ಷುಗರ್ಸ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಗೆ ಪಾವತಿಸಬೇಕಿದ್ದ 53.46 ಕೋಟಿ ರೂ.ಗಳ ವಿದ್ಯುತ್ ಬಿಲ್ ಮನ್ನಾ ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು ಎಂದು ತಿಳಿದು ಬಂದಿದೆ.

ಇದನ್ನು ಒಪ್ಪಿದ್ದಲ್ಲಿ ಆರ್ಥಿಕ ಪರಿಣಾಮಗಳು ಆಗಲಿವೆ ಎಂದು ಆರ್ಥಿಕ ಇಲಾಖೆಯು ಹೇಳಿತ್ತು. ವಿದ್ಯುತ್ ಬಿಲ್‌ನ ಬಡ್ಡಿಯನ್ನು ಮನ್ನಾ ಮಾಡಲು ಇಂಧನ ಇಲಾಖೆಯು ಒಪ್ಪಿರುವುದರಿಂದ ಈ ಪ್ರಸ್ತಾವದಿಂದ ರಾಜ್ಯ ಸರಕಾರದ ಮೇಲೆ 37,74,95,141 ರೂ.ಗಳ ಆರ್ಥಿಕ ಹೊರೆ ಬೀಳಲಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನವನ್ನು ಕಾರ್ಖಾನೆಗೆ ನೀಡಲಾಗದು ಎಂದು ಆರ್ಥಿಕ ಇಲಾಖೆಯು (FD 305 EXP-1/2024) ಹೇಳಿತ್ತು ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.

ಆರ್ಥಿಕ ಸಹಾಯವನ್ನು ಮಾತ್ರ ಒದಗಿಸಿದೆ ಎಂದು ಹೇಳಿರುವ ಆರ್ಥಿಕ ಇಲಾಖೆಯು ಈ ಕಂಪೆನಿಯಲ್ಲಿ ಸರಕಾರವು ಯಾವುದೇ ಹೂಡಿಕೆ ಮಾಡಿಲ್ಲವೆಂದು ಸಿಎಜಿಯನ್ನೇ ದಾರಿ ತಪ್ಪಿಸಿತ್ತು.

ಆರ್ಥಿಕ ಸಹಾಯ ಒದಗಿಸಿದೆಯೇ ವಿನಃ ಯಾವುದೇ ಹೂಡಿಕೆ ಮಾಡಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದೆಯಾದರೂ ವಾಸ್ತವದಲ್ಲಿ ಹಣಕಾಸು ಲೆಕ್ಕದಲ್ಲಿ 335.78 ಕೋಟಿ ರೂ.ಗಳನ್ನು ಸರಕಾರವು ಹೂಡಿಕೆ ಮಾಡಿತ್ತು ಎಂಬ ಅಂಶವನ್ನು ಸಿಎಜಿ ವರದಿಯು ಹೊರಗೆಡವಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News