ಸುಪ್ರೀಂನಲ್ಲಿ ಶರಾವತಿ ಸಂತ್ರಸ್ತರ ಭೂ ಹಕ್ಕಿನ ವಿಚಾರಣೆ

Update: 2024-12-05 13:03 GMT

ಶಿವಮೊಗ್ಗ, ಡಿ.4:ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂ ಹಕ್ಕು ನೀಡುವ ವಿಚಾರವೀಗ ಸುಪ್ರೀಂ ಕೋರ್ಟ್ನಲ್ಲಿ ಅಧಿಕೃತವಾಗಿ ವಿಚಾರಣೆಗೆ ಬಂದಿದೆ. ಕಳೆದ ಆರು ದಶಕಗಳಿಂದ ಭೂ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ಸಂತ್ರಸ್ತರಲ್ಲಿ ಆಶಾಕಿರಣವೊಂದು ಮೂಡಿದೆ.

ಮಂಗಳವಾರ ಸುಪ್ರೀಂಕೋರ್ಟ್ನಲ್ಲಿ ಭೂಮಿ ಹಕ್ಕು ನೀಡುವ ಸಂಬಂಧ ಪ್ರಥಮ ವಿಚಾರಣೆ ನಡೆಯಿತು. ಕರ್ನಾಟಕ ಸರಕಾರದ ಪರವಾಗಿ ವಿಶೇಷ ವಕೀಲರಾಗಿ ದೇವದತ್ತ ಕಾಮತ್ ಅವರು ಸರಕಾರಿ ವಕೀಲರ ಜೊತೆ ಸೇರಿಕೊಂಡು ವಾದ ಮಂಡಿಸಿದರು. ಈ ಮೂಲಕ ರಾಜ್ಯ ಸರಕಾರವೇ ಶರಾವತಿ ಸಂತ್ರಸ್ತರ ಪರವಾಗಿ ಕಾನೂನು ಹೋರಾಟವನ್ನು ಸುಪ್ರೀಂ ಕೋರ್ಟ್ನಲ್ಲಿ ಆರಂಭಿಸಿದೆ.

2017ರಲ್ಲಿ ಕಾಂಗ್ರೆಸ್ ಸರಕಾರ ಶರಾವತಿ ಸಂತ್ರಸ್ತರಿಗೆ ಭೂಮಿ ನೀಡುವ ಸಂಬಂಧ ಡಿ ನೋಟಿಫೈ ಮಾಡಿತ್ತು. ಆದರೆ ಡಿನೋಟಿಫೈ ಮಾಡುವ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ನಿಯಮ ಉಲ್ಲಂಘನೆ, ಕೇಂದ್ರ ಸರಕಾರದ ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರಕಾರ 2017 ಫೆಬ್ರವರಿ 23ರಂದು ಹೊರಡಿಸಿದ ಡಿನೋಟಿಫಿಕೇಷನ್ ಆದೇಶವನ್ನು ಹೈಕೋರ್ಟ್ ರದ್ದು ಮಾಡಿತ್ತು. ಕೋರ್ಟ್ನಲ್ಲಿ ಸರಕಾರ ಸಮರ್ಥವಾಗಿ ಧ್ವನಿ ಎತ್ತದ ಪರಿಣಾಮ,ಭೂ ಮಂಜೂರಾತಿ ಮಾಲಕತ್ವ ಹೊಂದಿರುವ ಭೂ ಹಕ್ಕನ್ನು ಸಂತ್ರಸ್ತರು ಮತ್ತು ಸಂತ್ರಸ್ತರಲ್ಲದ ಕುಟುಂಬಗಳು ಕಳೆದುಕೊಳ್ಳುವ ಆತಂಕದಲ್ಲಿದ್ದರು.

ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ವಿವಿಧ ರೈತ ಸಂಘಟನೆಗಳು ಹಲವಾರು ರೀತಿಯ ಹೋರಾಟಗಳನ್ನು ನಡೆಸಿ ಸರಕಾರದ ಮೇಲೆ ಒತ್ತಡವನ್ನು ತಂದಿದ್ದರು.ಈ ನಡುವೆ ರಾಜ್ಯ ಸರಕಾರ ಪತ್ರ ಬರೆದು ಡಿನೋಟಿಫೈ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಕೋರಿತ್ತು. ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಅನುಮತಿ ತರುವಂತೆ ರಾಜ್ಯ ಸರಕಾರಕ್ಕೆ ಉತ್ತರ ನೀಡಿತ್ತು. ಹೀಗಾಗಿ ಸಮಸ್ಯೆಯ ಆಳವನ್ನು ಗಮನಿಸಿದ ರಾಜ್ಯ ಸರಕಾರ ಸಂತ್ರಸ್ತರ ಪರವಾಗಿ ಸುಪ್ರೀಂ ಕೋರ್ಟ್ಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿತು. ನ್ಯಾಯಾಲಯಕ್ಕೆ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿತು. ಹೀಗಾಗಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತ್ತು. ಇದರ ಮೊದಲ ವಿಚಾರಣೆ ಡಿ.3ರಂದು ಮಂಗಳವಾರ ಆರಂಭವಾಯಿತು.

ಸಮಸ್ಯೆಯ ಮೈಲಿಗಲ್ಲು: ಶರಾವತಿ ಮುಳುಗಡೆ ಸಮಸ್ಯೆ ಇಂದು ನಿನ್ನೆಯದಲ್ಲ, 1959ರ ಕಾಲಘಟ್ಟದಲ್ಲಿಯೇ ಆರಂಭಗೊಂಡ ಸಮಸ್ಯೆ. ಆಗಿನ ಸರಕಾರ ತಕ್ಷಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕ್ರಮಕ್ಕೆ ಮುಂದಾಗದ ಕಾರಣ ಸಮಸ್ಯೆ ನನೆಗುದಿಗೆ ಬಿದ್ದಿತ್ತು. ಕಳೆದ ಆರೇಳು ದಶಕಗಳಿಂದ ಭೂಮಿ ಹಕ್ಕಿಗಾಗಿ ಮುಳುಗಡೆ ಸಂತ್ರಸ್ತರು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಯಾದ ನಂತರ ಭೂ ಮಂಜೂರಾತಿಗೆ ಕಾನೂನಿನ ತೊಡಕು ಮತ್ತಷ್ಟು ಕಠಿಣವಾಯಿತು. 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಯಾದ ಬಳಿಕ ರಾಜ್ಯ ಸರಕಾರಕ್ಕೆ ಅರಣ್ಯ ಭೂಮಿಯ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಹೀಗಾಗಿ ಯಾವುದೇ ಅರಣ್ಯ ಭೂಮಿ ಬಳಕೆ ಮಾಡಬೇಕಾದರೆ ಕೇಂದ್ರ ಸರಕಾರದ ವಿಶೇಷ ಅನುಮೋದನೆ ಪಡೆಯುವುದು ಅನಿವಾರ್ಯವಾಗಿತ್ತು.

ಸರಕಾರಗಳಿಂದಲೇ ಅನ್ಯಾಯ:

1984ರಲ್ಲಿ ತಿದ್ದುಪಡಿಯಾದ ಭೂಸ್ವಾಧೀನ ಕಾಯ್ದೆಯಲ್ಲಿ ಶರಾವತಿ, ಚಕ್ರಾ, ಸಾವೆಹಕ್ಲು ಪ್ರಕರಣಗಳು ಸೇರಿದಂತೆ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ಯಾವುದೇ ಪ್ರಸ್ತಾವ ಇಲ್ಲವಾಗಿರುವುದು ಈ ಸಮಸ್ಯೆ ಕುರಿತು ಆಡಳಿತ ವ್ಯವಸ್ಥೆ ಹೊಂದಿದ ನಿರ್ಲಕ್ಷ್ಯ ಮನೋಭಾವನೆಯನ್ನು ಅನಾವರಣಗೊಳಿಸಿದೆ.

1980ರ ಅರಣ್ಯ ಸಂರಕ್ಷಣಾ ಕಾಯ್ದೆಯಲ್ಲಿ 1978ರ ಪೂರ್ವದ ಸಾಗುವಳಿ ಪ್ರದೇಶಗಳಿಗೆಲ್ಲಾ ಕೇಂದ್ರ ಕಾಯ್ದೆಯಲ್ಲಿ ವಿನಾಯಿತಿ ನೀಡಲಾಗಿದ್ದರೂ 1991 ರವರೆಗೂ ಯಾರಿಗೂ ಹಕ್ಕು ನೀಡದೇ ನಂತರ ಏಕಪಕ್ಷೀಯವಾಗಿ ಅರಣ್ಯ ಇಲಾಖೆಯು ಮಾರ್ಗಸೂಚಿ ಹೊರಡಿಸಿ, ಯಾರಿಗೂ ಹಕ್ಕುಗಳು ದೊರಕದಂತೆ ಮಾಡಲಾಗಿರುವುದನ್ನು ಹೋರಾಟಗಾರರು ತಮ್ಮ ಹೋರಾಟದಲ್ಲಿ ಹಲವಾರು ಬಾರಿ ಹೇಳಿದ್ದಾರೆ. ಮುಳುಗಡೆಯಾಗುವ ಸಂದರ್ಭದಲ್ಲಿ ಯೋಜನಾ ನಿರಾಶ್ರಿತರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದೆ ಅಂದಿನಿಂದ ಇಂದಿನವರೆಗೂ ಆಳಿದ ಸರಕಾರಗಳು ವಂಚಿಸಿಕೊಂಡೇ ಬಂದಿವೆ ಎಂದು ಹೋರಾಟಗಾರರು ಆರೋಪಿಸುತ್ತಾರೆ.

ಅಫಿಡವಿಟ್‌ನಲ್ಲಿ ದೋಷ:

2012ರಲ್ಲಿ ರಾಜ್ಯ ಸರಕಾರವು ಸುಪ್ರೀಂಕೋರ್ಟ್ಗೆ ಪರಿಸರವಾದಿಗಳ ಪ್ರಕರಣವೊಂದರಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಎಲ್ಲ ಅರಣ್ಯ ಒತ್ತುವರಿಗಳನ್ನು ಕಾಲಮಿತಿಯಲ್ಲಿ ತೆರವುಗೊಳಿಸುವುದಾಗಿ ಒಪ್ಪಿಕೊಂಡಿದೆ. ಅದೇ ಪ್ರಕರಣದಲ್ಲಿ ಅರಣ್ಯ ಇಲಾಖೆಯು ಸಲ್ಲಿಸಿದ್ದ ಅಂಕಿ ಅಂಶಗಳಲ್ಲಿ ಅಧಿಸೂಚಿತ ಅರಣ್ಯ ಮಾತ್ರವಲ್ಲದೇ 4(1) ಅಧಿಸೂಚಿತ, ಸೆಟ್ಲ್ಮೆಂಟ್ ಬಾಕಿ ಇರುವ ಮತ್ತು ಸೂಚಿತ ಆರಣ್ಯ ವಿಸ್ತೀರ್ಣಗಳನ್ನು ಅಫಿಡವಿಟ್ನಲ್ಲಿ ಸೇರಿಸಿಕೊಂಡಿರುವ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳಿಗೆ ಇಂದು ತೆರವುಗೊಳಿಸಲು ನೋಟಿಸ್ ನೀಡಲಾಗುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ, ಕಂದಾಯ ಇಲಾಖೆಯ ದಿವ್ಯ ನಿರ್ಲಕ್ಷ್ಯ, ಅರಣ್ಯ ಇಲಾಖೆಯ ಪಾರಮ್ಯತೆ ಮತ್ತು ಜನಪ್ರತಿನಿಧಿಗಳ ನಿಷ್ಕ್ರಿಯತೆ ಎಂದು ಆರೋಪಿಸಲಾಗುತ್ತಿದೆ.

ಮಧು ಬಂಗಾರಪ್ಪ ವಿಶೇಷ ಪ್ರಯತ್ನ :

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶೇಷ ಪ್ರಯತ್ನ ನಡೆಸಿದ್ದು ಗಮನಿಸಬಹುದಾಗಿದೆ. ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಈ ಸಮಸ್ಯೆ ಸಂಬಂಧ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಹಲವಾರು ಸಭೆಗಳನ್ನು ನಡೆಸಿದ್ದರು. ಶಿವಮೊಗ್ಗ ಜಿಲ್ಲೆಗೆ ಹಿರಿಯ ಅಡ್ವೊಕೇಟ್ ಜನರಲ್ ಅವರನ್ನು ಕರೆಸಿ ಜಿಪಂ ಸಭಾಂಗಣದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ,ಕಾನೂನಾತ್ಮಕ ತೊಡಕುಗಳ ನಿವಾರಣೆಗೆ ಸಮಗ್ರ ಚರ್ಚೆ ನಡೆಸಿದ್ದರು.

ಅಂತಿಮವಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ರಾಜ್ಯ ಸರಕಾರವೇ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿ ದೇವದತ್ತ ಕಾಮತ್ ಅವರನ್ನು ವಿಶೇಷ ವಕೀಲರನ್ನಾಗಿ ನೇಮಕ ಮಾಡಿದೆ. ಈಗ ವಿಚಾರಣೆ ಆರಂಭವಾಗಿದೆ. ಸಿಸಿಎಫ್ ಹನುಮಂತಪ್ಪ ಅವರು ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ದೇವದತ್ತ ಕಾಮತ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಸರಕಾರದ ಅಂಗಳದಲ್ಲಿದೆ ಸಂತ್ರಸ್ತರ ಭವಿಷ್ಯ :

ಇದೀಗ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಆರಂಭಗೊಂಡಿರುವುದರಿಂದ ಕೇಂದ್ರ ಸರಕಾರ ಕೋರ್ಟ್ಗೆ ತನ್ನ ಸ್ಪಷ್ಟ ಅಭಿಪ್ರಾಯವನ್ನು ಲಿಖಿತವಾಗಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಸಮಸ್ಯೆ ಪರಿಹಾರದ ಚೆಂಡು ಕೇಂದ್ರದ ಅಂಗಳಕ್ಕೆ ಹೋದಂತಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅಂದಿನ ಸರಕಾರಗಳೇ ತಂದು ಬಿಟ್ಟಿರುವ ಜಾಗದಲ್ಲಿ ಶರಾವತಿ ಯೋಜನೆಯ ಸಂತ್ರಸ್ತರು ನೆಲೆ ಕಂಡುಕೊಂಡಿದ್ದಾರೆ. ಆಗಿನ ಸರಕಾರ ಕೆಲವರಿಗೆ ಭೂಮಿಯ ಹಕ್ಕು ನೀಡಿದೆ. ಇನ್ನು ಹಲವಾರು ಕುಟುಂಬಗಳಿಗೆ ಭೂಮಿ ಹಕ್ಕು ನೀಡಿರಲಿಲ್ಲ.ಆದರೆ ಸರಕಾರವೇ ತಂದು ಬಿಟ್ಟಿರುವ ಜಾಗ ಇಂದು ಅರಣ್ಯ ಪ್ರದೇಶವಾಗಿದೆ. ಹೀಗಾಗಿ ನಾಡಿಗೆ ಬೆಳಕು ಕೊಟ್ಟವರ ಬದುಕು ಕತ್ತಲಲ್ಲಿದೆ. ಮುಳುಗಡೆ ಸಂತ್ರಸ್ತರಿಗೆ ಎತ್ತಂಗಡಿ ಭೀತಿಯೂ ಎದುರಾಗಿದೆ. ಕಳೆದ ಐದಾರು ದಶಕಗಳಿಂದ ಹಲವು ರೀತಿಯ ಹೋರಾಟ ಆರಂಭಿಸಿದ್ದ ಸಂತ್ರಸ್ತರು ನ್ಯಾಯ ಪಡೆಯುವ ಪ್ರಯತ್ನ ನಡೆಸಿದ್ದರೂ ಇದು ಸಾಧ್ಯವಾಗಿರಲಿಲ್ಲ. ಆದರೆ, ಈಗ ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ಅನುಮೋದಿಸಿರುವುದರಿಂದ ಏನಾದರೊಂದು ಪರಿಹಾರ ಸಿಗುವ ಸಾಧ್ಯತೆ ದಟ್ಟವಾಗಿದೆ.

ಜಿಲ್ಲೆಯನ್ನು ನಾಲ್ಕು ಬಾರಿ ಪ್ರತಿನಿಧಿಸಿರುವ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರಕಾರದ ಬಳಿ ಚರ್ಚೆ ನಡೆಸಿ ನ್ಯಾಯಾಲಯಕ್ಕೆ ಸರಕಾರದಿಂದ ಸಮಗ್ರ ಮಾಹಿತಿ ಒದಗಿಸುವಂತೆ ಪ್ರಯತ್ನ ನಡೆಸಬೇಕೆಂಬ ಒತ್ತಾಯಗಳು ಸಂತ್ರಸ್ತರಿಂದ ಕೇಳಿ ಬರುತ್ತಿವೆ.


Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ಶರತ್ ಪುರದಾಳ್

contributor

Similar News